ವಾಗರ್ಥವಿಲಾಸ
ಕೊಯ್ಲು ಮುಗಿದ ವಿಶಾಲವಾಗಿ ಹಬ್ಬಿ ಮಲಗಿದ್ದ ಗದ್ದೆಯ ನಡುವಿನಲ್ಲಿ ಏನೋ ಗಜಿಬಿಜಿ ಶುರುವಾಗಿತ್ತು. ಅದೇನೆಂದು ಕುತೂಹಲ ತಡೆಯದೆ ಹೋಗಿ ನೋಡಿದರೆ ಇನ್ನೆರೆಡು ದಿನದಲ್ಲಿ ಅಲ್ಲಿ ಯಕ್ಷಗಾನ ಎನ್ನುವ ಸುದ್ದಿ ಕೇಳಿ ಸಂಭ್ರಮ. ರಂಗ ಸಿದ್ಧವಾಗುವ ಮೊದಲೇ ನಾವೆಲ್ಲಿ ಕೂರುವುದು ಎನ್ನುವ ಕಿತ್ತಾಟ, ಇದು ನನ್ನ ಜಾಗ ಎಂದು ಗಡಿ ನಿರ್ಮಿಸುವ ಕೆಲಸ ಆಗಿಬಿಟ್ಟಿತ್ತು. ಆದಿನ ಬೆಳಿಗ್ಗೆಯಿಂದಲೇ ಕಣ್ಣು ಗಡಿಯಾರದ ಕಡೆ, ಯಾವಾಗ ರಾತ್ರಿ ಆಗುವುದೋ ಎನ್ನುವ ಕಾತುರ. ಏನು ತಿಂದೆವು ಎನ್ನುವುದೂ ಗೊತ್ತಾಗದ ಹಾಗೆ ನುಂಗಿ ನಮ್ಮ ಜಾಗಕ್ಕೆ ಓಡುವ ಹೊತ್ತಿಗೆ ರಂಗ ಪ್ರವೇಶ ಆಗಿ ಹೋಗಿತ್ತು. ನಮ್ಮದೆನ್ನುವ ಜಾಗ ಕಷ್ಟಪಟ್ಟು ಗುರುತಿಸಿ ತೆಗೆದುಕೊಂಡು ಹೋಗಿದ್ದ ಕಂಬಳಿ ಹಾಸಿ ಕುಳಿತರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಲೋಕ ಕಣ್ಣೆದೆರು ಇಳಿದಂತೆ. ಯಕ್ಷ, ಗಂಧರ್ವ, ದೇವತೆ, ರಾಕ್ಷಸರು ಎಲ್ಲರೂ ಆ ಪುಟ್ಟ ರಂಗದಲ್ಲಿ ಬಂದು ಕುಣಿದು ಮೂರು ಲೋಕಗಳು ಒಂದೆಡೆ ಮೇಳೈಸಿ ಆ ವೈಭವಕ್ಕೆ ಕಣ್ಣು ಮುಚ್ಚಿ ಹೋಗುವಾಗ ಬಡಿಯುವ ಚೆಂಡೆ, ಏರುವ ಭಾಗವತರ ಸ್ವರ. ಅದೊಂದು ವಿಸ್ಮಯ ಲೋಕ. ಆ ವಿಸ್ಮಯ ಲೋಕದಲ್ಲಿ ಕತೆ ದಾರಿ ತಪ್ಪದ ಹಾಗೆ ಸರಿಯಾಗಿ ಕರೆದೊಯ್ಯುವವರು ಭಾಗವತರು. ಕತೆಯ ಲೋಕ ಬಿಚ್ಚಿಡುತ್ತಾ ಒಳ ನೋಟ ನಮಗೆ ಬಿಡುತ್ತಾ ಅಲ್ಲಲ್ಲಿ ದಾರಿ ತೋರಿಸುತ್ತಾ ಇಡೀ ಪ್ರಸಂಗದ ದರ್ಶನ ಮಾಡಿಸುವವರು ಅವರು. ಅಷ್ಟೇ ವಿಸ್ಮಯವಾದ ಸಾಹಿತ್ಯ ಲೋಕದ ಭಾಗವತರು ಕೆ.ವಿ ತಿರುಮಲೇಶ್ ಸರ್. ಅ...