ಅಶ್ವತ್ಥಾಮನ್

 ಬಾಲ್ಯ ಸರಿಯಿಲ್ಲದ ಮಕ್ಕಳಿಗೆ ಸಮಾಜದ ಬಗೆಗೆ ಒಂದು ಅವ್ಯಕ್ತ ಅಸಹನೆ ಇರುತ್ತದೇನೋ. ಹಲವರಿಗೆ ಅವಕಾಶ ಸಿಕ್ಕಾಗ ಅದು ವ್ಯಕ್ತವಾಗಬಹುದು. ತಾವು ಅನುಭವಿಸಿದ ಅವಮಾನ, ಆಕ್ರೋಶ ಇವುಗಳನ್ನು ಹೊರಹಾಕಲು ತಮ್ಮದೇ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಯಾರನ್ನೋ ಮೆಚ್ಚಿಸುವ ಎನ್ನುವುದಕ್ಕಿಂತ ಎದುರಿನವರ ಕಣ್ಣಲ್ಲಿ ಹೀರೋ ಅನ್ನಿಸಿಕೊಳ್ಳುವ ಮನೋಭಾವ ಸುಪ್ತವಾಗಿರುತ್ತದೇನೋ. ಇಂಥದೊಂದು ಕಾರಣಕ್ಕೆ ದುರ್ಯೋಧನನ ಕಣ್ಣಲ್ಲಿ ಹೀರೋ ಆಗುವುದಕ್ಕೆ ಅಧರ್ಮ ಎಂದೂ ಗೊತ್ತಿದ್ದೂ ಆ ಅಶ್ವತ್ಥಾಮ ಅರ್ಧರಾತ್ರಿಯಲ್ಲಿ ಎದ್ದು ಹೊರಟನಾ... 

ಜೋಗಿಯವರ ಈ ಅಶ್ವತ್ಥಾಮನೂ ಹೀಗೆ. ತನ್ನ ತಾಯಿಗೆ ತನ್ನ ತಂದೆಯೆಂಬ ವ್ಯಕ್ತಿಯಿಂದಾದ ಮೋಸಕ್ಕೆ ಸೇಡು ತೀರಿಸಿಕೊಳ್ಳಲು ಹೊರಟನೇನೋ ಅನ್ನಿಸುತ್ತದೆ. ತಾಯಿಯ ನಂಬಿಕೆಗೆ ಪೆಟ್ಟು ಬಿದ್ದ ಫಲವೇನೋ ಎಂಬಂತೆ ಯಾರನ್ನೂ ನಂಬದ ಎಲ್ಲರನ್ನೂ ನಂಬಿದಂತೆ ನಟಿಸುವ ಆತ ಅದ್ಭುತ ನಟ. ಆದರೆ ಆ ನಟನೆ ಎಲ್ಲಿಂದ ಆರಂಭವಾಗಿ ಎಲ್ಲಿ ಮುಗಿಯುತ್ತದೆ ಎನ್ನುವುದು ಕೊನೆಯವರೆಗೂ ಕಾಡುವ ಹಾಗೆ ಬರೆದಿರುವ ಶೈಲಿ ಮಾತ್ರ ಬಹಳ ಚೆಂದ. ಇದು ಕಾದಂಬರಿಯ, ಸ್ವಗತವಾ , ಯಾರದ್ದೋ ಆತ್ಮಕತೆಯ ನಿರೂಪಣೆಯಾ.. ಕಾವ್ಯವಾ ಲಲಿತ ಪ್ರಬಂಧವಾ ಅಥವಾ ಅವೆಲ್ಲವೂ ಒಟ್ಟು ಸೇರಿದ ಹೊಸದೊಂದು ಬಗೆ ಹುಟ್ಟಿದಿಯಾ ಎನ್ನುವ ಆಲೋಚನೆ ಕಾಡುತ್ತಲೇ ಓದಿಸಿಕೊಂಡು ಹೋಗುತ್ತದೆ. ನಿರೂಪಕನಾಗಿ, ಪಾತ್ರವಾಗಿ ಮೂರನೆಯ ವ್ಯಕ್ತಿಯಾಗಿ ಜೋಗಿ ಕೂಡಾ ಇಡೀ ಕಾದಂಬರಿಯಲ್ಲಿ ಅಶ್ವತ್ಥಾಮನಿಗಿಂತಲೂ ಅದ್ಭುತವಾಗಿ ನಟಿಸಿದ್ದಾರೆ ಅನ್ನಿಸಿತು.

ಲಕ್ಷ್ಮಣ ನೀಲಂಗಿಯ ಮುಂದುವರಿದ ಪಾತ್ರವೇನೋ ಎಂದೆನಿಸುವ ಅಶ್ವತ್ಥಾಮ ಅಲ್ಲಿಗಿಂತ ಇಲ್ಲಿ ತುಸು ಭೀಡೆಯಿಂದ ತನ್ನನ್ನು ವ್ಯಕ್ತಗೊಳಿಸಿಕೊಂಡಿದ್ದಾನಾ ಅನ್ನಿಸಿದರೂ ಅದು ನಿಜವಾ ನಟನೆಯಾ ಎಂಬ ಅನುಮಾನವೂ ಕಾಡದೆ ಹೋಗುವುದಿಲ್ಲ. ಯಾವುದೇ ಪಾತ್ರ ಮಾತಾಡುವಾಗ ಅದೇ ಸರಿ, ಇರಬೇಕಾಗಿದ್ದೆ ಹೀಗೆ ಅನ್ನಿಸುವಂತೆ ಪ್ರಭಾವಶಾಲಿಯಾಗಿ ಬರೆಯುವ ಕೌಶಲ್ಯ ಜೋಗಿಯವರಿಗೆ ಸಿದ್ಧಿಸಿದೆ. ಹಾಗಾಗಿ ನಾಯಕನ ರೀತಿ ಸರಿಯಾದದ್ದೇ ಅರೆ ಇದ್ದರೇ ಹೀಗೆ ಇರಬೇಕಿತ್ತಲ್ಲ ಎಂದು ಒಂದು ಕ್ಷಣ ನಾವೂ ಸಂಯುಕ್ತಾ  ಆಗಿ ಕಳೆದುಹೋಗುವ ಸಂಭವವೂ ಇಲ್ಲದಿಲ್ಲ.

ಕಣ್ಣು ಮುಚ್ಚಿಕೊಂಡರೆ ನಟಿಸುವುದು ಸುಲಭ, ಎನ್ನುತ್ತಾನೆ ಅಶ್ವತ್ಥಾಮ. ಕಣ್ಣು ಮುಚ್ಚಿದರೆ ಕತ್ತಲೆ. ಅಲ್ಲಿ ಯಾರನ್ನೂ ದಿಟ್ಟಿಸುವ ಪ್ರಸಕ್ತಿ ಇಲ್ಲ, ಯಾರ ಕಣ್ಣೊಳಗೆ ಇಳಿದು ಅವರ ಭಾವ ತಿಳಿಯುವ ಜಂಜಡ ಇಲ್ಲ. ಅವರ ಪ್ರತಿಕ್ರಿಯೆ ನೋಡುತ್ತಾ ಅದಕ್ಕೆ ತಕ್ಕ ಉತ್ತರ ಕೊಡುವ ಲೆಕ್ಕಾಚಾರವಿಲ್ಲ ಅಂದುಕೊಂಡಿದ್ದನ್ನು ಅಂದುಕೊಂಡ ಹಾಗೆ ಹೇಳಬಹುದು. ನಿರುಮ್ಮಳ ಭಾವದಲ್ಲಿ ಕೈ ನಡುಗುವುದಿಲ್ಲ. ಅದಕ್ಕೆಂದೇ ಆ ಅಶ್ವತ್ಥಾಮ ನಡುರಾತ್ರಿಯನ್ನು ಪಾಂಡವರನ್ನು ಕೊಲ್ಲಲು ಆಯ್ದುಕೊಂಡನಾ.. ಪ್ರೀತಿ ಹಾಗು ಕೊಲೆಯನ್ನು  ಸುಮ್ಮನೆ ಮಾಡಿಬಿಡಬೇಕು ಎನ್ನುವ ಈ ಅಶ್ವತ್ಥಾಮನ ಮಾತು ಓದುವಾಗ ಮೈಯಲ್ಲಿ ನಡುಕ ಹುಟ್ಟಿಸುವುದು ಸುಳ್ಳಲ್ಲ.

ಉಳಿಸಿಕೊಳ್ಳಲೇ  ಬೇಕು ಎನ್ನುವ ಹಠ ತೊಟ್ಟಾಗ ಜಿದ್ದಿಗೆ ಬೀಳುತ್ತೇವಾ.. ಉಳಿಸಿಕೊಳ್ಳಬೇಕು ಎನ್ನುವ ಭಾವ ಎಷ್ಟು ತೀವ್ರವಾಗಿರುತ್ತದೋ ಜಿದ್ದು  ಅಷ್ಟೇ ತೀವ್ರವಾಗಿರುತ್ತದೆ. ಜಿದ್ದಿಗೆ ಬಿದ್ದ ಸಂಯುಕ್ತಾ, ಸಿಗದೇ ಜಾರಿಕೊಳ್ಳುವ ಅಶ್ವತ್ಥಾಮ ಇಲ್ಲಿ ಗೆಲ್ಲುವುದು ಯಾರು? ಒಬ್ಬರು ಗೆದ್ದರೂ ಅಲ್ಲಿಗೆ ಆಟ ಮುಗಿದಂತೆ. ಹಾಗಾಗಿ ಈ ಕಾದಂಬರಿಗೆ ಅಂತ್ಯವಿಲ್ಲ. ಇದರ ಮುಂದುವರಿಕೆಯಾಗಿ ಇನ್ನೊಂದು ಕಾದಂಬರಿ ಬರಬಹುದಾ...

ನಂಬಿಕೆ, ಗೌರವ, ಸಲಿಗೆ ಇವೆಲ್ಲವೂ ಕಟ್ಟಿ ಹಾಕುವ ಭಾವಗಳೆ. ಜೀವನದ ಪಾತ್ರಕ್ಕೆ ನಿರ್ದೇಶಕನಿಲ್ಲ. ಸ್ಕ್ರಿಪ್ಟ್ ಇಲ್ಲ. ರಿ ಟೇಕ್ ಅಂತೂ ಇಲ್ಲವೇ ಇಲ್ಲ. ಹಾಗಾಗಿ ಬದುಕು ಅನೂಹ್ಯ. ಸೋಲುವುದು ನಾನೇ ಎಂದು ಗೊತ್ತಿದ್ದರೂ ಆಡಬೇಕು ಹಾಗಾಗಿ ಇದು ಹೀಗೆ ಆಗುತ್ತದೆ ಎನ್ನುವಾಗ ನಟಿಸುವುದು ಸುಲಭವಲ್ಲ ಎನ್ನುವ ಅಶ್ವತ್ಥಾಮ ಯಾರ ಅಂಕೆಗೂ ಸಿಗದವ, ಊಹೆಗೆ ನಿಲುಕುವ. ಅವನೊಳಗೊಂದು ನಿಗೂಢ ಲೋಕ. ಹಾಗಾಗಿ ತನ್ನ ಎಲ್ಲಾ ವರ್ತನೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಹೇಳುತ್ತಾ ಹೋಗುತ್ತಾನೆ. ತನ್ನ ಆತ್ಮಕತೆ ಪ್ರಕಟವಾದಾಗ ಘನತೆ ಕಡಿಮೆಯಾಗಬಾರದು ಎನ್ನುವ ಎಚ್ಚರ ಅವನಲ್ಲಿ ಸದಾ. ನಮ್ಮ ಬಗ್ಗೆ ನಾವೇ ನಿರ್ಲಿಪ್ತವಾಗಿ ಬಣ್ಣ ಹಚ್ಚದೆ ಹೇಳಲು ಸಾಧ್ಯವಾ... ಹಾಗೆ ಹೇಳಲು ಆ ಪಾತ್ರದಿಂದ ಹೊರಗೆ ಬರಬೇಕು. ಹಾಗೆ ಹೊರಗೆ ಬಂದಮೇಲೆ ಮತ್ತೆ ಅಲ್ಲಿಗೆ ಮರಳಲು ಸಾಧ್ಯವಾ.. ಹಾಗಾದರೆ ಆತ್ಮಕತೆ ಎನ್ನುವುದು ಕತೆಯೇ ಅಲ್ಲವಾ..

ಯಾವುದೇ ಭಾವವಾದರೂ ಅನುಭವಿಸುವ ಕ್ಷಣದಲ್ಲಿ ತೀವ್ರವಾಗಿರುತ್ತದೆ. ಆಮೇಲೆ ಕಾಲ ಸರಿದಂತೆ ಅದು ತೆಳುವಾಗುತ್ತಾ ಹೋಗುತ್ತದೆ. ಹೇಳಿದ ಮೇಲೆ ಬರೆದದ್ದು ಓದುವಾಗ ಅಶ್ವತ್ಥಾಮನಿಗೂ ಹಾಗೆ ಅನ್ನಿಸಿತಾ.. ಹಾಗಾಗಿಯೇ ತಾನೇ ಬರೆಯಲು ಪ್ರಯತ್ನ ಪಟ್ಟನಾ.. ತಾನು ಚಿರಂಜೀವಿ ಹಾಗಾಗಿ ಸಾವಿಲ್ಲ. ಪಾಂಡವರನ್ನು ಕೊಂದರೆ ಕೃಷ್ಣ ಸುಮ್ಮನಿರುವುದಿಲ್ಲ, ಮುಂದಿನ ಪರಿಣಾಮ ಏನಾಗಬಹುದು ಎಂದು ಯೋಚಿಸದೆ ಅಶ್ವತ್ಥಾಮ ರಾತ್ರಿ ಕತ್ತಿ ಹಿರಿದು ಹೊರಟನಾ.. ವಿಧಿ ತಪ್ಪಿಸಲಾಗುವುದಿಲ್ಲ ಎನ್ನುವುದೂ ಗೊತ್ತಿಲ್ಲದಷ್ಟು ಮೂರ್ಖನಾ... ನಟರಿಗೆ ಗೊತ್ತಿರುವುದು ಪ್ರೇಕ್ಷಕನಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಟಿಸುವುದು ಅನಿವಾರ್ಯ.

ತಲೆಯಲ್ಲಿ ಹುಳು ಬಿಡುತ್ತಾ, ಇರುವ ನಂಬಿಕೆಗಳನ್ನು ಬುಡಮೇಲು ಮಾಡುತ್ತಾ, ಇದೆ ವಿಧಿ ಎನ್ನುವ ಅಧ್ಯಾತ್ಮ ಹೇಳುತ್ತಿದ್ದಾರೆ ಎನ್ನುವ ಹೊತ್ತಿಗೆ ಅದನ್ನು ಒಡೆದುಹಾಕುವ ಉಡಾಫೆ ತನ  ತೋರಿಸುತ್ತಾ ಇದಮಿತ್ಥಮ್ ಎಂದುಕೊಳ್ಳಲು ಆಸ್ಪದವೇ ಇಲ್ಲದ ಹಾಗೆ ಮಾಡುತ್ತಾ ಹೊಸದೊಂದು ಲೋಕಕ್ಕೆ ಕರೆದೊಯ್ಯುತ್ತಾರೆ ಜೋಗಿ. ಗೆಲ್ಲಲೇಬೇಕು ಎಂಬ ಛಲಕ್ಕೆ ಬಿದ್ದಾಗ ದಾರಿಯ ಬಗ್ಗೆ ದುರ್ಯೋಧನನಂತವರು ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಿದ್ದರೆ ಇಲ್ಲಿ ಅಶ್ವತ್ಥಾಮ ಯೋಧನಾ... ಆಯುಧನಾ...

 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...