ಭೂಮಿ ಹುಣ್ಣಿಮೆ.
ಆಗ ತಾನೇ ಮೋಡ ಚದುರಿ ಬಿಸಿಲು ಸಸುನಗುತ್ತಾ ಹೊರಗೆ ಹಣುಕುವಾಗ ಹಾರೆಯನ್ನು ಹೆಗಲ ಮೇಲೆ ಹಾಕಿಕೊಂಡು ಗದ್ದೆಗೆ ನೀರು ಕಟ್ಟಿ ಬರ್ತೀನಿ ಅಂದವನ ಬೆನ್ನ ಹಿಂದೆಯೇ ಹೊರಟೆ. ಆಗಷ್ಟೇ ಮಳೆಗಾಲ ಮುಗಿದು ಸೂರ್ಯನೂ ಹೊರಗೆ ಬಂದಿದ್ದ. ಎಳೆಬಿಸಿಲಿಗೆ ಹಸಿರು ಇನ್ನಷ್ಟು ಹೊಳೆಯುತ್ತಿತ್ತು. ತಣ್ಣನೆಯ ಗಾಳಿ ಹಿತವಾಗಿ ಭತ್ತದ ಪೈರನ್ನು ನೇವರಿಸಿ ಕುಶಲ ವಿಚಾರಿಸುತಿತ್ತು. ಅದು ಇನ್ಯಾರಿಗೂ ಕೇಳಬಾರದೇನೋ ಎಂದು ಬಾಗಿ ಏನೋ ಪಿಸುಗುಡುತಿತ್ತು. ಹಾಗಾಗಿ ಎಷ್ಟು ಕಿವಿ ನಿಮಿರಿಸಿದರೂ ಸುಯ್ ಎನ್ನುವ ಶಬ್ದ ಒಂದು ಬಿಟ್ಟು ಇನ್ನೇನೂ ಕೇಳಲಿಲ್ಲ. ಜುಳು ಜುಳನೆ ಹರಿಯುವ ನೀರಿಗೂ ಸಂಭ್ರಮ, ತಿಳಿಯಾಗಿ ಹರಿದು ಶುದ್ಧ ಭಾವ ಮೂಡಿಸುತ್ತ ಮುಂದಿನ ಗದ್ದೆಗೆ ಹೋಗುತಿತ್ತು. ಅದೇನೋ ಅರ್ಜೆಂಟ್ ಕೆಲಸವಿದೆಯೇನೋ ಅನ್ನುವ ಹಾಗೆ ಏಡಿಯೊಂದು ಗಡಿಬಿಡಿಯಲ್ಲಿ ಹೋಗುತಿತ್ತು. ಅಂಚಿನ ಬದಿಯಲ್ಲಿ ಹುಲ್ಲು ಹಸಿರಾಗಿ ನಳನಳಿಸುತಿತ್ತು. ಹುಲ್ಲಿಗೂ ತನ್ನ ಬಣ್ಣಕ್ಕೂ ತಕ್ಷಣಕ್ಕೆ ವ್ಯತ್ಯಾಸ ಗೊತ್ತಾಗದ ಹಾಗಿರುವ ಮಿಡತೆ ಚಳಿ ಕಾಯಿಸುತ್ತಾ ಕನಸು ಕಾಣುತಿತ್ತು. ಇದ್ಯಾವುದರ ಗೊಡವೆಯೂ ಬೇಡವೆಂಬಂತೆ ಬೆಳ್ಳಕ್ಕಿಯೊಂದು ಬಿಸಿಲಿಗೆ ಮೈಯೊಡ್ಡಿ ಧ್ಯಾನ ಮಗ್ನವಾಗಿತ್ತು. ಯಾವುದೋ ಕಾರ್ಯಕ್ರಮಕ್ಕೆ ಬಂದ ಜನ ಜಂಗುಳಿಯ ಓಡಾಟದಂತೆ ಕಾಣುತಿತ್ತು ಹಾರುತಿದ್ದ ಕೀಟ ಸಂಕುಲ. ಗದ್ದೆಯ ನಡುವೆ ಗಂಭೀರವಾಗಿ ನಿಂತು ಗಮನಿಸುತ್ತಿದ್ದ ಮರದ ತುಂಬಾ ಬಗೆಬಗೆಯ ಹಕ್ಕಿಗಳ ಇಂಚರ. ಇಡೀ ಗದ್ದೆಯೆಂಬ ಗದ್ದೆಯ ಕೋಗು ಎಳೆಬಿ