ಓದಿನ ಸುಖ ವಿಜಯಕರ್ನಾಟಕ 08.09.19

ಸೂಜಿಗೆ ದಾರ ಹಾಕಿಕೊಡಲು ಹೇಳುತ್ತಿದ್ದ ಅಜ್ಜಿ ಸಂಜೆ ಶಾಲೆಯಿಂದ ಬರುವಾಗ ಇಳಿಬಿಸಿಲಿಗೆ ಎದುರಾಗಿ ಪುಸ್ತಕ ಹಿಡಿದು ಓದುವುದು ಕಂಡು ಇವಳು ನಮ್ಮತ್ರ ಕೆಲಸ ಮಾಡಿಸಲು ಕಣ್ಣು ಕಾಣಿಸೋಲ್ಲ ಅಂತಾಳ ಅನ್ನುವ ಗೊಂದಲ ಶುರುವಾಗುತ್ತಿತ್ತು. ತನ್ನ ಕೆಲಸವೆಲ್ಲಾ ಮುಗಿಸಿ ಬೆಳಕು ಇದ್ದಾಗ ಅಂಗಳದ ಚಪ್ಪರದ ಕಂಬಕ್ಕೆ ಒರಗಿ ರಾಮಾಯಣವನ್ನೋ, ಮಹಾಭಾರತವನ್ನೋ ಓದುತ್ತಿದ್ದ ಅವಳು ನಾನು ಮೂರನೆ ತರಗತಿಗೆ ಬರುವ ಹೊತ್ತಿಗೆ ಅದನ್ನು ನನ್ನ ಹೆಗಲಿಗೆ ವರ್ಗಾಯಿಸಿದ್ದಳು. ಶಾಲೆ ಮುಗಿಸಿ ಬಂದು ಚೂರು ಏನಾದರೂ ತಿಂದು ಅವಳು ಬತ್ತಿ ಮಾಡುವಾಗ ಓದಿ ಹೇಳುವ ಕೆಲಸ ಅಂತ ಇಷ್ಟದ್ದೇನು ಆಗಿರಲಿಲ್ಲ. ಸಾಕಾ ಅಂತ ರಾಗ ಎಳೆಯುತ್ತಿದ್ದರೆ ಇನ್ನೊಂದು ಕಟ್ಟು ಬತ್ತಿ ಮಾಡುವ ತನಕ ಓದು ಅಂತ ಅವಳು ಉಪಾಯದಲ್ಲಿ ಮತ್ತೆ ಮೂರೋ ನಾಲ್ಕೋ ಅಧ್ಯಾಯ ಓದಿಸಿ ಬಿಡುತ್ತಿದ್ದಳು.

ಪ್ರೈಮರಿ ಶಾಲೆ ಮುಗಿಸುವ ಹೊತ್ತಿಗೆ ಈ ಓದಿ ಹೇಳುವ ಕೆಲಸದಿಂದಾಗಿ ರಾಮಾಯಣ ಹಾಗೂ ಮಹಾಭಾರತ ಎರಡೂ ಓದಿ ಮುಗಿಸಿವುದರ ಜೊತೆಗೆ ಪಟ್ಟಾಗಿ ಕುಳಿತು ಓದುವುದು ಅಭ್ಯಾಸ ಆಗಿಬಿಟ್ಟಿತ್ತು. ಆಮೇಲೆ ನಿಧಾನಕ್ಕೆ ಅವಳಿಗೆ ರಾಗಸಂಗಮದಲ್ಲಿ ಬರುತ್ತಿದ್ದ ಕಾದಂಬರಿ ಓದಿ ಹೇಳುವುದು ಶುರುವಾದ ಮೇಲೆ ಈ ಓದುವಿಕೆ ಆಸಕ್ತಿ ಅನ್ನಿಸತೊಡಗಿತ್ತು. ಅವಳು ಸಾಕು ಅಂದರೂ ಇರು ಇನ್ನೊಂದು ಚೂರು ಇದೆ ಓದಿ ಮುಗಿಸಿಬಿಡ್ತೀನಿ ಅನ್ನುತ್ತಿದ್ದೆ. ಹೀಗೆ ನನ್ನಲ್ಲಿ ಓದುವಿಕೆಯ ಬೀಜ ನೆಟ್ಟು ಅದನ್ನು ಪೋಷಿಸಿದ್ದು ಅಜ್ಜಿ. ಇವತ್ತು ಓದುವಿಕೆ ಇಲ್ಲದೆ ಹೋದರೆ ಬದುಕೇ ಇಲ್ಲವೇನೋ ಅನ್ನುವಷ್ಟು ಬದುಕಿನ ಭಾಗವಾಗಿ ಹೋಗಿದೆ. ಮೊದಮೊದಲು ಓದೆಂದರೆ ರಾಮಾಯಣ ಮಹಾಭಾರತ ಅನ್ನುವುದರಿಂದ ಒಂದು ಹೆಜ್ಜೆ ಮುಂದಿಟ್ಟು ಬಂದರೆ ಕಾದಂಬರಿಗಳ ಲೋಕ ಕೈ ಬೀಸಿ ಕರೆಯುತ್ತಿತ್ತು. ಉಷಾ ನವರತ್ನ ರಾಮ್, ಸಾಯಿಸುತೆ, ತ್ರಿವೇಣಿ ಇವರುಗಳದ್ದೇ ಲೋಕ. ನಾಲ್ಕನೇ ತರಗತಿಯಲ್ಲಿದ್ದಾಗ ಚಿಕ್ಕಿ ಓದಲು ತಂದಿಟ್ಟುಕೊಂಡಿದ್ದ ಮಣ್ಣಿನ ದೋಣಿ ಅನ್ನುವ ಕಾದಂಬರಿಯನ್ನು ಕದ್ದು ಓದಿ ಮುಗಿಸುವ ಭರದಲ್ಲಿ ಮೈ ಮರೆತು ಕುಳಿತವಳು ಅಜ್ಜಿಯ ಕೈಗೆ ಸಿಕ್ಕು ಬಿದ್ದು ಬೈಗುಳ ತಿಂದಿದ್ದೆ. ಸಿಕ್ಕಿ ಬೀಳುವ ವರೆಗೆ ಭಯ ಒಮ್ಮೆ ಸಿಕ್ಕಿ ಬಿದ್ದ ಮೇಲೆ ಇನ್ನೇನು ಹಾಗಾಗಿ ಓದು ಮುಂದುವರೆದಿತ್ತು.

ಬೇಸಿಗೆಯಲ್ಲಿ ಗದ್ದೆಯಲ್ಲಿ ಹಾಕಿದ ತರಕಾರಿ ಧಾನ್ಯಗಳನ್ನು ದನಗಳು ತಿನ್ನಲು ಬಾರದಂತೆ ಕಾಯುವಾಗ, ಮಧ್ಯಾನದ ನಿಶಬ್ದದಲ್ಲಿ  ಎಲ್ಲರೂ ನಿದ್ದೆ ಹೋಗುವಾಗ ಉಂಟಾಗುತ್ತಿದ್ದ ಒಂಟಿತನ ಹೋಗಲಾಡಿಸುವಾಗ, ಆಟಕ್ಕೆ ಯಾರೂ ಸಿಗದೇ ಹೋದಾಗ, ಮರದಲ್ಲಿದ್ದ ಹಣ್ಣುಗಳು, ಚೇಷ್ಟೆಗೆ ಸರಕು ಸಿಕ್ಕದೆ ಹೋದಾಗ ದೇವಕನ್ಯೇಯರಂತೆ ನನ್ನ ಶಾಪವಿಮೊಚನೆಗೆ ಬಂದಿದ್ದಾರೆನೋ ಅನ್ನಿಸುತ್ತಿದ್ದದ್ದು ಪುಸ್ತಕಗಳೇ. ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಗ ಸಿಕ್ಕ ಮೇಷ್ಟರುಗಳು ಓದನ್ನು ಕೊಂಚ ಪ್ರೌಢತೆಗೆ ಏರುವ ಹಾಗೆ ಮಾಡಿದ್ದರು. ಶಾಲೆ ಪುಸ್ತಕಗಳನ್ನು ಓದು ಎಂದು ಬಲವಂತ ಮಾಡದಿದ್ದರೂ ಒಳ್ಳೆಯ ಪುಸ್ತಕ ಸಿಕ್ಕಾಗ ಮಾತ್ರ ಓದು ಎಂದು ಕೈಗಿಡುತ್ತಿದ್ದರು. ರೂಪದರ್ಶಿ ಓದಿದ್ದು ಆಗಲೇ.  ಬದುಕು ಎಂದರೆ ಏನು ಅಂತ ಅರ್ಥವಾಗದ ವಯಸ್ಸಿನಲ್ಲಿ ಅದು ಕಾಡಿಸಿ ಬಿಟ್ಟಿತ್ತು, ಬದುಕಿಗೆ ಕ್ರೂರತೆಯೂ ಇದೆ ಎಂದು ಅರ್ಥವಾಗಿತ್ತು. ಎಸ್.ಎಸ್ ಎಲ್.ಸಿ ಗೆ ಬರುವಾಗ ಯಾರೋ ಗಿಫ್ಟ್  ಕಳುಹಿಸಿದ್ದ ಬೆಳಂದಿಗಳ ಬಾಲೆ ಓದಿ ಒಂದು ತಿಂಗಳು ಅತ್ತೂ ಕರೆದು ಗೋಳಾಡಿ ಮಾರಾಯ್ತಿ ರೇವಂತ್ ಕೂಡಾ ಅಷ್ಟು ದುಃಖ ಪಟ್ಟಿಲ್ಲವೇನೋ ಕಥೆಯನ್ನು ಕತೆಯಾಗಿ ಓದಲು ಕಲಿಯುವ ತನಕ ಇನ್ನು ಕತೆ ಪುಸ್ತಕ ಅಂದರೆ ಕೈ ಕಾಲು ಮುರಿತೀನಿ ಅಂತ ಅಜ್ಜಿ ಬೆದರಿಕೆ ಹಾಕಿದ್ದಳು. ಆ ಬೆದರಿಕೆಗೆ ಅಳು ನಿಲ್ಲಿಸಿ ಮಾಮೂಲಾಗುವ ಪ್ರಯತ್ನ ಮಾಡಿದ್ದೆ.

ಹಾಗಿದ್ದರೆ ಕತೆ ಕೇವಲ ಕತೆಯಾ.?.. ಅದು ಕೇವಲ ಟೈಮ್ ಪಾಸ್ ಮಾಡೋಕೆ ಮಾತ್ರನಾ?   ಅಂದರೆ ಇಷ್ಟು ವರ್ಷಗಳ ಅದರ ಜೊತೆಗಿನ ಸಾಂಗತ್ಯದ ನಂತರ ಅಷ್ಟೇ ಅಲ್ಲಾ ಅನ್ನೋದು ಅರ್ಥವಾಗಿದೆ. ಜೊತೆಗೆ ಅದನ್ನು ಓದುವ ನನ್ನದೇ ಆದ ರೀತಿಯೂ ಹುಟ್ಟಿಕೊಂಡಿದೆ. ಮಳೆ ಬರುವಾಗ ಜಗುಲಿಯಲ್ಲಿ ಕುರ್ಚಿಯನ್ನು ಹಾಕಿಕೊಂಡು ಕುಳಿತರೆ ಕುವೆಂಪು,  ಅಂಗಳದ ತುದಿಯ ಜೋಕಾಲಿಯಲ್ಲಿ ಕುಳಿತಾಗ ಚಿತ್ತಾಲರು, ಮಾವಿನ ಮರಕ್ಕೆ ಆತು ಕುಳಿತರೆ ಕಾರಂತರು,  ಹಳ್ಳದ ನೀರಿಗೆ ಕಾಲು ಇಳಿಬಿಟ್ಟು ಕುಳಿತರೆ ತೇಜಸ್ವಿ,  ನಡುಮನೆಯಲ್ಲಿ ಏಕಾಂತವನ್ನು ಹೊದ್ದಿ ಕುಳಿತರೆ ಭೈರಪ್ಪ,  ನೀರವ ರಾತ್ರಿಗೆ ಬೆಳೆಗೆರೆ, ಯಾವುದೋ ಉತ್ತರದ ಹುಡುಕಾಟದಲ್ಲಿದ್ದರೆ ತ.ರಾ.ಸು. , ಮೌನಕ್ಕೆ ಮಾತಾಗಬೇಕಾದರೆ ಜೋಗಿ, ಸಮಯ ಕಳೆಯಲು ಸಾಯಿಸುತೆ, ಈಗ ನಡು ಮಧ್ಯಾನದ ಹೊತ್ತಿಗೆ ಹೊಸ ಹೊಸ ಲೇಖಕರು ಬರೆದ ಪುಸ್ತಕಗಳು  ಹೀಗೆ ನನ್ನದೇ ಓದುವ ಶೈಲಿ ಅಭ್ಯಾಸ ಸಿದ್ದಿಸಿದೆ. ಬರೀ ಅಷ್ಟೆಯಾ ಅಂದರೆ ಉಹೂ ಓದು ಬದುಕು ಬದಲಿಸಿದೆ, ಆಲೋಚನೆಯ ದಿಕ್ಕು ತಿರುಗಿಸಿದೆ.

ಪುಸ್ತಕವೊಂದು ನನ್ನದು ಅನ್ನಿಸುವುದು ಯಾವಾಗ? ಯಾವ ಕಾರಣಕ್ಕೆ ಯಾವ ಸಾಲು, ಯಾವ ಪಾತ್ರ ಇಷ್ಟವಾಗುತ್ತೆ ಅಂತ ನಿಖರವಾಗಿ ಹೇಳುವುದು ಕಷ್ಟವೇ...  ಮಾತು ಹಿಂಸಿಸುವುದಕ್ಕಿಂತ ಆಡಬೇಕಾದ ಸಮಯದಲ್ಲಿ ಆಡದೆ ಉಳಿದ ಮೌನ ಕೂಡಾ ಸಾಯಿಸುತ್ತದೆ ಅನ್ನುವುದು ಈ ಕತೆಗಳ ಸಹವಾಸವೇ ಸಾಕು ಅನ್ನುವ ಕತೆ ಹೇಳಿದ್ದು ನೋಡಿ ದಂಗಾಗಿ ಹೋಗಿದ್ದೆ.  ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುವ ಹಾಗೆ ಮನಸ್ಸಿನಲ್ಲಿ ಇಳಿಯುವ ಪ್ರಕ್ರಿಯೆ ನಡೆಯದೆ ಹೋದರೆ, ಹಾಗೆ ಕೈ ಹಿಡಿದು ಇಳಿಸದೆ ಹೋದರೆ ಪುಸ್ತಕ ಓದುಗ ಇಬ್ಬರೂ ಸೋತ ಹಾಗೆ. ಅಲ್ಲೊಂದು ನಂಟಿದೆ. ಕೈ ಹಿಡಿದು ನಡೆಸುವ ಜೀವವಿದೆ. ಜೊತೆಯಾಗುವ ಭಾವವಿದೆ, ಪ್ರಶ್ನೆಗೆ ಉತ್ತರವಿದೆ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮನ್ನು ನಾವು ವಿಶ್ಲೇಷಿಸಿಕೊಳ್ಳುವ ಯಾರನ್ನೋ ಓದುತ್ತಾ, ಯಾವುದೋ ನೋಡುತ್ತಾ ನಮ್ಮನ್ನು ನಾವು ಅರಿತುಕೊಳ್ಳುವ ಪ್ರಕ್ರಿಯೆಯಿದೆ. ಹಾಗಾಗಿ ಅನೇಕರಿಗೆ ಪುಸ್ತಕ ಎಂದರೆ ಸ್ನೇಹಿತ. ಸ್ನೇಹಿತ ಹಾಗೂ ಪುಸ್ತಕ ಇಷ್ಟೇ ಅಥವಾ ಹೀಗೆ ಅಂತ ವಿವರಿಸೋದು ಬಹಳ ಕಷ್ಟ.

ಯಾವುದೋ ಆಲೋಚನೆಯಲ್ಲಿ ಮಗ್ನಳಾಗಿ ಏನು ಮಾಡಬೇಕು ಎಂದು ಗೊಂದಲದಲ್ಲಿದ್ದಾಗ, ಉತ್ತರದ ಹುಡುಕಾಟದಲ್ಲಿದ್ದಾಗ, ಯಾವುದೋ ಭರವಸೆ ಸಾಂತ್ವನಕ್ಕೆ ನಿರೀಕ್ಷಿಸಿದಾಗ, ಹುಮ್ಮಸ್ಸು ಬೇಕಾದಾಗ ಹೀಗೆ ಯಾವುದರ ಆವಶ್ಯಕತೆಯಿದೆಯೋ ಅಂತಹ ಪುಸ್ತಕಗಳು ಆ ಕ್ಷಣಕ್ಕಾಗಿ ಕಾಯುತ್ತಿದೆಯೇನೋ ಎಂಬಂತೆ ನಮ್ಮ ಕೈ ಸೇರಿವೆ. ಆಲೋಚನೆಯನ್ನು ಬದಲಾಯಿಸಿವೆ, ಬದುಕನ್ನು ಮಾಗಿಸಿವೆ. ದಾರಿ ಸ್ಪಷ್ಟವಾಗುವ ಹಾಗೆ ಮಾಡಿದೆ. "ಕತ್ತಲಾಯಿತು ಮತ್ತೆ ಬೆಳಕಾಗಲೇ ಇಲ್ಲ" ಎನ್ನುವ ದುರ್ಗಾಸ್ತಮಾನದ ಸಾಲು ತಿಂಗಳುಗಟ್ಟಲೆ ಕಾಡಿಸುತ್ತಲೇ ಹೊಸ ಹೊಳವು ಕೊಟ್ಟಿವೆ. ಪ್ರಶ್ನೆಗಳನ್ನು ಸೃಷ್ಟಿಸುವವನೇ ಉತ್ತರವನ್ನೂ ಕಂಡು ಕೊಳ್ಳಬೇಕು, ಅವರವರ ನಿರ್ಧಾರ ಅವರವರೇ ತೆಗೆದುಕೊಳ್ಳಬೇಕು ಎನ್ನುವ ನಾರಾಯಣಾಚಾರ್ಯರ ಸಾಲು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಜೊತೆಗೆ ಸ್ಪಷ್ಟತೆ ಕೊಟ್ಟಿದೆ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...