ಅಜ್ಜಿ

ಅವಳು ಹೊರಟು ದಿನವೆರೆಡು ಕಳೆದಿತ್ತು ಅಷ್ಟೇ. ಎಲ್ಲರೂ ಇದೀರಲ್ಲ ನೋಡಿಬಿಡಿ ಅಂತ ಅವಳ ಪೆಟ್ಟಿಗೆಗಳನ್ನು ಒಂದೊಂದಾಗಿ ತಂದು ಮಧ್ಯದ ಒಳಗೆ ಇಡುತ್ತಿದ್ದ ಮಾವ. ಕರಳು ಚುರುಕ್ ಎಂದರೂ ಅವಳ ಗುಟ್ಟು ನೋಡುವ ಹಂಬಲ. ಅವಳಷ್ಟೇ ವಯಸ್ಸಾಗಿರುವ(?) ಪೆಟ್ಟಿಗೆಗಳು ಕಪ್ಪು ಹಿಡಿದು ಹೋಗಿದ್ದವು.  ಅದೇ ಹಳೆಯ ಪೆಟ್ಟಿಗೆಯನ್ನು ಎಸೆಯದೆ ಅದಕ್ಕೆ ಹಳೆಯ ಪಂಚೆಯನ್ನು ಸುತ್ತಲೂ ಹಾಕಿ ಅದರ ತುಕ್ಕು ಬಟ್ಟೆಗೆ ಹಿಡಿಯದಂತೆ ಜೋಪಾನವಾಗಿ ಇಟ್ಟಿದ್ದಳು. ಅವಳಿಗೆ ಎಲ್ಲವನ್ನೂ ಜೋಪಾನವಾಗಿ ಇದುವ ಸ್ವಭಾವ ಬಂದಿದ್ದು ರಕ್ತದಿಂದಲೋ ಇಲ್ಲಾ ಬಡತನ ಅನಿವಾರ್ಯತೆಯಿಂದಲೋ ಈ ಕ್ಷಣಕ್ಕೂ ಗೊಂದಲ. ಮಹಾ ಅಚ್ಚುಕಟ್ಟು. ಒಂದಿನಿತೂ ಹಾಳು ಮಾಡದ ಸ್ವಭಾವ.

ಅಷ್ಟು ಸುಧೀರ್ಘ ಬದುಕಿನ ಅವಳ ಆಸ್ತಿ ಒಂದು ಐದಾರು ಇಂತ ಪೆಟ್ಟಿಗೆಗಳೇ. ಒಂದೊಂದೇ ತೆಗೆಯುತ್ತಾ ಹೋದರೆ ಜೋಡಿಸಿಟ್ಟ ಆ ಅಚ್ಚುಕಟ್ಟು ಕೈ ಹಾಕಲೇ ಹಿಂಜರಿಯುವ ಹಾಗೆ ಮಾಡಿತ್ತು. ಪೆಟ್ಟಿಗೆಯ ತುಕ್ಕು ಸ್ವಲ್ಪವೂ ತಾಗದ ಹಾಗೆ ಇಡೀ ಪಂಚೆಯನ್ನು ಹಾಸಿ ಅದನ್ನೇ ಹೊದ್ದಿಸಿ ಆಗಷ್ಟೇ ಸ್ನಾನ ಮುಗಿಸಿ ಬಂದ ಎಳೆ ಮಗುವನ್ನು ಸುತ್ತಿ ಮಲಗಿಸಿದ ಹಾಗೆ ಇಟ್ಟ ಬಟ್ಟೆಗಳು. ಚೂರೂ ಸುಕ್ಕಾಗದಂತೆ, ಮಡಿಕೆ ಬೀಳದಂತೆ ಅಂಗಡಿಯಲ್ಲಿ ಜೋಡಿಸಿಟ್ಟ ಹಾಗೆ ಪೇರಿಸಿಟ್ಟ ಸೀರೆಗಳ ಕಂಡು ಕಿಬ್ಬೊಟ್ಟೆಯಲ್ಲಿ ಸಂಕಟ ಹುಟ್ಟಿತು. ಬಂಧು ಬಳಗದವರು, ಮಕ್ಕಳು ಕೊಟ್ಟ ಸೀರೆಗಳನ್ನೆಲ್ಲಾ ಹಾಗೆಯೇ ಮುಚ್ಚಿಟ್ಟಿದ್ದಳು. ಮನೆಯ ಗೃಹಪ್ರವೇಶದ ಸಮಯದಲ್ಲಿ ನೋಡು ನಿಂಗೆ ರೇಷ್ಮೆ ಸೀರೆ ಕೊಟ್ಟರೆ ಅದನ್ನು ಒಳಗೆ ಇಡ್ತಿಯಾ ಹಾಗಾಗಿ ಎರಡು ಮೆತ್ತಗಿನ ಕಾಟನ್ ಸೀರೆ ತಂದಿದೀನಿ ದಿನಾ ಉಡು, ಇಡೋಕೆ ಹೋಗಬೇಡಾ ಹೋಗುವಾಗ ಅದೇನು ನೀನು ಗಂಟು ಕಟ್ಟಿ ತಗೊಂಡು ಹೋಗೋಕೆ ಆಗೋಲ್ಲ ಅಂತ ಗದರಿಸುತ್ತಿದ್ದರೆ ಬೊಚ್ಚು ಬಾಯಲ್ಲಿ ನಗುತ್ತಾ ವಿಧೇಯ ವಿದ್ಯಾರ್ಥಿನಿಯಂತೆ ತಲೆ ಅಲ್ಲಾಡಿಸಿದ್ದಳು. ನನ್ನ ಮಾತು ಕೇಳುತ್ತಾಳೆ ಅನ್ನುವ ಹಮ್ಮಿನಲ್ಲಿ ನಾನೂ ಬಂದಿದ್ದೆ.

ಪೆಟ್ಟಿಗೆ ತೆಗೆದರೆ ಹೇಗೆ ಕೊಟ್ಟಿದ್ದೇನೋ ಹಾಗೆಯೇ ಮಡಿಸಿಇಟ್ಟ ಸೀರೆಗಳು ಕಂಡು ಒಂದು ಕ್ಷಣ ಕೋಪ, ದುಃಖ, ಸಂಕಟ ಎಲ್ಲವೂ ಕಾಡಿ ಅಲುಗಾಡಿಸಿ ಬಿಟ್ಟವು. ಹುಟ್ಟಿದ ಮನೆಯಲ್ಲೂ ತುಂಬು ಸಂಸಾರ, ಯುದ್ಧದ ದಿನಗಳು ಅವು, ಜೊತೆಗೆ ಬಡತನ, ಇದ್ದುದ್ದರಲ್ಲೇ ಹಂಚಿ ತಿನ್ನುವ, ಜಾಗೃತೆಯಾಗಿ ಇರುವುದನ್ನು ಬಳಸುವ ಅಭ್ಯಾಸ ಆಗಲೇ ಆಗಿತ್ತೇನೋ. ಬಂದು ಸೇರಿದ್ದು ಅಂತಹುದೇ ಮನೆಗೆ. ಗಂಡ ದುಡಿಯುವಷ್ಟೇ ಕಳೆಯುವುದರಲ್ಲೂ ನಿಸ್ಸೀಮ. ಹಾಗಾಗಿ ಕಷ್ಟಪಟ್ಟು ದುಡಿಯುವ, ಇರುವುದರಲ್ಲೇ ಅಚ್ಚುಕಟ್ಟಾಗಿ ಬದುಕುವುದು ರೂಡಿಯಾಗಿ ಹೋಯಿತೇನೋ.. ಇನ್ನೊಬ್ಬರ ಎದುರಿಗೆ ಕೆಳಗೆ ಅನ್ನಿಸಿಕೊಳ್ಳಬಾರದು ಅನ್ನುವ ಛಲ ಆ ಪುಟ್ಟ ದೇಹಕ್ಕೆ ಅದೆಲ್ಲಿಂದ ಬಂದಿತ್ತೋ ಹಾಗಾಗಿ ಬಂದಾಗ ಕೂಡಿಟ್ಟು ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳುವ ಜಾಣತನ ಬದುಕು ಕಲಿಸಿತ್ತು. ಅದೆಷ್ಟು ರಕ್ತಗತವಾಯಿತೆಂದರೆ ಇದ್ದಾಗಲೂ ಅವಳು ಬಳಸುತ್ತಿರಲಿಲ್ಲ.

ದಿನ ಕಳೆದಂತೆ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಅದಕ್ಕೆ ತಕ್ಕ ಹಾಗೆ ಮನಸ್ಥಿತಿ ಬದಲಾಯಿಸಿಕೊಂಡ ಮೊಮ್ಮಕ್ಕಳಿಗೆ ಆಗಾಗ ಬುದ್ಧಿ ಹೇಳುವುದಕ್ಕೆ ಬಂದರೆ ಅವು ಸಿರ್ರ್ ಎಂದು ಕೋಪಿಸಿಕೊಂಡರೂ ಹೇಳುವುದು ಮಾತ್ರ ಬಿಡುತ್ತಿರಲಿಲ್ಲ. ನಾವು ಮಾಡುವುದು ದುಂದು ಎನ್ನುವುದು ಅವಳ ಭಾವನೆ. ಬಡತನದಲ್ಲೇ ಮುಕ್ಕಾಲು ಪಾಲು ಬದುಕು ಕಳೆದವಳಿಗೆ ಪೈಸೆ ಪೈಸೆಯ ಬೆಲೆ ಅರಿತವಳಿಗೆ ನಮ್ಮದು ದುಡುಕು ಬುದ್ಧಿ ಅನ್ನಿಸುತ್ತಿತ್ತೇನೋ. ಅವಳ ಬದುಕು ನೋಡದ, ಕಷ್ಟ ಅರಿಯದ ಮೊಮ್ಮಕ್ಕಳ ಪಾಲಿಗೆ ಮಾತ್ರ ಕಿರಿಕಿರಿ ಅನ್ನಿಸಿ ನಿಮಗ್ಯಾಕೆ ಅನ್ನಿಸಿಕೊಂಡು ಒಬ್ಬಳೇ ಕುಳಿತು ದುಃಖಿಸುತ್ತಿದ್ದಳೇನೋ. ಕಣ್ಣಿಗೆ ಕಂಡ ತಿನಿಸು ಮಾಡಿಸಿಕೊಂಡೋ ಇಲ್ಲಾ ತರಿಸಿಕೊಂಡೋ ತಿನ್ನುವ ನಮ್ಮ ಸ್ವಾತಂತ್ರ್ಯಕ್ಕೆ ಒಂದು ಬಿಸಿಬೇಳೆಬಾತ್ ತಿನ್ನಲು ಅವಳು ವರ್ಷಾನುಗಟ್ಟಲೆ ಕಾಯುವ, ಕಷ್ಟ ಪಡುವ ಸಂಕಷ್ಟ ಗೊತ್ತಿದ್ದರೆ ಕೊನೆಯ ಪಕ್ಷ ಹೇಳುವುದನ್ನು ಉಸಿರೆತ್ತದೆ ಕೇಳುವ ತಾಳ್ಮೆಯಾದರೂ ಬಂದಿರುತ್ತಿತ್ತೇನೋ...

ಮನೆಗೆ ಬಂದು ನೋಡಿಕೊಂಡು ಹೋಗುವವರು ಕೈಗಿಟ್ಟ ಐವತ್ತು, ನೂರು ರೂಪಾಯಿಗಳು, ಮದುವೆಗೆ, ಇನ್ಯಾವುದೋ ಕಾರಣಕ್ಕೆ ಕೊಟ್ಟ ಸೀರೆಗಳು, ಮಕ್ಕಳು ಮೊಮ್ಮಕ್ಕಳು ಕೊಟ್ಟದ್ದು ಎಲ್ಲವೂ ಹಾಗೆಯೇ ಅಚ್ಚುಕಟ್ಟಾಗಿ ಪೆಟ್ಟಿಗೆ ಸೇರಿದ್ದವು. ಅಗತ್ಯವಿರುವಷ್ಟೇ ಬಳಸಿಕೊಂಡವಳು ಅವಳು. ಇಲ್ಲದಾಗ ತೀರಾ ಕೊರಗದೆ, ಇದ್ದಾಗ ಝುಮ್ ಝಾಂ ಎನ್ನದೆ ಅಷ್ಟು ಸಮಚಿತ್ತದಿಂದ ಅದ್ಹೇಗೆ ಬಾಳಿದಳೋ ಅನ್ನಿಸುತ್ತದೆ ನಮ್ಮನ್ನು ನಾವು ನೋಡಿಕೊಂಡಾಗ. ನಂಗೆ ವಯಸ್ಸಾಯ್ತು, ಇದೆ ಅಂತ ಎಲ್ಲಾ ಉಟ್ಟು ಏನು ಮಾಡೋದು ಇಟ್ಟರೆ ಮೊಮ್ಮಗಳ ಮದುವೆಗೆ ಆಗುತ್ತೆ ಅಂತ ಎಂದೋ ಒಮ್ಮೆ ಹೇಳಿದಾಗ ಸುಮ್ನಿರು ಮಾರಾಯ್ತಿ, ಈಗ ಯಾರಿಗೂ ಅಷ್ಟು ಕಷ್ಟವೇನಿಲ್ಲ ಆಗಂತೂ ಇರಲಿಲ್ಲ ಉಡಲಿಲ್ಲ ಈಗ ಇದ್ದಾಗಲೂ ಯಾಕೆ ಜಿಪುಣತನ ಮಾಡ್ಬೇಕು ಹೇಳು ಅಂದರೆ ಸುಮ್ಮನೆ ನಕ್ಕಿದ್ದಳು. ಇದೆ ಅಂತ ಬಳಸೋದು ಅಲ್ವೇ, ಎಷ್ಟು ಬೇಕು ಅಷ್ಟೇ ಬಳಸಬೇಕು ಅನ್ನೋ ಪಾಠ ಮುಖಕ್ಕೆ ಹೊಡೆದು ಹೇಳಿದ ಹಾಗಾಯಿತು ಆ ಪೆಟ್ಟಿಗೆಗಳ ತೆರೆದಾಗ..

ಆಸೆಗಳು ಹಸಿವಿನ ಹಾಗೆ... ತಮ್ಮ ವಿಸ್ತಾರ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತವೆ. ವಿಸ್ತಾರ ಹೆಚ್ಚಿಸಿಕೊಂಡಾಗ ಅನಿವಾರ್ಯ ಅನ್ನಿಸುವ ಹಾಗೆ ಮಾಡುತ್ತದೆ.  ಒಮ್ಮೆ ಹೀಗೆ ಮಾತಾಡುತ್ತಾ ಕುಳಿತಾಗ ಕೃಷ್ಣಪ್ಪ ತಾತ ಹೇಳುತ್ತಿದ್ದರು. ಪರಿಚಿತರ ಮನೆಗೆ ಹೋದಾಗ ಅವರ ಮಗಳು  ಅಳುತ್ತಾ ಚಪ್ಪಲಿ ಕೊಡ್ಸು ಅಂದ್ರೆ ಬೈತಾರೆ ನೋಡು ತಾತ ಅಂತ ದೂರು ಹೇಳಿದಳಂತೆ. ನಿನ್ನತ್ರ ಇಲ್ವಾ ಪುಟ್ಟಿ ಎಂದರೆ ಇದೆ ಆದರೆ ಹೊಸ ಡ್ರೆಸ್ ಗೆ ಹಾಕೋಕೆ ಹೊಸತು ಬೇಕು ಅಂದಳಂತೆ. ನೋಡು ಎಷ್ಟೇ ಚಪ್ಪಲಿ ಇದ್ದರೂ ಒಂದು ಸಲಕ್ಕೆ ಒಂದೇ ಹಾಕೋಕೆ ಆಗೋದು, ಆ ಒಂದು ಚಪ್ಪಲಿಯೂ ಇಲ್ಲದ ತುಂಬಾ ಜನ ಜಗತ್ತಿನಲ್ಲಿ ಇದಾರೆ,  ನಿನ್ನತ್ರ ಇದೆಯಲ್ಲ ಸುಮ್ನೆ ಸಿಟ್ಟು ಮಾಡ್ಕೊಬಾರದು ಅಂತ ಸಮಾಧಾನ ಮಾಡಿ ಕಳುಹಿಸಿದೆ ಅನ್ನುತ್ತಲೇ ಅಗತ್ಯತೆ  ಫ್ಯಾಷನ್ ಆದಾಗ ಹೀಗೆಲ್ಲಾ ಅನ್ನಿಸುತ್ತೆ ಅಲ್ವಾ ಪುಟ್ಟಿ ಎಂದಿದ್ದರು. ಉಸಿರೆತ್ತದೆ ಹೊರಗೆ ಬಂದಿದ್ದೆ. ಇವಳು ಅದನ್ನು ಮಾತಲ್ಲಿ ಹೇಳದೆಯೇ ನೆನಪಿಸಿದಳಾ ಅನ್ನಿಸಿ ಕಣ್ಣು ಮಂಜಾಯಿತು.

ಅವಳ ಹಾಗೆ ಅಷ್ಟು ಸಮಚಿತ್ತದಿಂದ ಬದುಕಲು ಬಾರದೇ ಹೋದರೂ ಇವತ್ತಿಗೂ ಏನಾದರೂ ಕೊಂಡು ಕೊಳ್ಳುವಾಗ ಕಣ್ಣು ಮೊದಲು ಅದರ ಬೆಲೆಯ ಕಡೆಗೆ ಹರಿಯುತ್ತದೆ. ನಿಂಗೆ ಯಾವುದು ಇಷ್ಟ ಅದನ್ನು ನೋಡು ಅಂದಿದ್ದು ರೇಟ್ ಅಲ್ಲ ಅಂತ ಗಂಡ ಗದರಿಸುತ್ತಾನೆ. ಏನಾದರೂ ತೆಗೆದುಕೊಳ್ಳಬೇಕು ಅನ್ನಿಸಿ ಹೊರಡುವಾಗ ಬೇಕಾ ಅಂತ ಮತ್ತೆ ಕುಳಿತು ಯೋಚಿಸುವ ಹಾಗೆ, ಯಾವುದೇ ನಿರ್ಬಂಧವಿಲ್ಲದಿದ್ದರೂ ಏನಾದರೂ ಮಾಡುವಾಗ ಆಲೋಚಿಸುವ ಹಾಗಾಗುತ್ತದೆ. ಸುಮ್ನೆ ಮನೇಲಿ ಕೂತು ಏನು ಮಾಡ್ತಿ ಗಾಡಿಲಿ ಒಂದು ರೌಂಡ್ ಹೋಗು, ಅಲ್ಲೇ ಏನಾದರೂ ತಿನ್ನು, ಮಗಳು ಬರುವ ಹೊತ್ತಿಗೆ ಬಾ ಅನ್ನುವ ಗಂಡನ ಎದುರಿಗೆ ತಲೆ ಅಲ್ಲಾಡಿಸಿದರೂ ಮತ್ತೆ ಮನೆಯಲ್ಲಿ ಕುಳಿತುಕೊಳ್ಳುವಾಗ ನಗು ಬರುತ್ತದೆ. ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುತ್ತೇವಾ ಅನ್ನಿಸುತ್ತದೆ. ಆಗೆಲ್ಲಾ ಅಜ್ಜಿ ನೆನಪಾಗಿ ಪುಟ್ಟ ನಗುವೊಂದು ಹರಿದು ಹೋಗುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...