ನಿರಾಕರಣ
ತುಂಬು ಕುಟುಂಬ ಅದು. ಮೊದಲನೆಯ ಮಗ ನೋಡಲು ಆಜಾನುಬಾಹು, ಸುಂದರ. ಬುದ್ಧಿವಂತ ಕೂಡಾ. ಇದ್ದಕ್ಕಿದ್ದ ಹಾಗೆ ಏನಾಯಿತೋ ಏನೋ ಮನೆ ಬಿಟ್ಟು ಹೋದವನು ತಾನು ಸನ್ಯಾಸಿ ಆಗಿದ್ದೇನೆ ಎಂದು ಪತ್ರ ಬರೆದಿದ್ದ. ತಿಳಿ ಹೇಳುವುದರಲ್ಲಿ ಸೋತ ಮನೆಯವರು ಎರಡನೆಯ ಮಗನ ಮದುವೆ ನಿಶ್ಚಯಿಸಿದ್ದರು. ಮದುವೆಯಲ್ಲಿ ಮದುಮಕ್ಕಳಿಗಿಂತ ಮದುವೆಗೆ ಬಂದಿದ್ದ ಕಾವಿ ಉಟ್ಟ, ಗಡ್ದದಾರಿಯಾದ, ಉದ್ದ ಕೂದಲಿನ ವರನ ಅಣ್ಣನ ಮೇಲೆಯೇ ಕಣ್ಣು. ಸನ್ಯಾಸವೆಂದರೆ ಆಕರ್ಷಣೆಯಾ ಸನ್ಯಾಸಿ ಆಕರ್ಷಕನ ಎಂದು ಅರಿವಾಗದ ವಯಸ್ಸು, ಆದರೂ ಯಾವ ಚಿತ್ತಾರವೂ ಇಲ್ಲದ ಆ ಕೇಸರಿ ಸೆಳೆದದ್ದಂತೂ ಹೌದು. ಅದೆಂಥಾ ಸೆಳೆತವಿದ್ದಿರಬಹುದು ಎಂದು ಆಲೋಚಿಸುವಾಗಲೆಲ್ಲ ಬಾಲ ಹನುಮ ನೆನಪಾಗುತ್ತಾನೆ. ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಆಗಸಕ್ಕೆ ನೆಗೆದ ಅವನಿಗೆ ನಿಜವಾಗಲು ಆಕರ್ಷಿಸಿದ್ದು ಹಣ್ಣಾ ಅಥವಾ ಕೇಸರಿಯ ಬಣ್ಣವಾ.... ನಿರಾಕರಣ ಓದುವಾಗ ಕಾಡಿದ್ದು ಇಂಥವೇ ಪ್ರಶ್ನೆಗಳು. ನರಹರಿಯನ್ನು ಬದುಕಿನುದ್ದಕ್ಕೂ ಕಾಡಿದ್ದು ಗೊಂದಲಗಳು. ನಿರಾಕರಿಸುತ್ತಲೇ ಒಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಲೇ ನಿರಾಕರಿಸುತ್ತಾ ಸಾಗುವ ಅವನ ಯಾತ್ರೆಗೆ ಒಂದು ನಿರ್ಧಿಷ್ಟ ಗುರಿಯಿರಲೇ ಇಲ್ಲ. ಹೊಯ್ದಾಡುವ ಯಾವ ದೀಪ ತಾನೇ ಸರಿಯಾಗಿ ಬೆಳಕು ನೀಡಬಲ್ಲದು? ಬೆಳಕು ಸಿಗಬೇಕಾದರೆ ದೀಪ ಸ್ತಬ್ಧವಾಗಬೇಕು. ಸನ್ಯಾಸ ಒಲಿಯಬೇಕಾದರೆ ಮನಸ್ಸು ಹೆಪ್ಪುಗಟ್ಟಬೇಕು. ಮನದೊಳಗೆ ಕಾವಿದ್ದರೆ ಅಲ್ಲೊಂದು ನದಿ ಹರಿಯುತ್ತಲೇ ಇರುತ್ತದೆ. ಹರಿ...