ನಿರಾಕರಣ

ತುಂಬು ಕುಟುಂಬ ಅದು. ಮೊದಲನೆಯ ಮಗ ನೋಡಲು ಆಜಾನುಬಾಹು, ಸುಂದರ. ಬುದ್ಧಿವಂತ ಕೂಡಾ. ಇದ್ದಕ್ಕಿದ್ದ ಹಾಗೆ ಏನಾಯಿತೋ ಏನೋ ಮನೆ ಬಿಟ್ಟು ಹೋದವನು ತಾನು ಸನ್ಯಾಸಿ ಆಗಿದ್ದೇನೆ ಎಂದು ಪತ್ರ ಬರೆದಿದ್ದ. ತಿಳಿ ಹೇಳುವುದರಲ್ಲಿ ಸೋತ ಮನೆಯವರು ಎರಡನೆಯ ಮಗನ ಮದುವೆ ನಿಶ್ಚಯಿಸಿದ್ದರು. ಮದುವೆಯಲ್ಲಿ ಮದುಮಕ್ಕಳಿಗಿಂತ ಮದುವೆಗೆ ಬಂದಿದ್ದ ಕಾವಿ ಉಟ್ಟ, ಗಡ್ದದಾರಿಯಾದ, ಉದ್ದ ಕೂದಲಿನ ವರನ ಅಣ್ಣನ ಮೇಲೆಯೇ ಕಣ್ಣು. ಸನ್ಯಾಸವೆಂದರೆ ಆಕರ್ಷಣೆಯಾ ಸನ್ಯಾಸಿ ಆಕರ್ಷಕನ ಎಂದು ಅರಿವಾಗದ ವಯಸ್ಸು, ಆದರೂ ಯಾವ ಚಿತ್ತಾರವೂ ಇಲ್ಲದ ಆ ಕೇಸರಿ ಸೆಳೆದದ್ದಂತೂ ಹೌದು. ಅದೆಂಥಾ ಸೆಳೆತವಿದ್ದಿರಬಹುದು ಎಂದು ಆಲೋಚಿಸುವಾಗಲೆಲ್ಲ ಬಾಲ ಹನುಮ ನೆನಪಾಗುತ್ತಾನೆ. ಸೂರ್ಯನನ್ನು ನೋಡಿ ಹಣ್ಣು ಎಂದು ಭ್ರಮಿಸಿ ಆಗಸಕ್ಕೆ ನೆಗೆದ ಅವನಿಗೆ ನಿಜವಾಗಲು ಆಕರ್ಷಿಸಿದ್ದು ಹಣ್ಣಾ ಅಥವಾ ಕೇಸರಿಯ ಬಣ್ಣವಾ....

ನಿರಾಕರಣ ಓದುವಾಗ ಕಾಡಿದ್ದು ಇಂಥವೇ ಪ್ರಶ್ನೆಗಳು. ನರಹರಿಯನ್ನು ಬದುಕಿನುದ್ದಕ್ಕೂ ಕಾಡಿದ್ದು ಗೊಂದಲಗಳು. ನಿರಾಕರಿಸುತ್ತಲೇ ಒಪ್ಪಿಕೊಳ್ಳುತ್ತಾ, ಒಪ್ಪಿಕೊಳ್ಳುತ್ತಲೇ ನಿರಾಕರಿಸುತ್ತಾ ಸಾಗುವ ಅವನ ಯಾತ್ರೆಗೆ ಒಂದು ನಿರ್ಧಿಷ್ಟ ಗುರಿಯಿರಲೇ ಇಲ್ಲ. ಹೊಯ್ದಾಡುವ ಯಾವ ದೀಪ ತಾನೇ ಸರಿಯಾಗಿ ಬೆಳಕು ನೀಡಬಲ್ಲದು?  ಬೆಳಕು ಸಿಗಬೇಕಾದರೆ ದೀಪ ಸ್ತಬ್ಧವಾಗಬೇಕು. ಸನ್ಯಾಸ ಒಲಿಯಬೇಕಾದರೆ ಮನಸ್ಸು ಹೆಪ್ಪುಗಟ್ಟಬೇಕು. ಮನದೊಳಗೆ ಕಾವಿದ್ದರೆ ಅಲ್ಲೊಂದು ನದಿ ಹರಿಯುತ್ತಲೇ ಇರುತ್ತದೆ. ಹರಿಯುವ ನದಿಯ ಗಮನ ಸದಾ ಇಳಿಜಾರಿನತ್ತಲೇ. ಎತ್ತರದಲ್ಲಿ ಸ್ಥಿರವಾಗಬೇಕಾದರೆ ಹೆಪ್ಪುಗಟ್ಟಲೆ ಬೇಕು.

ಪ್ರತಿಯೊಬ್ಬ ಮನುಷ್ಯನಿಗೆ ಬದುಕಿನ ಒಂದಲ್ಲ ಒಂದು ಹಂತದಲ್ಲಿ ಒಂಟಿತನ ಬೇಕೆನಿಸುತ್ತದೆ. ಜವಾಬ್ದಾರಿ ರಹಿತನಾಗಿ ಭಾರವಿಲ್ಲದೆ ಬದುಕಬೇಕು ಎನಿಸುತ್ತದೆ. ಅದೊಂದು ಮಧುರವಾದ ಯಾತನೆ. ಆ ಕ್ಷಣಗಳಲ್ಲಿ ತುಸು ಜವಾಬ್ದಾರಿಯಿಂದ, ಕೊಂದ ಅಂತಃಕರಣದಿಂದ, ಸ್ವಲ್ಪ ಬುದ್ಧಿವಂತಿಕೆಯಿಂದ ಆಲೋಚಿಸಿದರೆ, ನಿಭಾಯಿಸಿದರೆ ಅದು ಏಕಾಂತವಾಗಿ ಬದಲಾಗುತ್ತದೆ, ಇಲ್ಲಾ ಸ್ಪಷ್ಟ ದಾರಿ ಗೋಚರಿಸುತ್ತದೆ. ಜವಾಬ್ದಾರಿ ಹೊರೆ ಅನ್ನಿಸಿದಾಗ, ಯಾರದೋ ತಿರಸ್ಕಾರ ಸಹಿಸಲು ಅಸಾಧ್ಯ ಅನ್ನಿಸಿದಾಗ ಮಾತ್ರ ಮನಸ್ಸು ಬಿಡುಗಡೆಗಾಗಿ ಹಪಹಪಿಸುತ್ತದೆ. ನೋಡಿಕೊಳ್ಳುವರಿಲ್ಲ ಎಂದು ತನ್ನ ತಾನು ಸಮಾಧಾನ ಮಾಡಿಕೊಳ್ಳುತ್ತಾ, ಇದು ಅವರ ಒಳಿತಿಗಾಗಿಯೇ ಎಂದು  ಸಮರ್ಥಿಸಿಕೊಳ್ಳುತ್ತಾ ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿದ ನರಹರಿ ಎಲ್ಲಾ ಜವಾಬ್ದಾರಿಗಳಿಂದ ಕಳಚಿಕೊಳ್ಳುತ್ತಾನೆ. ತನ್ನ ಮನಸ್ಸಿನ ಮೂಲ ಸ್ವಭಾವವಾದ ಒಂಟಿತನ ಅಪ್ಪಿಕೊಳ್ಳುತ್ತಾನೆ. ಬಿಡುಗಡೆಗಾಗಿ ದಾರಿ ಕಾಯುತ್ತಾನೆ.   ಬಿಡುಗಡೆ ಎಂದು ನೋಡಿದಾಗ ಮೊದಲು ಕೈ ಬೀಸಿ ಕರೆಯುವುದು ಕಾವಿ, ಆಕರ್ಷಿಸುವುದು ಸನ್ಯಾಸ. "ಕಾಯಿ"ಸದೇ ಕಾವಿ ದಕ್ಕುವುದೇ? ಕಾಯಿಸಿ ಕಾದು ಒಳಗಿನ ಕಾವು ಆವಿಯಾಗಿ ತಣ್ಣಗಾಗದ ಹೊರತು ಸ್ಥಿರತೆ ಸಿಗುವುದಿಲ್ಲ. ನರಹರಿಯ ಒಳಗಿನ ಮೋಹ ಆವಿಯಾಗಿರಲೇ ಇಲ್ಲ. ಅವನಿಗೆ ಬಿಡುಗಡೆ ಬೇಕಿತ್ತು ಅಷ್ಟೇ ಅಂತ ಅರ್ಥವಾಗುವುದು ಹಿಂದುರಿಗಿದ ಮೇಲೆ ಮತ್ತೆ ಎತ್ತರಕ್ಕೆ ಹೋಗಬೇಕು ಅನ್ನಿಸಲು ಶುರುವಾದಾಗ ಮತ್ತು ಅದರ ಕಾರಣ ಹಿಂದುರಿಗಿದ ಮಗ ಎಂದು ತಿಳಿದಾಗ.

ಏರುವುದು ಸುಲಭವಾ... ಇಳಿಯಲು ತಿಳಿದವನು ಮಾತ್ರ ಏರಬಲ್ಲ. ಏರುತ್ತಾ ಉಸಿರು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾ. ಜಾರಿ ಬೀಳದ ಹಾಗೆ ಇಳಿಯುತ್ತಾ ಮತ್ತೆ ಏರಿದರೆ ಮಾತ್ರ ಎತ್ತರಕ್ಕೆ ತಲುಪಬಹುದು. ಎತ್ತರಕ್ಕೆ ತಲುಪಿಯೂ ಸ್ಥಿರವಾಗಿ ನಿಲ್ಲಬೇಕಾದರೆ ಉಸಿರು ನಿಯಂತ್ರಣದಲ್ಲಿ ಇರಲೇಬೇಕು. ಕಾಲ, ಭಾವ ಎಲ್ಲವನ್ನೂ ಏಕವಾಗಿಸಿ ಹೆಪ್ಪುಗಟ್ಟಬೇಕು. ಗುರಿ ಗುರು ಒಂದೇ ಇರಬೇಕು. ಕ್ಷಣ ಕ್ಷಣಕ್ಕೂ ಬದಲಾಯಿಸುವ ಮನಸ್ಸು ಹರಿಯುವ ನದಿಯಾಗಬಹುದೇ ವಿನಃ ಹಿಮವಾಗಲಾರದು. ಎಲ್ಲಕ್ಕಿಂತ ಮುಖ್ಯವಾಗಿ ಹಂತ ಹಂತವಾಗಿ ಎತ್ತರಕ್ಕೆ ಏರಿದಾಗ ಮಾತ್ರ ಆ ಅಲ್ಲಿ ಕಾಲೂರಬಹುದು. ಇಲ್ಲವಾದಲ್ಲಿ ಯಾವುದೋ ಹಿಮಪಾತ, ಜೋರುಗಾಳಿ, ಪ್ರವಾಹ ಕ್ಷಣ ಮಾತ್ರದಲ್ಲಿ ಪಾತಾಳಕ್ಕೆ ತಳ್ಳಿಬಿಡುತ್ತದೆ. ಅಲ್ಲಿಗೆ ಮತ್ತೆ ಏರುವ ಶಕ್ತಿ, ಸಂಕಲ್ಪ ಎರಡೂ ಮುಗಿದು ಹೋಗಿರುತ್ತದೆ.

ಹಾಗೆ ಕೆಳಕ್ಕೆ ತಳ್ಳಲ್ಪಟ್ಟ ನರಹರಿಯ ಬದುಕು ಇಳಿಜಾರಿನಲ್ಲಿ ಸಾಗುತ್ತಲೇ ಹೋಗುತ್ತದೆ. ಆ ಗುರಿಯಿಲ್ಲದ ಹರಿವಿಗೆ ಒಂದು ಅಡ್ದು ಸಿಕ್ಕಿ, ಮತ್ತೆ ಏರುವ ದಾರಿ ತಿಳಿಯದೆ, ಮನೋಸ್ಥೈರ್ಯವೂ ಇಲ್ಲದೇ ಅನಾಥಾಶ್ರಮದಲ್ಲಿ ಸೇವೆ ಸಲ್ಲಿಸುವ ನಿರ್ಧಾರಕ್ಕೆ ಬಂದು ಮತ್ತೆ ಮಕ್ಕಳ ನೆನಪಾಗಿ ಮತ್ತೆ ಅದನ್ನು ಕಳಚಿಕೊಳ್ಳಲು ಯತ್ನಿಸುತ್ತಾ, ನಿರಾಕರಿಸಿದಷ್ಟೂ ಮತ್ತೆ ಸೆಳೆಯುವ ಮೋಹಕ್ಕೆ ಸಿಕ್ಕಿ ಗೊಂದಲಕ್ಕೆ ಬೀಳುತ್ತಾನೆ. ಅವನಿಗೆ ಸುತ್ತ ಜೀವಂತಿಕೆ ಆದರೆ ಜವಾಬ್ಧಾರಿ ಬೇಡಾ ಅನ್ನಿಸುವುದು ಅವನ ಆಶ್ರಮದ ಕಾರ್ಯ ವೈಖರಿ ಗಮನಿಸಿದಾಗ. ಎತ್ತರದಲ್ಲಿ ಇದ್ದಾಗ ಸದ್ದಿಲ್ಲದೇ ಧ್ಯಾನಕ್ಕೆ ಕೂರಲು ಅಸಾಧ್ಯ ಎಂದು ಅರಿವಾದಾಗ. ಎತ್ತರದ ನಿಶಭ್ದ ರೇಜಿಗೆ ಹುಟ್ಟಿಸಿ ಕೆಳಕ್ಕೆ ಹೋಗಬೇಕು ಎಂದು ಬಯಸುವಾಗ. ಅವನಿಗೆ ಸುತ್ತ ಸಮುದ್ರವಿರಬೇಕು ಆಗ ದ್ವೀಪವಾಗಬೇಕು ಅನ್ನಿಸುತ್ತದಯೇ ಹೊರತು ಎತ್ತರದ ಹೆಪ್ಪುಗಟ್ಟಿದ ಹಿಮವಾಗಲಾರ. ಎತ್ತರದ ಬೆಟ್ಟ ಪರ್ವತ ಆಕರ್ಷಣೆ ಆದರೆ ಏರಿ ನಿಲ್ಲಲಾರ. ಈ ಒಳಗಿನ ಕಾವು ಇರುವ ತನಕ ಹೆಪ್ಪುಗಟ್ಟುವುದು ಹೇಗೆ? ಸ್ಥಿರವಾಗುವುದು ಹೇಗೆ?

ದತ್ತು ಹೋದ ಮಗ ವಿಚಿತ್ರವಾಗಿ ಸುಳಿಯಲ್ಲಿ ಸಿಕ್ಕಿ ಆಶ್ರಮಕ್ಕೆ ಕರೆದುತಂದಾಗ ಅವನಿಗೆ ಅದು ಜವಾಬ್ದಾರಿ ಅನ್ನಿಸಿ ಹಿಂಸೆಯಾಗ ತೊಡಗುತ್ತದೆ. ತನ್ನ ಹರಿವಿಗೆ ಇದು ಅಡ್ಡ ಅನ್ನಿಸಲು ಶುರುವಾಗುತ್ತದೆ. ಮತ್ತೆ ಹಿಮ ಕೈ ಬೀಸಿ ಕರೆಯುತ್ತದೆ. ಇತ್ತ ಬಿಡಲಾರ, ಅತ್ತ ಹೋಗಲಾರ ಅನ್ನುವ ಗೊಂದಲದಲ್ಲಿ ಇರುವಾಗ, ಹೊಯ್ದಾಡುವಾಗ ಮಗಳು ಎದುರಿಗೆ ಬರುತ್ತಾಳೆ. ಅಕಸ್ಮಾತ್ ನೀವು ಸತ್ತು ಅಮ್ಮನೋ, ಚಿಕ್ಕಮ್ಮನೋ ಬದುಕಿದ್ದರೆ ಹೀಗೆ ದತ್ತು ಕೊಟ್ಟು ಸನ್ಯಾಸ ಸ್ವಿಕರಿಸುತ್ತಿರಲಿಲ್ಲ ಕೂಲಿ ನಾಲಿಯಾದರೂ ಮಾಡಿ ನಮ್ಮನ್ನು ಸಾಕುತ್ತಿದ್ದರು ಎನ್ನುವ ಮಾತು ಹೊಯ್ದಾಡುವ ದೀಪಕ್ಕೆ ಅಡ್ಡ ಹಿಡಿದ ಕೈ ಆಗುತ್ತದೆ. ಆಗ ಬೆಳಕು ಸ್ಥಿರವಾಗುತ್ತದೆ.  ಚಿಕ್ಕಂದಿನಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡು ಅನುಭವಿಸಿದ ಒಂಟಿತನ ಅಸಹಾಯಕತೆ ನರಹರಿಯ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತು ಸದಾ ಅದರಿಂದ ತಪ್ಪಿಸಿಕೊಂಡು ಓಡಲು ಪ್ರೇರೇಪಿಸುತ್ತಿತ್ತಾ... ತಾನು ಅನುಭವಿಸಿದ ಸ್ಥಿತಿ ತನ್ನ ಮಕ್ಕಳಿಗೆ ಬಂದಾಗ ಅವರೂ ಹಾಗೆ ಆಗಬಹುದು ಎನ್ನುವ ಸಣ್ಣ ಆಲೋಚನೆಯೂ ಅವನಿಗೆ ಯಾಕೆ ಬರಲಿಲ್ಲ? ಅವನೊಳಗಿನ ಗೊಂದಲ ಪರಿಹಾರವಾಗದ ಹೊರತು ಆ ಓಟ ನಿಲ್ಲದ ಹೊರತು ಹರಿವು ನಿಲ್ಲುವುದಿಲ್ಲ ಹೆಪ್ಪುಗಟ್ಟುವುದಿಲ್ಲ ಎಂದು ಯಾಕೆ ಅರ್ಥವಾಗಲಿಲ್ಲ? ಜವಾಬ್ದಾರಿಯ ವಿಷಯ ಬಂದರೆ ಹೆಣ್ಣು ಗಂಡಿಗಿಂತ ಹೆಚ್ಚು ಸಮರ್ಥವಾಗಿ ನಿಭಾಯಿಸಬಲ್ಲಳೇನೋ ಅನ್ನಿಸುವಾಗಲೆಲ್ಲ ಭೈರಪ್ಪನವರ ಪಾತ್ರಗಳಲ್ಲಿ ಹೆಣ್ಣು ಹೆಚ್ಚು ಸಶಕ್ತ ಅನ್ನಿಸುತ್ತದೆ.

ನಿರಾಕರಿಸುವುದು ಸುಲಭವಲ್ಲ. ನಿರಾಕರಿಸಿದ್ದೇವೆ ಎಂದು ಅಂದುಕೊಳ್ಳುವುದೇ ಬೇರೆ, ನಿಜವಾಗಿ ನಿರಾಕರಿಸುವುದೇ ಬೇರೆ. ಹರಿವು ನಿಲ್ಲದ ತನಕ ಹೆಪ್ಪುಗಟ್ಟಲು ಸಾಧ್ಯವೇ ಇಲ್ಲ. ಕಾದು, ಕಾಯಿಸಿ ಆವಿಯಾದಾಗ ಮಾತ್ರ ಕಾವಿ ದಕ್ಕುತ್ತದೆ.
ಬೀಳುವುದು ಸಹಜ ಆದರೆ ಮತ್ತೆ ಎದ್ದು ಏರುವುದರಲ್ಲಿ ಬದುಕಿನ ಗಮ್ಯ ಅಡಗಿದೆ.. 
ಹಾಗಾದರೆ ನಿರಾಕರಿಸುವುದು ನಿಜವಾಗಲು ಯಾವುದನ್ನ..... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...