ವಿಜಯ ಕರ್ನಾಟಕ 19.01.20

ಅಪ್ಪ, ಅಮ್ಮ ಹಾಗೂ ಮೂವರು ಮಕ್ಕಳಿದ್ದ  ಕುಟುಂಬ ಅದು. ಭಾರೀ ಶ್ರೀಮಂತರಲ್ಲದಿದ್ದರೂ ಹೊಟ್ಟೆ ಬಟ್ಟೆಗೆ ಕೊರತೆಯಿರಲಿಲ್ಲ. ಸಂತೃಪ್ತ ಕುಟುಂಬ. ನೆಮ್ಮದಿಯಾಗಿ ಸಾಗುತ್ತಿದ್ದ ಹಡಗಿಗೆ ಬಿರುಗಾಳಿ ಅಪ್ಪಳಿಸಿ ಅಡಿಮೆಲಾಗುವ ಹಾಗೆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಪ್ಪ ಅಸುನೀಗಿದ್ದರು. ಕಾರ್ಯಗಳೆಲ್ಲಾ ಮುಗಿದು ಮುಂದೇನು ಎಂದು ಯೋಚಿಸಬೇಕು ಅನ್ನುವ ಹೊತ್ತಿಗೆ ಹತ್ತಿರದ ನೆಂಟರಿಷ್ಟರು ತುಸು ಗಡಿಬಿಡಿಯಲ್ಲಿಯೇ ಹೊರಟಿದ್ದರು. ಒಂದು ಕ್ಷಣ ಅಲ್ಲಿ ಉಳಿದರೆ ಯಾವ ಜವಾಬ್ದಾರಿ ಬೀಳುವುದೋ ಎಂದು ಹೊರಡಲು ಅವಸರಿಸುತ್ತಿದ್ದ ಅವರನ್ನು ನೋಡಿ ಹಿರಿಯವನು ದಂಗಾಗುವ ಹೊತ್ತಿಗೆ ತೀರಾ ಹಚ್ಚಿಕೊಳ್ಳೋಕೆ ಹೋಗಬೇಡಾ ಯಾವತ್ತಿದ್ದರೂ ಭಾರವೇ, ಅವರವರ ಪಾಡು ಅವರವರು ಏನಾದರೂ ಮಾಡಿಕೊಳ್ಳಲಿ ಎಂದು ತೀರಾ ಹತ್ತಿರದ ಕುಟುಂಬದ ಹಿರಿಯರೊಬ್ಬರು ಆಡುವ ಮಾತು ಕೇಳಿಸಿ ಮೊದಲೇ ಆಘಾತಗೊಂಡ ಮನಸ್ಸು ಇನ್ನಷ್ಟು ಕುಸಿದಿತ್ತು. ಅಸಹಾಯಕತೆಗೆ ಅಳುವೇ ಬಂದಿತ್ತು. ದುಃಖ, ಆಕ್ರೋಶಗಳ ನಡುವೆಯೇ ಮನಸ್ಸು ಉಹೂ ಎಷ್ಟೇ ಕಷ್ಟವಾದರೂ ತೊಂದರೆಯಿಲ್ಲ ನನ್ನ ಕುಟುಂಬವನ್ನು ಕಾಪಾಡಿ ಸಾಧಿಸಿ ತೋರಿಸುತ್ತೇನೆ ಎಂದು ಶಪಥ ಮಾಡಿತ್ತು.

ನಂತರ ಛಲದಿಂದ ಅದೊಂದು ವ್ರತವೆಂಬಂತೆ ಎದುರಾದ ಸಂಕಷ್ಟವನ್ನೆಲ್ಲಾ ಎದುರಿಸಿ, ನೆಂಟರಿಷ್ಟರ ಎದುರು ಕಿಂಚಿತ್ತೂ ಸಹಾಯ ಬೇಡದೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಿಕ್ಕದೊಂದು ಉದ್ಯೋಗ ಹಿಡಿದು ಶ್ರಮವಹಿಸಿ ದುಡಿದು, ನಂಬಿಕೆ ಗಳಿಸಿ ಹಂತಹಂತವಾಗಿ ಮೇಲಕ್ಕೇರಿ ಮನೆಯ ನಿರ್ವಹಣೆ ಜೊತೆಗೆ ತಮ್ಮ ತಂಗಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಅವರಿಗೆ ಒಳ್ಳೆಯ ಉದ್ಯೋಗ ದೊರಕಿಸಿ ಕೊಟ್ಟು ಮದುವೆಯನ್ನೂ ಮಾಡಿಮುಗಿಸಿ ಎಲ್ಲರಿಂದಲೂ ಹೊಗಳಿಕೆ ಪಡೆದುಕೊಂಡವರು ಇದ್ದಕ್ಕಿದ್ದ ಹಾಗೆ ಮೌನವಾಗಿ ಹೋಗಿದ್ದರು. ದಿನ ದಿನಕ್ಕೂ ಆಸಕ್ತಿ  ಕಡಿಮೆಯಾಗುತ್ತಾ ಹೋಗುತ್ತಿತ್ತು. ಅಷ್ಟು ಹಠ ಹೊತ್ತು ಎಲ್ಲವನ್ನೂ ಸಾಧಿಸಿದ ಮನುಷ್ಯ ಆಮೇಲೆ ಯಾಕೆ ಹಾಗಾದ ಅನ್ನೋದು ಆಶ್ಚರ್ಯ ನೋಡು, ಈ ಓದಿದವರ ಮನಸ್ಸು ಯಾವ ಕ್ಷಣಕ್ಕೆ  ಹೇಗೆ ವರ್ತಿಸುತ್ತೋ ಗೊತ್ತೇ ಆಗಲ್ಲ ನೋಡು ಎಂದು ಮಾತು ನಿಲ್ಲಿಸಿದ್ದಳು ಅಜ್ಜಿ.

ಯಶಸ್ಸಿನ ತುತ್ತು ತುದಿಯಲ್ಲಿದ್ದ, ಸುರಸುಂದರಿಯಾದ, ಕೋಟಿಗಟ್ಟಲೆ ಹುಡುಗರ ಕನಸಿನ ರಾಣಿಯಾಗಿದ್ದ ನಟಿಯೊಬ್ಬಳು ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ, ನನ್ನನ್ನು ಖಿನ್ನತೆ ಕಾಡಿತ್ತು ಎಂದ  ಮಾತು ಪಕ್ಕನೆ ನೆನಪಾಗಿತ್ತು. ದೇಶದ ಬಹಳಷ್ಟು ಹುಡುಗಿಯರು ಅವಳ ಹಾಗೆ ಆಗಬೇಕು ಎಂದು ಕನಸು ಕಾಣುವ ಹೊತ್ತಿಗೆ ಅವಳು ಉಸಿರು ನಿಲ್ಲಿಸುವ ಪ್ರಯತ್ನಪಟ್ಟಿದ್ದಳು ಎನ್ನುವುದು ನಂಬಲು ಸಾಧ್ಯವೇ ಆಗಿರದ ವಿಷಯವಾಗಿತ್ತು. ಸಾಧನೆಯ ತುತ್ತತುದಿಯಲ್ಲಿದ್ದಾರೆ ಎಂದು ಭಾವಿಸುವ, ಅಬ್ಬಾ ಹೀಗಿರಬೇಕು ಎಂದು ನಾವು  ಭಾವಿಸುವ ಕೆಲವರಿಗೆ ಅವರ ಗೆಲುವು ಸೋಲು ಅನ್ನಿಸುತ್ತದಾ...  ಒಂಟಿತನ ಕಾಡುತ್ತದಾ... ಅಥವಾ ಗೆಲುವು ರೇಜಿಗೆ ಹುಟ್ಟಿಸುತ್ತದಾ... ಪಯಣ ಮುಗಿಯಿತಲ್ಲ ಮತ್ತೇನಿದೆ ಅನ್ನುವ ಖಾಲಿತನ ಆವರಿಸುತ್ತದಾ... ತುತ್ತತುದಿಯಲ್ಲಿ ನಿಂತವರಿಗೆ ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿ ಬೀಳುವ ಹಾಗಾಗುತ್ತದಾ...

ಸಾಧನೆ ಒಂದು ಸುಧೀರ್ಘ ಹಾದಿ. ಮತ್ತದು ನಾವೇ ಸ್ವತಃ ಕಂಡುಕೊಳ್ಳಬೇಕಾದ ದಾರಿ. ಯಾವ ದಾರಿಯೂ ಸರಾಗವಲ್ಲ. ಏರು, ಇಳಿವು, ಅಚಾನಕ್ ತಿರುವು. ಮುಂದೆ ದಾರಿಯೇ ಇಲ್ಲವೇನೋ ಎಂದು ಭ್ರಮೆ ಹುಟ್ಟಿಸುವ, ಪಕ್ಕಕ್ಕೆ ತಿರುಗು ಹರಡಿಕೊಂಡಿರುವ ದಾರಿ ಹೆಜ್ಜೆ ಹೆಜ್ಜೆಗೂ ಕುತೂಹಲ ಹುಟ್ಟಿಸುತ್ತಾ ಇನ್ನೇನೋ ಕಲಿಸುತ್ತಾ, ಮತ್ತೇನೋ ಪಿಸುಗುಡುತ್ತಾ, ನಗುವರಳಿಸುತ್ತಾ, ಕಣ್ಣಂಚು ಒದ್ದೆಯಾಗಿಸುತ್ತಾ, ಹಲವರನ್ನು ಜೊತೆಯಾಗಿಸುತ್ತಾ, ಕೆಲವರನ್ನು ಕಳೆಯುತ್ತಾ  ಹೆಗಲಾಗಿಸುತ್ತಾ, ಹೆಗಲಾಗುತ್ತಾ ಸಾಗುವ ಹಾಗೆ ಮಾಡುತ್ತದೆ. ಹಾಗೆ ಸಾಗುವ ದಾರಿ ದುರ್ಗಮವಾದಷ್ಟೂ ಗಮ್ಯ ಸುಂದರವಾಗಿರುತ್ತದೆ. ಹಾಗಾಗಿ ಗಮ್ಯಕ್ಕಿಂತಲೂ ಆ ಗಮ್ಯದ ಕಡೆಗೆ ನಡೆಯುವ ಪಯಣ ರೋಚಕವಾಗಿರುತ್ತದೆ. ಮುಟ್ಟಲೇಬೇಕು ಎನ್ನುವ ಛಲ ಕಾಲಿಗೆ ಕಸು ತುಂಬಿಸುತ್ತಿರುತ್ತದೆ. ದೃಷ್ಟಿ ಅತ್ತಲೇ ನೆಟ್ಟಿರುತ್ತದೆ. ಹಾಗಾಗಿ ಉಳಿದೆಲ್ಲವೂ, ಎಲ್ಲರೂ ನಗಣ್ಯವಾಗಿ ತಲುಪುವುದಷ್ಟೇ ಮುಖ್ಯವಾಗಿ ಮೈ ಮನಸ್ಸು ಒಂದಾಗಿ ಅದರಲ್ಲಿ ಸಂಪೂರ್ಣವಾಗಿ ಮಗ್ನವಾಗಿ ಹೋಗಿರುತ್ತದೆ.

ಇಂಥ ಪಯಣ ಸಾಗಿ ಗಮ್ಯ ಮುಟ್ಟಿದಾಗ ಎಲ್ಲವೂ ಅಲ್ಲಿಗೆ ಕೊನೆಯಾಗುತ್ತದೆ. ಹಾಗೆ ತಲುಪಿ ಅಲ್ಲಿ ನಿಂತು ಹೆಮ್ಮೆಯಿಂದ ಹಿಂದಿರುಗಿ ನೋಡಿದಾಗ ಮನಸ್ಸು ನಾವು ಬಿಟ್ಟ ಬಂದ ಕ್ಷಣ, ಬಿಟ್ಟು ಬಂದ ಜನರನ್ನು ನಿರೀಕ್ಷಿಸುತ್ತದೆ. ಅವರಲ್ಲೇ ಹಾಗೆಯೇ ಇದ್ದಾರೆ ಇಂದು ಭ್ರಮಿಸಿರುತ್ತದೆ. ಗೆದ್ದೇ ನೋಡಿ ಎಂದು ಕೂಗಿ ಹೇಳಲು ತವಕಿಸಿ ತಿರುಗಿ ನೋಡಿದರೆ ಅಲ್ಲಿ ಶೂನ್ಯ ಕಾಣಿಸುತ್ತದಾ... ಯಾಕೆಂದರೆ ನಾವು ಬಿಟ್ಟ ಬಂದ ಜಾಗಕ್ಕೆ ಹೋಗಬಹುದು ಆದರೆ ಬಿಟ್ಟು ಬಂದ ಕಾಲಕ್ಕೆ, ಅದೇ ಸನ್ನಿವೇಶಕ್ಕೆ, ಸಂದರ್ಭಕ್ಕೆ ಹೋಗಲು ಸಾಧ್ಯವೇ.. ನಾವು ಸಾಗುವ ಹಾಗೆ ಕಾಲ, ಜನರು, ಎಲ್ಲವೂ ಮುಂದಕ್ಕೆ ಸಾಗಿ ಬಂದಾಗಿರುತ್ತದೆ. ಅಲ್ಲಿ ಯಾರೂ ನಿಂತಿರುವುದಿಲ್ಲ. ಮನುಷ್ಯ ಸಹಜವಾಗಿ ಸಂಘಜೀವಿ. ಅದರಲ್ಲೂ ತನ್ನ ಸಾಧನೆ, ಗೆಲುವು ತನ್ನ ಜೊತೆಗಾರರಲ್ಲಿ, ಅವಮಾನಿಸಿದವರ ಎದುರು ಹಂಚಿಕೊಳ್ಳಲು ಬಯಸುತ್ತಾನೆ. ಹಾಗಿರುವಾಗ ಈ ಜಾಗದಿಂದ  ಅಲ್ಲಿಗೆ ತಲುಪಿದಾಗ ಉಳಿದವರು ಅಲ್ಲಿ ಇದ್ದಾರೆ ಎನ್ನುವುದು ಖುಷಿ ಕೊಡುವ, ತನ್ನ ಗೆಲುವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಲ್ಲಿ ಯಾರೂ ಇಲ್ಲ ಎಂದಾಗ ಗೆಲುವು ಹೇಳುವುದು ಯಾರಿಗೆ, ಅಸಲಿಗೆ ಈ ಗೆಲುವು ಬೇಕಾಗಿದ್ದಾರೂ ಯಾಕೆ ಎನ್ನುವ ಭಾವ ಕಾಡುತ್ತದಾ..  ಶೂನ್ಯತೆ ಗೆಲುವಿನ ಸಂತೋಷ ಕಬಳಿಸುತ್ತದಾ...  ಇಲ್ಲಿಗೆ ಮುಗಿಯಿತು ಮತ್ತೇನು ಎನ್ನುವ ಪ್ರಶ್ನೆ ಮೂಡಿ, ಅಲ್ಲಿಯವರೆಗೂ ಉಸಿರು ಬಿಗಿ ಹಿಡಿದು ಮಾಡಿದ ಪ್ರಯಾಣ ಮುಗಿದು ಖಾಲಿ ಖಾಲಿ ಅನ್ನಿಸಿ ಕೈ ಕಾಲು ಕಟ್ಟಿ ಹಾಕಿದ ಹಾಗೆ ಆಗುತ್ತದಾ...

ಕಾಲ ನಿರಂತರ ಚಲಿಸುವ ಹಾಗೆ ನಾವೂ ಚಲಿಸಿರುತ್ತೇವೆ. ಬಹುದೂರ ಮುಂದಕ್ಕೆ ಬಂದು ಬಿಟ್ಟಿರುತ್ತೇವೆ, ನಮ್ಮ ಹಾಗೆ ಉಳಿದವರು ಅವರವರ ದಾರಿ ಕಂಡುಕೊಂಡು ಸಾಗಿ ಹೋಗಿರುತ್ತಾರೆ. ನಮ್ಮ ಗಮ್ಯ ಯಾರನ್ನೋ ಮೆಚ್ಚಿಸಲು,ಇನ್ಯಾರನ್ನೋ ಹಣಿಯಲು, ಮತ್ತೇನೋ ಮತ್ಯಾರಿಗೋ ತಿಳಿಸಲು ಆದರೆ ಅದರ ಖುಷಿ ಕೂಡಾ ಮೂರನೆಯವರನ್ನೇ ಅವಲಂಬಿಸಿರುತ್ತದೆ. ಗೆದ್ದ ಮೇಲೆ ಅವರ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಅವರಿಂದ ನಾವು ನಿರೀಕ್ಷಿಸಿದ ಪ್ರತಿಕ್ರಿಯೆ ಬಾರದೆ ಇದ್ದಾಗ ಆಥವಾ ಅವರದನ್ನು ಗುರುತಿಸಿದೇ ಹೋದಾಗ ಗೆಲುವಿನ ಭಾವ ಹೋಗಿ ನಿರಾಸೆ ಕಾಡುತ್ತದೇನೋ. ಹಾಗಾಗಿಯೇ ಗಮ್ಯದತ್ತ ನಡೆಯುವುದು ಕೇವಲ ನಾವಾಗಿರುವುದರಿಂದ, ಸವೆಸುವ ಕಾಲ ನಮ್ಮದಾಗಿರುವುದರಿಂದ, ಬೆವರು ಹರಿಸುವುದು ನಾವೇ ಆಗಿರುವಾಗ ಆ ಗೆಲುವು ಕೂಡಾ ಕೇವಲ ನಮಗೆ ಸಂಬಂಧಿಸಿದ್ದು ಮಾತ್ರವಾಗಿರಬೇಕು. ತೃಪ್ತಿ ಮುಖ್ಯವಾಗಿರಬೇಕು. ಪಡೆದುಕೊಳ್ಳುವುದು ಏನು ಎಂದು ಗೊತ್ತಿರುವ ಹಾಗೆಯೇ ಕಳೆದುಕೊಳ್ಳುವುದು ಏನೇನು ಎಂದು ಅರಿವಿರಬೇಕು. ಇದರ ಲೆಕ್ಕಾಚಾರ ಸ್ಪಷ್ಟವಿದ್ದಾಗ ಮಾತ್ರ ಗೆಲುವು ಸಂಭ್ರಮವಾಗುತ್ತದೆ.
 ಇವೆಲ್ಲಕ್ಕಿಂತ ಮುಖ್ಯವಾಗಿ  ಯಾವ ಗಮ್ಯವೂ ಅಂತಿಮವಲ್ಲ ಅನ್ನುವುದು ಗೊತ್ತಿರಲೇ ಬೇಕು. ಮತ್ತೊಂದು ಗಮ್ಯ ಸಿದ್ಧ ಮಾಡಿಕೊಂಡು ನಡೆಯಲು ಅನುವಾಗಬೇಕು. ನಡೆದಷ್ಟೂ ಹಾದಿಯಿದೆ, ನಡೆಯುತ್ತಿರುವಷ್ಟು ಹೊತ್ತೂ ಜೀವಂತಿಕೆಯಿದೆ. ನಿಂತರೆ ನಾವಷ್ಟೇ ನಿಂತಿರುತ್ತೇವೆ, ಜಗತ್ತು ಮುಂದೆ ಹೋಗಿರುತ್ತದೆ. ನಾವು ಅಪ್ರತಸ್ತುತರಾಗಿ ಬಿಡುತ್ತೇವೆ. ಹಿಂದಿರುಗಿ ನೋಡುವುದು ಬೇರೆ ಹಿಂದಕ್ಕೆ ಹೋಗುವುದು ಬೇರೆ ........ ಎಂದು ಅರ್ಥವಾದ ಕ್ಷಣ, ಚಲಿಸುವಷ್ಟು ಹೊತ್ತು ಮಾತ್ರ ಜೀವಂತ ಎಂದು ಗೊತ್ತಾದ ಕ್ಷಣ ಬದುಕು ಪ್ರತಿ ಗೆಲವು ಸಂಭ್ರಮವೇ... ಪ್ರತಿ ಸೋಲೂ ಪಾಠವೇ..





















Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...