ಅಯ್ಯಪ್ಪ. (ಉಭಯಭಾರತೀಯರು)
ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದವರಿಗೆ ಚಳಿಯ ತಡುವಿಕೆಗೆ ಎಚ್ಚರವಾಗಿ ಹೊದ್ದ ಕಂಬಳಿಯನ್ನು ಇನ್ನಷ್ಟು ಬಿಗಿಯಾಗಿ ಎಳೆದು ಕಿವಿಗೆ ಗಾಳಿ ಹೋಗದಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಕೂಗು ಕೇಳಿಸುತಿತ್ತು. ಅದಾಗಲೇ ನಾಲ್ಕು ಗಂಟೆ ಆಗಿ ಹೋಯಿತಾ ಎಂದು ಇನ್ನಷ್ಟು ಮುದುರಿ ಮಲಗುವಾಗ ಅರೆ ಅವರಿಗೆ ಚಳಿ ಯಾಕಾಗಲ್ಲ ಎನ್ನುವ ಪ್ರಶ್ನೆ ಕಾಡುತಿತ್ತು. ಮಲೆನಾಡಿನ ಅದರಲ್ಲೂ ಧನುರ್ಮಾಸದ ಚಳಿಯ ಪರಿ ಕೇಳುವುದೇ ಬೇಡ. ಅಲ್ಲಿ ಚಳಿಯನ್ನು ಅಳೆಯುತ್ತಿದ್ದದ್ದೆ ಹೊದೆಯಲು ಎಷ್ಟು ಕಂಬಳಿ ಬೇಕು ಎನ್ನುವ ಆಧಾರದ ಮೇಲೆ. ಡಿಸೆಂಬರಿನ ಆ ಕರುಳು ನಡುಗಿಸುವ ಚಳಿಗೆ ಮೂರು ಕಂಬಳಿಯಾದರೂ ಬೇಕಿತ್ತು. ಇಂಥ ಚಳಿಗಾಲದಲ್ಲಿ ಬ್ರಾಹ್ಮಿ ಮಹೂರ್ತ ದಲ್ಲಿ ಎದ್ದು, ತುಂಗೆಯಲ್ಲಿ ಸ್ನಾನ ಮಾಡಿ ಒಂದು ಪಂಚೆ ಉಟ್ಟು , ಶಲ್ಯ ಹೊದ್ದು ಅಯ್ಯಪ್ಪನ ಸ್ಮರಣೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೂ ಸುಮಾರು ಒಂದು ಮೈಲಿ ಆ ಕತ್ತಲೆಯಲ್ಲಿ ನಡೆದು ಬರುತ್ತಿದ್ದ ಅವರು ಅಚ್ಚರಿ ಹುಟ್ಟಿಸುತ್ತಿದ್ದರು. ಆ ಚಳಿಯನ್ನು ಅವರು ಎದುರಿಸುತ್ತಿದ್ದದ್ದು ಹೇಗೆ? ಇನ್ನಷ್ಟು ಬೆಚ್ಚಗೆ ಮಲಗಬೇಕು ಎನ್ನುವ ಆಸೆ ಕೊಡವಿ ಏಳುವುದು ಸುಲಭವಾ ಎನ್ನುವ ಪ್ರಶ್ನೆಮೂಡುವುದರ ಜೊತೆಜೊತೆಗೆ ಅವರ ಧೀ ಶಕ್ತಿ ಬೆರಗು ಹುಟ್ಟಿಸುತ್ತಿತ್ತು. ಒಂದು ಹೆಸರು ಅಥವಾ ವ್ರತ ಇಷ್ಟು ಗಟ್ಟಿಗರನ್ನಾಗಿ ಮಾಡಬಹುದಾ.. ಆ ದೇವಾಲಯದ ಆಕರ್ಷಣೆ ಇಷ್ಟು ಸಂಕಲ್ಪ ಶಕ್ತಿ ತುಂಬಬಹುದಾ ಎನ...