ಅಯ್ಯಪ್ಪ. (ಉಭಯಭಾರತೀಯರು)


ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದವರಿಗೆ ಚಳಿಯ ತಡುವಿಕೆಗೆ ಎಚ್ಚರವಾಗಿ ಹೊದ್ದ ಕಂಬಳಿಯನ್ನು ಇನ್ನಷ್ಟು ಬಿಗಿಯಾಗಿ ಎಳೆದು ಕಿವಿಗೆ ಗಾಳಿ ಹೋಗದಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಕೂಗು ಕೇಳಿಸುತಿತ್ತು. ಅದಾಗಲೇ ನಾಲ್ಕು ಗಂಟೆ ಆಗಿ ಹೋಯಿತಾ ಎಂದು ಇನ್ನಷ್ಟು ಮುದುರಿ ಮಲಗುವಾಗ ಅರೆ ಅವರಿಗೆ ಚಳಿ ಯಾಕಾಗಲ್ಲ ಎನ್ನುವ ಪ್ರಶ್ನೆ ಕಾಡುತಿತ್ತು. ಮಲೆನಾಡಿನ ಅದರಲ್ಲೂ ಧನುರ್ಮಾಸದ ಚಳಿಯ ಪರಿ ಕೇಳುವುದೇ ಬೇಡ. ಅಲ್ಲಿ ಚಳಿಯನ್ನು ಅಳೆಯುತ್ತಿದ್ದದ್ದೆ ಹೊದೆಯಲು ಎಷ್ಟು ಕಂಬಳಿ ಬೇಕು ಎನ್ನುವ ಆಧಾರದ ಮೇಲೆ. ಡಿಸೆಂಬರಿನ ಆ ಕರುಳು ನಡುಗಿಸುವ ಚಳಿಗೆ ಮೂರು ಕಂಬಳಿಯಾದರೂ ಬೇಕಿತ್ತು. ಇಂಥ ಚಳಿಗಾಲದಲ್ಲಿ ಬ್ರಾಹ್ಮಿ ಮಹೂರ್ತ ದಲ್ಲಿ ಎದ್ದು, ತುಂಗೆಯಲ್ಲಿ ಸ್ನಾನ ಮಾಡಿ ಒಂದು ಪಂಚೆ ಉಟ್ಟು, ಶಲ್ಯ ಹೊದ್ದು ಅಯ್ಯಪ್ಪನ ಸ್ಮರಣೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೂ ಸುಮಾರು ಒಂದು ಮೈಲಿ ಆ ಕತ್ತಲೆಯಲ್ಲಿ ನಡೆದು ಬರುತ್ತಿದ್ದ ಅವರು ಅಚ್ಚರಿ ಹುಟ್ಟಿಸುತ್ತಿದ್ದರು. ಆ ಚಳಿಯನ್ನು ಅವರು ಎದುರಿಸುತ್ತಿದ್ದದ್ದು ಹೇಗೆ? ಇನ್ನಷ್ಟು ಬೆಚ್ಚಗೆ ಮಲಗಬೇಕು ಎನ್ನುವ ಆಸೆ ಕೊಡವಿ ಏಳುವುದು ಸುಲಭವಾ ಎನ್ನುವ ಪ್ರಶ್ನೆಮೂಡುವುದರ ಜೊತೆಜೊತೆಗೆ ಅವರ ಧೀ  ಶಕ್ತಿ ಬೆರಗು ಹುಟ್ಟಿಸುತ್ತಿತ್ತು. ಒಂದು ಹೆಸರು ಅಥವಾ ವ್ರತ ಇಷ್ಟು ಗಟ್ಟಿಗರನ್ನಾಗಿ ಮಾಡಬಹುದಾ.. ಆ ದೇವಾಲಯದ ಆಕರ್ಷಣೆ ಇಷ್ಟು ಸಂಕಲ್ಪ ಶಕ್ತಿ ತುಂಬಬಹುದಾ ಎನ್ನುವ ಬೆರಗು ಮೂಡುವ ಹೊತ್ತಿಗೆ ಅಂಗಳದಲ್ಲಿ ಅರುಣೋದಯ.

ಯಾವುದೇ ಒಂದು ಆಚರಣೆಯನ್ನು 21 ದಿನಗಳ ಕಾಲ ಸತತವಾಗಿ ಮಾಡಿದರೆ ಅದು ಅಭ್ಯಾಸವಾಗುತ್ತದೆ ನಂತರ ಸ್ವಭಾವವಾಗಿ ಹೋಗುತ್ತದೆ ಅನ್ನೋದು ವೈಜ್ಞಾನಿಕವಾಗಿ ನಿರೂಪಿತವಾದ ಸತ್ಯ. ಅಯ್ಯಪ್ಪನ ಮಾಲೆ ಧರಿಸಿದವರದ್ದು 48 ದಿನಗಳ ಕಾಲ ವ್ರತ. ವ್ರತವೂ ಸುಲಭದ್ದೇನಲ್ಲ. ಈ ವ್ರತದ ಸಮಯದಲ್ಲಿ ಬರಿಗಾಲಲ್ಲಿ ನಡೆಯಬೇಕು. ದಿನಕ್ಕೆರೆಡು ಬಾರಿ ನದಿ ಅಥವಾ ತಣ್ಣೀರು ಸ್ನಾನ, ಪೂಜೆ, ಭಜನೆ. ಅದು ಮುಗಿದ ನಂತರವೇ ತಾವೇ ಮಡಿಯಲ್ಲಿ ತಯಾರಿಸಿದ ಆಹಾರ ಸ್ವೀಕರಣೆ. ಸಾತ್ವಿಕ ಆಹಾರ, ಸಾತ್ವಿಕ ಜೀವನ. ಒಮ್ಮೆ ಮಾಲೆಯನ್ನು ಧರಿಸಿದ ಮೇಲೆ ಪ್ರತಿ ಜೀವಿಯಲ್ಲೂ ಲಿಂಗ ಬೇಧವಿಲ್ಲದೆ, ಹಿರಿಯ ಕಿರಿಯ ರೆನ್ನದೆ, ಮೇಲು ಕೀಳು ಎನ್ನುವ ಹಮ್ಮಿಲ್ಲದೆ ಅಯ್ಯಪ್ಪನನ್ನೇ ಕಾಣಬೇಕು. ಹಾಗಾಗಿ ಯಾರೇ ಕಂಡರೂ ಸ್ವಾಮೀ ಎಂದೇ ಸಂಬೋಧನೆ. ಗೌರವ ಭಾವ. ವಾಸ ಕೂಡಾ ಉಳಿದ ಮಾಲಾಧಾರಿಗಳ ಜೊತೆಗೆ ದೇವಸ್ಥಾನದ ಅಂಗಳದಲ್ಲೋ ಇಲ್ಲಾ ತಾವೇ ನಿರ್ಮಿಸಿಕೊಂಡ ಮಂಟಪದಲ್ಲೋ ಮಾತ್ರ. ಮನೆಯಲ್ಲಿ ಇರುವ ಹಾಗಿಲ್ಲ. ನಿದ್ದೆ ಚಾಪೆಯ ಮೇಲೆ.ಸದಾ ಭಜನೆ, ಸ್ಮರಣೆ. ಈ ವ್ರತದ ಕಾಲದಲ್ಲಿ ಕಟ್ಟುನಿಟ್ಟಾದ  ಬ್ರಹ್ಮಚರ್ಯ ಪಾಲನೆ ಎಷ್ಟು ಮುಖ್ಯವೋ ದುಶ್ಚಟಗಳಿಂದ ದೂರ ಇರುವುದು ಅಷ್ಟೇ ಮುಖ್ಯ. ಇದರಲ್ಲಿ ಕೊಂಚ ತಪ್ಪಾದರೂ ಇರುಮುಡಿ ಹೊತ್ತು ನಡೆದವರು ಹಿಂದೆ ಬರಲಾರರು ಅನ್ನುವ ಪುರಾತನ ನಂಬಿಕೆ. ಹಾಕುವವರಾದರೂ ಯಾರು? ಹೆಚ್ಚಿನವರು ಶ್ರಮಿಕ ವರ್ಗದವರು. ಯಾವುದೋ ಒಂದು ಚಟ ಇದ್ದವರೂ ಸಹ ವ್ರತದ ಸಮಯದಲ್ಲಿ ಪಾಲಿಸುವ ನಿಷ್ಠೆ ಅಚ್ಚರಿ ಹುಟ್ಟಿಸುತ್ತಿತ್ತು. ನಿಷ್ಠೆಯಿಂದ ವ್ರತ ಆಚರಿಸಿ ಬೆಟ್ಟಕ್ಕೆ ಹೋದರೆ ಅಯ್ಯಪ್ಪ ಪ್ರತ್ಯಕ್ಷ ಆಗ್ತಾನೆ ಅನ್ನುವ ಪುಸ್ತಕದ ಸಾಲು ಹೋಗುವ ಆಸೆ ಹುಟ್ಟಿಸಿದರೆ ವ್ರತ ತಪ್ಪಿದರೆ ಬೆಟ್ಟದಲ್ಲಿರುವ ಹುಲಿ ಕೊಂಡೊಯ್ಯುತ್ತೆ ಎನ್ನುವ ಆಡು ಮಾತು ಭಯವನ್ನೂ ಹುಟ್ಟಿಸುತ್ತಿತ್ತು. ಹಾಗಾಗಿಯೇ ಇರುಮುಡಿ ಹೊತ್ತು ಹೋಗುವ ಮುನ್ನ ಕ್ಷೇಮವಾಗಿ ಬರಲಿ ಎಂದು ಮನೆಮಂದಿ, ಬಂಧು ಬಳಗದವರು ಹಾರೈಸುತ್ತಿದ್ದರು. ತುಪ್ಪದ ದೀಪ ಹಚ್ಚಿಟ್ಟು ಬೇಡುತ್ತಿದ್ದರು. ಅಷ್ಟು ದುರ್ಗಮ ಹಾದಿ ಕ್ರಮಿಸಿ, ಜನಜಂಗುಳಿಯ ನಡುವೆ ಅವನನ್ನು ದರ್ಶಿಸಿ ಕ್ಷೇಮವಾಗಿ ಬರುವುದು ಪ್ರಯಾಸದ ಕೆಲಸವೇ ಆದರೂ ಪ್ರತಿ ವರ್ಷ ವ್ರತಧಾರಿಗಳ ಸಂಖ್ಯೆ ಹೆಚ್ಚುತ್ತಿತ್ತೆ ಹೊರತು ಕಡಿಮೆ ಆಗುತ್ತಿರಲಿಲ್ಲ.  ನಂಬಿಕೆ, ಶ್ರದ್ಧೆ ಎರಡೂ ಇದ್ದಾಗ ಸಾಧನೆಯ ಹಾದಿ ಅದೆಷ್ಟೇ ಕಠಿಣವಾದರೂ ಗುರಿ ಸೇರಬಹುದು ಅನ್ನುವುದಕ್ಕೆ ಅಯ್ಯಪ್ಪ ನಿದರ್ಶನವೇನೋ ಅನ್ನಿಸುತಿತ್ತು. ಛೆ ನಾವು ಹೋಗಬೇಕು ಅಲ್ಲಿಗೆ ಅನ್ನಿಸುವಷ್ಟು ಅವರ ಬದುಕು ಸೆಳೆಯುತ್ತಿತ್ತು.

ಹಾಗೆಲ್ಲಾ ಯಾರು ಬೇಕೆಂದರೆ ಅವರು  ಹೋಗುವ ಹಾಗಿಲ್ಲ ಎಂದಾಗ ಈಗ ಎದ್ದಿರುವ ಹಾಗೆ ಯಾಕೆ ಹೋಗಬಾರದು? ಎನ್ನುವ ಪ್ರಶ್ನೆ ಆಗಲೂ ಇತ್ತು. ಇದ್ಯಾಕೆ ಬರೀ ಗಂಡಸರು ಹೆಂಗಸರಿಗೆ ದರ್ಶಿಸುವ ಹಕ್ಕಿಲ್ಲವಾ ಎನ್ನುವ ವಾದವೂ ಚಾಲ್ತಿಯಲ್ಲಿತ್ತು. ಆದರೆ ಸಿಕ್ಕ ಉತ್ತರವನ್ನು ವಿಶ್ಲೇಷಿಸುವ ತಾಳ್ಮೆ ಹಾಗು ನಂಬಿಕೆಯನ್ನು ಗೌರವಿಸುವ ಮನಸ್ಸೂ ಇತ್ತು. ಹಿಂದೂಗಳಲ್ಲಿ ದೇವರೇ ಅಂತಿಮವಲ್ಲ. ಒಬ್ಬನೇ ಅಂತೂ ಅಲ್ಲವೇ ಅಲ್ಲ. ಪ್ರತಿ ದೇವರೂ ದೇವಸ್ಥಾನವೂ ಸಾಧನೆಯ ಹಾದಿಯಲ್ಲಿನ ಉಪಕರಣ ಅಷ್ಟೇ. ಹೇಗೆ ನಮ್ಮ ಧರ್ಮದಲ್ಲಿ ಅಸಂಖ್ಯಾತ ದೇವರುಗಳು ಇದ್ದಾರೋ ಹಾಗೆ  ಪ್ರತಿ ದೇವರ ಪೂಜಾ ವಿಧಿ, ಅಲ್ಲಿಯ ರೀತಿ ನೀತಿಗಳು ಅಸಂಖ್ಯ. ಒಂದೊಂದು ಸಾಧನೆಗೆ ಒಬ್ಬೊಬ್ಬ ದೇವರು. ಹಾಗೆ ನೋಡಿದರೆ ಇಲ್ಲಿ ಗಂಡು ದೇವರಿಗಿಂತ ಹೆಣ್ಣು ದೇವರ ಸಂಖ್ಯೆ, ಆರಾಧನೆ ಎರಡೂ ಜಾಸ್ತಿ.  

ಬದುಕಿನ ಅಂತಿಮ ಗುರಿ ಸತ್ಯ ಸಾಕ್ಷಾತ್ಕಾರ ಆದರೂ ತಲುಪುವ ದಾರಿ ಮಾತ್ರ ಅನೇಕ, ಪದ್ದತಿಗಳು ಹಲವಾರು. ಹಾಗಾಗಿ ಇಲ್ಲಿ ದೇವಸ್ಥಾನ ಅಥವಾ ದೇವರು ಒಂದು ನಿರ್ಧಿಷ್ಟ ಸಾಧನೆಗೆಂದೇ ಸೃಷ್ಟಿಯಾಗಿವೆ. ಪ್ರತಿಯೊಂದು ಸಾಧನೆಗೂ ತನ್ನದೇ ಆದ ರೂಪುರೇಖೆಗಳು ಇರುವ ಹಾಗೆ ಪ್ರತಿ ದೇವರ ಆರಾಧನೆಗೂ ಒಂದು ಕ್ರಮವಿದೆ. ಅದರಲ್ಲಿ ಈ  ಅಯ್ಯಪ್ಪ ಬ್ರಹ್ಮಚಾರಿ ಎಂದು ಖ್ಯಾತನಾದವನು. ಅಲ್ಲಿಗೆ ಗಂಡಸರು ಹೋಗಲೂ ಕ್ರಮವಿದೆ. ಯಾವ ದೇವಸ್ಥಾನಗಳೂ ನಮಗೆ ಪ್ರವಾಸಿ ತಾಣವಾಗಿರಲಿಲ್ಲ. ಅದು ಸಾಧನೆಯ ಕೇಂದ್ರ. ಕೇವಲ ಅಯ್ಯಪ್ಪ ಮಾತ್ರವಲ್ಲ ಹಲವು ದೇವಾಲಯಗಳಲ್ಲಿ ಸಾಮಾನ್ಯರ ಪ್ರವೇಶದ ಕುರಿತಾಗಿ ಹಲವು ರೀತಿಯ ನಿರ್ಬಂಧಗಳಿವೆ. ಪುಷ್ಕರದಲ್ಲಿರುವ ಬ್ರಹ್ಮನನ್ನು ಮದುವೆಯಾದ ಗಂಡಸರು ಅರ್ಚಿಸುವುದು ಹಾಗಿರಲಿ ಗರ್ಭ ಗುಡಿಯೊಳಗೆ ಅವರಿಗೆ ಪ್ರವೇಶವಿಲ್ಲ. ಕೇರಳದ ಅಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಅಲ್ಲಿ ಮಹಿಳೆಯರದೇ ಸಾರ್ವಭೌಮತ್ವ. ಕೊಯಂಬತ್ತುರಿನ ಇಶಾದ ಭೈರವಿ ದೇಗುಲದಲ್ಲೂ ಪುರುಷರಿಗೆ ಪ್ರವೇಶವಿಲ್ಲ. ಅಲ್ಲಿನ ಅರ್ಚನೆ ಮಾಡುವುದೂ ಸಹ ಮಹಿಳೆಯರೇ  ಇನ್ನು ಅಯ್ಯಪ್ಪನ ವ್ರತದ ಹಾಗೆ ಸಂತೋಷಿ ಮಾ ವ್ರತವಿದೆ. ಅದು ಕೇವಲ ಮಹಿಳೆಯರಿಗೆ ಮಾತ್ರ. ಹೀಗೆ ಇಲ್ಲಿನ ಹಲವಾರು ದೇವಾಲಯಗಳಲ್ಲಿ ಅವರ ನಿಯಮಗಳ ಅನುಸಾರ, ಉದ್ದೇಶಕ್ಕೆ ಪೂರಕವಾಗಿ ಅನುಮತಿ ನಿರಾಕರಣೆ ಒಳಪಟ್ಟಿದೆ. ಇನ್ನು ಕೆಲವು ದೇವಾಲಯಗಳು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಬೇರೆಯವರಿಗೆ ಅಲ್ಲಿ ಪ್ರವೇಶಿಸುವ ಅನುಮತಿ ಇರುವುದಿಲ್ಲ. ಹಾಗಾಗಿ ಪ್ರತಿ ದೇವಾಲಯ ಎನ್ನುವುದು ಅದರ ಹಿನ್ನಲೆ, ಉದ್ದೇಶ, ವಾಸ್ತು ಇವುಗಳ ಮೇಲೆ ಆಧಾರ ಪಟ್ಟಿರುತ್ತದೆಯೇ ಹೊರತು ಇಲ್ಲಿ ಎಲ್ಲವೂ ಸಾರ್ವಜನಿಕವಲ್ಲ. ಹೇಗೆ ಬೇಕಾದರೂ ಉಪಯೋಗಿಸಬಹುದು ಎನ್ನುವುದಕ್ಕೆ ಅವಕಾಶವಿಲ್ಲ. ಮತ್ತೆ ಕೆಲವು ದೇವಸ್ಥಾನಗಳಲ್ಲಿ ಅರ್ಚನೆ ತಲೆಮಾರುಗಳಿಂದ ಒಂದೇ ವಂಶಕ್ಕೆ ಒಳಪಟ್ಟಿರುತ್ತದೆ. ಇವೆಲ್ಲಕ್ಕೂ ನಂಬಿಕೆಯೇ ಜೀವಾಳ. ಶ್ರದ್ಧೆಯೇ ದಾರಿದೀಪ.  

ಹಾಗಾದರೆ ಪ್ರಾರ್ಥಿಸುವ ಹಕ್ಕಿಲ್ಲವೇ? ದೇವರು ಒಬ್ಬರ ಸೊತ್ತೇ? ಖಂಡಿತ ಅಲ್ಲ. ಅಯ್ಯಪ್ಪನನ್ನು ಮನೆಯಲ್ಲಿ ಕುಳಿತು ಪ್ರಾರ್ಥಿಸಲು ಯಾರಿಗೂ ಯಾವ ನಿರ್ಬಂಧವೂ ಇಲ್ಲ. ಅದವರ ಆಯ್ಕೆ. ಇತರ ಪ್ರದೇಶಗಳಲ್ಲಿ ಇರುವ ಅವನ ದೇವಸ್ಥಾನಗಳಿಗೆ ಹೋಗಲು ಯಾರಿಗೂ ಯಾರೂ ತಡೆ ಒಡ್ಡುವುದಿಲ್ಲ. ಮತ್ತು ವ್ರತದ ಅವಶ್ಯಕತೆಯೂ ಇಲ್ಲ. ಕೇವಲ ಶಬರಿಮಲೆಗೆ ಹೋಗಲು ಮಾತ್ರ ಇಷ್ಟು ನಿಯಮಗಳು ಇವೆ ಎಂದಾದರೆ ಅದು ಯಾವುದೋ ಒಂದು ನಿರ್ದಿಷ್ಟ ಉದ್ದೇಶದ ಸಲುವಾಗಿ ಕಟ್ಟಿದ್ದು ಎಂದೇ ಅಲ್ಲವೇ. ಹಾಗಾಗಿ ಅಲ್ಲಿಗೆ ಹೋಗಲು ನಮಗೂ ಆ ಉದ್ದೇಶ ಇರಬೇಕು ಹಾಗೂ ಅಷ್ಟೇ ಶ್ರದ್ಧಾವಂತರಾಗಿ ನಿಯಮ ಅನುಸರಿಸಬೇಕು ಅನ್ನುವುದರಲ್ಲಿ ತಪ್ಪೇನಿದೆ? ಉಳಿದೆಲ್ಲಾ ಕಡೆ ನಿಯಮ ಒಪ್ಪುವ ನಾವು ಇಲ್ಲಿ ಮಾತ್ರ ಯಾಕೆ ನಿಯಮ ಉಲ್ಲಂಘಿಸ ಬೇಕು? ಹೋಗಬೇಕು ಎನ್ನುವುದು ನಮ್ಮ ನಂಬಿಕೆಯಾ ಇಲ್ಲಾ ಅಹಂ ಅನ್ನು ತಣಿಸುವ ಅಸ್ತ್ರವಾ,,,,
  
ದೇವರನ್ನು ಧಿಕ್ಕರಿಸುವ ಸ್ವಾತಂತ್ರ್ಯ ಇರುವ ಧರ್ಮ ನಮ್ಮದು. ಇಲ್ಲಿ ಆಸ್ತಿಕವಾದಕ್ಕೆ ಎಷ್ಟು ಗೌರವ ಇದೆಯೋ ನಾಸ್ತಿಕವಾದಕ್ಕೂ ಅಷ್ಟೇ ಗೌರವವಿದೆ. ಆಸ್ತಿಕರಲ್ಲೂ ಒಬ್ಬೊಬ್ಬರಿಗೆ ಒಂದೊಂದು ದೇವರನ್ನು ಬೇಕಾದ ಪಥವನ್ನು ಆಯ್ದುಕೊಳ್ಳುವ ಹಕ್ಕಿದೆ. ಭಕ್ತನೂ ಆಗಬಹುದು, ಶತ್ರುವೂ ಆಗಬಹುದು ಎನ್ನುವ ಆಯ್ಕೆಯೂ ಇದೆ. ದಾರಿ ಯಾವುದಾದರೇನು ಗುರಿ ಮುಖ್ಯ ಎನ್ನುವುದು ಈ ಮಣ್ಣಿನ ಗುಣ.ಆಯ್ದುಕೊಂಡ ದಾರಿಯಲ್ಲಿ ಪಟ್ಟಾಗಿ ನಡೆಯುವುದು ಅಗತ್ಯ. ಇಷ್ಟೆಲ್ಲಾ ಇದ್ದು ಅಯ್ಯಪ್ಪನನ್ನು ನೋಡಲು ನಿರ್ಬಂಧಿಸಿದ್ದೇಕೆ? ಎನ್ನುವ ಪ್ರಶ್ನೆ ಕಾಡುವುದು ಸಹಜ. ಅದು ನಿರ್ಬಂಧವಲ್ಲ ಕೆಲವು ನಿಬಂಧನೆಗಳಿದ್ದವು ಅಷ್ಟೇ. ಹಕ್ಕು ನಿರಾಕರಿಸಲಾಗಿರಲಿಲ್ಲ, ನಿಯಮಗಳನ್ನ ವಿಧಿಸಲಾಗಿತ್ತು. ಋತುಮತಿಯಾಗದ ಹಾಗೂ ಋತುಚಕ್ರ ನಿಂತ ಯಾರಾದರೂ 48 ದಿನಗಳ ವ್ರತ ಆಚರಿಸಿ ಗುರುಸ್ವಾಮಿಯ ನೇತೃತ್ವದಲ್ಲಿ ಇರುಮುಡಿ ಹೊತ್ತು ಹೋಗಬಹುದಿತ್ತು. ಹಾಗಿದ್ದರೆ ನಿಬಂಧನೆ ಯಾಕಿತ್ತು?

 ನನ್ನ ಉದ್ದೇಶ ಇತರ ಬಹುಜನರ ಉದ್ದೇಶಕ್ಕೆ ಭಂಗ ತರುವ ಹಾಗಿದ್ದರೆ ಅದು ಒಳ್ಳೆಯ ಉದ್ದೇಶವೇ ಆಗಿದ್ದರೂ ಸುತ್ಯಾರ್ಹವಲ್ಲ. ಆಚರಣೆಗೆ ಯೋಗ್ಯವಲ್ಲ. ಸಮಾಜದಲ್ಲಿ ಬದುಕುವಾಗ ಅಲ್ಲಿಯ ರೀತಿ ನೀತಿಗಳನ್ನು ಅನುಸರಿಸುವುದು ಅನಿವಾರ್ಯ ಹಾಗೂ ಅಗತ್ಯ.  48 ದಿನಗಳ ಕಾಲ ಶುದ್ಧತೆ ಈ ವ್ರತದ ಬಹುಮುಖ್ಯ ನಿಯಮ. ಅಷ್ಟೊಂದು ದಿನಗಳ ಕಾಲ ಋತುಚಕ್ರ ನಿಲ್ಲಲಾರದು. ದೇಹ ಹಾಗೂ ಮನಸ್ಸು ಸಹಕರಿಸದು. ಋತುಚಕ್ರದ ಸಮಯದಲ್ಲಿ ಹಾರ್ಮೋನ್ ಗಳ ವ್ಯತ್ಯಾಸದಿಂದ ಆಗುವ ಮಾನಸಿಕ ಹಾಗೂ ದೈಹಿಕ ವ್ಯತ್ಯಾಸಗಳನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ.  ಇನ್ನು ಬ್ರಹ್ಮಚರ್ಯ ಈ ವ್ರತದ ಬಹುಮುಖ್ಯ ಅಂಗ. ಒಂದೇ ಜಾಗದಲ್ಲಿ ಒಟ್ಟಿಗೆ ಬಹುಕಾಲ ಇರುವಾಗ ಅದರಲ್ಲೂ ವಯಸ್ಸಿನ ಗಂಡು ಹೆಣ್ಣು ಒಂದೇ ಸೂರಿನಡಿ ಇರುವಾಗ ದೈಹಿಕ ಕಾಮನೆಗಳನ್ನು ನಿಗ್ರಹಿಸಲು ಕಷ್ಟವಾಗಬಹುದು ಅನ್ನುವುದು ಇರಬಹುದೇನೋ. ನಿಗ್ರಹದ ದಾರಿಯಲ್ಲಿ ಆಮಿಷಗಳು ಎದುರಾದರೆ ಸಾಧನೆ ಕಷ್ಟ. ಸಾಧನೆಯ ಹಾದಿಯಲ್ಲಿ ನಿಯಂತ್ರಣ ಅನಿವಾರ್ಯ.  ಹಾಗಾಗಿಯೇ ಮಾಲಾಧಾರಿಗಳು ಮನೆಯಲ್ಲಿ ವಾಸಿಸುವುದು, ಮನೆಯ ಆಹಾರ ಸೇವಿಸುವುದು ನಿಷಿದ್ಧ ಎನ್ನುವ ನಿಯಮ ಮಾಡಿದ್ದೇನೋ.

ಇನ್ನು ದೇವಸ್ಥಾನಕ್ಕೆ ಸಾಗುವ ದಾರಿಯೂ ಅಷ್ಟೇ ದುರ್ಗಮ. ಪಂಪಾ ನದಿಯನ್ನು ದಾಟಿದ ಮೇಲೆ ನಡೆದೇ ಸಾಗಬೇಕು. ಕಲ್ಲು, ಮುಳ್ಳುಗಳ ದಾರಿಯಲ್ಲದ ದಾರಿಯದು. ಬರಿಯ ಕಾಲಿನಲ್ಲಿ ಬೆಟ್ಟವನ್ನು ಏರಬೇಕು, ಹಗಲು ರಾತ್ರಿ ಎನ್ನದೆ ನಡೆಯಬೇಕು.  ವಯಸ್ಸಿನ ಹೆಂಗಸರ ರಕ್ಷಣೆ ತುಸು ಕಷ್ಟವೇ. ಗಮನ ಅತ್ತ ಕಡೆ ಹರಿಸುವ ಅನಿವಾರ್ಯತೆ ಎದುರಾಗಬಹುದು. ಕಾಡು ಪ್ರಾಣಿಗಳು ಅದರಲ್ಲೂ ಮಾಂಸಾಹಾರ ಪ್ರಾಣಿಗಳು ಹೆಣ್ಣಿನ ರಕ್ತದ ವಾಸನೆಯನ್ನು ಬಹು ಬೇಗ ಗ್ರಹಿಸುತ್ತವಂತೆ. ಅವುಗಳು ಧಾಳಿ ಮಾಡುವ ಸಂಭವಗಳೂ ಜಾಸ್ತಿ. ಬಹುಶಃ ಇವೆಲ್ಲಕ್ಕಿಂತ ಹೆಣ್ಣು ಅಷ್ಟು ದಿನ ತನ್ನ ಕೌಟುಂಬಿಕ ಜವಾಬ್ದಾರಿಯಿಂದ ಹೊರಗಿದ್ದರೆ ಮನೆಯಲ್ಲಿ ಉಂಟಾಗುವ ತಲ್ಲಣಗಳೂ ಕಾರಣವಿದ್ದಿರಬಹುದು. ಅಯ್ಯಪ್ಪ ಬ್ರಹ್ಮಚಾರಿ ದೇವರು. ಅವನ ಪ್ರತಿಷ್ಟಾಪನೆ ಯಾವ ಉದ್ದೇಶಕ್ಕಾಗಿ ಆಗಿದೆಯೋ ಆ ಉದ್ದೇಶವೇ ತಿರುಗುಮುರುಗು ಆಗುವ ಸಂಭವವೂ ಇರಬಹುದು. ನೂರಾರು ವರ್ಷಗಳಿಂದ ನಡೆದ ಬಂದ ಪದ್ದತಿಗೆ ತನ್ನದೇ ಆದ ಹಿನ್ನಲೆ ಇದ್ದೆ ಇರುತ್ತದೆ. ನಿರಾಕರಿಸಲು ಒಂದು ಕ್ಷಣ ಸಾಕು ಆದರೆ ಅರ್ಥಮಾಡಿಕೊಳ್ಳಲು? 

ಬೇರೆ ಮತಗಳಲ್ಲಿ ಇರುವ ಹಾಗೆ ಇಲ್ಲಿ ಏಕ ದೇವರಿಲ್ಲ. ಅವನನ್ನು ಭಜಿಸದೇ ಹೋದರೆ ಅಪರಾಧವಲ್ಲ. ಬಲವಂತವಂತೂ ಇಲ್ಲವೇ ಇಲ್ಲ. ಒಂದೇ ಮನೆಯಲಿ ಇರುವ ಪ್ರತಿಯೊಬ್ಬರೂ ತಮಗಿಷ್ಟ ವಾದ ದೇವರನ್ನು ಪೂಜಿಸುವ ಹಾಗೂ ಪೂಜಿಸದೇ ಇರಬಲ್ಲ ಸ್ವಾತಂತ್ರ್ಯ ನಮ್ಮದು. ಮನುಷ್ಯನಿಗೆ ಆತ್ಮಸಾಕ್ಷಾತ್ಕಾರಕ್ಕೆ ದೇವರು ಒಂದು ಮಾರ್ಗವೇ ಹೊರತು ಅದೇ ಅಂತಿಮ ಗುರಿಯಲ್ಲ. ಹಾಗಾಗಿ ನಮಗೆ ದೇವರು, ದೇವಾಲಯ ಆವಶ್ಯಕವೇ ಹೊರತು ದೇವರಿಗೆ ನಾವಲ್ಲ ದೇಗುಲವೂ ಅಲ್ಲ. ಪ್ರತಿ ಕಟ್ಟಡಕ್ಕೂ ಒಂದು ವಾಸ್ತು ಇರುತ್ತದೆ. ಅದರಲ್ಲೂ ಹಿಂದಿನ ಕಾಲದಲ್ಲಿ ಕಟ್ಟಲ್ಪಟ್ಟ ಬಹುತೇಕ ದೇವಾಲಯಗಳು ನಿರ್ಧಿಷ್ಟ ಉದ್ದೇಶ ಹೊಂದಿರುವ ಹಾಗೆಯೇ ನಿರ್ಧಿಷ್ಟ ವಾಸ್ತುವನ್ನೂ ಹೊಂದಿವೆ. ಅಲ್ಲಿ ನಡೆದುಕೊಳ್ಳಬೇಕಾದ ರೀತಿ ನೀತಿಗಳು ಉಲ್ಲೇಖಿಸಲ್ಪಟ್ಟಿವೆ.  ಅದರ ಪ್ರಕಾರವಾಗಿ ಅಲ್ಲಿ ಶಕ್ತಿ ಸಂಚಯನ ವಾಗುತ್ತದೆ. ಯಾವ ಶಕ್ತಿಯ ಹಿಂದೆ ನಾವು ಹೋಗುತ್ತೇವೆ ಅನ್ನುವುದರ ಮೇಲೆ ಯಾವ ದೇವರು ಯಾವ ದೇವಸ್ಥಾನ ಎಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ನಮಗಿದೆ. ದೇವಸ್ಥಾನಗಳು ಕೇವಲ ಪೂಜಾ ಮಂದಿರಗಳೋ, ಪ್ರವಾಸಿ ತಾಣವೋ, ಅಹಂ ತಣಿಸುವ ವಸ್ತುವೋ ಅಲ್ಲವೇ ಅಲ್ಲ. ಅದು ಶಕ್ತಿ ಸಂಚಯನ ಸ್ಥಳ. ಹಾಗಾಗಿಯೇ ಪ್ರತಿ ದೇವಸ್ಥಾನದ ವಾಸ್ತು, ಪೂಜಾ ವಿಧಾನ, ರೀತಿ, ನೀತಿ, ನಿಯಮ ಸಂಪ್ರದಾಯ ಎಲ್ಲವೂ ಭಿನ್ನ. ಆ ಸಂಪ್ರದಾಯದಲ್ಲಿ ನಮಗೆ ನಂಬಿಕೆಯಿದ್ದಾಗ, ಆ ದಾರಿಯಲ್ಲಿ ಶ್ರದ್ಧೆಯಿದ್ದಾಗ ಮಾತ್ರ ಅಲ್ಲಿಗೆ ಹೋಗಬೇಕೆ ವಿನಃ ಅದನ್ನು ಅತಿಕ್ರಮಿಸುವುದು ಭಕ್ತಿಯಲ್ಲ ಅಹಂಕಾರ.

ಹೋಗಲಿ ಇದನ್ನು ವಿರೋಧಿಸುತ್ತಿರುವುದು ಯಾರು ಎಂದು ನೋಡಿದರೆ ಇದರ ಹಿಂದಿರುವ ಹುನ್ನಾರ ಅರ್ಥವಾಗಿಬಿಡುತ್ತದೆ. ಅವರ್ಯಾರೂ ಧರ್ಮದಲ್ಲೋ, ದೇವರಲ್ಲೋ ಶ್ರದ್ಧೆ ಇರುವವರು ಖಂಡಿತ ಅಲ್ಲ, ಕೇವಲ ಹಕ್ಕು ಪ್ರತಿಪಾದಿಸುವವರು. ಹಕ್ಕು ಎನ್ನುವುದು ಜವಾಬ್ದಾರಿಯ ಜೊತೆ ಜೊತೆಗೆ ಬರುತ್ತದೆ. ಒಂದನ್ನು ನಿರಾಕರಿಸಿ ಇನ್ನೊಂದನ್ನು ಪ್ರತಿಪಾದಿಸಲು ಸಾಧ್ಯವೇ ಇಲ್ಲ. ನಿಜವಾಗಲು ಇದು ಜವಾಬ್ದಾರಿಯುತ ನಡುವಳಿಕೆಯೇ ಎಂದು ಪ್ರಶ್ನಿಸಿಕೊಂಡರೆ ಹೋರಾಟ ಎಷ್ಟು ಹಾಸ್ಯಾಸ್ಪದ ಎನ್ನುವುದು ಅರ್ಥವಾಗಿಬಿಡುತ್ತದೆ. ಪೊಳ್ಳುತನ ಬಯಲಾಗುತ್ತದೆ. ಹೋರಾಟ ಯಾರಿಗಾಗಿ ಎಂದು ಹೇಳುತ್ತಿದ್ದಾರೋ ಅವರ ಬೆಂಬಲ ಇದೆಯೇ ಎಂದು ಪರೀಕ್ಷಿಸಿದರೆ ಅದರ ಅಸಲಿಯತ್ತು ತಿಳಿದುಬಿಡುತ್ತದೆ.

ಇಷ್ಟಕ್ಕೂ  ನಮ್ಮದಲ್ಲದ ದಾರಿಯಲ್ಲಿ ನಡೆಯುವ ಹುಂಬತನವಾದರೂ ಯಾಕೆ? ಗಂಡು ಹಾಗೂ ಹೆಣ್ಣು ಎರಡು ಪ್ರತ್ಯೇಕ ಜೀವಿಗಳು. ಇಬ್ಬರಿಗೂ ಪ್ರಕೃತಿಯಲ್ಲಿ ತಮ್ಮದೇ ಆದ ಸ್ಥಾನವಿದೆ, ಕರ್ತವ್ಯವಿದೆ. ಭಿನ್ನತೆಯಲ್ಲಿ ಏಕವಾಗುವ ಅವಕಾಶವಿದೆ. ಸ್ವಾತಂತ್ರ್ಯವಿದೆ.  ಅವರವರದೇ ಆದ ಬಲವೂ ಬಲಹೀನತೆಯೂ ಇದೆ. ಎರಡು ಭಿನ್ನ ಶಕ್ತಿಗಳ ಸಂಗಮವೇ ಇಡೀ ಪ್ರಕೃತಿಯನ್ನು ನಿಯಂತ್ರಿಸುತ್ತದೆ. ಎರಡು ಬಿಂದುಗಳು ಸೇರಿದಾಗ ಮಾತ್ರ ರೇಖೆಯಾಗುತ್ತದೆ. ಹೀಗಿರುವಾಗ ಸಮಾನತೆ ಎನ್ನುವುದು ಹೇಗೆ? ಹೋಗಲಿ ಯಾಕೆ ಬೇಕು ಈ ಸಮಾನತೆ.

 ಯಾರಿಗೆ ಯಾರು ಸಮಾನರು? ಪ್ರತಿಯೊಂದು ಜೀವಿಯೂ ಭಿನ್ನವೇ ಆಗಿರುವಾಗ ಒಂದು ಜೀವಿಯ ತರಹ ಇನ್ನೊಂದು ಜೀವಿ ದೈಹಿಕವಾಗಿಯೋ, ಮಾನಸಿಕವಾಗಿಯೂ ಸೃಷ್ಟಿಯಾಗದೆ ಇರುವಾಗ ಸಮಾನತೆಯ ಪ್ರಶ್ನೆ ಉದ್ಭವಿಸುವುದು ಹೇಗೆ? ಪ್ರಕೃತಿಯ ಪ್ರತಿ ಸೃಷ್ಟಿಯೂ ಭಿನ್ನ. ಒಂದೇ ರೀತಿಯಲ್ಲಿ ಕಾಣುವ ಮರದ ಪ್ರತಿ ಎಲೆಯೂ ಭಿನ್ನವೇ. ದೇಹದ ಪ್ರತಿ ಜೀವಕೋಶವೂ ವಿಭಿನ್ನವೇ. ಹಾಗಿದ್ದಾಗ ಮಾತ್ರ ವೈಯುಕ್ತಿಕ ಅಸ್ತಿತ್ವ ಸಾಧ್ಯ. ಆಸ್ತಿತ್ವವನ್ನೇ ನಿರಾಕರಿಸುವುದು ಯಾಕೆ? ಸಮಾನತೆ, ನಾನೂ ನಿನ್ನಂತೆ ಎಂದು ಹೋಗುವುದು ಸ್ವಾತಂತ್ರ್ಯಹೇಗಾಗುತ್ತದೆ? ನಾನು ನಾನಾಗಿಯೇ ಉಳಿಯುವ ಸ್ವಾತಂತ್ರ್ಯ ಪ್ರಕೃತಿ ಕೊಟ್ಟಿರುವಾಗ ನಾನು ಇನ್ಯಾರೋ ಆಗಲು ಯತ್ನಿಸುವುದು ನನ್ನತನಕ್ಕೆ ಮಾಡುವ ಅವಮಾನ ಮಾತ್ರವಲ್ಲ ಅವಸಾನ ಸಹ. ಸ್ವಾತಂತ್ರ್ಯ ಬಯಸುತ್ತಾ ನಾವು ಅಪ್ಪಿಕೊಳ್ಳುತ್ತಿರುವುದು ಗುಲಾಮಿತನವನ್ನು.

ಯಾವುದನ್ನೇ ಆಗಲಿ ಧಿಕ್ಕರಿಸುವುದು ಸುಲಭ. ಹಾಗೆ ಧಿಕ್ಕರಿಸಿ ಸಾಧಿಸಿದ್ದು ಏನು ಅನ್ನುವುದು ಮುಖ್ಯವಾಗುತ್ತದೆ.  ಪ್ರತಿಯೊಂದು ನಂಬಿಕೆ, ಶ್ರದ್ಧೆಯೂ ತನ್ನದೇ ಆದ ಹಿನ್ನಲೆ ಹೊಂದಿರುತ್ತದೆ. ಅದು ಅರ್ಥವಾದಾಗ ಗೌರವಿಸುವ ಗುಣ ತನ್ನಿಂದ ತಾನೆ ಬರುತ್ತದೆ. ಅರ್ಥವಾಗದೆ ಹೋದಾಗ, ಅಥವಾ ಅರ್ಥವಾಗಿದೆ ಎಂದು ಭ್ರಮಿಸಿದಾಗ ಧಿಕ್ಕರಿಸುವ ಮನಸ್ಥಿತಿ ಬರುತ್ತದೇನೋ. ಹಾಗೆ ಧಿಕ್ಕರಿಸಿ ಇನ್ಯಾವುದೋ ನಂಬಿಕೆ ನೆಲೆ ಕಂಡುಕೊಂಡಿದ್ದೆವೆ, ಬದುಕಿಗೆ ಗುರಿ ಪಡೆದುಕೊಂಡಿದ್ದೆವೆ ಎಂದರೆ ಆ ಹೋರಾಟಕ್ಕೆ ಅರ್ಥವಿದೆ, ಇಲ್ಲವಾದಲ್ಲಿ ಇದ್ದ ದಡವನ್ನೂ ಬಿಟ್ಟು ಮುಂದಿನ ದಡವೂ ಸಿಗದೇ ಅತಂತ್ರವಾಗಬೇಕಾಗುತ್ತದೆ. ಒಂದು ನಂಬಿಕೆಯನ್ನು ತೊಡೆದುಹಾಕುವ ಮುನ್ನ ಅಂತಹ ಇನ್ನೊಂದು ನಂಬಿಕೆಯನ್ನು ಕಟ್ಟಿ ಕೊಡಲು ಸಮರ್ಥರಾಗಬೇಕು. ಇಲ್ಲವಾದಲ್ಲಿ ಒಂದಿಡೀ ಸಮೂಹವನ್ನು ಅತಂತ್ರಗೊಳಿಸಿದ ದೌರ್ಭಾಗ್ಯ ನಮ್ಮದಾಗುತ್ತದೆ. ಯಾಕೆಂದರೆ ಬದುಕು ನಿಂತಿರುವುದೇ ನಂಬಿಕೆಯ ಅಡಿಪಾಯದ ಮೇಲೆ. 

ಹೋಗಲಿ ಈ ಹೋರಾಟ ಅನಿವಾರ್ಯವಾ? ಅದರಿಂದ ಏನೋ ಬದಲಾವಣೆ ಸಮಾಜದಲ್ಲಿ ಜರುಗಿ ಬಿಡುತ್ತದಾ, ಬದುಕು ಇನ್ನಷ್ಟು ಉತ್ತಮಗೊಳ್ಳುತ್ತದಾ ಎಂದರೆ ಉತ್ತರ ಶೂನ್ಯವೇ ಅನ್ನಿಸುತ್ತದೆ. ಶಬರಿಮಲೆ ಸಂಪೂರ್ಣವಾಗಿ ಶ್ರದ್ಧಾ ಕೇಂದ್ರ. ಅಲ್ಲಿರುವ ಅಯ್ಯಪ್ಪನನ್ನು ನೋಡಲು ನಿಬಂಧನೆಗಳಿವೆಯೇ ಹೊರತು ಅಯ್ಯಪ್ಪನನ್ನು ಧ್ಯಾನಿಸಲು ಅಲ್ಲ. ಅಯ್ಯಪ್ಪನನ್ನು ನೋಡದೆ ಹೋದರೂ ಕಳೆದುಕೊಳ್ಳುವುದು ಏನೂ ಇಲ್ಲ. ಹಾಗಿರುವಾಗ ಇದರ ವಿರುದ್ಧ ಹೋರಾಟ ವ್ಯರ್ಥವೇ ಹೊರತು ಅದರಿಂದ ಏನೂ ಉಪಯೋಗವಿಲ್ಲ. ಮಸೀದಿಯ ನಿರ್ಬಂಧ ಒಪ್ಪಿಕೊಳ್ಳುವ, ಚರ್ಚ್ ಗಳಲ್ಲಿ ಪವಿತ್ರ ತೀರ್ಥ ಸ್ವಿಕರಿಸುವಾಗಿನ ನಿಬಂಧನೆ ಒಪ್ಪುವ ಸಮಾಜ ಅಯ್ಯಪ್ಪನ ನಿಯಮಗಳನ್ನು ಧಿಕ್ಕರಿಸುವುದು ಹಾಸ್ಯಾಸ್ಪದ. ಹೋಗಲಿ ಇಲ್ಲಿನ ಹೆಣ್ಣು ಮಕ್ಕಳು ಸತ್ಯ ಅರಿತುಕೊಂಡು ಒಪ್ಪಿಕೊಂಡಿರುವಾಗ, ಅವರಿಗೆ ಈ ಹೋರಾಟದ ಆವಶ್ಯಕತೆಯೇ ಇಲ್ಲದಿರುವಾಗ ನಡೆಯುವ ಹೋರಾಟಕ್ಕೆ ಒಂದೋ ವೈಯುಕ್ತಿಕ ಹಿತಾಸಕ್ತಿ ಅಥವಾ ಯಾವುದೋ ಹುನ್ನಾರ ಇರಬೇಕು ಅನ್ನಿಸುವುದು ಸುಳ್ಳಲ್ಲ. ಹೋರಾಟದ ಹಾದಿಯ ಬಗ್ಗೆ ಶಂಕೆ ಹುಟ್ಟುವುದು ಅಸಹಜವಲ್ಲ.

ಹೋರಾಟ ಎಷ್ಟು ಮುಖ್ಯವೋ ಅದು ಯಾವುದಕ್ಕಾಗಿ ಅನ್ನುವುದೂ ಅಷ್ಟೇ ಮುಖ್ಯ.
ಹಾಗಾಗಿ ದಾರಿ ತಪ್ಪಿದರೂ ಗುರಿ ತಪ್ಪಬಾರದು.







Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...