ಹಂಪಿ
ಜೂನ್ ನಲ್ಲಿ ಬಂದರೆ ಇಷ್ಟೊಂದು ಜನರೂ ಇರೋಲ್ಲ, ಒಂದೆರೆಡು ಮಳೆ ಬಿದ್ದಿದ್ದರೆ ನೆಲವೂ ತಂಪಾಗಿ ಹಸಿರು ಚಿಗುರಿರುತ್ತದೆ. ನಿಧಾನವಾಗಿ ನಿರಾಳವಾಗಿ ನೋಡಬಹುದು ಎಂಬ ಗೈಡ್ ಮಾತು ಅಲ್ಲಿಗೆ ಮರೆತು ಹೋಗದೆ ಒಳಗೆ ಸಿಂಬೆ ಸುತ್ತಿದ ಹಾವಿನಂತೆ ಮಲಗಿತ್ತು. ಸಮಯಕ್ಕಾಗಿ ಕಾಯುತ್ತಿತ್ತು. ಹಂಪಿ ಅನ್ನೋ ಹೆಸರೇ ಸಾಕು ಮೈ ರೋಮಾಂಚನಗೊಳ್ಳಲು. ಮೊದಲ ಸಲ ಹೋದಾಗ ಹಾಳು ಹಂಪಿ ಅನ್ನುವುದು ಅದೆಷ್ಟು ಅನ್ವರ್ಥಕವಾಗಿದೆ ಎನ್ನುವ ವಿಷಾದ, ಕ್ರೋಧ ಎಲ್ಲವೂ ಸೇರಿ ಒಂದು ರೀತಿಯ ಅಶಾಂತಿ ಮನಸ್ಸಿಗೆ ಕವಿದಿತ್ತು. ಯಾವುದೇ ಆದರೂ ಯಾವುದರಿಂದ ಆರಂಭವಾಗುತ್ತದೋ ಅಲ್ಲಿಂದಲೇ ಮುಕ್ತಾಯವಾಗುತ್ತದೆ ಅನ್ನೋದು ತ.ರಾ.ಸು ಮಾತು. ವಿಜಯನಗರ ಸಾಮ್ರಾಜ್ಯ ಶುರುವಾಗಿದ್ದು ಕಾಕತೀಯ ವಂಶದವರಿಂದ. ಕೊನೆಯ ರಾಜನೆಂದೆ ಉಲ್ಲೇಖಿಸಲ್ಪಟ ರಾಮರಾಯ ಸೇರಿದ್ದು ಅದೇ ಕಾಕತೀಯ ವಂಶಕ್ಕೆ. ಇತಿಹಾಸವೆಂದರೆ ಚಕ್ರ ಅದು ತಿರುಗುತ್ತಲೇ ಇರುತ್ತದೆ ಇದರ ಬಗ್ಗೆ ಸಂಶೋಧನೆ ಮಾಡಿ ಈ ತರಹದ ತುಂಬಾ ಉದಾಹರಣೆ ಕೊಟ್ಟಿದ್ದಾರೆ ನನ್ನ ಫ್ರೆಂಡ್ ಅನ್ನೋ ಅಣ್ಣನ ಮಾತು ಕೇಳಿದಾಗ ಅರಿವಿಗೆ ಬಂದಾಗ ಒಂದು ಕ್ಷಣ ರೋಮಾಂಚನವಾಗಿತ್ತು. ಅದೊಂದು ಅಧಿಕಾರದ ಕೇಂದ್ರ ಸ್ಥಾನ ಮಾತ್ರವಲ್ಲ, ಸಾಂಸ್ಕೃತಿಕ ಕೇಂದ್ರ ಸ್ಥಾನವೂ ಹೌದು. ನೈಸರ್ಗಿಕವಾಗಿ ದುರ್ಭ್ಯೇಧವಾದ ಜಾಗ. ಒಳಗಿನವರ ಸಹಾಯವಿಲ್ಲದೆ ಹೊರಗಿನವರಿಗೆ ಕಿಂಚಿತ್ತೂ ಜಾಗ ಕೊಡದ ಸ್ಥಳ. ಅಲ್ಲಿಂದ ಕಣ್ಣು ಹಾಯಿಸಿದರೆ ಸುಮಾರು ಮುನ್ನೂರು ಕಿ.ಮಿ ಗಳವರೆಗೂ ಹರಡ...