ಜೀವನವದೊಂದು ಕಲೆ
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥ ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ - ಮಂಕುತಿಮ್ಮ !! ಬದುಕಿನ ಬಗ್ಗೆ ಡಿ.ವಿ.ಜಿ ಯವರು ಬರೆದ ಅಧ್ಭುತ ಸಾಲುಗಳು ಇವು. ಜೀವನ ಒಂದು ಕಲೆ. ಅದನ್ನು ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿ ಕೊಳ್ಳುವುದು ಸಹ ಒಂದು ಕಲೆ. ಕಲೆಯೆಂದರೆ ಕೇವಲ ಲಲಿತಕಲೆಗಳು ಮಾತ್ರವಲ್ಲ, ಬದುಕನ್ನ ಕಲೆಯಾಗಿಸಿಕೊಳ್ಳುವಲ್ಲಿ ಅವುಗಳು ಮೆಟ್ಟಿಲು. ಆದರೆ ಬದುಕೇ ಕಲೆಯಾದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ? ಹಾಗಾದರೆ ಬದುಕನ್ನ ಕಲೆಯಾಗಿಸಿಕೊಳ್ಳುವುದು ಹೇಗೆ? ಅನ್ನುವುದನ್ನೇ ಜೀವನವೊಂದು ಕಲೆ ಎನ್ನುವ ಪುಸ್ತಕ ಹೇಳುತ್ತದೆ. ಕಲೆಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಪುಟ್ಟ ಹಣತೆಯಾಗುತ್ತದೆ. ದಾರಿ ತೋರುವ ಸೊಡರಾಗುತ್ತದೆ. ಕಲೆ ಎಂದರೆ ಸೌಂದರ್ಯ, ಕಲೆ ಎಂದರೆ ಪರಮಾನಂದ, ಕಲೆ ಎಂದರೆ ಪರಿಪೂರ್ಣತೆ. ಪರಿಪೂರ್ಣತೆ ಸುಲಭಕ್ಕೆ ದಕ್ಕುವುದಿಲ್ಲ. ಹಾಗಾಗಿಯೇ ಯಾವ ನಿಜವಾದ ಕಲಾಸಾಧಕನೂ ತಾನು ಪರಿಪೂರ್ಣ ಎಂದು ಬೀಗುವುದಿಲ್ಲ. ಬದುಕು ಕಲೆ ಎರಡೂ ಸಾಗರದಂತೆ. ಅಗಾಧ. ಹಾಗಾಗಿ ಬಿಂದು ಮಾತ್ರವಾಗಿ ಅದರಲ್ಲಿ ಸೇರಿ ಹೋಗುವುದಷ್ಟೇ ನಮಗುಳಿದದ್ದು. ಹಾಗೆ ಬಿಂದುವಾಗಿ ಸೇರಿಹೊಗುವುದು ಹೇಗೆ, ಸೃಷ್ಟಿಯಲ್ಲಿ ಒಂದಾಗುವುದು ಹೇಗೆ? ಎನ್ನುವುದರತ್ತ ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾ? ಓದಿದ ಮೇಲೆ ಅದು ಅವರವರಿಗೆ ದಕ್ಕುವ ಉತ್ತರ ಹಾಗ...