ಫೇಸ್ಬುಕ್ ಮಾಯಾಜಾಲ

ತಿಂಡಿ ತಿಂದು ಆರಾಮಾಗಿ ಕಾಫಿ ಕುಡಿಯುತ್ತಾ ಕುಳಿತಿರುವಾಗಲೇ  ಫೋನ್ ರಿಂಗಾಯಿತು. ಎತ್ತಿ ಹಲೋ ಅನ್ನುವುದರೊಳಗೆ ಬೇಗ ಬಾ ಮಾತಾಡಬೇಕು ಅನ್ನುವ ಅಪ್ಪಣೆ. ಏನಾಯ್ತೆ ಎನ್ನುವುದರೊಳಗೆ ಫೋನ್ ಮೌನವಾಗಿತ್ತು. ಏನಾಯ್ತೋ ಅನ್ನುವ ಆತಂಕದಲ್ಲಿ ಧಾವಿಸಿದವಳ ಎದುರು ಮೊಬೈಲ್ ಪರದೆ ಹಿಡಿದಳು...

ಸಮಯ ಕಳೆಯಲು ಹೊಸತೊಂದು ಮಾರ್ಗ ಸಿಕ್ಕಿತ್ತು. ಮದುವೆಯಾದ ಮೇಲೆ ಅತ್ತೆಯ ಮನೆಗೆ ಅಡಿಯಿಡುವ ನವ ವಧುವಿನಂತೆ ಕೊಂಚ ಆತಂಕ, ಸ್ವಲ್ಪ ಬೆರಗು, ತುಸು ಕುತೂಹಲ, ಅವ್ಯಕ್ತ ಪುಳಕ, ಹೊತ್ತು ಫೇಸ್ಬುಕ್ ಪ್ರವೇಶಿಸಿದ್ದಳು.  ಒಮ್ಮೆ ಆ ಮಾಯಾಜಾಲಕ್ಕೆ ಕಾಲಿಟ್ಟು ಒಳಬಂದ ಮೇಲೆ ಗಡಿಯಾರದ ಮುಳ್ಳುಗಳೂ ಓಡುತ್ತವೇನೋ ಅನ್ನಿಸುವ ಹಾಗೆ ಸಮಯ ಉರುಳಿ ಹೋಗುತಿತ್ತು. ಕೈ ಬೆರಳ ತುದಿಯಲ್ಲಿ ಅಸಂಖ್ಯಾತ ಜನರೂ, ವೈವಿಧ್ಯಮಯ ವಿಷಯಗಳು, ಹೊಸ ಸ್ನೇಹ, ಹೊಸ ಬಂಧ ಹೀಗೆ ಹೊಸತು ಎಲ್ಲೆಲ್ಲೂ ಆವರಿಸಿ ಬದುಕೂ ಹೊಸತೆನಿಸಿತ್ತು. ಹಂಚಿಕೊಳ್ಳಲು ವೇದಿಕೆಯಾಗಿ ಜೊತೆಯಾಗಿತ್ತು. ಕಾಲ ಪರಿವಿಲ್ಲದೆ ಸರಿದು ಹೋಗುತಿತ್ತು.

ಅಪರಿಚಿತರಿಬ್ಬರೂ ಫೇಸ್ಬುಕ್ ನಲ್ಲಿ ಪರಿಚಿತರಾಗಲು ಬಹಳ ಸಮಯವೇನೂ ಬೇಕಾಗಿರಲಿಲ್ಲ. ಲೈಕ್ ಕಾಮೆಂಟ್ ಗಳ ಹೊಸ್ತಿಲು ದಾಟಿ  ಮೆಸ್ಸೆಂಜರ್ ಬಾಗಿಲು ತೆರೆದು ಬಂದ  ಸ್ನೇಹ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು. ಮಾತು, ನಗು, ಓಡಾಟ, ಗಾಸಿಪ್ ಎಲ್ಲವೂ ಮಳೆಗಾಲದಲ್ಲಿ  ದಬ ದಬನೆ ಧುಮ್ಮಿಕ್ಕುವ ಜಲಪಾತದಂತಿತ್ತು.  ಸುರಿಯುವ  ಸಂಭ್ರಮದಲ್ಲಿ  ಬೇಸಿಗೆ ಬಂತು ನೀರು ಬತ್ತಿತು ಅನ್ನುವುದು ಅರಿವಾಗುವುದರೊಳಗೆ ಅಲ್ಲಿ ನದಿ ಒಣಗಿತ್ತು. ನಂಬಿಕೆಯಿಟ್ಟು ಆಡಿದ ಅಷ್ಟು ಮಾತುಗಳು ಯಾವ್ಯಾವುದೋ ಬಣ್ಣ ಪಡೆದು ಗೋಡೆಯಲ್ಲಿ ಫ್ಲೆಕ್ಸ್ ಆಗಿ ರಾರಾಜಿಸಿದಾಗಲೇ ಅವಳು ಎಚ್ಚರಾಗಿದ್ದು ಮತ್ತು ಬೆಚ್ಚಿ ಬಿದ್ದಿದ್ದು.

ನೀನೆ ಹೇಳು ಒಟ್ಟಿಗಿದ್ದಿದ್ದು, ಇಬ್ಬರೂ ಸೇರಿ ಮಾತಾಡಿದ್ದು ನಕ್ಕಿದ್ದು, ನಂಬಿದ್ದು ಎಲ್ಲವೂ ಸತ್ಯ.. ಒಂದು ಬೇಸಿಗೆ ಇಬ್ಬರ ನಡುವಿನ ಸಂಬಂಧವನ್ನು ಹೀಗೆ ಸಾರ್ವಜನಿಕವಾಗಿ ಬೆತ್ತಲಾಗಿಸಬಹುದೇ... ನಂಬಿಕೆ ಜೋತೆಗಿರುವವರೆಗೆ ಮಾತ್ರವಾ .. ಹೋಗ್ಲಿ ನಿಜವಾದರೂ ಹೇಳಬಹುದಲ್ಲಾ.. ಈ ಬಣ್ಣ ಬಳಿಯುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನೆಗಳ ಮಳೆ ಸುರಿಸುವವಳ ಕಂಡು ಮಳೆಯನ್ನು ನೋಡುವಾಗ ಮೂಕವಾಗುವ ಹಾಗೆಯೇ ಮೌನವಾಗಿದ್ದೆ. 
ಸ್ನೇಹವಿದ್ದಿದ್ದು ಸತ್ಯ.. ಸಲಿಗೆಯಿದ್ದಿದ್ದು ಪರಮ ಸತ್ಯ .. ಎಲ್ಲವನ್ನೂ ಹಂಚಿಕೊಂಡಿದ್ದು, ನಿಸೂರಾಗಿದ್ದು, ನಕ್ಕಿದ್ದು, ಅತ್ತಿದ್ದು,  ಗಾಸಿಪ್ ಮಾಡಿದ್ದು ಎಲ್ಲವೂ ಹೌದು. ಆಮೇಲೆ ಮಳೆಗಾಲದ ನಂತರದ  ಬೇಸಿಗೆಯ ನದಿಯಂತೆ ಅದು ಬತ್ತಿ ಹೋಗಿದ್ದು, ಸತ್ತಿದ್ದು ಸತ್ಯಸ್ಯ ಸತ್ಯ..

 ಪ್ರತಿ ಮನುಷ್ಯನೂ ಹೇಗೆ ಭಿನ್ನನೋ ಅವನು ಯೋಚಿಸುವ ರೀತಿಯೂ ಹಾಗೆಯೇ ಭಿನ್ನ. ಸಣ್ಣ ಸಣ್ಣ ವಿಚಾರಗಳನ್ನೂ ಸಹ ನಾವು ನೋಡುವ ದೃಷ್ಟಿಕೋನ ಬದುಕಿನಲ್ಲಿ ಸಾಕಷ್ಟು ಬದಲಾವಣೆಯನ್ನು ತರುವಷ್ಟು ಸಮರ್ಥವಾಗಿರುತ್ತದೆ. ಎಷ್ಟೋ ಸಲ ಹೊಸ ಸಂಬಂಧಗಳು ಹುಟ್ಟಿ ಕೊಂಡಾಗ ಅದು ಶಾಶ್ವತ ಎಂದೇ ಭಾವಿಸುತ್ತೇವೆ. ಅದೇ ನಂಬಿಕೆಯಲ್ಲಿ ಮೈಮರೆತೂ ಬಿಡುತ್ತೇವೆ.  ನದಿಯ ಆಳ ಇಳಿದು ತಿಳಿಯಬೇಕು, ಜನರ ಜೊತೆ ಇದ್ದು ತಿಳಿಯಬೇಕು ಅನ್ನುವುದು ಹಳೆಯ ಗಾದೆಯ ಮಾತು. ದೂರದಲ್ಲಿದ್ದಾಗ ಇಷ್ಟವಾಗುವುದು ಎಷ್ಟೋ ಸಲ  ಹತ್ತಿರ ಬಂದಾಗ ಕಷ್ಟವೆನಿಸುತ್ತದೆ. ಸಂಪರ್ಕ ಜಾಸ್ತಿಯಾದಂತೆ ನಿಜರೂಪವೂ ಅರ್ಥವಾಗತೊಡಗುತ್ತದೆ. ಹತ್ತಿರವಾಗುತ್ತಿದ್ದಂತೆ ದೋಷಗಳೂ ಕಾಣಿಸುತ್ತವೆ. ದೂರದಿಂದ ಎಲ್ಲವೂ ಅಸ್ಪಷ್ಟ. ಹತ್ತಿರದಲ್ಲಿ ಎಲ್ಲವೂ ಸ್ಪಷ್ಟ. ಹಾಗಾಗಿ ಒಂದು ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯ ಹಾಗೂ ಅತ್ಯಗತ್ಯ.

ಮನಸ್ಸು ತುಂಬಾ ಸೂಕ್ಷ್ಮ. ಯಾವ ಸಂದರ್ಭದಲ್ಲಿ ಅದು ಹೇಗೆ ವರ್ತಿಸುತ್ತದೆ ಅನ್ನುವುದನ್ನ ಸ್ವತಃ ನಾವೂ ಹೇಳಲಾಗುವುದಿಲ್ಲ. ಹಾಗಾಗಿ ಕೆಲವೊಮ್ಮೆ ಎಂಥ ಗಟ್ಟಿ ಸಂಬಂಧವೆಂದು ಕೊಂಡರೂ ಯಾವುದೋ ಒಂದು ಕ್ಷಣದ ವರ್ತನೆಗೋ, ಮಾತಿಗೋ ಮನಸ್ಸು ಘಾಸಿಗೊಳ್ಳುತ್ತದೆ. ಆಗ ಆವೇಶಕ್ಕೆ ಮನಸ್ಸು ಕೊಡದೆ ತಾಳ್ಮೆವಹಿಸುವುದು ಮುಖ್ಯವಾಗುತ್ತದೆ. ಆ ಒಂದು ಕ್ಷಣ ಕಳೆದರೆ ಆ ಆವೇಶ, ತೀವ್ರತೆ ತಗ್ಗುತ್ತದೆ. ಆದರೆ ಬದುಕು ವೇಗಕ್ಕೆ ಹೊಂದಿಕೊಂಡಿದೆ. ಹಾಗಾಗಿ ಒಂದು ಕ್ಷಣ ತಡೆಯುವುದು ಸಮಯ ವ್ಯರ್ಥ ಅನ್ನಿಸಿ ಬಿಡುತ್ತದೆ. ಹಾಗಾಗಿ ಅಪಘಾತ ತೀರಾ ಸಹಜ. ಅಪಘಾತವಾದ ಮೇಲೆ ಸಾವು, ನೋವು ಎಲ್ಲವೂ ಅನುಭವಿಸಲೇ ಬೇಕು.

ಅಲ್ಲಿಯವರೆಗೂ ಎಲ್ಲವೂ ಸಹಜವಾಗಿಯೇ ನಡೆದರೂ  ಅಮೇಲಿನ ನಮ್ಮ ವರ್ತನೆಗಳು ಮಾತ್ರ ನಮ್ಮ ಸಂಸ್ಕಾರದ ಮೇಲೆ ಡಿಪೆಂಡ್ ಆಗಿರುತ್ತದೆ. ಸಾವಿಗೆ ಗೌರವ ಕೊಡಬೇಕು ಅನ್ನುತ್ತಾರೆ. ಒಂದು ಸಂಬಂಧ ಸತ್ತಾಗಲೂ ಕೂಡಾ ಅದೇ ನಿಯಮ ಅನ್ವಯವಾಗುತ್ತದೆ. ಅದನ್ನು ಸಂಸ್ಕಾರ ಮಾಡಿಬಿಡಬೇಕು. ಕಳೆದ ಕ್ಷಣಗಳು ಪ್ರಾಮಾಣಿಕವಾಗಿದ್ದಾಗ ಆಮೇಲೆ ಅಪ್ರಾಮಾಣಿಕರಾಗುವುದು ಸರಿಯಲ್ಲ. ಅದು ಎದುರಿನ ವ್ಯಕ್ತಿಗೆ ಮಾತ್ರ ಮಾಡುವ ಮೋಸವಲ್ಲ, ತನಗೆ ತಾನು ಮಾಡಿಕೊಳ್ಳುವ ದ್ರೋಹ ಕೂಡಾ. ಹಾಗಾಗಿ ಮೌನವಾಗಿ ಎದ್ದು ಹೊರಡಬೇಕು.  ಸದ್ದಿಲ್ಲದೇ ವಿದಾಯ ಹೇಳೋದೂ ಸಹ ಒಂದು ಘನತೆ.. ಒಂದು ಸಂಬಂಧಕ್ಕೆ ಕೊಡುವ ಗೌರವ. ಸಾವಿಗೆ ಸಲ್ಲಿಸುವ ಶ್ರದ್ಧಾಂಜಲಿ ಸಹ.  ಇಲ್ಲಿ ಆತ್ಮಸಾಕ್ಷಿಗಷ್ಟೇ ಉತ್ತರ ಕೊಡಬೇಕು..
ಬೇರೆಯವರ ವರ್ತನೆಗಳ ಬಗ್ಗೆ ಆಲೋಚಿಸಬಾರದು.

ಲಾಗಿನ್ ಆಗುತ್ತಿದ್ದ ಹಾಗೆ ಹುಟ್ಟುವ ಮಾತುಗಳು, ತೆರೆದುಕೊಳ್ಳುವ ಜಗತ್ತು, ಸಿಗುವ ಜನಗಳು, ಬೆಸೆವ ಸಂಬಂಧಗಳು  ಲಾಗೌಟ್ ಆಗುತ್ತಿದ್ದ ಹಾಗೇ ಸತ್ತು ಹೋಗುತ್ತದೆ. ಕಣ್ಣೆದಿರಿನಿಂದ ಮಾಯವಾಗುತ್ತದೆ. ವಾಸ್ತವ ಬದುಕಿನಲ್ಲಿ ಎದುರಾಗುವ ಗಳಿಗೆಗಳು ತುಂಬಾ ಅಪರೂಪ. ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಇದು ದಿನ ನಿತ್ಯದ ಬದುಕಿನಲ್ಲಿ ಒಂದು ಭಾಗವೇ ಹೊರತು ಅದೇ ಬದುಕಲ್ಲ. ಲಾಗಿನ್ ಆಗದೆ ಹೋದರೆ ಅದು ಎದುರಾಗುವುದೂ ಇಲ್ಲ.  ಅದರ ಹೊರತಾಗಿಯೂ ಬದುಕಿದೆ. ಮತ್ತು ಅದು ಚೆನ್ನಾಗಿದೆ. ಒಮ್ಮೆಯೂ ನೋಡಿರದ, ಮಾತಾಡದ ಅಸಲಿಗೆ ವಿಷಯದ ಬಗ್ಗೆ ಸರಿಯಾದ ಅರಿವೇ ಇಲ್ಲದೇ ಕಾಮೆಂಟ್ ಮಾಡುವ ಅಪರಿಚಿತ ದನಿಗಳ ಬಗ್ಗೆ ಯೋಚಿಸೋ ಅಗತ್ಯವಿಲ್ಲ.. ಎಷ್ಟೋ ಬೆರಳುಗಳಿಗೆ ಸ್ಕೋರ್ಲ್  ಮಾಡಿದ ಮೇಲೆ ನೆನಪೂ ಇರುವುದಿಲ್ಲ.

ಎದುರಾಬದುರು ಕುಳಿತು ಮಾತಾಡುವಾಗ ಒಮ್ಮೆ ಗಮನಿಸಿ. ಆಡುವ ಮಾತಿನ ಬಗ್ಗೆ ಒಂದು ಎಚ್ಚರಿಕೆ ಇರುತ್ತದೆ. ನೋಡುವ ನೋಟ ತೀರಾ ಕೃತಕವಾಗದಂತೆ ತಡೆಯುತ್ತದೆ. ಅಲ್ಲೊಂದು ರೇಖೆ ಇರುತ್ತದೆ ಅದು ನಮ್ಮನ್ನು ನಿಯಂತ್ರಿಸುತ್ತದೆ. ಮರುದಿನ ಬೆಳಗ್ಗೆ ಮತ್ತೆ ಮುಖ ನೋಡಬೇಕಾದ ಅನಿವಾರ್ಯತೆ ಹದ್ದು ಮೀರದಂತೆ ಕಾಪಾಡುತ್ತದೆ. ಎಲ್ಲಕ್ಕಿಂತ ಆತ್ಮಸಾಕ್ಷಿ ಗಮನಿಸುತ್ತಿರುತ್ತದೆ. ವಾಸ್ತವ ಅನ್ನುವ ಗುರುತ್ವಾಕರ್ಷಣೆ ಕಾಲು ನೆಲದ ಮೇಲೆಯೇ ಇರುವಂತೆ ನೋಡಿಕೊಳ್ಳುತ್ತದೆ. ಯಾರೂ ಇಲ್ಲದಾಗ ನಿನ್ನ ವರ್ತನೆಯನ್ನು ಗಮನಿಸು ಅದೇ ನಿನ್ನ ವ್ಯಕ್ತಿತ್ವ ಅಂತ ಎಲ್ಲೋ ಓದಿದ ನೆನಪು. ಎದುರಿಗೆ ವ್ಯಕ್ತಿ ಇಲ್ಲದಾಗ, ನಾಳೆ ಅವನ ಮುಖ ನೋಡುವ ಅನಿವಾರ್ಯತೆ ಇಲ್ಲದಾಗ ಅಸಲಿಗೆ ಒಬ್ಬರಿಗೊಬ್ಬರು ಎದುರಾಗಲಾರೆವು ಎನ್ನುವ ಧೈರ್ಯ ಇದ್ದಾಗ ನಮ್ಮ ನಿಜವಾದ ವ್ಯಕ್ತಿತ್ವದ ಅನಾವರಣ ಆಗುತ್ತದೆ. ಏನನ್ನು ಬೇಕಾದರೂ ಬರೆಯುವ ಭಂಡತನ ಶುರುವಾಗುತ್ತದೆ. ಇಲ್ಲಿ ಯಾರಿಗೂ ಯಾರೂ ಸಮರ್ಥನೆ ಕೊಡಬೇಕಾಗಿಲ್ಲ, ನಿಜ ತಿಳಿಯುವ ಆಸಕ್ತಿ ಹಾಗೂ ಸಮಯ ಯಾರಿಗೂ ಇಲ್ಲ.

ಲಾಗಿನ್ ಲಾಗೌಟ್ ಗಳ ನಡುವಿನ ಬದುಕು ತೀರಾ ಚಿಕ್ಕದು.. ಅದೊಂದು ನಿದ್ದೆಯಲ್ಲಿನ ಕನಸಿನಂತೆ.  ಬದುಕಿನ ಗತಿಗೂ, ಜೀವಂತಿಕೆಗೂ, ಇಲ್ಲಿ ಎದುರಾಗುವ ವ್ಯಕ್ತಿಗಳಿಗೂ ಅಲ್ಲಿಗೂ ಎಷ್ಟು ಕನೆಕ್ಷನ್ ಇದೆ ಒಮ್ಮೆ ಯೋಚಿಸು..ಬೆಳಗಾದರೆ ನಮ್ಮ ಕಣ್ಣು ಮುಂದೆ ಕಾಣಿಸುವ, ಒಡನಾಡುವ, ಸಂಬಂಧ ಹೊಂದಿರುವ ಜನಗಳೇ ಬೇರೆ. ಅಲ್ಲಿಯ ಜಗತ್ತೇ ಬೇರೆ. ಎಷ್ಟೇ ಚೆನ್ನಾಗಿದ್ದರೂ ನಾಟಕ ಮುಗಿಯಲೇ ಬೇಕು ಹಚ್ಚಿದ ಬಣ್ಣ ಕರಗಲೇ ಬೇಕು. ಒಂದಷ್ಟು ದಿನ ಮೊಬೈಲ್ ಮುಟ್ಟದೇ ಪರೀಕ್ಷಿಸು. ನಿನ್ನ ಆಲೋಚನೆಗಳಲ್ಲಿ ಕಲ್ಪನೆಗಳು ಎಷ್ಟು, ಭ್ರಮೆ ಎಷ್ಟು,ವಾಸ್ತವ ಹೇಗಿದೆ ಅನ್ನುವುದರ ಅರಿವಾಗುತ್ತದೆ. ನಮ್ಮ ದುಃಖ ಕೂಡಾ ಅರ್ಥವಿಲ್ಲದ್ದು ಅನ್ನೋದೂ ಗೊತ್ತಾಗುತ್ತದೆ.

ಯಾರನ್ನೂ ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಯಾರಿಗಾಗಿಯೋ ನಮ್ಮ ಘನತೆ, ನೆಮ್ಮದಿ ಎರಡೂ ಬಲಿಕೊಡುವುದು ಕೂಡಾ ಸರಿಯಲ್ಲ.  ನಾವು ವಾಸ್ತವದ ಬಗ್ಗೆ ಯೋಚಿಸುವುದಕ್ಕಿಂತ ಕಲ್ಪನೆಗೆ ಹೆದರುವುದು ಜಾಸ್ತಿ.  ಭ್ರಮಾಲೋಕ ಆಪ್ತವಾಗುವಷ್ಟು ನೈಜತೆ ಹಿಡಿಸುವುದಿಲ್ಲ. ಇಡೀ ಪ್ರಕೃತಿಯಲ್ಲಿ ಎಲ್ಲವೂ ಭಿನ್ನ. ಆಲೋಚನೆಗಳೂ ಭಿನ್ನ, ಸಂಸ್ಕಾರವೂ ಭಿನ್ನ. ಸರಿ ಹೊಂದದಿದ್ದರೆ ಎದ್ದು ಬೇರೆ ದಾರಿ ಹಿಡಿದು ನಡೆಯಬೇಕೇ ಹೊರತು ಅಲ್ಲೇ ಕುಳಿತು ಅಳಬಾರದು. ಕಾಲ ನಿಲ್ಲುವುದಿಲ್ಲ, ಯಾರೂ ನಿಲ್ಲುವುದಿಲ್ಲ. ಕುಳಿತರೆ ನಾವು ಅಲ್ಲೇ ಕುಳಿತರಬೇಕಷ್ಟೇ. ಜಗತ್ತು ಮುಂದೆ ಹೋಗುತ್ತಲೇ ಇರುತ್ತದೆ.

ಪ್ರತಿಯೊಂದಕ್ಕೂ ಒಂದು ಆಯಸ್ಸಿದೆ.  ಮುಗಿದ ಮೇಲೆ ಅದು ಹೋಗಲೇಬೇಕಿದೆ. ನಾವೂ ಕಳಿಸಲೇ ಬೇಕಿದೆ. ಇಲ್ಲವಾದಲ್ಲಿ ಅದು ಕೊಳೆಯುತ್ತದೆ. ಕೊಳೆಯುವುದು ಅದಾದರೂ ಭರಿಸಲು ಕಷ್ಟವಾಗುವುದು ನಮ್ಮ ಮೂಗಿಗೆ. ಉಸಿರು ಗಟ್ಟುತ್ತದೆ. ಪ್ರತಿಕ್ಷಣವನ್ನೂ ಸಂಪೂರ್ಣವಾಗಿ ಬದುಕಿ ಬಿಡುವುದಷ್ಟೇ ನಮ್ಮ ಮುಂದಿರುವುದು. ಬದುಕಿ ಬಿಡು. ಹೋಗುವವರಿಗೆ ಒಂದು ಘನತೆಯ ವಿದಾಯ ಹೇಳಿಬಿಡು. ಹಠಹೊತ್ತು ಅದನ್ನೂ ಕೊಳೆಸಿ ನೀನೂ ಉಸಿರುಗಟ್ಟಿಸಿ ಕೊಳ್ಳಬೇಡಾ, ಬದುಕು ಚಿಕ್ಕದು, ಕ್ರಮಿಸಬೇಕಾದ ದೂರ ದೊಡ್ಡದು. ಬರುವವರು ಬರುವಾಗ ಹೋಗುವವರು ಹೋಗಬೇಕು ನೋಡು ಇಲ್ಲಿ ಯಾವುದೂ ಅಂತ್ಯವಲ್ಲ, ಯಾವುದೂ ಮೊದಲೂ ಅಲ್ಲ ಅಲ್ವೇನೆ ಅನ್ನುವುದರೊಳಗೆ ಫೋನ್ ಮತ್ತೊಮ್ಮೆ ಕರೆಯಿತು...

ಮಾತಾಡಿ ತಿರುಗಿದೆ, ಯಾವುದೋ ಹಾಡು ಗುನುಗುತ್ತಾ ಹದವಾಗಿ ರೊಟ್ಟಿ ತಟ್ಟುತ್ತಿದ್ದಳು.
ತುಟಿಯಂಚಿನಲ್ಲಿ ಕಿರುನಗು ಮಿನುಗುತಿತ್ತು.



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...