ಮೀ ಟೂ

ದಿನದಿನಕ್ಕೂ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ ಕ್ಷಣ ಕ್ಷಣಕ್ಕೂ ತೆಗೆದುಕೊಳುತ್ತಿರುವ ತಿರುವು ಮಾತ್ರ ಗೊಂದಲ ಹುಟ್ಟಿಸುತ್ತಿದೆ. ಬಳಸಿಕೊಳ್ಳುವಿಕೆ ಇವತ್ತಿಗೆ ಹೊಸದಲ್ಲ. ಘಾತುಕತನ ಅನ್ನೋದು ಅಂದಿನಿಂದಲೂ ಇದೆ. ಮುಂದುವರಿದ, ಅಭಿವ್ಯಕ್ತಿ ಸ್ವಾತಂತ್ರ್ಯ, ನನ್ನ ಬದುಕು ನನ್ನ ಇಚ್ಚೆ ಅನ್ನುವ ಈ ಕಾಲದಲ್ಲೂ ಇದೆ. ಹಾಗೆ ಹೇಳುವುದಾದರೆ ಈಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಇದೆಯಾ?

ರಸ್ತೆಯಲ್ಲಿ ಹೋಗುವಾಗ, ಬಸ್ಸಿನಲ್ಲಿ ಕುಳಿತಾಗ, ಫಿಲಂ ಥಿಯೇಟರ್, ಶಾಲಾ ಕಾಲೇಜ್,  ಜನ ಜಂಗುಳಿ ಸೇರುವ ಕಡೆ ಕಾಮುಕರು ಇದ್ದೇ ಇರುತ್ತಾರೆ. ಅವರಿಗೆ ಆ ಕ್ಷಣಕ್ಕೆ ಹೆಣ್ಣು ಅನ್ನುವ ಒಂದು ಜೀವ ಸಾಕು. ಹಸಿದ ಹೆಬ್ಬುಲಿಗಳ ಹಾಗೆ ವರ್ತಿಸುತ್ತಾರೆ. ಕಾಮಾತುರಾಣಂ ನ ಭಯಂ ನ ಲಜ್ಜಾಂ ಅನ್ನೋದು ಅಕ್ಷರಶಃ ಅರಿವಿಗೆ ಬರುತ್ತದೆ. ಆದರೆ ಬಲಿಯಾದವರ ಪರಿಸ್ಥಿತಿ.. ಕೆಲವೊಮ್ಮೆ ಯಾರೂ ಎನ್ನುವುದು ಅರಿವಿಗೆ ಬರದೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಅಲ್ಲಿ ಆಗ ದನಿ ಎತ್ತಲಿಲ್ಲ ಎನ್ನುವುದು ಹಾಸ್ಪಾಸ್ಪದ ಮಾತ್ರವಲ್ಲ ಅಮಾನುವಿಯ ಕೂಡಾ.

ಆದರೆ ಉದ್ಯೋಗದ ಸ್ಥಳದಲ್ಲಿ ಇಂಥ ಪರಿಸ್ಥಿತಿ ಎದುರಾದಾಗ ಅಲ್ಲಿ ವ್ಯಕ್ತಿ ಯಾರೆಂದು ಗೊತ್ತಿರುತ್ತದೆ. ಅನಿವಾರ್ಯತೆ ಹಾಗೂ ಅಸಹಾಯಕತೆ ಕೆಲವೊಮ್ಮೆ ಉಸಿರುಬಿಗಿ ಹಿಡಿದು ನೋಡಿಯೂ ನೋಡದಂತೆ ಇರುವ ಹಾಗೆ ಆಗುವ ಆಗುತ್ತದೆ ಎನ್ನುವುದು ಸತ್ಯವಾದರೂ ಉಸಿರು ಎತ್ತಬೇಕು ಎನ್ನುವುದು ಅಷ್ಟೇ ನಿಜ. ಆದರೆ ಅಲ್ಲಿ ಹಾಗೆ ಎತ್ತಿದ ಉಸಿರಿಗೆ ಶಕ್ತಿ ತುಂಬಲಾಗುತ್ತದೆಯೇ ಅಥವಾ ಅದುಮಲಾಗುತ್ತದಾ ಎನ್ನುವುದು ಎಲ್ಲಕ್ಕಿಂತ ಮುಖ್ಯ. ಆದರೆ ಕಾರ್ಪೊರೇಟ್ ಜಗತ್ತಿನ ಸವಾಲುಗಳೇ ಬೇರೆ. ಅಲ್ಲಿ ಧಿಕ್ಕರಿಸುವ, ಹೊರಬರುವ ಸಾಧ್ಯತೆಗಳು ಇವರಿಗಿಂತ ಹೆಚ್ಚು ಇರುತ್ತದೆ. ಆದರೆ ಕೆಲವೊಮ್ಮೆ ಕೆರಿಯರ್, ಹೆಸರು, ಹಣದ ಕನಸಿನಲ್ಲಿ ಒಪ್ಪಂದಗಳು ಜರುಗುತ್ತವೆ. ಎಲ್ಲರೂ ಸುಭಗರೇ ಅವಕಾಶ ಸಿಕ್ಕುವವರೆಗೆ ಅನ್ನೋದು ಗಾದೇ ಮಾತು. ಕೇಳುವುದಕ್ಕೆ ಕಹಿ ಅನ್ನಿಸಿದರೂ ಅದಕ್ಕಿಂತ ಕಹಿ ಹಾಗೂ ಕ್ರೌರ್ಯ ಅನ್ನಿಸುವುದು ಅವಕಾಶ ಬಳಸಿಕೊಂಡು ಒಂದು ಹಂತಕ್ಕೆ ಬಂದ ಮೇಲೆ ದೌರ್ಜನ್ಯದ ಆರೋಪ ಮಾಡಿದಾಗ.

ಆದರೆ ಈಗ ಇಲ್ಲಂತೂ ಇದು ತೆಗೆದುಕೊಂಡು ತಿರುವು ಮಾತ್ರ ವಿಚಿತ್ರವೇ. ಇಲ್ಲಿ ಆರೋಪ ಮಾಡಿದವರು, ಅವರ ಜೊತೆಗೆ ನಿಂತವರನ್ನು ನೋಡಿದಾಗ ಉದ್ದೇಶ ಬೇರೆಯದೇ ಇದೆಯೇನೋ ಎನ್ನುವ ಸಂದೇಹ ಮೂಡುವ ಹಾಗಾಗುತ್ತಿದೆ. ಒಂದು ಹೆಣ್ಣಿನ ಪರ ನಿಂತವರು ಇನ್ನೊಂದು ಸಿದ್ಧಾಂತಕ್ಕೆ ಸೇರಿದ ಇನ್ನೊಂದು ಹೆಣ್ಣಿನ ಬಗ್ಗೆ ಸಭ್ಯವಲ್ಲದ ರೀತಿಯಲ್ಲಿ ಬರೆಯುವುದು ಅದಕ್ಕೆ ಬರುವ ಅಪಹಾಸ್ಯ ರೀತಿಯ ಕಾಮೆಂಟ್ ಗಳನ್ನೂ ಉತ್ತೇಜಿಸುವ ಹಾಗೆ ಉತ್ತರಿಸುವುದನ್ನ ನೋಡಿದಾಗ ಇದು ಒಂದು ಸಂಚಿನ ಭಾಗ ಅನ್ನಿಸುವುದರಲ್ಲಿ ತಪ್ಪೇನಿದೆ? ಒಂದು ಪರ ವಿದ್ದಾಗ ಇನ್ನೊಂದು ವಿರೋಧ ಇದ್ದೆ ಇರುತ್ತದೆ. ಪರದ ಧ್ವನಿಯ ತೀವ್ರತೆಯ ಆಧಾರದ ಮೇಲೆ ವಿರೋಧದ ದನಿಯ ತೀವ್ರತೆ ರೂಪುಗೊಳ್ಳುತ್ತಾ ಹೋಗುತ್ತದೆ. ಯಾವ ವ್ಯಕ್ತಿ, ಯಾವ ಸಂದರ್ಭ ಎಲ್ಲವೂ ಮುಖ್ಯವಾಗಿ  ಅಲ್ಲಿಗೆ ಅದು ವಿಷಯಾಧಾರಿತವಾಗದೆ ವ್ಯಕ್ತಿ ಆಧಾರಿತವೋ, ಸಿದ್ಧಾಂತದ ಮೇಲೆ ಆಧಾರಿತವೋ ಆಗಿಬಿಡುತ್ತದೆ.

ಮೀ ಟೂ ಅನ್ನುವುದು ವಿಷಯಾಧಾರಿತವಾದರೆ ಅದಕ್ಕಿಂತ ಒಳ್ಳೆಯ ಹೆಜ್ಜೆ ಬೇರೊಂದಿಲ್ಲ. ಆದರೆ ಹೆಣ್ಣು ಎನ್ನುವುದು ಟ್ರಂಪ್ ಕಾರ್ಡ್ ಆದರೆ ಇದು ಅಪಹಾಸ್ಯಕ್ಕೆ ಈಡಾಗುತ್ತದೆ. ದೌರ್ಜನ್ಯಕ್ಕೆ ಲಿಂಗ ಭೇಧವಿಲ್ಲ. ಅದು ಬಲವಂತರು ಬಲಹೀನರ ಮೇಲೆ ನಡೆಸುವ ದೌರ್ಜನ್ಯ ಅಷ್ಟೇ. ಯಾವ ರಂಗದಲ್ಲಿ ಈ ಶೋಷಣೆಯಿಲ್ಲ ಎಂದು ಕೇಳಿದರೆ ಉತ್ತರ ಶೂನ್ಯ. ಇದು ಎಲ್ಲರೂ ಒಪ್ಪಿಕೊಳ್ಳಲೇ ಬೇಕಾದ ಬಿಚ್ಚಿಟ್ಟ ಗುಟ್ಟು. ಆಗ ಯಾಕೆ ವಿರೋಧಿಸಲಿಲ್ಲ ಅನ್ನುವುದು ಒಂದು ಹಂತದವರೆಗೆ ಸತ್ಯವಾದರೂ ಒಪ್ಪಿಕೊಳ್ಳುವ ವಾತಾವರಣವನ್ನು ನಾವು ಸೃಷ್ಟಿಸಿದ್ದೆವೆಯೇ ಎಂದರೆ ಅದಕ್ಕೂ ಉತ್ತರ ಬಹಳಷ್ಟು ಸಾರಿ ಉಹೂ ಎಂದೇ ಆಗುತ್ತದೆ. ಹೊಂದಿಕೊಂಡು ಹೋಗುವುದು ಕಲಿಯಬೇಕು ಎಂದು ನಾವೇ ಉಪದೇಶ ಮಾಡಲು ತೊಡುಗುತ್ತೇವೆ. ಅದಕ್ಕಿಂತ ಹೆಚ್ಚಾಗಿ ಉಳಿದವರಿಗೆ ಆ ತೊಂದರೆಯಿಲ್ಲ ನಿನಗೆ ಮಾತ್ರ ಯಾಕೆ ಎಂದು ಕೇಳಿ ಅವರನ್ನೇ ತಪ್ಪಿತಸ್ಥರನ್ನಾಗಿ ಕೂಡಾ ಮಾಡಿಬಿಡುತ್ತೇವೆ.

ಅದರಲ್ಲೂ ಗ್ರಾಮೀಣ ಭಾಗದಲ್ಲಿ ನಡೆಯುವ ದೌರ್ಜನ್ಯಗಳನ್ನು ಪ್ರಶ್ನಿಸುವ ವಾತಾವರಣ ಇನ್ನೂ ನಿರ್ಮಾಣವಾಗಲೇ ಇಲ್ಲ. ಅಲ್ಲಿ ಮರ್ಯಾದೆಯ ಹೆಸರಿನಲ್ಲಿ ದನಿಯ ಅವಸಾನವಾಗಿ ಹೋಗುತ್ತದೆ. ದನಿ ಎತ್ತಿದವರನ್ನು ಸಮಾಜ ನೋಡುವ ನೋಟವೇ ಬದಲಾಗಿಹೋಗುತ್ತದೆ. ಮೈ ಮೇಲಿನ ದೌರ್ಜನ್ಯ ಒಂದು ಕ್ಷಣದ್ದಾದರೆ ಮನಸಿನ ಮೇಲೆ ನಡೆಯುವ ದೌರ್ಜನ್ಯ ಕ್ಷಣ ಕ್ಷಣದ್ದು. ಮತ್ತದು ನಿರಂತರ. ಹಾಗಾಗಿ ಆ ದೌರ್ಜನ್ಯಕ್ಕಿಂತ ಈ ದೌರ್ಜನ್ಯವೇ ಭಯಂಕರವೆನ್ನಿಸಿ ಕೇಳುವ ದನಿ ಉಡುಗಿ ಹೋಗುತ್ತದೆ. ಪ್ರಶ್ನಿಸುವುದೇ ಅಪರಾಧವಾಗಿ ಹೋಗುತ್ತದೆ.

ಒಂದು ಹಂತಕ್ಕೆ ಬೆಳೆದ ಮೇಲೆ ದನಿಗೆ ಬೆಲೆಯಿರುತ್ತದೆ. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಈಡಾಗುತ್ತದೆ ಅನ್ನುವುದು ಕೂಡಾ ನಿಜವೇ. ಹಾಗಾಗಿ ಅಪಹಾಸ್ಯಕ್ಕಿಂತ ಹಿಂಸೆಯೇ ಮೇಲು ಅನ್ನುವ ಸನ್ನಿವೇಶಗಳೂ ಇವೆ. ಹಾಗಾದರೆ ಕೇವಲ ಹಿಂಸೆ ಆದಾಗ ಮಾತ್ರ ದನಿ ಎತ್ತಬೇಕೇ? ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಲು ಇದು ಸಕಾಲ. ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದು ಒಂದು ವಿಧಾನವಾದರೂ ರೋಗ ಬರದ ಹಾಗೆ ಎಚ್ಚರಿಕೆವಹಿಸುವುದು ಮುಖ್ಯವಲ್ಲವೇ. ಪುರುಷರ ಶೇವಿಂಗ್ ಕ್ರೀಂ ಜಾಹಿರಾತಿಗೂ ಹೆಣ್ಣನ್ನು ಬಳಸಿಕೊಳ್ಳುವುದನ್ನೂ... ರಿಯಾಲಿಟಿ ಶೋ ಗಳಲ್ಲಿ ಫ್ಲರ್ಟ್ ಮಾಡುವುದನ್ನ, ಅಗತ್ಯವಿಲ್ಲದಿದ್ದರೂ ಹೆಣ್ಣಿನ ಮೈ ಮಾಟ ತೋರಿಸುವುದನ್ನ, ಎಲ್ಲಕ್ಕಿಂತ ಹೆಚ್ಚು ಹೆಣ್ಣಿನ ದೇಹವೇ ಪ್ರಧಾನ ಅನ್ನುವ ಸನ್ನಿವೇಶಗಳನ್ನು ವಿರೋಧಿಸಲು ಕಲಿಯದ ತನಕ ಹಾಗೆ ಬಳಸಿಕೊಳ್ಳುವುದನ್ನ ಖಂಡಿಸುವುದು ಕಲಿಯದ ತನಕ ಈ ಸಮಸ್ಯೆಯೂ ನಿಲ್ಲುವುದಿಲ್ಲವೇನೋ.. ದನಿ ಎದ್ದಿದೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಎಲ್ಲಕ್ಕಿಂತ ಹೆಚ್ಚಾಗಿ ದೇಹ ಮಾರಾಟದ ಸರಕಲ್ಲ ಎನ್ನುವುದು ಪ್ರತಿ ಹೆಣ್ಣು ಅರಿತುಕೊಳ್ಳಬೇಕಾಗಿದೆ. ಮಾರಾಟದ ಸರಕಾದಾಗ ಅದಕ್ಕೆ ಬೆಲೆ ಕಟ್ಟುವ, ಹೇಗೆ ಮಾರಬೇಕು ಎನ್ನುವ, ಹೇಗೆ ತೋರಿಸಿದರೆ ಹೆಚ್ಚು ಆಕರ್ಷಕ ಎನ್ನುವ ಮಾರಾಟ ತಂತ್ರಗಳು ಹುಟ್ಟಿಕೊಳ್ಳುತ್ತವೆ. ಹಣಕ್ಕಾಗಿ ವ್ಯಾಪಾರ ಅಭಿವ್ಯಕ್ತಿಯ ಸ್ವಾತಂತ್ರದ ಹೆಸರಲ್ಲೋ, ಕಲೆಯ ಹೆಸರಲ್ಲೋ ಜರುಗುತ್ತದೆ. ಅಧಿಕಾರ ಹಾಗೂ ಹಣವಿರುವವರು ಕೊಳ್ಳಲು ಸಾಲುಗಟ್ಟಿ ನಿಲ್ಲುತ್ತಾರೆ. ಇಲ್ಲದವರು ಅವಕಾಶಸಿಕ್ಕರೆ ದೊಚಿಕೊಳ್ಳಲು ಯತ್ನಿಸುತ್ತಾರೆ. ಇದು ಜಗತ್ತಿನ ಸರ್ವೇ ಸಾಮಾನ್ಯ ಲಕ್ಷಣ. ನೋಡುವ ನೋಟದಲ್ಲಿ ಅಶ್ಲಿಲತೆ ಇರಬಾರದು ಎನ್ನುವುದು ಎಷ್ಟು ಸತ್ಯವೋ ಅಲಂಕಾರ ಪ್ರಚೋದಿಸುವ ಹಾಗೆ ಇರಬಾರದು ಅನ್ನುವುದು ಅಷ್ಟೇ ಸತ್ಯ. ಎರಡೂ ಒಂದಕ್ಕೊಂದು ಪೂರಕ. ದೇಹ ನಮ್ಮದು ಅದು ಬೇರೆಯವರಿಗೆ ಬಂಡವಾಳ ಆಗಬಾರದು ಅಷ್ಟೇ. ಆ ಸ್ವಾಭಿಮಾನ ನಮ್ಮದಾಗಬೇಕು.

ಹಾಗಾದರೆ ದೌರ್ಜನ್ಯ ಕೇವಲ ಹೆಂಗಸರ ಮೇಲೆ ಮಾತ್ರವಾ ಎಂದರೆ ಉಹೂ ಅದಕ್ಕೆ ಲಿಂಗ ಭೇಧವಿಲ್ಲ. ದೌರ್ಜನ್ಯ ಯಾವಾಗಲೂ ಸಬಲರು ದುರ್ಬಲರ ಮೇಲೆ ನಡೆಸುವ ಕ್ರೌರ್ಯ. ಆದರೆ ಈ ದೇಶದಲ್ಲಿ ಕಾನೂನು ಸದುಪಯೋಗ ಆಗುವುದಕ್ಕಿಂತ ದುರುಪಯೋಗ ಆಗುವುದೇ ಜಾಸ್ತಿ. ನೊಂದವರನ್ನು ಈ ಸಮಾಜ ಮಾನವಿಯತೆಯಿಂದ ನಡೆಸಿಕೊಳ್ಳಲು ಕಲಿತಾಗ ಈ ದನಿಗೆ ಅರ್ಥ ಬರುತ್ತದೆ. ಇಲ್ಲವಾದಲ್ಲಿ ಅವಕಾಶವಾದಿತನಕ್ಕೆ ಕಾರಣವಾಗಿ ಉದ್ದೇಶವೇ ಹಳ್ಳ ಹಿಡಿಯುತ್ತದೆ.


ಬಳಸಿಕೊಳ್ಳಲು ಅವಕಾಶ ಕೊಡುವವರಿರುವರೆಗೂ ಬಳಸಿಕೊಳ್ಳುವವರು ಇದ್ದೇ ಇರುತ್ತಾರೆ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...