ಜೀವನವದೊಂದು ಕಲೆ

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? ।
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥
ಆವುದೋ ಕುಶಲತೆಯದೊಂದಿರದೆ ಜಯವಿರದು ।
ಆ ವಿವರ ನಿನ್ನೊಳಗೆ - ಮಂಕುತಿಮ್ಮ !!

ಬದುಕಿನ ಬಗ್ಗೆ ಡಿ.ವಿ.ಜಿ ಯವರು ಬರೆದ ಅಧ್ಭುತ ಸಾಲುಗಳು ಇವು. ಜೀವನ ಒಂದು ಕಲೆ. ಅದನ್ನು  ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ ಕಲೆಯಾಗಿಸಿ ಕೊಳ್ಳುವುದು ಸಹ ಒಂದು ಕಲೆ. ಕಲೆಯೆಂದರೆ ಕೇವಲ ಲಲಿತಕಲೆಗಳು ಮಾತ್ರವಲ್ಲ, ಬದುಕನ್ನ ಕಲೆಯಾಗಿಸಿಕೊಳ್ಳುವಲ್ಲಿ ಅವುಗಳು ಮೆಟ್ಟಿಲು. ಆದರೆ ಬದುಕೇ ಕಲೆಯಾದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ? ಹಾಗಾದರೆ ಬದುಕನ್ನ ಕಲೆಯಾಗಿಸಿಕೊಳ್ಳುವುದು ಹೇಗೆ? ಅನ್ನುವುದನ್ನೇ ಜೀವನವೊಂದು ಕಲೆ ಎನ್ನುವ ಪುಸ್ತಕ ಹೇಳುತ್ತದೆ. ಕಲೆಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಪುಟ್ಟ ಹಣತೆಯಾಗುತ್ತದೆ. ದಾರಿ ತೋರುವ ಸೊಡರಾಗುತ್ತದೆ.

ಕಲೆ ಎಂದರೆ ಸೌಂದರ್ಯ, ಕಲೆ ಎಂದರೆ ಪರಮಾನಂದ, ಕಲೆ ಎಂದರೆ ಪರಿಪೂರ್ಣತೆ. ಪರಿಪೂರ್ಣತೆ ಸುಲಭಕ್ಕೆ ದಕ್ಕುವುದಿಲ್ಲ. ಹಾಗಾಗಿಯೇ ಯಾವ ನಿಜವಾದ ಕಲಾಸಾಧಕನೂ ತಾನು ಪರಿಪೂರ್ಣ ಎಂದು ಬೀಗುವುದಿಲ್ಲ. ಬದುಕು ಕಲೆ ಎರಡೂ ಸಾಗರದಂತೆ. ಅಗಾಧ. ಹಾಗಾಗಿ ಬಿಂದು ಮಾತ್ರವಾಗಿ ಅದರಲ್ಲಿ ಸೇರಿ ಹೋಗುವುದಷ್ಟೇ ನಮಗುಳಿದದ್ದು. ಹಾಗೆ ಬಿಂದುವಾಗಿ ಸೇರಿಹೊಗುವುದು ಹೇಗೆ, ಸೃಷ್ಟಿಯಲ್ಲಿ ಒಂದಾಗುವುದು ಹೇಗೆ? ಎನ್ನುವುದರತ್ತ ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾ? ಓದಿದ ಮೇಲೆ ಅದು ಅವರವರಿಗೆ ದಕ್ಕುವ ಉತ್ತರ ಹಾಗೂ ಕಂಡುಕೊಳ್ಳುವ ಬೆಳಕಿನ ಮೇಲೆ ನಿರ್ಧರಿತವಾಗುತ್ತದೆ. ಆದರೆ ಹಣತೆಯೊಂದು ಬೆಳಗುವುದು ಮಾತ್ರ ನಿಜ.

ದೇಹದ ಬಹುಪಾಲು ಅಂಶ ಒಳಗೊಂಡಿರುವುದು ನೀರನ್ನು. ಕಲೆ ಒಂದು ಸಾಗರದಂತೆ ಅನ್ನೋದು ಇದಕ್ಕೇನಾ? ಜೀವನ ಕಲೆ ಎಂದಾಗ ನೀರು ಎನ್ನಬಹುದಾ... ಎಷ್ಟೊಂದು ಸಾಮ್ಯ. ನೀರು ನಿಲ್ಲುವುದಿಲ್ಲ ಸದಾ ಚಲಿಸುತ್ತಲೇ ಇರುತ್ತದೆ. ಬದುಕೂ ನಿಲ್ಲುವುದಿಲ್ಲ. ನಿಂತ ನೀರು ನಿಂತ ಬದುಕು ಎರಡೂ ನಾರುತ್ತದೆ. ನೀರಿನ ಹರಿವು ಸದಾ ಸಮುದ್ರದ ಕಡೆಗೆ ಅಂದರೆ ಮೂಲದ ಕಡೆಗೆ. ಬದುಕು ಸಾವಿನ ಕಡೆಗೆ. ಎಲ್ಲಿಂದ ಬಂದಿದ್ದೋ ಅಲ್ಲಿಗೆ ಸೇರಬೇಕು. ಬದುಕೂ ಅಷ್ಟೇ ನೀರು ಅಷ್ಟೇ. ಆದರೆ ಆ ನೀರಿನ ಸಾರ್ಥಕತೆ ತಿಳಿಯುವುದು ಅದು ಹುಟ್ಟಿದ ಜಾಗದಿಂದ ತನ್ನ ಮೂಲ ಸೇರುವವರೆಗೆ ಹರಿಯುವ ದಾರಿಯಲ್ಲಿ. ಬದುಕೂ ಹಾಗೆ. ಹಾಗಾಗಿ ಕಲ್ಲು ಮುಳ್ಳು, ತಿರುವುಗಳಲ್ಲಿ ಜಾಗ ಮಾಡಿಕೊಂಡು ಹರಿಯುವುದೇ ಗುರಿಯಾಗಿಸಿ ಕೊಂಡು ಹೊರಟ ನದಿ  ಕೇವಲ ತಾನು ಬೆಳೆಯುವುದಿಲ್ಲ, ಹಲವರನ್ನು ಬೆಳೆಸುತ್ತದೆ. ಬೆಳೆಯುವ ಹುಮ್ಮಸ್ಸಿನಲ್ಲೂ ಅದು ಗುರಿ ಮರೆಯುವುದಿಲ್ಲ. ಉನ್ಮಾದದಲ್ಲೂ ಕಳೆದು ಹೋಗುವುದಿಲ್ಲ. ಹಾಗಾಗಿ ಬದುಕಿನ ದಾರಿಯೂ ಹೀಗೆ ಸ್ಪಷ್ಟವಾಗಿ, ತಾನು ಬೆಳೆಯುತ್ತ ಜೋತೆಗಿದ್ದವರನ್ನು, ಎದುರಾದುವರನ್ನು ಸಿಕ್ಕ ಪ್ರತಿಯೊಂದನ್ನೂ ಬೆಳೆಸುತ್ತಾ ಹೋದಾಗ ಬದುಕು ಕಲೆಯಾಗುತ್ತದೆ. ಜೀವನ ಸಾರ್ಥಕವಾಗುತ್ತದೆ. ಬಿಂದು ಸಿಂಧುವಿನಲ್ಲಿ ಐಕ್ಯವಾಗುತ್ತದೆ.

ನದಿಯ ಹರಿವಿನಲ್ಲಿ ಅನೇಕ ಸಂಗತಿಗಳು ಜೊತೆಗೂಡುತ್ತವೆ, ಕೆಲವು ಸ್ವಲ್ಪ ದೂರದವರೆಗೆ ಹರಿದೂ ಹೋಗುತ್ತವೆ. ಏನೇ  ಸೇರುತ್ತಾ, ಕಳಚಿಕೊಳ್ಳುತ್ತಾ ಹೋದರೂ ನದಿ ತನ್ನ ಹರಿವು ನಿಲ್ಲಿಸುವುದಿಲ್ಲ, ಗುರಿ ಮರೆಯುವುದಿಲ್ಲ. ಜೀವನವೂ ಹಾಗೆ. ಇಲ್ಲಿ ಸಂಬಂದಗಳು ಸೇರುತ್ತವೆ, ಬಿಟ್ಟು ಹೋಗುತ್ತವೆ. ಬಂದಿದ್ದು ಹೋಗಲೇ ಬೇಕು ಎನ್ನುವುದು ಪ್ರಕೃತಿ ನಿಯಮ. ಎಲ್ಲಿ ಎಲ್ಲವೂ ಕ್ಷಣಿಕ. ಆ ಕ್ಷಣಿಕವಾದ ವಿವರಗಳೊಂದಿಗೆ ಹೇಗೆ ನಾವು ಗುರುತಿಸಿಕೊಳ್ಳುತ್ತೇವೆ ಅನ್ನುವುದಕ್ಕಿಂತ ಹೇಗೆ ಗುರುತಿಸಿಕೊಳ್ಳಬೇಕು ಎನ್ನುವುದು ಇದನ್ನು ಓದಿದಾಗ ಅರ್ಥವಾಗುತ್ತಾ ಹೋಗುತ್ತದೆ. ಬದುಕು ಕಲೆಯಾದಾಗ ಹರಿವಿನ ಬಗ್ಗೆ ಅರಿವಿದ್ದಾಗ ಇವೆಲ್ಲವನ್ನೂ ಸಮಚಿತ್ತದಿಂದ ಕಿಂಚಿತ್ತೂ ಕಂಗೆಡದೆ ಎದುರಿಸುವುದು ಅಭ್ಯಾಸವಾಗುತ್ತದೆ. ಇದ್ದದ್ದನ್ನು ಇದ್ದ ಹಾಗೆ ಸ್ವೀಕರಿಸಲು ಕಲಿಯುವುದು ಕೂಡಾ ಕಲೆಯೇ.

ಸಂಗೀತವೋ, ನೃತ್ಯವೋ, ಅಭಿನಯವೋ ಯಾವುದೇ ಕಲಾಪ್ರಕಾರದಲ್ಲಿ ರಸಾನುಭೂತಿ ಹುಟ್ಟುವುದು ಯಾವಾಗ? ಅದರಲ್ಲಿ ತನ್ಮಯರಾದಾಗ. ಅದಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡಾಗ. ಬದುಕು ಕಲೆ ಎರಡೂ ಒಂದೇ ಆದಾಗ. ಹಾಗಾದಾಗ ರಸಾನುಭಾವ ಕೇವಲ ಕಲಾಗಾರನಲ್ಲಿ ಮಾತ್ರವಲ್ಲ ಸಭಿಕರಲ್ಲೂ ಉಂಟಾಗುತ್ತದೆ. ಜೀವನವೂ ಹೀಗೆಯೇ. ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಪಿಸಿಕೊಂಡಾಗ, ಸೃಷ್ಟಿಯ ಒಂದು ಭಾಗವೇ ಎಂದು ಬದುಕಿದಾಗ, ಏಕವಾದಾಗ ರಸಾನುಭಾವ ಉಂಟಾಗುತ್ತದೆ. ಕೇವಲ ನಮಗೆ ಮಾತ್ರವಲ್ಲದೆ ಸುತ್ತಲಿನವರಿಗೂ ಅದು ಅನುಭವಕ್ಕೆ ಬರುತ್ತದೆ. ನಮ್ಮ ಸಂಸ್ಕೃತಿಯ ಹಿರಿಮೆಯೇ ಅದು. ಬದುಕಿನ ಪ್ರತಿ ಹೆಜ್ಜೆಯಲ್ಲೂ ಅದು ಅಧ್ಯಾತ್ಮವನ್ನು ಕಲಿಸುತ್ತದೆ. ಒಂದಾಗುವುದನ್ನ ಹೇಳಿಕೊಡುತ್ತದೆ. ಜೀವನವನ್ನೇ ಕಲೆಯಾಗಿಸುತ್ತದೆ. ಸೃಷ್ಟಿಯೇ ಒಂದು ಕಲೆಯೆಂದ ಮೇಲೆ ಜೀವನವೂ ಕಲೆಯಾಗಲೇ ಬೇಕಲ್ಲವೇ.

ಕಲೆಗೆ ದೇಶ, ಕಾಲ, ಭಾಷೆಯ ಹಂಗಿಲ್ಲ ಎನ್ನುವ ಮಾತು ಸುಪ್ರಸಿದ್ಧ. ಒಮ್ಮೆ ಸಂಕುಚಿತ ಪರಿಧಿಯಿಂದ ಹೊರಬಂದು ಯೋಚಿಸಿದರೆ, ದಿಟ್ಟಿಸಿದರೆ ಬದುಕಿಗೂ ಇದ್ಯಾವುದರ ಗಡಿಯಿಲ್ಲ. ಜಗತ್ತಿನ ಯಾವುದೇ ಮೂಲೆಗೆ ಹೋಗಿ ನೋಡಿದರೂ ಜೀವಗಳ ಉಗಮ ಆಗಿರುವುದು ಪಂಚಭೂತಗಳಿಂದಲೇ, ಅವು ಮತ್ತೆ ಸೇರುವುದೂ ಕೂಡಾ ಅಲ್ಲಿಗೆಯೇ. ಅಲ್ಲಿಗೆ ಕಲೆ ಮತ್ತು ಬದುಕು ಎರಡೂ ಒಂದೇ ಎಂದಾಯಿತಲ್ಲವೇ. ಅಲ್ಲಿಗೆ ಜೀವನ ಪರಿಪೂರ್ಣವಾಗಬೇಕಾದರೆ ಅದನ್ನು ಕಲೆಯಾಗಿಸಿಕೊಳ್ಳದ ಹೊರತು ಬೇರೆ ದಾರಿಯಿಲ್ಲ. ಗುರಿ, ಹಾದಿ ಕೊನೆಗೆ ಅಂತಿಮ ನಿಲ್ದಾಣ ಎಲ್ಲವೂ ಅದೇ. ಜೀವನ ಕಲೆಯಾಗದ ಹೊರತು ಮುಕ್ತಿಯಿಲ್ಲ. ಮತ್ತು ಇದ್ಯಾವುದೂ ಹೊರಗಿಲ್ಲ ಎಲ್ಲವೂ ಒಳಗೇ ಇದೆ. ಒಳಗು ನೋಡಲು ಕಲಿತಾಗ ದಾರಿ ತಿಳಿಯುತ್ತದೆ. ದಾರಿ ತಿಳಿದ ಮೇಲೆ ಸಾಗುವುದೆಷ್ಟರ ಕೆಲಸ.

ಪ್ರತಿ ದಾರಿಗೂ ಒಂದು ಪರಂಪರೆಯಿದೆ.  ಅದಕ್ಕೆ ಕೊಡುಗೆ ನೀಡಿದ ಹಿರಿಯ ಚೇತನಗಳೂ ಬಹಳಷ್ಟಿದ್ದಾರೆ. ಹಾಗಾಗಿ ಪರಂಪರೆಯನ್ನು ಗೌರವಿಸುವುದು ಕಲಿತಾಗ ಕಲೆಯ ದಾರಿ ತೆರೆದುಕೊಳ್ಳುತ್ತದೆ. ಅಧ್ಯಾತ್ಮ ಎಂದು ಮೊದಲ ನೋಟಕ್ಕೆ ಅನ್ನಿಸಿದರೂ ಓದುತ್ತಾ ಹೋದ ಹಾಗೆ ಅಧ್ಯಾತ್ಮ ಬೇರೆಯಲ್ಲ ಬದುಕು ಬೇರೆಯಲ್ಲ ಬದುಕೇ ಅಧ್ಯಾತ್ಮ ಎನ್ನುವುದು  ಅರ್ಥವಾಗುತ್ತದೆ. ಈ ನೆಲದ ಅಂತಃಶಕ್ತಿಯೇ ಅದು. ಈ ನೆಲದಲ್ಲಿ ಹುಟ್ಟಿದ ನಮ್ಮ ಅಂತಃಸತ್ವವೂ ಅದೇ ಆಗಿರಬೇಕಾಗಿತ್ತು. ಮೊದಲೇ ಹೇಳಿದಂತೆ ಕಲೆಗೆ ದೇಶ ಭಾಷೆ ಗಡಿಯ ಹಂಗಿಲ್ಲ. ಇಲ್ಲೂ ವ್ಯಾಸರಿಂದ ಹಿಡಿದು ಕಾಳಿದಾಸ, ದಾಸರು ಉಪನಿಷತ್ತು ಗೀತೆ, ಡಿ ವಿ.ಜಿ. ಬರುವುದರ ಜೊತೆಗೆ ವಿಲಿಯಂ ಬ್ಲೇಕ್, ಪ್ಲೇಟೋ, ಹೈಡಿಗರ್, ಹ್ಯೂಗೋ, ಎಕ್ಹಾರ್ಟ್ ಮುಂತಾದವರೂ ಬಂದಿದ್ದಾರೆ. ಈ ಎಲ್ಲಾ ಚುಕ್ಕೆಗಳನ್ನು ಸೇರಿಸಿ ಒಂದು ಸುಂದರ ರಂಗೋಲಿ ಬಿಡಿಸುವುದರ ಮೂಲಕ ಕಣ್ಣೆದೆರು ಕಲಾಕೃತಿಯನ್ನು ಸೃಷ್ಟಿಸಿ ರಸಾನುಭಾವ ಉಂಟಾಗುವ ಹಾಗೆ ಮಾಡಿದ್ದಾರೆ. ಅದಕ್ಕೆ ಪುಟವಿಟ್ಟಂತೆ ಅನು ಅವರ ಅರ್ಧನಾರೀಶ್ವರ ಚಿತ್ರವಂತೂ ಮನಸ್ಸನ್ನು ಮೋಹಕಗೊಳಿಸಿ ಕಲೆಯ ಶಾಂತಿಯನ್ನು ತುಂಬುವ ಹಾಗೆ ಮಾಡಿದ್ದಾರೆ.

ಯಾವುದನ್ನು ಕಲಿಯಬೇಕು ಎನ್ನುವುದು ತಿಳಿಯದ ಹೊರತು ಕಲೆ ಸಿದ್ಧಿಸುವುದಿಲ್ಲ. ಕಲಿಕೆ ಬೇರೆಲ್ಲೋ ಇಲ್ಲ ಎನ್ನುವುದು ಅರ್ಥವಾಗದ ಹೊರತು ಕಲೆ ಒಲಿಯುವುದಿಲ್ಲ. ಸಂಪೂರ್ಣವಾಗಿ ಒಪ್ಪಿಸಿಕೊಳ್ಳದ ಹೊರತು ಅದು ಕೈ ಹಿಡಿಯುವುದಿಲ್ಲ. ಸೃಷ್ಟಿಯ ಶ್ರುತಿಗೆ ಬದುಕನ್ನು ಜೊತೆಗೂಡಿಸದ ಹೊರತು ಕಲೆ ಅಂತರ್ಗತವಾಗುವುದಿಲ್ಲ. ಹಾಗಾಗಿ ಬದುಕಿನ ಪ್ರತಿ ಕ್ಷಣವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಗುರಿಯತ್ತ ಏಕಾಗ್ರವಾಗಿ ನಡೆದಾಗ, ಬೆಳೆಯುತ್ತಾ ಸುತ್ತಲಿನವರನ್ನೂ ಬೆಳೆಯುವ ಹಾಗೆ ಮಾಡಿದಾಗ ಜೀವನ ಕಲೆಯಾಗುತ್ತದೆ. ಕಲೆಯಾದಾಗ ಬದುಕು ಸಾರ್ಥಕವಾಗುತ್ತದೆ. ಆ ಸಾರ್ಥಕತೆ ಸುತ್ತೆಲ್ಲಾ ಪ್ರತಿಫಲಿಸಿ ಬೆಳಕು ಕೊಡುತ್ತದೆ. ಬಿಂದು ಸಿಂಧುವಿನಲ್ಲಿ ಒಂದಾಗುತ್ತದೆ. ಹಾಗೆ ಒಂದಾಗುವ ದಾರಿಗೆ ಕಿರು ಪ್ರಣತಿಯಾಗಿ ಈ ಪುಸ್ತಕ ಬೆಳಗುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...