ಕಶೀರ
ಮುಸ್ಸಂಜೆ ಕವಿಯುವಾಗ ಕೈಕಾಲು ತೊಳೆದು ಬಂದು ದೇವರಿಗೆ ದೀಪ ಹಚ್ಚಿ ಭಜನೆ ಮಾಡುವಾಗ ಗಣಪತಿಯ ಸ್ತುತಿಯ ನಂತರ ಹೇಳುತಿದ್ದದ್ದೆ ನಮಸ್ತೇ ಶಾರದಾ ದೇವಿ ಕಶ್ಮೀರ ಪುರವಾಸಿನಿ ಅನ್ನುವ ಶ್ಲೋಕ. ಬೆಳಿಗ್ಗೆ ಓದುವಾಗಲೂ ಅದನ್ನು ಹೇಳಿಯೇ ಪುಸ್ತಕ ತೆರೆಯುತ್ತಿದ್ದದ್ದು. ಶ್ರಿಂಗೇರಿಯಲ್ಲಿರುವ ಶಾರದೆಯನ್ನು ಕಶ್ಮೀರ ಪುರವಾಸಿನಿ ಅಂತ ಯಾಕೆ ಹೇಳ್ತಾರೆ ಅನ್ನುವ ಗೊಂದಲ ಬರುವುದಕ್ಕೆ ಆಸ್ಪದವೇ ಇರಲಿಲ್ಲ. ಯಾಕೆಂದರೆ ಶ್ರೀ ಶಂಕರರು ಅವಳನ್ನು ಅಲ್ಲಿಂದ ಕರೆತಂದ ಕತೆ ಗೊತ್ತಿತ್ತು. ಆದರೂ ಅವಳು ಅಲ್ಲಿಂದ ಬಿಟ್ಟು ಬಂದ ಮೇಲೆಯೂ ಅವಳನ್ನು ಅಲ್ಲಿಯವಳೇ ಎನ್ನುವುದು ಯಾಕೆ ಎನ್ನುವ ಪ್ರಶ್ನೆ ಮೂಡಿದಾಗಲೆಲ್ಲ ಸಂಪಗೋಡಿನ ನೆನಪಾಗುತಿತ್ತು. ಅರಿವಾಗದೆ ಕಣ್ಣು ತುಂಬುತ್ತಿತ್ತು. ಭಾರತದ ಮುಕುಟ ಮಣಿ ಎಂದರೆ ಅದು ಕಶ್ಮೀರ. ಅದಿಲ್ಲದೆ ಹೋದರೆ ಕಿರೀಟವಿಲ್ಲದ ರಾಜನಂತೆ ಅನ್ನಿಸುತ್ತದೆ ಭೂಪಟವನ್ನು ನೋಡುವಾಗ. ಆ ಕಶ್ಮೀರದ ಹಿನ್ನಲೆ, ಪುರಾಣಗಳಲ್ಲಿ ಬರುವ ಅದರ ವರ್ಣನೆ, ಅಲ್ಲಿನ ಕ್ಷಾತ್ರತ್ವ, ಮಣ್ಣಿನ ಗುಣ, ಪಂಡಿತರ ಪಾಂಡಿತ್ಯ, ಪ್ರಕೃತಿಯ ಸೊಬಗು ಪ್ರತಿಯೊಂದು ಅದು ಪುಣ್ಯಭೂಮಿ, ಪವಿತ್ರ ನೆಲ ಅನ್ನುವ ಭಾವ ಹುಟ್ಟಿಸುತ್ತಿತ್ತು. ಅಂತ ಸ್ವರ್ಗ ನರಕವಾಗಲು ಶುರುವಾಗಿದ್ದು ಯಾವಾಗ ಎನ್ನುವುದಕ್ಕೆ ಅಷ್ಟೇ ದೊಡ್ಡ ಇತಿಹಾಸವಿದೆ. ಪ್ರತಿಬಾರಿ ಆಕ್ರಮಣಕ್ಕೆ ಒಳಗಾದರೂ ಮತ್ತೆ ಮತ್ತೆ ಚಿಗಿತು ನಿಲ್ಲುವ, ಶತ್ರುಗಳನ್ನು ಹಿಮ್ಮೆಟ್ಟಿಸುವ ಶೌರ್ಯ ಅಂತಸತ್ವ ಇದ್ದಿದ್ದರಿಂದಲೇ ಕ...