ಗುಬ್ಬಚ್ಚಿ...

ನಮ್ಮನೇಲಿ ಗುಬ್ಬಚ್ಚಿ ಮೊಟ್ಟೆ ಇಟ್ಟಿದೆ ಗೊತ್ತಾ ಅಂತ ಕಾರೆಮನೆ ರಮೇಶ ಸ್ವಲ್ಪ ಜಂಭದಿಂದ ಹೇಳುವಾಗ ನಂಗೂ ಪುಟ್ಟುಗೂ ಹೊಟ್ಟೆಕಿಚ್ಚಾಗುತ್ತಿದ್ದದ್ದು ನಿಜವಾದರೂ ಅದನ್ನೂ ಮೀರಿ ಹೋಗಿ ನೋಡುವ ತವಕ ಶುರುವಾಗುತ್ತಿತ್ತು. ಈ ಶನಿವಾರ ಮಧ್ಯಾನ ಬರ್ತಿವಿ ಕಣೋ ತೋರ್ಸು ಅಂತ ಅವನನ್ನು ಕೇಳುತ್ತಿದ್ದೆವು. ಅವನೋ ಏನೋ ಮಹದುಪಕಾರ ಮಾಡಿದಂತೆ ಹೂ ಅನ್ನುತಿದ್ದ. ಶಾಲೆ ಮುಗಿಸಿ ಮನೆಗೆ ಬರುವಾಗ ಈ ಗುಬ್ಬಚ್ಚಿ ಅವರ ಮನೇಲಿ ಯಾಕೆ ಅಷ್ಟೊಂದು ಮೊಟ್ಟೆ ಇಡುತ್ತೋ ನಮ್ಮನೇಲಿ ಇಡಬಾರದ ಅಲ್ವೇನೋ ಎಂದು ಗುಬ್ಬಚ್ಚಿಗೆ ಬೈಯುತ್ತಾ ಬರುತ್ತಿದ್ದೆವು. ಮನೆಗೆ ಬಂದು ಒಂದೇ ಉಸಿರಿನಲ್ಲಿ ಊಟ ಮುಗಿಸಿ ಕಾರೆಮನೆಗೆ ಹೋಗ್ತಿವಿ ಅಂದ್ರೆ ಈ ಬಿರುಬಿಸಿಲಲ್ಲಿ ಮಾಡೋಕೆ ಕೆಲಸ ಇಲ್ವಾ ಸಂಜೆ ಹೋಗಿ ಎಂದು ಬೈದು ನಮ್ಮ ಉತ್ಸಾಹಕ್ಕೆ ನೀರೆರೆಚುತ್ತಿದ್ದರು.

ಸಂಜೆಯಾಗುವುದುನ್ನೇ ಕಾದು ಅವಸರದಲ್ಲಿ ಕಾಫಿ ಕುಡಿದು ಹೊರಟರೆ ಶಾಲೆ ಬರುವವರೆಗೂ ಕಾಲಿಗೆ ವೇಗ ಹೆಚ್ಚಿದ್ದರೂ ಶಾಲೆ ದಾಟಿ ಗದ್ದೆಗೆ ಇಳಿದ ಕೂಡಲೇ ಅಲ್ಲಿಂದ ತುಸು ದೂರದಲ್ಲಿ ಪುಟ್ಟ ಗುಡ್ಡದ ಮೇಲಿದ್ದ ಮನೆಯೊಂದು ಕಾಣುತಿದ್ದ ಹಾಗೆ ನಡುಗಲು ಶುರುವಾಗುತ್ತಿತ್ತು. ಕಾರೆಮನೆಗೆ ಹೋಗಬೇಕಾದರೆ ಆ ಮನೆಯ ಅಂಗಳ ಹಾಗೂ ಉಣುಗೋಲು ದಾಟಿಯೇ ಹೋಗಬೇಕು. ಹಾಗೆ ಹೋಗಬೇಕಾದರೆ ಅವರ ಮನೆಯಲ್ಲೊಂದು ನಾಯಿ ಅದೋ ನಮ್ಮನ್ನು ಕಂಡರೆ ಯಾರೋ ಶತ್ರುಗಳ ಕಂಡ ಹಾಗೆ ಮೈಮೇಲೆ ಏರಿ ಬರುತ್ತಿತ್ತು. ಮೊದಲೇ ಹಳ್ಳಿ ಜನ ಗದ್ದೆ ತೋಟ ಅಂತ ಕೆಲಸಕ್ಕೆ ಹೋಗುವವರು ಆದ್ದರಿಂದ ಮನೆಯಲ್ಲಿ ಇರುವುದು ಅಪರೂಪವೆ. ಗದ್ದೆಗೆ ಇಳಿಯುತ್ತಿದ್ದ ಹಾಗೆ ದೇವರ ಜಪ ಮಾಡುತ್ತಾ ಮನೆಯಲ್ಲಿ ಯಾರಾದ್ರೂ ಇರ್ಲಿ ಅಂತ ಬೇಡಿಕೊಳ್ಳುತ್ತಾ ಕಂಪಿಸುವ ಕಾಲುಗಳನ್ನು ಬಲವಂತವಾಗಿ ಎತ್ತಿ ಮುಂದಿಡುತ್ತಾ ಉಣುಗೋಲು ಸಮಿಪಿಸುವಾಗ ಯಾರಾದರೂ ಕಂಡರೆ ನೆಮ್ಮದಿಯ ಉಸಿರು ಹೊರಬರುತ್ತಿತ್ತು. ಒಮ್ಮೆ ಅದನ್ನು ದಾಟಿದ ಮೇಲೆ ಮತ್ತೆ ನಾವೇ ರಾಜರು.

ಕಾರೆಮನೆಗೆ ಹೋಗುವುದೆನೂ ಸುಲಭವಾಗಿರಲಿಲ್ಲ. ಕಾಡು, ಏರು ಮಣ್ಣಿನ ದಾರಿ. ದಂಡಯಾತ್ರೆಗೆ ಹೊರಟ ರಾಜರಂತೆ ಅಕ್ಕಪಕ್ಕದ ಹಣ್ಣಿನ ಗಿಡಗಳ ಮೇಲೆ ಧಾಳಿ ಮಾಡಿ ಹಣ್ಣುಗಳನ್ನು ಕಪ್ಪ ಕಾಣಿಕೆಯಾಗಿ ಸೇವಿಸುತ್ತಾ, ಅಡ್ಡ ಸಿಕ್ಕುವ ಪ್ರಾಣಿ ಪಕ್ಷಿಗಳಿಗೆ ಜೀವದಾನ ಮಾಡುತ್ತಾ ಕೈಲೊಂದು ಕೋಲು ಹಿಡಿದು ಹೊರಟರೆ ದಂಡಯಾತ್ರೆ ರಮೇಶನ ಮನೆಯ ಅಂಗಳದವರೆಗೂ ನಿರಾತಂಕವಾಗಿ ಸಾಗುತಿತ್ತು. ಅಲ್ಲಿಗೆ ಹೋದಮೇಲೆ ಒಳಗೆ ಹೋಗುವುದಕ್ಕೂ ಸಮಯವೇ ಇಲ್ಲದಂತೆ ಅವನನ್ನು ಅವಸರ ಮಾಡಿ ತೋಟಕ್ಕೆ ಹೊರಡಿಸಿದರೆ ಸೀತಕ್ಕ ಕಾಫಿ ಕುಡಿದು ಹೋಗಿ ಬನ್ರೋ ಅನ್ನೋ ದನಿಯ ಜೊತೆ ಜೊತೆಗೆ ನರಸಿಂಹಯ್ಯನ ಹುಷಾರು ಅನ್ನೋ ಕೂಗು ಕೇಳಿಸುವುದರೊಳಗೆ ನಾವು ತೋಟಕ್ಕೆ ಇಳಿದಾಗಿರುತಿತ್ತು.

ಅವರ ತೋಟವಿದ್ದದ್ದು ಹಾಗೆ ಕಾಡಿನ ಮಧ್ಯದಲ್ಲಿ. ಮರ ಕಡಿದು ತೋಟ ಹಾಕಿದ್ದರಿಂದ ಅಲ್ಲಲ್ಲಿ ನಮ್ಮ ಮೊಣಕಾಲು ಎತ್ತರದ ಕಾಂಡಗಳು ಉಳಿದಿದ್ದವು, ಅವು ಬಿದ್ದ ಮಳೆಗೆ ಚಿಗುರಿ ಆ ಚಿಗುರು ಜೊಂಪೆಯಂತೆ ಕಾಂಡದ ಮೈ ಮರೆಮಾಡಿದ ಜಾಗದಲ್ಲಿ ಈ ಗುಬ್ಬಿಗಳು ಹುಲ್ಲು ನಾರು ತಂದು ಪುಟ್ಟ ಗೂಡು ಮಾಡಿ ಮೊಟ್ಟೆಇಡುತ್ತಿದ್ದವು. ಆ ಪುಟ್ಟ ಗೂಡಿನಲ್ಲಿ ಅದಕ್ಕೂ ಪುಟ್ಟದಾದ ಎರಡೋ ಮೂರೋ ಮೊಟ್ಟೆಗಳು ಮುತ್ತಿನಂತೆ ಕಾಣಿಸುತ್ತಿದ್ದವು. ಅದನ್ನು ನಾವು ಮುಟ್ಟಿದ್ದೇವೆ, ಹತ್ತಿರಕ್ಕೆ ಬಂದು ಹೋಗಿದ್ದೇವೆ ಎಂದು ಗೊತ್ತಾದರೆ ಅವು ಗೂಡು ಬದಲಾಯಿಸಿ ಬಿಡುತ್ತವೆ. ಹಾಗಾಗಿ ನಾವು ಉತ್ಸಾಹದಲ್ಲಿ ಹತ್ತಿರಕ್ಕ್ಕೆ ಹೋದಷ್ಟೂ ರಮೇಶ ಜೋರಾಗಿ ಮುಟ್ಟಬೇಡಿ, ಪೊದೆ ಸರಿಸಬೇಡಿ ಎಂದು ಜೋರಾಗಿ ಕೂಗುತಿದ್ದ. ನಾವೋ ಇವನಿಗೆ ಜಂಬ ನೋಡು ಅವ್ರ ಮನೇಲಿ ಮೊಟ್ಟೆ ಇಟ್ಟಿದ್ದೆ ಅಂತ ಅತಿಯಾಗಿ ಆಡ್ತಾನೆ ಅಂತ ಬೈದುಕೊಳ್ಳುತ್ತಲೇ ಹತ್ತಿರಕ್ಕೆ ಹೋಗಿ ಎಷ್ಟು ಸಾಧ್ಯವೋ ಅಷ್ಟು ಕಣ್ಣನ್ನು ಅಗಲವಾಗಿಸಿ ನೋಡುತ್ತಿದ್ದೆವು.

ಈ ನೋಡುವ ಕೆಲಸದಲ್ಲಿ, ಇನ್ನಷ್ಟು ಮತ್ತಷ್ಟು ಗೂಡು ಹುಡುಕುವ ಸಂಭ್ರಮದಲ್ಲಿ ಅದೆಷ್ಟು ಬೇಗ ಸಂಜೆಯಾಗುತ್ತಿತ್ತು ಅನ್ನೋದು ಗೊತ್ತಾಗುತ್ತಿದ್ದದ್ದು ಸೂರ್ಯ ಕೆಂಪಾಗಲು ಶುರು ಮಾಡಿದಾಗಲೇ. ಆಗ ಅಯ್ಯೋ ಕತ್ತಲಾಯಿತು ಅಂತ ಮನೆಯ ಕಡೆ ಹೊರಡುವ ಅವಸರ. ಮತ್ತೆ ಅಲ್ಲಿಂದ ಮೈಲು ದೂರ ಕಾಡಲ್ಲಿ ನಡೆದು ಮನೆಗೆ ಬರಬೇಕಲ್ಲ, ಕತ್ತಲೆ, ಭಯ ಎರಡೂ ಕಾಡಿ ಓಡಿ ಬರುವ ಹೊತ್ತಿಗೆ ಸೀತಮ್ಮ ಕಾಫಿ ಜೊತೆಗೆ ಏನಾದರೂ ಕುರುಕಲು ತಿಂಡಿ ಕಾಗದಕ್ಕೆ ಹಾಕಿ ಕಾಯುತ್ತಿರುತ್ತಿದರು. ಕಾಫಿಯನ್ನು ಒಂದೇ ಗುಟುಕಿಗೆ ಗಂಟಲಿಗೆ ಸುರಿದುಕೊಂಡು ತಿಂಡಿಯ ಕಾಗದ ಕೈಯಲ್ಲಿ ಹಿಡಿದುಕೊಂಡು ಹೊರಟಾಗ ಮಾತ್ರ ಜೀವ ಉಳಿಸಿಕೊಳ್ಳಲು ಓಡುವ ರಾಜನಂತೆ. ವಾಪಾಸ್ ಬರುವಾಗ ಮನೆಯಲ್ಲಿ ದೀಪ ಹೊತ್ತಿಸಿ ಈ ಮಕ್ಕಳು ಇನ್ನೂ ಬರಲಿಲ್ಲ ಎನ್ನುವ ಗೊಣಗು ಕೇಳುತ್ತಿರುತಿತ್ತು.

ಮರುದಿನ ಬೆಳಿಗ್ಗೆ ಎದ್ದು ಗದ್ದೆಗೆ ಹೋಗಿ ಅಂಚಿನಲ್ಲಿ ಬೆಳೆದಿರುತಿದ್ದ ಅದೊಂದು ರೀತಿಯ ಹುಲ್ಲಿನ ಕೊನೆಯಲ್ಲಿ ಬಿಡುತಿದ್ದ ಕಂದು ಬಣ್ಣದ ಮೀಸೆಯಂತ ಹುಲ್ಲು ತಂದು ಅಂಗಳದ ಮೂಲೆಯಲ್ಲಿ ಗೂಡು ಮಾಡಿ ಅದರೊಳಗೆ ಹುಲ್ಲು ಹಾಕಿ ಇಟ್ಟು ಗೂಡು ಮಾಡಿ ಗುಬ್ಬಿ ಬರುತ್ತಾ ಅಂತ ಕಾಯೋ ಕೆಲಸ. ಆಗಾಗ ಅದರ ಬಳಿ ಹೋಗಿ ಸರಿಮಾಡಿ ಕಾಯುವಾಗ ನೀವು ಹಾಗೆ ನಿಂತರೆ ಅದು ಬರುತ್ತೇನೆ ಅಂತ ಅಜ್ಜಿ ನಗುತ್ತಿದ್ದಳು. ಅದು ಅಲ್ಲಿಗೆ ಬರಲಿಲ್ಲ ಅನ್ನೋ ಬೇಜಾರಿಗಿಂತ ರಮೇಶನ ಮನೆಗೆ ಬರುತ್ತಲ್ಲ ಅನ್ನೋ ನೋವೆ ಹೆಚ್ಚು. ಜಗುಲಿಯಲ್ಲಿ ಮುಖ ದುಮ್ಮಿಸಿ ಕುಳಿತರೆ ಮೊರಕ್ಕೆ ಅಕ್ಕಿ ಹಾಕಿಕೊಂಡು ಬಂದು ಅದನ್ನು ಕೇರಿ ಸರಿಮಾಡುವಾಗ ಎಲ್ಲಿಯೋ ಇರುತಿದ್ದ ಗುಬ್ಬಚ್ಚಿಗಳು ಹಾರಿ ಬರುತಿದ್ದವು. ಅಕ್ಕಿ ಆರಿಸಿ ಎಸೆದ ಭತ್ತ, ಹುಳು, ಬೀಳುವ ನುಚ್ಚು ಅಕ್ಕಿಯನ್ನು, ಧಾನ್ಯ ಹಸನುಗೊಳಿಸುವಾಗ ಬಿದ್ದ ಕಾಳನ್ನು, ಹಿತ್ತಲಿನ ಬಾನಿಯಲ್ಲಿನ ನೀರನ್ನು ಕುಡಿದು  ನಮ್ಮ ಜೊತೆಜೊತೆಗೆ ಬದುಕುತ್ತಿದ್ದವು.

ನೋಡಿಯೂ ಇನ್ನೂ ಧುಮ್ಮಿಸಿ ಕುಳಿತುಕೊಂಡಿರುವವರನ್ನು ನೋಡಿ ಅಜ್ಜನಿಗೆ ಪಾಪ ಅನ್ನಿಸುತ್ತಿತ್ತೇನೋ... ಕರೆದು ಬಾಗಿಲನ ಬದಿಯಲ್ಲಿ ಕಟ್ಟಿದ ಫೋಟೋದ ಹಿಂದೆ ನೋಡಲು ಹೇಳಿದರೆ ಅಲ್ಲಿ ಪುಟ್ಟ ಗೂಡು ಇರುತಿತ್ತು. ಹಂಚಿನ ಮಾಡಿನ ಜಂತಿಯ ಬದಿಯಲ್ಲಿ, ಜಗುಲಿಯ ಪಕಾಸಿಯ ನಡುವಿನ ಜಾಗದಲ್ಲಿ ಕಟ್ಟಿರುವ ಪುಟ್ಟ ಗೂಡು ಕಾಣಿಸುತ್ತಿತ್ತು. ಅರೆ ನಮ್ಮನೇಲೂ ಇದೆ ಅಲ್ವ ಅನ್ನೋ ಖುಷಿಯಲ್ಲಿ ಹರಡುತ್ತಿದ್ದ ನಗು ಕಂಡಿತೇನೋ ಎಂಬಂತೆ ಅವುಗಳ ಚಿವ್ ಚಿವ್ ದನಿ ಕಿವಿ ತುಂಬುತ್ತಿತ್ತು. ಅವು ಹೆಚ್ಹಾಗಿ ವಾಸ ಮಾಡುತ್ತಿದ್ದದ್ದೂ ಕೂಡ ಮನುಷ್ಯರ ಜೊತೆಯೇ ಅವರ ಮನೆಯಲ್ಲೇ. ಮನೆಯ ಕಟ್ಟುವ ರೀತಿಯೂ ಅವುಗಳಿಗೆ ಅನುಕೂಲಕರವಾಗಿತ್ತು. ಅದರಲ್ಲೂ ಜಗುಲಿಯ ಗೋಡೆಗೆ ನೇತುಹಾಕಿರುವ ದೊಡ್ಡ ಫೋಟೋಗಳ, ಗಡಿಯಾರಗಳ ಹಿಂದಿನ ಜಾಗವೂ ಅದರ ಗೂಡಿಗೆ ಪ್ರಶಸ್ತವಾದ ಜಾಗ. ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕರಿಕಸ ಹೊಡೆಯುವ ಸಮಯದಲ್ಲೂ ಆ ಜಾಗಗಳಿಗೆ ಮಾತ್ರ ಸಂಪೂರ್ಣ ವಿನಾಯಿತಿ.    ಬೆಳಗಾದರೆ ಬಿಸಿಲಿನ ಬೇಗೆಗೆ ನೀರಲ್ಲಿ ಸ್ನಾನ ಮಾಡುತ್ತಲೋ, ಧೂಳಿನಲ್ಲಿ ಹೊರಳಾಡುತ್ತಲೋ, ಗುಂಪಿನಲ್ಲಿ ಆಟವಾಡುತ್ತಲೋ, ಹಿತ್ತಿಲಿನಲ್ಲಿ ಆಹಾರ ಅರಸುತ್ತಲೋ ಇರುವ ಗುಬ್ಬಚ್ಚಿ ಎಷ್ಟು ನಮ್ಮ ಹಾಗೆ ಅನ್ನಿಸುತಿತ್ತು ಎಂದರೆ ಅವೂ ನಮ್ಮ ಮನೆಯ ಸದಸ್ಯ ಅಂತಲೋ, ಗುಂಪಿನ ಗೆಳೆಯ ಎಂದೋ ಅನ್ನಿಸಿ ಇನ್ನಷ್ಟು ಆಪ್ತವಾಗಿಬಿಡುತಿತ್ತು.

ನಮ್ಮ ಬದುಕಿನ ಜೊತೆಗೆ ಅದೆಷ್ಟು ಹಾಸು ಹೊಕ್ಕಾಗಿದೆ ಎಂದು ಅರ್ಥವಾಗಿದ್ದು ಓದಲು ಶುರುಮಾಡಿದಾಗ... ಕಷ್ಟಪಟ್ಟು ಕಟ್ಟಿದ ಪುಟ್ಟ ಮನೆಯನ್ನು ಗುಬ್ಬಚ್ಚಿ ಗೂಡಿಗೆ ಹೋಲಿಸುವಾಗ, ಪುಟ್ಟ ಗಾತ್ರದ ದೇಹವನ್ನು ಅದಕ್ಕೆ ಹೋಲಿಸುವಾಗ, ಭಯದಿಂದ ಬೆಚ್ಚಿ ಬೀಳುವಾಗಲೂ ಬೆದರಿದ ಗುಬ್ಬಚ್ಚಿಯಂತೆ ಎಂದು ಹೋಲಿಕೆ ಕೊಡುವಾಗ ಕೊನೆಗೆ ಮಳೆಯಲ್ಲಿ ನೆಂದು ತೊಪ್ಪೆಯಾಗಿ ಬಂದಾಗಲೂ ಅದನ್ನೇ ಹೋಲಿಸುವ ಅವಮಾನ ಹಿಂಜರಿಕೆಯಿಂದ ಮೈ ಹಿಡಿಯಾದಾಗಲೂ ಮುದುರಿದ ಗುಬ್ಬಚ್ಚಿ ಎನ್ನುವ ಹೀಗೆ ಮನುಷ್ಯನ ಎಲ್ಲಾ ಭಾವಗಳಿಗೂ ಗುಬ್ಬಚ್ಚಿಯಷ್ಟು ಹೋಲಿಕೆಯಾಗುವ ಇನ್ನೊಂದು ಜೀವಿ ಇಲ್ಲವೇನೋ.. ಪ್ರತಿ ಬಾಲ್ಯದ ಬೆರಗು, ಸಂಭ್ರಮ ಶುರುವಾಗುವುದು ಗುಬ್ಬಚ್ಚಿಯೊಂದಿಗೆ, ಕೈ ತುತ್ತು ಇಳಿಯುತ್ತಿದ್ದದ್ದೂ ಅದನ್ನು ತೋರಿಸುವ ಜೊತೆಗೆ ... ಇಳಿವಯಸ್ಸಿಗೂ ಈ ಗುಬ್ಬಚ್ಚಿಯೇ ಸಂಗಾತಿಯಾಗುತಿತ್ತಾ... ಅಜ್ಜನ್ನನ್ನು ನೋಡಿದಾಗ ಹಾಗನ್ನಿಸುತಿತ್ತು. ವಯಸ್ಸಿನ ಭೇಧವಿಲ್ಲದೆ ಎಲ್ಲರಿಗೂ ಜೊತೆಯಾಗುವ ವಿಶೇಷತೆ ಇದರದ್ದು..

ಅರೆ ಗುಬ್ಬಚ್ಚಿಗಳು ಇತ್ತೀಚಿಗೆ ಹೆಚ್ಚು ಕಾಣಿಸುತ್ತಿಲ್ಲವಲ್ಲ ಎಂದು ಸಂಕಟಪಡುವ ಹೊತ್ತಿಗೆ, ಈ ನಗರದಲ್ಲಿ ಬದುಕಿದರೆ ಕಾಣೋದು ಬರೀ ನಿರ್ಜಿವ ಕಟ್ಟಡಗಳೆ ಎಂದು ಹಳಹಳಿಸುವ ಹೊತ್ತಿಗೆ ಮಗಳು ಕಿರುಚಿದ್ದು ಕೇಳಿ ಬಾಲ್ಕನಿಗೆ ಹೋದರೆ ಅಮ್ಮಾ ಅಲ್ನೋಡು ಗುಬ್ಬಚ್ಚಿ ಎಂದು ತೋರಿಸಿದಳು. ಎಷ್ಟೋ ಕಾಲದ ನಂತರ ಕಾಣಸಿಕ್ಕ ಆತ್ಮಸಂಗಾತಿಯನ್ನು ದಿಟ್ಟಿಸಿ ನೋಡುತ್ತಿರುವಾಗಲೇ ಅಹಿ ತಾನು ಯಾವುದೋ ಪ್ರಾಜೆಕ್ಟ್ ಗಾಗಿ ಮಾಡಿದ ಗೂಡು ತಂದು ಪಾಟ್ ನ ಬುಡದಲ್ಲಿ ಇಟ್ಟು ತನ್ನದೊಂದು ಬನಿಯನ್ನಿನ ಮೆತ್ತನೆ ಬಟ್ಟೆ ಹರಿಯುತ್ತಿದ್ದಳು. ಯಾಕೆ ಅಂದರೆ ಗುಬ್ಬಚ್ಚಿಗೆ ಗೂಡು ಮಾಡ್ತಾ ಇದೀನಮ್ಮ ಅಂದಳು...

ಸಿಕ್ಕಿದ್ದು ಬರೀ ಗುಬ್ಬಚ್ಚಿಯಾ... ಬಾಲ್ಯವಾ.... ಅತ್ಮಸಂಗಾತಿಯಾ..........

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...