ಯುಗಾದಿ (ಹಸಿರುವಾಸಿ)

ಎಲೆಯೆಲ್ಲಾ ಉದುರಿಸಿ ಬೋಳಾಗಿ ನಿಂತ ಮರಗಳು, ಕೊರೆಯುವ ಚಳಿ, ಒಡೆದ ಮೈ, ಮುರುಟಿದ ತರು ಲತೆಗಳು. ಚಳಿಗಾಲವೆಂದರೆ ಹೀಗೆ ಎಲ್ಲಾ ಇದ್ದೂ ಏನೂ ಇಲ್ಲದ ಭಾವ, ಒಂಟಿತನ, ಖಾಲಿತನ ತುಂಬುತ್ತಾ ಮೈ ಜೊತೆ ಮನಸ್ಸನ್ನೂ ಮರಗಟ್ಟಿಸುತ್ತದೆ. ಬೀಸುವ ಗಾಳಿಗೆ ಮತ್ತಷ್ಟು ಉರಿಯುವ ಚರ್ಮವನ್ನು ಬೈದುಕೊಳ್ಳುವಾಗ ಮರ ಚಿಗುರು ಒಡೆಯುವ ಕಾಲ ಅದಕ್ಕೆ ಮೈ ಹಾಗೆ ಮರಗಟ್ಟಿ ಚರ್ಮ ಸುಕ್ಕಾಗುತ್ತೆ. ಮರದ ತೊಗಲು ಹಾಗೆ ಇರುತ್ತೆ ನೋಡು, ಹೊಸತು ಬರಬೇಕಾದರೆ ಹಳೆಯ ಪೊರೆ ಕಳಚಿಕೊಳ್ಳಬೇಕು ಎನ್ನುವ ಅಜ್ಜಿಯನ್ನೇ ಗಮನಿಸುತ್ತಿದ್ದೆ. ಅವಳ್ಯಾವ ವಿಜ್ಞಾನಿಯೂ ಅಲ್ಲ, ಆದರೆ ಪ್ರಕೃತಿಯ ಪ್ರತಿ ಬದಲಾವಣೆಯನ್ನೂ ಗಮನಿಸಿ ಅದಕ್ಕೆ ಒಗ್ಗಿಕೊಂಡವಳು, ಒಪ್ಪಿಕೊಂಡವಳು.

ಇದ್ದುದ್ದೆಲ್ಲವೂ ಬಿದ್ದು ಹೋದರೂ
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಹಳತನ್ನು ಕಳೆದುಕೊಂಡು ಹೊಸತಿಗೆ ಸಾಗುವ ಕ್ಷಣ ಮರುಹುಟ್ಟು. ಅದು ಆದಿ. ಯುಗದ ಆದಿಯೂ ಬದುಕಿನ ಆದಿಯೇ. ಹಾಗಾಗಿಯೇ ಅದು ಯುಗಾದಿ. ಇಡೀ ಪ್ರಕೃತಿಯೇ ಹೊಸತನ್ನು ಸ್ವಾಗತಿಸಿ ಹೊಸತಾಗಿ ಬದುಕುವ ಕ್ಷಣ. ಅದು ಹೊಸ ಋತುವಿನ ಪ್ರಾರಂಭ ಕೂಡ. ಹೊಸ ಚಿಗುರು, ಹೊಸ ಹುಟ್ಟು, ಹೊಸ ಭಾವ ಹೀಗೆ ಹೊಸತನ್ನು ಹೊತ್ತು ತರುವ ವಸಂತ ಋತುವನ್ನು ಋತುಗಳ ರಾಜ ಅನ್ನೋದು ಇದಕ್ಕೆ ಇರಬೇಕೇನೋ. ಹಳೆಯದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಾ ಅಂದರೆ ಖಂಡಿತ ಅಲ್ಲ. ಪೊರೆ ಕಳಚುವ ಹಾವಿನ ಸಂಕಟವದು. ಅದಕ್ಕಾಗಿ ಮರಗಬೇಕು, ಮುರುಟಬೇಕು, ಉರಿ ಅನುಭವಿಸಬೇಕು, ಕಿರಿಕಿರಿ ತಡೆದುಕೊಳ್ಳಬೇಕು. ಎಲ್ಲವನ್ನೂ ತಡೆದುಕೊಂಡು ತಿಳಿದುಕೊಂಡು ನಂತರ ಬರುವ ಹೊಸತಿದೆಯಲ್ಲ ಅಲ್ಲಿ ನೋವಿಲ್ಲ ಬರೀ ನಲಿವು ಮಾತ್ರ. ಹಾಗಾಗಿಯೇ ಹೊಸ ಹುಟ್ಟು ಹೊಸ ಅರಿವು. ಹೊಸ ಹಬ್ಬ.

ಅಲ್ಲಿಂದ ಸೂರ್ಯನಿಗೂ ಹೊಸ ಹುರುಪು. ಮೈ ಮುರಿದು ಎದ್ದವನು ಉರಿಯ ತೊಡಗುತ್ತಾನೆ. ಥಂಡಿತನ ಕಳೆದುಕೊಂಡ ವಾತಾವರಣ, ಮನಸ್ಸು ಎರಡೂ ಬೆಚ್ಚಗಾಗತೊಡಗುತ್ತದೆ. ಅಲ್ಲಿಂದ ರಾಮನವರಾತ್ರಿಯೂ ಶುರು. ವಸಂತದ ನವಮಿಯಂದು ಮರ್ಯಾದ ಪುರುಷೋತ್ತಮ ರಾಮ ಹುಟ್ಟಿದದಿನ. ಹಾಗಾಗಿ ವಸಂತದ ಹೆಮ್ಮೆಗೆ ಇದೂ ಒಂದು ಗರಿ. ಮನುಷ್ಯನಿಗೆ ಗುರಿ. ಹೊಸತನದ ಹರಿಕಾರ ಹೊಸಮಾಸದಲ್ಲೇ ಜನ್ಮತಾಳಿದವನು. ಬದುಕಿನ ರೀತಿಗೆ ಹೊಸಭಾಷ್ಯ ಬರೆದವನು. ಹಾಗಾಗಿ ಆ ಒಂಬತ್ತು ದಿನಗಳೂ ಹಬ್ಬವೇ. ಎಲ್ಲೆಲ್ಲೂ ಸಂಗೀತ, ಉತ್ಸವಗಳೇ. ಕೋಗಿಲೆಗೂ ಹಾಡುವ ತವಕ, ಆಗತಾನೆ ಚಿಗುರಿದ ಮಾವಿನೆಲೆಯ ತಿಂದು ಮೈ ಮರೆತು ಹಾಡುತ್ತಿರುತ್ತದೆ. ಹೊಸತನನ್ನು ಸ್ವಾಗತಿಸಲು ಸಂಭ್ರಮ ಇರದೇ ಇದ್ದರೆ ಹೇಗೆ? ಪ್ರಖರ ಸೂರ್ಯನ ಸ್ವಾಗತಿಸಲು ಪಾನಕ, ಕೋಸಂಬರಿಗಳ ಸೇವೆ ಎಲ್ಲೆಡೆ. ಹೊಸಬರ ಜೊತೆ ಬೆರೆಯುತ್ತಾ, ಸಂಬಂಧ ನವೀಕರಿಸುತ್ತಾ, ಹಳೆಯದನ್ನು ಮರೆಯುತ್ತಾ ಸಾಗಲು ಇದಕ್ಕಿಂತ ಒಳ್ಳೆಯ ಆಚರಣೆ ಇನ್ನೇನು ಬೇಕು.

ಅಂದು ನಸುಕಿನಲ್ಲೇ ಎದ್ದು ಅಭ್ಯಂಜನ ಮುಗಿಸಿ ದೇಹದ ಕೊಳೆಯ ಜೊತೆಗೆ ಮನಸ್ಸಿನ ಕೊಳೆಯೂ ಹರಿದು ಹೊಸ ಬಟ್ಟೆ ಧರಿಸಿ, ಚಿಗುರು ಒಡೆದ ಮಾವಿನ ಎಲೆಯಿಂದ ತೋರಣ ಕಟ್ಟಿ ಸಿಂಗರಿಸಿ ಹೊಸತನ್ನು ಸ್ವಾಗತಿಸುವ ಸಂಭ್ರಮ. ಅಲ್ಲಿಯವರೆಗೂ ಸದ್ದಿರದ ಕೋಗಿಲೆಯೂ ಅಂದು ಹಾಡತೊಡಗುತ್ತದೆ. ಎದೆಯೊಳಗೆ ಹೊಸ ಹಾಡು ಹುಟ್ಟಿಸುತ್ತದೆ. ಎಷ್ಟೊಂದು ಹೊಸತು, ಎಷ್ಟೊಂದು ನವಭಾವ. ಒಂದು ದಿನಕ್ಕೆ ಇಷ್ಟೊಂದು ಹೊಸತನ್ನು ತರಲು ಸಾಧ್ಯವೇ? ಹೊಸತು ಎಂದು ಭಾವಿಸುವುದೇ ಬೇರೆ, ಹೊಸತನ ತುಂಬುವುದೇ ಬೇರೆ. ಇಡೀ ಪ್ರಕೃತಿಯೇ ಬದಲಾಗಿ, ಜೀವ ಸಂಕುಲಗಳೂ ಜೊತೆಯಾಗಿ ಬದುಕು ಛಲ ಗಟ್ಟಿಯಾಗಿ ಹೊಸತಾಗಿ ಬದುಕುವ ಪರಿ ಇದೆಯಲ್ಲ ಅದೇ ಯುಗಾದಿಯ ಶಕ್ತಿ. ಯುಕ್ತಿ. ಹೊಸತು ಎಂದರೆ ಕೇವಲ ಸಂತೋಷ ಮಾತ್ರವಲ್ಲ.  ಹಾಗಾಗಿಯೇ ಅಂದು ಬೇವು ಬೆಲ್ಲದ ಸ್ವೀಕಾರ. ಬದುಕು ಸಿಹಿ ಕಹಿ ಎರಡರ ಮಿಶ್ರಣ. ಮತ್ತದು ಹಾಗಿದ್ದರೆ ಅಲ್ಲೊಂದು ಸಮತೋಲನ. ಹಾಗಾಗಿಯೇ ಎರಡನ್ನೂ ಸೇವಿಸುವುದರ ಮೂಲಕ ಎರಡನ್ನೂ ಒಂದೇ ರೀತಿಯಾಗಿ ಎದುರಿಸುವ ಒಪ್ಪಿಕೊಳ್ಳುವ ಸಂಕಲ್ಪ ಮಾಡಲಾಗುತ್ತದೆ.

ಏನೇ ಖುಷಿ ಖುಷಿಯಾಗಿ ಓಡಾಡಿದರೂ ಈ ಬೇವು ಬೆಲ್ಲ ಕೊಡುವ ಸಮಯದಲ್ಲಿ ಮಾತ್ರ ಕೋಪ ಬರುತ್ತಿದ್ದದ್ದು ನಿಜ. ಆಗೆಲ್ಲಾ ಬೇವು ಬೆಲ್ಲ ಕೈಗಿಟ್ಟ ಅಜ್ಜ ಶ್ಲೋಕವೊಂದನ್ನು ಹೇಳಿಕೊಡುತ್ತಿದ್ದರು.
ಶತಾಯುವ್ರಜ ದೇಹಾಯ ಸರ್ವ ಸಂಪತ್ಕರಾಯ ಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ
ಇದನ್ನ ತಿಂದರೆ ನೂರು ವರ್ಷ ಆರೋಗ್ಯವಾಗಿ ಸುಖವಾಗಿ ಬದುಕ್ತಾರೆ ಅಂತಿದ್ದರೆ ಸ್ವಲ್ಪ ಅನುಮಾನದಿಂದಲೇ ನೋಡುತ್ತಾ  ಅವರನ್ನು ವಿರೋಧಿಸಲಾಗದೆ ತಿನ್ನುತ್ತಿದ್ದೆ. ಊಟವಾದ ಮೇಲೆ ಕೂರಿಸಿಕೊಂಡು ಬೇವಿನ ಮಹತ್ವವನ್ನು ಹೇಳುವಾಗ ಬೆಳಿಗ್ಗೆ ಹೇಳಿದ್ದ ಮಾತು ಅಕ್ಷರಶಃ ನಿಜ ಅನ್ನಿಸುತ್ತಿದ್ದದ್ದು ಹೌದು.

ಹಿಂದೆಲ್ಲಾ ಹಲ್ಲು ಉಜ್ಜಲು ಬೇವಿನ ಕಡ್ಡಿಯನ್ನು ಉಪಯೋಗ ಮಾಡುತ್ತಿದ್ದರು. ಹಾಗಾಗಿಯೇ ಮುದುಕರಾದರೂ ಹಲ್ಲುಗಳು ಗಟ್ಟಿಯಾಗಿಯೇ ಇರುತಿತ್ತು. ಎತ್ತರದ ಮರ, ರೆಂಬೆ ಕೊಂಬೆಗಳು ಜಾಸ್ತಿ. ಎಷ್ಟು ಎತ್ತರಕ್ಕೆ ಬೆಳೆದರೂ ನೇರ. ಅಗಲವಾಗಿ  ಹರಡಿಕೊಂಡಿರುವುದರಿಂದ ಕಿತ್ತಷ್ಟೂ ಕಡ್ಡಿ ಸಿಗುತ್ತಿತ್ತು. ಮತ್ತು ಪ್ರತಿ ದಿನ ಹೊಸತು. ಇದು ಬಾಯಿಯ ದುರ್ಗಂಧ ತೊಡೆಯುವುದರ ಜೊತೆಗೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿತ್ತು. ಅಂದು ಅದನ್ನು ಆಡಿಕೊಂಡು ನಕ್ಕಿದ್ದ ಟೂತ್ ಪೇಸ್ಟ್ ಕಂಪನಿಗಳು ಇಂದು ನಿಮ್ಮ ಪೇಸ್ಟ್ ಅಲ್ಲಿ ನೀಮ್ ಇದೆಯೇ ಎಂದು ಕೇಳುತ್ತಿವೆ. ಬಟ್ಟೆ ಒಗೆಯುವ ಪೌಡರ್ ಅಲ್ಲಿ ನೀಮ್ ಇದ್ದರೆ ಎಳೆಯ ಮಕ್ಕಳು ಸುರಕ್ಷಿತ ಎಂಬರ್ಥದ ಜಾಹಿರಾತು ಕೊಡುತ್ತಿವೆ. ಒಂದು ಕಾಲದಲ್ಲಿ ಗೊಡ್ಡು ಎಂದು ಹೀಯಾಳಿಸಿದ, ನಾಗರಿಕತೆ ಇಲ್ಲದ್ದು ಎಂದು ಕರೆಸಿಕೊಂಡ ಎಲ್ಲವೂ ಇವತ್ತು ಸುರಕ್ಷಿತ ಆಗಿದ್ದು ಹೇಗೆ ಎಂಬ ಪ್ರಶ್ನೆ ನಾವು ಕೇಳಿಕೊಳ್ಳ ಬೇಕಿದೆ. ಅಲ್ಲಿಂದ ಬಂದಿದ್ದು ಎಲ್ಲವೂ ಪರಮ ಸತ್ಯ ಎನ್ನುವ ನಮ್ಮ ನಂಬಿಕೆಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕಿದೆ.

ಗಾಢ ಹಸಿರು ಬಣ್ಣದ ಎಲೆಗಳು ತಿನ್ನಲು ಕಹಿ ಆದರೆ ಔಷಧಿಯ ಗುಣ ಮಾತ್ರ ಅಷ್ಟೇ ಸಿಹಿ. ಪುಟ್ಟ ಎಲೆ ಒಡಲೊಳಗೆ ಔಷಧಿಯ ಆಗರವನ್ನೇ ತುಂಬಿಸಿಕೊಂಡಿರುತಿತ್ತು. ಹಳ್ಳಿಗಳಲ್ಲಿ ತೀರಾ ಸಾಮಾನ್ಯವೆನಿಸಿದ್ದ ಅಮ್ಮ ಎಂಬ ರೋಗಕ್ಕೆ ಇದರ ಎಲೆ ಪರಮೌಷಧ. ಮಲಗುವ ಹಾಸಿಗೆ ಅಡಿಯಲ್ಲಿ, ಸ್ನಾನದ ನೀರಿನಲ್ಲಿ ಇದು ಸ್ಥಾನ ಪಡೆಯುವುದು ಮಾತ್ರನಲ್ಲ ಅರಿಸಿನದೊಂದಿಗೆ ಇದರ ಎಲೆಯನ್ನು ಸೇರಿಸಿ ರುಬ್ಬಿ ಮಿಶ್ರಣವನ್ನು ಮೈಯೆಲ್ಲಾ ಹಚ್ಚಿದರೆ ಕಿಂಚಿತ್ತೂ ಕಲೆ ಮಾತ್ರವಲ್ಲ ನಂಜೂ ಉಳಿಯದಂತೆ ಇದು ನಿವಾರಿಸುತಿತ್ತು. ಬರೀ ಅದಕ್ಕೆ ಮಾತ್ರವಲ್ಲ ಎಲ್ಲಾ ಬಗೆಯ ಚರ್ಮ ರೋಗಗಳಿಗೂ ಇದರ ಎಲೆ ರಾಮಬಾಣ. ಕಜ್ಜಿ, ತುರಿಕೆ, ಗುಳ್ಳೆ ಇನ್ನೂ ಹತ್ತು ಹಲವು ಕಾಯಿಲೆಗಳಿಂದ ಮುದುರಿದ, ಒರಟಾದ, ಜೀವಂತಿಕೆ ಕಳೆದುಕೊಂಡ ದೇಹಕ್ಕೆ  ಈ ಲೇಪನವನ್ನು  ಲೇಪಿಸಿಕೊಂಡರೆ ಚರ್ಮ ಹೊಸತಾಗಿ ಮೃದುವಾಗಿ ಚಿಗುರು ಎಲೆಯಷ್ಟೇ ಮೋಹಕವಾಗಿರುತಿತ್ತು. ಹೊಳೆಯುತ್ತಿತ್ತು.

ಹಿಂದೆಲ್ಲಾ ವರ್ಷಕ್ಕೆ ಎರಡೋ ಮೂರೋ ಬಾರಿ ಅಕ್ಕಿ ಮಾಡಿಸುವ ಪರಿಪಾಠ. ಹಾಗೆ ಮಾಡಿಸಿದ ಅಕ್ಕಿ ಬಹುಕಾಲ ಇಟ್ಟರೂ ಹುಳು ಬಾರದಂತೆ ತಡೆಯಲು ಅದಕ್ಕೆ ಬೇವಿನ ಎಲೆ ಸೇರಿಸಿ ಇಡುತ್ತಿದ್ದರು. ಬೇವು ಕೀಟನಾಶಕ. ಕೇವಲ ಆಹಾರ ಪದಾರ್ಥಗಳಲ್ಲಿ ಕೀಟ ಬಾರದಂತೆ ತಡೆಯುವುದು ಮಾತ್ರವಲ್ಲ ಬೆಳೆಗಳಲ್ಲೂ ಕೀಟಗಳ ಹಾವಳಿ ಬರದಂತೆ ತಡೆಯುವ ಶಕ್ತಿ ಇದಕ್ಕಿದೆ. ವಿಶ್ವದಲ್ಲೇ ಅತಿ ಹೆಚ್ಚಿನ ರಾಸಾಯನಿಕ ಬಳಸುವ ದೇಶದಲ್ಲಿ ಮುಂಚೂಣಿಯಲ್ಲಿರುವ ಭಾರತ ಈಗಾಗಲೇ ರಾಸಾಯನಿಕಗಳ ಮಿತಿ ಮೀರಿದ ಬಳಕೆಯಿಂದ ಮಣ್ಣಿನ ಸತ್ವವನ್ನು ಕಳೆದುಕೊಂಡು ಅದು ಅಪಾಯಕಾರಿ ಮಟ್ಟವನ್ನು ಮುಟ್ಟಿದೆ. ಹಾಗೆ ಬೆಳೆದ ಆಹಾರ ಪದಾರ್ಥಗಳ ಪ್ರಭಾವ ಇನ್ನೇನು ಆಗಲು ಸಾಧ್ಯ? ಹಾಗಾಗಿಯೇ ಅದನ್ನು ತಡೆಯಲು ಬೇವು ಲೇಪಿತ ಯೂರಿಯಾ ಬಳಕೆಗೆ ಬಂದಿದೆ. ಇದರಲ್ಲಿ ಸಾರಜನಕ ನಿಧಾನವಾಗಿ ಬಿಡುಗಡೆಯಾಗುವುದರಿಂದ ಹಾಗೂ ಹಾನಿಕಾರಕ ರಾಸಾಯನಿಕ ಹೆಚ್ಚಾಗಿ ಬಳಸದೆ ಇರುವುದುರಿಂದ ಮಣ್ಣು ನಿಧಾನಕ್ಕೆ ತನ್ನ ಶಕ್ತಿ ಪಡೆದುಕೊಳ್ಳುವುದು ಮಾತ್ರವಲ್ಲ ಪರಿಸರವನ್ನೂ ಕಾಪಾಡುತ್ತದೆ. ಜೊತೆಗೆ ಬದುಕನ್ನೂ. ಅರೆ ಇದು ಮನುಷ್ಯರ ಚರ್ಮದ ಹಾಗೆ ಭೂಮಿಯ ಪದರವನ್ನೂ ಮೃದುವಾಗಿ ಅಷ್ಟೇ ಜೀವಂತಿಕೆಯಾಗಿ ಮಾರ್ಪಾಟು ಮಾಡುತ್ತಲ್ಲ, ಮೃದುತ್ವ ಮೂಡಿಸುತ್ತಲ್ಲ ಇದಕ್ಕೆ ಮನುಷ್ಯರೂ ಮಣ್ಣು ಎಲ್ಲವೂ ಒಂದೇ  ಎನ್ನುವ ಬೆರಗು ಕಣ್ಣಲ್ಲಿ ಮೂಡಿ ಬೇವಿನ ಮೇಲೆ ಅರಿವಿಲ್ಲದೆ ಪ್ರೀತಿ ಮೊಳೆಯುತಿತ್ತು.

ಮಲೆನಾಡಿನಲ್ಲಿ ಬೇವಿನ ಮರಗಳು ಸ್ವಲ್ಪ ಕಮ್ಮಿಯೇ... ಹೊಂಗೆಯ ನೆರಳಿನಂತೆ ಇದರ ನೆರಳೂ ತಂಪು. ಹಾಗಾಗಿ ಬಯಲುಸೀಮೆಯ ಹೊಲದ ನಡುವಿನ ಅಥವಾ ಮನೆಯ ಎದುರಿನ ಮರದ ಕೆಳಗೆ ಒಂದು ಮಂಚವೋ ಚಾಪೆಯೋ ಹಾಕಿ ಅಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವುದು ತೀರಾ ಸಹಜ. ಇದರ ಗಾಳಿಗೂ ತುಂಬು ಪ್ರಾಣಶಕ್ತಿ. ಇದು ಶ್ವಾಸಕೋಶವನ್ನು ಬಲಗೊಳಿಸುತ್ತದಂತೆ. ಜೊಂಪೆ ಜೊಂಪೆಯಾಗಿ ದೀಪಾವಳಿಯ ದೀಪ ತೂಗುಬಿಟ್ಟಂತೆ ಕಾಣಿಸುವ ಇದರ ಬಿಳಿ ಬಣ್ಣದ ಹೂಗಳು ಕೆಳಗೆ ಉದುರಿ ಬಿದ್ದಾಗ ನಕ್ಷತ್ರಗಳು ಚೆಲ್ಲಾಡಿವೆಯೇನೋ ಅನ್ನಿಸುವಷ್ಟು ಮೋಹಕ. ನಂತರ ತೂಗಾಡುವ ಹಸಿರು ಬಣ್ಣದ ಕಾಯಿಗಳು ನಿಧಾನಕ್ಕೆ ಹೊಂಬಣ್ಣಕ್ಕೆ ತಿರುಗಿ ಚಿನ್ನದ ಕಿವಿಯೋಲೆ ತೂಗಿ ಬಿಟ್ಟಂತೆ ಕಾಣಿಸುತ್ತದೆ. ಇದರಿಂದ ಎಣ್ಣೆಯನ್ನು ತೆಗೆಯುತ್ತಾರೆ. ಬೇವಿನ ಎಣ್ಣೆಯನ್ನು ಬಾಣಂತಿಗೆ, ದೇಹದಲ್ಲಿ ನಂಜು ಇದ್ದಾಗ, ಚರ್ಮರೋಗ ಕಾಣಿಸಿಕೊಂಡಾಗ, ಅಷ್ಟೇ ಯಾಕೆ ಯಾವುದಾದರೂ ಅಪರೇಷನ್ ಆದಾಗ ಕೊಯ್ದ ಗಾಯ ಒಣಗಲು ಹಾಗೂ ನಂಜಾಗದಂತೆ ಕಾಪಾಡಲು ಇದನ್ನು  ಕುಡಿಯಲು ಕೊಡುತ್ತಾರೆ. ಕಹಿ ಕಹಿಯಾಗಿ ಗಂಟಲಿನಲ್ಲಿ ಇಳಿದು ಹೊಟ್ಟೆಯನ್ನು ಸೇರುವ ಇದು ಗಂಟೆಗಳ ಕಾಲ ನಾಲಿಗೆಯಲ್ಲಿ ಕಹಿಯನ್ನು ಉಳಿಸಿದರೂ,  ನಂಜು ಮಾತ್ರ ಲವಲೇಶವೂ ಉಳಿಯದಂತೆ ನಾಶಮಾಡುತ್ತದೆ. ವಿಷನಿವಾರಕ ಬೇವು ಸಾಕ್ಷಾತ್ ವಿಷಕಂಠನಂತೆ ಅನ್ನಿಸುತ್ತದೆ.

ಭೂಮಿಯ ನಂಜು, ದೇಹದ ನಂಜು ಎಲ್ಲವನ್ನೂ ತೆಗೆಯುವ ಇದು ಅಪ್ಪಟ ಪರಿಸರ ಪೂರಕ. ಶತಮಾನಗಳು ಕಳೆದರೂ ಗಟ್ಟಿಯಾಗಿ ನಿಲ್ಲುವ ಈ ಮರದಲ್ಲಿ ನೂರಾರು ವರ್ಷಗಳು ಕಳೆದ ನಂತರ ಸ್ವತಃ ದೇವಿಯೇ ಬಂದು ವಾಸಿಸುತ್ತಾಳೆ ಅನ್ನೋದು ಹಳೆಯ ನಂಬಿಕೆ. ಜನರನ್ನು, ಭೂಮಿಯನ್ನ, ಸಕಲ ಚರಾಚರಗಳನ್ನು ವಿಷದಿಂದ ಮುಕ್ತಗೊಳಿಸುವ, ಅರೋಗ್ಯ ಕೊಡುವ, ಕಾಪಾಡುವ ಇದು ಅಮ್ಮನೇ ಅಲ್ಲವಾ ಅನ್ನಿಸಿ ಬೆರಗು ಮೂಡಿತ್ತು. ಅದನ್ನು ಎಷ್ಟು ಚೆಂದವಾಗಿ ಹೇಳಿದ್ದಾರಲ್ಲ ಅಂತ ಸಂಪ್ರದಾಯದ ಮೇಲೆ ಹೆಮ್ಮೆಯೂ.. ದೇವಿ ಆರಾಧನೆಯಲ್ಲಿ ಈ ಬೇವು ಪ್ರಮುಖ ಪಾತ್ರ ವಹಿಸುವುದು ಯಾಕೆ ಎನ್ನುವಾಗಲೆಲ್ಲ ಈ ನಂಬಿಕೆ ನೆನಪಾಗುತ್ತದೆ. ಕಹಿ ಅನ್ನಿಸುವ ಬೇವಿನ ಮೇಲೆ ಗೊತ್ತಿಲ್ಲದೇ ಪೂಜ್ಯ ಭಾವ ಮೂಡುತ್ತದೆ. ನಂಬಿಕೆಗಳು ಏನೇ ಇರಲಿ ವೈಜ್ಞಾನಿಕವಾಗಿಯೂ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುವ ಪರಿಸರ ಉಳಿಸುವ ಬೇವು ಪೂಜನೀಯವೇ... ಇಷ್ಟು ಒಳ್ಳೆಯ ಒಡಲಲ್ಲಿ ಅಗಾಧ ಶಕ್ತಿ ತುಂಬಿಕೊಂಡಿರುವ ಇದನ್ನು ರುಚಿಯ ಕಾರಣಕ್ಕೆ ನಿರಾಕರಿಸುವುದು ಸರಿಯಾ ಎಂದು ಅಜ್ಜ ಕೇಳುವಾಗ ನಾಲಿಗೆಯ ಕಹಿ ಮಾಯವಾಗಿರುತಿತ್ತು. ಮುಂದಿನ ಸಲ ಹಬ್ಬದಲಿ ಜಾಸ್ತಿ ಬೆಲ್ಲ ಅನ್ನುವುದಕ್ಕಿಂತ ಬೇವು ಬೇಕು ಅನ್ನಬೇಕು ಅನ್ನುವ ನಿರ್ಧಾರ ಮಡುಗಟ್ಟುತಿತ್ತು. ಇಂಥ ಬೇವು ಚಿಗುರಿ ಮೈತುಂಬಿ ನಲಿಯುತ್ತಿದ್ದದ್ದು ಇದೇ ಯುಗಾದಿಯ ಸಮಯದಲ್ಲಿಯೇ... ವಸಂತ ಋತುವಿನಲ್ಲಿಯೇ ...

ವಸಂತ ಎಂದರೆ ಬರೀ ಋತುಗಳ ರಾಜ ಮಾತ್ರವಲ್ಲ ಬಣ್ಣಗಳ ರಾಜನೂ ಹೌದು ಅನ್ನಿಸುವ ಹಾಗಿರುತ್ತದೆ ಯಗಾದಿ. ಅಂದು ಎಲ್ಲೆಲ್ಲೂ ವರ್ಣ ಚಿತ್ತಾರವೇ. ಪ್ರತಿ ಚಿಗುರೂ ಹೊಂದಿರುವ ವರ್ಣ ವೈವಿಧ್ಯ, ಅಂಗಳದ ಚಿತ್ತಾರದ ರಂಗೋಲಿ, ಹಸಿರು ತೋರಣ, ಬಣ್ಣ ಬಣ್ಣದ ಹೊಸ ಬಟ್ಟೆ, ವೈವಿಧ್ಯಮಯ ಅಡುಗೆಗಳ ವಿವಿಧ ಬಣ್ಣ,  ಅರಳಿರುವ ಹೂ ಗಳ, ತೂಗಾಡುವ ಕಾಯಿಗಳ ವೈಯಾರ, ದುಂಬಿಗಳ ಝೇಂಕಾರ,  ಹಾರಾಡುವ ಚಿಟ್ಟೆಗಳ , ಆಡುವ ಮಕ್ಕಳ, ಸರಬರ ಸರಿದು ಹೋಗುವ ಹಿರಿಯರ  ಹೀಗೆ ಇಡೀ ಪ್ರಕೃತಿಗೆ ಪ್ರಕೃತಿಯೇ ತಯಾರಾಗಿ, ವನಪು ವೈಯ್ಯಾರಗಳಿಂದ ಶೋಭಿಸುತ್ತಾ ಸಂಭ್ರಮಿಸುತ್ತಾ ಯುಗದ ಆದಿಯನ್ನು ಸ್ವಾಗತಿಸುವ ರೀತಿಯಿದೆಯಲ್ಲ ಅದು ಬದುಕಿಗೆ ಹೊಸ ಚೈತನ್ಯವನ್ನು ತುಂಬುತ್ತದೆ. ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹೊಸತು ಹೊಸದಾಗಿ ಬದುಕಲು ಪ್ರೇರಣೆ ತುಂಬುತ್ತದೆ.

ಹಾಗಾಗಿಯೇ ಅಂದು ದೇವರಿಗೆ ಅರ್ಚನೆ,ಆರತಿ ನೈವೇದ್ಯಗಳಿಂದ ಪೂಜಿಸಿ ಬೇವು ಬೆಲ್ಲ ಸೇವಿಸಿ ಹಿರಿಯರಿಗೆ ನಮಸ್ಕರಿಸಿ ಹೊಸ ಬದುಕಿಗೆ ಆಶೀರ್ವಾದ ಪಡೆದು ಹಬ್ಬದಡುಗೆ ಉಂಡು ವಿಶ್ರಮಿಸುವ ವೇಳೆಗೆ ಇಳಿಸಂಜೆ ಆಗಮಿಸಿರುತ್ತದೆ. ಬಾನಲ್ಲೂ ವರ್ಣ ಚಿತ್ತಾರ ಶುರುವಾಗಿರುತ್ತದೆ. ದೇವಸ್ಥಾನದ ಹಜಾರದಲ್ಲೋ, ಮನೆಯ ಜಗುಲಿಯಲ್ಲೋ  ಪಂಚಾಗ ಶ್ರವಣ ಶುರುವಾಗಿರುತ್ತದೆ. ಇಡೀ ವರ್ಷದ ಮಳೆ, ಬೆಳೆ, ಕಾಲಚಕ್ರದ ತಿರುಗಾಟದ ವರದಿ ಎಲ್ಲವೂ ಲಭ್ಯ. ಅದನ್ನು ಕೇಳುತ್ತಲೇ ಈ ವರ್ಷ ಹೇಗಿರಬಹುದು ಅನ್ನುವ ಲೆಕ್ಕಾಚಾರ, ಅದಕ್ಕನುಗುಣವಾಗಿ ಬದುಕು ಭಾವಗಳ ಹೊಂದಿಸಿಕೊಳ್ಳುವ ಚಮತ್ಕಾರ. ಹೀಗೆ ಹೊಸ ದಿನವೊಂದು ಶುರುವಾಗಿ ಮುಗಿಯುವಾಗ ಬದುಕಿನ ಮುನ್ನೋಟದ ಯೋಜನೆ ತಯಾರಾಗಿರುತ್ತದೆ. ಚಂದ್ರನ ಆಗಮನವಾಗಿರುತ್ತದೆ. ಅವತ್ತಿನ ಚಂದ್ರನಿಗಿಂತ ಬಿದಿಗೆಯ ಚಂದ್ರನ ನೋಡುವ ಕಾತುರವೇ ಬೇರೆ. ಬಿದಿಗೆಯ ಚಂದ್ರಮ ಗಣೇಶ ಚೌತಿಯ ಚಂದ್ರನ ನೋಡಿದ್ದರ ಶಾಪ ಕಳೆಯುವವ. ಒಬ್ಬನೇ ಚಂದ್ರ ಶಾಪಕಾರಕನೂ ಹೌದು, ಶಾಪ ನಿವಾರಕನೂ ಹೌದು. ಹೊಸತು ಬದುಕಿಗೆ ತುಂಬುವ ಹೊಸತನ, ವರದಾನ ಅಂದರೆ ಇದೆ ಅಲ್ಲವಾ..

ಹಾಗಾಗಿಯೇ ಏನೋ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂದು ಬೇಂದ್ರೆ ಬರೆದಿದ್ದು. ಇಲ್ಲಿ ಎಲ್ಲವೂ ಸಹಜವಾಗಿ ಜರುಗುತ್ತಲೇ ಇರುತ್ತದೆ. ಕತ್ತಲೆ ಕಳೆದು ಬೆಳಕು ಬರುವಂತೆ, ನೋವು ಕಳೆದು ನಲಿವು ಆಗಮಿಸುವಂತೆ, ಇರುವುದನ್ನ ಕಳೆದುಕೊಂಡರೂ  ಮತ್ತೇನೋ ಹೊಸತು ಸಿಗುವಂತೆ, ಯಾವುದೂ ಸ್ಥಿರವಲ್ಲ ಎನ್ನುತ್ತಲೇ ಪ್ರತಿ ಕ್ಷಣವೂ ಹೊಸತೆ, ಪ್ರತಿ ದಿನವೂ ಹೊಸ ಹುಟ್ಟೇ ಎನ್ನುತ್ತಾ ಪ್ರಕೃತಿ ಹೇಳುತ್ತಲೇ ಹೋಗುತ್ತದೆ. ಕಳೆದದ್ದು ಕಳೆದು ಹೋಗುತ್ತದೆ, ಮತ್ತದನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಪ್ರತಿ ಹೊಸತನ್ನು ಹೊಸದಾಗಿ ಹೊಸ ಭಾವದಿಂದ ಸ್ವೀಕರಿಸು, ಸ್ವಾಗತಿಸು ಎನ್ನುವುದು ಮರೆಯುತ್ತೇವೆ ಎಂದೇ ಯುಗಾದಿ ಮತ್ತೆ ಬರುತ್ತದೆ. ಮರಳಿ ಮರಳಿ ಬರುತ್ತದೆ. ಹೊಸತು ಹೊಸತನ್ನು ತುಂಬುತ್ತದೆ.


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...