ಕಶೀರ

ಮುಸ್ಸಂಜೆ ಕವಿಯುವಾಗ ಕೈಕಾಲು ತೊಳೆದು ಬಂದು ದೇವರಿಗೆ ದೀಪ ಹಚ್ಚಿ ಭಜನೆ ಮಾಡುವಾಗ ಗಣಪತಿಯ ಸ್ತುತಿಯ ನಂತರ ಹೇಳುತಿದ್ದದ್ದೆ ನಮಸ್ತೇ ಶಾರದಾ ದೇವಿ ಕಶ್ಮೀರ ಪುರವಾಸಿನಿ ಅನ್ನುವ ಶ್ಲೋಕ. ಬೆಳಿಗ್ಗೆ ಓದುವಾಗಲೂ ಅದನ್ನು ಹೇಳಿಯೇ ಪುಸ್ತಕ ತೆರೆಯುತ್ತಿದ್ದದ್ದು. ಶ್ರಿಂಗೇರಿಯಲ್ಲಿರುವ ಶಾರದೆಯನ್ನು ಕಶ್ಮೀರ ಪುರವಾಸಿನಿ ಅಂತ ಯಾಕೆ ಹೇಳ್ತಾರೆ ಅನ್ನುವ ಗೊಂದಲ ಬರುವುದಕ್ಕೆ ಆಸ್ಪದವೇ ಇರಲಿಲ್ಲ. ಯಾಕೆಂದರೆ ಶ್ರೀ ಶಂಕರರು ಅವಳನ್ನು ಅಲ್ಲಿಂದ ಕರೆತಂದ ಕತೆ ಗೊತ್ತಿತ್ತು. ಆದರೂ ಅವಳು ಅಲ್ಲಿಂದ  ಬಿಟ್ಟು ಬಂದ ಮೇಲೆಯೂ ಅವಳನ್ನು ಅಲ್ಲಿಯವಳೇ ಎನ್ನುವುದು ಯಾಕೆ ಎನ್ನುವ ಪ್ರಶ್ನೆ ಮೂಡಿದಾಗಲೆಲ್ಲ ಸಂಪಗೋಡಿನ ನೆನಪಾಗುತಿತ್ತು. ಅರಿವಾಗದೆ ಕಣ್ಣು ತುಂಬುತ್ತಿತ್ತು.

ಭಾರತದ ಮುಕುಟ ಮಣಿ ಎಂದರೆ ಅದು ಕಶ್ಮೀರ. ಅದಿಲ್ಲದೆ ಹೋದರೆ ಕಿರೀಟವಿಲ್ಲದ ರಾಜನಂತೆ ಅನ್ನಿಸುತ್ತದೆ ಭೂಪಟವನ್ನು ನೋಡುವಾಗ. ಆ ಕಶ್ಮೀರದ ಹಿನ್ನಲೆ, ಪುರಾಣಗಳಲ್ಲಿ ಬರುವ ಅದರ ವರ್ಣನೆ, ಅಲ್ಲಿನ ಕ್ಷಾತ್ರತ್ವ, ಮಣ್ಣಿನ ಗುಣ, ಪಂಡಿತರ ಪಾಂಡಿತ್ಯ, ಪ್ರಕೃತಿಯ ಸೊಬಗು ಪ್ರತಿಯೊಂದು ಅದು ಪುಣ್ಯಭೂಮಿ, ಪವಿತ್ರ ನೆಲ ಅನ್ನುವ ಭಾವ ಹುಟ್ಟಿಸುತ್ತಿತ್ತು. ಅಂತ ಸ್ವರ್ಗ ನರಕವಾಗಲು ಶುರುವಾಗಿದ್ದು ಯಾವಾಗ ಎನ್ನುವುದಕ್ಕೆ ಅಷ್ಟೇ ದೊಡ್ಡ ಇತಿಹಾಸವಿದೆ. ಪ್ರತಿಬಾರಿ ಆಕ್ರಮಣಕ್ಕೆ ಒಳಗಾದರೂ ಮತ್ತೆ ಮತ್ತೆ ಚಿಗಿತು ನಿಲ್ಲುವ, ಶತ್ರುಗಳನ್ನು ಹಿಮ್ಮೆಟ್ಟಿಸುವ ಶೌರ್ಯ ಅಂತಸತ್ವ ಇದ್ದಿದ್ದರಿಂದಲೇ ಕಶ್ಮೀರ ತನ್ನತನ ಉಳಿಸಿಕೊಂಡಿತ್ತು. ಅಭೇಧ್ಯವಾಗಿತ್ತು. ಹೊರಗಿನ ಶತ್ರುಗಳಿಗಿಂತ ಈ ಒಳಗಿನ ಶತ್ರುಗಳೇ ಅಪಾಯಕಾರಿ ಹಾಗೂ ಅವರು ನಾಶಮಾಡುವುದು ಆ ನೆಲದ ಅಂತಸತ್ವವನ್ನೇ ಅನ್ನೋದು ಕಶ್ಮೀರದ ಇತಿಹಾಸವನ್ನು ಅವಲೋಕಿಸಿದಾಗ ಅರ್ಥವಾಗುವ ಕಹಿ ಸತ್ಯ.

ಎಲ್ಲದಕ್ಕಿಂತ ದೊಡ್ಡ ಹಾಗೂ ಅಪಾಯಕಾರಿಯಾದ ಅಮಲು ಎಂದರೆ ಧರ್ಮದ ಅಮಲು. ಅದರಲ್ಲೂ ಇದನ್ನೇ ಮೂಲಸೋತ್ರವಾಗಿಸಿಕೊಂಡ ಮತವೊಂದರ ಕ್ರೌರ್ಯ ಮನುಷ್ಯ ಊಹಿಸಲೂ ಅಸಾಧ್ಯವಾದಷ್ಟು. ಹಾಗಾದರೆ ಆ ಕ್ರೌರ್ಯವನ್ನು ಎದುರಿಸುವ ತನ್ನತನ ಕಾಪಾಡಿಕೊಳ್ಳುವ ಸಾಮರ್ಥ ಈ ನೆಲದ ಮಣ್ಣಿಗೆ ಇಲ್ಲಿನ ಸಂಸ್ಕೃತಿಗೆ ಆಚರಿಸುತ್ತಿದ್ದ ಧರ್ಮಕ್ಕೆ ಇರಲಿಲ್ಲವೇ ಎಂದರೆ ಖಂಡಿತ ಇತ್ತು. ಆದರೆ ಆಳುವ ನಾಯಕರಿಗೆ ಅದು ಬೇಕಿರಲಿಲ್ಲ, ಅವರನ್ನು ಹಿಡಿತದಲ್ಲಿಟ್ಟುಕೊಂಡ ಮತ್ಯಾವುದೋ ಶಕ್ತಿಗೆ ಅದರ ಅಗತ್ಯವಿರಲಿಲ್ಲ. ನಾಯಕ ಅಸಮರ್ಥನಾದರೆ, ಲಂಪಟನಾದರೆ, ಅಭಿಮಾನ ಶೂನ್ಯನಾದರೆ ಏನಾಗುತ್ತದೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಕಶ್ಮೀರ. ಅದು ಕೇವಲ ಕಶ್ಮೀರದ ಸಮಸ್ಯೆಯೇ ಅಲ್ಲ ಅದು ನಾಳೆ ನಮ್ಮ ಮನೆಯಂಗಳಕ್ಕೂ ವ್ಯಾಪಿಸಬಹುದಾದ ನಮ್ಮೆಲ್ಲರನ್ನೂ ನುಂಗಬಹುದಾದ  ರಾಕ್ಷಸ.

ಕೇವಲ ಪ್ರವಾಸಿಗರು ಹಾಗೂ ಕೃಷಿಯನ್ನು ಅವಲಂಬಿಸಿದ ಅಲ್ಲಿನ ಜನರ ಬದುಕು ಅಷ್ಟೇನೂ ಸುಲಭವಲ್ಲ. ಆದರೆ ಸುಲಭವಾಗಿಸಿದ್ದು ಹರಿದು ಬಂದ ಹಣದ ಹೊಳೆ. ಸಮಯ ಕಳೆಯಲು ಸಿಕ್ಕಿದ್ದು ಕಲ್ಲೆಸೆಯುವ ಉದ್ಯೋಗ. ಇಡೀ ದೇಶದ ತೆರಿಗೆಯನ್ನು ಅಲ್ಲಿ ಬಳಸಿದರೂ, ಉಳಿದವರಿಗೆ ಅಲ್ಲಿ ವ್ಯಾಪಾರಕ್ಕಾಗಲಿ, ವ್ಯವಹಾರಕ್ಕಾಗಲಿ ಅವಕಾಶ ಕೊಡದೆ ಅಲ್ಲಿಯ ಅಭಿವೃದ್ಧಿಗೆ ನಿಯಂತ್ರಣ ಹಾಕಿದ್ದು ನಮ್ಮದೇ ನಾಯಕರ ಅಧಿಕಾರ ದಾಹದ ಮನಸ್ಥಿತಿ. ಅಲ್ಲಿಂದ ಬೇರೆಕಡೆಗೆ ಮದುವೆಯಾಗಿ ಬಂದರೆ ಅಲ್ಲಿಯ ಅಧಿಕಾರಗಳನ್ನು ಕಿತ್ತುಕೊಳ್ಳುವ ವ್ಯವಸ್ಥೆ ಅವರನ್ನು ಹೊರಗೂ ಬರದೆ, ಒಳಗೂ ಬೆಳೆಯದೆ ನಿಂತ ನೀರಾಗಿಸುವ ಹಾಗಿದೆ. ನಿಂತ ನೀರಿನಲ್ಲಿ ಮತ್ತೇನು ತಾನೇ ಬೆಳೆಯಲು ಸಾಧ್ಯ... ಅದರಲ್ಲೂ ಆರ್ಟಿಕಲ್ 370 ದುರ್ಬಳಕೆ ಹಾಗೂ ಇಚ್ಚಾಶಕ್ತಿಯ ಕೊರತೆ ಇನ್ನಷ್ಟು ಪರಿಸ್ಥಿತಿಯನ್ನು ಹದಗೆಡಿಸಿದೆ.

ಪಂಡಿತರ ದುಸ್ಥಿತಿ, ಅವರ ಮೇಲೆ ನಡೆದ ಕ್ರೌರ್ಯದ ಪರಮಾವಧಿ, ನೆಲೆ ಇಲ್ಲದೆ ಅವರನ್ನು ಪರದೇಶಿಗಳಾಗಿಸಿದ ಪರಿ, ಉತ್ತಮವಾಗಿ ಬಾಳಿ ಬದುಕಿದವರು ನಿರಾಶ್ರಿತರ ಶಿಬಿರದಲ್ಲಿ ಇಂಚು ಜಾಗಕ್ಕಾಗಿ ಪರದಾಡುವ ರೀತಿ, ತಮ್ಮದೇ ನೆಲದಲ್ಲಿ ಅಕ್ಷರಶಃ ಎಲ್ಲವನ್ನೂ ಕಳೆದುಕೊಂಡು ಜೀವ ಉಳಿಸಿಕೊಳ್ಳಲು ಪಟ್ಟ ಪಾಡು, ಪರಕೀಯ ಭಾವ,  ಸೈನಿಕರ ಮೇಲೆ ನಡೆಯುವ ದೌರ್ಜನ್ಯ, ತಮ್ಮ ಮೇಲೆ ಧಾಳಿ ಆದರೂ ಹಲ್ಲುಕಚ್ಚಿ ಸಹಿಸುವುದರ ವಿನಃ ಆತ್ಮರಕ್ಷಣೆ ಮಾಡಿಕೊಳ್ಳಲೂ ಆಗದ ಅವರ ಅಸಹಾಯಕತನ, ಹಾದಿಬದಿಯ ಸರಕಿಗಿಂತಲೂ ಅಗ್ಗವಾದ ಪ್ರಾಣ, ಮತಾಂಧತೆಯ ಪರಾಕಾಷ್ಟೆ. ಇದಾವುದರ ಅರಿವಿಲ್ಲದೆ ಅಸಲಿಗೆ ಅವರಿಗೇನು ಬೇಕು ಎನ್ನುವುದು ಗೊತ್ತಿದೆಯಾ ಎಂದು ತಿಳಿಯದೆ ಅಲ್ಲಿನ ಮೂಲನಿವಾಸಿಗಳ ಮರೆತು ಕ್ರೌರ್ಯವನ್ನು ಮಾನವೀಯತೆ ಎಂದು ಸಮರ್ಥಿಸುವ, ಅದಕ್ಕಾಗಿ ಹೋರಾಡುವ ಒಂದು ವರ್ಗದ ಜನ ತಮ್ಮನ್ನು ತಾವು ಪ್ರಗತಿಪರರು ಅಂದುಕೊಳ್ಳುವಾಗ ಈ ದೇಶಕ್ಕೆ ಪ್ರಗತಿಯೇ ಮಾರಕ ಅನ್ನಿಸಿದ್ದು ಎಷ್ಟು ಸಲವೋ. ಕಶ್ಮೀರದ ಬಗ್ಗೆ ಪ್ರೇಮಶೇಖರ್ ಸರ್ ವಿವರಿಸುವಾಗ ಅಲ್ಲಿ ಇರುವುದು ಎರಡೇ ರೀತಿ ಅನ್ನಿಸುತ್ತಿತ್ತು. ಒಂದು ಧಗಧಗನೆ ಉರಿಯುವ ಬೆಂಕಿ, ಇನ್ನೊಂದು ಬೂದಿಮುಚ್ಚಿದ ಕೆಂಡದಂತ ಪರಿಸ್ಥಿತಿ.

ಪಾಕಿಸ್ತಾನದ ಕುತ್ಸಿತ ಅದಕ್ಕಿಂತಲೂ ಕ್ರೂರವಾದ ಮನಸ್ಥಿತಿ, ನೆಹರೂ ನಿರ್ಲಕ್ಷವೋ, ಉದಾಸೀನವೋ, ಮತ್ತೇನೋ.. ಅಹಿಂಸೆಯ ಪಾಠ, ಅನಾವಶ್ಯಕ ಒಳ್ಳೆಯತನ, ಅಂಧಪ್ರೀತಿ, ರಷ್ಯಾವನ್ನು ಹಣಿಯುವ ಬ್ರಿಟಿಷರ ಹುನ್ನಾರ, ಭಾರತವನ್ನು ದುರ್ಬಲಗೊಳಿಸುವ ಚೀನಾದ ಸಂಚು, ನಮ್ಮ ಅಭಿಮಾನ ಶೂನ್ಯತೆ ಎಲ್ಲವೂ ಸೇರಿ ಪುಣ್ಯಭೂಮಿಯನ್ನು ಉರಿಯುವ ಭೂಮಿಯಾಗಿಸಿದ ಕೀರ್ತಿಗೆ ಭಾಜನರಾಗಿಸುತ್ತದೆ. ಎಲ್ಲವನ್ನೂ ಎದುರಿಸುವ ನಾಯಕತ್ವದ ಕೊರತೆ ಒಂದು ಕಾಲದ ವಿಶ್ವಗುರುವಿನ ನೆಲದ್ದು ಎನ್ನುವುದು ಮಾತ್ರ ಅರಗಿಸಿಕೊಳ್ಳಲಾಗದ ಸತ್ಯ.

ಕಶ್ಮೀರವನ್ನು ಹೊರಗಿನ ಪ್ರಪಂಚದಿಂದ ಹೊರಗೆ ಇಟ್ಟಷ್ಟೇ ಸಶಕ್ತವಾಗಿ ಹೊರಗಿನ ಜಗತ್ತಿಗೂ ಅಲ್ಲಿನ ತಲ್ಲಣಗಳ, ವಸ್ತು ಸ್ಥಿತಿಯ ಮುಚ್ಚಿಡುವ ಕಾರ್ಯವೂ ನಡೆಯುತ್ತಿದೆ. ವಿದ್ಯೆ, ಅವಕಾಶ, ಅಭಿವೃದ್ಧಿ ಎಲ್ಲವುದರಿಂದ ಅವರನ್ನು ದೂರವಿಟ್ಟು ಅವರನ್ನು ಯಾರದ್ದೋ ಗೆಲುವಿಗೆ ದಾಳವಾಗಿಸಿಕೊಳ್ಳುವ ಯತ್ನ ನಡೆಯುತ್ತಿದೆ. ಪ್ರಶ್ನೆ ಮಾಡದೆ ಒಪ್ಪಿಕೊಳ್ಳುವ, ಹಿಂದೂಗಳನ್ನೂ ದ್ವೇಷಿಸುವ ಹೇಳಿದ್ದಷ್ಟೇ ಮಾಡುವ ಯಂತ್ರಗಳ ಹಾಗೆ ಅವರನ್ನು ಅಮಲಿನಲ್ಲಿಟ್ಟು ಬಳಸಿಕೊಳ್ಳುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ. ನಿಜವಾಗಲೂ ಕಶ್ಮೀರದ ಪರಿಸ್ಥಿತಿ ಹಾಗೂ ಅಲ್ಲಿನವರ ಮನಸ್ಥಿತಿ ಹೇಗಿದೆ ಅನ್ನುವುದಕ್ಕೆ, ಅದನ್ನು ಅಗ್ನಿಕುಂಡವಾಗಿಸಿ ಪ್ರಜ್ವಲಿಸುವ ಹಾಗೆ ಮಾಡುವುದಕ್ಕೆ ಯಾವ ಆಜ್ಯವನ್ನು ಹೇಗೆ ಬಳಸಲಾಗುತ್ತಿದೆ ಎಂದು ತಿಳಿಯುವುದಕ್ಕೆ, ನಮ್ಮದೇ ದೇಶದ ಮುಕುಟ ಹೇಗೆ ಹೊತ್ತಿ ಉರಿಯುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ಸಹನಾ ವಿಜಯಕುಮಾರ್ ಅವರ  ಕಶೀರ ಕಾದಂಬರಿ ಸಹಾಯ ಮಾಡುತ್ತದೆ. ಇತಿಹಾಸದ ಪುಟಗಳನ್ನೂ ಬಿಚ್ಚಿಡುತ್ತಲೇ ಕತೆ ಹೇಳುವುದು ಅಷ್ಟು ಸುಲಭವಲ್ಲ ಆದರೆ ಮಾಹಿತಿಯನ್ನೂ ಕಾದಂಬರಿಯಾಗಿಸಿ ಓದುವಷ್ಟು ಹೊತ್ತು ಹಿಡಿದಿಟ್ಟುಕೊಳ್ಳುವ ಜೊತೆಗೆ ಕಶ್ಮೀರವನ್ನು ಪರಿಚಯಿಸುವ ಕೆಲಸವನ್ನು ಅವರು ಚೆಂದವಾಗಿ ಮಾಡಿದ್ದಾರೆ.

"ಕೆಲವು ಸಂಬಂಧಗಳು ಹಾಗೆಯೇ  ವಾಸ್ತವದಲ್ಲಿ ಇರುವುದಕ್ಕಿಂತ ಹೆಚ್ಚಿನ ನಿಕಟಭಾವವನ್ನು ನೋಡುಗರಲ್ಲಿ ಮೂಡಿಸುತ್ತದೆ ಅನ್ನುವ ಸಾಲು ಕೇವಲ ಸಂಬಂಧಗಳಿಗೆ ಮಾತ್ರವಲ್ಲ ಕಶ್ಮೀರಕ್ಕೂ ಅನ್ಯಾಯವಾಗುತ್ತದೆ. ಅಲ್ಲಿ ನಿಯಮಗಳನ್ನು ಮೀರುವುದೇ ನಿಯಮ ಅನ್ನುವ ಮನಸ್ಥ್ತಿತಿ ಇದೆ ಎನ್ನುವುದು ಅರ್ಥವಾಗುತ್ತದೆ. ಮೀರಬೇಕಾಗಿದ್ದು ಅಸಹಾಯಕತೆಯನ್ನು, ವಿಫಲತೆಯನ್ನು ಹಾಗೂ ದೌರ್ಬಲ್ಯವನ್ನೇ ಹೊರತು ನಿಯಮವನ್ನಲ್ಲ. ವಿಧಿಯೋ, ಪ್ರಕೃತಿಯೋ, ಇಲ್ಲಾ ಶಕ್ತಿಯೂ ಸುಳಿವು ನೀಡುತ್ತಲೇ ಹೋಗುತ್ತದೆ. ಎಚ್ಚೆತ್ತುಕೊಳ್ಳದೆ ಹೋದಾಗ ಕಶ್ಮೀರ ನಿರ್ಮಾಣವಾಗುತ್ತದೆ. ಅದು ಹೊರಗಾದರೂ ಒಳಗಾದರೂ...


ಕಳೆದುಕೊಂಡಿದ್ದು ಬರೀ ಕಶ್ಮೀರವನ್ನೋ ಇಲ್ಲಾ ಕ್ಷಾತ್ರತ್ವ ಹಾಗೂ ಸ್ವಾಭಿಮಾನವನ್ನೋ.... ಇವೆರಡರಲ್ಲಿ ಯಾವುದು ಒಂದು ಬಂದರೂ ಇನ್ನೊಂದು ನಿರಾಯಾಸವಾಗಿ ಜೊತೆಗೆ ಬರುತ್ತದೆ. ಉಳಿಸಿಕೊಳ್ಳುವುದು, ಕಳೆದುಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅದನ್ನು ಕಶೀರ ಸೂಚ್ಯವಾಗಿ  ಹೇಳುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...