ಅಟ್ಟ
ನಾಳೆ ಅಟ್ಟ ಗುಡಿಸಬೇಕು ಅವಳ ಸ್ವಗತ ನಮಗೆ ಸಂಭ್ರಮ. ನಡುಮನೆಯ ಮೂಲೆಯಲ್ಲಿದ್ದ ಏಣಿಯ ಕಡೆಗೆ ಗಮನ. ನಡುಮನೆಯ ಮಾಡಿಗೂ ನೆಲಕ್ಕೂ ಮಧ್ಯದಲ್ಲಿ ಮರದ ಹಲಗೆ ಹಾಸಿ ಮಾಡಿದ ಅಟ್ಟ ನೋಡಿದಾಗಲೆಲ್ಲ ಯಾಕೋ ತ್ರಿಶಂಕು ಸ್ವರ್ಗವೇ ನೆನಪಿಗೆ ಬರುತಿತ್ತು. ಸ್ವರ್ಗದಲ್ಲಿದ್ದು ಇಲ್ಲಿಲ್ಲ ಅನ್ನುವ ಯಾವ ವಸ್ತುವೂ ಇರಬಾರದು ಎಂದು ಹಠದಿಂದಲೇ ಸೃಷ್ಟಿ ಮಾಡಿದ್ದನಂತೆ. ಮನೆಯಲ್ಲಿ ಯಾವ ವಸ್ತು ಕೇಳಿದರು ಅಲ್ಲಿ ಅಟ್ಟದಲ್ಲಿ ಇರಬೇಕು ನೋಡು ಎನ್ನುವ ಮಾತು ಕೇಳಿದಾಗ ಇದು ನೆನಪಾಗುತಿತ್ತು. ಹಾಗಾಗಿ ಅಟ್ಟವೆಂದರೆ ಬಹು ವರ್ಷಗಳ ತನಕ ನನ್ನ ಪಾಲಿಗೆ ತ್ರಿಶಂಕು ಸ್ವರ್ಗ. ಏಣಿ ಹತ್ತಿ ಅಟ್ಟ ಏರಿದ ಕೂಡಲೇ ಸ್ವಾಗತಿಸುತ್ತಿದ್ದದ್ದು ಕಡುಕತ್ತಲು. ಎಲ್ಲೋ ಗಾಳಿಗೆ ಸರಿದ ಹಂಚಿನ ಸಂದಿಯಿಂದಲೋ, ಕಡು ಮಾಡಿನ ಮೂಲೆಯಿಂದಲೋ ಒಂದು ಸಣ್ಣ ಬೆಳಕು ಬಂದರು ಬೆಳಕು ಕಾಣಿಸುತಿತ್ತೇ ಹೊರತು ಅಟ್ಟ ಕಾಣಿಸುತ್ತಿರಲಿಲ್ಲ. ಆ ಮಟ್ಟಿಗೆ ಅಟ್ಟ ತನ್ನಲ್ಲಿದ್ದ ರಹಸ್ಯವನ್ನು ಕಾಪಾಡಿಕೊಳ್ಳುತಿತ್ತು. ಯಾರೇ ಬಂದರೂ ತಕ್ಷಣಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಏನಾದರೂ ತೆಗೆದುಕೊಂಡು ಬರಲು ಹೋದರೆ ಪಕ್ಕನೆ ಸಿಗುತ್ತಿರಲಿಲ್ಲ. ಒಂದು ಬೆಳಕಿನ ಕಿಡಿಯೂ ಇಲ್ಲದೆ ಕಣ್ಣು ಮುಚ್ಚಿಕೊಂಡು ಹೋದರೂ ಅಜ್ಜಿಗೆ ಸಿಗುತ್ತಿದ್ದ ವಸ್ತು ಬ್ಯಾಟರಿ ಹಿಡಿದು ಹೋದರೂ ನಮಗೆ ಸಿಗದಿದ್ದಾಗ ಸಿಟ್ಟು ಬರುತಿತ್ತು. ಇಟ್ಟಿದ್ದು ನಾನಲ್ವ ಹಾಗಾಗಿ ಬೇಗ ಸಿಗುತ್ತೆ ಅನ್ನುವ ಮಾತಿನ ಅರ್ಥ ಆಗ ಆ...