ಅಟ್ಟ

 ನಾಳೆ ಅಟ್ಟ ಗುಡಿಸಬೇಕು ಅವಳ ಸ್ವಗತ  ನಮಗೆ ಸಂಭ್ರಮ. ನಡುಮನೆಯ ಮೂಲೆಯಲ್ಲಿದ್ದ ಏಣಿಯ ಕಡೆಗೆ ಗಮನ.  ನಡುಮನೆಯ ಮಾಡಿಗೂ ನೆಲಕ್ಕೂ ಮಧ್ಯದಲ್ಲಿ ಮರದ ಹಲಗೆ ಹಾಸಿ ಮಾಡಿದ ಅಟ್ಟ  ನೋಡಿದಾಗಲೆಲ್ಲ ಯಾಕೋ ತ್ರಿಶಂಕು ಸ್ವರ್ಗವೇ ನೆನಪಿಗೆ ಬರುತಿತ್ತು. ಸ್ವರ್ಗದಲ್ಲಿದ್ದು ಇಲ್ಲಿಲ್ಲ ಅನ್ನುವ  ಯಾವ ವಸ್ತುವೂ ಇರಬಾರದು ಎಂದು ಹಠದಿಂದಲೇ ಸೃಷ್ಟಿ ಮಾಡಿದ್ದನಂತೆ. ಮನೆಯಲ್ಲಿ ಯಾವ ವಸ್ತು ಕೇಳಿದರು ಅಲ್ಲಿ ಅಟ್ಟದಲ್ಲಿ ಇರಬೇಕು ನೋಡು ಎನ್ನುವ ಮಾತು ಕೇಳಿದಾಗ ಇದು ನೆನಪಾಗುತಿತ್ತು. ಹಾಗಾಗಿ ಅಟ್ಟವೆಂದರೆ ಬಹು ವರ್ಷಗಳ ತನಕ ನನ್ನ ಪಾಲಿಗೆ ತ್ರಿಶಂಕು ಸ್ವರ್ಗ.

ಏಣಿ ಹತ್ತಿ ಅಟ್ಟ ಏರಿದ ಕೂಡಲೇ ಸ್ವಾಗತಿಸುತ್ತಿದ್ದದ್ದು ಕಡುಕತ್ತಲು. ಎಲ್ಲೋ ಗಾಳಿಗೆ ಸರಿದ ಹಂಚಿನ ಸಂದಿಯಿಂದಲೋ, ಕಡು ಮಾಡಿನ ಮೂಲೆಯಿಂದಲೋ ಒಂದು ಸಣ್ಣ ಬೆಳಕು ಬಂದರು ಬೆಳಕು ಕಾಣಿಸುತಿತ್ತೇ ಹೊರತು ಅಟ್ಟ ಕಾಣಿಸುತ್ತಿರಲಿಲ್ಲ. ಆ ಮಟ್ಟಿಗೆ ಅಟ್ಟ ತನ್ನಲ್ಲಿದ್ದ ರಹಸ್ಯವನ್ನು ಕಾಪಾಡಿಕೊಳ್ಳುತಿತ್ತು. ಯಾರೇ ಬಂದರೂ ತಕ್ಷಣಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಏನಾದರೂ ತೆಗೆದುಕೊಂಡು ಬರಲು ಹೋದರೆ ಪಕ್ಕನೆ ಸಿಗುತ್ತಿರಲಿಲ್ಲ. ಒಂದು ಬೆಳಕಿನ ಕಿಡಿಯೂ ಇಲ್ಲದೆ ಕಣ್ಣು ಮುಚ್ಚಿಕೊಂಡು ಹೋದರೂ ಅಜ್ಜಿಗೆ ಸಿಗುತ್ತಿದ್ದ ವಸ್ತು ಬ್ಯಾಟರಿ ಹಿಡಿದು ಹೋದರೂ ನಮಗೆ ಸಿಗದಿದ್ದಾಗ ಸಿಟ್ಟು ಬರುತಿತ್ತು. ಇಟ್ಟಿದ್ದು ನಾನಲ್ವ ಹಾಗಾಗಿ ಬೇಗ ಸಿಗುತ್ತೆ ಅನ್ನುವ ಮಾತಿನ ಅರ್ಥ ಆಗ ಆಗಿರಲೇ ಇಲ್ಲ. ಸ್ವಲ್ಪ ತಿಳುವಳಿಕೆ  ಬಂದ  ಮೇಲೆ ಅಟ್ಟ ನಮಗೂ ರಹಸ್ಯ ಕಾಪಿಟ್ಟುಕೊಳ್ಳಲು ಜಾಗ ಕೊಟ್ಟಿತ್ತು.

ದೀಪಾವಳಿ, ಯುಗಾದಿ ಬಂದರೆ ಅಟ್ಟಕ್ಕೆ ಧೂಳು ಕೊಡವಿ ಕೊಳ್ಳುವ ಹರ್ಷವಾದರೆ ನಮಗೆ ಅದರ ರಹಸ್ಯ ಬಗೆಯುವ ಸಂಭ್ರಮ. ಡಬ್ಬಗಳಲ್ಲಿ, ಪುಟ್ಟ ಪುಟ್ಟ ಚೀಲಗಳಲ್ಲಿ, ಜಾಲಿಗಳಲ್ಲಿ ಹುದುಗಿರುವ ಗುಟ್ಟುಗಳು, ಅಡಗಿರುವ ನೆನಪುಗಳನ್ನು ಬಿಸಿಲ ಕೋಲಿನ ಸಹಾಯದಿಂದ, ಬ್ಯಾಟರಿಯ ಬೆಳಕಿನಿಂದ ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಎಂಥಾ ಬೆಳಕು ತಂದರೂ ಅಟ್ಟದ ಕತ್ತಲಿನಲ್ಲಿ ಅವು ತಿಣುಕಾಡುತ್ತಿದ್ದವು. ಅದೆಂದು ತನ್ನನು ತಾನು ಪುರಾ ತೆರೆದುಕೊಂಡಿದ್ದು ನೋಡಲೇ ಇಲ್ಲ. ಹಾಗೆ ತೆರೆದುಕೊಂಡಿದ್ದರೆ ಬಹುಶಃ ಈ ಬೆರಗೂ ಉಳಿಯುತ್ತಿರಲಿಲ್ಲವೇನೋ..

ಆಟದಲ್ಲಿ, ಸ್ಪರ್ಧೆಯಲ್ಲಿ, ಓದಿನಲ್ಲಿ ಹೀಗೆ ಬಂದ ಬಹುಮಾನಗಳ ರೂಪದ ತಟ್ಟೆ, ಲೋಟ, ಬಟ್ಟಲು ಇವುಗಳನ್ನೆಲ್ಲಾ ಒಂದನ್ನೂ ಉಪಯೋಗಿಸದೆ ಅವನೆಲ್ಲಾ ಒಂದು ದೊಡ್ಡ ಗೋಣಿ ಚೀಲದಲ್ಲಿ ತುಂಬಿಡುತ್ತಿದ್ದಳು. ಅದನ್ನು ಹರವಿ ಕುಳಿತುಕೊಂಡರೆ ಎಲ್ಲಾ ಸನ್ನಿವೇಶಗಳು ಕಣ್ಣ ಮುಂದೆ ಹರಡಿ ಬದುಕು ಜೋಕಾಲಿ. ಯಾರೋ ಕೊಟ್ಟ ಪೆನ್ನು, ಮುರಿದ ನಿಬ್ಬು, ಮರಿ ಹಾಕುತ್ತದೆ ಎಂದು ಇಟ್ಟು ಮರೆತ ನವಿಲುಗರಿ, ಮೊಳಕೆ ಬಂದರೆ ಪಾಸು ಇಲ್ಲಾ ಫೇಲು ಎಂದು ನೋಡಲು ಇಟ್ಟು ಅಲ್ಲೇ ಒಣಗಿಹೋದ ಎಲೆ, ಯಾವತ್ತೋ ಗೀಚಿದ ಕೊನೆಯ ಪುಟದ ಸಾಲು, ಹೀಗೆ ನಮ್ಮದೇ ಜಗತ್ತಿನಲ್ಲಿ ಮುಳುಗಿ ಹೋಗಿರುವಾಗ ಇದೊಂದು ಚೂರು ಸರಿಸು ಎನ್ನುವ ಸ್ವರ ಕೇಳಿ ತಲೆ ಎತ್ತಿದರೆ ಜಾಲಿ ಕಾಣಿಸುತಿತ್ತು.

ಉಪ್ಪಿನಕಾಯಿ ಹಾಕಿದ ಜಾಲಿ, ಬಾಟಲಿ ತುಂಬಾ ತುಂಬಿಟ್ಟ ದಿಂಡಿನ ರಸ, ಡಬ್ಬಗಳಲ್ಲಿ ಒಣಗಿಸಿ ಇಟ್ಟ ಬೇಳೆಕಾಳು, ಕಬ್ಬಿಣದ ಮೊಳೆ, ನಟ್ಟು ಬೋಲ್ಟ್ ಗಳು, ಹಳೆಯ ಬಟ್ಟೆಗಳು, ಬೇಡವೆನಿಸಿದರೂ ಬಿಸಾಕಲು ಮನಸು ಬಾರದವು, ಮುಂದೆಂದೋ ಉಪಯೋಗಕ್ಕೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಇಟ್ಟ ಕೆಲವು ವಸ್ತುಗಳು, ಕಾಪಿಡಲೇ ಬೇಕು ಅನ್ನಿಸಿದವು, ಅಯ್ಯೋ ಇದು ಇಲ್ಲಿತ್ತಾ ಮರೆತೇ ಹೋಗಿತ್ತಲ್ಲ ಅನ್ನಿಸುವಂತವು, ಕಳೆದುಹೋಗಿದೆ ಎಂದುಕೊಂಡ ವಸ್ತುಗಳು, ಇಡುವುದೋ ಬೇಡವೋ ಎಂದು ಗೊಂದಲ ಹುಟ್ಟಿಸುವಂತವು, ಎದೆಗೊತ್ತಿಕೊಂಡು ಬೇರೆ ಯಾರಿಗೂ ಕಾಣಿಸದ ಹಾಗೆ ಮತ್ತದೇ ಕತ್ತಲಲ್ಲಿ ಅಡಗಿಸುವಂತವು, ಕೊನೆಗೆ ಉಳಿದಿದ್ದು ಇದಷ್ಟೇ ನೋಡು ಎನ್ನುವಂತವು, ಇದೊಂದಾದರೂ ಇರಲಿ ಎನ್ನುವಂತವು ಬಿಸಿ ತುಪ್ಪದ ಹಾಗೆ ನುಂಗಲೂ ಆಗದ ಉಗಿಯಲು ಬಾರದಂತವು, ಏನುಂಟು ಏನಿಲ್ಲ ... ಇಡೀ ಅಟ್ಟದ ತುಂಬೆಲ್ಲಾ ಸಾಮಾನುಗಳ ರಾಶಿ. 

ಒಮ್ಮೊಮ್ಮೆ ನಿಡುಸುಯ್ಯುವಾಗ ಸುಸ್ತಿಗೇನೋ ಎಂದು ಒಮ್ಮೆ ನೋಡಿ ಮತ್ತೆ ನಮ್ಮದೇ ಶೋಧದಲ್ಲಿ ಮಗ್ನರಾಗಿ ಬಿಡುತ್ತಿದ್ದೆವು. ಎಲ್ಲವನ್ನೂ ತೆಗೆದು ಧೂಳು ಒರೆಸಿ, ಗುಡಿಸಿ ಮತ್ತೆಲ್ಲವನ್ನೂ ಸ್ವಸ್ಥಾನದಲ್ಲಿ ಇರಿಸಿ ಅವಳು ಕೆಳಗಿಳಿಯುವಾಗ ಬೆವರು ಇಳಿಯುತ್ತಿರುತ್ತಿತ್ತು. ಅಯ್ಯೋ ಇಷ್ಟು ಬೇಗಾ ಮುಗಿಯಿತಾ ಎನ್ನುವ ವಿಷಾದ ನಮ್ಮನ್ನು ಕಾಡುತಿತ್ತು. ಮತ್ತೆ ಹಾಗೆ ಹತ್ತಿ ಎಲ್ಲವನ್ನೂ ಹರಡಿಕೊಳ್ಳುವ ಸ್ವಾತಂತ್ರ್ಯಕ್ಕೆ  ಇನ್ನೆಷ್ಟು ತಿಂಗಳು ಕಳೆಯಬೇಕೋ ಎನ್ನುವ ಸಂಕಟ ನಮಗೆ. ಎಲ್ಲವನ್ನೂ ಒಪ್ಪವಾಗಿಸಿ ಇಟ್ಟ ನಿರಾಳತೆ ಅವಳಿಗೆ. ಇದೊಂದು ದಿನ ಹೊರತು ಪಡಿಸಿದರೆ ಉಳಿದೆಲ್ಲಾ ದಿನಗಳಲ್ಲಿ  ಯಾವುದು ಬೇಕೋ ಅದನ್ನಷ್ಟೇ ಹೋಗಿ ತೆಗೆದುಕೊಂಡು ಬರುವ ಗಡಿಬಿಡಿಯಷ್ಟೇ. ಅದೂ ಯಾರಿಗೆ ಬೇಕೋ ಅವರಷ್ಟೇ ಹೋಗಿ ಬರುವ ಅವಕಾಶ. 

ಏಣಿ ಅಲ್ಲೇ ಇದ್ದರೂ ಯಾರಿಗೂ ಹತ್ತುವ ಆಸಕ್ತಿ ಇರುತ್ತಿರಲಿಲ. ಅಗತ್ಯ ಅನ್ನಿಸದೆ ಅಟ್ಟ  ಯಾರನ್ನೂ ಆಕರ್ಷಿಸುತ್ತಿರಲಿಲ್ಲ. ಎಷ್ಟೆಲ್ಲಾ ವಸ್ತುಗಳನ್ನು ತುಂಬಿಕೊಂಡಿದ್ದರೂ ಅದಕ್ಕೊಂದು ಬೆಳಕಿನ ವ್ಯವಸ್ಥೆ ಮಾಡಿಸಬೇಕು ಎಂದು ಯಾರಿಗೂ ಅನ್ನಿಸುತ್ತಿರಲಿಲ್ಲ. ಬಹುಶಃ ಕತ್ತಲಿನಲ್ಲಿ ಇದ್ದುದ್ದಕ್ಕೆ ಅವು ಹಾಳಾಗದೆ, ಸುರಕ್ಷಿತವಾಗಿ  ಉಳಿದಿದ್ದೇನೋ ಅನ್ನಿಸುತ್ತದೆ ಈಗ. ಗಾಳಿ ಬೆಳಕು ಸರಿಯಾಗಿ ಆಡದ, ಬಾಗಿಯೇ ಹೋಗಬೇಕಾಗಿದ್ದ ಅದು ಅಪ್ಯಾಯಮಾನ ಅನ್ನಿಸುತ್ತಲೇ ನಿಗೂಢತೇ ಭಯ ಹುಟ್ಟಿಸುತಿತ್ತು. ಮಕ್ಕಳಿಗೆ ಪ್ರವೇಶ ನಿಷಿದ್ಧವಾದ ಜಾಗವಾಗಿತ್ತು. ದೊಡ್ಡವರ ಜೊತೆಗೆ ಅಲ್ಲಿ ಪಾದಾರ್ಪಣೆ ಆದ ಮೇಲೆಯೇ ನಮ್ಮದೊಂದು ಜಾಗ ಸೃಷ್ಟಿಸಿಕೊಳ್ಳುವ ಅವಕಾಶವನ್ನು ಅಟ್ಟ ಎಷ್ಟೇ ಮುಂದುವರಿದರೂ ಮರೆತಿರಲಿಲ್ಲ. 

ಪ್ರತಿಸಲ ಊರಿಗೆ ಹೋದಾಗಲೆಲ್ಲಾ ಏಣಿ ನೋಡಿದಾಗ ಅಮ್ಮಾ ಅಟ್ಟಕ್ಕೆ ಕರೆದುಕೊಂಡು ಹೋಗೆ ಎನ್ನುತ್ತಾಳೆ ಮಗಳು. ಅದ್ಯಾಕೋ ಸಂಪಗೋಡಿನ ಅಟ್ಟ  ಬಿಟ್ಟರೆ ಉಳಿದ್ಯಾವ ಅಟ್ಟವೂ ನನ್ನವೆನಿಸುವುದಿಲ್ಲ. ನನ್ನದಲ್ಲದ್ದು ನೋಡುವ ಕುತೂಹಲ ಇಲ್ಲದ ಕಾರಣ ನಾಳೆ ಎನ್ನುತ್ತೇನೆ.  ನಮ್ಮನೆಯಲ್ಲೊಂದು ಅಟ್ಟ ಇರಬೇಕಿತ್ತು ಎನ್ನುತ್ತಾಳೆ ಅವಳು. ಬೆಳೆಯುತ್ತಿರುವ ಅವಳನ್ನು ನೋಡುತ್ತಾ ತಲೆ ಎತ್ತಿದರೆ ತಾರಸಿ ಬೋಳು ಬೋಳಾಗಿ ಕಾಣಿಸಿ ಖಾಲಿತನ ಹುಟ್ಟಿಸುತ್ತದೆ. ನಾನು ಮೌನಕ್ಕೆ ಜಾರಿದರೆ ಈ ಸಲ ರಜೆಗೆ ಹೋದಾಗ ಟ್ರೀ ಹೌಸ್ ಗೆ ಅಟ್ಟ ಕಟ್ಟಿಸುತ್ತೇನೆ ಎಂದು ಅವಳು ಪ್ಲಾನ್ ಮಾಡುವುದು ಕಾಣಿಸಿ ಮೌನದಾಳದಲ್ಲಿ ಪುಟ್ಟ ಬಿಸಿಲು ಕೋಲು ಕುಣಿದಾಡುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...