ಹೂ ಗಿಡ ಒಂದಾದರು ಇರಬೇಕು

 ಬೆಳಕು ಹರಿಯುತ್ತಿದ್ದ ಹಾಗೆಯೇ ಏಳಬೇಕಿತ್ತು. ಹಾಗಾಗಿ ಪ್ರತಿದಿನ ಸೂರ್ಯೋದಯ ನೋಡುವ ಅವಕಾಶ.  ಬಿಸಿಲು ಏರುವವರೆಗೆ ಮಲಗುವುದು ಎಂದರೆ ಗೊತ್ತಿಲ್ಲದ ಕಾಲ. ಬೆಳಕು ಮೂಡುವ ಮುನ್ನವೇ ಅಜ್ಜಿ ಏಳುತ್ತಿದ್ದಳು. ಬೆಳಕು ಮೂಡಿದ ಮೇಲೆ ನಾವುಗಳು ಅಷ್ಟೇ. ನಸು ಬೆಳಕು ತುಸು ತುಸುವಾಗಿ ಅಡಿಯಿಡುವಾಗಲೇ ನಾವು ಕಣ್ಣುಜ್ಜಿಕೊಂಡು ಅರೆಗಣ್ಣು ತೆರೆದೇ ಬಚ್ಚಲ ಮನೆಯ ಕಡೆಗೆ ನಡೆಯುತ್ತಿದ್ದೆವು. ಅದಾಗಲೇ ದನ ಕರುಗಳು ಎದ್ದು ಸರಭರ ಸದ್ದು ಮಾಡುವುದನ್ನೇ ನೋಡುತ್ತಾ, ಧಗಧಗನೆ ಉರಿಯುವ ಬೆಂಕಿಯ ಎದುರು ತುಸು ಕುಳಿತು ಮೈ ಬೆಚ್ಚಗೆ ಮಾಡಿಕೊಂಡು ಅದಾಗಲೇ ಮರಳುತಿರುತ್ತಿದ್ದ ನೀರಿನಲ್ಲಿ ಮುಖ ತೊಳೆದು ಒಳಗೆ ಬರುವ ಹೊತ್ತಿಗೆ ಲೋಟದಲ್ಲಿ ಹಬೆಯಾಡುವ ಕಾಫಿ. ಕಾಫಿ ಕುಡಿದು ಈಚೆಗೆ ಬರುವ ಹೊತ್ತಿಗೆ ಸ್ವಾಗತಿಸುವ ಬೆಳ್ಳಂ ಬೆಳಗು,  ಕೈಯಲ್ಲಿ ಹೂವಿನ ಬುಟ್ಟಿ.

ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿದ ಮೇಲೆ ದೇವರ ಪೂಜೆಗೆ ಹೂವು ಬಿಡಿಸುವುದು ನಮ್ಮ ಕೆಲಸ. ಅದೊಂದೇ ಆದರೆ ಏನೂ ಅನ್ನಿಸುತ್ತಿರಲಿಲ್ಲವೇನೋ? ಹಾರುವ ಚಿಟ್ಟೆಗಳ ನೋಡುತ್ತಾ, ಎಲೆಯ ತುದಿಯಲ್ಲಿ ಗುಂಡಾಗಿ ಫಳ ಫಳ ಹೊಳೆಯುತ್ತಿದ್ದ ನೀರ ಹನಿಗಳ ಅಲುಗಿಸಿ ಬೀಳಿಸಿ ಅದನ್ನು ಬೊಗಸೆಯಲ್ಲಿ ಹಿಡಿಯುತ್ತಾ, ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ಮೃದುವಾಗಿ ತಾಕಿ ಅದು ಮುಚ್ಚಿಕೊಳ್ಳುವುದನ್ನು ಗಮನಿಸುತ್ತಾ, ಯಾವ ಗಿಡದಲ್ಲಿ ಯಾವ ಹೂ ಬಿಟ್ಟಿದೆ ನೋಡುತ್ತಾ, ಹಕ್ಕಿಗಳ ಕೂಗು ಆಲಿಸುತ್ತಾ, ಇಬ್ಬನಿಯ ಹನಿ ಅಂಗಾಲು ತಾಕಿ ಕಚಗುಳಿ ಇಡುವುದನ್ನ ಅಸ್ವಾದಿಸುತ್ತಾ  ಒಂದೊಂದೇ ಹೂವು ಬಿಡಿಸಿ ಬುಟ್ಟಿಗೆ ತುಂಬುವುದು ಇಷ್ಟವೇ ಆದರೆ ಹಾಗೆ ಹೂವು ಬಿಡಿಸುವಾಗ ಮಗ್ಗಿಯನ್ನು ಹೇಳುತ್ತಾ, ಬಾಯಿಪಾಠ ಹೇಳುವುದು ಕಡ್ಡಾಯ ಆಗಿದ್ದು ಸಂಕಟಕ್ಕೆ ಕಾರಣವಾಗಿತ್ತು. ಎಲ್ಲಿ ಮಗ್ಗಿ  ತಪ್ಪಿಸುತ್ತೇನೋ ಎಂದು ನೋಡಲು ಅಣ್ಣ ಜೊತೆಗೆ ಇರುತ್ತಿದ್ದ. ಈ ಹನ್ನೊಂದರ ನಂತರದ ಮಗ್ಗಿ  ಚಿಟ್ಟೆ ನೋಡುವಾಗ, ಚೇಷ್ಟೆ ಮಾಡುವಾಗ ಆಗಾಗ ಮರೆತು ಕೈ ಕೊಡುತ್ತಿತ್ತು. ಇವನೋ ಅಲ್ಲಿ ಮಾವನೋ ಚಿಕ್ಕಿಯೋ ಸುಳಿಯುವಾಗ  ಹದಿನೇಳರ ಮಗ್ಗಿಯೋ ಹಂದಿನೆಂಟರದೋ ಕೇಳಿ ನಾನು ಬೆಬ್ಬೆಬ್ಬೆ ಎಂದು ಒದ್ದಾಡುವಾಗ  ಅವರ ಹತ್ತಿರ ಬೈಸಿ ಬಿಡುತ್ತಿದ್ದ. ಹಾಗಾಗಿ ಇಷ್ಟದ ಕೆಲಸವೂ ಕಷ್ಟ ಅನ್ನಿಸುತ್ತಿತ್ತು. ಅವನನ್ನು ಕೊಂದು ಬಿಡುವಷ್ಟು ಕೋಪ ಬರುತಿತ್ತು. ಮಗ್ಗಿ ಮಾತ್ರ ಯಾವ ಎಗ್ಗಿಲ್ಲದೆ  ಪ್ರತಿದಿನ ತಪ್ಪುತಿತ್ತು. 

ಬಡಬಡನೆ ಹೇಳಿ ಮುಗಿಸಿದ ಮೇಲೆ ನಿರಾಳ. ಅಂಗಳದ ಅಂಚಿನಲ್ಲಿ ಬಣ್ಣ ಬಣ್ಣದ ಹೂವುಗಳು. ಅದನ್ನು ಮೀರಿಸುವ ಬಣ್ಣದ ಚಿಟ್ಟೆಗಳು. ಅದೇ ತಾನೇ ಎಳೆಬಿಸಿಲು ಕೆಳಗೆ ಇಳಿಯುತ್ತಾ ನಿಂತಿರುವ ಹನಿಗಳ ನಡುವೆ ತೂರುತ್ತಾ ಸೃಷ್ಟಿಸುವ ಬಣ್ಣದ ಲೋಕ, ಕಾಲ ಕೆಳಗೆ ಮೆತ್ತನೆಯ ಹುಲ್ಲು ಜೊತೆ ಜೊತೆಗೆ ಅಡಗಿರುವ ಮುಳ್ಳು. ಒಟ್ಟಿನಲ್ಲಿ ಹೂ ಬಿಡಿಸುತ್ತಿರುವಷ್ಟು ಹೊತ್ತು ಅಜ್ಜಿಯ ಕತೆಯಲ್ಲಿ ಬರುವ ಉದ್ಯಾನವನದಲ್ಲಿ ವಿಹರಿಸುವ ರಾಜಕುಮಾರಿ ನಾನೇ ಎಂಬ ಭಾವ. ಎಲ್ಲಾದರು ರಾಜಕುಮಾರ ಕುದುರೆಯ ಏರಿ ಬರಬಹುದಾ, ಈ ಮಗ್ಗಿ ಹೇಳುವ ಕಷ್ಟದಿಂದ ನನ್ನ ಬಿಡಿಸಬಹುದಾ ಎಂದು ಖರಪುಟದ ಸದ್ದಿಗೆ ಕಿವಿ ತೆರೆದೆರೆ ಕಾಗೆಯ ಕೂಗು ವಾಸ್ತವಕ್ಕೆ ಎಳೆದು ತರುತಿತ್ತು.  ಅದೇನೋ ಉಲ್ಲಾಸ. ಕಲಿತ ಹಾಡುಗಳೆಲ್ಲಾ ಗುನುಗುಗಳಾಗಿ ಅಲ್ಲೊಂದು ಸಂಗೀತ ಕಛೇರಿ. ಪ್ರತಿ ದಿನ ಬೆಳಿಗ್ಗೆ ಏಳುವ ಹೊತ್ತಿಗೆ ಯಾವುದೋ ಹಾಡು ನೆನಪಾಗಿ ಇಡೀ ದಿನ ಅದರದೇ ಗುಂಗು.  ಪ್ರತಿ ಬೆಳಗೂ ಹೊಸತು ಅನ್ನಿಸುವುದು ಬಾಲ್ಯದಲ್ಲಿ ಮಾತ್ರವೇನೋ. ಪ್ರತಿಯೊಂದರ ಕಡೆಗೂ ಕುತೂಹಲವೂ ಆಗಲೇ ಅನ್ನಿಸುತ್ತದೆ. ಪ್ರತಿ ವರ್ಷದ ಮಳೆಗಾಲದ ಹೊತ್ತಿಗೂ ಹೊಸ ಹೂವಿನ ಗಿಡಗಳು ಅಂಗಳದಲ್ಲಿ ಉಳಿದವರ ಜೊತೆ ಸೇರುತ್ತಿದ್ದರಿಂದ  ಎಲ್ಲಿ ಹೊಸ ರೀತಿಯ ಗಿಡ ಕಂಡರೂ ಅವರನ್ನು ಕಾಡಿ ಬೇಡಿ ತಂದು ನೆಡುತ್ತಿದ್ದರಿಂದ ಇಡೀ ವರ್ಷ ಅಂಗಳದಲ್ಲಿ ಹೂ ತಪ್ಪುತ್ತಿರಲಿಲ್ಲ. ಅಲ್ಲೇ ಕೆಳಗೆ ಇದ್ದ ಬಾವಿಯಿಂದ ನೀರು ಸೇದಿ ಹಾಕುವುದೂ ಕಷ್ಟ ಅನ್ನಿಸುತ್ತಿರಲಿಲ್ಲ. ಏನೇ ಅಂದರು ಬಣ್ಣಗಳ ಮೋಹದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. 

ಹೂಗಳು ಎಷ್ಟು ವಿಧವೋ ಬಿಡಿಸುವುದೂ ಅಷ್ಟೇ ವಿಧ. ಅದ್ಯಾವುದೋ ಸಾಯಿಸುತೆಯ ಕಾದಂಬರಿ ಓದಿದ ಮೇಲೆ ಹೂ ಕೊಯ್ಯುವುದು ಅಲ್ಲ ಬಿಡಿಸುವುದು ಎನ್ನುವ ಕಲ್ಪನೆ ಅದೆಷ್ಟು ಇಷ್ಟವಾಗಿತ್ತು ಎಂದರೆ ಹೂ ಬಿಡಿಸುವ ಮುನ್ನ ಗಿಡ ನೇವರಿಸುವಷ್ಟು. ಯಾವ ದೇವರಿಗೆ ಯಾವ ಹೂ ಇಷ್ಟ ಎನ್ನುವ ಲಿಸ್ಟ್ ಮೊದಲೇ ಇರುತ್ತಿದ್ದರಿಂದ ತೊಂದರೆ ಇರುತ್ತಿರಲಿಲ್ಲ.  ಗುಲಾಬಿ ಮುಳ್ಳು ಚುಚ್ಚಿಕೊಂಡರೂ ಕೊಂಚ ಗಟ್ಟಿಯಾಗಿಯೇ ಬಿಡಿಸಬೇಕು. ಗೊರಟೆ ಕೊಂಚ ಒರಟುತನ ತಾಗಿದರೂ ಅಪ್ಪಚ್ಚಿಯಾಗುತ್ತಿದ್ದರಿಂದ ತುಂಬಾ ಮೃದುವಾಗಿ ಬಿಡಿಸಬೇಕಿತ್ತು. ಮಲ್ಲಿಗೆ ಬಿಡಿಸುವಾಗ ತಪ್ಪಿಯೂ ಮೊಗ್ಗು ಬಾರದಂತೆ ಜಾಗೂರಕವಾಗಿರಬೇಕಿತ್ತು. ತುಂಬೆ, ಕಾಶಿತುಂಬೇ ಬಿಡಿಸುವಾಗ ಬಾಗಲೇ ಬೇಕಿತ್ತು. ನಂಜ ಬಟ್ಟಲಿನ ಹೂ ಬಿಡಿಸುವಾಗ ಮೈ ಮೇಲೇ ಇಬ್ಬನಿ ಬಿದ್ದು ಅಭಿಷೇಕ ಮಾಡಿದ ಹಾಗೆ ಅನ್ನಿಸಿ ಒಮ್ಮೆ ನಡುಗಿ, ಮತ್ತೊಮ್ಮೆ ಪುಳಕ.  ದಾಸವಾಳ ಮಾತ್ರ ತುದಿಗಾಲಲ್ಲಿ ನಿಂತು ಪಕ್ಕದಲ್ಲಿದ್ದ ದೋಟಿಯಲ್ಲಿ ಮೃದುವಾಗಿ ಬಾಗಿಸಿ, ಮೈ ತುಂಬಾ ಹೂ ಬಿಟ್ಟರೂ ಅದನ್ನು ಬಿಡಿಸುತ್ತಿದ್ದದ್ದು ಕಡಿಮೆಯೇ. ಗಿಡದ ತುಂಬಾ ಹೂ ಬಿಟ್ಟಿರುತ್ತಿದ್ದ ನಿತ್ಯ ಪುಷ್ಪ ಬಣ್ಣ ಬಣ್ಣಗಳಲ್ಲಿ ಕಂಡರೂ ಬುಟ್ಟಿ ತುಂಬದೆ ಹೋದರೆ ಬಿಡಿಸುವುದು ಇಲ್ಲದೆ ಹೋದರೆ ನೋಡಿಯೂ ನೋಡದ ಹಾಗೆ ತಿರುಗುವುದು.  ದಿನಾ ಸಿಕ್ಕರೆ ಅನಾದರವೇನೋ ಎಂದು ಈಗ ಅನ್ನಿಸುತ್ತದೆ. ಅಪರೂಪಕ್ಕೆ ಸಿಕ್ಕುವವರ ಮೇಲೆ ವಿಪರೀತ ಪ್ರೀತಿ. 

ಯಾವುದೋ ಮೋಹಕವೋ ಅದರ ಬಳಿಗೆ ಮೊದಲು. ಒಟ್ಟಿನಲ್ಲಿ ಸೌಂದರ್ಯವೇ ಪ್ರಧಾನ. ಯಾವ ಹೂ ಕೊಯ್ದರೂ ಮೊಗ್ಗು ಯಾವ ಕಾರಣಕ್ಕೂ ಕೊಯ್ಯಬಾರದು ಎನ್ನುವ ಅಜ್ಜಿಯ ಆಜ್ಞೆ ನೆನಪಿರುತ್ತಿದ್ದದ್ದು ಮೊಗ್ಗು ಏರಿಸಿದರೆ ದೇವರು ಮೂಕ ಮಾಡ್ತಾನೆ ಎನ್ನುವ ಭಯಕ್ಕೆ. ಮೊದಲೇ ಮಾತಿಲ್ಲದೆ ಇರುವ ಹುಡುಗಿ ಅಲ್ಲದ ನಾನು ನಿದ್ದೆಯಲ್ಲೂ ಮೌನ ಬಯಸದವಳು. ಹಾಗಾಗಿ ಹೂ ಬಿಡಿಸುವಾಗ ವಿಪರೀತ ಎಚ್ಚರ. ಒಂದೇ ಒಂದು ಮೊಗ್ಗು ಬಾರದ ಹಾಗೆ ಜಾಗೃತ.  ಸಹಜವಾಗಿ ಅರಳಲು ಬಿಡುವ, ಅಲ್ಲಿಯವರೆಗೆ ಕಾಯುವ ತಾಳ್ಮೆ ಹೂ ಹೀಗೆ ಕಲಿಸುತಿತ್ತು. ಬಿದ್ದ ಹೂ ತರುವ ಹಾಗಿಲ್ಲ. ಅದಾಗಲೇ ಭೂತಾಯಿಗೆ ಸಮರ್ಪಣೆ ಆಗಿರುವುದರಿಂದ ಬೇರೊಬ್ಬರಿಗೆ ಕೊಡುವ ಹಾಗಿಲ್ಲ. ಪಾರಿಜಾತ ಯಾವುದೇ ಕಾರಣಕ್ಕೆ ಗಿಡದಿಂದ ಬಿಡಿಸುವ ಹಾಗಿಲ್ಲ. ಅದು ಬೀಳುವ ವರೆಗೆ ಕಾಯಬೇಕು. ರಂಜದ ಹೂ ಸಹ ಅಷ್ಟೇ. ಒಂದೊಂದು ಹೂವಿಗು ಒಂದೊಂದು ರೀತಿ. ಒಬೊಬ್ಬ ದೇವರಿಗೆ ಒಂದೊಂದು ಶ್ರೇಷ್ಠ.  ಅದೆಷ್ಟೇ ಚೆಂದವಿದ್ದರೂ, ಶ್ರೇಷ್ಠವೆಂದರೂ ಎಲ್ಲರಿಗೂ ಎಲ್ಲವೂ ಇಷ್ಟವಾಗಬೇಕೆಂದಿಲ್ಲ. ಹಾಗೆ ಇಷ್ಟವಾಗುವುದು ಸಾಧ್ಯವೂ ಇಲ್ಲ ಎನ್ನುವ ಸತ್ಯ ಹೂ ಕಲಿಸುವಾಗ ಅಚ್ಚರಿ ಜೊತೆಗೆ ನಿರಾಳ. 

ಎಷ್ಟೆಷ್ಟು ವೈವಿಧ್ಯ ಹೂ ಗಳು, ಎಷ್ಟೆಷ್ಟು ತರೇವಾರಿ ಬಿಡಿಸುವಿಕೆ, ನಸು ಬೆಳಕು, ಎಲೆಯ ತುದಿಯಲ್ಲಿ ನಿಶ್ಚಲವಾಗಿ ನಿಂತ ಇಬ್ಬನಿಯ ಬಿಂದು, ಅದರ ಮೂಲಕ ಪ್ರತಿಫಳಿಸುವ ಬೆಳಕುಂ ಹೊಮ್ಮಿಸುವ ವರ್ಣ ಚಿತ್ತಾರ   ಭೂಮಿಯ ತಾಕಲು ಹವಣಿಸುವ ಎಳೆ ಬಿಸಿಲು, ಇಡೀ ಅಂಗಳ ಬಣ್ಣ ತುಂಬಿದ ಕ್ಯಾನ್ವಸ್ ಅನ್ನಿಸಿ  ಆಗತಾನೆ ಎದ್ದ ಮನಸ್ಸಿಗೆ ಅದೆಷ್ಟು ಬದುಕಿನ ಪಾಠಗಳನ್ನು ಕಲಿಸುತ್ತಿದ್ದವು ಎಂದು ಬೆಳಕು ಹರಿದ ಮೇಲೆ ಹೂವು  ಬಿಡಿಸುತ್ತಾ ಯೋಚಿಸುತ್ತಿದ್ದೇನೆ. ದೇವರ ತಲೆ ಮೇಲೆ ಒಂದು ಹೂ ಇಡಲಾದರೂ ಒಂದು ಗಿಡ ಇರಬೇಕು ಕಣೆ ಎಂದ ಅಜ್ಜಿಯ ಮಾತಿನಲ್ಲಿ ಎಷ್ಟೊಂದು ಅರ್ಥ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...