ಎಲ್ಲೇ ಹೋಗಲಿ ನಮ್ಮ  ಮನೆಗೆ ಬಂದು ಎರಡು ರೊಟ್ಟಿ ತಿಂದು ಮೊಸರು ಅನ್ನ ತಿಂದರೇನೇ ಸಮಾಧಾನ ನೋಡಿ ಅವರು ನಗುತ್ತಲೇ ಹೇಳುತ್ತಿದ್ದರು. ಎಲ್ಲಿ ಹೋಗುತ್ತೆ ರಾತ್ರಿ ಆಗುತ್ತಿದ್ದ ಹಾಗೆ ಕೊಟ್ಟಿಗೆಗೆ ಬರುತ್ತೆ ಅಜ್ಜಿ ಎಲ್ಲಾ ದನಗಳ ಜೊತೆಗೆ ಬಾರದ ಕೌಲಿಯ ಬಗ್ಗೆ ಮಾತಾಡುತ್ತಿದ್ದದ್ದು ನೆನಪಾಯಿತು. ಎಂಥ ಕೆಲಸ ಇಲ್ಲದಿದ್ರೂ ನಮ್ಮ ಮನೇಲಿ ನಮಗೆ ಬೇಜಾರಾಗೊಲ್ಲ ಊರಿನಿಂದ ಬಂದ ಅತ್ತೆ ನುಡಿಯುತ್ತಿದ್ದರು. ಯಾಕೋ ಅವರ ಮಾತು ಕೇಳುತ್ತಿದ್ದ ಹಾಗೆ ಮನಸೇಂಬ ಗೂಗಲ್ ಲಿಂಕ್ ಕೊಡುತ್ತಾ ಹೋಯಿತು. ಎಷ್ಟೊಂದು ಲಿಂಕ್ ಗಳಲ್ಲಿ ನನ್ನದೇ ಲಿಂಕ್ ಎಲ್ಲಿದೆ ಎಂದರೆ ಕಾಡಿದ್ದು  ವಿಷಾದ ಮಾತ್ರ.

ಹೆಸರಿನ ಹಿಂದೆ ಇದ್ದ ಕೆ ಯಾವೂರ ಹೆಸರು ಎಂಬುದು ಹೈ ಸ್ಕೂಲ್ ಗೆ ಬರುವವರೆಗೂ ಗೊತ್ತಿರಲಿಲ್ಲ. ಇವತ್ತಿನವರೆಗೂ ಆ ಊರು ಕಂಡಿಲ್ಲ. ಅಲ್ಲಿದ್ದ ಮನೆತನದ ಹಿರಿಯರ ನೋಡಿಲ್ಲ. ಹಾಗಾಗಿ  ಅದು ಹೆಸರಿಗಂಟಿಕೊಂಡಿದೆ ಬಿಟ್ಟರೆ ನನ್ನದಲ್ಲ ಎನ್ನುವ ಭಾವ .  ಅಪ್ಪನ ಕೈ ಹಿಡಿದು ಭದ್ರಾವತಿಯ ರಸ್ತೆಗಳಲ್ಲಿ ರಾಜಕುಮಾರಿಯ ಹಾಗೆ ನಡೆದದ್ದು ಕೆಲವೇ ವರ್ಷಗಳು. ಅವನು ಕೈ ಬಿಡಿಸಿಕೊಂಡ ಮೇಲೆ ಅದರ ಬಗ್ಗೆ ಮೋಹ ಉಳಿದಿಲ್ಲ. ಊರಿಗೆ ಹೋಗುವಾಗ ಆ ರಸ್ತೆಗಳಲ್ಲಿ ಅಪ್ಪ ನೆನಪಾಗುತ್ತಾನೆ ಬಿಟ್ಟರೆ ನನ್ನೂರು ಎನ್ನಿಸುವುದಿಲ್ಲ. ಆಮೇಲೆ   ಬಂದಿದ್ದು ಸಂಪಗೋಡು ಎಂಬ ವಾರಾಹಿ ಮಡಿಲಿಗೆ. ಹುಟ್ಟಿದ್ದು ಅಲ್ಲೇ ಆಗಿದ್ದರಿಂದ, ಬಾಲ್ಯ ಕಳೆದದ್ದು ಅಲ್ಲಿಯೇ ಆದರಿಂದ  ಇವತ್ತಿಗೂ ಊರು ಎಂದರೆ ಮನೆ ಎಂದರೆ ನೆನಪಾಗುವುದು ಮನಸ್ಸಿನಲ್ಲಿ ಉಳಿದಿದ್ದು ಸಂಪಗೋಡು ಮಾತ್ರ. ಉದ್ದವಾದ ಜಗುಲಿ, ನಡುಮನೆ ಪಕ್ಕದಲ್ಲೇ ಅಡುಗೆ ಮನೆ, ನಡುಮನೆಯಲ್ಲೊಂದು ದೀಪವಿಡಲು ಮಾಡಿದ ಸಣ್ಣ ಕಿಂಡಿ ಅಡುಗೆ ಮನೆ ವೀಕ್ಷಿಸಲು ನಮಗಿದ್ದ  ಬೈನ್ಯಾಕ್ಯುಲರ್. ಪಕ್ಕದ ಕಡುಮಾಡು ಹಿಗ್ಗಿಸಿ ಮಾಡಿದ ಕೊಟ್ಟಿಗೆ ಹಾಗೂ ಬಚ್ಚಲು, ಹಿಂದಿನ ಹಿತ್ತಿಲು. ಹಿತ್ತಿಲ ಮೇಲಿದ್ದ ಧರೆಯ ಮೂಲೆಯಲ್ಲಿ ಗುಂಡಯ್ಯನ ಮನೆ. ಅಲ್ಲಿಂದ ಶುರುವಾಗುತ್ತಿದ್ದ ಮಾಸ್ತಿ ಕಾಡು.

ಅಂಗಳದ ಕೆಳಗೆ ಒಂದತ್ತು ಮೆಟ್ಟಿಲು ಇಳಿದರೆ ಕೆರೆಯ ತರವಿದ್ದ ಬಾವಿ, ಅದರಾಚೆ ಗದ್ದೆ ಗದ್ದೆಯ ಅಂಚಿನಲ್ಲಿ ಗಡಿರೇಖೆಯಂತೆ ಹರಿಯುತ್ತಿದ್ದ ಹಳ್ಳ. ಉಹೂ ಯಾವುದೆಂದರೆ ಯಾವುದೂ ಕಣ್ಣಿಂದ ಮರೆಯಾಗಿಲ್ಲ, ಮನಸ್ಸಿನಲ್ಲಿ ಅಳಿಸಿಲ್ಲ. ಬಹುಶಃ ಬಾಲ್ಯದ ನೆನಪುಗಳು ಬಹಳ ಅಚ್ಹೊತ್ತಿ ಕುಳಿತಿರುತ್ತವಾ ಅಥವಾ ಬಾಲ್ಯವೆಂದರೆ ವರ್ತಮಾನ ಕಾಲ ಮಾತ್ರವಿರುವುದರಿಂದ ತೀವ್ರವಾಗಿ ಅನುಭವಿಸಿ ಬಿಟ್ಟಿರುತ್ತೇವಾ ಗೊತ್ತಿಲ್ಲ. ಒಟ್ಟಿನಲ್ಲಿ ಬದುಕಿನ ಒಂದು ಹಂತದ ನಂತರ ಕಾಡುವುದು ಬಾಲ್ಯದ ನೆನಪುಗಳೇ. ತೇವ ಉಳಿಸುವುದು ಆಗಿನ ಅನುಭವಗಳೇ. ಒಟ್ಟಿನಲ್ಲಿ ಊರು ಎಂದರೆ ಅಚ್ಚಳಿಯದೆ ಉಳಿದಿದ್ದು, ಅನ್ನಿಸುವುದು ಸಂಪಗೋಡು ಮನೆಯೆಂದರೆ ಆ ಮನೆ. ಅಲ್ಲಿದ್ದ ಬೆರಳೆಣಿಕೆಯಷ್ಟು ಮನೆಗಳು, ಇಡೀ ದಿನ ಜೊತೆಯಾಗುತ್ತಿದ್ದ ಸ್ನೇಹಿತರು, ಪ್ರತಿಯೊಬ್ಬರೂ ನೆನಪಿನಲ್ಲಿಮ್ ಮನಸ್ಸಿನಲ್ಲಿ ಜೀವಂತ. ಹಚ್ಚಹಸಿರು.

ವಾರಾಹಿಗೆ ಕಟ್ಟು ಕಟ್ಟಿ ಕೋಪದಿಂದ ಅವಳು ಊರೂರು ಮುಳುಗಿಸಿದಾಗ ಎಲ್ಲರ ಹಾಗೆ ನಾವೂ ಅಲ್ಲಿಂದ ಬದುಕು ಅರಸಿ ಬೇರೆಯ ಊರಿಗೆ ಹೊರಟಿದ್ದೆವು. ಎಲ್ಲರ ಹಾಗೆ ಒಂದು ನೆಲೆ ಸಿಕ್ಕು ಬದುಕು ಹರಿಯಲು ಶುರುವಾಗಿತ್ತು. ಆಗ ಚಿಕ್ಕವಳು ಹೊಸ ಊರು ಖುಷಿ ಅನ್ನಿಸಿದರೂ ಮನಸ್ಸಿನ ಮೂಲೆಯಲ್ಲಿ ಅಪರಿಚಿತ ಭಾವ ಕಾಡುತ್ತಿತ್ತು ಅನ್ನುವುದು ಅರ್ಥವಾಗಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅಜ್ಜಿ ಹೋದಮೇಲೆ ಈಗ ಆ ಮನೆಗೆ ಹೋದರೆ ಸಂಪೂರ್ಣ ಅಪರಿಚಿತ ಭಾವ ಕಾಡಿ ಉಸಿರುಗಟ್ಟುವ ಹಾಗಾಗಿ ಊಟ ಮಾಡಿಕೊಂಡು ಹೋಗೆ ಎಂದರೂ ಓಡಿ ಬರುವ ಹಾಗಾಗಿತ್ತು. ಆಮೇಲೆ ಓದು, ಕೆಲಸ, ಮದುವೆ  ಎಂದು ಬದುಕು ಕಟ್ಟಿಕೊಳ್ಳಲು ಊರು ಬದಲಾಗಿ ಬೆಂಗಳೂರು ಬಂದು ದಶಕಗಳು ಕಳೆದಿವೆ. ನಮ್ಮದೇ ಪುಟ್ಟ ಗೂಡು ಕಟ್ಟಿಕೊಂಡರು ಇದು ಕರ್ಮಭೂಮಿ ಎನ್ನುವ ಪ್ರೀತಿಯಷ್ಟೇ.

ಹಾಗಾಗಿ ಈಗಲೂ ಯಾರಾದರೂ ನಿಮ್ಮದು ಯಾವ ಊರು ಎಂದರೆ ತಡಬಡಾಯಿಸುವ ಹಾಗಾಗುತ್ತದೆ. ಆ ಕ್ಷಣಕ್ಕೆ ಹೆಸರು ಹೇಳಿದರೂ ಮನಸ್ಸಿನಲ್ಲಿ ಅನಾಥ ಭಾವ. ನನಗೆ ನನ್ನ ಊರು ಎನ್ನುವುದೇ ಇಲ್ಲವಾ, ಅಪ್ಪನ ಹಾಗೆ ಅದೂ ಅಕಾಲದಲ್ಲೇ ಬಿಟ್ಟು ಹೋಯಿತಲ್ಲ ಎನ್ನುವ ವಿಷಾದ. ಮುಳುಗಿದ್ದು ಬರೀ ಊರು ಮಾತ್ರವಾ ಎನ್ನುವ ಉತ್ತರಸಿಗದ ಪ್ರಶ್ನೆ ಸದಾ ಜೊತೆಗೆ. ಒಮ್ಮೊಮ್ಮೆ ನನಗೆ ನನ್ನ ಊರು ಎನ್ನುವುದೇ ಇಲ್ಲ ಹಾಗಾಗಿ ಎಲ್ಲವೂ ನನ್ನೂರೇ ಅನ್ನಿಸಿದರೂ ಮರುಕ್ಷಣ ಎಲ್ಲವೂ ನನ್ನೂರು ಆದರೆ ಯಾವುದೂ ನನ್ನೂರಲ್ಲ  ಎನ್ನುವ ಅರಿವು ಒಳಗಿನಿಂದ ಹುಟ್ಟಿ ಕರುಳು ಕದಡಿಸಿ ಬಿಡುತ್ತದೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವ ಮಾತು ನೆನಪಾಗಿ ಎಲ್ಲಾ ಹೆಣ್ಣುಮಕ್ಕಳ ಹಣೆಬರಹವೇ ಇದು ಬಿಡು ಅವರಿಗೆ ಎರಡರಡು ಮನೆ ಎನ್ನುವ ಸಮಾಧಾನ. ಆದರೆ ಹುಟ್ಟಿ ಬೆಳೆದ, ಭಾವ ಕಟ್ಟಿಕೊಂಡ ಮನೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅಪರಿಚಿತವಾಗಿ ಬಿಡುವ ಸತ್ಯ ಮಾತ್ರ ಅರ್ಥೈಸಿಕೊಳ್ಳಲಾಗುವುದಿಲ್ಲ. ಹಾಗಾಗಿ ನನ್ನ ಮನೆ ಅನ್ನುವುದು ನನಗೆ ಹಾಗಾಗದ ಹಾಗೆ ವಾರಾಹಿ ಕಾಪಾಡಿದಳು ಎಂದು ಸಮಾಧಾನ ಮಾಡಿಕೊಳ್ಳುವುದು ನೆಮ್ಮದಿ ಕೊಡುತ್ತದೆ.

ಬದುಕೇ ಹಾಗೆ ಎಲ್ಲದಕ್ಕೂ ಸಮರ್ಥನೆಗಳನ್ನು, ಸಮಾಧಾನವನ್ನು ಕೊಡುತ್ತದೆ. ಕೇಳಿಸಿಕೊಳ್ಳಬೇಕು ಅಷ್ಟೇ....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...