ಕಡಗೋಲು ಕಂಬ
ಮನೆಯ ಕಟ್ಟಡ ಮುಗಿದು ನೆಲಕ್ಕೆ ಗಾರೆ ಹಾಕಬೇಕು ಅನ್ನುವ ಸಮಯದಲ್ಲಿ ಮುಷ್ಠಿಗಾತ್ರದ ಕಂಬದ ಅರಸುವಿಕೆ ಶುರುವಾಗುತ್ತಿತ್ತು. ಹದವಾಗಿ ಕೆತ್ತಿ ಅದನ್ನು ನಯಸ್ಸು ಮಾಡಿ ಅಡುಗೆ ಮನೆಯ ಮೂಲೆಯ ಪ್ರಶಸ್ತ ಜಾಗವೊಂದನ್ನು ಹುಡುಕಿ ಅದನ್ನು ಪ್ರತಿಷ್ಠಾಪಿಸಿದರೆ ಕಳೆ ತಂತಾನೇ ಅಡಿಯಿಡುತ್ತಾ ಅಡುಗೆಮನೆ ಪ್ರವೇಶಿಸಿ ಆವರಿಸಿಕೊಳ್ಳುತಿತ್ತು. ಕೃಷ್ಣ ಗೋಡೆಯ ಮರೆಯಲ್ಲಿ ಅಡಗಿ ನಿಂತಿದ್ದಾನೇನೋ ಅನ್ನುವಂತೆ ಭಾಸವಾಗುವ ಆ ಮಜ್ಜಿಗೆ ಕಡೆಯುವ ಕಂಬ ಮನಸ್ಸಿಗೆ ಉಲ್ಲಾಸ ಕೊಡುತಿದ್ದದಂತೂ ಸತ್ಯ. ಬೆಳಕು ಮೂಡುವ ಮುನ್ನ ಎದ್ದು ನಿತ್ಯಕರ್ಮ ಪೂರೈಸಿ ಒಳಗೆ ಬಂದು ಕಾಫಿ ಕುಡಿದು ಮೊದಲು ಮಾಡುವ ಕೆಲಸವೆಂದರೆ ಮಜ್ಜಿಗೆ ಕಡೆಯುವುದು. ಇದ್ದಿಲ ಒಲೆಯಲ್ಲಿ ಹದವಾಗಿ ಕಾಯ್ದು ಕೆನೆಗಟ್ಟಿದ ಹಾಲನ್ನು ಇಷ್ಟೇ ಚೂರು ಮೊಸರು ಹಾಕಿ ಹೆಪ್ಪು ಹಾಕಿ ಗೂಡಲ್ಲಿ ಇಟ್ಟರೆ ನಸುಕು ಹರಿಯುವ ಮುನ್ನ ಹೆಪ್ಪಾಗಿರುತಿತ್ತು. ಹೆಪ್ಪು ಹಾಕುವುದು ಒಂದು ಹದವೇ. ಚೂರೇ ಚೂರು ಹಾಕಿದರೆ ಹೆಪ್ಪಾಗದೆ ವಾಸನೆ ಬರುತ್ತೆ, ಸ್ವಲ್ಪ ಜಾಸ್ತಿಯಾದರೂ ಹುಳಿಯಾಗುತ್ತೆ. ಹದ ತಪ್ಪಬಾರದು. ಇಷ್ಟಕ್ಕೂ ಬದುಕಿನಲ್ಲಿ ಪ್ರತಿಯೊಂದಕ್ಕೂ ಹದವಿದ್ದೆ ಇದೆ. ತಪ್ಪಿದ ಯಾವುದು ತಾನೇ ರುಚಿಕಟ್ಟಾಗಿರುತ್ತದೆ? ರಾತ್ರಿಯೆಲ್ಲಾ ಅದರ ಜೊತೆಗೆ ಅದೆಷ್ಟು ಭಾವಗಳು ಅಲ್ಲೇ ಗಟ್ಟಿಯಾಗಿ ಹೆಪ್ಪುಗಟ್ಟಿರುತ್ತಿದ್ದವೋ ಯಾರಿಗೆ ಗೊತ್ತು. ಕತ್ತಲೆ ಅವೆಲ್ಲವನ್ನು ತನ್ನೊಳಗೆ ಅಡಗಿಸಿಕೊಂಡು ಏನೋ ಕಡು ಕಪ್ಪಾಗಿರುತಿದ್ದದ್ದು. ...