ಶ್ರಾವಣ (Vijayakarnataka 29.07.19)
ಇನ್ನೇನು ಶ್ರಾವಣ ಬಂತು ಎಂದು ಅಜ್ಜಿ ಹೇಳುವ ಹೊತ್ತಿಗೆ ಚಿಕ್ಕಿಯ ಮುಖ ಕೊಂಚ ಕೆಂಪಾಗಿದ್ದು ಯಾಕೆ ಎಂದು ಯೋಚಿಸುವ ಹೊತ್ತಿಗೆ ರೇಡಿಯೋದಲ್ಲಿ ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ ಎನ್ನುವ ಹಾಡು ಶುರುವಾಗಿತ್ತು. ಶ್ರಾವಣ ಎಂದರೆ ಸಂತಸ ಅಡಿಯಿಡುವ ಹೊತ್ತು. ಅವಳಿಗೋ ಮರಳುವ ತವಕ, ನಮಗೋ ಹಬ್ಬಗಳ ಸಾಲು ಸಾಲು ಹೊತ್ತು ತರುವ ಸಿಹಿಯ ಕನಸು, ಹೆಂಗಸರಿಗೆ ವ್ರತ, ಪೂಜೆ ನೇಮಗಳಿಗೆ ಸಿದ್ಗಧರಾಗುವ ಗಡಿಬಿಡಿ. ಗಂಡಸರಿಗೆ ವ್ಯವಸಾಯ ಕೆಲಸಗಳು ಮುಗಿದ ನಿರಾಳ ಭಾವ. ಒಟ್ಟಿನಲ್ಲಿ ಶ್ರಾವಣ ಎಂದರೆ ಸಂಭ್ರಮ, ಶ್ರಾವಣ ಎಂದರೆ ಭಕ್ತಿ, ಶ್ರಾವಣ ಎಂದರೆ ಸಿಹಿಯೂಟ. ಶ್ರಾವಣ ಎಂದರೆ ಸಮಾಧಾನ, ಶ್ರಾವಣ ಎಂದರೆ ಧಾರ್ಮಿಕ ಆಚರಣೆಗಳ ಶುರುವಾತು. ಬಾಲ್ಯ ಕಳೆದು, ಹರೆಯದ ಹುಮ್ಮಸ್ಸು ದಾಟಿ ಬಂದು ಈಗ ದಿಟ್ಟಿಸಿದರೆ ಶ್ರಾವಣ ಎಂದರೆ ನವವಧುವಿನಂತೆ ಕಾಣಿಸುತ್ತದೆ. ಮೈ ಮನಗಳಲ್ಲಿ ಪುಳಕ ಹುಟ್ಟಿಸುತ್ತದೆ. ಮಳೆಯನಾಡು ತೊಯ್ಯುತಿರೆ, ಮಂಜಿಗಿರುಳು ಬೆದರುತಿರೆ ಸೋನೆ ತಿರೆಯು ತೊಯ್ಯುತಿರೆ ಮಿಂಚೆ ತಿಮಿರ ನಡುಗುತಿರೆ ಮುದವು ಮೊಳೆದು ನಮೆವುದು .... ಎಂಬ ಪುತಿನ ಸಾಲುಗಳಂತೆ ಮಲೆನಾಡಿನ ಮಳೆಯೇ ಹಾಗೆ, ಸುರಿದರೆ ಸುರಿಯುತ್ತಲೇ ಇರುತ್ತದೆ. ರಚ್ಚೆ ಹಿಡಿದ ಮಗುವಿನಂತೆ, ಮುನಿಸಿಕೊಂಡ ಮುಗುದೆಯಂತೆ. ಅದರಲ್ಲೂ ಆಷಾಢದ ಭೋರುಗಾಳಿ, ಅಬ್ಬರದ ಮಳೆ ಹುಚ್ಚು ಹಿಡಿಸಿಬಿಡುತ್ತದೆ. ಶ್ರಾವಣ ಬರುವ ಹೊತ್ತಿಗೆ ಫಾರ್ಮ್ ಕಂಡುಕ...