ತುಷಾರ ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರವಲ್ಲ

ಒಂದು ತಿಂಗಳು ಆಯ್ತು ಮಾತಾಡದೇ ಈಗ ಮಾತಾಡ್ತೀನಿ ಅಂದ್ರೂ ಅವರೇ ಇಲ್ಲ ಏನ್ಮಾಡೋದು ಅಕ್ಕ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದವನ ನೋಡುತ್ತಿದ್ದವಳ ಕಣ್ಣಲ್ಲೂ ಮಳೆ ಹನಿಯುತ್ತಿತ್ತು. ಬೆಳಿಗ್ಗೆ ಸೂರ್ಯನೂ ಏಳುವ ಮೊದಲೇ ಮೊಬೈಲ್ ಸದ್ದು ಮಾಡಿ ಸದ್ದಿಲ್ಲದೇ ಎದ್ದು ಹೊರಟ ಅಪ್ಪನ ಸುದ್ದಿ ಬಿತ್ತರಿಸಿತ್ತು. ಇಲ್ಲಿ ಕುಳಿತವನ ಕಣ್ಣಲ್ಲಿ ಒಂದೇ ಸಮನೆ ನೀರು ಹರಿಯುತಿತ್ತು. ಮಾತು ತಡವರಿಸಿ ತಡವರಿಸಿ ಬರುತಿತ್ತು. ನಿಲ್ಲದ ಕುಡಿತಕ್ಕೆ, ಯಾವುದೋ ಮಾತಿಗೆ ಮಾತು ಬೆಳೆದು ಕೋಪಗೊಂಡು ಹೊರಟಿದ್ದ ಮಗ ಮಾತಾಡದೆ ಉಳಿದಿದ್ದ. ಅಪ್ಪನ ಮೇಲೆ ಮುನಿಸಿಕೊಂಡಿದ್ದ. ಅಪ್ಪ ಬದಲಾಗಬಹುದು, ಮುಂದೊಂದು ದಿನ ಕೋಪ ಇಳಿಯಬಹುದು ಅಂದುಕೊಂಡು ಬಂದರೆ ಬರಲಾರದ ದೂರಕ್ಕೆ ಅಪ್ಪ ಹೊರಟುಹೋಗಿದ್ದ. ಆಡಬಹುದಾದ ಮಾತು ಉಳಿಸಿಕೊಂಡು ಕಾದು ಕುಳಿತಿದ್ದ.

ಹೀಗೆ ಸಣ್ಣಗೆ ಹನಿಯುತ್ತಿದ್ದ, ಮಬ್ಬು ಬೆಳಕು ಹರಡಿದ್ದ, ಆಲಸ್ಯದ  ದಿನವೊಂದರಲ್ಲಿ ತುಂಬಿಕೊಳ್ಳುವ ಖಾಲಿತನ ಓಡಿಸಲು ಅಶ್ವತ್ಥರ ಹಾಡು ಕೇಳುತ್ತಾ ಸುಮ್ಮನೆ ಕುಳಿತಿದ್ದೆ. ಅವರ ದನಿಯೆಂದರೆ ಹಾಗೆ ಹೇಳಲಾಗದ ಸೆಳೆತ. ಅದರಲ್ಲೂ ಇಂಥ ವಾತವರಣದಲ್ಲಿ ಅದು ದಿವ್ಯೌಷಧ ಇದ್ದ ಹಾಗೆ. ಬೇಸರಕ್ಕೆ ಕಿವಿಯಾಗಿ, ಮಾತಿಗೆ ಜೊತೆಯಾಗಿ, ಒಂಟಿತನಕ್ಕೆ ಹೆಗಲಾಗಿ, ಮೌನಕ್ಕೆ ಶೃತಿಯಾಗಿ,ಉಸಿರಿನೊಂದಿಗೆ ಮಿಳಿತವಾಗಿ ಜೊತೆಜೊತೆಗೆ ಕೈ ಹಿಡಿದು ಸಾಗುತ್ತದೆ. ಮೋಡಕವಿದಿರುವಾಗ, ಮಳೆ ಹನಿಯುವಾಗ, ಬಿರುಬಿಸಿಲು ಕಾಯುವಾಗ, ಚಳಿ ಮರಗಟ್ಟಿಸುವಾಗ, ನೀರವತೆ ಬಂದು ಅಪ್ಪುವಾಗ ಕಾಯುವ  ಎಲ್ಲಾ ಕಾಲಕ್ಕೂಕಾಡುವ ಸಲ್ಲುವ  ಇದು ಆಪ್ತಬಂದು. ಹಾಗೆ ಕಣ್ಮುಚ್ಚಿ ಕೇಳುವಾಗಲೇ ಅಮ್ಮಾ ಒಂದು ಪ್ರಶ್ನೆ ಎನ್ನುವ ದನಿ ಕಳೆದುಹೊಗುತ್ತಿದ್ದವಳನ್ನು ಮತ್ತೆ ಕರೆದುತಂದಿತು.

ಈ ದನಿ ಕೇಳಿದ ಕೂಡಲೇ ಬೆಚ್ಚಿ ಬೀಳುವುದು ಜಾಸ್ತಿ. ಅದು ಬಾಣವೋ, ಬಾಂಬೋ, ಕ್ಷಿಪಣಿಯೋ ಬಂದು ಅಪ್ಪಳಿಸುವುದರವರೆಗೂ ಗೊತ್ತೇ ಆಗುವುದಿಲ್ಲ, ಗೊತ್ತಾದ ಮೇಲೆ ತಪ್ಪಿಸಿಕೊಳ್ಳುವ ಯಾವ ದಾರಿಯೂ ಉಳಿದಿರುವುದಿಲ್ಲ. ಆತಂಕ ಮುಚ್ಚಿಟ್ಟುಕೊಳ್ಳುತ್ತಲೇ ಏನು ಅಂದೇ. ಅವರು ಎಲ್ಲಿರೋದು ಕೇಳಿದ್ಲು... ಈಗ ಇಲ್ಲ ಕಣೆ ಇಲ್ಲೆಲ್ಲಾ ಹಾಡಿಮುಗಿಸಿ ಈಗ ದೇವರ ಹತ್ತಿರ ಹಾಡು ಹೇಳೋಕೆ ಹೋಗಿದಾರೆ ಅಂದೇ.  ಅವರು ನಿಂಗೆ ಗೊತ್ತಾ ಎನ್ನುವ ಪ್ರಶ್ನೆ ತೂರಿ ಬಂತು. ನಿರಾಳವಾಗುತ್ತಲೇ ಹೂ ಅಂದೇ. ನೋಡಿದ್ಯಾ.. ಹೌದು ಕಣೆ ಕಾಲೇಜ್ ಅಲ್ಲಿದ್ದಾಗ ಬಂದಿದ್ರೂ ಹಾಡೂ ಹೇಳಿಕೊಟ್ಟಿದ್ರು ಅಂದೇ. ಅವರಿಗೆ ನಿಂಗೆ ಅವರ ದನಿ ಇಷ್ಟ, ಹೀಗೆ ದಿನಾಲು ಕೇಳ್ತೀನಿ, ಸಮಾಧಾನ ಸಂತೋಷ ಎಲ್ಲಾ ಸಿಗುತ್ತೆ ಅಂತ ಹೇಳಿದ್ಯಾ. ಸ್ವಲ್ಪ ಗೊಂದಲದಲ್ಲೇ ಇಲ್ಲಾ ಮಾರಾಯ್ತಿ ಅಂದರೆ ಅಲ್ಲಮ್ಮ ಅವರ ಹಾಡು ಅಂದ್ರೆ ಅಷ್ಟಿಷ್ಟ ಅಂತಿಯಾ, ಅವರು ಗೊತ್ತಿತ್ತು, ನೋಡಿದೀನಿ ಮಾತಾಡಿದಿನಿ ಅಂತಿಯಾ ಆದರೂ ಒಂದ್ಸಲವೂ ನಿಮ್ಮ ಹಾಡು ನಿರಾಳತೆ ಕೊಡುತ್ತೆ ಅಂತ ಯಾಕೆ ಹೇಳಿಲ್ಲ, ಅವರೇನೋ ಈಗಲೂ ನಿನ್ನ ಜೊತೆ ಇದಾರೆ ಅನ್ನಿಸಬಹುದು ಆದರೆ ಅವರಿಗೆ ಅದನ್ನು ನೇರವಾಗಿ ಹೇಳಿದ್ರೆ ಖುಷಿಪಡ್ತಾ ಇದಾರೆನೋ ಅಲ್ವಾ ಅಂದು ಅತ್ತ ತಿರುಗಿದಳು. ಒಂದಷ್ಟು ಹೊತ್ತು ಸುಮ್ಮನೆ ಕುಳಿತೆ ಇದ್ದೆ ಹಾಕಿದ್ದ ಹಾಡೂ ಕೇಳಿಸದಂತೆ.

ಎಷ್ಟೋ ಸಲ ಹೀಗೆಯೇ ನೋಡಬೇಕು ಅಂದುಕೊಂಡವರ ನೋಡಲು ಹೋಗದೆ, ಮಾತಾಡಿಸಬೇಕು ಅಂದುಕೊಂಡವರ ಬಳಿ ಮಾತಾಡದೇ, ಹೇಳಬೇಕು ಅಂದಿದ್ದು ಹೇಳದೆ ಸುಮ್ಮನಾಗಿರುತ್ತೇವೆ. ಸೋಮಾರಿತನವೋ, ಮತ್ತೇನೋ ಕಾರಣವೋ ಒಟ್ಟಿನಲ್ಲಿ ಅದಕ್ಕೆ ಬೇಕಾದ ಸಮರ್ಥನೆಗಳನ್ನು ಕೊಟ್ಟುಕೊಂಡು ನಮ್ಮನ್ನೇ ನಾವು ನಂಬಿಸಿಕೊಂಡಿರುತ್ತೇವೆ. ನಾಳೆ ನೋಡಿದರಾಯ್ತು, ಮಾತಾಡಿದರಾಯ್ತು ಎನ್ನುವ ಉಡಾಫೆ. ಜಗತ್ತು ಸತ್ಯ ಎನ್ನುವ ಹಾಗೆ ನಾವೂ ಅಮರರು ಎನ್ನುವ ಭಾವ. ನಾಳೆಗೆ ಜಗತ್ತು ಮುಳುಗಿ ಹೋಗುತ್ತಾ ಎನ್ನುವ ಭಾವ.  ಮಹಾಭಾರತದ ಕತೆಯೊಂದು ನೆನಪಾಗುತ್ತದೆ. ನೀರು ತರಲು ಹೋದ ತನ್ನ ನಾಲ್ವರು ತಮ್ಮಂದಿರು ಹಿಂದುರಿಗದೆ ಇದ್ದಾಗ ಹುಡುಕುತ್ತಾ ಬರುವ ಧರ್ಮರಾಯನಿಗೆ ಅವರೆಲ್ಲರೂ ಕೊಳದ ಬಳಿ ಸತ್ತು ಬಿದ್ದಿರುವುದು ಕಾಣಿಸುತ್ತದೆ. ಕಾರಣ ಹುಡುಕಲು ಹೋದಾಗ ಯಕ್ಷನ ದ್ವನಿ ಕೇಳಿಸುತ್ತದೆ. ತನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಮಾತ್ರ ಆ ಕೊಳದ ನೀರು ಕುಡಿಯುವ ಅವಕಾಶವೆಂದೂ ಅದನ್ನು ತಪ್ಪಿದ್ದಕ್ಕಾಗಿಯೇ ಅವನ ತಮ್ಮಂದಿರಿಗೆ ಆ ಸ್ಥಿತಿ ಒದಗಿದೆಯೆಂದೂ ಹೇಳುತ್ತಾನೆ. ಆಗ ಧರ್ಮರಾಯ ಪ್ರಶ್ನೆಗಳನ್ನು ಕೇಳು ಎಂದು ಪ್ರಾರ್ಥಿಸಿಕೊಂಡಾಗ ಯಕ್ಷ ಕೇಳುವ ಪ್ರಶ್ನೆಗಳಲ್ಲಿ ಈ ಪ್ರಶ್ನೆ ಪ್ರಸ್ತುತಕ್ಕೆ ತುಂಬಾ ಪ್ರಾಮುಖ್ಯವಾದುದು.

ಅಚ್ಚರಿಯ ಸಂಗತಿ ಯಾವುದು ಎಂಬ ಯಕ್ಷನ ಪ್ರಶ್ನೆಗೆ ಧರ್ಮರಾಯ ಉತ್ತರಿಸುತ್ತಾನೆ. ಪ್ರತಿದಿನ ಅನೇಕರು ಸಾಯುತ್ತಿದ್ದರೂ ತಾವು ಶಾಶ್ವತ ಎಂದು ನಂಬುತ್ತಾರಲ್ಲ ಅದಕ್ಕಿಂತ ಅಚ್ಚರಿ ಇನ್ಯಾವುದು..  ಸದ್ಗುರು ತಮ್ಮ ಮಾತೊಂದರಲ್ಲಿ ಹೇಳುತ್ತಾರೆ. ಗೊತ್ತಿರುವುದು ಬೇರೆ ಅರಿವಿಗೆ ಬರುವುದು ಬೇರೆ ಅಂತ. ಎಲ್ಲರಿಗೂ ಸಾವು ನಿಶ್ಚಿತ ಎಂದು ಗೊತ್ತು, ಬದುಕು ಶಾಶ್ವತವಲ್ಲ ಎಂದೂ ಗೊತ್ತು ಅದನ್ನು ಅನೇಕ ಬಾರಿ ಹೇಳಿಯೂ ಇರುತ್ತಾರೆ. ಆದರೆ ಅದು ಅರ್ಥವಾಗಿರುತ್ತದಾ ಎಂದು ಕೇಳಿದರೆ ಇಲ್ಲಾ ಎಂದು ಧೈರ್ಯವಾಗಿ ಹೇಳಬಹುದು. ಬದುಕು ಅನಿಶ್ಚಿತ, ಕ್ಷಣಿಕ ಎಂದು ಸರಿಯಾಗಿ ಅರ್ಥವಾದ ದಿನ, ಸಾವು ನಮ್ಮ ಕೈಯಲ್ಲಿ ಇಲ್ಲ ಅದು ಯಾವಾಗ ಬರುತ್ತದೆ ಎನ್ನುವುದೂ ನಮ್ಮ ಹತೋಟಿಯಲ್ಲಿ ಇಲ್ಲ ಎಂದು ಅರಿವಾದ ಕ್ಷಣ ನಮ್ಮ ಎಷ್ಟೋ ವರ್ತನೆಗಳು ಬದಲಾಗುತ್ತವೆ. ಪ್ರತಿಕ್ರಿಯಿಸುವ ರೀತಿಯೇ ಬೇರೆಯಾಗುತ್ತದೆ. ಕೋಪ, ದ್ವೇಷ, ಸಾಧಿಸುವ ಛಲ ಎಲ್ಲವೂ ಕಡಿಮೆಯಾಗಿ ಬೇರೆಯದೇ ದಾರಿಗಳು ತೆರೆದುಕೊಳ್ಳುತ್ತವೆ. ಅದರಿಂದ ಎದುರಿಗಿನ ವ್ಯಕ್ತಿ ಬದಲಾಗುತ್ತಾನಾ ಏನೋ ಮಹತ್ತದ್ದು ಘಟಿಸುತ್ತದಾ ಎಂದರೆ ಹೇಳಲು ಕಷ್ಟವಾಗಬಹುದು, ಆದರೆ ನಮ್ಮ ಮನಸ್ಥಿತಿ ಖಂಡಿತ ಬದಲಾಗುತ್ತದೆ. ನೆಮ್ಮದಿ ಸಿಗುತ್ತದೆ. ಇದಲ್ಲದೆ ಮತ್ತೇನು ಬೇಕು ಬದುಕಿದೆ.

ಪ್ರತಿ ಸಮಸ್ಯೆಗೂ ಆಲೋಚಿಸಿದಷ್ಟು ದಾರಿಗಳು ಹೊಳೆಯಬಹುದು. ಒಂದೊಂದು ದಾರಿಗೂ ಒಂದೊಂದು ಫಲಿತಾಂಶ ದೊರಕಬಹುದು. ಹುಡುಕುವ ಮನಸ್ಸು, ಅರಿಯುವ ಶಕ್ತಿ ಇರಬೇಕು ಅಷ್ಟೇ. ದುಡುಕಿನ, ಉಡಾಫೆಯ ವರ್ತನೆ ಆ ಕ್ಷಣದ ನಮ್ಮ ಅಹಂ ಅನ್ನು ತೃಪ್ತಿಗೊಳಿಸಬಹುದು, ಏನೋ ಸಾಧಿಸಿದ ತೃಪ್ತಿ ಕೊಡಬಹುದು ಆದರೆ ಅದು ಹಲವು ಸಲ ಅಂತಿಮವಾಗಿ ಉಳಿಸುವುದು ಪಶ್ಚಾತ್ತಾಪವನ್ನೇ. ಬಿಕ್ಕಳಿಸಿ ಅಳುವವನಿಗೆ ಏನು ಹೇಳಿದರೆ ಸಮಧಾನವಾಗಬಹುದು ಅಸಲಿಗೆ ಸಮಾಧಾನವಾಗುವ ಉತ್ತರ ನನ್ನ ಹತ್ತಿರ ಇದೆಯಾ ಈ ಕ್ಷಣಕ್ಕೆ ಅದು ಪ್ರಸ್ತುತವಾಗಬಹುದಾ, ಏನೇ ಉತ್ತರ ಕೊಟ್ಟರೂ ಕಳೆದದ್ದು ಮತ್ತೆ ಮರಳಿಬರಲಾರದು, ಆ ನೋವಿಗೆ ಮುಕ್ತಿ ಸಿಗಲಾರದು ಎನ್ನುವ ಗೊಂದಲದಲ್ಲೇ ಕುಳಿತಿದ್ದೆ. ಆ ಕ್ಷಣಕ್ಕೆ ಭಾರತೀ ರಮಣಾಚಾರ್ಯ ತಾತ ನೆನಪಾದರು.

ಮಗು ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರವಲ್ಲ. ಏನೇ ಮಾಡಿದರೂ ದುಡುಕಿನಲ್ಲಿ ತೀರ್ಮಾನ ತೆಗೆದುಕೊಳ್ಳದೆ ಹತ್ತು ಹಲವು ಸಲ ಆಲೋಚಿಸಬೇಕು. ಅದು ಎಷ್ಟು ಚಿಕ್ಕದೇ ಆಗಿರಲಿ ಅಥವಾ ದೊಡ್ಡದೇ ಆಗಿರಲಿ. ಅಂತಿಮವಾಗಿ ಒಂದು ನಿರ್ಧಾರ ಮೂಡಿದಾಗ ಅದನ್ನು ಪಾಲಿಸಬಹುದು ಅನ್ನಿಸಿದಾಗ ಅಂತಿಮವಾಗಿ ಏನೇ ಫಲಿತಾಂಶ ದೊರಕಿದರೂ ಅದು ನಿನ್ನಲ್ಲಿ ಅಯ್ಯೋ ಹೀಗೆ ಮಾಡಬಾರದಾಗಿತ್ತು ಅನ್ನುವ ಹಳಹಳಿಕೆಯನ್ನೋ, ತಪ್ಪು ಮಾಡಿದೆ ಅನ್ನುವ ಭಾವವನ್ನೋ ಹುಟ್ಟುಹಾಕುವ ಹಾಗಿರಬಾರದು. ಹಾಗಿದ್ದರೆ ಮಾತ್ರ ಮುಂದುವರಿ. ಒಂದು ನಿರ್ಧಾರ ಮಾಡಿದ ಮೇಲೆ ಅದನ್ನು ಕಾರ್ಯಗತಗೊಳಿಸಿದ ಮೇಲೆ ಅದಕ್ಕೆ ಬದ್ಧರಾಗಿರಬೇಕು ಎಂದಿದ್ದು ನೆನಪಾಯಿತು. ಅದನ್ನೇ ಹೇಳಿದೆ. ಅಳು ನಿಲ್ಲಿಸಿದವನ ಕಣ್ಣಲ್ಲಿ ಏನಿತ್ತು ನೋಡುವ ಧೈರ್ಯವಾಗದಿದ್ದರೂ ಹಿಡಿದ ಕೈಯಲ್ಲಿನ ಬಿಸುಪು ಅದು ಅರ್ಥವಾದದ್ದನ್ನು ಹೇಳುತಿತ್ತು. ಮೌನ ಇಡೀ ಮನೆಯನ್ನು ಆವರಿಸಿತು. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...