ಆಷಾಢ

ಆರ್ಭಟಿಸುತ್ತಾ ಗುಡುಗುತ್ತಾ, ಸಿಡಿ ಸಿಡಿ ಅನ್ನುತ್ತಲೇ ಅಡಿಯಿಡುವ ಮಳೆರಾಯ ನೆನೆಸುತ್ತಾ ಮತ್ತೆ ಮಾಯವಾಗುತ್ತಾ, ಇದ್ದಕ್ಕಿದ್ದ ಹಾಗೆ ಪ್ರತ್ಯಕ್ಷವಾಗುತ್ತಾ ಬರುವಾಗ ಆರಂಭಿಕ ಪ್ರಾಯೋಗಿಕ ಪಂದ್ಯಗಳ ಆಟಗಾರನ ಹಾಗೆ ಅನ್ನಿಸಿದರೂ ತನ್ನ ಲಯ ಕಂಡುಕೊಂಡು ಸಂಪೂರ್ಣ ಸಾಮರ್ಥ್ಯ ಪ್ರಯೋಗಿಸುವಾಗ ಆಷಾಢ ಹೆಜ್ಜೆಯಿಟ್ಟು ಬಂದಿರುತ್ತದೆ. ಅಲ್ಲಿಗೆ ಮಳೆಗಾಲ ಸ್ಥಿರವಾಗಿ ನಿಂತಂತೆ. ಮುಂದಿನ ಬೇಸಾಯದ ಕಾರ್ಯಗಳಿಗೆ ನಾಂದಿ ಹಾಡಿದಂತೆ. ಹಾಗಾದರೆ ಆಷಾಢ ಹೇಗಿರುತ್ತೆ?

ಭೋರೆಂದು ಬೀಸುವ ಗಾಳಿ, ಕಪ್ಪು ಟಾರ್ಪಾಲ್ ಹಾಸಿದಂತೆ ಮಲಗಿರುವ ತುಂಬು ಬಸುರಿ ಕಪ್ಪು ಮೋಡಗಳು, ಮಬ್ಬು ಬೆಳಕು, ಹೊಯ್ಯುವ ಮಳೆ, ಕಿಬ್ಬೊಟ್ಟೆಯಾಳದಲ್ಲಿ ಹುಟ್ಟಿ ಸುಳಿ ಸುತ್ತುವ ಸಣ್ಣ ಚಳಿ, ಹರಿಯುವ ಕೆಂಪು ನೀರು, ತುಂಬಿಕೊಳ್ಳಲು ಆರಂಭಿಸಿದ ಹಸಿರು, ನೆಮ್ಮದಿಯ ಉಸಿರು. ಕಾದು ಕಾದು ನೆನೆದು ಒದ್ದೆಯಾದ ನೆಲ ಹದವಾಗಿ ಬಿತ್ತನೆಗೆ ತಯಾರಾಗಿರುವ ಈ ಸಮಯದಲ್ಲಿ ಬೆಟ್ಟದಷ್ಟು ಕೆಲಸ. ಮುಂದಿನ ಒಂದು ವರ್ಷದ ಹೊಟ್ಟೆಯ ಚೀಲ ತುಂಬಿಕೊಳ್ಳುವ ಕಾರ್ಯ ಶುರುವಾಗುವುದೇ ಇಲ್ಲಿಂದ.

ಕೆಲಸಕ್ಕೆ ಹೋಗಲು ವಾತಾವರಣ ಪೂರಕವೇ ಎಂದರೆ ಖಂಡಿತ ಅಲ್ಲ. ರಚ್ಚೆ ಹಿಡಿದ ಮಗುವಿನಂತೆ ಒಂದೇ ಸಮನೆ ಸುರಿಯುವ ಮಳೆ, ಗಾಳಿಯ ರಭಸಕ್ಕೆ ತೆಕ್ಕೆಗೆ ಸಿಗದೇ ತಪ್ಪಿಸಿಕೊಂಡು ಓಲಾಡುವ ಕೆಲವೊಮ್ಮೆ ಬಾಗಿ ನೆಲ ಚುಂಬಿಸುವ  ಗಿಡ, ಮರಗಳು, ಕಿಟಕಿ ಬಾಗಿಲು ಮುಚ್ಚಿದರೂ ಕಳ್ಳನಂತೆ ಒಳಗೆ ನುಸುಳಿ ಅಪ್ಪುವ ಚಳಿ, ಅದರಿಂದ ಪಾರಾಗಲು ಮುದುಡಿ ಕೂರುವ ಮನುಷ್ಯರು, ಸದಾ ಒಂದಲ್ಲ ಒಂದು ಕಬಳಿಸುತ್ತಾ ಉರಿಯುವ ಬಚ್ಚಲ ಒಲೆ, ಹನಿ ಹನಿಯಾಗಿ ನೀರು ಉದುರಿಸಿ ಬೆಚ್ಚಗಾಗುವ ಅಲ್ಲೇ ಗಳದ ಮೇಲಿನ ಕಂಬಳಿ ಕೊಪ್ಪೆ, ಕಟ್ಟಿಗೆಯ ಬದಲು ತಾನೇ ಉರಿಯುತ್ತೇನೋ ಎಂದು ಮತ್ತಷ್ಟು ಸರಿಸರಿದು ಕೂರುವ ನಾಯಿ, ಜಗುಲಿಯ ಮೂಲೆಯಲ್ಲಿ ಮೈ ಕೈ ಹಿಡಿಯಾಗಿಸಿ ತೆಪ್ಪಗೆ ಕುಳಿತ ಹಿಡಿ ಮುರಿದ ಕೊಡೆ, ಬಾಲ ಬೀಸಿದರೆ ಎಲ್ಲಿ ಗಾಳಿ ನುಗ್ಗುವುದೋ ಎಂದು ಅಲ್ಲಾಡದೆ ಕಾಲುಗಳನ್ನು ಆಮೆಯ ಹಾಗೆ ಮುದುರಿ ಮಲಗುವ ದನಗಳು, ಕೊಡೋಲೆಯ ಎದುರು ಕುಳಿತು ಚಳಿ ಕಾಯಿಸಿಕೊಳ್ಳುತ್ತಾ ಬೈಸಿಕೊಳ್ಳುವ ಮಕ್ಕಳು,  ಇದಾವುದರ ಪರಿವೆಯಿಲ್ಲದೆ ಒದಗೆಯಿಂದ ಬೀಳುವ ನೀರು ತುಂಬಿದರೂ ಮತ್ತೆ  ತುಂಬಿಸಿಕೊಳ್ಳುವ ನೀಲಿ ಬಣ್ಣದ ಡ್ರಮ್ಮು, ಮನೆಯ ತುಂಬಾ ಆವರಿಸಿಕೊಂಡಿರುವ ಥಂಡಿ ವಾಸನೆ, ಕೊರೆಯುವ ನೆಲ, ಎಲ್ಲವನ್ನೂ ನಿರ್ಲಿಪ್ತವಾಗಿ ನೋಡುತ್ತಾ ಒಡಲಲ್ಲಿ ಅಕ್ಕಿಯನ್ನು ಬೆಚ್ಚಗೆ ಮಲಗಿಸಿಕೊಂಡಿರುವ ಪತ್ತಾಸು. ಒಟ್ಟಿನಲ್ಲಿ ಇಡೀ ಮಲೆನಾಡು ಒದ್ದೆ ಒದ್ದೆಯಾಗಿ ಹಸಿ ಹಸಿಯಾಗಿ ಹದವಾಗಿ ಹೋಗಿರುತ್ತದೆ.

ಹಾಗೆಂದು ಸುಮ್ಮನೆ ಕೂರುವ ಹಾಗೆಯೇ ಇಲ್ಲ, ಏಳಬೇಕು ಎದ್ದು ಕೆಲಸಕ್ಕೆ ಆ ಮಳೆಯಲ್ಲಿಯೇ ಹೊರಡಬೇಕು. ಹೊಸದಾಗಿ ಮದುವೆಯಾದವರು ಈ ವ್ರತ ಭಂಗ ಮಾಡುವ ಹಾಗಿಲ್ಲ  ಹಾಗಾಗಿಯೇ ನವ ವಧು ತವರಿಗೆ ಹೊರಡಬೇಕು, ಈ ಒಂದು ತಿಂಗಳು ಗಂಡನಿಂದ ದೂರವಿದ್ದು ಅವನ ತಪೋಭಂಗವಾಗದಂತೆ ನೋಡಿಕೊಂಡರೆ ಮುಂದೆ ಒಂದು ವರ್ಷದ ಕೂಳು ದಕ್ಕುವುದು. ಆಷಾಢದಲ್ಲಿ ದುಡಿದಷ್ಟೂ ಒಳಿತು. ಕಾಯುವ ನವ ವಧು ಇಲ್ಲದಿದ್ದರೆ ಯಾವ ಗಂಡಸು ಬೇಗ ಮನೆಗೆ ಬಂದಾನು. ಇನ್ನೊಂದು ತಾಸು ಹೆಚ್ಚೇ ದುಡಿಯುತ್ತಾನೆ. ಭೂಮಿ ಯಾವತ್ತೂ ಕೊಟ್ಟದ್ದನ್ನು ತೆಗೆದುಕೊಂಡು ಸುಮ್ಮನಿರುವುದಿಲ್ಲ. ದುಪ್ಪಟ್ಟು ಹಿಂದಿರುಗಿಸುತ್ತಾಳೆ. ಅವಳಿಗೆ ಮಕ್ಕಳ ಮೇಲೆ ತುಸು ಪ್ರೀತಿ ಜಾಸ್ತಿಯೇ. ಹಾಗಾಗಿಯೇ ಆಷಾಢವೆಂದರೆ ಕೆಲಸ, ಆಷಾಢವೆಂದರೆ ಬೇಸರ, ಆಷಾಢವೆಂದರೆ ಹುರುಪು, ಆಷಾಢವೆಂದರೆ ಬದುಕು. ಆಷಾಢವೆಂದರೆ ಹದವಾಗುವಿಕೆ.

ಇಂಥ ಸಮಯದಲ್ಲೇ ಬೇಸಾಯದ ಶ್ರೀಕಾರ. ತಲೆಗೆ ಕಂಬಳಿ ಕೊಪ್ಪೆ ಹಾಕಿಕೊಂಡು ಹೆಗಲ ಮೇಲೆ ಹಾರೆಹೊತ್ತುಕೊಂಡು ಹೋಗುವವರು, ಎತ್ತುಗಳನ್ನು ಹೊಡೆದುಕೊಂಡು ನೇಗಿಲು ಹೊತ್ತು ನಡೆಯುವವರು, ಹಿಂದಿನಿಂದ ಗದ್ದೆಯ ಅಂಚಿನ ಮೇಲೆ ಓಲಾಡುತ್ತಾ ನಡೆಯುವ ಕಾಫಿ ತಿಂಡಿ ಹಿಡಿದುಕೊಂಡವರು, ಸೀರೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿ ತಲೆಯ ಮೇಲೆ ಗೊರಬುಹಾಕಿಕೊಂಡವರು, ಛತ್ರಿಯನ್ನು ಹಿಡಿದುಕೊಂಡು ಗಾಳಿಯಿಂದ ತಪ್ಪಿಸಿಕೊಳ್ಳಲು ಒದ್ದಾಡುವವರು, ಹಾಳೆಟೊಪ್ಪಿಯ ಮೇಲೊಂದು ಬುಟ್ಟಿ ಹೊತ್ತು ಸಾಗುವವರು ಹೀಗೆ ಗದ್ದೆಯ ಬಯಲಲ್ಲಿ ಜನರ ಸಂಭ್ರಮ, ಕೆಲಸದ ಗಡಿಬಿಡಿ. ಎತ್ತು ಕಟ್ಟಿ ನೇಗಿಲು ಹಿಡಿದು ಹೂಟಿ ಮಾಡಿದರೆ ನಿಧಾನವಾದರೂ ಭೂಮಿ ಬಗೆಯುವುದಿಲ್ಲ. ಎಷ್ಟು ಬೇಕೋ ಅಷ್ಟನ್ನೇ ಹದವಾಗಿ ಉತ್ತುತ್ತದೆ. ಸ್ವಲ್ಪವೂ ಘಾಸಿಯಾಗದಂತೆ ಒಡಲನ್ನು ಕಾಪಾಡುತ್ತದೆ. ಹಾಗೆ ಹೂಟಿ ಮಾಡುವಾಗ ಕೈಯಲ್ಲಿನ ಚಾಟಿಯನ್ನು ಬೀಸುತ್ತಾ ರಾಗವಾಗಿ ಹಾಡುತ್ತಾ, ಆಗಾಗ ಹುಮ್ಮ ಹುಮ್ಮ ಎಂದು ಎತ್ತುಗಳಿಗೆ ಹುರಿದುಂಬಿಸುತ್ತಾ ಅವುಗಳ ಬೆನ್ನು ತಟ್ಟುತ್ತಾ ಸಾಗುತ್ತಿದ್ದರೆ ಗಾಳಿಯೂ ತುಸು ಕಾಲ ನಿಂತು ನೋಡುತ್ತಿತ್ತಾ ಅನ್ನಿಸುವ ಹಾಗೆ ಇಡೀ ವಾತಾವರಣ ಸ್ತಬ್ಧವಾಗುತಿತ್ತು.

ಉತ್ತ ಹೊಲದಲ್ಲಿ ಕೆಸರು ನೀರು ತುಂಬಿದ ಜಾಗದಲ್ಲಿ ನಿಧಾನಕ್ಕೆ ಇಳಿದು ಸೊಂಟ ಬಾಗಿಸಿ ಸಸಿ ಕೀಳುವ, ನಾಟಿ ಮಾಡುವ  ಹೆಂಗಸರ ಸರಬರ ಸದ್ದು, ಮಾತಿನ ಮಳೆ, ಕೇಕೆ, ನಗು, ಸುದ್ದಿಯ ಸ್ವಾರಸ್ಯಕ್ಕೆ ಹೊಯ್ಯುವ ಮಳೆಯೂ ಬೆರಗಾಗಿ ನಿಂತು ಕೇಳಿಸಿಕೊಂಡು ಮತ್ತೆ ನೆನಪಾಗಿ ಸುರಿಯಲು ಶುರು ಮಾಡುತಿತ್ತು. ಎತ್ತಿನ ಕೊರಳಿನ ಗಂಟೆ, ಹೂಟಿ ಮಾಡುವವರ ಸದ್ದು, ಯಾವ ನ್ಯೂಸ್ ಚಾನೆಲ್ ಗೂ ಕಡಿಮೆಯಿಲ್ಲದಂತೆ ನಡೆಯುವ ಹೆಂಗಳೆಯರ ಚರ್ಚೆ, ಸಸಿ ಹೊತ್ತು ಹಾಕುತ್ತಲೋ, ಅಂಚು ಕಡಿಯುತ್ತಲೋ ನಡೆಯುವ ಗಂಡಸರ ಮಾತುಕತೆ ಹೀಗೆ ಹೊಯ್ಯುವ ಮಳೆಗೆ, ಬೀಸುವ ಗಾಳಿಗೆ ಸೆಡ್ಡು ಹೊಡೆದು ಅವುಗಳ ಅಸ್ತಿತ್ವದ ಅರಿವೇ ಇಲ್ಲದಂತೆ ಕೆಲಸ ಸಮರೋಪಾದಿಯಲ್ಲಿ ನಡೆಯುವಾಗ ಮಳೆ ಗಾಳಿಗೂ ಸಿಟ್ಟು ಬರುತ್ತಿತ್ತೇನೋ. ಹಾಗಾಗಿಯೇ ಗಾಳಿ ನಿಧಾನಕ್ಕೆ ಮನೆಯ ಕಡೆ ಹೋಗಿ ಅಲ್ಲಿ ಮುರುವಿನ ಒಲೆಯಲ್ಲಿ ಬೇಯುತ್ತಿದ್ದ ಹುರುಳಿಯ ಘಮವನ್ನು ಹೊತ್ತು ತಂದು ಗದ್ದೆಗೆ ಹಾಕುತ್ತಿತ್ತು. ಒಂದು ಕ್ಷಣ ಎಲ್ಲವುದಕ್ಕೂ ಬ್ರೇಕ್ ಬಿದ್ದು ಬಾಯಿ ಮೌನವಾಗಿ ಮೂಗು ಅರಳುತಿತ್ತು. ಎತ್ತುಗಳೂ ಒಂದು ಕ್ಷಣ ನಿಂತು ತಲೆಯನ್ನು ಮನೆಯ ಕಡೆ ತಿರುಗಿಸಿ ಮೂಗಿನ ಹೊಳ್ಳೆ ಅರಳಿಸುತ್ತಿದ್ದವು.

ಆಷಾಢದ ಗಮ್ಮತ್ತೇ ಅದು. ಹೂಟಿ ಮಾಡುವ ಎತ್ತುಗಳಿಗೆ ಶಕ್ತಿ ಬೇಕು, ದಿನವಿಡೀ ಮಳೆಯಲ್ಲಿ ಥಂಡಿಯಲ್ಲಿ ತಿರುಗುವ ಅವುಗಳ ಹೊಟ್ಟೆ ಚೆಚ್ಚಗಾಗಬೇಕು. ಜೊತೆ ಜೊತೆಗೆ ನೆನೆದು ಸುಸ್ತಾಗಿ ಬರುವ ಉಳಿದವರ ಹೊಟ್ಟೆಯೂ ತುಂಬಿ ಕರುಳು ಬೆಚ್ಚಗಾಗಬೇಕು. ಆರೋಗ್ಯ ಕಾಯಬೇಕು. ಹೀಗೆ ಇಬ್ಬರಿಗೂ ಸಲ್ಲುವ ಆಹಾರ ತಯಾರಾಗಬೇಕು. ಗದ್ದೆಯಲ್ಲಿ ಕೆಲಸದ ಭರಾಟೆ ಜೋರಾಗುತ್ತಿದ್ದ ಹಾಗೆಯೇ ಮನೆಯಲ್ಲಿ ಮುರುವಿನ ಒಲೆಯೂ ಎಡೆಬಿಡದೆ ಕೆಲಸ ಮಾಡಬೇಕಿತ್ತು. ಬೆಳಗ್ಗೆಯೇ ಹೆಗಲಮೇಲೇರಿದ ದೊಡ್ಡ ತಪ್ಪಲೆಯಲ್ಲಿ ನೀರು ಮರಳುವ ಹೊತ್ತಿಗೆ ಹುರಳಿ ಬಂದು ಸೇರುತ್ತಿತ್ತು. ಒಂದು ದೊಡ್ಡ ಕುಂಟೆಯನ್ನು ದೂಡಿ ಹೊರಟರೆ ಅದು ಅಲ್ಲೇ ಬೆಂದು ಬೆಂದು ಕಟ್ಟುಬಿಡುವ ಹೊತ್ತಿಗೆ ಘಂ ಅನ್ನುವ ಸುವಾಸನೆಯೂ ಗಾಳಿಯ ಜೊತೆಗೆ ಸೇರಿ ಊರೆಲ್ಲಾ ತಿರುಗಲು ಹೊರಡುತಿತ್ತು. ಗದ್ದೆಯಲ್ಲಿನ ಮನುಷ್ಯರ ಹಾಗೂ ಎತ್ತುಗಳ ಉತ್ಸಾಹ ಹೆಚ್ಚಿಸುವ ಟಾನಿಕ್ ಅದು.

ನೇಗಿಲ ಕೊರಳ ಮೇಲೆ ಹೊತ್ತು ಉತ್ತು ಸುಸ್ತಾಗಿ ಬರುವ ಎತ್ತುಗಳು ಮನೆಗೆ ಸೇರುವ ಹೊತ್ತಿಗೆ ಪಾತ್ರೆಯಲ್ಲಿ ಬೆಂದು ಬಸಿದ ಹುರುಳಿ ಕೊಟ್ಟಿಗೆಯಲ್ಲಿ ಕಾಯುತ್ತಿದ್ದರೆ ಚಳಿಯಲ್ಲಿ ಹಸಿದು ಬಂದ ಅವು ತಿಂದು ಕರಳು ಬೆಚ್ಚಗಾಗಿಸಿಕೊಂಡು  ಮಲಗಿ ನಿದ್ದೆ ಹೋಗುತ್ತಿದ್ದವು. ವಿಶ್ರಾಂತಿ ಪಡೆದು ಮರುದಿನಕ್ಕೆ ಹುರುಪಿನಿಂದ ತಯಾರಾಗುತ್ತಿದ್ದವು. ಇಡೀ ದಿನ ಕೆಸರಲ್ಲಿ ನಿಂತು ಮಳೆಯಲ್ಲಿ ನೆಂದು ತೋಯ್ದು ತೊಪ್ಪೆಯಾಗಿ ನಡುಗುತ್ತಾ ಮನೆಗೆ ಬರುವ ಉಳಿದವರೂ ಹಂಡೆಯ ಬಿಸಿನೀರಿನಲ್ಲಿ ಕೈ ಕಾಲು ತೊಳೆದು ಊಟಕ್ಕೆ ಕುಳಿತರೆ ಹುರುಳಿ ಕಟ್ಟಿನ ಬಿಸಿ ಬಿಸಿ ಸಾರು ಅನ್ನದ ಮೇಲೆ ಬಂದು ಬಿದ್ದರೆ ತಪ್ಪಲೆ ಅನ್ನ ಖಾಲಿ ಆಗುವುದು ಗೊತ್ತೇ ಆಗುತ್ತಿರಲಿಲ್ಲ. ಥಂಡಿ ಹಿಡಿದ ಮೈ ಮನಸ್ಸು ಎರಡೂ ಬೆಚ್ಚಗಾಗಿ ತೃಪ್ತಿಯಾಗುತಿತ್ತು. ಬೇಸಾಯ ಮುಗಿಯುವವರೆಗೂ ಇದೇ ದಿನಚರಿ. ಎತ್ತುಗಳಿಗೆ ಅದೇ ಪೌಷ್ಟಿಕ ಆಹಾರ. ಥಂಡಿಗೆ ಅದೇ ಮದ್ದು. ಇಡೀ ಊರಿನ ಎಲ್ಲಾ ಮನೆಯವರ ಗದ್ದೆಯ ಕೆಲಸ ಮುಗಿಯುವ ಹೊತ್ತಿಗೆ ತಿಂಗಳಾದರೂ ಬೇಕಿತ್ತು. ಆ ಇಡೀ ತಿಂಗಳು ಮುರುವಿನ ಒಲೆ, ಎತ್ತುಗಳು ರಜವಿಲ್ಲದೆ ದುಡಿಯುತ್ತಿದ್ದವು. ಅವುಗಳನ್ನು ಈ ಹುರುಳಿ  ಚಳಿ ಹಿಂಡಿಹಿಪ್ಪೆ ಮಾಡದಂತೆ ಕೈ ಕಾಲು ಸೋಲದಂತೆ ಕಾಯುತ್ತಿತ್ತು. ಇಡೀ ಊರಿಗೆ ಊರೇ ಸರದಿ ಸಾಲಿನಂತೆ ಹುರುಳಿ ಕಟ್ಟು ತೆಗೆದುಕೊಂಡು ಹೋಗಿ ಉಂಡು ಸಂಭ್ರಮಿಸುತ್ತಿದ್ದರು. ಯಾರು ಬೇಯಿಸುತ್ತಾರೆ ಅನ್ನೋದು ಮುಖ್ಯವೇ ಅಲ್ಲದೆ ಎಲ್ಲರ ಮನೆ, ಮನವನ್ನು ಬೆಚ್ಚಗೆ ಕಾಯುತ್ತಿತ್ತು ಹುರುಳಿ. ಕೊಡು ಕೊಳ್ಳುವಿಕೆಯಲ್ಲಿ, ಒಬ್ಬರಿಗೊಬ್ಬರು ಆಗುವ ಕೆಲಸದಲ್ಲಿ ಆಷಾಢವೆಂಬುದು ಇಡೀ ಊರನ್ನೇ ಬೆಸೆಯುತ್ತಿದ್ದದ್ದು ಮಾತ್ರ ಸುರಿಯುತ್ತಿದ್ದ ಮಳೆಯಷ್ಟೇ ಸತ್ಯ.

ಶಾಲೆಯಿಂದ ಬಂದ ಮಕ್ಕಳು ಅದೇ ಬೆಂದ ಹುರುಳಿಗೆ ಚೂರು ಉಪ್ಪು ತುಪ್ಪ ಹಾಕಿಕೊಂಡು ತಿಂದರೆ ಅದೇ ಸಂಜೆಯ ತಿಂಡಿ. ದೇಹಕ್ಕೂ ಆರೋಗ್ಯ. ಆಷಾಢ,  ಹುರುಳಿ, ಬೇಸಾಯ, ಎತ್ತುಗಳು, ಜನಗಳು ಒಂದಕ್ಕೊಂದು ಬೆಸೆದುಕೊಂಡು ತಿಂಗಳುಗಳ ಕಾಲ ಶ್ರಮವೂ ಗೊತ್ತಾಗದಂತೆ ಸಂಭ್ರಮಿಸಿದಷ್ಟೂ ಭೂಮಿ ಹದವಾಗುತ್ತಿದ್ದಳು. ಒಡಲು ಸೇರಿದ ಬೆಳೆಯೂ ಸೊಗಸಾಗಿ ಬೆಳೆಯುತ್ತಿತ್ತು. ಸುರಿಯುವ ಮಳೆಯೂ ಕಾಡದ ಹಾಗೆ ಅದೊಂದು ಕಷ್ಟವೇ ಅನ್ನಿಸದ ಹಾಗೆ ಕೆಲಸವೆಲ್ಲಾ ಮುಗಿದು ನೆಮ್ಮದಿಯ ಉಸಿರು ಬಿಡುವ ಹೊತ್ತಿಗೆ  ತಿಂಗಳು ಮುಗಿದೇಹೋಗುತಿತ್ತು. ಮನದೊಡತಿ ಬರುವ ಸಮಯ ಸನ್ನಿಹಿತವಾಗಿರುತಿತ್ತು. ಪ್ರತೀ ಜೂನ್ ಅಥ್ವಾ ಜುಲೈ ಹೊತ್ತಿಗೆ ಇದೆ ದಿನಚರಿ ಅದೇ ಸಂಭ್ರಮ.

ಈ ಸಲ ಮಳೆಯೇ ಇಲ್ಲ, ಒಂದು ನಾಲ್ಕು ಹನಿ ಬಂದು ಹೋಯ್ತು ಅಷ್ಟೇ. ಅಗೆಡಿ ಹಾಕೊಕು ಆಗೋಲ್ಲ ಅಂತ ಊರಿನಿಂದ ಬಂದವ ಉಸುರುತ್ತಿದ್ದರೆ ಕೇಳುವವಳಿಗೆ ಉಸಿರುಗಟ್ಟುವ ಹಾಗಾಗುತ್ತಿತ್ತು. ಶಾಲೆ ಶುರುವಾಗುವಷ್ಟೇ ಕರಾರುವಕ್ಕಾಗಿ ಮಳೆಯೂ ಶುರುವಾಗುತ್ತಿದ್ದ ಕಾಲವೊಂದು ಬದಲಾಗಿದ್ದು ಹೇಗೆ ಎನ್ನುವ ಪ್ರಶ್ನೆ ಕಾಡಿತ್ತು. ಈಗ ತಿಂಗಳು ಗಟ್ಟಲೆ ಹೂಡಲು ಎತ್ತುಗಳು ಇಲ್ಲ, ಅವುಗಳನ್ನು ಕಟ್ಟುವ ಕೊಟ್ಟಿಗೆಗಳು ಸಣ್ಣದಾಗುತ್ತಾ ಬಂದು ಬಹಳ ವರ್ಷಗಳೇ ಆಗಿ ಹೋಗಿವೆ. ಟಿಲ್ಲರಿನ ಕರ್ಕಶ ಸದ್ದಿನ ಎದುರು ಮಳೆಯೂ ಗಾಳಿಯೂ ಸೋಲೊಪ್ಪಿಕೊಂಡು ಸುಮ್ಮನಾಗಿವೆ. ಎತ್ತುಗಳೇ ಇಲ್ಲದ ಮೇಲೆ ಭತ್ತ ಬೆಳೆಯುವುದಕ್ಕಿಂತ ಕೊಳ್ಳುವುದೇ ಸೋವಿ ಎಂದಾದ ಮೇಲೆ ನಾಟಿ ಮಾಡುವ ಶ್ರಮ ಕಡಿಮೆಯಾಗಿದೆ. ಅದ್ಯಾವುದೂ ಇಲ್ಲದ ಮೇಲೆ ಹುರುಳಿ ಮನೆಗೆ ಬರುವುದು ನಿಂತೇ ಹೋಗಿ ಮುರುವಿನ ಒಲೆ ಸದ್ದಿಲ್ಲದೇ ಮೂಲೆಗೆ ಸರಿದುಹೋಗಿದೆ. ಮಳೆಗಾಲದಲ್ಲಿ ಎಲ್ಲೆಲ್ಲೂ ಕಾಣುತ್ತಿದ್ದ ಗೊರಬಲು ಈಗ ಹುಡುಕಿದರೂ ಸಿಗುವುದು ಅಪರೂಪ.

ಜಗುಲಿಯಲ್ಲಿ ಕುಳಿತುಕೊಂಡು ಅಂಗಳದ ಕೆಳಗಿನ ಗದ್ದೆಯಲ್ಲಿ ಹೂಟಿ ಮಾಡುವುದನ್ನೇ ನೋಡುತ್ತಿದ್ದೆ. ಒಂದೆರೆಡು ಗಂಟೆಗಳಲ್ಲಿ ಎಕರೆಗಟ್ಟಲೆ ಗದ್ದೆಯನ್ನು ಹೂಟಿಮಾಡಿ ಹಾಕುವಾಗ, ಅಷ್ಟೇ ವೇಗವಾಗಿ ಬಂದ ಗಾಜನೂರಿನ ಟೀಂ ನೆಟ್ಟಿ ಮುಗಿಸುತಿತ್ತು. ವಾರಗಟ್ಟಲೆ ನಡೆಯುತ್ತಿದ್ದ ಕೆಲಸವೊಂದು ದಿನದಲ್ಲಿ ಮುಗಿದು ಹೋಗುತ್ತದೆ. ಗದ್ದೆಯಲ್ಲಿ ಕೂತು ಕಲಸಿ ತಿನ್ನುವುದು ಕಷ್ಟವಾದ್ದರಿಂದ ಚಿತ್ರಾನ್ನವೋ, ಪಲಾವೋ ಮಾಡಲು ತಿನ್ನಲು ಸುಲಭವಾಗುತ್ತದೆ. ವಹಿಸಿಕೊಂಡ ಕೆಲಸ ಬೇಗ ಮುಗಿದರೆ ಊರು ಬೇಗ ಸೇರಬಹುದು ಎನ್ನುವ ಆಲೋಚನೆಯಲ್ಲಿ ಮಾತು ಕಡಿಮೆಯಾಗಿ ಕೈ ವೇಗವಾಗಿದೆ. ಇಡೀ ಗದ್ದೆಯ ಕೊಗಿನಲ್ಲಿ ಕೇಳುತ್ತಿದ್ದ ಟಿಲ್ಲರ್ ಸದ್ದಿನ ನಡುವೆ ಕಳೆದು ಹೋಗಿದ್ದು ಎಷ್ಟೆಷ್ಟು ಎಂದು ಯೋಚಿಸುತ್ತಿರುವಾಗ ಪಕ್ಕನೆ ಅಪ್ಪಳಿಸಿದ ಗಾಳಿ ಯಾಕೆ ಹೊಟ್ಟೆಯೊಳಗೆ ನಡುಕು ಹುಟ್ಟಿಸಿತು ಎಂದು ಆಲೋಚಿಸಲೂ ಶಕ್ತಿಯಿಲ್ಲದೆ ಹಾಗೆಯೆ ಕುಳಿತಿದ್ದೆ..

ಆಷಾಢವೆಂದರೆ ಖಿನ್ನತೆಯೂ ಹೌದಾ...... 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...