hosadiganta.. 21.07.19

ಆಷಾಢ ಅಂದರೆ ಭೋರುಮಳೆ, ಭಾರಿ ಗಾಳಿ, ಸಣ್ಣ ಚಳಿ. ಮುನಿಸಿಕೊಂಡ ಮಗುವಿನಂತೆ ರಚ್ಚೆ ಹಿಡಿಯುವ ಮಳೆ, ಕೆಲವೊಮ್ಮೆ ಸಮಾಧಾನಗೊಂಡ ಮಡದಿಯ ಹಾಗೆ ಹಳುವಾದರೂ ಬಿಸಿಲು ನಸು ನಕ್ಕರೂ ನಂಬುವ ಹಾಗಿಲ್ಲ. ಅದರದ್ದು ಅಲ್ಪಾಯುಷ್ಯ. ಹಾಗಾಗಿ ಆಷಾಢವೆಂದರೆ ಚಂಚಲ, ಅನ್ನುವ ಆಲೋಚನೆ ಮೂಡುವ ಹೊತ್ತಿಗೆ ನಮ್ಮ ರಾಜಕಾರಣಿಗಳಷ್ಟ ಅನ್ನುವ ಪ್ರಶ್ನೆಯೊಂದು ಮೂಡಿ ಬಿಸಿಲುಕೋಲಿನಂತೆ ಕಂಡು ಮಾಯವಾಗುವಾಗಲೇ ಮನಸ್ಸು ಮತ್ತದೇ ಕಾರ್ಮೋಡ ಕವಿದ ಆಷಾಢದ ಆಕಾಶ.

ಪ್ರಸ್ತುತ ಕರ್ನಾಟಕದ ರಾಜಕೀಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ. ಇಲ್ಲೂ ಅದೇ ಕಣ್ಣುಮುಚ್ಚಾಲೆ, ಎರಡೂ ಪಕ್ಷಗಳನ್ನು ಕವಿದ ಕಾರ್ಮೋಡ, ಬಿರುಮಳೆ ಸುರಿಯಬಹುದಾ ಅನ್ನುವ ಆತಂಕ, ಕವಿದ ಮೋಡ ಕರಗಬಹುದಾ ಅನ್ನುವ ನಿರೀಕ್ಷೆಯಲ್ಲಿ ಅಧ್ಯಕ್ಷ ಪೀಠದತ್ತ ದೃಷ್ಟಿ ನೆಟ್ಟವರು, ಚರ್ಚೆ, ವಾದ, ವಿವಾದದ ಗಾಳಿಗೆ ಒಮ್ಮೆ ಅತ್ತ ಒಮ್ಮೆ ಇತ್ತ ಸುಳಿದಾಡುವ ಗೆಲುವಿನ ನಗು, ನಿಟ್ಟುಸಿರು ಬಿಡುವ ವೇಳೆಗೆ ಮತ್ತದೇ ಆತಂಕ ಏನಾಗಬಹುದು ಅನ್ನುವ ಗೊಂದಲ. ಒಟ್ಟಿನಲ್ಲಿ ಸದನದ ಒಳಗೂ ಹೊರಗೂ ಆಷಾಢ ಆವರಿಸಿಕೊಂಡಿದೆ.

ಪ್ರತಿಯೊಂದಕ್ಕೂ ಕಾರಣಗಳು ಇರುವ ಹಾಗೆ ಸಮರ್ಥನೆಗಳೂ ಇರುತ್ತವೆ. ಆ ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ, ಸಮಜಾಯಿಸಿ ಕೊಡುವ ಆತುರದಲ್ಲಿ ಜ್ಞಾನ, ಬುದ್ಧಿವಂತಿಕೆ, ಭಾಷೆಯ ಜೊತೆ ಜೊತೆಗೆ ವ್ಯಕ್ತಿಯ ವ್ಯಕ್ತಿತ್ವದ ಅನಾವರಣವೂ ಆಗುತ್ತಿರುತ್ತದೆ. ಆಡುವ ಮಾತು ನಮ್ಮದಾ, ಅದು ಅನುಭವಕ್ಕೆ ದಕ್ಕಿದ್ದಾ, ಪ್ರಾಮಾಣಿಕವಾಗಿದ್ದಾ ಎನ್ನುವುದನ್ನು ಕೇಳುವ ಕಿವಿಗಳ ಜೊತೆಗೆ ಕಣ್ಣುಗಳೂ ಅಳೆಯುತ್ತಿರುತ್ತವೆ. ಹೇಳಿ ಕೇಳಿ ಇದು ಮಾಹಿತಿ ಯುಗ. ಬೆರಳ ತುದಿಯಲ್ಲೇ ಭರಪೂರ ಮಾಹಿತಿ ಕ್ಷಣಾರ್ಧದಲ್ಲಿ ಲಭ್ಯವಿರುವಾಗ ಅದರ ಸತ್ಯಾಸತ್ಯತೆ, ಹೋಲಿಕೆ ಎಲ್ಲವೂ ಕ್ಷಣ ಮಾತ್ರದಲ್ಲೇ ನಡೆದು ಹೋಗಿ ನಿರ್ಧಾರ ರೂಪುಗೊಳ್ಳುತ್ತಾ ಹೋಗುತ್ತದೆ. ಮಾತು ಅಧಿಕಾರ ಉಳಿಸಿಕೊಳ್ಳುವ ಹಪಾಹಪಿಯದ್ದೋ, ಪ್ರಾಮಾಣಿಕವಾದದ್ದೋ ಗೊತ್ತಾಗಿಬಿಡುತ್ತದೆ. ಹಾಗಾಗಿಯೇ ಆ ಕ್ಷಣಕ್ಕೆ ಗೆದ್ದಂತೆ ಬೀಗಿದರೂ ವಾಸ್ತವ ಮತ್ತೇನೋ ಹೇಳುತ್ತದೆ. ನಂಬಿಸಿ, ಜೊತೆಗಿದ್ದೂ ಒಂದೇ ಎಂದು ಹೇಳಿ ಪಕ್ಕನೆ ಕೈ ಕೊಟ್ಟು ಉಳಿದವರನ್ನು ತಳ್ಳಿ ಆಳ ನೋಡಿದ ವ್ಯಕ್ತಿಯ  ವ್ಯಕ್ತಿತ್ವ ಜಾಹೀರಾದ ಹಾಗಾಗಿಬಿಡುತ್ತದೆ.

ಅಧಿಕಾರ ಅಷ್ಟು ಮುಖ್ಯವಾ.. ಸದ್ಯಕ್ಕೆ ಉತ್ತರ ಹೌದು. ಅನ್ನ, ನೀರು, ನಿದ್ದೆಯಷ್ಟೇ ಅಧಿಕಾರ ಕೂಡ ಮೂಲಭೂತ ಅವಶ್ಯಕತೆಯಂತೆ ಆಗಿಹೋಗಿದೆ. ಹಾಗಾಗಿಯೇ ಅದನ್ನು ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುವ ಮನಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ. ಹಣದಂತೆ ಅಧಿಕಾರ ಕೂಡ ನಮ್ಮನ್ನು ಆಳಲು ಶುರುಮಾಡಿದರೆ ತಪ್ಪಿಸಿಕೊಳ್ಳುವುದು ಬಲು ಕಷ್ಟ. ಆಷಾಢದ ಮಳೆಯ ಹಾಗೆ ಹೊಯ್ದರೆ ಹೊಯ್ಯುತ್ತಲೇ ಇರುವ ಹಾಗೆ ಅನುಭವಿಸಿದಷ್ಟು ಬೇಕು ಬೇಕು ಅನ್ನಿಸುತ್ತದಾ..  ಇಲ್ಲೂ ಒಂದು ಸಾಮ್ಯತೆ ಇದೆ. ಆಷಾಢದ ಮಳೆ ಅಂದರೆ ಅದು ಬೇಸಾಯದ ಆರಂಭ. ಅಧಿಕಾರವೂ ಅಭಿವೃದ್ಧಿಯ ಶ್ರೀಕಾರ ಆದರೆ ಎಷ್ಟು ಚೆಂದವಲ್ಲವಾ ಅನ್ನಿಸುತ್ತದೆ. ಆದರೆ ಈ ಅಧಿಕಾರ ಅನ್ನುವುದು ಒಮ್ಮೆ ಬಂದು ಇನ್ನೇನು ಮಳೆ ಶುರುವಾಯಿತು ಅಂದುಕೊಳ್ಳುವ ವೇಳೆಗೆ ಮತ್ತೆ ನಿಂತು ಭ್ರಮನಿರಸನ ಹುಟ್ಟಿಸಿಬಿಡುತ್ತದೆ.

ಕೆಲವೊಮ್ಮೆ ಹೀಗೆ ಸುರಿಯವ ಮಳೆಗೆ ಹೊಳೆ ಉಕ್ಕಿ ನೆರೆ ಬಂದು ಆಗಷ್ಟೇ ನಾಟಿ ಮಾಡಿದ ಹೊಲಗಳಿಗೆ ನುಗ್ಗಿ ರಾತ್ರಿ ಕಳೆದು ಬೆಳಗಾಗುವ ವೇಳೆಗೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿಬಿಡುತ್ತದೆ. ಆರಿಸಿ ಕಳುಹಿಸಿ ಏನೋ ಅಭಿವೃದ್ಧಿ ಮಾಡಬಹದು ಎಂದುಕೊಂಡ ಶಾಸಕರು ಇದ್ದಕ್ಕಿದ್ದ ಹಾಗೆ ರಾಜಿನಾಮೆ ಕೊಟ್ಟು ಮಾಯವಾಗುವ ಹಾಗೆ. ಹೋಗಲಿ ಇನ್ನೊಮ್ಮೆ ತಕ್ಷಣಕ್ಕೆ ನಾಟಿ ಮಾಡಲು ಸಾಧ್ಯವೇ? ಅದಕ್ಕೆ ಬೇಕಾದ ಸೌಲಭ್ಯ ಲಭ್ಯವಿದೆಯೇ ಎಂದು ಕೇಳಿಕೊಂಡರೆ ಎಷ್ಟೋ ಸಲ ಇರುವುದೇ ಇಲ್ಲ. ಆಗ ಬೇರೆಯವರ ಸಹಾಯಕ್ಕೆ ನಿರೀಕ್ಷಿಸುವ ಹಾಗಾಗುತ್ತದೆ. ಇನ್ಯಾರೋ ಬಂದು ಉದ್ಧರಿಸುತ್ತಾರೆನೋ ಎಂದು ನಾವು ನಂಬುವ ಆರಿಸುವ ಹಾಗೆ. ವರ್ಷವಿಡೀ ಶೇಖರಿಸಿಟ್ಟು, ಕಾಪಿಟ್ಟು ತುಂಬು ಬೆಳೆ ಬೆಳೆಯುವ ನಿರೀಕ್ಷೆಯಲ್ಲಿ ಹಾಕಿದ ಗೊಬ್ಬರ ಕೊಚ್ಚಿಕೊಂಡು ಇನ್ಯಾರದ್ದೋ ಹೊಲದಲ್ಲಿ ಹೋಗಿ ಶೇಖರಣೆ ಆದರೆ ಸೈರಿಸಿಕೊಳ್ಳುವುದು ಸುಲಭವಾ...

ಆದರೂ ಆಷಾಢದ ಬಗ್ಗೆ ನಂಬಿಕೆ ಕಳೆದುಕೊಳ್ಳುವ ಹಾಗಿಲ್ಲ. ಮಳೆ ಇಲ್ಲದೆ ಬದುಕಿಲ್ಲ. ಮಳೆಗೆ ನಾವು ಅನಿವಾರ್ಯ ಅಲ್ಲದೆ ಹೋದರೂ ನಮಗೆ ಮಳೆ ಅನಿವಾರ್ಯ. ಹಾಗಾಗಿ ಸುರಿದರೂ, ಕೊಚ್ಚಿಕೊಂಡು ಹೋದರೂ, ಕಣ್ಣು ಮುಚ್ಚಾಲೆ ಆಡಿದರೂ, ಆಸೆ ಹುಟ್ಟಿಸಿ ಮಾಯವಾದರೂ ಕುಳಿತು ಬೈಯುವುದರ ವಿನಃ, ಬೇಡಿಕೊಳ್ಳುವುದರ ಹೊರತು ಬೇರೆ ದಾರಿಯಿಲ್ಲ. ಒಮ್ಮೆ ಆರಿಸಿ ಕಳುಹಿಸಿದ ಶಾಸಕರು ಏನೇ ದೊಂಬರಾಟ ಮಾಡಿದರೂ, ಅಧಿಕಾರ ದುರುಪಯೋಗ ಮಾಡಿಕೊಂಡರೂ ಕೇಳುವ ಹಕ್ಕಿಲ್ಲ. ಸುಮ್ಮನೆ ದಿಟ್ಟಿಸಿನೋಡಿ ನಮ್ಮ ಕರ್ಮವನ್ನು ಹಳಿದುಕೊಳ್ಳುವುದು ಒಂದೇ ದಾರಿ. ಬಡವನ ಸಿಟ್ಟು ದವಡೆಗೆ ಮೂಲ ಅನ್ನುವ ಮಾತು ಅಕ್ಷರಶಃ ಅರ್ಥವಾಗುವುದು ಇಂಥಹ ಕ್ಷಣಗಳಲ್ಲಿಯೇ..

ಮೊದಲೆಲ್ಲಾ ಹದವಾಗಿ ಸುರಿಯವ ಮಳೆ ನೋಡಿ ಬಿತ್ತನೆ ಮಾಡಿ ಇನ್ನೇನು ನಾಟಿ ಮಾಡಬೇಕು ಅನ್ನುವ ಸಮಯದಲ್ಲಿ "ಕೈ" ಕೊಡುವುದು ಉಂಟು. ಮಳೆ ಬಾರದೆ ಹೋದಾಗ ನಾವೇ ಬಿತ್ತಿದ ಬೀಜ, ನೆಟ್ಟ ಸಸಿ ಬಾಡುವುದು ಉಂಟು. ಹಾಗಾಗಿ ಆಷಾಢವನ್ನು ಗಟ್ಟಿಯಾಗಿ ನಂಬುವ ಹಾಗೂ ಇಲ್ಲ ನಂಬದಿರುವ ಹಾಗೂ ಇಲ್ಲ. ನಮ್ಮ ಶಾಸಕರ ಹಾಗೆ. ಯಾರು ಯಾವ ಸಮಯದಲ್ಲಿ ಯಾವ ಪಕ್ಷದಲ್ಲಿ ಇರುತ್ತಾರೋ, ಯಾರನ್ನು ದ್ವೇಷಿಸುತ್ತಾರೋ, ಯಾರನ್ನು ನಿರ್ನಾಮ ಮಾಡಲು ಯೋಚಿಸುತ್ತಾರೋ  ಅವರ ಜೊತೆಯೇ ಇರುವ ಅವಕಾಶಗಳೂ ಹಲವು.  ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ... ಆಷಾಢದ ಬಿಸಿಲು ನಿಜವಲ್ಲ. ಹಾಗಾಗಿ ಕೊಡೆಯೊಂದು ಸದಾ ಜೊತೆಗಿರಬೇಕು. ಇಲ್ಲಿ ಎಚ್ಚರಿಕೆಯ ದೃಷ್ಟಿ ಇರಲೇಬೇಕು.

ಇಂಥ ಮಳೆಯ ಜೊತೆಗೆ ಬರುವ ಗಾಳಿಗೂ ಒಮ್ಮೊಮ್ಮೆ ಸಹವಾಸ ದೋಷದಿಂದ ಪ್ರಬಲವಾಗಿ ಬೀಸುವುದು ಇದೆ. ಅಧಿಕಾರದ ಜೊತೆ ಸೇರಿದ ಭ್ರಷ್ಟಾಚಾರದ ಹಾಗೆ. ಹಾಗೆ ಬೀಸುವ ಗಾಳಿ  ಮನೆಯ ಹಂಚು, ಶೀಟು, ತಡಿಕೆಗಳನ್ನೂ ಹಾರಿಸಿಕೊಂಡು ಹೋಗಿಬಿಡುತ್ತದೆ. ನಂಬಿಕೆ, ಹಾಗೂ ಹಣವನ್ನು ಇವರು ದೋಚಿಕೊಂಡು ಹೋದ ಹಾಗೆ. ಹಾಗಾಗಿ ಆಷಾಢವೆಂದರೆ ಆತಂಕ... ಆಷಾಢವೆಂದರೆ ಖಿನ್ನತೆ. ಮನೆಯೊಡತಿಯನ್ನು ಅಲ್ಲಿ ತವರಿಗೆ ಕಳುಹಿಸುವ ಹಾಗೆ ಇಲ್ಲಿ ಶಾಸಕರನ್ನ ರೆಸಾರ್ಟ್ ಗೆ ಕಳುಹಿಸುವ ಸನ್ನಿವೇಶವೂ ಇದೆ. ಅಲ್ಲಿ ಕೆಲಸ ಸುಗಮವಾಗಿ ನಡೆಯಲು ಆದರೆ ಇಲ್ಲಿ ಅಧಿಕಾರದ ಹಸ್ತಾಂತರಕ್ಕಾಗಿ.

ಅಬ್ಬಾ ಚೂರು ಬಿಸಿಲು ಬಂತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಪಕ್ಕನೆ ಮುತ್ತುವ ಕಪ್ಪು ಕಾರ್ಮೋಡ, ಆವರಿಸುವ ಮಬ್ಬು ಕತ್ತಲು, ತಟ್ಟನೆ ಸುರಿಯವ ಮಳೆ ಹೀಗೆ ಆಷಾಢವನ್ನು ಹೀಗೆ ಎಂದು ನಂಬುವ ಹಾಗಿಲ್ಲ. ಈಗೊಂದು ಮಾತು, ಆಗೊಂದು ಮಾತು ಆಡುವ ಶಾಸಕರನ್ನೂ. ಆದರೆ ಆಷಾಢಕ್ಕೆ ಭಂಡತನವಿಲ್ಲ, ಅದು ಲಯತಪ್ಪಿದರೂ ಹಾದಿ ತಪ್ಪುವುದಿಲ್ಲ, ಅದು ಯಾರ ಮೇಲೋ ಆರೋಪ ಹೊರಿಸಿ ತಾನು ಸಾಚಾ ಎನ್ನುವುದಿಲ್ಲ, ವಿಳಂಬವಾದರೂ ಮಾತು ತಪ್ಪುವುದಿಲ್ಲ ಹಾಗಾಗಿ ಆಷಾಢಕ್ಕೂ ರಾಜಕಾರಣಕ್ಕೂ ಹೋಲಿಕೆ ಸಲ್ಲ ಎಂದು ಹೊರಗೆ ಬಂದರೆ ಬಿಸಿಲು ಧಗಧಗಿಸುತ್ತಿತ್ತು. ಈ ಸಲ ಮಳೆಯೇ ಇಲ್ಲ ಏನು ಮಾಡೋದು ಗೊತ್ತಾಗುತ್ತಿಲ್ಲ ಎನ್ನುವ ಫೋನ್ ಊರಿನಿಂದ ಬಂದು ಇನ್ನಷ್ಟು ಧಗೆ ಹೆಚ್ಚಿಸಿತು..  ಯೋಚನೆಯಿಂದ ತಪ್ಪಿಸಿಕೊಳ್ಳಲು ಬಂದು  ಟಿ.ವಿ ಆನ್ ಮಾಡಿದರೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ನಾವೆಲ್ಲಾ ಒಂದಾಗಿರೋಣ ಅಂತ ಹೇಳಿ, ಯಾವುದೇ ಕಾರಣಕ್ಕೂ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ನಾನು ಆಚಲವಾಗಿದ್ದೇನೆ ಎಂದು ಹೇಳಿ  ಈಗ ಅವರೇ ರಾಜಿನಾಮೆ ವಾಪಸ್ ತಗೊಂಡಿದಾರೆ. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಹಳಹಳಿಸುವುದು ಕೇಳಿಸಿತು.

ಶಾಸಕ ಸ್ಥಾನ ಉಳಿಸಿಕೊಳ್ಳುವ ಭರದಲ್ಲಿ ನಂಬಿಕೆ ಕಳೆದುಕೊಂಡಿದ್ದು ಗೊತ್ತಾಗಲಿಲ್ಲವೋ ಅಥವಾ ನಂಬಿಕೆ ಅನ್ನುವುದು ಈಗ ಆಷಾಢದ ನಿಯಮದ ಹಾಗೆ ಅಪ್ರಸ್ತುತವಾಗಿದೆಯೋ... ಯಾರನ್ನು ಕೇಳುವುದು... ಹೇಳುವವರಾದರೂ ಯಾರು....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...