ಅಜ್ಞಾತನೊಬ್ಬನ ಆತ್ಮಚರಿತ್ರೆ

"ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ."

ಅಧಿಕಾರ ಎನ್ನುವುದು ಸರ್ಪದ ನೆರಳಲ್ಲಿ ಇದ್ದಂತೆ. ಯಾವ ಕ್ಷಣದಲ್ಲಿ ಎಲ್ಲಿಂದ ಹೇಗೆ ಅಪಾಯ ಬಂದೆರೆಗಬಹುದು ಎಂದು ಹೇಳುವುದು ಕಷ್ಟವೇ. ಅದರಲ್ಲೂ ಯಾರಿಂದ ಎನ್ನುವುದಂತೂ ಬಹಳ ಕಷ್ಟ. ಅಧಿಕಾರ ಎನ್ನುವುದು ಹಾವು ಏಣಿ ಆಟವಿದ್ದಂತೆ. ಯಾರು ಇಳಿಯುತ್ತಾರೋ, ಮತ್ಯಾರು ಮೇಲಕ್ಕೆ ಹತ್ತುತ್ತಾರೋ ಹೇಗೆ ಹೇಳುವುದು. ಅಸಲಿಗೆ ಹೈದರಾಲಿ ಅಧಿಕಾರಕ್ಕೆ ಬಂದದ್ದು ನಂಬಿಕೆ  (?) ಎನ್ನುವುದು ಉಪಯೋಗಿಸಿ ಕೊಂಡೆ ಅಲ್ಲವೇ.  ಈಗ ಬ್ರಿಟಿಷರು ಅಂಥಹ ನಂಬಿಕಸ್ತರನ್ನು ಉಪಯೋಗಿಸಿಕೊಂಡೆ ಯುದ್ಧಕ್ಕೆ ಅಣಿಯಾಗುತ್ತಿದ್ದಾರೆ. ಎದುರಿಗಿದ್ದ ಸಿಪಾಯಿ ತನ್ನನ್ನು ನಂಬಿ ಸುಲ್ತಾನ್ ತನ್ನ ಮನಸ್ಸಿನ ಮಾತು ಹೇಳುತ್ತಿದ್ದಾನೆ ಎಂದು ನಂಬಿದ್ದಾನೆ. ಯಾರು ಯಾರನ್ನು ನಂಬಿದ್ದಾರೆ, ಯಾರು ಯಾರ ನಂಬಿಕೆಯನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆ ಅನ್ನುವುದೇ ಗೊಂದಲ. ನಂಬಬಾರದ.... ನಂಬಿದಂತೆ ನಟಿಸುತ್ತಲೇ ಅಪನಂಬಿಕೆಯ ಚಾದರ ಹೊದ್ದಿರಬೇಕಾ.. ತಪ್ಪು ನಂಬುವವನದ್ದಾ ಅಥವಾ ಆ ನಮ್ಬಿಕೆಯೆಂಬ ಏಣಿಯನ್ನು ಬಳಸಿಕೊಂಡು ಮೇಲೆರಿದವನದ್ದಾ... ಇಂತಹದೊಂದು ಗೊಂದಲ ಕಾದಿದ್ದು ಅಜ್ಞಾತನೊಬ್ಬನ ಆತ್ಮಚರಿತ್ರೆ ಓದುವಾಗ.

ಟಿಪ್ಪು ಸುಲ್ತಾನ್ ಆಸ್ಥಾನದ ದಳವಾಯಿಯೊಬ್ಬನ ಆತ್ಮಕತೆಯಂತಿರುವ ಇದು ಇತಿಹಾಸದ ಒಳಸುಳಿಗಳನ್ನು ಪರಿಚಯಿಸುತ್ತಲೇ ಮನಸ್ಸಿನ ಒಳಸುಳಿಗಳ ಅನಾವರಣ ಮಾಡುತ್ತಾ ಹೋಗುತ್ತದೆ.  ಮನಸ್ಸಿನ ವ್ಯಾಪಾರ, ಪರಿಸ್ಥಿತಿಯನ್ನು ಬಳಸಿಕೊಂಡು ಬೆಳೆಯುವ ಹುನ್ನಾರ, ಅಧಿಕಾರದ ಮದ, ಆ ಮದದಲ್ಲಿ ತೆಗೆದುಕೊಳ್ಳುವ ನಿರ್ಧಾರ ಎಲ್ಲವೂ ಒಂದಕ್ಕೊಂದು ಹೇಗೆ ಪೂರಕ ಎನ್ನುವುದು ತಿಳಿಸುತ್ತಲೇ ಮದ ಎನ್ನುವುದು ಹೇಗೆ ಬುದ್ಧಿಗೆ ಪೊರೆ ಬರುವ ಹಾಗೆ ಮಾಡುತ್ತದೆ ಎನ್ನುವುದನ್ನೂ ತಿಳಿಸುತ್ತದೆ. ಅರಮನೆ ಮೊದಮೊದಲು ಸೆಳೆದು ಆಮೇಲೆ ತನ್ನೊಳಗೆ ಎಳೆದುಕೊಂಡು ಚಕ್ರವ್ಯೂಹವಾಗುವ ಬಗೆ, ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವವರಷ್ಟೇ ಅದರೊಳಗೆ ಬರಲು ಬಯಸುವ ಮಂದಿ, ಹಾಗೆ ಬಂದವರು ಹಾವು ಏಣಿಯಾಟ ಆಡುವ ಪರಿ, ಸಾಮಾನ್ಯ ಜನರ ಬದುಕಿನ ರೀತಿ ಎಲ್ಲವೂ ಸರಳವಾಗಿ ಮನೋಜ್ಞವಾಗಿ ಚಿತ್ರಿತವಾಗಿದೆ.

ಪ್ರತಿಯೊಂದು ಘಟನೆಗೂ ಹಲವಾರು ಆಯಾಮಗಳಿರುತ್ತವೆ. ಯಾವುದೊ ಒಂದು ಕೋನದಿಂದ ದಿಟ್ಟಿಸಿದರೆ ಅದು ಸರಿಯಾಗಿ ಅರ್ಥವಾಗುವುದು ಕಷ್ಟ. ಸರಿಯಾಗಿ ಅರ್ಥವಾಗದೆ ಅಭಿಪ್ರಾಯ ರೂಪಿಸಿಕೊಳ್ಳುವುದು ಇನ್ನೂ ಕಷ್ಟ. ದಳವಾಯಿ ಬರೆದುಕೊಳ್ಳುವ ಕತೆಗೂ, ಊರವರು ನಂತರ ಅದನ್ನು ರೂಪಿಸಿದ ರೀತಿಗೂ, ಅವನದೇ ಕಾಲಘಟ್ಟದ ಸಹಚರನ ವಂಶಸ್ಥರು ಹೇಳುವ ಮಾತಿಗೂ ಇರುವ ಭಿನ್ನತೆ, ಮನಸ್ಥಿತಿ ಬದಲಾದಂತೆ ಕತೆ ಬದಲಾಗುತ್ತಾ ಹೋದ ರೀತಿ ನೋಡಿದಾಗ ಯಾವುದು ನಿಜವಾದದ್ದು ಅನ್ನುವ ಗೊಂದಲ ಕಾಡಿದರೂ ಕತೆಯ ಚೌಕಟ್ಟು ಸಿಗುತ್ತದೆ. ಹೇಗಿರಬೇಕಿತ್ತು, ಹೇಗಿರಬಾರದು ಎನ್ನುವ ಆಲೋಚನೆಯಲ್ಲಿ ಬುದ್ಧಿಗೆ ಸಾಣೆ ಹಿಡಿಯುತ್ತದೆ, ಆಲೋಚನೆಯ ದಿಕ್ಕು ಬದಲಾಗುತ್ತದೆ. ಬದುಕು ವಿಭಿನ್ನವಾಗುತ್ತದೆ. ಇತಿಹಾಸ ಮಾಡುವುದು, ಮಾಡಬೇಕಾಗಿದ್ದು ಇದನ್ನೇ..

ಕಾಲಸರಿದಂತೆ ಘಟನೆಗಳು ಕಲಸುಮೇಲೋಗರವಾಗಿ , ಒಂದಕ್ಕೊಂದು ಸೇರಿಹೋಗಿ, ರೂಪಾಂತರಗೊಳ್ಳುವ ಪ್ರಕ್ರಿಯೆಯೂ ಜರುಗುತ್ತದೆ. ಹುಲಿಯನ್ನು ಹಿಡಿದು ತರಿಸಿ ಕಾವಲಿಗೆ ಇಟ್ಟುಕೊಂಡು ಪ್ರಾಂತ್ಯದ ಹುಲಿ ಎಂದು ಕರೆಸಿಕೊಳ್ಳುವುದರಿಂದ ಹಿಡಿದು 
ದಳವಾಯಿಯೊಬ್ಬ ದೇಸಪ್ಪನಾಗಿ ಬದಲಾಗುವವರೆಗೂ ಘಟನೆಗಳು, ಬದುಕು ರೂಪಾಂತರವಾಗುತ್ತಾ ಹೋಗುತ್ತದೆ.  ಈ ಚಲನೆ, ಜೀವಂತಿಕೆ ಇರುವುದಕ್ಕಾಗಿಯೇ ಏನೋ ಇತಿಹಾಸ ಮರುಕಳಿಸುತ್ತದೆ ಅನ್ನುವುದು ಮತ್ತು ನಾವದರ ನಿದರ್ಶನ ಕಾಣುವುದು. ಅದರಲ್ಲೂ "ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ." ಎನ್ನುವುದಂತೂ ಈ ಕ್ಷಣಕ್ಕೂ ಸತ್ಯವಾಗಿಯೇ ಉಳಿದಿದೆ. ಪ್ರತಿಯೊಬ್ಬರೂ ಅದಕ್ಕೆ ಸಾಕ್ಷಿಯಾಗುತ್ತಾ ಹೋಗುತ್ತಿದ್ದೇವೆ.

ಸಾಹಿತ್ಯದ ಶಕ್ತಿಯೇ ಅದು ಯಾರದ್ದೋ ಕತೆ ಓದುತ್ತಾ ಓದುತ್ತಾ ನಾವೂ ಅದರ ಒಂದು ಭಾಗವಾಗಿ, ನಮ್ಮದೇ ಮಾತಾಗಿ, ಆಲೋಚನೆಯ ತುಣುಕಾಗಿ ಒಳಗೆ ಇಳಿದು ಬದುಕಿನ ಭಾಗವಾಗಿ ಹೋಗುತ್ತದೆ. ಜೀರ್ಣವಾಗುತ್ತದೆ. ಮುಂದೆಂದೋ ದಾರಿ ದೀಪವಾಗುತ್ತದೆ. ನಮ್ಮೊಳಗಿನ ಅಜ್ಞಾತ ಭಾವದ ಪರಿಚಯವಾಗುತ್ತದೆ. 

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...