ಧರ್ಮಶ್ರೀ....

ಪುಟ್ಟಿ ಯಾವತ್ತೂ ಇದ್ದಲ್ಲೇ ಎಲ್ಲವನ್ನೂ ಹುಡುಕೋಕೆ ಹೋಗಬಾರದು. ಒಂದು ಹೆಜ್ಜೆ ಹೊರಗೆ ಬಾ ಕಣ್ಣು ತೆರೆದು ನೋಡು, ಮನಸ್ಸು ಸ್ವಲ್ಪ ವಿಶಾಲವಾಗಿಸಿಕೋ. ಪ್ರೀತಿ ಅನ್ನೋದು ಬೆಳಕು ಚೆಲ್ಲಿದಂತೆ ಹರಡಿರೋದು ಕಾಣಿಸುತ್ತೆ. ಯಾಕೆ ನಮ್ಮನ್ನು ನಾವೇ ಒಂದು ಚೌಕಟ್ಟಿನೊಳಗೆ  ಸೀಮಿತ ಮಾಡ್ಕೊಬೇಕು ಹೇಳು? ಯಾಕೆ ತನ್ನವರು ಅಂದುಕೊಂಡವರು ಮಾತ್ರ ಪ್ರೀತಿ ಕೊಡಬೇಕು ಅಂತ ಬಯಸಬೇಕು. ಪ್ರೀತಿ ಎಲ್ಲೆಯನ್ನು ಮೀರಿದ್ದು ಅಂತ ಓದೋ ನೀವುಗಳೇ ಅಲ್ವ ಕೊಟೇಶನ್ ಹೇಳೋದು ಯಾಕೆ ಅದನ್ನು ಅರ್ಥಮಾಡ್ಕೊಂಡು ಅಳವಡಿಸಿಕೊಳ್ಳಬಾರದು. ಅಪ್ಪನ ನೆನಸಿಕೊಂಡು ಅಳುತ್ತಿದ್ದವಳನ್ನು ತಲೆ ಸವರಿ ಎದುರಿಗೆ ಕೂರಿಸಿಕೊಂಡು ಮೆಲುವಾಗಿ ನ.ಕೃಷ್ಣಪ್ಪ ತಾತ ಮಾತನಾಡುತ್ತಿದ್ದರೆ ಅಳು ಯಾವಾಗ ನಿಂತಿತು ಅನ್ನುವ ಅರಿವೂ ಇಲ್ಲದೆ ಕಣ್ಣು ಕಿವಿ ಇಷ್ಟಗಲ ತೆರೆದು ಅವರನ್ನೇ ನೋಡುತ್ತಿದ್ದೆ. ಅದು ಅಸಾಧ್ಯ ಏನೋ ಸಮಾಧಾನಕ್ಕೆ ಹೇಳುತ್ತಿದ್ದಾರೆ ಅಂತ ಕಿಂಚಿತ್ತೂ ಅನ್ನಿಸದೆ ಮನಸ್ಸಿನ ಭಾರ ಇಳಿದು ಹೊಸ ದಾರಿ ತುಸು ತುಸುವೇ ತೆರೆದುಕೊಳ್ಳುತ್ತಿತ್ತು. ಮಾತಿನ ಹಿಂದಿನ ಅನುಭವ, ಪ್ರಾಮಾಣಿಕತೆ ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟಿ ಅನ್ನುವ ಪದದಲ್ಲಿದ್ದ ತುಂಬು ಪ್ರೀತಿ ಬದುಕಿಗೆ ಚುಕ್ಕು ತಟ್ಟಿ ಮಲಗಿಸುವ ಅಮ್ಮನ ಹಾಗಿತ್ತು. ಅಂತ ಕೃಷ್ಣಪ್ಪ ತಾತ ಒಂದು ಪಾತ್ರವಾಗಿದ್ದಾರೆ ಎಂದ ಕಾದಂಬರಿ ಓದದೆ ಇರುವುದಾದರೂ ಹೇಗೆ?
ಧರ್ಮಶ್ರೀ ಓದಲು ಶುರುಮಾಡಲು ಅದೇ ಪ್ರಬಲ ಕಾರಣ.

ಅಲ್ಲಿ ಸತ್ಯ ಅಮ್ಮನನ್ನು ಕಳೆದುಕೊಂಡಿದ್ದ. ಅಪ್ಪ ಎಂದೋ ದೂರ ಸರಿದಾಗಿತ್ತು. ಕಳೆದುಕೊಳ್ಳಲು ಮತ್ತೇನಿಲ್ಲ, ನೊಂದುಕೊಳ್ಳಲು ಯಾರಿಲ್ಲ ಎಂದಾದಾಗ ಹೊಸ ಧೈರ್ಯ ಒಳಗಿನಿಂದ ಹುಟ್ಟುತ್ತದೆ. ಬದುಕುವುದು ಅನಿವಾರ್ಯವೆಂದು ಗೊತ್ತಾದಾಗ ಕಾಲು ಮುಂದಕ್ಕೆ ಹೆಜ್ಜೆ ಹಾಕುತ್ತದೆ. ಮುಂದೇನು ಎನ್ನುವುದು ನಿಶ್ಚಿತವಾಗಿಲ್ಲದಿದ್ದರೂ ದಾರಿ ಭಯ ಹುಟ್ಟಿಸುವುದಿಲ್ಲ. ಕಳೆದುಕೊಳ್ಳುವ ಭಾವವೇ ಭಯದ ಮೂಲವೇನೋ. ಹಾಗೆ ಹೊರಟ ಪ್ರಯಾಣ ಊರೂರು ತಿರುಗಿ ಮೈಸೂರು ಬಂದು ಸೇರುತ್ತದೆ. ಅಲ್ಲಿ ಜೊತೆಯಾಗುವುದು ಜೀವದಂತ ಗೆಳೆಯ ಶಂಕರ. ಅಲ್ಲಿ ಕೈ ಹಿಡಿದವನು ಮತ್ತೆ ಬಿದ್ದೆ ಎಂಬ ಭಾವ ಹುಟ್ಟಿದಾಗಲು ಬಂದು ಕೈ ನೀಡುತ್ತಾನೆ. ಒಂದು ಗೆಳೆತನಕ್ಕೆ ಇದಕ್ಕಿಂತ ಉದಾಹರಣೆ ಬೇಕಾ ಅನ್ನಿಸುತ್ತಲೇ ಶಂಕರ ಬದುಕಿದ ರೀತಿ ಯಾವ ತಪಸ್ವಿಗೂ ಕಡಿಮೆಯಿಲ್ಲ ಅನ್ನಿಸುವುದು ಸತ್ಯ. ಹಾಗಾಗಿಯೇ ಅವನ ಮಾತಿನಲ್ಲಿ ಸತ್ಯ ಗೋಚರಿಸಿದ ಹಾಗಾಗುತ್ತದೆ. ಮುಗಿದ ದಾರಿ ಮತ್ತೆ ತೆರೆದುಕೊಳ್ಳುತ್ತದೆ.

ಇದು ಸತ್ಯನ ಆಂತರಿಕ ಬಾಹ್ಯ ಹೋರಾಟದ ಕತೆಯಾದರೂ ಕೇವಲ ಅವನ ಕತೆ ಮಾತ್ರವಲ್ಲ. ಮತಾಂತರದ ಕತೆ, ಅದರ ಹಿಂದಿನ ಆಮಿಷಗಳ, ಸಮಾಜದ ರೀತಿ ನೀತಿಗಳ ಕತೆ. ಪ್ರತಿಯೊಬ್ಬರಿಗೂ ಸಮಸ್ಯೆ ಕಷ್ಟ ತಪ್ಪಿದ್ದಲ್ಲ. ದಾರಿಯೇ ಇಲ್ಲವೇನೋ ಅನ್ನಿಸುವುದು ಸುಳ್ಳಲ್ಲ. ಇದರ ಹೊರತು ಬೇರಾವ ಮಾರ್ಗ ನನ್ನ ಪಾಲಿಗಿದೆ ಎನ್ನುವ ಅಸಹಾಯಕತೆ ಕಾಡದೆ ಹೋಗುವುದಿಲ್ಲ. ಆದರೆ ಹುಡುಕುವ ಛಲ, ಸಂಕಲ್ಪ ಗಟ್ಟಿಯಾಗಿದ್ದಾಗ ಮಾತ್ರ ಯಾವ ಸಮಸ್ಯೆಯೂ ಬಹುಕಾಲ ನಿಲ್ಲುವುದಿಲ್ಲ ಅನ್ನುವುದು ಪರಮ ಸತ್ಯ. ಸತ್ಯನ ಪಯಣವೂ ಇದೆಲ್ಲವನ್ನೂ ಎದುರಿಸಿ, ಮುಗ್ಗುರಿಸಿ ಮತ್ತೆ ದಡಸೇರುತ್ತದೆ. ಪುರಾಣಗಳಲ್ಲಿ ಶಂಕರ ಲಯಕಾರಕ ಅನ್ನುತ್ತಾರೆ. ಇಲ್ಲಿ ಸತ್ಯನ ಭಾವಾವೇಶಗಳ ಲಯಕಾರಕ ಗೆಳೆಯ ಶಂಕರ.

ಸೇವೆ ಬಡವನಿಂದಲೇ ಮಾಡಲು ಸಾಧ್ಯ. ಅದರಲ್ಲೂ ರಾಷ್ಟ್ರ ಸೇವೆ ಎಂದು ಬಂದಾಗ ಅವನ ಹೊರತು ಬೇರಾರಿಂದ ತಾನೇ ನಿರೀಕ್ಷಿಸಲು ಸಾಧ್ಯ. ಹಾಗಾದರೆ ಬಡವ ಎಂದರೆ ಆರ್ಥಿಕವಾಗಿ ಬಡವನಾ ಖಂಡಿತ ಅಲ್ಲ. ಎಲ್ಲವನ್ನೂ ಬಿಟ್ಟುಕೊಡುವ ಮುಕ್ತ ಭಾವದಿಂದ ಕಳೆದುಕೊಳ್ಳಲು ಸಿದ್ಧನಾಗಿರುವವನೆ ಬಡವ. ಹಾಗಾದಾಗ ಮಾತ್ರ ಆ ಬದುಕು ಸಮಿಧೆಯಾಗುತ್ತದೆ. ಎಲ್ಲರ ಆದರ್ಶಗಳಿಗೂ ಸರಿಯಾಗಿಯೇ ಇರುವಂತಹ ಯಾವ ಸಂಘಟನೆಯೂ ಇಲ್ಲ, ನಮ್ಮ ಬಹಳಷ್ಟು ಆಶಯಗಳು ಅದಕ್ಕೆ ಹೊಂದಿಕೆಯಾಗಬಹುದು ಅಷ್ಟೇ. ನಾವು ಅದನ್ನು ಬದಲಾಯಿಸುತ್ತಾ, ಬದಲಾಗುತ್ತಾ ಹೋಗುವುದೇ ಒಳ್ಳೆಯದು ಎನ್ನುವ ಶಂಕರನ ಮಾತು ಬರೀ ಸಂಘಟನೆಗೆ ಮಾತ್ರವಲ್ಲ ಬದುಕಿನ ಸಂಬಂಧಗಳಿಗೂ ದಾರಿದೀಪ ಅನ್ನಿಸುತ್ತದೆ. ಪ್ರತಿ ಸಂಘಟನೆ, ಅಥವಾ ವ್ಯಕ್ತಿ, ಅಥವಾ ಸಿದ್ಧಾಂತ ನಮ್ಮ ಧ್ಯೇಯಕ್ಕೆ ಪೂರಕವಾಗಿರಬೇಕೆ ಹೊರತು ಅದೇ ಧ್ಯೇಯವಾಗಬಾರದು. ಹಾಗಾದಾಗ ಮಾತ್ರ ಪರಸ್ಪರ ಪೂರಕವಾಗಿ ಬೆಳೆಯಬಹುದು. ಇಲ್ಲಿ ಮತಿಯ ಪ್ರಭಾವದಿಂದ ಹೊರತಾದ ಯಾವ ರಾಜಕೀಯ ಪಕ್ಷಗಳೂ ಇಲ್ಲ ಹಾಗಿರುವಾಗ ಹಿಂದೂಗಳು ಅದನ್ನು ಬಳಸಿಕೊಂಡರೆ ತಪ್ಪೇನು ಎನ್ನುವ ಪ್ರಶ್ನೆಸದ್ಯಕ್ಕೆ ಎಷ್ಟು ಪ್ರಸ್ತುತ.. ಮುಂದೆಯೂ ಇಷ್ಟೇ ಪ್ರಸ್ತುತವಾಗಿಯೇ ಇರುತ್ತದೇನೋ.

ಶಂಕರನ ಪ್ರಭಾವಕ್ಕೆ ಸಿಲುಕುವ ಸತ್ಯ, ಯಾವುದನ್ನೂ ಯೋಚಿಸದೆ ಪ್ರಶ್ನಿಸದೆ ಒಪ್ಪಿಕೊಳ್ಳ ಬೇಡ ಎನ್ನುವ ಶಂಕರ. ಕೊನೆಗೆ ಹಿಂದೂ ಧರ್ಮಕ್ಕೆ ಮರಳುವ ಪ್ರಯತ್ನದಲ್ಲಿದ್ದಾಗಲೂ ಗಡಿಬಿಡಿ ಮಾಡದೆ ಯೋಚಿಸಿ ನಿರ್ಧಾರಕ್ಕೆ ಬಾ ಎನ್ನುವ ಅವರ ಹೃದಯ ವೈಶಾಲ್ಯ ದಂಗು ಬಡಿಸುತ್ತದೆ. ಹಿಂದೂ ಧರ್ಮವಾಗದೆ ಜೀವನ ಪದ್ಧತಿ ಆಗುವುದು ಹೀಗೆ ಏನೋ?  ಪ್ರತಿಯೊಂದು ವರ್ತನೆಗೂ ನಮ್ಮ ತರ್ಕಕ್ಕೆ ನಿಲುಕದ ಎಷ್ಟೋ ಕಾರಣಗಳು ಇರುತ್ತವೆ.ವರ್ತನೆಯಲ್ಲಿ ಗ್ರಹಿಸಲಾಗದ ಸೂಕ್ಷ್ಮವನ್ನು ಮನಸ್ಸು ಗ್ರಹಿಸುತ್ತದೆ. ಬಾಲ್ಯದ ಗೆಳತಿಯ ನಾದಿನಿಯ ಬಗ್ಗೆ ಅಸಹನೆ ಹೊಂದಿದ್ದರೂ ಜ್ವರದಲ್ಲಿ ಮಲಗಿದಾಗ ಅವಳು ಮಾಡುವ ಸೇವೆಯಿಂದ ಸಂತುಷ್ಟನಾಗುವ ಸತ್ಯ ನಿಮ್ಮಲ್ಲಿ ಅಸಹಿಷ್ಣುತೆ ಇರುವವರೆಗೂ ನನ್ನ ಮನೋಭಾವ ಉದಾರವಾಗೋದು ಮನೋವ್ಯಾಪಾರದ ದೃಷ್ಟಿಯಿಂದ ಅಸಾಧ್ಯವಾಗಿತ್ತೇನೋ ಅನ್ನುತ್ತಾನೆ. ಮನೋವ್ಯಾಪಾರ ಎಂಥ ಪದ ಬಳಕೆ.... ಒಮ್ಮೆ ಓದುವುದು ನಿಲ್ಲಿಸಿ  ಯೋಚಿಸಿದರೆ ಮನಸ್ಸಿನ ರೀತಿಯೇ ಹಾಗಲ್ಲವಾ.. ನಾನೆಷ್ಟು, ನೀನೆಷ್ಟು, ಸರಿ ತಪ್ಪು ಗಳ ತಕ್ಕಡಿ ಸದಾಕಾಲ ಹಿಡಿದೇ ಇರುತ್ತದೆ. ವ್ಯಾಪಾರವೇ ಅಲ್ಲವೇ... ಭೈರಪ್ಪನವರ ಕಾದಂಬರಿಯಲ್ಲಿ ನಾವು ಪಾತ್ರಗಳಾಗವುದು ಹೀಗೆ ಏನೋ.. ಅಥವಾ ಒಂದು ಕಾದಂಬರಿ, ಬರಹ ನನ್ನದಾಗುವುದು ಎಂದರೆ ಇದೆ ಏನೋ

ಅರಿವಿಲ್ಲದೆ? ಹುಟ್ಟುವ ಪ್ರೀತಿ... ಅದೂ ತನ್ನ ಬಾಲ್ಯ ಗೆಳತಿಯ ನಾದಿನಿ... ಬದುಕಿನಲ್ಲಿ ದ್ವೇಷಿಸಿದ ಅತಿವ ಅಸಹನೆ ಹೊಂದಿದ ಮತಕ್ಕೆ ಸೇರಿದವಳು.. ಮೊದಲ ಬಾರಿ ಇಬ್ಬರೂ ಏಕಾಂತದಲ್ಲಿ ಭೇಟಿಯಾದಾಗ ಸುತ್ತಲೂ ಬೋಳು ಬೋಳಾದ ಹೊಲಗಳು, ಇನ್ನೊಮ್ಮೆ ಭೇಟಿಯಾದಾಗ ಸುತ್ತಲೂ ಪಚ್ಚೆ ಹಸುರಿನ ಪೈರು ಹೊತ್ತ ಹೊಲಗಳು.. ಒಂದು ಸಂಬಂಧದ ಬೆಳೆಯುವುವಿಕೆಗೆ ಇದಕ್ಕಿಂತ ಚೆಂದದ ಉಪಮೆ ಸಾಧ್ಯವೇ.. ಆದರೂ ಸಂಬಂಧದ ವಿಷಯಗಳಲ್ಲಿ ಗಂಡಿಗಿಂತ ಹೆಣ್ಣು ತುಸು ಸೂಕ್ಷ್ಮ. ಹೆರಿಗೆಗೆ ಹೋಗುವ ಮುನ್ನ ತಾನು ಬರುವವರೆಗೂ ಲಿಲ್ಲಿಯನ್ನು ಭೇಟಿಮಾಡಬೇಡ ಎನ್ನುವ ರಾಚಮ್ಮ, ಏನು ಹೇಳುತ್ತಾನೆ ಎಂದು ಮೊದಲೇ ತಿಳಿದಿದ್ದ ಲಿಲ್ಲಿ, ವಾಸ್ತವ ಎದುರಿಸಲು ತೊಳಲಾಡುವ ಸತ್ಯ  ಕೊನೆಗೆ ಪ್ರೀತಿಯೇ ಗೆಲ್ಲುತ್ತದೆ. ಸಾಧ್ಯವೇ ಇಲ್ಲದ ಮದುವೆಯನ್ನು ಮತಾಂತರ ಸುಲಭಗೊಳಿಸುತ್ತದೆ. ಹೆಚ್ಚು ಧರ್ಮಾಂಧರಾಗುವುದೇ ಮತಾಂತರ ಹೊಂದಿದವರು ಎಂಬ ಸತ್ಯ ಅರಿತ ಬಿಷಪ್ ಅದರಲ್ಲೂ ಬುದ್ಧಿವಂತ ವಾಕ್ಚಾತುರ್ಯ ಹೊಂದಿದ ಯುವಕ ಬಂದರೆ ಇನ್ನಷ್ಟು ಬಲ ಬರಬಹುದು ಎಂದು ಆಶಿಸುತ್ತಾರೆ. ಉದ್ಯೋಗವನ್ನೂ ಕೊಟ್ಟು ತಮ್ಮ ಕಾರ್ಯ ಸಾಧಿಸಿಕೊಳ್ಳಲು ಯತ್ನಿಸುತ್ತಾರೆ.

ದಿನಗಳು ಕಳೆದಂತೆ ಆಳವಾಗಿ ಬೇರುಬಿಟ್ಟ ನಂಬಿಕೆ, ಶ್ರದ್ಧೆ ಹೊಸದಾದ ಹೇರಿಕೆಯ ನಡುವೆ ತಾಕಲಾಟ ಶುರುವಾಗುತ್ತದೆ. ಹೆಚ್ಚಿನವರಿಗೆ ಈ ತಾಕಲಾಟ ನಡೆದು ಗಟ್ಟಿಗರಾದರೆ ಸೂಕ್ತ ಅವಕಾಶ ಸಿಕ್ಕಿದರೆ ಮತ್ತೆ ಬೇರೂರಬಹುದು. ಇಲ್ಲವಾದರೆ ನಂಬಿಕೆಯನ್ನೇ ಕಳೆದುಕೊಳ್ಳಬಹುದು. ಅತ್ತ ಪೂರ್ಣವಾಗಿ ಒಪ್ಪಿಕೊಳ್ಳಲಾಗದೆ ಇತ್ತ ಬರಲಾರದೆ ತ್ರಿಶಂಕು ಸ್ಥಿತಿ ಅನುಭವಿಸುವವರು ಕೆಲವರು. ಮತಾಂತರ ಅನ್ನುವುದು ಸಮುದ್ರವಿದ್ದ ಹಾಗೆ. ಇಲ್ಲಿ ಮೌಡ್ಯವೊಂದೇ ಕಾರಣವಲ್ಲ. ಆಮಿಷ, ಭವಿಷ್ಯ, ಹೀಗೆ ಅಲೆಗಳಂತೆ ನೂರಾರು ಕಾರಣಗಳು. ಎಲ್ಲರಿಗೂ ಅಲೆಯನ್ನು ಎದುರಿಸಿ ಮುನ್ನುಗ್ಗಿ ಹೋಗುವ ಸ್ಥೈರ್ಯವಿರದ ಕಾರಣ ಶರಣಾಗುತ್ತಾರೆ. ನಂಬಿಕೆ ಎಷ್ಟು ಆಳವಾಗಿರುತ್ತದೆ ಅನ್ನುವುದರ ಮೇಲೆ ತಾಕಲಾಟ ಅನುಭವಿಸುತ್ತಾರೆ. ಸಾಯುವ ಕ್ಷಣದಲ್ಲೂ ಮಗನ ನಿರಾಕರಿಸುವ ತಂದೆ, ತುಂಬು ಪ್ರಿತಿಯಿದ್ದರೂ ಉದಾಸಿನ ಮಾಡುವ ತಂಗಿ, ಮಕ್ಕಳ ಮೇಲೆ ಬಲವಂತವಾಗಿ ಹೊಸ ಮತವನ್ನು ಹೇರಲು ಮನಸ್ಸು ಒಪ್ಪದೇ ಇದ್ದ ಪರಿಸ್ಥಿತಿ ಸುಮ್ಮನಿರಲೂ ಬಿಡದೆ ಒದ್ದಾಡುವ ಸತ್ಯ ಅದನ್ನು ಎದುರಿಸಲು ಸಂಪೂರ್ಣವಾಗಿ ಸೋತುಹೋಗುತ್ತಾನೆ. ಬೆಳೆದು ಬಂದ ಪರಂಪರೆ ಮುಂದಿನ ಪೀಳಿಗೆಗೆ ಕೇವಲ ಪ್ರವಾಸಿ ತಾಣ ಅನ್ನಿಸಿ ಅವರು ಕಳೆದುಕೊಳ್ಳುವುದನ್ನು ಯೋಚಿಸಿ ಹೈರಾಣಾಗುತ್ತಾನೆ. ಹಿಂದುರಿಗೆ ಬರಲಾಗದೆ, ಮುಂದಕ್ಕೂ ಹೋಗಲಾಗದೆ ಪರದಾಡುತ್ತಾನೆ. ಇಲ್ಲಿ ಅಷ್ಟು ಓದಿದ, ಬುದ್ಧಿವಂತ ಸತ್ಯನಿಗಿಂತ ಲಿಲ್ಲಿ ವಿಶಿಷ್ಟವಾಗಿ ಕಾಣಿಸುತ್ತಾಳೆ. ತನಗೇನು ಬೇಕು ಎನ್ನುವುದು ಅವಳು ನಿರ್ಧರಿಸುತಾಳೆ ಮತ್ತದನ್ನು ಯಾವುದೇ ಗೊಂದಲವಿಲ್ಲದ ಹಾಗೆ ಒಪ್ಪಿಕೊಳ್ಳುತ್ತಾಳೆ. ಹೆಣ್ಣು ಭಾವುಕಳಾದರೂ ವಾಸ್ತವವನ್ನು ಬಹುಬೇಗ ಒಪ್ಪಿಕೊಳ್ಳುತ್ತಾಳೆನೋ.. ಹಾಗಾಗಿಯೇ ಅವಳು ಮಾನಸಿಕವಾಗಿ ತುಂಬಾ ಗಟ್ಟಿ.
ಮರಳಿ ಮನೆಗೆ ಬರುತ್ತಾರೆ....


ರಾಚಮ್ಮ ಒಪ್ಪಿಕೊಳ್ಳುತ್ತಾಳೆ ಶಾಕುಂತಲ ಏನು ಮಾಡುತ್ತಾಳೋ ಎಂದು ಯೋಚಿಸುವ ಸತ್ಯನ ನೋಡಿದಾಗ ಮತ್ತೆ ಮೊದಲಿನ ಪ್ಯಾರ ನೆನಪಾಗುತ್ತದೆ. ಕೃಷ್ಣಪ್ಪ ತಾತ ಆಗಸದೆತ್ತರಕ್ಕೆ ಬೆಳೆದು ನಿಲ್ಲುತ್ತಾರೆ. ಕಾದಂಬರಿಯ ಹೀರೋ ಸತ್ಯನಾದರೂ ನಿಜವಾದ ಹೀರೋ ಶಂಕರ... ಶಂಕರ ಎಂದರೆ ಹಾಗಲ್ಲವಾ ಎಲ್ಲಾ ಗೊಂದಲಗಳ ನಾಶಗೊಳಿಸಿ ಹೊಸ ಸೃಷ್ಟಿಗೆ ಅವಕಾಶ ಕೊಡುವವನು.. ತಾತ ಬದುಕಿನಲ್ಲಿ ಇದ್ದದ್ದು ಹಾಗೆ.....  ಧರ್ಮಶ್ರೀ ಇಷ್ಟವಾಗದೆ ಇರುವುದಾದರೂ ಹೇಗೆ????

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...