ರೇಡಿಯೋ
ರಾತ್ರಿಯಿಡಿ ತಬ್ಬಿ ಮಲಗಿದ್ದರೂ ಬೆಳಿಗ್ಗೆ ಅವಳು ಏಳದೇ ನಾನೂ ಏಳುವ ಹಾಗಿಲ್ಲ ಅನ್ನೋ ಅಹಿಯ ರೂಲ್ ಅವಳು ಸ್ಕೂಲ್ ಗೆ ಹೋಗುವವರೆಗೂ ನಡೆದಿತ್ತು. ಈಗ ಅಮ್ಮ ಅವಳ ಟಿಫನ್ ಬಾಕ್ಸ್ ರೆಡಿ ಮಾಡ ಬೇಕಿರುವುದರಿಂದ ಏಳಲು ವಿನಾಯತಿ ದೊರಕಿದರೂ ಎಬ್ಬಿಸುವ ಮುನ್ನ ಹತ್ತು ನಿಮಿಷವಾದರೂ ಮತ್ತೆ ಅವಳ ಜೊತೆ ಮಲಗಿ ಮುದ್ದು ಮಾಡಿ, ಮೈಮೇಲೆ ಹತ್ತಿ ಕರಡಿಯಂತೆ ಅವಚಿಕೊಂಡು ಎದ್ದ ಮೇಲೆ ಒಂದು ಬಿಗಿ ಅಪ್ಪುಗೆ ಸಿಕ್ಕಿದರೆ ಮಾತ್ರ ಅವಳಿಗೆ ನೆಮ್ಮದಿ. ಇಲ್ಲವಾದಲ್ಲಿ ಇಡಿ ದಿನ ಕಿರಿಕಿರಿ ತಪ್ಪಿದ್ದಲ್ಲ. ರಜೆ ಇದ್ದ ದಿನ ಅದೆಷ್ಟೇ ಕಷ್ಟವಾದರೂ ಅವಳು ಏಳೋಣ ಆಯ್ತು ಅನ್ನುವವರೆಗೂ ಹಾಸಿಗೆ ಬಿಡುವ ಹಾಗಿಲ್ಲ. ಅಪ್ಪಿ ತಪ್ಪಿ ರೂಲ್ ಮುರಿದರೆ ಆದರೆ ಅವತ್ತು ಮನೆಯಲ್ಲಿ ಮೂರನೇ ಮಹಾಯುದ್ಧ. ಆಗೆಲ್ಲಾ ನನ್ನ ಬಾಲ್ಯ ನೆನಪಾಗುತ್ತೆ. ಬೆಳಿಗ್ಗೆ ರೇಡಿಯೋ ಆನ್ ಆದರೆ ಅಲಾರಂ ಅನ್ನೋದಕ್ಕಿಂತ ಸೈರನ್ ಇದ್ದಂತೆ. ಹಾಸಿಗೆಯನ್ನು ಮಡಚಿ ಎದ್ದು ಹೊರಡಲೇ ಬೇಕು. ಬೈಯೋದು ಇರಲಿ ಇನ್ನೂ ಎದ್ದಿಲ್ವಾ ಅನ್ನೋ ಗಡಸು ದನಿಯ ಭಯಕ್ಕೆ ಮಳೆಯಾಗಲಿ, ಚಳಿಯಾಗಲಿ ಎದ್ದು ಬಚ್ಚಲಿನತ್ತ ನಡೆಯುತ್ತಿದ್ದೆವು. ಸೂರ್ಯ ಉದಯಿಸಿದ ಮೇಲೆ ಹಾಸಿಗೆಯ ಮೇಲೆ ಬಿದ್ದಿರುವುದು ಅನಿಷ್ಟ ಅನ್ನೋ ನಂಬಿಕೆ ಅದೆಷ್ಟು ಕೋಪ ಉಕ್ಕಿಸುತ್ತಿತ್ತೆಂದರೆ ಸೂರ್ಯನಿಗೆ ಸಹಸ್ರನಾಮ ಮಾಡುತ್ತಲೇ ಸ್ವಾಗತಿಸುತ್ತಿದ್ದೆವು. ಯಾರಿಗೂ ಇಲ್ಲದ ಸಮಯಪಾಲನೆ ಇವನಿಗೆ, ಒಂಚೂರು ಲೇಟ್ ಆಗಿ ಬಂದಿದ್ರೆ ಏನಾಗ್ತಾ ಇತ್ತು ಅಂತ ಬೈದು ಮುಗಿಸು...