ಒಂದಷ್ಟು ವರ್ಷಗಳಾದ ಮೇಲೆ ನೆನಪು ಆಪ್ತವೆನಿಸುತ್ತಾ ಹೋಗುತ್ತೇನೋ ಅಂತ ಅನ್ಸಿದ್ದು ವಸುಧೇಂದ್ರ ಅವರ ನಮ್ಮಮ್ಮ ಅಂದ್ರೆ ನಂಗಿಷ್ಟ ಅನ್ನೋ ಪುಸ್ತಕ ಓದಿ ಕೆಳಗಿಟ್ಟಾಗಲೇ. ವಯಸ್ಸಾಗುತ್ತಾ ಹೋದಂತೆ ಬಾಲ್ಯದ ಕಾಡುವಿಕೆಯೂ ಜಾಸ್ತಿ ಆಗುತ್ತೆ. ಹೀಗ್ಯಾಕೆ ಅನ್ನೋ ಪ್ರಶ್ನೆ ಕಾಡಿದರೂ ಉತ್ತರ ಹುಡುಕುವ ತಾಳ್ಮೆ ಧೈರ್ಯ ಎರಡೂ ಇಲ್ಲವಾದ್ದರಿಂದ ಆ ಪ್ರಶ್ನೆ ಎದುರಾದ ಕೂಡಲೇ ಬಾಗಿಲಲ್ಲಿ ಎದುರಾದ ಸೇಲ್ಸ್ಮ್ಯಾನ್ ಗೆ ಬೇಡಾ ಎಂದು ಹೇಳಿ ಬಾಗಿಲು ಮುಚ್ಚುವಷ್ಟು ವೇಗದಲ್ಲೇ ಮನದ ಬಾಗಿಲು ಮುಚ್ಚಿ ಬಿಡುತ್ತೇನೆ.

ಸಾಮಾನ್ಯ ಅನ್ನಿಸುವ ವಿಷಯವನ್ನೂ ಮನಮುಟ್ಟುವಷ್ಟು ಆಪ್ತವಾಗಿ ಬರೆಯುವ ಅವರ ಶೈಲಿ ಮನಸ್ಸಿನೊಳಗೆ ಇಳಿದು ನೆನಪಿನ ಬೇರನ್ನು ಕೆದಕುವ ಹಾಗೇ ಮಾಡುತ್ತೆ. ಅರಿವಿಲ್ಲದಂತೆ  ನಮ್ಮ ವ್ಯಕ್ತಿತ್ವವನ್ನು ಪರೀಕ್ಷೆ ಮಾಡಿಕೊಳ್ಳುವ ಹಾಗೆ ಆಗುತ್ತೆ. ಬದುಕು ಸುಲಭವಾಗುತ್ತಾ ಹೋದಂತೆ ಬಾಲ್ಯವೂ ಬಡವಾಗುತ್ತಾ, ನೆನಪಿನ ಬುತ್ತಿ ಖಾಲಿಯಾಗುತ್ತಾ ಹೋಗುತ್ತಿದೆಯಾ ಅನ್ನೋ ಆಲೋಚನೆ ಒಮ್ಮೆ ಮೈ ನಡುಗುವ ಹಾಗೆ ಮಾಡಿದ್ದಂತೂ ಸತ್ಯ.

ಯಾವುದನ್ನೇ ಪಡೆದುಕೊಳ್ಳಬೇಕಾದರೂ ಕಾದು, ಕಷ್ಟಪಟ್ಟು ಕನವರಿಸಿ ಅದಕ್ಕಾಗಿ ಒಂದಷ್ಟು ತ್ಯಾಗ ಮಾಡಿ ಅದು ದಕ್ಕಿದಾಗ ಸಿಗುವ ಸಂತಸ, ಅದನ್ನು ಕಾಪಿಟ್ಟುಕೊಳ್ಳುವಲ್ಲಿಯಲ್ಲಿ ಜೋಪಾನ, ಮತ್ತದನ್ನು ನೋಡಿದಾಗಲೆಲ್ಲಾ ಚೆಲ್ಲಾಡುವ ನೆನಪುಗಳು ಅದರೊಂದಿಗೆ ಸದಾ ಒಂದು ಮಧುರ ಭಾಂಧವ್ಯವನ್ನು ಏರ್ಪಡಿಸಿರುತ್ತದೆ. ಪ್ರೀತಿ ಮತ್ತು ಹೆಮ್ಮೆ ಸದಾ ಅದರ ಜೊತೆಯಾಗಿರುತ್ತದೆ. ಅಂತಹ ಪ್ರತಿಯೊಂದು ವಸ್ತುವೂ ಬದುಕಿನಲ್ಲಿ ಅಮೂಲ್ಯವಾದ ಸ್ಥಾನ ಪಡೆದಿರುತ್ತದೆ. ಬಯಸಿದ್ದು ತಕ್ಷಣಕ್ಕೆ ಸಿಗುವ ಈ ಕಾಲಘಟ್ಟದಲ್ಲಿ ಎಲ್ಲವೂ ಸಿಕ್ಕಷ್ಟೇ ವೇಗವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಭಾವಗಳು ವೇಗದ ಓಟಕ್ಕೆ ಸೋಲುತ್ತಿದೆಯಾ.. ಸ್ಟೇನ್ ಲೆಸ್  ಸ್ಟೀಲ್ ಪಾತ್ರೆ ಓದಿದಾಗ ಕಾಡುತ್ತಿದೆ. ಜಿಲ್ಲಾ ಮಟ್ಟದ ಚರ್ಚಾ ಸ್ಪರ್ದೆಯಲ್ಲಿ ಗೆದ್ದಾಗ ಕೊಟ್ಟ ಸ್ಟೀಲ್ ಬೇಸಿನ್ ಅನ್ನು ಒಮ್ಮೆ ಹೋಗಿ ನೇವರಿಸಬೇಕೆನಿಸುತ್ತಿದೆ.

ಅಪರೂಪಕ್ಕೆ ಸಿಗುವ ಯಾವುದೇ ಆದರೂ ಮನಸ್ಸನ್ನು ಹಿಡಿದಿಡುವುದು ಮಾತ್ರವಲ್ಲ ಉಲ್ಲಾಸವನ್ನು ಧೀರ್ಘಕಾಲದವರೆಗೆ ಉಳಿಯುವ ಹಾಗೆ ಮಾಡುತ್ತೆ. ಯಾವತ್ತೋ ಒಮ್ಮೆ ನೆನಪಾದಾಗ ಮತ್ತಷ್ಟೇ ಹಸಿರಾಗಿ ತುಟಿಯಂಚಿನಲ್ಲಿ ಒಂದು ಹೂನಗೆಯನ್ನು ಅರಳಿಸುತ್ತದೆ. ಅಭಿಮಾನ, ಪ್ರೀತಿ ಎಲ್ಲವೂ ವಾಸ್ತವದ ನೆಲಗಟ್ಟಿನಲ್ಲಿದ್ದಾಗ ಮಾತ್ರ ಬದುಕು ಸುಂದರ ಹಾಗೂ ಆಪ್ತ. ಆ ನೆನಪು ಎದೆಯಂಗಳದಲ್ಲಿ ಅಳಿಸಲಾಗದ ರಂಗೋಲಿ. ಇಲ್ಲವಾದಲ್ಲಿ ನಿತ್ಯ ಸಾಯೋರಿಗೆ ಅಳುವವರು ಯಾರು ಅನ್ನೋ ಹಾಗೆ ಅದು ಆ ಕ್ಷಣಕ್ಕೆ ಮರೆಯಾಗಿ ಇನ್ನೇನೋ ಸ್ಥಾನ ಪಡೆದಿರುತ್ತದೆ. ಕೊನೆಗೊಮ್ಮೆ ತಿರುಗಿ ನೋಡಿದರೆ ತುಂಬಿದಂತೆ ಖಾಲಿಯಾಗುತ್ತಿರುತ್ತದೆಯೇ ಹೊರತು ಯಾವುದೂ ಉಳಿದಿರುವುದಿಲ್ಲ.

ಬಡತನ ಮತ್ತು ಹಳ್ಳಿ ಕಟ್ಟಿಕೊಟ್ಟಷ್ಟು ಅನುಭವದ ಬುತ್ತಿಯನ್ನ ಇನ್ಯಾವುದೂ ಕೊಡಲು ಸಾದ್ಯವಿಲ್ಲವೇನೋ. ಅಲ್ಲಿ ಸಣ್ಣ ಗೆಲುವೂ ಸಂಭ್ರಮದಿಂದ ಜೊತೆಯಾಗಿ ಆಚರಿಲ್ಪಡುತ್ತದೆ. ಸಣ್ಣ ದುಃಖಕ್ಕೂ ಜೊತೆಯಾಗುವ ಹೆಗಲು ಅನೇಕ. ಏನೇ ಭಿನ್ನಾಭಿಪ್ರಾಯ, ವೈಷ್ಯಮ್ಯಗಳಿದ್ದರೂ ಅಲ್ಲಿ ಬದುಕು ಒಂಟಿಯಲ್ಲ, ಪ್ರ್ಯವೈಸಿಯ ಹೆಸರಲ್ಲಿ ಏಕಾಂಗಿಯಲ್ಲ. ಯಾವ ವಿಶ್ವವಿದ್ಯಾಲಯವೂ ಕಲಿಸದ ಪಾಠವನ್ನು ಬದುಕು ತೀರಾ ಸಹಜವಾಗಿ ಕಲಿಸಿಬಿಡುತ್ತದೆ. ಪರೀಕ್ಷೆ ಯಾವಾಗ ಅನ್ನೋ ಗುಟ್ಟನ್ನ ಬಿಟ್ಟುಕೊಡದೇ, ತಯಾರಾಗಲು ಸಮಯವನ್ನೂ ಕೊಡದೆ ಪ್ರತಿ ಕ್ಷಣ ಎಚ್ಚರವಾಗಿರುವುದನ್ನ ಕಲಿಸುತ್ತದೆ.

ಸಣ್ಣ ಪುಟ್ಟ ಆಸೆಗಳು, ಅದನ್ನು ಕಷ್ಟಪಟ್ಟಾದರೂ ಈಡೇರಿಸಿ ಕೊಳ್ಳುವಲ್ಲಿ ಕುಟುಂಬದ ಪಾತ್ರ, ಅವರ ತ್ಯಾಗ, ಆ ತ್ಯಾಗದಲ್ಲೊಂದು ಸಂತೃಪ್ತಿ ಬದುಕನ್ನ ಶ್ರೀಮಂತವಾಗಿಸುತ್ತಾ ಹೋಗುತ್ತೆ. ಬಡತನಕ್ಕೆ ನೆನಪುಗಳು ಜಾಸ್ತಿ. ಸಂಕಷ್ಟಗಳನ್ನ ದೊರಕಿದ ಸಣ್ಣ ಸಣ್ಣ ವಿಷಯಗಳಲ್ಲೇ ಮರೆಯುವ ಇನ್ನೇನನ್ನೋ ತುಂಬಿ ಕೊಳ್ಳುವ ಶಕ್ತಿಯಿರುವುದೂ ಅದಕ್ಕೆನೇ. ಪರಸ್ಪರ ಪ್ರೀತಿ, ತ್ಯಾಗ ಎಲ್ಲವನ್ನೂ ಬಡತನ ಮೌನವಾಗಿಯೇ ಕಲಿಸುತ್ತದೆ. ನಂತರ ಎಷ್ಟೇ ಮೇಲಕ್ಕೆ ಏರಿದರೂ ಕಾಲು ನೆಲದಲ್ಲೇ ಇರುವಂತೆಯೂ ಮಾಡುತ್ತದೆ.
ಮೌನದಲ್ಲಿ ಮಾತ್ರ  ಶಬ್ದ ಕೇಳೋಕೆ ಸಾಧ್ಯ. ಮಾತು ಬೇಡವೆನಿಸೋದು ಮೌನವಲ್ಲ.  ಮಾತು ತನ್ನ ಮಿತಿಯನ್ನು ಅರಿತಾಗ ಮೂಡುವ ಮೌನವಿದೆಯಲ್ಲ ಅದು ಅರ್ಥಪೂರ್ಣ. ಅದರ ಛಾಪು ಗಟ್ಟಿಯಾಗಿ ಮನಸ್ಸಿನಲ್ಲಿ ಅಚ್ಹೊತ್ತುತ್ತದೆ. ಬದುಕು ಇಷ್ಟವೋ ಕಷ್ಟವೋ ಕೆಲವಷ್ಟಕ್ಕೆ ಅಭ್ಯಾಸವಾಗುವುದನ್ನು ಕಲಿಸುತ್ತದೆ. ಕ್ರಮೇಣ ಅದು ರೂಧಿಯಾಗುತ್ತದೆ. ಹಾಗೆ ರೂಧಿಯಾಗುವ ಕೆಲವು ಅಭ್ಯಾಸಗಳು ಕೆಲವೊಮ್ಮೆ ಸಮಾಜದ ದೃಷ್ಟಿಯಲ್ಲಿ ಅಭಾಸವಾಗುವುದು ಉಂಟು. ರೂಧಿಯನ್ನು ಕಷ್ಟುವುದು ಕಷ್ಟ, ಮುರಿಯುವುದೂ ಕಷ್ಟ: ಮರೆಯುವುದಂತೂ ಇನ್ನೂ ಕಷ್ಟ ಅನ್ನೋ ಸಾಲು ಮತ್ತೆ ಮತ್ತೆ ಓದುವಹಾಗೇ ಮಾಡೋದು ಅಷ್ಟೇ ಸತ್ಯ.

ಬದುಕನ್ನ ತೀವ್ರವಾಗಿ ಗಮನಿಸುತ್ತಾ ಹೋದಂತೆ ಅದು ತೆರೆದಿಡುವ ಜಗತ್ತು ಎಷ್ಟು ವಿಶಾಲವಾದದ್ದು ಅನ್ನೋದು ಅಳತೆಗೆ ದಕ್ಕುವುದಿಲ್ಲ, ಅನುಭವಕ್ಕೆ ಮಾತ್ರ ನಿಲುಕುತ್ತದೆ. ಈ ಪುಸ್ತಕ ಓದಿ ಕೆಳಗಿಡುವಾಗ ಅನುಭವ ಅವರದಾದರೂ ಅದು ನಮ್ಮ ಬದುಕನ್ನ ಒಮ್ಮೆ ಗಮನಿಸಕೊಳ್ಳುವ ಹಾಗೆ ಮಾತ್ರ ಮಾಡುವುದಿಲ್ಲ, ಇನ್ನಷ್ಟು ಆಸಕ್ತಿಯಿಂದ ಪ್ರತಿಕ್ಷಣವನ್ನು ಆಸ್ವಾದಿಸುವ ಕಿಡಿಯನ್ನು ಹೊತ್ತಿಸುತ್ತದೆ. ಒಮ್ಮೆ ಹಿಂದುರಿಗೆ ನೆನಪುಗಳ ಪಾರಿಜಾತವನ್ನು ಆಯ್ದು ಆಘ್ರಾಣಿಸುವ ಹಾಗೆ ಮಾಡುತ್ತದೆ. ಒಂದು ಪುಸ್ತಕದ ಸಾರ್ಥಕತೆ ಇದೇ ಏನೋ...

 ಬದುಕು ತೆರೆದುಕೊಂಡಷ್ಟೂ ವಿಸ್ತರಿಸುತ್ತದೆ.
ನೋಡಿದಷ್ಟೂ ಕಣ್ಣೋಟಕ್ಕೆ ದಕ್ಕುತ್ತದೆ,
ಆಯ್ದುಕೊಂಡಷ್ಟೂ ದೊರಕುತ್ತದೆ.
ಮನಸ್ಸು ಮಾಡಬೇಕಷ್ಟೇ..


Comments

Popular posts from this blog

ಕೇಪಿನ ಡಬ್ಬಿ.

ಮೇಲುಸುಂಕ.