ಆತ್ಮೀಯರ ಜೊತೆಗೆ ಎಲ್ಲೋ ಹೋಗುತಿದ್ದೆವು. ಹರಟೆಯ  ನಡುವೆ  ಅದೆನಕ್ಕೋ ತಿರುಗಿದಾಗ ಕೈಯಲ್ಲಿ ಬ್ಯಾಗ್ ಹಿಡಿದು ನಿಧಾನಕ್ಕೆ ನಡೆಯುತ್ತಿದ್ದ ಅವರು ಕಂಡಕೂಡಲೇ ಆಲ್ಮೋಸ್ಟ್ ಕಿರುಚಿದ್ದೆ ಕಾರ್ ನಿಲ್ಲಿಸಿ ಒಂಚೂರು ಅಂತ. ಮಾತಿನ ಮಳೆಯಲ್ಲಿ ಮುಳುಗಿದ್ದವಳಿಗೆ ಕಾರ್ ನ ವೇಗ ಹೆಚ್ಚಾಗಿತ್ತು ಅಂತ ಅರ್ಥವಾಗಿದ್ದು ಕಾರ್ ನಿಂತು ಕೆಳಗಿಳಿದು ದಿಟ್ಟಿಸಿದಾಗ ಆವ್ಯಕ್ತಿಯಿಂದ  100 ಮಿ, ಗೂ ಹೆಚ್ಚು ದೂರ ಬಂದಾಗಿದೆ ಅಂತ ಗೊತ್ತಾದಾಗಲೇ.

ಒಂದೇ ಉಸಿರಿಗೆ ಓಡಿ ಅವರ ಎದುರು ನಿಂತು ಸಾರ್ ನೀವಿಲ್ಲಿ ಎಂದಾಗ ಅವರ ಕಣ್ಣಲ್ಲೂ ಅಚ್ಚರಿಯ ಮಿಂಚು, ಹಿಂದೆಯೇ ಸಣ್ಣ ಮಳೆ. ಒಂದು ಕ್ಷಣ ಇಬ್ಬರೂ ಮಾತಾಡದೇ ಒಬ್ಬರನೊಬ್ಬರು ದಿಟ್ಟಿಸುತ್ತಾ ಮೌನವಾಗಿ ನಿಂತಿದ್ದೆವು. ಸಂತಸವಾ, ಬೆರಗಾ, ಆಶ್ಚರ್ಯವಾ ಉಹೂ ಅದು ಭಾವಗಳ ಸಮ್ಮಿಲನ. ಸುಧಾರಿಸಿಕೊಂಡ ಅವರು ಹತ್ತಿರಕ್ಕೆ ಬಂದು ತಲೆನೇವರಿಸಿ ಪುಟ್ಟಾ ನೀನು ಅಂದಾಗಲೇ ವಾಸ್ತವಕ್ಕೆ ಮರಳಿದ್ದು. ಮಾತಾಡಿ ವಿಳಾಸ ತೆಗೆದುಕೊಂಡು ಬಂದು ಕಾರ್ ಹತ್ತಿದ ಕೂಡಲೇ ಪ್ರಶ್ನೆ ಎದುರಾಗಿತ್ತು ಯಾರ್ರಿ ಅವರು ಹಾಗೆ ಓಡಿದ್ರಿ ಅಂತ. ಅವರು ನನ್ನ ಹೈಸ್ಕೂಲ್ ಟೀಚರ್ ಅಂದ ಕೂಡಲೇ ಆ ಹಳೆ ಟೀಚರ್ ಗಾಗಿ ದಾರಿ ಮಧ್ಯೆ ಕಾರ್ ನಿಲ್ಲಿಸಿ ಓಡಿದ್ರಾ ಅಂದ್ರು.

ಹೇಗೆ ಹೇಳೋದು? ನಾವು ಶಾಲೆಗೇ ಹೋಗುತಿದ್ದ ದಿನಗಳಲ್ಲಿ ಪ್ರತಿಯೊಬ್ಬ ಶಿಕ್ಷಕರಿಗೆ ಕೇವಲ ನಮ್ಮ ಪರಿಚಯ ಮಾತ್ರ ಇರ್ತಾ ಇರ್ಲಿಲ್ಲ, ನಮ್ಮ ಮನೆ, ಮನೆಯವರು, ಅರ್ಥಿಕ ಪರಿಸ್ಥಿತಿ, ಮನಸ್ಥಿತಿ ಎಲ್ಲದರ ಅರಿವೂ ಇರುತಿತ್ತು. ಹಾಗಾಗಿ ಅವರು ಕೇವಲ ಕರ್ತವ್ಯಕ್ಕೆ ಪಾಠ ಮಾತ್ರ ಮಾಡುತ್ತಿರಲಿಲ್ಲ ನಮ್ಮ ಬದುಕಿನ ಪ್ರತಿ ಹಂತದಲ್ಲೂ ಗಮನಿಸಿ ತಿದ್ದುತ್ತಿದ್ದರು. ಪೋಷಕರಿಗೂ ಅಷ್ಟೇ ಗೌರವ ಅವರ ಮೇಲೆ. ಹಾಗಾಗಿ ನಾವು ಮನೆಯಲ್ಲಿ ಮೇಷ್ಟ್ರು ಹೊಡೆದರು ಅಂತ ಕಂಪ್ಲೇಂಟ್ ಮಾಡೋ ಪ್ರಮೇಯವೇ ಇರದಂತೆ ಅವರೇ ಉದ್ದದ ಒಂದು ಲಕ್ಕಿ ಕೋಲನ್ನೋ, ಎಳೆಯ ನಾಗರ ಬೆತ್ತವನ್ನೋ ತಂದು ಕೊಟ್ಟು ಈ ನನ್ನ ಮಗ/ಮಗಳಿಗೆ ನಾಲ್ಕು ಬಿಟ್ಟು ಪಾಠ ಕಲಿಸಿ ಅಂತ ಹೇಳಿ ಹೋಗುವುದು ಅತಿ ಸಾಮಾನ್ಯವಾದ ಪದ್ದತಿಯಾಗಿತ್ತು. ಹಾಗಾಗಿ ನಮ್ಮ ಮೋಸ, ಸುಳ್ಳು ತಟವಟಗಳ ಬಗ್ಗೆ ನಮಗಿಂತ ಜಾಸ್ತಿ ಅವರಿಗೆ ಗೊತ್ತಿರುತ್ತಿತ್ತು.ಅದರಿಂದಲೇ ಏನೋ ಅಲ್ಲೊಂದು ಆತ್ಮೀಯ ಬಾಂಧವ್ಯ ಸದಾ ಹಸಿರಾಗಿರುತಿತ್ತು. ತಪ್ಪು ಮಾಡದಂತೆ ಸದಾ ಹೆದರಿಗೆ ಕಾಡುತಿತ್ತು.

ಅದರಲ್ಲೂ ನಾನು ಕ್ಲಾಸ್ ರೂಂ ಗಿಂತ ಸ್ಟಾಫ್ ರೂಂ ಗೆ ಕಚ್ಚಿಕೊಂಡಿದ್ದೆ ಜಾಸ್ತಿ. ಪ್ರಾಥಮಿಕ ಹಂತದಿಂದ ಕಾಲೇಜ್ ಮುಗಿಯುವವರೆಗೂ ಬಹುಶಃ ನನ್ನ ಹೆಸರಿಡಿದು ಕರೆದ ಯಾವ ಟೀಚರ್ಸ್ ಇಲ್ಲ. ಏನೋ ಒಂದು ಮುದ್ದು ಹೆಸರು, ಅಡ್ಡ ಹೆಸರು ಅವರವರಿಗೆ ಹೊಳೆದಂತೆ, ಅನ್ನಿಸಿದಂತೆ. ಹಾಗಾಗಿ ಬಹಳಷ್ಟು ಸಲ ಯಾರಾದರೂ ನನ್ನ ಹೆಸರಿಡಿದು ಕರೆದರೆ ಅಕ್ಕಪಕ್ಕ ತಿರುಗಿ ನೋಡುವ ಹಾಗಾಗುತಿತ್ತು. ಅವರ ಜೊತೆ ಜಗಳವಾಡುತ್ತಾ, ತರಲೆ ಮಾಡುತ್ತಾ ಬೆಳದವಳ ಬದುಕಿನ ಪ್ರತಿ ಕ್ಷಣದ ತಲ್ಲಣಗಳ ಅರಿವೂ ಅವರಿಗಿತ್ತು. ತಿದ್ದುತ್ತಾ, ಪ್ರೀತಿಸುತ್ತಾ, ನೋವಿಗೆ ಹೆಗಲಾಗುತ್ತಾ,  ವೇದನೆಗೆ ಮಡಿಲಾಗುತ್ತಾ, ಆಪ್ತ ಗೆಳತನಕ್ಕೆ ಜೊತೆಯಾಗುತ್ತಾ, ನನ್ನ ತರಲೆ, ತುಂಟಾಟಗಳಿಗೆ ನಸುನಗುತ್ತಾ ಹೆಜ್ಜೆಗೂಡಿಸಿದವರು ಅನೇಕರು. ಇವತ್ತಿಗೂ ಓದಿದ ಶಾಲೆಗೇ ಹೋದರೆ ಅವರಿಗೆ ನಾನಿನ್ನೂ ನಾನು ಮಗುವೇ...  ಇವತ್ತಿಗೂ ಅಹಿಗೆ ಅದರ ಬಗ್ಗೆ ಹೊಟ್ಟೆಕಿಚ್ಚು. ಅಮ್ಮಾ ನಮ್ಮ ಸ್ಕೂಲ್ ನಲ್ಲಿ ಯಾಕೆ ಹೀಗೆ ಇರೋಲ್ಲ ಅನ್ನೋ ಪ್ರಶ್ನೆ..

ಕ್ಲಾಸ್ ರೂಂ ನಿಂದ ಹಿಡಿದು ಅಂಗಳದವರೆಗೆ ಸ್ವಚ್ಚವಾಗಿಡುವುದನ್ನ ಕಲಿಸಿದ್ದು ಅವರುಗಳೇ, ಹಲವಾರು ವಿಭಿನ್ನ ಮನಸ್ಥಿತಿಗಳ ನಡುವೆ ಹೊಂದಿಕೊಂಡು ಹೋಗುವುದನ್ನು ತಿಳಿಸಿದ್ದೂ ಅವರೇ. ಅಭಿಪ್ರಾಯಭೇದಗಳ ನಡುವೆ ಉದ್ದೇಶಕ್ಕಾಗಿ ಒಂದಾಗುವುದನ್ನು ಹೇಳಿಕೊಟ್ಟಿದ್ದು ಅವರೇ. ಇಡಿ ಶಾಲೆಯೇ ಒಂದು ಫ್ಯಾಮಿಲಿ ಅನ್ನುವ ಹಾಗೆ ವಾತಾವರಣ ನಿರ್ಮಿಸಿ ಹಿರಿತನ ನಿಭಾಯಿಸಿ ಮೌನವಾಗಿ ಮಾರ್ಗದರ್ಶಿಯಾಗಿದ್ದು ಅವರೇ. ಏನೇ ತಪ್ಪಿದರೂ ಸಂಜೆಯ ಒಂದು ಗಂಟೆಯ ಆಟದ ಅವಧಿ ಮಾತ್ರ ತಪ್ಪುತ್ತಿರಲಿಲ್ಲ. ಮಕ್ಕಳೊಂದಿಗೆ ಮಕ್ಕಳಾಗಿ ಆಡಿ ಬೆರೆಯುವುದನ್ನ, ಮಗುತನ ಉಳಿಸಿಕೊಳ್ಳುವುದನ್ನ ಹೇಳಿಕೊಟ್ಟವರು ಅವರೇ. ಮೈಲಿಗಳ ದೂರದಿಂದ ನಡೆದು ಬರುವ ಮಕ್ಕಳಿಗೆ ಊಟ ಹಾಕುವ, ತಮಗೆ ಗೊತ್ತಿರುವ ಎಲ್ಲವನ್ನೂ ಧಾರೆಯೆರಿಯುವ ಅವರಿಗೆ ಅದ್ಯಾಕೆ ಮತ್ತೊಬ್ಬರ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ, ಅಪ್ಯಾಯತೆ ಅನ್ನೋದು ಇವತ್ತಿಗೂ ನನಗೆ ಅರ್ಥವಾಗದ ಪ್ರಶ್ನೆಯಾದರೂ ಹೇಗೆ ಬದುಕಬೇಕು ಅನ್ನೋದಕ್ಕೆ ಉತ್ತರ ಸಿಕ್ಕಿದೆ.

ಹಾಗೆ ನೋಡೋಕೆ ಹೋದರೆ ನಂಗೆ ನೆನಪಿನ ಶಕ್ತಿ ಸ್ವಲ್ಪ ಕಡಿಮೆಯೇ. ಆದರೆ ಬದುಕಿನಲ್ಲಿ ಮುಖ್ಯ ಪಾತ್ರ ವಹಿಸಿದ ಎಲ್ಲಾ ಟೀಚರ್ಸ್ ಗಳೂ ಮನದಂಗಳದಲ್ಲಿ ಸದಾ ನಗುವ ಹಸಿರೇ. ನೆನಪಿನ ನೀರು ಸದಾ ಹರಿಸುತ್ತಾ ಆ ಹಸಿರನ್ನು ಕಾಪಿಟ್ಟುಕೊಂಡಿದ್ದೇನೆ. ಈ ಉಸಿರಿಗೆ ಆ ಹಸಿರು ವಹಿಸಿದ ವಹಿಸುತ್ತಿರುವ ಪಾತ್ರ ದೊಡ್ಡದು. ಹಾಗಾಗಿ ಉಸಿರಿರುವ ತನಕ ಅವರ ನೆನಪೂ ಹಸಿರು. ಇಡುವ ಪ್ರತಿ ಹೆಜ್ಜೆಯಲ್ಲೂ ಅವರ ಋಣವಿದೆ. ಬದುಕಿನ ಪ್ರತಿ ಗೆಲುವಲ್ಲೂ ಅವರ ಹಾರೈಕೆಯಿದೆ. ಬದುಕಿನ ದಾರಿಯಲ್ಲಿ ಜೊತೆಯಾದ, ಮುನ್ನೆಡೆಯಲು ಕಸುವು ತುಂಬಿದ ಎಲ್ಲರಿಗೂ ಶುಭಾಶಯಗಳು.

ಹ್ಯಾಪಿ ಟೀಚರ್ಸ್ ಡೇ... <3 <3

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...