ಮನೆಯ ಹತ್ತಿರ ಬರುವಾಗಲೇ ಅವನ ಕಣ್ಣುಗಳು ಮಗಳನ್ನು ಅರಸುತ್ತಿದ್ದವು. ಅವನೂ ಮನೆಯಲ್ಲಿರುವಷ್ಟು ಹೊತ್ತು ಮಗಳು ಅವನ ಕಣ್ಣಂಚಿನ ಪರಿಧಿಯಲ್ಲೇ ಇರಲು ಬಯಸುತಿದ್ದ. ರಾತ್ರಿ ಮಲಗುವಾಗಲೂ ಎದೆಯ ಮೇಲೆಯೇ ಮಲಗಿಸಿಕೊಂಡು ನಿದ್ರೆ ಹೋಗುತಿದ್ದ. ನಡೆಯುವಾಗ ಅವಳ ಪುಟ್ಟ ಕೈ ಅವನ ಅಂಗೈಯಲ್ಲಿ ಇರಲೇಬೇಕಿತ್ತು. ಅಂತ ಅಪ್ಪ ತನ್ನೆಲ್ಲಾ ಧೈರ್ಯ, ದಿಟ್ಟತನವನ್ನು ಆ ಬೆರಳುಗಳ ಮೂಲಕವೇ ಅವಳ ಮೈಯಲ್ಲಿ ಸೇರಿಸಿದ್ದನಾ.....

ಆಗಿನ್ನೂ ನಾಲ್ಕು ಬೆಂಚ್ಗಳಿದ್ದ ಒಂದೊಂದು ಬೆಂಚ್ ಒಂದೊಂದು ತರಗತಿಯನ್ನು ಪ್ರತಿನಿಧಿಸುತಿದ್ದ ಒಂದೇ ರೂಂ ನ ಏಕೋಪಾಧ್ಯಾಯ ಶಾಲೆಯಿಂದ ಬಂದು ಹೊಸ ಊರಿನ ಹೊಸ ಶಾಲೆಗೇ ಸೇರಿ ಅಲ್ಲಿಗೆ ಒಗ್ಗಿಕೊಳ್ಳಲು ಪ್ರಯತ್ನಿಸಿದ್ದ ಸಮಯ. ಯಾವುದಕ್ಕೇ ಭಂಗವಾದರೂ ಶಾಲೆ ಮುಗಿದ ಒಂದು ಗಂಟೆಯ ಸಮಯ ಮಾತ್ರ ಸಂಪೂರ್ಣವಾಗಿ ಆಟಕ್ಕೆ ಮೀಸಲಾಗಿತ್ತು. ಯಾವ ಮಗುವೂ ಆಡದೆ ಸುಮ್ಮನೆ ಕುಳಿತಿರುವ ಹಾಗಿಲ್ಲ. ಶಿಕ್ಷಕರ ಎಚ್ಚರದ ಕಣ್ಣು ಗಮನಿಸಿ ಆಡಲು ಕಳಿಸುತಿದ್ದರು. ಇಂತಿರ್ಪ ಕಾಲದಲ್ಲಿ ಪಿ.ಟಿ ಸರ್ ಖೋ ಖೋ ಆಟ ಆಡಿಸುತ್ತಿರುವಾಗ ನಮ್ಮ ಗ್ಯಾಂಗ್ ಅಯ್ಯೋ ಇದೇನು ಮಹಾ ಅಂತ ಕುಂಟೆಪಿಲ್ಲೆ ಆಡುವುದರಲ್ಲಿ ವ್ಯಸ್ತವಾಗಿತ್ತು. ಅದರಲ್ಲೂ ಆ ಆಟದಲ್ಲಿ ನಾನು ಇಡೀ ಸ್ಕೂಲ್ ಗೆ ವರ್ಲ್ಡ್ ಫೇಮಸ್ ಆಗಿದ್ದವಳು. ಒಂದೇ ಉಸಿರಿಗೆ ಅಷ್ಟನ್ನೂ ಮುಗಿಸುವ ಭರದಲ್ಲಿ ಏಕಾಗ್ರವಾಗಿ ಆಡುವ ಹೊತ್ತಿಗೆ ಬ್ರೆಕಿಂಗ್ ನ್ಯೂಸ್ ಬಂದಿತ್ತು.

ಆಗಿನ್ನೂ ಕ್ಯಾಮೆರಾಮೆನ್ ಗಳು, ವೀಡಿಯೊಗಳು ಬಂದಿರಲಿಲ್ಲ. ಹಾಗಾಗಿ ಓಡೋಡಿ ಬಂದ ಒಂದಿಬ್ಬರು ನೋಡು ಅಲ್ಲಿ ನಿನ್ನ ಅಣ್ಣಂಗೆ ಹೊಡಿತಾ ಇದಾರೆ ಅಂದಿದ್ದೆ ಆಡುತ್ತಿದ್ದ ಆಟವನ್ನು ನಿಲ್ಲಿಸಿ ಒಂದೇ ಉಸಿರಿಗೆ ಓಡಿದ್ದೆ. ನೋಡಿದರೆ ಮೈಮೇಲೆ ಎದ್ದ ಬಾಸುಂಡೆಗಳನ್ನು ನೋಡಿಕೊಂಡು ಅಳುತ್ತಾ ನಿಂತಿದ್ದ. ಏನಾಯ್ತೋ ಅಂದ್ರೆ ಬಿಕ್ಕುತ್ತಲೇ ಕತೆ ಹೇಳಲು ಶುರುಮಾಡಿದ. ನಿಧಾನ ಮಾಡಿದರೆ ಎಲ್ಲಿ ಪ್ರಳಯವೇ ಆಗುತ್ತೇನೋ ಅನ್ನುವಷ್ಟು ಅವಸರದಲ್ಲಿದ್ದ ನಾನು ಯಾರು ಮೊದ್ಲು ಹೇಳು ಆಮೇಲೆ ಉಳಿದಿದ್ದು ಅಂದೇ. ಅಂದಿನಿದಲೂ ಇಂದಿನವರೆಗೆ ಶೋಷಿತರು ಮಾತಾಡುವುದಕ್ಕಿಂತ ಪಕ್ಕದಲ್ಲಿರುವವರೇ ವರದಿ ಕೊಡೋದು ಜಾಸ್ತಿ, ಹಾಗಾಗಿ ಯಾರೋ ಗೋವಿಂದಪ್ಪ ಮೇಷ್ಟ್ರು ಅಂದ್ರು.

ನೋಡಿದರೆ ಇವನು ಆಟವಾಡುವ ಭರದಲ್ಲಿ ಖೋ ಖೋ ಕೋರ್ಟ್ ಒಳಗೆ ಹೋಗಿದ್ದಾನೆ. ಇಂಟರ್ ಸ್ಕೂಲ್ ಸ್ಪರ್ದೆಗೆ ಅವರನ್ನು ತಯಾರು ಮಾಡಿಸುತ್ತಿದ್ದ ಮೇಷ್ಟ್ರು ಅಡ್ಡ ಬಂದವನಿಗೆ ಕೈಯಲ್ಲಿದ್ದ ಲಕ್ಕಿ ಕೋಲಿನಲ್ಲಿ ಒಂದು ಬಿಟ್ಟಿದ್ದಾರೆ. ಮೊದಲೇ ಗುಬ್ಬಚ್ಚಿ ದೇಹ ಅದು ಒಂದು ಸುತ್ತು ಬಂದು ತನ್ನ ಗುರುತನ್ನ ಉಳಿಸಿದೆ. ಮೊದಲೇ ಬೆಳ್ಳಣ್ಣ. ಕೆಂಪಗಿನ ಬರೆ ಮುಳುಗುವ ಸೂರ್ಯನಂತೆ ಎದ್ದು ಕಾಣುತಿತ್ತು. ಅಷ್ಟೂ ರೋಷವನ್ನು ಅದುಮಿಟ್ಟುಕೊಳ್ಳಲು ಹರಸಾಹಸ ಪಡುತ್ತಲೇ ಕೋರ್ಟ್ ಒಳಗೆ ಹೋದೆ. ಪಕ್ಕಕ್ಕೆ ತಿರುಗಿದ ಅವರು ಕೋರ್ಟ್ ಆಚೆ ಹೋಗು ಅಂದು ತಿರುಗುವ ಮೊದಲೇ ಅವರ ಕೈಯಲ್ಲಿದ್ದ ಕೋಲನ್ನು ಕಸಿದು ಇರುವ ಅಷ್ಟೂ ಶಕ್ತಿಯನ್ನು ಒಗ್ಗೂಡಿಸಿಕೊಂಡು ಎರಡು ಹೊಡೆದು ಒಂದೇ ಉಸಿರಿಗೆ ಅಲ್ಲಿಂದ ಓಡಿದವಳು ಮನೆ ತಲುಪವರೆಗೂ ನಿಂತಿರಲಿಲ್ಲ.

ನಾನು ನಡೆದು ಬಂದರೆ ಆಶ್ಚರ್ಯಪಡುತ್ತಿದ್ದ ಮನೆಯವರೂ ಓಡಿ ಬಂದಿದ್ದು ನೋಡಿ ತಮ್ಮ ಪಾಡಿಗೆ ತಾವಿದ್ದರು. ಮಾವ ಗದ್ದೆಯಿಂದ ಬರಿತ್ತಿದ್ದ ಹಾಗೆ ಇಳಿಯುತ್ತಿದ್ದ ಕಣ್ಣಿರು ಒರೆಸಿಕೊಳ್ಳುತ್ತಲೇ ಮೇಷ್ಟ್ರು ಹೊಡೆದರು ಅಂದೇ. ಅಬ್ಬಾ ಇಷ್ಟು ದಿನಕ್ಕೆ ಒಳ್ಳೆ ಕೆಲಸ ಮಾಡಿದ್ದಾರೆ ಬಿಡು ಅನ್ನುತ್ತಾ ಅವನು ಕಾಫಿ ಕುಡಿಯುವುದು ಮುಂದುವರಿಸಿದ. ನನಗಲ್ಲ ಅಣ್ಣಂಗೆ ಅನ್ನುವ ವೇಳೆಗೆ ನನ್ನ ಬ್ಯಾಗ್ ಅನ್ನೂ ಹೊತ್ತುಕೊಂಡು ಅವನು ಒಳಗೆ ಕಾಲಿರಿಸಿದ. ನೋಡುತ್ತಲೇ ಸಿಟ್ಟುಗೊಂಡ ಅವನು ನಾಳೆ ಬಂದು ಕೇಳ್ತೀನಿ ಒಳಗೆ ಹೋಗಿ ಎಣ್ಣೆ ಹಚ್ಚಿಸ್ಕೋ ಅಂತ ಅವನಿಗೆ ಸಮಾಧಾನ ಮಾಡುತ್ತಿದ್ದರೆ ಅಷ್ಟೊತ್ತಿಗೆ ಆವೇಶ ಇಳಿದು ನಿಧಾನಕ್ಕೆ ಭಯ ಶುರುವಾಗಿತ್ತು. ನಾಳೆ ಎನಾಗಬಹ್ದು ಅನ್ನೋ ಸಣ್ಣ ಆತಂಕ. ಯಾರತ್ರ ಹೇಳೋದು ಅನ್ನೋ ಪ್ರಶ್ನೆ.

ಮಾವಂಗೆ ಹೇಳೋದು ruled out. ಇನ್ನು ಆಚೆಮನೆಗೆ ಹೋಗಿ ಕೇಶುವಣ್ಣನಿಗೆ ಹೇಳಿದರೂ ಉಪಯೋಗವಿಲ್ಲ. ಉಳಿದಂತೆ ಏನೇ ಸಪೋರ್ಟ್ ಮಾಡಿದ್ರೂ ತಪ್ಪು ಮಾಡಿದ್ರೆ ಕಡುಬು ಬೀಳುತಿತ್ತು. ಇದ್ದಕ್ಕಿಂದಂತೆ ಏನೋ ನೆನಪಾಗಿ ಧೈರ್ಯ ಬಂದು. ನಿಧಾನಕ್ಕೆ ಅಲ್ಲಿಗೆ ಹೋದೆ. ನನ್ನ ಮುಖ ನೋಡುತಿದ್ದಂತೆ ಆರವಿಂದಣ್ಣ ನಿಗೆ ಡೌಟ್. ನನ್ನೆಲ್ಲಾ ತುಂಟಾಟಗಳಿಗೆ ಅಯ್ಯೋ ಇದೇನು ಮಹಾ ನಾನು ಏನೆಲ್ಲಾ ಮಾಡ್ತಿದ್ದೆ ಗೊತ್ತಾ ಅಂತ ಅವರ ಸಾಹಸ ಹೇಳಿ ನನ್ನ ಪರೋಕ್ಷ ಗುರುವಾಗಿದ್ದವರು. ಹೀಗಾಯ್ತು ಅಂದೇ. ಸುಮ್ನಿರು ನಾನೂ ನಾಳೆ ಬರ್ತೀನಿ ಅಂದ್ರು. ಸಮಾಧಾನವಾಗಿ ಆಂಟಿ ಕೊಟ್ಟ ಕೈ ತುತ್ತು ತಿಂದು ನೆಮ್ಮದಿಯಾಗಿ ಮಲಗಿದೆ.

ಬೆಳಿಗ್ಗೆ ಇಬ್ಬರೂ ಬಂದು ಗೋವಿಂದಪ್ಪ ಮೇಷ್ಟ್ರನ್ನ ವಿಚಾರಿಸಿದ್ದಾಯ್ತು. ಬಾಸುಂಡೆ ನೋಡುತಿದ್ದಂತೆ ಅವರೂ ಮೆತ್ತಗಾಗಿ ಸುಮ್ನೆ ಹೆದರಿಸಲು ಹೊಡೆದೆ ಅಷ್ಟೇ ಇಷ್ಟು ಜೋರಾಗಿ ಬಿದ್ದಿದೆ ಅಂತ ಗೊತ್ತಾಗಿಲ್ಲ ಅಂತ ಸಾರೀ ಕೇಳಿದ್ದು ಆಯ್ತು. ಮಾವ ಮುಂದೇನೋ ಕೇಳುವುದರೊಳಗೆ ಆರವಿಂದಣ್ಣ ಆಯ್ತಲ್ಲ ಅವ್ರು ಗೊತ್ತಿಲ್ಲದೇ ಆಗಿದ್ದು ಅಂದ್ರಲ್ಲ ಬಾ ಹೋಗೋಣ ಅಂತ ಹೊರಟ್ರು. ಅಲ್ಲಿಯವರೆಗೆ ಆಫೀಸ್ ರೂಂ ಬಾಗಿಲು ಮರೆಯಲ್ಲಿ ಅವಿತುಕೊಂಡು ಬಿಟ್ಟ ಕಣ್ಣುಗಳಿಂದ ಗಮನಿಸುತ್ತಿದ್ದವಳಿಗೆ ಆರಾಮಾಗಿ ಕ್ಲಾಸ್ ಗೆ ಹೋಗು ಅಂತ ನಕ್ಕು ಮನೆಗೆ ಹೋದ್ರು. ಗೋವಿಂದಪ್ಪ ಮೇಷ್ಟ್ರು ಯಾಕೆ ಸೈಲೆಂಟ್ ಆಗಿದ್ರು ಅನ್ನೋದು ಮಾತ್ರ ಅರ್ಥವಾಗದೇ ನಾನು ನಿಂತೇ ಇದ್ದೇ. 

ಮೌನ ಅಷ್ಟು ಸುಲಭಕ್ಕೆ ಅರ್ಥವಾಗುವುದಿಲ್ಲ..
ಅಪ್ಪನ ನಿರೀಕ್ಷೆ ಮುಗಿಯುವುದಿಲ್ಲ....


Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...