ನಡು ರಾತ್ರಿಯಲ್ಲಿ ದಿಗ್ಗನೆ ಎಚ್ಚರಾದಾಗ ನೋಡಿದರೆ ಮಳೆ ಸುರಿಯುತಿತ್ತು. ಅದು ಸುರಿಯವ ರಭಸಕ್ಕೆ, ಹೊಮ್ಮುವ ಶಬ್ದಕ್ಕೆ ಒಂದ್ಸಲ ನಾನು ಊರಲ್ಲಿ ಇದಿನಾ ಅನ್ನೋ ಸಂದೆಹವಾಗಿ ಕಣ್ಣುಜ್ಜಿ ನೋಡಿದರೆ ಉಹೂ ಇದು ಬೆಂಗಳೂರೇ.. ಕಿಟಕಿಗೆ ಮುಖ ಒಡ್ಡಿದರೆ ತಣ್ಣಗೆ ಸುಳಿಯುವ ಗಾಳಿಯ ಜೊತೆಗೆ ಚಿಮ್ಮುವ ಹನಿಗಳು ಮುತ್ತಿಕ್ಕಿದವು. ನೆನಪು ಹನಿಯ ಜೊತೆ ಸರ್ರನೆ ಬಾಲ್ಯಕ್ಕೆ ಜಾರಿತು.
ಮಲೆನಾಡಿನ ಮಳೆಯೆಂದರೆ ಅದು ಮಂದ್ರದಿಂದ ಶುರುವಾಗಿ ತಾರಕ್ಕಕ್ಕೆ ಏರುವಲ್ಲೂ ಶ್ರುತಿ ತಪ್ಪುವುದಿಲ್ಲ. ಬದುಕಿನ ಶ್ರುತಿ ಮಾತ್ರ ಆಗಾಗ ದಾರಿ ತಪ್ಪುತ್ತದೆ ಅಷ್ಟೇ. ಅದರಲ್ಲೂ ಬೆಳಗ್ಗಿನ ಜಾವದ ಮಳೆಯ ಹದವೆ ಬೇರೆ. ಮಳೆ ಜೋರಾದಷ್ಟೂ ಕಿವಿಗೆ ಹಿತ. ಹೊದ್ದ ಕಂಬಳಿಯನ್ನು ಇನ್ನಷ್ಟು ಸುತ್ತಿಕೊಂಡು ಮುದುರಿ ಮಲಗಿದರೆ ಆಹಾ ಸ್ವರ್ಗವೇ ಮಳೆಯೊಂದಿಗೆ ಇಳೆಗೆ ಇಳಿದಂತೆ. ಇನ್ನಿವತ್ತು ಸ್ಕೂಲ್ ಹೋಗುವ ಕೆಲಸವಿಲ್ಲ ಅನ್ನುವುದು ನೆನಪಾದರಂತೂ ಮಳೆಗಿಂತಲೂ ಮನಸ್ಸಿನ ಕುಣಿತವೇ ಜಾಸ್ತಿ. ಇಳಿವ ಮಳೆಯ ಜೊತೆ ಸೋಮಾರಿತನವೂ ಸೇರಿ ಇಡಿ ವಾತಾವರಣದಲ್ಲಿ ಆವರಿಸುವ ಮಂಜು ಬಚ್ಚಲೊಲೆಯ ಹೊಗೆಯೊಂದಿಗೆ ಸ್ಪರ್ದಿಸುತ್ತದೆ.

ಉರಿ ತಾಕುವಷ್ಟು ಹತ್ತಿರಕ್ಕೆ ಸರಿವ ನಾಯಿಯೂ ಉರಿಯುತ್ತಿದೆಯೇನೋ ಎಂದು ಒಂದು ಕ್ಷಣ ಸಂದೇಹಹುಟ್ಟಿಸುವಷ್ಟು ಹತ್ತಿರಕ್ಕೆ ಸರಿದು ಅರೆತೆರೆದ ಕಣ್ಣಿನಿಂದ ಆಕಳಿಸುತ್ತಿರುತ್ತದೆ. ಕೊಟ್ಟಿಗೆಯಲ್ಲಿ ಮುದುರಿ ಮಲಗಿದ ದನಗಳಿಗೂ ಆಲಸ್ಯ. ಅಂತ ಮಳೆಗೂ ಶ್ರುತಿ ಹಿಡಿಯುವುದು ಅಡುಗೆ ಮನೆಯಲ್ಲಿನ ಕಡಗೋಲಿನ ಶಬ್ದ ಮಾತ್ರ. ಯಾವುದರ ಜೊತೆ ಶ್ರುತಿ ಸೇರಿಸುವುದು ಅನ್ನುವ ಗೊಂದಲದಲ್ಲಿ ನಾವು ಸೊರ್ ಸೊರ್ ಎನ್ನುತ್ತಾ ಕಾಫಿ ಹೀರಿ ವಾತಾವರಣ ಕುಲಗೆಡಿಸುವ ಪ್ರಯತ್ನ ಮಾಡಿದರೂ ಮಳೆ ಮಾತ್ರ ಇನ್ನಿಲ್ಲದ ಏಕಾಗ್ರತೆಯಲ್ಲಿ ಸುರಿಯುತ್ತಲೇ ಇರುತಿತ್ತು. ಮನಸ್ಸಿನ ಆಲೋಚನೆಗಳಂತೆ... ಕಾಲನ ಓಟದಂತೆ

ಈ ಮುಗಿಲು ಮತ್ತು ಭುವಿಯ ಪ್ರೀತಿ ಎಂದಿಗೂ ಸೋಜಿಗವೇ... ಅವನದೋ ಸುರಿಸಿದಷ್ಟೂ ಮುಗಿಯದ  ಒಲವಿನ ಮಳೆ, ಅಷ್ಟನ್ನೂ ಬೊಗಸೆಯೊಡ್ಡಿ ಸ್ವೀಕರಿಸಿದರೂ ತೃಪ್ತಿಯಾಗದ ಇಳೆ. ಇವರಿಬ್ಬರ ಪ್ರಣಯಕ್ಕೆ ಶ್ರುತಿ ಹಿಡಿಯುವ ಗಾಳಿ ಕೆಲವೊಮ್ಮೆ ಅಸೂಯೆಯಿಂದ ರೊಚ್ಚಿಗೇಳುವುದು ಉಂಟು. ನೋಡಿ ಸಂಭ್ರಮಿಸಿ ತಲೆದೂಗುವ ತರುಲತೆ. ಪ್ರೀತಿಯೆಂದರೆ ಹಾಗೆ ಅಲ್ಲೊಂದು ಸಂತಸ, ಸಂಭ್ರಮ, ಉಲ್ಲಾಸ ಎಲ್ಲವೂ.. ಬೀಳುವ ಪ್ರತಿಯೊಂದು ಹನಿಗೂ  ನೆನಪಿನ ಮೊಳಕೆಯೊಡೆಯಿಸುವಷ್ಟು ಶಕ್ತಿ. ಪ್ರೀತಿಯಲ್ಲಿ ಮೀಯುವುದು ಸುಲಭವಲ್ಲ. ಗುಡುಗು, ಸಿಡಿಲು, ಚಳಿ, ಗಾಳಿ ,ಪ್ರವಾಹ ಎಲ್ಲವನ್ನೂ ಎದುರಿಸುತ್ತಲೇ ದೃಢವಾಗಿ ನಿಂತು ಮುಖವೊಡ್ಡಬೇಕು. ಎದೆಗೆ ಇಳಿಸಿಕೊಳ್ಳಬೇಕು. ತೊಯ್ಯಬೇಕು ಹಾಗಾದಾಗ ಮಾತ್ರ ಬದುಕು ಚಿಗುರೊಡೆಯುತ್ತದೆ. ಹಸಿರು ನಳನಳಿಸುತ್ತದೆ. ಬೇರು ಆಳಕ್ಕೆ ಇಳಿಯುತ್ತದೆ.

ಅವನ ಒಲವಧಾರೆಯೂ ಹಾಗೆ ಕೇವಲ ಸುರಿಯುವುದಿಲ್ಲ, ತೊಳೆಯುತ್ತದೆ ಕೂಡಾ... ಪ್ರೀತಿಗೆ ಮಾತ್ರ ಸ್ವಚ್ಛಗೊಳಿಸುವ ಶಕ್ತಿ . ಪ್ರೀತಿಯ ಎದುರು ಜೊಳ್ಳು ಎಂದಿಗೂ ನಿಲ್ಲುವುದಿಲ್ಲ, ಕೊಚ್ಚಿ ಹೋಗಲೇ ಬೇಕು. ಮನೆಯಂಗಳದ ಜೊತೆ ಮನದಂಗಳವನ್ನೂ ಸಾರಿಸುವ ಶಕ್ತಿ ಮಳೆಗೆ ಮಾತ್ರ. ಕೊಚ್ಚಿ ಹೋದಾಗಲೇ ಅರಿವಾಗೋದು ಪೇರಿಸಿಟ್ಟ ಕಸದ ರಾಶಿ. ಗೊತ್ತಿಲ್ಲದಂತೆ ಸೇರಿ ಹೋಗುವ ಕಸ ಕಡ್ಡಿಗಳು ಅದೆಷ್ಟು ಭಾರ, ಉಪದ್ರವಿ, ನಿರುಪಯುಕ್ತ ಅನ್ನೋದು ಅರ್ಥವಾಗೋದು ಮಳೆ ತೊಳೆದು ಮನ ಹಗುರವಾದಾಗಲೇ.. ಅಲ್ಲಿ ಮತ್ತೇನೋ ಚಿಗುರಿ ನಿಂತಾಗಲೇ. ಮನದಂಗಳದಲ್ಲಿ ಬಣ್ಣ ತುಂಬಿದ ಹೊಚ್ಹ ಹೊಸ ರಂಗೋಲಿ ನಕ್ಕಾಗಲೇ..

ಪ್ರೀತಿಗೆ ನಾನಾ ಅಭಿವ್ಯಕ್ತಿಯಾ.. ಮಳೆ ನೋಡುವಾಗ ಗೊಂದಲ. ಅವನು ಸುರಿಸುವುದು ಕಾಣಿಸುವುದಿಲ್ಲ. ಅನುಭವಕ್ಕೆ ವ್ಯಕ್ತವಷ್ಟೇ. ಪ್ರೀತಿ ಅದೃಶ್ಯ.. ಅದರ ಸ್ಪರ್ಶವಷ್ಟೇ ಭಾಗ್ಯ. ಪಡೆದುಕೊಳ್ಳುವ ಇಳೆ ಕಂಡರೂ ಸ್ವೀಕರಿಸುವ ರೀತಿ ಅವ್ಯಕ್ತ. ಹನಿ ಹನಿಯಾಗಿ ಜಿನುಗುವ ಪ್ರೀತಿ ನೇರವಾಗಿ ಎದೆಯಾಳಕ್ಕೆ ಇಳಿದು ತೇವವಾಗಿಸಿ ಬದುಕು ಚಿಗುರೊಡೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಮುಗಿಲು ಪಿಸುಗುಡುವ ಶಬ್ದ ಗುಡುಗಾಗಿ ಇಳೆಯ ಕಿವಿಯಲ್ಲಿ ಪಿಸುಗುಡುವ ಬಗೆಯೂ ಚೆಂದ. ಮತ್ತೆ ಕೆಲವು ಸಲ ಥೇಟ್ ಟಿಪಿಕಲ್ ಗಂಡನಂತೆ ಸಿಡಿ ಸಿಡಿದು ಸಿಡಿಲಾಗುವ ಮುಗಿಲು ರುದ್ರ ತಾಂಡವವಾಡುತ್ತದೆ. ಅದಕ್ಕೂ ಪೊಸೆಸಿವ್ನೆಸ್  ಹೊಮ್ಮಿದ ಪ್ರೀತಿ ಉಕ್ಕಿ ಹರಿದು ಎಲ್ಲವನ್ನೂ ಕೊಚ್ಚಿ ತೊಳೆದು ಹೋಗುವ ರಭಸಕ್ಕೆ ಇಳೆ ಕೆಂಪಾಗಿ ಕಣ್ಣಿರು ಸುರಿಸಿ ಪ್ರವಾಹವಾಗುತ್ತಾಳೆ. ಕೋಪ ಇಳಿಯುವುದು ಸುಲಭವಲ್ಲ, ಕೆಲವೊಮ್ಮೆ ಗಂಟೆಗಳು, ದಿನಗಳೂ ಆಗುವುದು ಉಂಟು. ಒಮ್ಮೆ ಕೋಪ ಇಳಿದ ಮೇಲೆ ಇಬ್ಬರೂ ಮತ್ತದೇ ನಗೆ ಚೆಲ್ಲಿದರೆ ಸೂರ್ಯನಿಗೂ ಭಯವಿಳಿದು ನಗೆಯ ಬೆಳಕು.

ಮಳೆ ಅರ್ಥವಾಗಬೇಕಾದರೆ, ದಕ್ಕಬೇಕಾದರೆ ಮುಗಿಲೂ ನೋಡಬಾರದು, ಇಳೆಯ ದ್ರುಷ್ಟಿಸಬಾರದು. ಮುಗಿಲು ಇಳೆಯ ನಡುವಿನ ಮಧ್ಯದ ಬಯಲು ಬೇಕು. ಬಯಲಿನಲ್ಲಷ್ಟೇ ನೋಟ ದಕ್ಕುತ್ತೆ, ವಿಶಾಲತೆ ಅರ್ಥವಾಗುತ್ತೆ. ಸರಳ ರೇಖೆಯಂತೆ ನೇರವಾಗಿ ಇಳಿಯೋ ಮಳೆ, ಸ್ಲ್ಯಾಂಟ್ ಲೈನ್ ನಂತೆ ಸುರಿಯೋ ಮಳೆ, ಒಂದೇ ದಿಕ್ಕಿನಿಂದ ಬಾರಿಸೋ ಮಳೆ, ಹನಿ ಹನಿಯಾಗಿ ಕಚಗುಳಿ ಇಡೋ ಮಳೆ, ದಬ್ಬಳದಂತೆ ಚುಚ್ಚಿ ಹಿತವಾದ ನೋವು ಉಂಟು ಮಾಡೋ ಮಳೆ, ಕೋಪಗೊಂಡ ಪ್ರೇಯಸಿ ರಪರಪನೆ ಬಾರಿಸುವಂತ ಮಳೆ, ರಚ್ಚೆಹಿಡಿದ ಮಗುವಿನಂತೆ ಒಂದೇ ಸಮನೆ ಸುರಿಯೋ ಮಳೆ.. ಪ್ರೀತಿಗೆ ಅದೆಷ್ಟು ರೂಪ. ಭಾವ ನೂರು ಗುರಿ ಮಾತ್ರ ಒಂದೇ ಜೀವಂತಿಕೆ ತುಂಬೋದು....

ಮಳೆ ಬರುವಾಗ ಗಮನಿಸಿ. ಅತ್ತ ಪೂರ್ಣ ಬೆಳಕೂ ಅಲ್ಲದ, ಇತ್ತ ಕತ್ತಲೆಯೂ ಅಲ್ಲದ ಮಧ್ಯದ ಸ್ಥಿತಿ. ಅತಿಯಾದ ಬೆಳಕು, ಕತ್ತಲೆ ಎರಡೂ ಕಣ್ಣಿನ ನೋಟವನ್ನು ಮಸುಕಾಗಿಸುತ್ತದೆ. ಎದುರಿನ ಚಿತ್ರಣವನ್ನು ಸರಿಯಾಗಿ ಕಟ್ಟಿ ಕೊಡಲು ಸೋಲುತ್ತದೆ. ಬದುಕು ಮಳೆ ಎರಡೂ ಅರ್ಥವಾಗಬೇಕಾದರೆ ಬೆಳಕು ಹೀಗೆ ಹಿತವಾಗಿರಬೇಕು. ಕಣ್ಣು ಚುಚ್ಚದಂತೆ, ಕತ್ತಲಾಗಿಸದಂತೆ. ಈ ಹದ ಕೇವಲ ಮಳೆಗಷ್ಟೇ ಕಟ್ಟಿಕೊಡಲು ಸಾದ್ಯ.. ಪ್ರೀತಿಯೆಂದರೆ ಹಾಗೆ ಅದಕ್ಕೆ ಜೀವಂತಿಕೆ ತುಂಬಿಸುವುದಷ್ಟೇ ಗೊತ್ತು. ಅಬ್ಬರದ ನಗು, ವೇದನೆಯ ಅಳುವಿಗಿಂತ ಮುಗುಳುನಗೆ ಅಪ್ತವೆನಿಸಿದ ಹಾಗೆ. ತೋಯ್ದು ತೊಪ್ಪೆಯಾದ ಗುಬ್ಬಚ್ಚಿಯೂ ಮಳೆಯನ್ನ ನೋಡುತ್ತಲೇ ಇರುತ್ತದೆ. ಕಣ್ಣು ಮಿಟುಕಿಸದಂತೆ, ದೃಷ್ಟಿ ತಪ್ಪದಂತೆ. ಮಳೆ ಗಮನಿಸುವುದು ಧ್ಯಾನವೇ...

ಹೀಗೆ ಹುಚ್ಚು ಹಿಡಿದಂತೆ ಸುರಿಯುವ ಮಳೆಯಲ್ಲಿ ಜಲ ಒಡೆಯುವುದು. ಉಕ್ಕಿ ಹರಿಯುವುದು. ಭಾವಗಳು ಹಾಗೇ ತಾನೇ.. ಹಾಗೆ ಉಕ್ಕಿ ಹರಿಯುವ ಜಲ ಗಮನಿಸಿ.. ಶುಭ್ರವಾದ ನೀರು ನಿಧಾನಕ್ಕೆ ತನ್ನದೇ ಗತಿಯಲ್ಲಿ ಹರಿಯುತ್ತಿರುತ್ತದೆ. ಎಲ್ಲಾ ಕಲ್ಮಶಗಳ ಮಧ್ಯದಲ್ಲೂ ತಣ್ಣಗೆ ತನ್ನ ಶುಭ್ರತೆ ಉಳಿಸಿಕೊಂಡು ಹರಿಯುತ್ತಿರುತ್ತದೆ. ಕಾಲಿಟ್ಟವರಿಗೆ ಸಣ್ಣ ಕಚಗುಳಿಯಿಡುತ್ತಾ, ಮನಸ್ಸು ಮುದಗೊಳಿಸುತ್ತಾ, ನಿಶಬ್ಧವಾಗಿ ಮುಂದೆ ಸಾಗುತ್ತಿರುತ್ತದೆ. ಎಲ್ಲಿಯೂ ನಿಲ್ಲುವುದಿಲ್ಲ. ಮೋಹಕ್ಕೆ ಒಳಗಾಗುವುದಿಲ್ಲ. ಹಾಗಾಗಿ ನಿರೀಕ್ಷೆಯಿಲ್ಲ. ಕೊಡುವುದಷ್ಟೇ ಕೆಲಸ. ಹಾಗಾಗಿ ಅದು ನಿರಾಳ ನಿರಭ್ರ ಧಾರ

ಹೀಗೆ ಒಂದೇ ಸಮನೆ ಸುರಿಯುವ ಮಳೆ ವಾರಗಟ್ಟಲೆ ಸುರಿದರೆ ಉಹೂ ನಿಧಾನಕ್ಕೆ ರೇಜಿಗೆ ಹುಟ್ಟಲು ಶುರುವಾಗುತ್ತದೆ. ಪ್ರೀತಿಯೂ ಬೋರ್ ಅನ್ನಿಸುತ್ತದಾ... ಏಕತಾನತೆ ಕಿರಿಕಿರಿಯಾಗುತ್ತಾ... ಸದಾ ಕಾಲ ಸುಲಭವಾಗಿ ದಕ್ಕಿದ್ದು ಯಾವತ್ತೂ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಅದಕ್ಕೂ ಒಂದು ವಿರಾಮ ಬೇಕು. ಒಂದು ತೆಳುವಾದ ಅಂತರ ನಡುವಿರಬೇಕು. ಬಯಸಿ ಬಯಸಿ ಪಡೆಯುವಂತಿರಬೇಕು. ಅದಕ್ಕೆ ನೋಡಿ ಮಳೆಗೂ ಒಂದು ಕಾಲವಿದೆ. ಅದು ಬೇಸರಬರುವ ವೇಳಗೆ ಮುನ್ನ ಮಾಯವಾಗುತ್ತದೆ. ಮತ್ತೆ ಬಿರು ಬಿಸಿಲಿಗೆ ಬೆಂಡಾಗಿ ಜೀವ ಕಾದು ನಿರೀಕ್ಷೆ ಮುಗಿಲು ಮುಟ್ಟಿದಾಗ ಮಾತ್ರ ಅದು ಹನಿಯುತ್ತದೆ.ಪ್ರೀತಿಯೂ ಹೀಗಿದ್ದಾಗ ಮಾತ್ರ ಚಿಗುರುತ್ತದೆ ಬದುಕು, ಇಲ್ಲವಾದಲ್ಲಿ ಕೊಳೆಯುತ್ತದೆ.

ಮಳೆಯ ಹನಿ ಹನಿಯಲ್ಲೂ ಪಾಠವಿದೆ. ಪ್ರತಿ ಬಿಂದುವಿನಲ್ಲೂ ಜೀವಂತಿಕೆಯಿದೆ. ಸುರಿಯವ ಪರಿಯಲ್ಲಿ ಸೊಗಸಿದೆ, ತೆರೆದುಕೊಳ್ಳುವ ಇಳೆಯ ನಡೆಯಲ್ಲಿ ಸಮರ್ಪಣೆಯಿದೆ. ಹರಿಯುವಲ್ಲಿ ಲಾಸ್ಯವಿದೆ. ತೊಡೆಯುವುದರಲ್ಲಿ ನಿರ್ಲಿಪ್ತತೆಯಿದೆ. ಜಿನುಗುವ ಒಲವು, ಉಸಿರಲ್ಲ್ಲಿ ಹಸಿರು, ಕೊಡುವಲ್ಲಿ ಹಮ್ಮಿಲ್ಲ, ಪಡೆಯುವಲ್ಲಿ ದೀನತೆಯಿಲ್ಲ. ಕೊಟ್ಟು ಪಡೆದುಕೊಳ್ಳುವ ರೀತಿಯಲ್ಲಿ ಜೀವಂತಿಕೆ ಮಾತ್ರ ಚಿಮ್ಮುತ್ತಿರುತ್ತದೆ. ಬದುಕಿಸುವ ಶಕ್ತಿ ಜಗತ್ತಿನಲ್ಲಿ ಪ್ರೀತಿಗೆ ಮಾತ್ರವಲ್ಲವೆ.

ಮಳೆ ಸುರಿಯುತ್ತಲೇ ಇದೆ ಒಳಗೂ ಹೊರಗೂ...
ಹನಿ ಹನಿಯಾಗಿ... ಇಳಿಯುತ್ತಿದೆ ಎದೆಯೊಳಗೆ, ಭುವಿಯೊಳಗೆ...
ಮೊಳಕೆ ಕ್ಷಣ ಎಣಿಸುತ್ತಿದೆ ನಸು ನಗಲು....





Comments

  1. 😍😍😍😍😍😍😍😍😍
    Bhaavane Matty Narration ondakkinta ondu tumba chennagide... Nanna manassanne neevu baredante anistu... Manassige anisiddannu baraha roopa kke ishtu chennagi ilisiddakke thanks...
    Nimma akshara da male inda Manasella hasiraaytu...

    ReplyDelete

Post a Comment

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...