ರೇಡಿಯೋ


ರಾತ್ರಿಯಿಡಿ ತಬ್ಬಿ ಮಲಗಿದ್ದರೂ ಬೆಳಿಗ್ಗೆ ಅವಳು ಏಳದೇ ನಾನೂ ಏಳುವ ಹಾಗಿಲ್ಲ ಅನ್ನೋ ಅಹಿಯ ರೂಲ್ ಅವಳು ಸ್ಕೂಲ್ ಗೆ ಹೋಗುವವರೆಗೂ ನಡೆದಿತ್ತು. ಈಗ ಅಮ್ಮ ಅವಳ ಟಿಫನ್ ಬಾಕ್ಸ್ ರೆಡಿ ಮಾಡ ಬೇಕಿರುವುದರಿಂದ ಏಳಲು ವಿನಾಯತಿ ದೊರಕಿದರೂ ಎಬ್ಬಿಸುವ ಮುನ್ನ ಹತ್ತು ನಿಮಿಷವಾದರೂ ಮತ್ತೆ ಅವಳ ಜೊತೆ ಮಲಗಿ ಮುದ್ದು ಮಾಡಿ, ಮೈಮೇಲೆ ಹತ್ತಿ ಕರಡಿಯಂತೆ ಅವಚಿಕೊಂಡು ಎದ್ದ ಮೇಲೆ ಒಂದು ಬಿಗಿ ಅಪ್ಪುಗೆ ಸಿಕ್ಕಿದರೆ ಮಾತ್ರ  ಅವಳಿಗೆ ನೆಮ್ಮದಿ. ಇಲ್ಲವಾದಲ್ಲಿ ಇಡಿ ದಿನ ಕಿರಿಕಿರಿ ತಪ್ಪಿದ್ದಲ್ಲ. ರಜೆ ಇದ್ದ ದಿನ ಅದೆಷ್ಟೇ ಕಷ್ಟವಾದರೂ ಅವಳು ಏಳೋಣ ಆಯ್ತು ಅನ್ನುವವರೆಗೂ ಹಾಸಿಗೆ ಬಿಡುವ ಹಾಗಿಲ್ಲ. ಅಪ್ಪಿ ತಪ್ಪಿ ರೂಲ್ ಮುರಿದರೆ ಆದರೆ ಅವತ್ತು ಮನೆಯಲ್ಲಿ ಮೂರನೇ ಮಹಾಯುದ್ಧ.

ಆಗೆಲ್ಲಾ ನನ್ನ ಬಾಲ್ಯ ನೆನಪಾಗುತ್ತೆ. ಬೆಳಿಗ್ಗೆ ರೇಡಿಯೋ ಆನ್ ಆದರೆ ಅಲಾರಂ ಅನ್ನೋದಕ್ಕಿಂತ ಸೈರನ್ ಇದ್ದಂತೆ. ಹಾಸಿಗೆಯನ್ನು ಮಡಚಿ ಎದ್ದು ಹೊರಡಲೇ ಬೇಕು. ಬೈಯೋದು ಇರಲಿ ಇನ್ನೂ ಎದ್ದಿಲ್ವಾ ಅನ್ನೋ ಗಡಸು ದನಿಯ ಭಯಕ್ಕೆ ಮಳೆಯಾಗಲಿ, ಚಳಿಯಾಗಲಿ ಎದ್ದು ಬಚ್ಚಲಿನತ್ತ ನಡೆಯುತ್ತಿದ್ದೆವು. ಸೂರ್ಯ ಉದಯಿಸಿದ ಮೇಲೆ ಹಾಸಿಗೆಯ ಮೇಲೆ ಬಿದ್ದಿರುವುದು ಅನಿಷ್ಟ ಅನ್ನೋ ನಂಬಿಕೆ ಅದೆಷ್ಟು ಕೋಪ ಉಕ್ಕಿಸುತ್ತಿತ್ತೆಂದರೆ ಸೂರ್ಯನಿಗೆ ಸಹಸ್ರನಾಮ ಮಾಡುತ್ತಲೇ ಸ್ವಾಗತಿಸುತ್ತಿದ್ದೆವು. ಯಾರಿಗೂ ಇಲ್ಲದ ಸಮಯಪಾಲನೆ ಇವನಿಗೆ, ಒಂಚೂರು ಲೇಟ್ ಆಗಿ ಬಂದಿದ್ರೆ ಏನಾಗ್ತಾ ಇತ್ತು ಅಂತ ಬೈದು ಮುಗಿಸುವ ವೇಳಗೆ ಬೈಯಬೇಕಾಗಿದ್ದು ಈ ರೇಡಿಯೋ ದವರಿಗೆ ಹೊತ್ತಿಗೆ ಮುಂಚೆ ಬಂದು ಬಾಗಿಲು ತೆಗಿತಾರೆ ಅನ್ನೋದು ನೆನಪಾಗಿ ಅಡುಗೆ ಮನೆ ಕಡೆ ನಡೆದು ಕಾಫಿ ಲೋಟ ಹುಡುಕುವುದರಲ್ಲಿ ಬೈಯುವುದು ಮರೆತೇ ಹೋಗುತಿತ್ತು.

ಈ ರೇಡಿಯೋ ಕೂಡಾ ಅಷ್ಟೇ ಚಳಿ, ಮಳೆ ಗಾಳಿ ಯಾವುದೂ ಲೆಕ್ಕಿಸದೆ ಆರು ಘಂಟೆಗೆ ಎದ್ದು ಬಿಡುತಿತ್ತು. ವಂದೇಮಾತರಂ ನಿಂದ ಅದರ ಬೆಳಗು ಆರಂಭವಾಗುತಿತ್ತು. ಆಮೇಲೆ ಗೀತಾರಾಧನ. ಹಾಸಿಗೆಯಿಂದ ನಮ್ಮ ಅವರೋಹಣ. ಗಡಿಯಾರದ ಹಂಗೇ ಇಲ್ಲದಂತೆ ನಮ್ಮ ದೈನಂದಿನ ಕಾರ್ಯಗಳನ್ನು ಒಂದು ಪುಟ್ಟ ರೇಡಿಯೋ ಹೇಗೆ ನಿಯಂತ್ರಿಸುತಿತ್ತು ಅನ್ನೋದು ಆಲೋಚಿಸಿದಾಗ ಸಣ್ಣ ನಗು ಬೆರಗು ಎರಡೂ. ಮುಖ ತೊಳೆದು ಓದಲು ಕೂತರೆ ಪ್ರದೇಶ ಸಮಾಚಾರ ಬರುವವರೆಗೂ ನಾಟಕ ನಡೆಯುತ್ತಿತ್ತು.

ಆಮೇಲೆ ಪೂಜೆ ಗೆ ಹೂವು ಬಿಡಿಸಿ ತಂದಿಟ್ಟು, ಕೊಟ್ಟಿಗೆಯ ಕಡೆಗೆ ಒಮ್ಮೆ ದೃಷ್ಟಿ ಹಾಯಿಸಿ, ಬಚ್ಚಲೊಲೆಯ ಬೆಂಕಿ ಮುಂದೆ ದೂಡುವಷ್ಟರಲ್ಲಿ 7.35 ಇದೀಗ ವಾರ್ತಾ ಪ್ರಸಾರ ಅನ್ನೋ ದ್ವನಿ ಆರಂಭವಾಗಿರುತ್ತಿತ್ತು. ಅದು ಅಜ್ಜ ಹಾಗೂ ಮಾವನ ತಿಂಡಿಯ ಸಮಯ. ಸಂಪಗೋಡಿನ ಆ ಮನೆಯಲ್ಲಿ ಕರೆಂಟ್ ಇನ್ನೂ ಕಾಲಿಟ್ಟಿರಿದ ಕಾರಣ ಚಿಮಣಿ ಇಡಲು ಒಂದು ಗೂಡು ಮಾಡಿದ್ದರು. ಆ ಗೂಡಿನಲ್ಲಿ ಇಣುಕಿದರೆ ಅಡುಗೆಮನೆಯ ಪಕ್ಷಿನೋಟ ಕಾಣಿಸುತ್ತಿತ್ತು. ಅಲ್ಲಿ ಬಗ್ಗಿ ಅಜ್ಜ ಮಾವ ತಿಂಡಿ ತಿಂದು ಹೋಗುವುದನ್ನೇ ಚಾತಕ ಪಕ್ಷಿಯಂತೆ ಕಾದು ಅವರು ಅಲ್ಲಿಂದ ಹೋಗಿ ಬಚ್ಚಲಲ್ಲಿ ಕೈ ತೊಳೆಯುವ ಮೊದಲೇ ತಟ್ಟೆ ಹಿಡಿದು ಆಸೀನರಾಗುತ್ತಿದ್ದೆವು.

 ಹಾಗೆ ತಿಂಡಿ ತಿನ್ನಲು ಕುಳಿತರೆ ಅದು ಮುಗಿಯುವಾಗ ಚಿತ್ರಗೀತೆಗಳು ಮುಗಿದು ಇಂಗ್ಲಿಷ್ಅ ವಾರ್ತೆ ಬಂದರೂ ನಮ್ಮ ತಿಂಡಿ ಮುಗಿಯುತ್ತಿರಲಿಲ್ಲ. ವಾರ್ತೆ ಬಂತು ರೇಡಿಯೋ ಆಫ್  ಮಾಡಿ ಅನ್ನೋ ಮಾವನ ಅಶರೀರವಾಣಿ ಕೇಳುತ್ತಿದ್ದ ಹಾಗೆ ದಡಬಡಿಸಿ ಏಳುತ್ತಿದ್ದೆವು. ವಾರ್ತೆ ಬಂದಾಯ್ತಾ ಅಂತ ಗಡಿಬಿಡಿಯಲ್ಲಿ ಸ್ನಾನ ಮುಗಿಸಿ ಬರುವಷ್ಟರಲ್ಲಿ  ಚಿತ್ರಗೀತೆಗಳು ಮುಗಿಯುವ ಸಮಯ. ದಡಬಡನೆ ತಿಂಡಿ ತಿಂದು, ರೆಡಿಯಾಗುವ ವೇಳೆಗೆ ಎಂಟು ಗಂಟೆಯ  ಇಂಗ್ಲಿಷ್ ವಾರ್ತೆಗಳು ಶುರುವಾಗುವ ಹೊತ್ತು. ಚಪ್ಪಲಿ ಧರಿಸಿ ಒಂದೇ ಉಸಿರಿಗೆ ಓಡಿದರೆ ಅಬ್ಬಾ ಇನ್ನೂ ಬಸ್ ಬಂದಿಲ್ಲ ಅನ್ನುವ ನಿರಾಳ. ರೇಡಿಯೋ ಆಫ್ ಮಾಡುವ ಸಮಯ. ಅಲ್ಲಿಂದ ಮನೆಯವರಿಗೆ ಕೆಲಸದ ಬ್ಯುಸಿಯಾದರೆ ರೇಡಿಯೋ ಗೆ ವಿಶ್ರಾಂತಿಯ ಹೊತ್ತು.

ಮಧ್ಯಾನದ ವಾರ್ತೆ ಶುರುವಾಯ್ತು ಅಂದರೆ ಅದು ತಟ್ಟೆ ಇಡುವ ಸಮಯ. ಊಟ ಮುಗಿಸಿ ಬರುತ್ತಿದ್ದಂತೆ ಚಿತ್ರಗೀತೆಗಳ ಪ್ರಸಾರ ಆರಂಭವಾಗಿರುತಿತ್ತು. ಯಾರ್ಯಾರು ಪತ್ರ ಬರೆದಿದ್ದಾರೆ ಯಾವ ಹಾಡು ಅಂತ ಕೇಳಿಸಿಕೊಳ್ಳುತ್ತಲೇ ಈ ಹಾಡು ಹಾಕಿ ಅಂತ ಪತ್ರ ಬರೀಬೇಕು ಅನ್ನೋ ಯೋಜನೆಗಳು ಶುರುವಾಗಿ ಅವೂ ಪಂಚವಾರ್ಷಿಕ ಯೋಜನೆಗಳ ಸಾಲಿಗೆ ಸೇರ್ಪಡೆಯಾಗುತ್ತಿದ್ದವು. ಮ್ಯೂಸಿಕ್ ಶುರುವಾಗುತ್ತಿದ್ದಂತೆ ಇದು ಯಾವ ಹಾಡು ಹೇಳು ನೋಡೋಣ ಅನ್ನೋ ರಸಪ್ರಶ್ನೆ ಕಾರ್ಯಕ್ರಮ ಗೆದ್ದವರು ಬೀಗುವ, ಸೋತವರು ಸಣ್ಣ ಮುಖ ಮಾಡುವ ಮತ್ತೆ ಮರೆತು ಮುಂದಿನ ಹಾಡಿಗೆ ತಯಾರಾಗುವ ಪ್ರಕ್ರಿಯೆ ಸಹಜವಾಗಿಯೇ ನಡೆಯುತ್ತಿತ್ತು.ಸೋಲು ಗೆಲುವು ಸಹಜ ಸಂಗತಿಗಳು ಅನ್ನೋದು ಆಗ ಅರ್ಥವಾದ ಹಾಗೆ ಈಗ್ಯಾಕೆ ಆಗೋಲ್ಲ ಅನ್ನೋದು ಉತ್ತರವಿಲ್ಲದ ಪ್ರಶ್ನೆ. ಅದೆಷ್ಟು ಹಾಡುಗಳು ಕಂಠಪಾಠವಾಗಿದ್ದವೋ ನೆನಪಿಟ್ಟವರಾರು..

ಹಾಡು ಮುಗಿದು ಇಂಗ್ಲಿಷ್ ವಾರ್ತೆ ಶುರುವಾಗುವ ಮೊದಲೇ ಇವತ್ತು ಯಾರು ಓದ್ತಾರೆ ಅಂತ ಗೆಸ್ ಮಾಡಿ ಕನ್ಫರ್ಮ್ ಮಾಡ್ಕೊಂಡ್ ಮೇಲೆಯೇ ರೇಡಿಯೋ ಗೆ ವಿಶ್ರಾಂತಿ. ರೇಡಿಯೋ ಮಲಗುತ್ತಿದ್ದಂತೆ ಮನೆಯವರೂ ಮಲಗುತ್ತಿದ್ದರು. ಸದ್ದು ಮಾಡಿ ಬೈಸಿಕೊಳ್ಳುವ ಕರ್ಮ ಯಾಕೆ ಅಂತ ನಾವೂ ಪುರ ಸಂಚಾರಕ್ಕೆ ಹೊರಡುತ್ತಿದ್ದೆವು.  ರಾತ್ರಿಯೆಂದರೆ ತುಂಬಿದ ಮೌನ. ಸಕಲ ಜೀವಿಗಳೂ ಮನೆಯೊಳಗೆ ಸೇರುವ ಹೊತ್ತು. ಮಧ್ಯಾನವೆಂದರೆ ಹಾಗಲ್ಲ ಅಲ್ಲಿ ಖಾಲಿತನ ತುಂಬಿರುತ್ತದೆ. ಖಾಲಿತನ ಹುಟ್ಟಿಸುವ ಮೌನ ಅನುಭವಿಸುವುದು ಸ್ವಲ್ಪ ಕಷ್ಟವೇ. ಹಾಗಾಗಿ ಇವತ್ತಿಗೂ ನಡು ಮಧ್ಯಾನದ ಮೌನ ಹೆಚ್ಚು ಕಾಡುತ್ತದೆ.

ಸಂಜೆಯ ಮತ್ತೆ ಇಡಿ ವಾತಾವರಣದಲ್ಲಿ ಗೌಜು, ಗದ್ದಲಗಳು, ಸರಭರ ಸದ್ದುಗಳು ತಮ್ಮ ಹಿಮ್ಮೇಳ ಕೊಟ್ಟು ವಾತಾವರಣವನ್ನು ರಂಗೆರಿಸುತ್ತದೆ. ಗದ್ದೆಯ, ತೋಟದ ಕೆಲಸ ಮುಗಿಸಿ ಒಳಗೆ ಬರುತ್ತಲೇ ರೇಡಿಯೋ ದ ಕಿವಿ ಹಿಂಡಿಯೇ ಮುಂದಿನ ಕೆಲಸದತ್ತ ಗಮನ ಹರಿಸುವುದು ಸಾಮಾನ್ಯವಾದ ಸಂಗತಿ. ಹಾಗಾಗಿ ಉಳಿದೆಲ್ಲ ಸದ್ದುಗಳ ಜೊತೆಗೆ ರೇಡಿಯೋ ಸಹ ಪ್ರತಿಸ್ಪರ್ಧಿಸುತ್ತದೆ. ಕೃಷಿ ಕಾರ್ಯಕ್ರಮ ಮುಗಿಯಿತು ಅಂದ್ರೆ ಅದು ಭಜನೆಯ ಸಮಯ. ದೇವರ ಮುಂದೆ ದೀಪ ಹೊತ್ತಿಸಿ ಬಾಯಿ ದಿನನಿತ್ಯದಂತೆ ಭಜನೆ ಮಾಡುತ್ತಿದ್ದರೆ ಕಿವಿ ಮಾತ್ರ ರೇಡಿಯೋ ದ ಕಡೆಗೆ ವಾಲಿರುತಿತ್ತು. ಅಭ್ಯಾಸವಾದ ಮೇಲೆ ಹೆಚ್ಚು ಗಮನ ಕೊಡಬೇಕಿಲ್ಲ. ಹಾಗಾಗಿ ಬಾಯಿ ಯಾಂತ್ರಿಕವಾಗಿ ಹಾಡುತಿರುತಿತ್ತು, ಕಿವಿ ಎಂದಿನಂತೆ ರೇಡಿಯೋ.. ರಾತ್ರಿ 7.35 ರ ವಾರ್ತೆ ಬರುವ ಸಮಯ ಆಯ್ತು ಅಂದ್ರೆ ಮಂಗಳ ಹಾಡುವ ಸಮಯ. ಇದ್ದಬದ್ದ ಶಕ್ತಿಯನ್ನೆಲ್ಲಾ ಸೇರಿಸಿ ಮಂಗಳ ಗೀತೆ ಜೋರಾಗಿ ಹಾಡಿದರೆ ಅದು ಅಡುಗೆ ಮನೆಗೆ ತಲುಪಿ ತಟ್ಟೆಗಳು ಸಾಲಾಗಿ ಕೂರುವ  ಹೊತ್ತು.

ಊಟ ಮುಗಿಸಿ ಹಾಸಿಗೆ ಹಾಸಿ ಯುವವಾಣಿ ಕೇಳುತ್ತಿದ್ದರೆ ಅದ್ಯಾವಾಗ ನಿದಿರಾ ದೇವಿ ಬಂದು ಅಪ್ಪುತ್ತಿದ್ದಳೋ ಯಾರಿಗೆ ಗೊತ್ತು. ಆದರೆ ಇಡಿ ಬದುಕನ್ನ ರೇಡಿಯೋ ಆವರಿಸಿರುತ್ತಿದ್ದದಂತೂ ಹೌದು. ಯಾವುದನ್ನು ಮರೆತರು ಶೆಲ್ ಸ್ಟಾಕ್ ಇಡುವುದು ಮಾತ್ರ ಮರೆಯುತ್ತಿರಲಿಲ್ಲ. ರೇಡಿಯೋ ನಿಂತರೆ ಬದುಕೇ ನಿಂತಿತೆನೋ ಅನ್ನುವಷ್ಟು ರೇಡಿಯೋ ಬದುಕನ್ನ ಆಕ್ರಮಿಸಿ ರಾಜ್ಯಭಾರ ಮಾಡುತಿತ್ತು. ಮನೋರಂಜನೆ, ಮಾಹಿತಿ, ಸುದ್ದಿ ದೊರಕುವ ಏಕೈಕ ಮಾಧ್ಯಮ ಅದಾಗಿದ್ದರೂ ಎಲ್ಲಾ ಸಮಯದಲ್ಲೂ ಎಲ್ಲರೂ ಒಟ್ಟಿಗೆ ಕೂತು ಕೇಳುವಂತ ಆರೋಗ್ಯಕರ ಹಾಗು ಪ್ರಬುದ್ಧ ಕಾರ್ಯಕ್ರಮಗಳು ಮಾತ್ರ ಅದರಲ್ಲಿ ಪ್ರಸಾರವಾಗುತಿತ್ತು.

ಬದುಕಿನ ಸಂಗಾತಿ, ಗಡಿಯಾರ, ಗೆಳೆಯ, ಎಲ್ಲವೂ ಆಗಿ ಏಕಚಕ್ರಾಧಿಪತ್ಯ ಸ್ಥಾಪಿಸಿ ಮೆರೆಯುತಿದ್ದ ರೇಡಿಯೋ ಅಂತ ರೇಡಿಯೋ ಕೂಡ ಕಾಲನ ಹೊಡೆತಕ್ಕೆ ಸಿಲುಕಿ ಅವಶೇಷವಾಗಿ ಯಾವುದೂ ಶಾಶ್ವತವಲ್ಲ ಅನ್ನೋ ಸತ್ಯವನ್ನು ಸಾರುತ್ತಾ ಮರೆಯಾಗಿದೆ. ಸ್ಮಾರಕವಾಗಿ ಗತವೈಭವನ್ನು ಸಾರುತ್ತಾ ಮನೆಯ ಮೂಲೆಯಲ್ಲಿ ಜಾಗ ಪಡೆದಿದೆ. ಈಗಲೂ ಊರಿಗೆ ಹೋದಾಗ ಅದನ್ನೊಮ್ಮೆ ನೇವರಿಸಿ ಮತ್ತೊಮ್ಮೆ ಬಾಲ್ಯಕ್ಕೆ ಮರಳುತ್ತೇನೆ. ಮುಂದೊಂದು ದಿನ ನಾನೂ ನಿನ್ನ ಹಾಗೆ ಆಗುತ್ತೇನೆ ಅಂತ ಸಮಾಧಾನ ಮಾಡುತ್ತಲೇ ಮೌನವಾಗುತ್ತೇನೆ. ಉಫ್ ಎಂದು ಊದಿದಾಗ ಹಾರಿದ್ದು ಧೂಳಾ ನನ್ನ ಅಹಂ ಆ ಅಂತ ಗೊಂದಲಕ್ಕೆ ಬೀಳುತ್ತೇನೆ. ಉತ್ತರ ಕೊಡಬೇಕಾದ ರೇಡಿಯೋ ದಿವ್ಯ ಮೌನದಲ್ಲಿದೆ. ಪ್ರಶ್ನಿಸುವ ನಾನು ಮೌನವಾಗುವುದನ್ನೇ ಕಾಯುತ್ತಿದೆಯಾ ಎಂಬ ಭಯ ನನ್ನನ್ನು ಅಲ್ಲಿಂದ ಸರಿಯುವ ಹಾಗೆ ಮಾಡುತ್ತದೆ.

ಬದುಕು ಸದಾ ಚಲಿಸುವ ಬಂಡಿ,
ಅದು ನಿಲ್ಲಲಾರದು, ನಿಲ್ಲಬಾರದು.
ಚಲನೆ ನಿಂತ ದಿನ ಬದುಕು
ಮತ್ತೆ ಬರಲಾರದು...  

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...