ಗೌರೀ
ಹೊಯ್ಯುವ ಮಳೆಗೂ ತುಸು ಸುಧಾರಿಸಿಕೊಳ್ಳುವ ಹೊತ್ತದು. ಒಂದೇ ಸಮನೆ ಸುರಿದರೆ ಮಳೆಯಾದರೂ, ಮಾತಾದಾರೂ ಕೊನೆಗೆ ಪ್ರೀತಿಯಾದರೂ ರೇಜಿಗೆ ಹುಟ್ಟಿಸುತ್ತದೆ. ನಿಂತರೆ ಸಾಕು ಅನ್ನಿಸುತ್ತದೆ. ಹಾಗಾಗಿ ಅದಕ್ಕೂ ಮೊದಲೇ ಮಳೆ ನಿಧಾನಕ್ಕೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತದೆ. ಆದೊಮ್ಮೆ ಈಗೊಮ್ಮೆ ಪುಟ್ಟ ಮಳೆ, ನಡುನಡುವೆ ತುಸು ಬಿಸಿಲು, ಮತ್ತೆ ಸಣ್ಣನೆಯ ಮೋಡ, ಮಬ್ಬಿಗಿಂತ ಸ್ವಲ್ಪ ಪ್ರಕಾಶಮಾನವಾದ ಬೆಳಕು ಇದು ಭಾದ್ರಪದದ ಲಕ್ಷಣ. ಬಿಡುವು ಬರೀ ಮಳೆಗಷ್ಟೇನಾ ಎಂದರೆ ಅಲ್ಲ, ಕೆಲಸಕ್ಕೂ ಸ್ವಲ್ಪ ವಿರಾಮ. ನಾಟಿ, ಕಳೆ ಅಂಚು ಕಡಿಯುವುದು ಎಂಬೆಲ್ಲಾ ಕೆಲಸಗಳು ಮುಗಿದು, ಪೈರೂ ದಟ್ಟ ಹಸಿರಿಗೆ ತಿರುಗುವ ಹೊತ್ತು, ಭೋರ್ಗೆರೆದು ಅಬ್ಬರಿಸಿ ಉಕ್ಕುತ್ತಾ ಕೆಂಪು ಕೆಂಪಾಗಿ ಹರಿವ ಹಳ್ಳ, ನದಿಗಳೂ ಮೂಲ ಸ್ವರೂಪಕ್ಕೆ ಮರಳುವ ಹಣಿಯಾಗುವ ಹೊತ್ತು, ಗಿಡಗಳು ಮೈತುಂಬಾ ಹೂ ಬಿಟ್ಟು ಇಡೀ ಪ್ರಕೃತಿಗೆ ಬಣ್ಣ ಬಳಿಯುವ ಸಮಯ, ಪ್ರಕೃತಿಯೇ ಸುಧಾರಿಸಿಕೊಳ್ಳುತ್ತಿದೆಯೇನೋ ಎಂದು ಕಾಣುವ ಹೊತ್ತಿನಲ್ಲಿ ನಡುಮನೆಯ ಗೋಡೆಗೆ ಒರಗಿ ಕಾಲುಚಾಚಿ ಕುಳಿತರೆ ಬಿಸಿಲುಕೋಲಿನ ಹಾಗೆ ಪಕ್ಕನೆ ಮಿಂಚುವ ತವರಿನ ನೆನಪು, ಹೋಗುವ ಹಂಬಲ, ಅಪ್ಪ ಬರುವುದು ಕಾಯುವ ನಿರೀಕ್ಷೆ. ಪ್ರತಿ ಹೆಣ್ಣಿಗೂ ತವರು ಕಾಡುವ ಮಾಯೆ, ಮನುಷ್ಯರ ಪಾಡು ಹಾಗಿರಲಿ ಅಂತ ಪರಶಿವನ ಪತ್ನಿ ಗೌರಿಯನ್ನೇ ತವರಿನ ಮೋಹ ಬಿಟ್ಟಿಲ್ಲ. ಜಗತ್ತೇ ಹೀಗೆ ಸುಧಾರಿಸಿಕೊಳ್ಳುವ ಹೊತ್ತಿಗೆ ಬೆಳ್ಳಂಬೆಳಿಗ್ಗೆ ತವರಿನ ನೆನಪಾಗಿ ಎದ್ದು ಹೊರಟಳಂ