ಸಿದ್ಧಾರ್ಥ್..(ಹೊಸದಿಗಂತ 02.08.19)

ಮೊನ್ನೆಯಿನ್ನೂ ಬಂದ ಬೆಚ್ಚಿ ಬೀಳಿಸುವ ಸುದ್ದಿ ದಟ್ಟ ವಿಷಾದ ತುಂಬಿ ಹೋಗಿದೆ. ಸಾವು ಅಂದರೆ ಹಾಗೆ ಖಾಲಿತನ, ಶೂನ್ಯತನ. ಆ ಕ್ಷಣಕ್ಕೆ ಎಲ್ಲವೂ ಕ್ಷಣಿಕ ಅನ್ನಿಸುವ, ಈ ಬದುಕೇ ಇಷ್ಟೇ ಅನ್ನಿಸುವ ಹಾಗೆ ಮಾಡುತ್ತದೆ. ಯಾಕೆ ಬೇಕು ಹೋರಾಟ ಅನ್ನಿಸುತ್ತದೆ. ಹಾಗಾದರೆ ಈ ಭಾವ ನಿರಂತರವಾ ಅಂದರೆ ಅಲ್ಲ ಹಾಗಾಗಿಯೇ ಇದನ್ನು ಸ್ಮಶಾನ ವೈರಾಗ್ಯ ಅಂತಾರೆ ಅಂತಿದ್ಲು ಅಜ್ಜಿ. ಸಾವು ಕೇವಲ ಖಾಲಿತನ ಹುಟ್ಟಿ ಹಾಕುತ್ತದಾ ಅಂದರೆ ಕೆಲವು ಸಲ ಪ್ರಶ್ನೆಯನ್ನೂ ಹುಟ್ಟಿಹಾಕುತ್ತದೆ. ಅಂತಹದೊಂದು ಗಂಭೀರ ಪ್ರಶ್ನೆಯೊಂದನ್ನು ಸಿದ್ಧಾರ್ಥ್ ಸಾವು ಹುಟ್ಟಿಹಾಕಿದೆ. ಹಾಗೂ ಆ ಪ್ರಶ್ನೆ ಕೇವಲ ಅವರ ಸಾವಿಗೆ ಮಾತ್ರ ಸಂಬಂಧ ಪಡದೆ ಇಡೀ ದೇಶಕ್ಕೆ, ಹಲವಾರು ಉದ್ಯಮಿಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧ ಪಟ್ಟಿದೆ. ಅದು ಅವರ ಸಾವಿಗೆ ಕಾರಣ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಎನ್ನುವುದು. ಅದು ನಿಜವಾ....

ಬಹುತೇಕ ಉದ್ಯಮಗಳು ಶುರುವಾಗುವುದು ನದಿಯ ಮೂಲದ ಹಾಗೆ ಚಿಕ್ಕದಾಗಿ. ಸಿದ್ಧಾರ್ಥ್ ಬದುಕು ಸಹ ಆರಂಭವಾಗಿದ್ದು ಆ ಜಿಲ್ಲೆಯಲ್ಲಿಯೇ ಹುಟ್ಟುವ ನೇತ್ರಾವತಿ ನದಿಯ ಹಾಗೆಯೇ. ನದಿಯೊಂದು ಹರಿಯುತ್ತಾ ಹೋದ ಹಾಗೆ ತೊರೆ, ಹಳ್ಳ, ಒಡ್ಡು ಬಂದು ಸೇರಿ ನಿಧಾನಕ್ಕೆ ತನ್ನ ಪಾತ್ರ ಹರಿವು ಹೆಚ್ಚಿಸಿಕೊಳ್ಳುವ ಹಾಗೆಯೇ ಉದ್ಯಮವೂ ವಿಸ್ತಾರವಾಗುತ್ತಾ ಹೋಗುತ್ತದೆ. ಯಾವುದೇ ಉದ್ಯಮವೂ ಸಹ ಸಾಲ ತೆಗೆದುಕೊಳ್ಳದೆ ನಡೆಯುವುದಿಲ್ಲ. ಪಡೆಯುವ ಸಾಲ ನದಿಗೆ ಬಂದು ಸೇರುವ ಇತರ ಜಲಮೂಲದ ಹಾಗೆ ಅದನ್ನು ವಿಸ್ತಾರಗೊಳಿಸಬೇಕು.  ಆದರೆ ಹಾಗೆ ಪಡೆದ ಸಾಲ ಅದಕ್ಕಾಗಿಯೇ ಉಪಯೋಗವಾಗಿದೆಯಾ ಅನ್ನೋದು ಅತಿ ಮುಖ್ಯವಾದ ಪ್ರಶ್ನೆ. ಬಹಳಷ್ಟು ಸಲ ಹೀಗೆ ಪಡೆದ ಸಾಲಗಳು ವೈಯುಕ್ತಿಕ ಆಸ್ತಿಕೊಳ್ಳಲು ಉಪಯೋಗವಾಗುತ್ತದೆಯೇ ಹೊರತು ಉದ್ದಿಮೆಯನ್ನು ಬೆಳೆಸಲು ಅಲ್ಲ. ಹಾಗಾದಾಗ ಅಲ್ಲಿ ನದಿ ಹರಿಯುವುದಿಲ್ಲ ನಿಧಾನಕ್ಕೆ ಸೊರಗುತ್ತದೆ.

ವರ್ಷಗಳ ಹಿಂದಿನವರೆಗೂ  ಸಾಲ ತೀರಿಸಲು ಮರುಸಾಲ ಪಡೆಯುವ ವ್ಯವಸ್ಥೆಯಿತ್ತು. ಹಾಗಾಗಿಯೇ ಬೇಕಾಬಿಟ್ಟಿಯಾಗಿ ಸಾಲ ಪಡೆಯುವುದು ಬ್ಯಾಂಕ್ ಗಳು ಅದನ್ನು ಕೊಡುವುದು ನಡೆಯುತ್ತಿತ್ತು ಅನ್ನುವುದಕ್ಕೆ ಮಲ್ಯ, ನೀರವ್ ಮೋದಿಯ ಘಟನೆಗಳೇ ಸಾಕ್ಷಿ. ಹೀಗಾಗಿ ಸಾಲ ಬೆಳೆಯುತ್ತಿತ್ತು ಅದಕ್ಕೆ ತಕ್ಕ ಹಾಗೆ ಉದ್ದಿಮೆಯೂ ಬೆಳೆಯುತಿತ್ತಾ .... ನದಿಯೊಂದು ತನ್ನ ಪಾತ್ರದ ನೀರನ್ನು ಮುಂದಕ್ಕೆ ಹರಿಯಲು ಬಳಸಿಕೊಳ್ಳದೆ ಅದಕ್ಕೆ ಕಾಲುವೆ ಮಾಡಿದರೆ ನದಿ ತುಂಬಿಕೊಳ್ಳುವ ಬದಲು ಬತ್ತಿ ಹೋಗುತ್ತದೆ. ಉದ್ದಿಮೆ ಸಾಲದ ಸುಳಿಯಲ್ಲಿ ಸಿಲುಕುತ್ತದೆ. ಈಗ ಕಾಲಕಾಲಕ್ಕೆ ಸಾಲ ಮರುಪಾವತಿ ಮಾಡದೆ ಹೋದರೆ ಸತತ ಮೂರುಬಾರಿ ಡೀಫಾಲ್ಟ್ ಆದರೆ ಆಮೇಲೆ ಯಾವ ಬ್ಯಾಂಕ್ ಗಳೂ ಸಾಲ ಕೊಡುವುದಿಲ್ಲ. ಅಲ್ಲಿಗೆ ಕುತ್ತಿಗೆಗೆ ಉರುಳುಸಿಕ್ಕಿಕೊಂಡಂತೆ. ಇಂಥ ಸಮಯದಲ್ಲಿ ಹಣವನ್ನು ಒಗ್ಗೂಡಿಸಲು ಕಂಪನಿಯ ಶೇರ್ ಗಳು ಇರುವುದಕ್ಕಿಂತ ಅಧಿಕ ಮೌಲ್ಯಕ್ಕೆ ಮಾರುವ ಪದ್ದತಿಯೂ ಇದೆಯಂತೆ. ಇದಕ್ಕಾಗಿ ಹತ್ತಿರದವರ ಸಹಾಯ ಪಡೆಯಲಾಗುತ್ತದೆ, ಅವರ ಬಳಿ ಇನ್ವೆಸ್ಟ್ ಮಾಡಿಸಲಾಗುತ್ತದೆ. 

ಶೇರಿನ ಮೌಲ್ಯ ಹೆಚ್ಚಿದಂತೆ ಸಿಗುವ ಸಾಲದ ಮೌಲ್ಯವೂ ಹೆಚ್ಚುವುದು ಇದಕ್ಕೆ ಕಾರಣ. ಹೀಗೆ ಪಡೆದ ಹಣವನ್ನು ಕೊಟ್ಟವರು ಹಿಂದೆ ಕೇಳಿದಾಗ ಹಣವಿಲ್ಲದೆ ಹೋದಾಗ ಅದನ್ನು ಮಾರುವ ಪರಿಸ್ಥಿತಿ ಹೀಗೆ ಒಮ್ಮೆಗೆ ಹಲವಾರು ಶೇರುಗಳು ಮಾರಾಟವಾದರೆ ಅದರ ಬೆಲೆ ಕಡಿಮೆಯಾಗುವ ಸಂಭವ ಇದೆ. ಹೀಗಾದಾಗ  ಶೇರಿನ ಬೆಲೆ ಹಾಗೂ ಪಡೆದ ಸಾಲದ ವ್ಯತ್ಯಾಸ ಲೆಕ್ಕಹಾಕಿ ಹೆಚ್ಚುವರಿ ಹಣವನ್ನು ತಕ್ಷಣವೇ ಹಿಂದುರಿಗಿಸುವಂತೆ ಬ್ಯಾಂಕ್ ಒತ್ತಡ ಹಾಕುತ್ತದೆ. ಮಾರಿದ ಶೇರನ್ನು ಕೊಳ್ಳಬೇಕು ಅನ್ನುವ ಒತ್ತಡ ನನ್ನ ಮೇಲಿದೆ ಅದಕ್ಕಾಗಿ ಹತ್ತಿರದವರ ಬಳಿ ಹಣ ಪಡೆದಿದ್ದೇನೆ ಎಂದು ಸಿದ್ಧಾರ್ಥ್ ಬರೆದಿದ್ದಾರೆಎನ್ನಲಾಗುವ ಪತ್ರ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಎಂಥಹುದೇ ಆಸ್ತಿಯಿದ್ದರೂ ಅದನ್ನು ತಕ್ಷಣಕ್ಕೆ ಮಾರುವ ಮನಸ್ಸು ಇದ್ದರೂ ಅದನ್ನು ಕೊಳ್ಳುವವರು ಇದ್ದಾರೆಯೇ... ಸಮಯಕ್ಕೆ ಸರಿಯಾಗಿ ಹಣ ಸಿಗುತ್ತದೆಯೇ ಅನ್ನುವುದು ಮೂಲಭೂತ ಪ್ರಶ್ನೆ. ಅನುಕೂಲಕ್ಕೆ ಸಂಕಷ್ಟಕ್ಕೆ ಒದಗದ ಅಸ್ತಿ ಎಷ್ಟಿದ್ದರೇನು? ಹಾಗಾದರೆ ಇಲ್ಲಿ ಒತ್ತಡ ಐಟಿಯದ್ದೇ ಅಥವಾ ಬೇರೆಯವರದ್ದೇ?

ಸಿದ್ಧಾರ್ಥ್ ವೈಯುಕ್ತಿಕ ಬದುಕಿನಲ್ಲಿ ಸರಳ, ಸಜ್ಜನ, ಉಪಕಾರಿ. ಅದರಲ್ಲೂ ಹುಟ್ಟೂರು ಅಂದರೆ ಅಭಿಮಾನ ಜಾಸ್ತಿ. ಹಾಗಾಗಿಯೇ ತನ್ನ ಉದ್ಯಮದಲ್ಲಿ ಹಲವಾರು ಮಲೆನಾಡಿನ ಯುವಜನತೆಗೆ ವಿದ್ಯಾರ್ಹತೆಯನ್ನು ಗಂಭಿರವಾಗಿ ಪರಿಗಣಿಸದೆ ಉದ್ಯೋಗ ನೀಡಿದ್ದರು,ಅವರಿಗಾಗಿ ತರಬೇತಿ ಕೊಡಲು ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಅವರು ಜನರನ್ನು  ನಂಬಿದ್ದರು ಎನ್ನುವುದು ಎಷ್ಟು ನಿಜವೋ ಹಾಗೆ ಉದ್ಯೋಗ ಪಡೆದು ಅವರಿಗೆ ಹತ್ತಿರವಾಗಿ ನಂಬಿಕೆ ಹುಟ್ಟಿಸಿ ಮೋಸ ಮಾಡಿದವರು ಬಹಳ ಜನರಿದ್ದಾರೆ. ಅಲ್ಲಿ ಕೆಲಸ ಹುಡುಕಿಕೊಂಡು ಹೋಗಿ ಕೆಲವು ಕಾಲದ ನಂತರ ವಾಪಾಸ್ ಬಂದ ಕೆಲವರು ಇಂದು ನೂರಾರು ಕೋಟಿಗೆ ಒಡೆಯರಾಗಿದ್ದಾರೆ. ವ್ಯವಹಾರದಲ್ಲಿ ಸ್ವಲ್ಪವಾದರೂ ನಿರ್ದಯತೆ ಬೇಕು. ಅಲ್ಲಿ ಭಾವನೆಗಳಿಗೆ ಜಾಗವಿಲ್ಲ ಅನ್ನುವುದು  ಸತ್ಯ ಇಲ್ಲವಾದಲ್ಲಿ ಏನಾಗಬಹುದು ಅನ್ನುವುದಕ್ಕೆ ಇವರು ಉದಾಹರಣೆಯಾಗುತ್ತಾರೆನೋ ಅನ್ನಿಸಿದ್ದು ಬಹಳ ಸಾರಿ.  ದಡದ ಇಕ್ಕೆಲಗಳಲ್ಲಿ ಕುಳಿತು ನೀರು ಹೀರುವ ರಕ್ಕಸ ದಾಹದ ಪಂಪ್ ಸೆಟ್ ಗಳು  ಇಡೀ ನದಿಯನ್ನೇ ಬತ್ತಿಸುವ ಹಾಗೆ ಇಂಥವರು ಅವರ ಬದುಕಿನ ಸಾರ ಹೀರಿದರಾ.... ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದರಾ... ಒಂದು ಸಣ್ಣ ತೂತು ಕೂಡಾ ನಾವೆಯನ್ನು ಮುಳುಗಿಸಬಹುದು.

ಯಾವುದೇ ನಾವೇ ಒಮ್ಮಲೆ ಮುಳುಗುವುದಿಲ್ಲ. ಯಶಸ್ವೀ ಉದ್ಯಮಿ ಯಾವುದೋ ಸಣ್ಣ ವಿಷಯಕ್ಕೆ ಸಾಯುವುದಿಲ್ಲ. ಇದೊಂದು ತರಹ ಚಕ್ರವ್ಯೂಹದ ತರಹ. ಒಂದು ಉದ್ದಿಮೆ ಶುರು ಮಾಡಿದರೆ ಇನ್ನೊಂದು ಮಾಡುವ ,ಮಗದೊಂದು ಆರಂಭಿಸುವ ಇಲ್ಲಿಯ ಹಣ ಅಲ್ಲಿಗೆ, ಅಲ್ಲಿಯ ಹಣ ಮತ್ತೆಲ್ಲಿಗೋ ಹೀಗೆ ಬಂಡವಾಳ ಹಾಕುತ್ತಾ ಹೋಗುವ ಹಾಗಾಗುತ್ತದೆ. ಅದರ ಜೊತೆಗೆ ಕೊಂಚ ನಿಯಮಗಳ ಸಡಿಲಿಕೆ ಜೊತೆಗೆ ರಾಜಕೀಯ ಬೆಂಬಲ ಇದ್ದರೆ ಮುಗಿದೇ ಹೋಯಿತು. ಕೈ ಮೀರಿ ಮುಂದಕ್ಕೆ ಹೋಗುವಾಗ ಹೊರಗೆ ಬರಲು ಗೊತ್ತಾಗದೆ ಹೋದರೆ ಯಾವುದೋ ಸುಳಿಗೆ ಸಿಲುಕಿ ಉಸಿರುಗಟ್ಟುತ್ತದೆ. ಪಡೆದ ಸಾಲ ಬೆಳೆದು ಲಾಭ ಬರದೆ ಉದ್ಯಮ ಸೋಲುತ್ತದೆ.  ಲೈಸನ್ಸ್ ಇಲ್ಲದೆಯೋ ಹೆಲ್ಮೆಟ್ ಹಾಕದೆಯೋ ಗಾಡಿ ಓಡಿಸುವಾಗ ಅಲ್ಲೆಲ್ಲೋ ಪೋಲಿಸ್ ಕಂಡರೆ ಕೈ ನಡುಗಿ ಗಾಡಿ ಬ್ಯಾಲೆನ್ಸ್ ತಪ್ಪಿ ಬಿದ್ದರೆ ಅದಕ್ಕೆ ಹೊಣೆ ಯಾರು... ಪೋಲಿಸರಾ, ಓಡಿಸುವವರಾ, ಗಾಡಿಯಾ... ಇಲ್ಲೂ ಇನ್ಕಮ್ ಟ್ಯಾಕ್ಸ್ ಪಾತ್ರ ಹೀಗೆ ಆಗಿರಬಹುದಾ... 

ಎಷ್ಟೇ ಗಟ್ಟಿ ವ್ಯಕ್ತಿತ್ವ, ದೃಢ ಮನಸ್ಸು ಇದ್ದರೂ ನಾವೆಲ್ಲರೂ ಹುಲುಮಾನವರೇ. ಯಾವುದೋ ಒಂದು ಕ್ಷಣದಲ್ಲಿ ಮನಸ್ಸು ದುರ್ಬಲವಾಗುತ್ತದೆ. ಅದರಲ್ಲೂ ತಾವೇ ಕಟ್ಟಿ ಬೆಳಸಿದ ಉದ್ಯಮ ಅನ್ನುವುದು ಮಗುವಿದ್ದ ಹಾಗೆ ಅದರ ಅವಸಾನ ಎಂಥವರನ್ನೂ ಅಲುಗಾಡಿಸಿ ಬಿಡುತ್ತದೆ. ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ಕಳೆದುಕೊಂಡು ಬಾಳುವುದಕ್ಕಿಂತ ಸಾಯುವುದೇ ಮೇಲು ಅನ್ನಿಸುತ್ತದೆ. ಅದರಲ್ಲೂ ಮಾನಕ್ಕೆ ಅಂಜುವವರಾದರಂತೂ  ಮುಗಿದೇ ಹೋಯಿತು. ಸಣ್ಣ ಪುಟ್ಟ ಸಾಲಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನಮಗೆ ಅಸಹನೆ ಹುಟ್ಟಿಸುತ್ತದೆ, ಹೇಡಿಗಳು ಅನ್ನಿಸುತ್ತದೆ. ಆದರೆ ಅವರಿಗೆ ಮಾನದ ಮುಂದೆ ಇನ್ನೆಲ್ಲವೂ ಗೌಣ ಅನ್ನಿಸಿರುತ್ತದೆ. ಸಿದ್ಧಾರ್ಥ್ ಕೂಡಾ ಹೀಗೆಯೇ ಯೋಚಿಸಿದರಾ....ಮಾಡಿದ ಸಾಲ ತೀರಿಸುವ ಒತ್ತಡ ತಕ್ಷಣಕ್ಕೆ ಸಿಗದ ಹಣ ಅವರನ್ನು ಈ ಪರಿಸ್ಥಿತಿಗೆ ತಳ್ಳಿತಾ...

ಇನ್ನು ಎಲ್ಲಾ ಡಿಪಾರ್ಟ್ಮೆಂಟ್ ಗಳಲ್ಲೂ ಇರುವುದು ಮನುಷ್ಯರೇ. ರಾಗ ದ್ವೇಷಗಳಿಗೆ ಸಿಲುಕಿದವರೇ. ಹಾಗಾಗಿ ಅವರಿಗೆ ಒತ್ತಡ ಹಾಕಿದ ಅಧಿಕಾರಿ ಹಾಗಿದ್ದರೂ ಇರಬಹುದು. ಆದರೆ ಅಂತಹ ಪ್ರಭಾವಿ ಉದ್ಯಮಿಯಾಗಿದ್ದೂ,  ಮಾವನಿದ್ದೂ ಅವರು ಯಾಕೆ ಕಂಪ್ಲೇಂಟ್ ಮಾಡಿಲ್ಲ ಅನ್ನೋ ಪ್ರಶ್ನೆಯೂ ಹುಟ್ಟುತ್ತದೆ. ಈ ಪ್ರಶ್ನೆ ಹುಟ್ಟುವಾಗ ಸೇತುರಾಂ ಸರ್ ಒಂದು ಮಾತು ನೆನಪಾಗುತ್ತದೆ. ಕಳ್ಳನ ಮನೆಯಲ್ಲಿ ಕಳ್ಳತನವಾದರೆ ಕಂಪ್ಲೇಂಟ್ ಕೊಡೋಲ್ಲಮ್ಮ ಅಂದಿದ್ದರು ಹೀಗೆ ಯಾವುದೋ ಮಾತಿನ ನಡುವೆ.  ಎಲ್ಲರೂ ನಮ್ಮ ನಮ್ಮ ಮಿತಿಯಲ್ಲಿ ತೆರಿಗೆ ಉಳಿಸುವ, ಮತ್ಯಾವುದೋ ಕೆಲಸಕ್ಕೆ ಲಂಚ ಕೊಡುವ ಕೆಲಸ ಮಾಡಿದವರೇ. ಪ್ರಮಾಣ ಕಡಿಮೆಯಿರಬಹುದು ಆದರೆ ಮಾಡಿದವರೇ. ಹೀಗೆ ತೆರಿಗೆ ಉಳಿಸುವ ಯಾವುದೋ ಮಾಹಿತಿ ಅವರಲ್ಲಿದ್ದೆ ಒತ್ತಡ ಹಾಕಿದರಾ, ಅಥವಾ  ಹಣಕ್ಕಾಗಿ ಪಿಡಿಸಿದರಾ ಅನ್ನೋದು ಕೂಡಾ ತನಿಖೆಯಾಗಲೇ ಬೇಕು. ಯಾವುದೇ ಯೋಜನೆಗಳು ತಪ್ಪಲ್ಲ ಆದರೆ ಅದನ್ನು ಅನುಷ್ಥಾನಕ್ಕೆ ತರುವ ವಿಧಾನದಲ್ಲಿ ಲೋಪವಿರುವ ಸಾಧ್ಯತೆಯಿದೆ. ಹಣ ಅಮಾನ್ಯಕರಣದಂತಹ ಒಳ್ಳೆಯ ಯೋಜನೆಗಳೂ ಭಾಗಶಃ ಯಶಸ್ವೀಯಾಗಲು ಅದನ್ನು ಅನುಷ್ಠಾನಕ್ಕೆ ತಂದ ರೀತಿ ಹಾಗೂ ಅದನ್ನು ಜಾರಿಗೊಳಿಸುವ ಅಧಿಕಾರಿಗಳ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಅವರು ಎಡವಿದರೆ, ಮೋಸಮಾಡಿದರೆ ಇಡೀ ಯೋಜನೆಯೇ ಹಳ್ಳ ಹಿಡಿಯುತ್ತದೆ. ಇಲ್ಲೂ ಕಂಪನಿಯ ಬಗ್ಗೆ ಅದನ್ನು ನಿರ್ವಹಿಸುವ ಅಧಿಕಾರಿಗಳ ಕಾರ್ಯ ನಿರ್ವಹಣೆಯ ಬಗ್ಗೆಯೂ ಯೋಚಿಸಲೇ ಬೇಕಾಗುತ್ತದೆ. ಒಂದು ಕಂಪನಿ ನಡೆಯಲು ಹಲವಾರು ಜನರ ಸಹಕಾರ ಬೇಕು. ಕೊಂಚ ಏಮಾರಿದರೂ ಅಪಾಯವೇ.

ನದಿ ಹರಿಯುತ್ತಾ ಹರಿಯುತ್ತಾ ಮಳೆ ಹೆಚ್ಚಿದಾಗ ದಡವನ್ನೂ ಮೀರಿ ಹರಿಯತೊಡಗುತ್ತದೆ. ಅಂಕೆ ತಪ್ಪುತ್ತದೆ. ಹಣ, ಯಶಸ್ಸು ಎರಡೂ ಒಮ್ಮೆಗೆ ಪ್ರವಾಹದಂತೆ ಹರಿದರೂ ಬದುಕು ಹದ ತಪ್ಪುವ ಸಾಧ್ಯತೆ ಇದೆ. ಆಗ ಮಾಡುವ ಅಪರಾಧ ಚಿಕ್ಕದು ಅನ್ನಿಸಬಹುದು. ಎತ್ತರಕ್ಕೆ ಬೆಳೆದವರು ಮಾದರಿಯಾಗಬೇಕು. ಆ ಕ್ಷಣಕ್ಕೆ ಅದು ಯಾರ ಗಮನಕ್ಕೆ ಬಾರದೆ ಹೋದರೂ, ಅಥವಾ ಇನ್ಯಾವುದೋ ಪ್ರಭಾವ ಕಾಣದಂತೆ ತಡೆದರೂ ಯಾವುದನ್ನೂ ಬಹುಕಾಲ ಮುಚ್ಚಿಡಲು ಸಾಧ್ಯವಿಲ್ಲ ಹಾಗೂ ಅದರ ಪರಿಣಾಮ ಕಾಣದೆ ಇರುವುದಿಲ್ಲ. ಬಿಸಿನೆಸ್ ಅನ್ನೋದು ಯುದ್ಧದ ಹಾಗೆ. ಮೊದಮೊದಲು ಯುದ್ಧ ನೀತಿಯನ್ನು ಪಾಲಿಸುತ್ತಿದ್ದ ಮಹಾಭಾರತ ಯುದ್ಧ ಕೂಡ ಕ್ರಮೇಣ ಹಾದಿ ತಪ್ಪಿತ್ತು. ಹಾಗೆ ತಪ್ಪದಂತೆ ನೋಡಿಕೊಳ್ಳಲು ತುಂಬಾ ಗಟ್ಟಿ ಮನಸ್ಸು ಬೇಕು. ಸುತ್ತಲಿನವರ ನಯವಾದ ಒತ್ತಡ ತಾಕದಂತೆ ಎಚ್ಚರಬೇಕು. ಒಂದು ಸಣ್ಣ ತಪ್ಪು ಘಟಿಸಿದರೂ ಚಕ್ರವ್ಯೂಹದ ಒಳಗೆ ನುಗ್ಗಿದಂತೆ. ಆಮೇಲೆ ಅದು ಅಭ್ಯಾಸವೂ ಆಗಬಹುದು, ಅನಿವಾರ್ಯವೂ ಆಗಬಹುದು. ವೈಯುಕ್ತಿಕ ಒಳ್ಳೆಯತನ ವ್ಯವಹಾರದ ಮೋಸಕ್ಕೆ ಖಂಡಿತ ಸಮರ್ಥನೆಯಲ್ಲ. 

ಸಾವು ನಡೆದುಹೋಗಿದೆ. ಅದು ಖಾಲಿತನದ ಜೊತೆಗೆ ಒಂದಷ್ಟು ಪ್ರಶ್ನೆಗಳನ್ನು ಗೊಂದಲಗಳನ್ನು ಹುಟ್ಟಿಹಾಕಿದೆ. ಹಾಗಂತ ಒಂದು ವ್ಯವಸ್ಥೆಯನ್ನು ಹೀಗೆಳೆಯುವುದು ಅದನ್ನು ಸಡಿಲಗೊಳಿಸುವುದು ದೇಶಕ್ಕೆ ಮಾರಕ.  ಈಗಾಗಲೇ ಆ ವಿಭಾಗದವರು  ಲಿಖಿತ ಉತ್ತರ ಕೊಡುವ ಜೊತೆಗೆ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾಗುವ ಪತ್ರದ ಸಹಿಯ ಬಗ್ಗೆ ಅನುಮಾನ ಪಟ್ಟಿದ್ದಾರೆ . ಅದಕ್ಕೆ ಪುಷ್ಟಿ ನೀಡುವ ಹಾಗೆ ಕಾಫಿ ಡೇ ಆಢಳಿತ ಮಂಡಳಿ ಕೂಡಾ ಅನುಮಾನ ವ್ಯಕ್ತ ಪಡಿಸಿದೆ. ನದಿಯೊಂದು ಹುಟ್ಟಿ ನಿಧಾನಕ್ಕೆ ತನ್ನ ವಿಸ್ತಾರ ಹೆಚ್ಚಿಸಿಕೊಂಡು ಇಕ್ಕೆಲದ ದಡದ ಸಾವಿರಾರು ಎಕರೆ ಭೂಮಿಯನ್ನು ತಂಪಾಗಿಸುವ ಹಾಗೆ, ಯೋಗ್ಯವಾಗಿಸುವ ಹಾಗೆ ಸಿದ್ದಾರ್ಥ ಬದುಕು ಕೂಡಾ ಲಕ್ಷಾಂತರ ಜನರ ಬದುಕನ್ನು ಹಸನುಗೊಳಿಸಿದ್ದಾರೆ. ಹರಿಯುವ  ನದಿ ಸಾಗರ ಸೇರಿ ಇಲ್ಲವಾಗುವ ಹಾಗೆ ಇವರು ಸಾವ ಸೇರಿ ಮಾಯವಾಗಿದ್ದಾರೆ.  ನದಿಯೊಂದರ ಅಳಿವಿಗೆ ಮರಳುಗಾರಿಕೆ, ಕಾಲುವೆ, ಪಂಪ್ ಸೆಟ್ ಗಳ ದಾಹ, ನದಿ ಪಾತ್ರದ ತಿರುಗಿಸುವಿಕೆ, ಅವೈಜ್ಞಾನಿಕ ಡ್ಯಾಮ್ ಕಟ್ಟುವಿಕೆ,  ಕಾಡಿನ ನಾಶ ಎಲ್ಲವೂ ಕಾರಣವಾಗುತ್ತದೆ. ಸಿದ್ದಾರ್ಥ್ ಈ ನಿರ್ಧಾರಕ್ಕೆ ಯಾವ್ಯಾವ ಕಾರಣಗಳು ಇವೆ ಎನ್ನುವುದು ಸಮಗ್ರ ತನಿಖೆ ನಡೆಸಿ ತಿಳಿದುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಕಾಗೆ ಕೂರುವುದಕ್ಕೂ ಕೊಂಬೆ ಮುರಿಯವುದಕ್ಕೂ ಸರಿಯಾಯಿತು ಅನ್ನುವ ಹಾಗೆ ಐಟಿಯ ಮೇಲೆ ಗೂಬೆ ಕೂರಿಸುವ ಕೆಲಸ ನಡೆದು ಅಪರಾಧಿ ಅಥವಾ ಅಪರಾಧ ಮುಚ್ಚಿ ಹೋಗುತ್ತದೆ...

ಸಾವಿರ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ನಂಬಿರುವ ದೇಶ ನಮ್ಮದು.. ಅದು ಹಾಗೆ ಇರಲಿ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...