ಸಮರ ಭೈರವಿ

ಅಷ್ಟೂ ಕೇಳಿಸಿಕೊಂಡು ಸುಮ್ನೆ ಬಂದ್ಯಾ, ನಿಂಗೆ ರಕ್ತ ಕುದಿಲಿಲ್ವಾ ಅದೆಂಥಾ ಷಂಡತನ ನಿಂದು ಎಂದು ಶಾಲೆಗೇ ಹೋಗುವಾಗ ರಸ್ತೆ ಬದಿಯ ಮನೆಯಿಂದ ತೂರಿಬಂದ ಮಾತುಗಳು ಕ್ಷಣಕಾಲ ಕಾಲುಗಳನ್ನು ಸ್ತಬ್ಧವಾಗಿಸಿತು. ಒಮ್ಮೆ ಪಕ್ಕದ ಮನೆಯವರಾರೋ ರೇಗಿಸಿದರು ಎಂದು ಅಳುತ್ತಾ ಬಂದಿದ್ದ ನಾಲ್ಕು ವರ್ಷದ ನನಗೂ ಅಳ್ತಾ ಬರೋದಲ್ಲ ಶೋಭಣ್ಣ ತಿರುಗಿಸಿ ಕೊಟ್ಟು ಬರಬೇಕು, ಹೇಡಿ ಆಗಬಾರದು, ಧೈರ್ಯ ಕಲಿಲಿಲ್ಲ ಅಂದ್ರೆ ಹೀಗೆ ಅಳ್ತಾ, ಯಾರಾದರೂ ಸಹಾಯಕ್ಕೆ ಬರ್ತಾರ ಅಂತ ಕಾಯ್ತಾ ಇನ್ನೊಬ್ಬರ ಕಡೆಗೆ ಕೈ ಚಾಚಬೇಕು ನೋಡು ಅಂದಿದ್ದ. ಇಷ್ಟು ದೀರ್ಘದ ಬದುಕಿನ ಉದ್ದಕ್ಕೂ ನನ್ನ ಕಾಡಿದ್ದು, ಕಾಪಾಡಿದ್ದು, ಎದೆಗುಂದದ ಹಾಗೆ ಕಾದದ್ದು ಇವೇ ಮಾತುಗಳು. ಬರೀ ತಾಳ್ಮೆ ಸಹನೆ ಅಷ್ಟೇ ಹೇಳಿಕೊಟ್ಟರೆ ಕಲಿತರೆ ಸಾಲದು ಧೈರ್ಯ ಛಲ ಎರಡೂ ಇರಬೇಕು, ಪೋಷಿಸಬೇಕು ಅಂತ ಕಲಿಸಿದ್ದು ನನ್ನಪ್ಪ...

ಇವಷ್ಟೂ ಗುಣಗಳ ಎರಕ ಹೊಯ್ದಂತೆ ಬದುಕುವವರು ತುಂಬಾ ಕಡಿಮೆ. ಆದರೆ ಇವೆಲ್ಲವೂ ಕಾಣಿಸುವುದು ಒಬ್ಬ ಯೋಧನಲ್ಲಿ.  ಇದು ಮತ್ತೆ ಹಸಿರಾಗಿದ್ದು, ಇನ್ನಷ್ಟು ಅರ್ಥವಾಗಿದ್ದು ಸಮರ ಭೈರವಿ ಓದುವಾಗ. ಒಂದು ದೇಶದ ಮಾನಸಿಕತೆಯನ್ನು ಹಾಳು ಮಾಡುವುದಕ್ಕೆ ಹದಿನೈದು ವರ್ಷಗಳು ಸಾಕಂತೆ. ಕೊಂಚವೂ ರಕ್ತಪಾತವಿಲ್ಲದೆ, ಆಯುಧಧ ಹಂಗಿಲ್ಲದೇ ಮೈಯೂ ಮುಟ್ಟದೆ ಅದನ್ನು ಸುಲಭವಾಗಿ ಮಾಡಿಬಿಡಬಹುದು. ನಿನ್ನ ಆಚರಣೆ, ನಂಬಿಕೆ, ವಿದ್ಯೆ ಇವು ಸರಿಯಿಲ್ಲ ಅಂತ ಪದೇ ಪದೇ ಹೇಳುತ್ತಾ ಇನ್ನೆನ್ನೋ ಸುಲಭವಾದುದನ್ನು ತೋರಿಸಿಬಿಟ್ಟರೆ ಸಾಕು, ನಿಧಾನವಾಗಿ ಮನಸ್ಥಿತಿ ಬದಲಾಗುತ್ತಾ ಹೋಗುತ್ತದೆ. ಕೆಲವೇ ವರ್ಷಗಳಲ್ಲಿ ಮೂಲ ಸ್ವಭಾವ ಮರೆತು ಹೋಗಿ ಮತ್ಯಾವುದೋ ನಮ್ಮದಾಗುತ್ತದೆ. ಸದ್ಯಕ್ಕೆ ಭಾರತದ ಪರಿಸ್ಥಿತಿ ಗಮಸಿದರೆ ಇದರ ಗಂಭೀರತೆ ಅರಿವಿಗೆ ಬರುತ್ತದೆ.

ಯಾವುದೇ ಆದರೂ ಗಳಿಸಿದ್ದು, ಪಡೆದ್ದದ್ದು, ಕಷ್ಟದಿಂದ, ಬಲಿದಾನದಿಂದ ಆದರೆ ಮಾತ್ರ ಬೆಲೆ.  ಅದು ಮುಂದಿನ ಪೀಳಿಗೆಗೂ ಅರ್ಥವಾದಾಗ, ತ್ಯಾಗ ಅರಿವಾದಾಗ ಬೆಲೆ ಉಳಿದುಕೊಂಡು ಬೆಳೆದುಕೊಂಡು ಹೋಗುತ್ತದೆ. ಆದರೆ ಆ ಬಲಿದಾನವನ್ನು, ಶೌರ್ಯವನ್ನು ಮುಚ್ಚಿಟ್ಟರೆ ಸುಲಭಕ್ಕೆ ದಕ್ಕಿದ್ದು ಎಂದು ತಪ್ಪಾಗಿ ತಿಳಿದರೆ  ಅದನ್ನು ಉಳಿಸಿಕೊಳ್ಳುವ ಕೆಚ್ಚು ಬರುವುದಿಲ್ಲ.  ತನ್ನತನದ ಬಗ್ಗೆ ಹೆಮ್ಮೆ, ಪರಂಪರೆಯ ಬಗ್ಗೆ  ಗೌರವ ಇಲ್ಲದ ಯಾವ ಜೀವಿಗೆ ಆತ್ಮಾಭಿಮಾನ ಇರಲು ಸಾಧ್ಯವಿಲ್ಲ, ಆತ್ಮಾಭಿಮಾನ ಬರದೆ ಹೋದರೆ ಬದುಕು ಬದುಕಲ್ಲ. ಮನುಷ್ಯ ಏನೇ ಸ್ವತಂತ್ರ ಜೀವಿ ಅಂದುಕೊಂಡರೂ ಅವನ ಬದುಕು ಹಲವರ ಋಣಗಳ ಅಡಿಪಾಯದ ಮೇಲೆಯೇ ಕಟ್ಟಲ್ಪಟ್ಟಿರುತ್ತದೆ. ನಮ್ಮ ಸುಖದ, ನೆಮ್ಮದಿಯ ಬದುಕಿಗೆ ಕಾರಣರಾದವರ, ಅವರ ತ್ಯಾಗದ ಅರಿವಿಲ್ಲದೆ ಹೋದರೆ ಅವರನ್ನು ಗೌರವಿದಿಂದ ಕಾಣದೆ ಹೋದರೆ ಕಡಿಮೆಯಾಗುವುದು ನಮ್ಮದೇ ಬದುಕಿನ ಘನತೆ.

ಈ ದೇಶದಲ್ಲಿ ಹೀಗೆ ಕಡೆಗಣಿಸಲ್ಪಟ್ಟ ವರ್ಗಕ್ಕೆ ಸೇರುವುದರಲ್ಲಿ ಮೊದಲ ಸಾಲು ಸೈನಿಕರದ್ದು. ಅವರ ಬದುಕಿನ ರೀತಿ, ಅಲ್ಲಿಯ ಪರಿಸ್ಥಿತಿ, ತಲ್ಲಣ, ಎದುರಿಸುವ ಸಂಕಷ್ಟ, ಮಾಡುವ ತ್ಯಾಗ, ಪಡುವ ಕಷ್ಟ ಇದ್ಯಾವುದೂ ಗೊತ್ತಾಗುವುದೇ ಇಲ್ಲ. ಅವರ ಬಗ್ಗೆ ಯಾವ ಪುಸ್ತಕವೂ ಅಷ್ಟಾಗಿ ವಿವರಿಸುವುದಿಲ್ಲ. ಸೈನ್ಯದಲ್ಲಿ ಮೂರು ವಿಧ ಅನ್ನುವುದು ಬಿಟ್ಟರೆ ಉಳಿದ ಯಾವ ಮಾಹಿತಿಯೂ ಗೊತ್ತೇ ಆಗುವುದಿಲ್ಲ. ಹಾಗಾಗಿ ಮಿಲಿಟರಿ ಎಂದರೆ ಹಲವರ ಪಾಲಿಗೆ ಒಂದು ಉದ್ಯೋಗ. ಇನ್ನು ಕೆಲವರಿಗೆ ಹಣಕ್ಕಾಗಿಯೇ ಜನರು ಹೋಗುವ ತಾಣ. ಮತ್ತೆ ಕೆಲವರಿಗೆ ಅಲ್ಲಿಯೂ ಜಾತಿ ಲೆಕ್ಕಾಚಾರ ಹಾಕುವ ಚಟ. ಹಣ ಮಾಡುವುದಾದರೆ ತೀರಾ ಬದುಕನ್ನು ರಿಸ್ಕ್ ಗೆ ಕೊಟ್ಟು ಅಲ್ಲಿಗೆ ಹೋಗಬೇಕಾ... ಅಷ್ಟು ಸಂಕಷ್ಟ, ಒಂಟಿತನ ಎದುರಿಸಬೇಕಾ ... ಕುಟುಂಬದಿಂದ ದೂರವಾಗಿ, ಸಾವಿಗೆ ಎದೆಯೊಡ್ಡಿ, ವಾತಾವರಣ ವೈಪರಿತ್ಯಕ್ಕೂ ಬಗ್ಗದೆ, ವಾಸ ಮಾಡಲು ಯೋಗ್ಯವಲ್ಲದ ಜಾಗದಲ್ಲಿ ಸುದೀರ್ಘ ಕಾಲ ಕಣ್ಣೆವೆ ಮುಚ್ಚದೆ ಮೈಯೆಲ್ಲಾ ಕಣ್ಣಾಗಿ, ಜೊತೆಗಾರ ಸತ್ತರೂ ಬಂದೂಕಿನ ಗುಂಡು ಪಕ್ಕದಲ್ಲೇ ಸರಿದು ಹೋದರೂ, ಅದಕ್ಕೂ ಹೆಚ್ಚಾಗಿ ಮುಂದೆ ಸಾವು ಇದೆ ಎಂದು ಗೊತ್ತಿದ್ದರೂ ಮುನ್ನುಗ್ಗುವ ಛಲ ಬರುವುದಾದರೂ ಎಲ್ಲಿಂದ.. ಒಂದು ಬಾವುಟಕ್ಕೆ ಜೀವವನ್ನೇ ಪಣವಾಗಿಡುವ ಸ್ಥೈರ್ಯ ಹುಟ್ಟುವುದಾದರೂ ಎಲ್ಲಿಂದ...

ಯುದ್ಧ, ಪ್ರಾಕೃತಿಕ ವಿಕೋಪ, ಗಲಭೆ, ಬಾಂಬ್ ಬ್ಲಾಸ್ಟ್ ಇಂತ ಘಟನೆ ನಡೆಯುವಾಗಲೆಲ್ಲ ಮುಂಚೂಣಿಯಲ್ಲಿ ನಿಂತು ಜನಸಾಮಾನ್ಯರನ್ನು ಕಾಪಾಡುವ ಹೊಣೆ ಹೊತ್ತು ಸಾವಿಗೆ ತಮ್ಮ ಎದೆಯೊಡ್ಡಿ ಉಳಿದವರನ್ನು ಬೆನ್ನ ಹಿಂದೆ ನಿಲ್ಲಿಸುವ ಈ ಯೋಧರು ಉಳಿದ ಸಮಯದಲ್ಲಿ ಏನು ಮಾಡುತ್ತಾರೆ, ಅವರ ದೈನಂದಿನ ಬದುಕು ಹೇಗಿರುತ್ತದೆ? ನಾವೆಷ್ಟು ನೆಮ್ಮದಿಯಾಗಿದ್ದೇವೆ ಹಾಗೂ ನಮ್ಮ ನೆಮ್ಮದಿಗೆ ಅವರು ತೆತ್ತಿರುವ ಬೆಲೆ ಏನು? ಅವಮಾನ ಸಹಿಸಿಯೂ ದೇಶ ಎಂದ ಕೂಡಲೇ ಎಲ್ಲಾ ಮರೆತು ತನ್ನ ಕುಟುಂಬ ಕೊನೆಯಲ್ಲಿ ವೈಯುಕ್ತಿಕ ಬದುಕು ಎರಡೂ ಮರೆತು ಹೇಗೆ ಮುಂದಕ್ಕೆ ಹೋಗ್ತಾರೆ, ಕಳೆದುಕೊಂಡಿದ್ದರ, ಪುತ್ರಶೋಕದ ತೀವ್ರತೆ ಹೇಗಿರುತ್ತೆ   ಎಂದು ಅರ್ಥವಾಗಬೇಕಾದರೆ ಯೋಧನ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಾದರೆ, ವಸ್ತುಸ್ಥಿತಿ ತಿಳಿಯಬೇಕಾದರೆ  ಸಂತೋಷ್ ತಮ್ಮಯ್ಯ ಬರೆದ ಸಮರ ಭೈರವಿ ಓದಬೇಕು.

ಈ ದೇಶದ ಮೂಲ ಗುಣ ಕ್ಷಾತ್ರತ್ವವೆ ಹೊರತು ಬೇರೇನಲ್ಲ. ತಾಳ್ಮೆ, ಅಹಿಂಸೆ ಅನ್ನುವುದು ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರುವುದಿಲ್ಲ. ನಿಜವಾದ ಇತಿಹಾಸ ತಿಳಿದಾಗ ಈ ಸತ್ಯ ಅರಿವಿಗೆ ಬರುತ್ತದೆ. ನಾವು ಸೋತದ್ದು ಎಲ್ಲಿ ಅನ್ನುವುದು ತಿಳಿಯುತ್ತದೆ. ಏನೇ ಮಾಡಿದರೂ ಈ ಮಣ್ಣಿನ ಮೂಲ ಗುಣ ಇನ್ನೂ ಅಷ್ಟೇ ಬಲಿಷ್ಠವಾಗಿ ಉಳಿದಿದೆ ಎಂದು ಅರ್ಥವಾಗೋದು ನಮ್ಮ ಯೋಧರನ್ನು ಕಂಡಾಗ, ಅವರ ಬದುಕನ್ನು ಗಮನಿಸಿದಾಗ. 

ಎಲ್ಲಿಯೂ ಭಾವಾವೇಶಕ್ಕೆ ಒಳಗಾಗದೆ ಇದ್ದದ್ದು ಇದ್ದ ಹಾಗೆ ಹೇಳುತ್ತಾ ಹೋಗುವ ಅವರ ಶೈಲಿ ಹುಟ್ಟು ಹಾಕುವ ಪ್ರಶ್ನೆಗಳು ಅನೇಕ. ಈ ದೇಶ ಸೈನಿಕನ್ನು ಬಳಸಿಕೊಂಡ ಹಾಗೂ ನಡೆಸಿಕೊಂಡ ರೀತಿ ನಾಚಿಕೆ ಹುಟ್ಟಿಸುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆಯೂ ಕಡೆಗಣಿಸುವ ಪ್ರಕ್ರಿಯೆ ನಡೆಯುತ್ತದೆ. ತಿಳಿದಾಗ ಮನಃಪರಿವರ್ತನೆಯೂ ಆಗಬಹುದು. ಆಗದೆಯೂ ಇರಬಹುದು ಅಂತಿಮವಾಗಿ ಅದು ನಾವು ಬದುಕಿನ ಬಗ್ಗೆ ಹೊಂದಿರುವ ನೋಟ ಹಾಗೂ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ಇಲ್ಲಿರುವ ಪ್ರತಿ ಅಧ್ಯಾಯವನ್ನೂ ಬಿಡಿ ಬಿಡಿಯಾಗಿ ಓದಿಕೊಳ್ಳುತ್ತಲೇ ಇಡಿಯಾಗಿ ಓಡಿಸಿಕೊಂಡು ಹೋಗುತ್ತದೆ ಈ ಪುಸ್ತಕ. ಒಂದೇ ಗುಕ್ಕಿಗೆ ಓದಲು ಮನಸ್ಸಿದ್ದರೂ ಕಣ್ಣು ಸಹಕರಿಸುವುದಿಲ್ಲ. ಹೆಮ್ಮೆ, ದುಃಖ, ಗರ್ವ, ಏನೋ ಕಳೆದುಕೊಂಡ ಭಾವ, ನಾಚಿಕೆ, ಕೋಪ, ಹೀಗೆ ಸಮಸ್ತ ಭಾವಗಳನ್ನೂ ಉಕ್ಕಿಸುತ್ತಾ ಆಲೋಚನೆಗಳ ಸಮುದ್ರವನ್ನೇ ಹುಟ್ಟುಹಾಕುತ್ತಾ ಭಾವಗಳ ಮಥಿಸುವ ಹಾಗೆ ಮಾಡುತ್ತಾ ಕೊನೆಯ ಪುಟ ತಿರುಗಿಸುವ ಮುನ್ನ ಒಳಗೊಂದು ಅಮೃತ ಉದ್ಭವಿಸಿರುತ್ತದೆ. ಬದುಕಿನಕಡೆಗಿನ ನೋಟ ಬದಲಾಗಿರುತ್ತದೆ.

 ಒಂದು ದೇಶವನ್ನು ಹಾಳುಗೆಡವಲು ಹದಿನೈದು ವರ್ಷ ಸಾಕಾದರೆ ಅದನ್ನು ಕಟ್ಟೋಕೆ ಅಷ್ಟೇ ವರ್ಷ ಸಾಕು ಅಲ್ವೇನಮ್ಮಾ  ಅಂತ ಕೊಂಚ ಆತಂಕ ಕೊಂಚ ನಂಬಿಕೆ ಬೆರಿಸಿ ಅಹಿ ಕೇಳುವ ಹೊತ್ತಿಗೆ ಎದುರಾದ ಸ್ನೇಹಿತರು ಶಿಕ್ಷಣದಲ್ಲಿ  ಗುರುಕುಲ ಪದ್ಧತಿ ಮತ್ತೆ ಬರಬೇಕು ಅನ್ನುವುದರ ಬಗ್ಗೆ ಕೆಲಸ ಮಾಡ್ತಾ ಇದೀನಿ ಈಗ ಶುರುವಾದರೂ ಅದು ಸಂಪೂರ್ಣವಾಗಿ ಫಲಿತಾಂಶ ಸಿಗೋ ಹಾಗೆ ಆಗೋಕೆ ಇನ್ನೊಂದು ಹದಿನೈದು ವರ್ಷವಾದರೂ ಬೇಕು ಎಂದರೆ ಪಕ್ಕದಲ್ಲಿದ್ದವಳ ಮುಖದಲ್ಲಿ ಫಳ್ಳನೆ ನಗು ಮಿಂಚಿತು. ಉತ್ತರ ಸಿಕ್ಕ ಸಂತೃಪ್ತ ಭಾವ ಕಂಡಿತು. ಒಂದು ಕಾರ್ಯಕ್ರಮ ಯಶಸ್ವೀ ಅಂತ ಹೇಳೋಕೆ ಸಿಗೋದು ಇಂಥ ಕ್ಷಣಗಳೇ... ವಿಭಿನ್ನವಾಗಿ ನಡೆದ ಕಾರ್ಯಕ್ರಮ ಬಹುಕಾಲ ಮನಸ್ಸಿನಲ್ಲಿ ತೇವವನ್ನು ಕಾಪಿಡುವ ಹಾಗಿತು. ಆ ತೇವ ಉಳಿಸಿಕೊಳ್ಳಲು ಹೇಗೂ ಸಮರ ಭೈರವಿ ಇದ್ದೇ ಇದೆ.. ಸುಪ್ತವಾಗಿರುವ ಕ್ಷಾತ್ರತ್ವ ಮತ್ತೆ ಪ್ರಜ್ವಲಿಸಲಿ, ಪುಸ್ತಕ ಮನೆಮಾತು, ಮನಸ್ಸಿನ ಮಾತು ಎರಡೂ ಆಗಲಿ...



Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...