ಪಾರಿವಾಳ
ಪಾರಿವಾಳ ಮೊಟ್ಟೆ ಇಟ್ಟಿದೆ ನೋಡಮ್ಮಾ ಅಂತ ಅಹಿ ಕೊಂಚ ಬೆರಗು ಜಾಸ್ತಿ ಖುಷಿಯಲ್ಲಿ ಕೂಗಿದಾಗ ಹೋಗಿ ನೋಡಿದರೆ ಎರಡು ಪುಟಾಣಿ ಮೊಟ್ಟೆಗಳು ವಾಶಿಂಗ್ ಮಷೀನ್ ಮೇಲೆ ಕಾಣಿಸಿತು. ಪಾರಿವಾಳ ಬರುತ್ತೆ ನೆಟ್ ಹಾಕಿಸಿ ಅಂತ ಮನೆ ಇಂಟೀರಿಯರ್ ಮಾಡುವಾಗ ಹೇಳಿದರೆ ಅಯ್ಯೋ ಬೇಡಾ ಬಿಡಿ ಅಂತ ಹೇಳಿ ಮೂರು ವರ್ಷಗಳ ತನಕ ಹೊರಗಿನಿಂದ ಎಲ್ಲೋ ಒಮ್ಮೊಮ್ಮೆ ಕಾಣಿಸುತ್ತಿದ್ದ ಪಾರಿವಾಳ ಒಳಗೆ ತಲೆ ಹಾಕಿರಲಿಲ್ಲ. ಆಮೇಲೆ ನಿಧಾನಕ್ಕೆ ಕಂಬಿಯ ಪಕ್ಕದಲ್ಲಿ ಬಂದು ಕೂರಲು ಶುರು ಮಾಡಿ ಬಾಗಿಲು ತೆಗೆದ ಕೂಡಲೇ ಹಾರಿ ಹೋಗುತ್ತಿದ್ದವು. ಹೊಸ ಪರಿಚಯ ಹಳೆಯದು ಆಗುತ್ತಿದ್ದ ಹಾಗೆ ಸ್ವಲ್ಪ ನಿರಾಳ, ಅಂಜಿಕೆ ಮಾಯವಾಗುವ ಹಾಗೆ ಅಲ್ಲೇ ಕುಳಿತರೂ ಆಮೇಲೆ ನಿಧಾನಕ್ಕೆ ಒಳಗೆ ಬಂದು ಡಸ್ಟ್ಬಿನ್ ನಲ್ಲಿರುವ ಅನ್ನದ ಅಗುಳು, ಕಾಳು ತಿನ್ನಲು ಶುರುಮಾಡಿದವು. ಅವುಗಳ ಹೊಟ್ಟೆಪಾಡು ಏನೋ ಮಾಡ್ಕೋತಾವೆ ಅಂತ ಸುಮ್ಮನಾಗಿದ್ದು ನೋಡಿ ನಿಧಾನಕ್ಕೆ ಬ್ರಿಟಿಷರ ಹಾಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಹೊರಟಿದ್ದು ಗೊತ್ತಾಗಲು ಸ್ವಲ್ಪ ಸಮಯವೇ ಬೇಕಾಯಿತು. ಪಾರಿವಾಳಗಳು ಏನು ಮಹಾ ಮಾಡಿಯಾವು ಅನ್ನುವ ನನ್ನ ನಿರ್ಲಕ್ಷ್ಯ ಅವುಗಳ ಎಚ್ಚರಿಕೆಯ ಗಮನಿಸುವಿಕೆ ಎರಡೂ ಸೇರಿ ಮನೆಯೂ ಮಾಡಿ ಸಂಸಾರವನ್ನೂ ಹೂಡಿಬಿಟ್ಟವು. ಜಾಗದ ಮೇಲೆ ಅಧಿಪತ್ಯವನ್ನೂ ಸ್ಥಾಪಿಸಿಬಿಟ್ಟವು
ಮೊದಲೇ ಮಳೆಗಾಲ, ಚುಮು ಚುಮು ಚಳಿ, ಬೀಸುವ ಗಾಳಿ, ಆಗಾಗ ಸುರಿಯುವ ರಭಸಕ್ಕೆ ರಾಚುವ ಹನಿ, ಪಾಪ ಅಮ್ಮ ಅವಕ್ಕೆ ಬೆಚ್ಚಗೆ ಏನಾದರೂ ಮಾಡು ಅಂತ ಆತಂಕದಲ್ಲಿ ಒತ್ತಾಯಿಸುವ ಮಗಳು, ಅವಳ ಒತ್ತಾಯವನ್ನು ಕುಳಿತಲ್ಲೇ ಅನುಮೋದಿಸುವ ಗಂಡ. ಏನು ಮಾಡೋದು ಅನ್ನುವ ಯೋಚನೆಯಲ್ಲಿ ಅದನ್ನು ವಾಶಿಂಗ್ ಮಷೀನ್ ಕೆಳಗೆ ಇಡುವ ಅಂದರೆ ಒಮ್ಮೆ ಮನುಷ್ಯರು ಮುಟ್ಟಿದ ಮೇಲೆ ಮತ್ತೆ ಅವು ಹತ್ತಿರಕ್ಕೆ ಬರೋಲ್ಲ ಅಂತ ಅಜ್ಜಿ ಯಾವತ್ತೋ ಗುಬ್ಬಿಯ ಬಗ್ಗೆ ಹೇಳಿದ್ದು ನೆನಪಾಗಿ ಎಲ್ಲಾ ಹಕ್ಕಿಗಳೂ ಹಾಗೇನೂ ಎಂದು ಸುಮ್ಮನಾಗಿದ್ದೆ. ಸುಮ್ಮನೆ ಗಮನಿಸುವುದು ಬಿಟ್ಟು ಬೇರಾವ ದಾರಿಯೂ ತೋಚದೆ ಇದ್ದುದ್ದರಿಂದ ಅವುಗಳನ್ನೇ ಗಮನಿಸತೊಡಗಿದೆ. ಯಾವುದೋ ಒರಟು ಕಡ್ಡಿ ತಂದು ಒಂದು ಗೂಡನ್ನೂ ಸರಿಯಾಗಿ ಮಾಡಲು ಬರದ ಅದರ ಒಡ್ಡುತನದ ಬಗ್ಗೆ ಕೋಪ ಬಂದರೂ ಏನೂ ಮಾಡಲಾಗದ್ದಕ್ಕೆ ಸುಮ್ಮನಾಗಿದ್ದೆ. ಬೇರೆಯವರ ಜೀವನದ ಬಗ್ಗೆ ಆಸಕ್ತಿ ಎಷ್ಟೆಂದರೂ ಮನುಷ್ಯ ಸಹಜ ಸ್ವಭಾವವಲ್ಲವೇ ಅನ್ನಿಸಿ ನಗು ಬಂದರೂ ಅಲ್ಲಿಯವರೆಗೂ ಸುಮ್ಮನೆ ನೋಡುತ್ತಿದ್ದ ಅಷ್ಟು ಬಿಟ್ಟು ಇನ್ನೇನೂ ಗೊತ್ತಿರದಿದ್ದ ಪಾರಿವಾಳಗಳ ಬಗ್ಗೆ ತಿಳಿಯುತ್ತಾ ಹೋಯಿತು. ನೋಡುವುದಕ್ಕೂ ಗಮನಿಸುವುದಕ್ಕೂ ಇರುವ ವ್ಯತ್ಯಾಸವೂ ಅರಿವಾಯಿತು. ನನಗೆಲ್ಲಾ ಗೊತ್ತು ಅನ್ನುವ ಭ್ರಮೆಯಲ್ಲಿ ಗಮನಿಸದೆ ಎಷ್ಟೊಂದು ವಿಷಯಗಳನ್ನು ತಿಳಿಯದೆ ಹೋಗುತ್ತಿವೆ ಅನ್ನುವ ಮೊದಲ ಪಾಠ ಕಲಿಸಿತು ಪಾರಿವಾಳ. ಆಮೇಲೆ ಬರೀ ಪಾಠವೇ..
ವಾಶಿಂಗ್ ಮಷೀನ್ ಮೇಲೆ ಮೊಟ್ಟೆ ಇಟ್ಟಿದ್ದರಿಂದ ಒಂದು ತಿಂಗಳು ಅದನ್ನು ಬಳಸದೆ ಏನೋ ಅಡ್ಜಸ್ಟ್ ಮಾಡಿಕೊಂಡರೂ ದಿನಾ ಅವುಗಳ ಮಾಡಿದ ಗಲೀಜು ಸ್ವಚ್ಛ ಮಾಡುವಾಗ ಬೇಕಿತ್ತಾ ಇದು ಅನ್ನಿಸಿದ್ದು ಅದೆಷ್ಟು ಸಲವೋ. ಮೊದಲ ಸಲ ಸಹಾಯ ಮಾಡುವಾಗ ಮುದ ಅನ್ನಿಸಿದರೂ ಪದೇ ಪದೇ ಮಾಡುವ ಹಾಗಾದಾಗ ಕಿರಿಕಿರಿ ಆಗುವ ಹಾಗೆ. ಅಂತೂ ಮರಿ ಹಾರಲು ಕಲಿತು ಪುರ್ರನೆ ಹಾರಿ ಹೋಗುವಾಗ ಅಷ್ಟು ದಿನ ಜೊತೆಗಿದ್ದು ಈಗ ಕಿಂಚಿತ್ತೂ ಯೋಚಿಸದೆ ಸಂಬಂಧವೇ ಇಲ್ಲದಂತೆ ಹೋಯ್ತಲ್ಲ ಅಂತ ಕ್ಷಣಕಾಲ ಸಂಕಟವಾದರೂ ನಾವು ಮಾಡಿದ್ದೂ ಇದೆ ಅಲ್ವ, ನಾಳೆ ನಮ್ಮ ಮಗುವೂ ಹೀಗೆ ತಾನೇ ಅಂತ ಸಮಾಧಾನ ಮಾಡಿಕೊಂಡು ಸುಮ್ಮನಾಗಿದ್ದೆ. ಅವರವರ ಕೆಲಸ ಆಗುವವರೆಗೆ ಮಾತ್ರ ಜೊತೆಗಿರೋದು, ಹಾಗೆ ಇರಬೇಕು ಕೂಡಾ ಅನ್ನುವ ಅಜ್ಜಿಯ ಮಾತು ಮೊದಲ ಬಾರಿಗೆ ಅರ್ಥವಾಗಿತ್ತು. ಡೆಟಾಲ್ ಹಾಕಿ ಪ್ಯಾಸೇಜ್ ಉಜ್ಜಿ ತೊಳೆದು ವಾಶಿಂಗ್ ಮೆಷಿನ್ ಕವರ್ ಒಗೆದು ಸೊಂಟ ನೆಟ್ಟಗೆ ಮಾಡಿಕೊಂಡು ಉಸಿರುಬಿಟ್ಟಿದ್ದೆ. ಇನ್ನು ನೆಮ್ಮದಿ ಅಂತ ಬಾಗಿಲು ಹಾಕಿಕೊಂಡು ಬಂದವಳು ಮರುದಿನ ಎದ್ದು ಬಾಗಿಲು ತೆಗೆದರೆ ಹೊರಗೆ ಗಲಾಟೆ. ಅದಾಗಲೇ ಬಂದ ಮೂರು ಜೊತೆ ಪಾರಿವಾಳಗಳ ನಡುವೆ ಜಾಗಕ್ಕಾಗಿ ಫೈಟಿಂಗ್ ನಡೆಯುತ್ತಿತ್ತು.
ಇದು ಆಗಿದ್ದೆ ಅಲ್ಲ ಅಂತ ಎಷ್ಟು ಓಡಿಸಿದರೂ, ಸಾಮಾನು ತಂದಿಟ್ಟು ಜಾಗ ಇಲ್ಲವೆಂದರೂ ಅವುಗಳಿಗೆ ಹಠ. ಪೇರಿಸಿಟ್ಟ ಸಾಮಾನು ಬೀಳಿಸಿ ಅಲ್ಲೇ ಜಾಗ ಮಾಡಿಕೊಂಡು ಕುಳಿತು ಸದ್ದು ಹೊರಡಿಸಿ ನನ್ನ ಅಹಂ ಗೆ ಪಿನ್ನು ಚುಚ್ಚುತ್ತಿದ್ದವು. ಓಡಿಸಿದ ಕೂಡಲೇ ಇತ್ತ ಕಡೆಯಿಂದ ಹಾರಿ ಅತ್ತ ಕಡೆಯಿಂದ ಬಂದು ಕೂರುತ್ತಿದ್ದವು. ಇಡೀ ಪ್ಯಾಸೇಜ್ ತುಂಬಾ ಅವುಗಳದ್ದೇ ಸದ್ದು ಸಂಸಾರ. ಎಲ್ಲಾದರೂ ತಪ್ಪಿ ಇವುಗಳ ಗೂಡಿಗೆ ಬಂದ್ನಾ ಅನ್ನಿಸುವ ಹಾಗಿನ ದರ್ಪ. ತುಂಬಿದ ಮನೆಯಲ್ಲಿ ನಡೆಯುವ ಜಗಳದ ಹಾಗೆ ಇವುಗಳ ಜಗಳ, ಹೊಡೆದಾಟಕ್ಕೆ ಬೀಳುವ ರೆಕ್ಕೆ ಪುಕ್ಕ, ಹಿಕ್ಕೆ... ಹೊರಗೆ ಕಾಲಿಡುವುದೇ ಕಷ್ಟ ಅನ್ನಿಸುವ ಪರಿಸ್ಥಿತಿ ಬಂದು, ಇನ್ನು ವಾಶಿಂಗ್ ಮಷೀನ್ ಆಸೆಯೇ ಬಿಡಬೇಕು ಅನ್ನಿಸುವ ಗಳಿಗೆ ಬಂದಾಗ ಮಾತ್ರ ಇನ್ನು ಪರೋಪಕಾರ ಮಾಡುವುದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡಿದ್ದೆ. ಈ ಪಾರಿವಾಳಗಲೂ ಥೇಟ್ ಬ್ರಿಟಿಷರ ಹಾಗೇ. ಬೆರಳು ತೋರಿಸಿದರೆ ಇಡೀ ಹಸ್ತವನ್ನೇ ನುಂಗುವ ಚಾಣಾಕ್ಷತೆ. ಒಮ್ಮೆ ಹಿಡಿದ ಜಾಗವನ್ನೂ ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಅವು. ಒಮ್ಮೆ ಜಾಗ ಹಿಡಿಸಿತು ಅಂದರೆ ಸಂಸಾರ ಅನ್ನೋದು ಸಾಗರ ಅನ್ನೋ ಹಾಗೆ ಬೆಳೆಸುತ್ತಾ ಹೋಗುತ್ತವೆ. ಜನಸಂಖ್ಯಾ ಸ್ಪೋಟದ ಹಾಗೆ ಪಾರಿವಾಳಗಳ ಸ್ಪೋಟವೂ ಜರುಗುತ್ತದೆ.
ಅಲ್ಲಿಯವರೆಗೆ ನೆಟ್ ಹಾಕೋದು ಬೇಡಾ ಪಾಪ ಅನ್ನುತ್ತಿದ್ದವಳು ಇನ್ನು ನೆಟ್ ಹಾಕದೆ ವಿಧಿಯಿಲ್ಲ ಎಂದು ಬಂದು ಘೋಷಿಸಿದರೆ ಅಪ್ಪ ಮಗಳದ್ದು ತಣ್ಣಗಿನ ಪ್ರತಿಕ್ರಿಯೆ. ಒಬ್ಬರು ಬೆಳಿಗ್ಗೆ ಹೋಗಿ ರಾತ್ರಿ ಬರುವುದರಿಂದ ಅವರಿಗೆ ಅದರ ಕಷ್ಟವೇ ತಿಳಿಯುತ್ತಿರಲಿಲ್ಲ. ಇನ್ನೊಬ್ಬರು ಸಂಜೆ ಬಂದರೂ ಆಟ ಮುಗಿಸಿ ಮನೆಗೆ ಬರುವಾಗ ರಾತ್ರಿ ಆಗುತ್ತಿದ್ದರಿಂದ ಆ ಹೊತ್ತಿಗೆ ಪಾರಿವಾಳಗಳೂ ನಿದ್ದೆ ಮಾಡುತ್ತಿದ್ದರಿಂದ ಅದೇನು ತೊಂದರೆ ಮಾಡುತ್ತೆ ನಿಂಗೆ ಅನ್ನೋ ಜೋರು. ಈ ಸಮಸ್ಯೆ ಅನ್ನೋದು ಅವರವರಿಗೆ ಬಂದಾಗ ಮಾತ್ರ ಅರ್ಥವಾಗುತ್ತೆ ಇಲ್ಲವಾದಲ್ಲಿ ಅನುಕಂಪ ಉಕ್ಕಿ ಹರಿಯುತ್ತೆ ಅನ್ನೋದು ತಿಳಿದು ಇನ್ನು ಇವರಿಬ್ಬರ ನಂಬಿದರೆ ಆಗೋದೇ ಇಲ್ಲ ಅಂತ ಗೊತ್ತಾದ ಮೇಲೆ ಜಗತ್ತಿನಲ್ಲಿ ನಮ್ಮನ್ನು ನಾವು ನಂಬಬೇಕೆ ವಿನಃ ಬೇರೆಯವರ ಮೇಲೆ ಅವಲಂಬಿತವಾಗಬಾರದು ಅನ್ನುವ ಜ್ನಾನೋದಯವೂ ಆಗಿ ಹೋಗಿ ನೆಟ್ ತಂದು ಕಷ್ಟಪಟ್ಟು ಹಾಕಿ ಉಸ್ಸಪ್ಪ್ಪಾ ಅಂತ ಉಸಿರುಬಿಟ್ಟು ಕುಳಿತೆ. ಇನ್ನು ಪಾರಿವಾಳ ಅದು ಹೇಗೆ ಒಳಗೆ ಬರುತ್ತೋ ನೋಡೇ ಬಿಡ್ತೀನಿ ಅಂತ ಅವರಿಬ್ಬರ ಎದುರು ಚಾಲೆಂಜ್ ಹಾಕಿದ್ದೆ.
ಈ ಪಾರಿವಾಳಗಳು ಚಿಕ್ಕ ಪಕ್ಷಿಗಳೇ. ಬೂದು ಬಣ್ಣ, ಅಂಟಿಸಿಟ್ಟ ಟಿಕ್ಲಿಯ ಹಾಗಿನ ಕಣ್ಣು, ಪುಟ್ಟ ದೇಹ, ಕೊಂಕುವ ಕೊಕ್ಕು, ವರ್ಣಚಿತ್ತಾರದ ಗಂಟಲು ಕಪ್ಪು ಬಣ್ಣವನ್ನು ಗೆರೆ ಎಳೆದಹಾಗಿನ ರೆಕ್ಕೆ, ಮುದುರಿ ಕೂರುವಾಗ ಕಾಣುವ ಮೋಹಕತೆ, ಹೆಜ್ಜೆಯಿಟ್ಟು ನಡೆಯುವಾಗ ಬಿಂಕ, ಕೊಕ್ಕಿನ ವಂಕ, ಸಹಜೀವನದ ರೀತಿ, ಬಳಗ ಬೆಳೆಸಿಕೊಳ್ಳುವ ಪರಿ ಎಲ್ಲವೂ ಚೆಂದವೇ. ಆ ಚೆಂದಕ್ಕೆ ಮರುಳಾಗಿ ಒಳಗೆ ಬಿಟ್ಟುಕೊಂಡರೆ ಮಾತ್ರ ಆಗುವ ಹಾನಿ ಮಾತ್ರ ದೊಡ್ಡದೇ. ಇಷ್ಟೆಲ್ಲಾ ನೋಡಲು ಸುಂದರವಾಗಿದ್ದರೂ ಕೊಳಕು ಜೀವಿ. ಅಲ್ಲೇ ಹಿಕ್ಕೆ, ಅಲ್ಲೇ ವಾಸ. ಅದರ ಹಿಕ್ಕೆಯಲ್ಲಿ ಇರುವ ಅಸಿಡಿಕ್ ಅಂಶ ತುಂಬಾ ತೀಕ್ಷ್ಣ. ಪ್ರತಿಮೆಯ ಮೇಲೆ ಬೀಳುವ ಅದರ ಹಿಕ್ಕೆಗಳು ಅದನ್ನು ವಿರೂಪಗೊಳಿಸುವ ಶಕ್ತಿ ಹೊಂದಿವೆ. ಪದೇ ಪದೇ ಒಂದೇ ಜಾಗದ ಮೇಲೆ ಅದರ ಹಿಕ್ಕೆ ಬೀಳುತ್ತಿದ್ದರೆ ಕಬ್ಬಿಣದ ಕಂಬಿ ಕೂಡಾ ನಿಧಾನಕ್ಕೆ ತನ್ನ ಶಕ್ತಿ ಕಳೆದುಕೊಳ್ಳುತ್ತದಂತೆ. ಹಾರುವಾಗ ಉದುರುವ ಅದರ ರೆಕ್ಕೆ ಹಾಗೂ ಪುಕ್ಕ ಗಾಳಿಯಲ್ಲಿ ತೇಲಿ ಎಲ್ಲೆಂದರಲ್ಲಿ ಬೀಳುವುದು ಕೂಡಾ ಮಾರಕವೇ.
ಶ್ವಾಸಕೋಶದ ತೊಂದರೆ ಇರುವವರಿಗೆ, ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ಪಾರಿವಾಳ ಇದ್ದರೆ ಅವರ ತೊಂದರೆ ಉಲ್ಬಣಿಸುತ್ತದೆ. ಮೊದಲೇ ಬೆಂಗಳೂರಿನ ಕಲ್ಮಶ ವಾತಾವರಣಕ್ಕೆ ಹುಟ್ಟುವ ಹತ್ತು ಮಕ್ಕಳಲ್ಲಿ 8 ಮಕ್ಕಳು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಾರೆ ಅನ್ನುವುದು ವೈದ್ಯರ ಅಭಿಪ್ರಾಯ. ಜೊತೆಗೆ ಮನೆಯಲ್ಲಿ ಇವುಗಳು ಇದ್ದರಂತೂ ಮುಗಿದೇ ಹೋಯಿತು. ಬೆಂಕಿಗೆ ತುಪ್ಪ ಸುರಿದಹಾಗೆ ಆಗುತ್ತದೆ. ಅದರಲ್ಲೂ ಸುರಕ್ಷಿತ ಜಾಗ ಸಿಕ್ಕರಂತೂ ಇವು ಸತತ ಸಂತಾನಭಿವೃದ್ಧಿ ಪಡಿಸುವುದರಿಂದ ಅವುಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಹೋಗುತ್ತದೆ. ಗಂಡು ಹೆಣ್ಣು ಅನ್ನುವ ಭೇಧವಿಲ್ಲದೆ ಎರಡೂ ಕಾವು ಕೊಡುತ್ತವೆ. ಮನುಷ್ಯರ ಹಾಗೆ ಜೊತೆಯಾಗಿ ಬಾಳುತ್ತವೆ. ಮಕ್ಕಳು ಬೆಳೆದು ಹಾರಲು ಕಲಿಯುವ ತನಕ ಕಾಳಜಿ ವಹಿಸುತ್ತವೆ. ಎಲ್ಲಾ ಮನುಷ್ಯರ ತರಹವೇ ವರ್ತಿಸುತ್ತವಲ್ಲ ಅಂದುಕೊಳ್ಳುತ್ತಿದ್ದೆ. ರೆಕ್ಕೆ ಬಲಿತು ಮರಿ ಹೋದಮೇಲೆ ಇವೂ ನಮ್ಮ ಹಾಗೆ ದುಃಖಿಸುತ್ತವಾ ನೋಡಿದರೆ ಅವು ಇನ್ನೊಂದು ಮೊಟ್ಟೆ ಇಡಲು ತಯಾರಾಗುತ್ತಿದ್ದವು. ಅರೆ ಬದುಕು ಎಷ್ಟೊಂದು ಸುಲಭ ಅನ್ನಿಸಿತ್ತು ಆಗ. ಹೀಗೆ ಬೆಳೆಯುವ ಅವುಗಳ ಸಂಖ್ಯೆಗೆ ತಕ್ಕ ಹಾಗೆ ಆಹಾರ ಸಿಕ್ಕರಂತೂ ಮುಗಿದೇ ಹೋಯಿತು. ನಗರಗಳಲ್ಲಿ ಅವುಗಳಿಗೆ ಆಹಾರಕ್ಕೆ ಸಮಸ್ಯೆ ಆಗುವುದೇ ಇಲ್ಲ. ಅಪಾರ್ಟ್ಮೆಂಟ್ ಗಳಲ್ಲಿ ಹೀಗೆ ಗೂಡು ಕಟ್ಟುವ ಇವುಗಳಿಗೆ ಮನೆಯಲ್ಲಿ ಎಸೆದ ಅನ್ನ, ಕಾಳು ಇವುಗಳು ಸಾಕಷ್ಟು ಸಿಗುತ್ತವೆ. ಇನ್ನು ಪುಣ್ಯ ಸಂಪಾದನೆ, ಪರೋಪಕಾರ ಬುದ್ಧಿ ಬೆಳಸಿಕೊಳ್ಳುವ, ಅವು ಶಾಂತಿ ಸೂಚಕ ಪಕ್ಷಿ ಆದ್ದರಿಂದ ಅವುಗಳಿಗೆ ಆಹಾರ ಹಾಕಿದರೆ ಮನೆಯಲ್ಲೂ ಶಾಂತಿ ನೆಲಸುತ್ತದೆ ಎಂದು ನಂಬುವ ಮನುಷ್ಯರು ಖಾಲಿ ಜಾಗದಲ್ಲಿ ಪಾರ್ಕ್ ಗಳಲ್ಲಿ ಎಸೆಯುವ ಕಾಳು ಸಹ ಅವುಗಳ ಹೊಟ್ಟೆ ತುಂಬಿಸುತ್ತವೆ. ಹೊಟ್ಟೆಗೆ, ಇರಲು ಎರಡಕ್ಕೂ ವ್ಯವಸ್ಥೆಯಾದರೆ ಮತ್ತಿನ್ನೇನು... ಬೆಳಿಗ್ಗೆ ಹಾಗೂ ಸಂಜೆಯ ಹೊತ್ತಿಗೆ ಗುಂಪಿನಲ್ಲಿ ಪಟಪಟಿಸಿ ಹಾರುವ ಅವುಗಳನ್ನು ನೋಡುವಾಗ ಮನುಷ್ಯರಿಗಿಂತ ಇವುಗಳೇ ಜಾಸ್ತಿಯೇನೋ ಅನ್ನುವ ಅನುಮಾನವೂ ಹುಟ್ಟುತ್ತದೆ.
ಪಾರಿವಾಳಗಳನ್ನು ಹಿಂದೆ ರಹಸ್ಯ ಸಂದೇಶ ಕಳಿಸಲು ಬಳಸುತ್ತಿದ್ದರಂತೆ. ಅವುಗಳಿಗೆ ತರಬೇತಿ ಕೊಟ್ಟರೆ ಸಾವಿರ ಕಿ.ಮಿ ವರೆಗೆ ಹೋಗುವ ಅಲ್ಲಿಂದ ಮತ್ತೆ ಮರಳಿ ಸ್ವಸ್ಥಾನಕ್ಕೆ ಮರಳುವ ಶಕ್ತಿ ಹೊಂದಿರುತ್ತದಂತೆ. ಸೂಕ್ತ ಜಾಗಕ್ಕೆ ಅಥವಾ ಸೂಕ್ತ ವ್ಯಕ್ತಿಯ ಬಳಿಗೆ ಹೋಗುವ ಅವುಗಳ ಶಕ್ತಿ ಅಚ್ಚರಿಯೇ. ಬಿಳಿ ಪಾರಿವಾಳ ಶಾಂತಿಯ ಸಂಕೇತವಾಗಿಯೂ ಬಳಸಲ್ಪಡುತಿತ್ತು. ಬೂದು ಬಣ್ಣದ ಪಾರಿವಾಳಕ್ಕೆ ಹೋಲಿಸಿದರೆ ಬಿಳಿ ಬಣ್ಣದ ಪಾರಿವಾಳಗಳು ಕಡಿಮೆಯೇ ಅನ್ನಿಸುತ್ತದೆ. ಆದರೆ ಬೂದು ಬಣ್ಣದ ಪಾರಿವಾಳಗಳು ಬಹುಬೇಗ ಮನುಷ್ಯನ ಜೊತೆ ಹೊಂದಿಕೊಂಡು ಬದುಕುವ ಸ್ವಭಾವ ಹೊಂದಿವೆ. ಹೊಂದಿಕೊಂಡು ಹೋದಷ್ಟೂ ಬದುಕು ಬೆಳೆಯುತ್ತದಾ... ಮೊದಮೊದಲು ಹೊಂದಿಕೊಂಡ ಇವು ಆಮೇಲೆ ರಚ್ಚೆ ಹಿಡಿಯುತ್ತವಾ... ಮನುಷ್ಯನ ಜೊತೆ ಇದ್ದು ಮನುಷ್ಯನ ಗುಣವನ್ನೇ ಕಲಿಯುತ್ತದಾ...
ಮಾಮೂಲಿನಂತೆ ಬಂದ ಪಾರಿವಾಳಗಳು ನಾನಿದ್ದರೂ ಕ್ಯಾರೆ ಅನ್ನದೆ ನುಗ್ಗುವಾಗ ಅಡ್ಡ ನೆಟ್ ಬಂದು ಒಮ್ಮೆ ಗುರಾಯಿಸಿ ಅಲ್ಲೇ ಕುಳಿತವು. ಮತ್ತೆರೆಡು ನಿಮಿಷ ಬಿಟ್ಟು ಒಳಗೆ ಬರಲು ದಾರಿ ಹುಡುಕತೊಡಗಿದವು. ಸಿಗದಿದ್ದಾಗ ಸಿಟ್ಟುಗೊಂಡು ಕುಕ್ಕಿ ದಾರಿ ಮಾಡಿಕೊಳ್ಳುವ ಪ್ರಯತ್ನ ಶುರುಮಾಡಿದವು. ನೀವು ಅದೇಗೆ ಬರ್ತಿರಿ ಅಂತ ನಾನು ಬರದೆ ಇರ್ತಿವಾ ಅಂತ ಅವು ಪ್ರತಿದಿನ ಇದೆ ನೋಟ, ಇದೆ ಪ್ರಯತ್ನ. ಅವು ದಾರಿ ಮಾಡಿಕೊಳ್ಳುವ ಹೊಸ ಹೊಸ ಪ್ರಯತ್ನ ಮಾಡಿದ ಹಾಗೆ ಅದನ್ನು ಮುಚ್ಚುವುದನ್ನು ನಾನೂ ಮಾಡುತ್ತಾ ಒಬ್ಬರಿಗೊಬ್ಬರು ಪಾಠ ಕಲಿಯುತ್ತಾ ಕಲಿಸುತ್ತಾ ಇನ್ಯಾವ ದಾರಿಯೂ ಇಲ್ಲದ ಹಾಗೆ ಮಾಡಿ ನಾನು ಅವು ಇನ್ನು ಬರೋಲ್ಲ ಅಂತ ನಿಶ್ಚಿಂತೆಯಿಂದ ಎದ್ದು ಬಂದೆ. ಇಷ್ಟು ಅವಮಾನ ಆದ ಮೇಲೆ ಅವಾದರೂ ಯಾಕೆ ಬಂದಾವು, ಮುಚ್ಚಿದ ಬಾಗಿಲ ಮುಂದೆ ಎಷ್ಟು ದಿನ ನಿಂತಾವು, ಹೊಸ ದಾರಿ, ಹೊಸ ಬದುಕು ಹುಡುಕಿ ಕೊಳ್ತಾವೆ ಎಂದು ನಾನೂ ಸುಮ್ಮನಾದೆ. ಒಳಗೊಳಗೇ ಚುರುಕ್ ಎಂದರೂ ಎಲ್ಲಾ ಸಮಯದಲ್ಲೂ ಒಳ್ಳೆಯತನ ಉಪಯೋಗಕ್ಕೆ ಬರೋಲ್ಲ ಎನ್ನುವುದು ಅನುಭವಕ್ಕೆ ಬಂದಿದ್ದರಿಂದ ಮನಸ್ಸು ಗಟ್ಟಿ ಮಾಡಿಕೊಂಡಿದ್ದೆ.
ಅದಾಗಿ ತಿಂಗಳುಗಳೇ ಕಳೆದುಹೋದವು. ನಾನೂ ಊರಿಗೆ ಹೋಗಿ ಬರುವಾಗ ಇನ್ನು ಪಾರಿವಾಳಗಳ ಸದ್ದೂ ಇರುವುದಿಲ್ಲ ಎನ್ನುವ ಗಾಢ ನಂಬಿಕೆಯೊಂದಿಗೆ ಬಂದು ಬಾಗಿಲು ತೆಗೆದರೆ ಮುಚ್ಚಿದ ಬಾಗಿಲ ಮುಂದೆ ಕುಳಿತು ಅವು ಕಾಯುವುದನ್ನ, ಒಳಗೆ ಬರಲು ಪ್ರಯತ್ನಿಸಿವುದನ್ನು ಬಿಟ್ಟಿರಲಿಲ್ಲ. ಕೊಕ್ಕಿನಿಂದ ಕುಕ್ಕುತ್ತಾ ಮತ್ತೆ ಹತಾಶೆಯಿಂದ ಸುಮ್ಮನಾಗುತ್ತಾ, ಮತ್ತೆರೆಡು ಕ್ಷಣ ಬಿಟ್ಟು ಮತ್ತೆ ಪ್ರಯತ್ನಿಸುತ್ತಾ ಇಷ್ಟು ದಿನವಾದರೂ ಹೊಸ ಜಾಗ ಹುಡುಕಿಕೊಳ್ಳದೆ ಹೋದವಾ ಅನ್ನುವ ಪ್ರಶ್ನೆ ಕಾಡಿತು. ಹಳೆಯ ಜಾಗದ ಪ್ರೀತಿ ಹೊಸತನ್ನು ಅರಸಲು ಬಿಡದಿರುವ ಹಾಗಾಯ್ತಾ ಅನ್ನುವ ಅನುಮಾನ. ತೆರೆಯುತ್ತೇನೋ ಅನ್ನುವ ನಂಬಿಕೆಯಿಂದ ಆಶಾ ಭಾವನೆಯಿಂದ ಹೊಸದನ್ನು ಹುಡುಕದೆ ಸುಮ್ಮನೆ ಕಾಲ ವ್ಯರ್ಥ ಮಾಡಿಕೊಂಡವಾ ಅನ್ನುವ ಗುಮಾನಿ. ಒಂದು ಜಾಗಕ್ಕೆ ಸುಖಕ್ಕೆ ಹೊಂದಿಕೊಂಡ ಅವು ಇನ್ನೊಂದು ಅರಸುವ, ಕಷ್ಟಪಟ್ಟು ಬದುಕುವ ಗುಣವನ್ನೇ ಕಳೆದುಕೊಂಡವಾ ಅನ್ನುವ ಅನುಮಾನ, ಸುಖ ಅವನ್ನು ಸೋಮಾರಿಯಾಗಿಸಿ ಅವುಗಳ ಸಹಜ ಬದುಕಿನಿಂದ ದೂರ ಮಾಡಿತಾ ಅನ್ನುವ ಗೊಂದಲ. ಸುಮ್ಮನೆ ಕುಳಿತು ಅವುಗಳನ್ನು ದಿಟ್ಟಿಸುವಾಗಲೇ ನಾವೂ ಹೀಗೆಯೇ ಅಲ್ಲವಾ... ಕೆಲವು ಮುಚ್ಚಿದ ಬಾಗಿಲು ಮುಂದೆ ಹೀಗೆಯೇ ಕುಳಿತು ಬಿಡುತ್ತೇನೆ. ಹೊಸದನ್ನು ಅರಸದೆ, ಹಳೆಯದೂ ದಕ್ಕದೆ ಬದುಕನ್ನೇ ಅತಂತ್ರಗೊಳಿಸಿ ಬಿಡುತ್ತೇವೆ. ಬದುಕನ್ನು ನಿಂತ ನೀರಾಗಿಸಿಕೊಳ್ಳುತ್ತೇವೆ ಅನ್ನಿಸಿ ಬೆಚ್ಚಿ ಬೀಳುವಾಗ ಮತ್ತೆ ಕೃಷ್ಣಪ್ಪ ತಾತ ನೆನಪಾಗುತ್ತಾರೆ...
ಬದುಕನ್ನು ಸೀಮಿತಗೊಳಿಸಿಕೊಳ್ಳಬಾರದು ಪುಟ್ಟಿ, ಇಲ್ಲಿ ಸಿಗದಿದ್ದರೆ ಮತ್ತೆಲ್ಲೋ ಸಿಗುತ್ತದೆ. ಅರಸಬೇಕು ಹೊರಡಬೇಕು. ಸಿಗದಿದ್ದರೂ ಕೊನೆಯ ಪಕ್ಷ ಹೊಸದಾರಿಯ ಪರಿಚಯವಾಗಿರುತ್ತದೆ, ಬದುಕು ಮುಂದಕ್ಕೆ ಹೋಗಿರುತ್ತದೆ. ನಿಂತ ನೀರಾದರೆ ಕೊಳೆಯುತ್ತೆ, ಕ್ರಿಮಿ ಕೀಟಗಳು ಹುಟ್ಟಿ ನೋಡುವವರಿಗೆ ಇರಲಿ ನಮಗೆ ನಮ್ಮ ಬದುಕು ಅಸಹ್ಯ ಅನ್ನಿಸುತ್ತೆ ಅಂದಿದ್ದರು.. ಈ ಪಾರಿವಾಳಗಳಿಗೂ ಅದನ್ನೇ ಹೇಳೋಣ ಅಂತ ಎದ್ದರೆ ಅವು ಹಾರಿಹೋದವು. .....ಇನ್ನೆಲ್ಲೋ ಜಾಗ ಹುಡುಕಲು ಮೊಟ್ಟೆ ಇಡಲು ಹೋದವಾ... ಅವು ನಮಗಿಂತ ಚೆನ್ನಾಗಿ ಬದುಕು ಅರಿತಿದ್ದಾವಾ....
ಮನುಷ್ಯರ ಹಾಗೆ ಪಾರಿವಾಳಗಳಿಗೂ ಈ ಬಿಟ್ಟಿ ಉಪದೇಶವೆಂದರೆ ಅಲರ್ಜಿಯೇನೋ...

Comments
Post a Comment