ಗೌರೀ

ಹೊಯ್ಯುವ ಮಳೆಗೂ ತುಸು ಸುಧಾರಿಸಿಕೊಳ್ಳುವ ಹೊತ್ತದು. ಒಂದೇ ಸಮನೆ ಸುರಿದರೆ ಮಳೆಯಾದರೂ, ಮಾತಾದಾರೂ ಕೊನೆಗೆ ಪ್ರೀತಿಯಾದರೂ  ರೇಜಿಗೆ ಹುಟ್ಟಿಸುತ್ತದೆ. ನಿಂತರೆ ಸಾಕು ಅನ್ನಿಸುತ್ತದೆ. ಹಾಗಾಗಿ ಅದಕ್ಕೂ ಮೊದಲೇ ಮಳೆ ನಿಧಾನಕ್ಕೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತದೆ. ಆದೊಮ್ಮೆ ಈಗೊಮ್ಮೆ ಪುಟ್ಟ ಮಳೆ, ನಡುನಡುವೆ ತುಸು ಬಿಸಿಲು, ಮತ್ತೆ ಸಣ್ಣನೆಯ ಮೋಡ, ಮಬ್ಬಿಗಿಂತ ಸ್ವಲ್ಪ ಪ್ರಕಾಶಮಾನವಾದ ಬೆಳಕು ಇದು ಭಾದ್ರಪದದ ಲಕ್ಷಣ.

ಬಿಡುವು ಬರೀ ಮಳೆಗಷ್ಟೇನಾ ಎಂದರೆ ಅಲ್ಲ, ಕೆಲಸಕ್ಕೂ ಸ್ವಲ್ಪ ವಿರಾಮ. ನಾಟಿ, ಕಳೆ ಅಂಚು ಕಡಿಯುವುದು ಎಂಬೆಲ್ಲಾ ಕೆಲಸಗಳು ಮುಗಿದು, ಪೈರೂ ದಟ್ಟ ಹಸಿರಿಗೆ ತಿರುಗುವ ಹೊತ್ತು, ಭೋರ್ಗೆರೆದು ಅಬ್ಬರಿಸಿ ಉಕ್ಕುತ್ತಾ ಕೆಂಪು ಕೆಂಪಾಗಿ ಹರಿವ ಹಳ್ಳ, ನದಿಗಳೂ ಮೂಲ ಸ್ವರೂಪಕ್ಕೆ ಮರಳುವ ಹಣಿಯಾಗುವ ಹೊತ್ತು, ಗಿಡಗಳು ಮೈತುಂಬಾ ಹೂ ಬಿಟ್ಟು ಇಡೀ ಪ್ರಕೃತಿಗೆ ಬಣ್ಣ ಬಳಿಯುವ ಸಮಯ, ಪ್ರಕೃತಿಯೇ ಸುಧಾರಿಸಿಕೊಳ್ಳುತ್ತಿದೆಯೇನೋ ಎಂದು ಕಾಣುವ ಹೊತ್ತಿನಲ್ಲಿ ನಡುಮನೆಯ ಗೋಡೆಗೆ ಒರಗಿ ಕಾಲುಚಾಚಿ ಕುಳಿತರೆ ಬಿಸಿಲುಕೋಲಿನ ಹಾಗೆ ಪಕ್ಕನೆ ಮಿಂಚುವ ತವರಿನ ನೆನಪು, ಹೋಗುವ ಹಂಬಲ, ಅಪ್ಪ ಬರುವುದು ಕಾಯುವ ನಿರೀಕ್ಷೆ.

ಪ್ರತಿ ಹೆಣ್ಣಿಗೂ ತವರು ಕಾಡುವ ಮಾಯೆ, ಮನುಷ್ಯರ ಪಾಡು ಹಾಗಿರಲಿ ಅಂತ ಪರಶಿವನ ಪತ್ನಿ ಗೌರಿಯನ್ನೇ ತವರಿನ ಮೋಹ ಬಿಟ್ಟಿಲ್ಲ. ಜಗತ್ತೇ ಹೀಗೆ ಸುಧಾರಿಸಿಕೊಳ್ಳುವ ಹೊತ್ತಿಗೆ ಬೆಳ್ಳಂಬೆಳಿಗ್ಗೆ ತವರಿನ ನೆನಪಾಗಿ ಎದ್ದು ಹೊರಟಳಂತೆ ಗೌರಿ. ಸೂರ್ಯ ಕಣ್ಣುಜ್ಜಿಕೊಂಡು ಉದಯಿಸುವ ಹೊತ್ತಿಗೆ ಅವಳಾಗಲೇ ಕೈಲಾಸ ಪರ್ವತ ಇಳಿಯುತ್ತಿದ್ದಳಂತೆ. ಬೆಳಗಿನ ಹೊನ್ನ ಕಿರಣ ಅವಳ ಮೈ ಮೇಲೆ ಬಿದ್ದು ಪ್ರತಿಫಲಿಸಿ ಇಡೀ ಕೈಲಾಸ ಶಿಖರ, ವಾತಾವರಣದಲ್ಲೆಲ್ಲಾ ಸ್ವರ್ಣದೋಕುಳಿ ಚೆಲ್ಲಿ ಬಂಗಾರದಂತೆ ಕಂಗೊಳಿಸುತ್ತಿತ್ತಂತೆ ಹಾಗಾಗಿಯೇ ಅವಳು ಸ್ವರ್ಣ ಗೌರಿ. ತವರು ಹತ್ತಿರವಾಗುತ್ತಿದ್ದ ಹಾಗೆ ದುಗುಡ ದುಮ್ಮಾನ ಸುಸ್ತುಗಳೆಲ್ಲಾ ಮರೆತು ತುಟಿಯಂಚಿನಲ್ಲಿ ಕಿರುನಗುವೊಂದು ಮೂಡಿ ಮುಖದಲ್ಲೆಲ್ಲಾ ಪ್ರವಹಿಸಿ ಕಾಂತಿ ತುಂಬಿಕೊಂಡು ಹೊಸಿಲಅಡಿಯಿಡುವ ಪ್ರತಿ ಹೆಣ್ಣೂ ಗೌರಿಯೇ..

ನಾಟಿ ಮಾಡುವಾಗ ತೆಳು ಹಸಿರು ಬಣ್ಣದ ಪೈರು ದಟ್ಟ ಹಸಿರಿಗೆ ತಿರುಗುವಾಗ, ಅಂಗಳದ, ಸೂರಂಕಣದ ತುಂಬಾ ಬಣ್ಣ ಬಣ್ಣದ ಹೂ ಬಿಡುವ ಸುತ್ತೆಲ್ಲಾ ನೋಡಿದರೂ ವರ್ಣವೈವಿಧ್ಯತುಂಬಿ ಕಂಗೊಳಿಸುವ ಹೊತ್ತಿನಲ್ಲಿ ಗದ್ದೆಯ ಕೆಸರು, ಮಳೆಯ ನೀರಿಗೆ ಬಣ್ಣ ಕಳೆದುಕೊಂಡ ಬಳೆಗಳನ್ನೂ ಬದಲಾಯಿಸುವ ಕಾಲ.ಪ್ರಕೃತಿಯ ವರ್ಣ ವೈವಿಧ್ಯತೆಗೆ ಪೈಪೋಟಿ ಕೊಡುವ ಹಾಗಿನ ಬಣ್ಣಗಳ ಬಳೆಯ ಮಲ್ಹಾರ ಹೊತ್ತು ಬಳೆಗಾರ ಅಂಗಳಕ್ಕೆ ಕಾಲಿಡುವ ಹೊತ್ತಿಗೆ ಮುಗಿಲಲ್ಲೂ, ಮುಖದಲ್ಲೂ ಕಾಮನಬಿಲ್ಲು. ಬಳೆ ತೊಡುವುದೂ ಸಂಭ್ರಮ ಅನ್ನಿಸುವುದು ಈ ಹಬ್ಬದಲ್ಲೇ. ಅಂದು ಮನೆಮಂದಿಯೆಲ್ಲಾ ಹಣದ ಬಗ್ಗೆ ಯೋಚಿಸದೆ ಕೈ ತುಂಬಾ ಮೆಚ್ಚಿನ ಬಣ್ಣದ ಬಳೆಯ ತೊಡುವ ಸಂಭ್ರಮದಲ್ಲಿ ಮುಳುಗಿದರೆ ಮನೆಯ ಯಜಮಾನನೂ ಜೇಬಿನ ಚಿಂತೆ ಮರೆತು ಆರಿಸುವುದರಲ್ಲಿ, ಸಲಹೆ ಕೊಡುವುದರಲ್ಲಿ ಮಗ್ನರಾಗುವುದು ಕಾಣಿಸುವುದು ಈ ಹಬ್ಬದಲ್ಲಿ ಮಾತ್ರವೇನೋ..

ಅಪ್ಪ ಕುಂಕುಮಕ್ಕೆ ಕೊಟ್ಟ, ಅಮ್ಮ ಮುದುರಿ ಮುಚ್ಚಿಕೊಟ್ಟ, ಅಣ್ಣನೋ ತಮ್ಮನೋ ಕೈ ಮುಷ್ಟಿಯಲ್ಲಿಟ್ಟ ಸಕಲ ಸಂಪತ್ತೂ ಅಂದು ಹೊರಗೆ ಬಂದು ಬಳೆಗಾರನ ಕೈ ಸೇರಿ ಅವೆಲ್ಲಾ ಬಳೆಗಳಾಗಿ ಕೈ ತುಂಬಿ ಘಲ್ ಘಲ್ ಎನ್ನುತ್ತಿದ್ದರೆ ಒಡಹುಟ್ಟಿದವರ ಜೊತೆ ಓಡಾಡಿದ ಹಾಗೆ, ಬಳೆ ಸರಿಸುವಾಗ ಅವರು ಕೈ ನೇವರಿಸಿದ ಹಾಗೆ, ಮುಂಗುರುಳು ಸರಿಸುವಾಗ ಕೆನ್ನೆಗೆ ತಾಗಿದರೆ ಸವರಿದಂತೆ, ತಲೆಯಡಿ ಕೈಯಿಟ್ಟು ಮಲಗಿದರೆ ಅವರ ಮಡಿಲಲ್ಲಿ ಮಲಗಿದಂತೆ. ತವರು ಜೋತೆಯಾದಂತೆ, ಪ್ರೀತಿ ಬೆನ್ನಾದಂತೆ... ಹಾಗಾಗಿ ಈ ಹಬ್ಬದ ಶುರುವಾತೆ ಬಳೆ ಇಡುವುದರ ಮೂಲಕ. ಮನೆಯ ಹಿರಿಯಕಿರಿಯರಾದಿಯಾಗಿ ಹೀಗೆ ಬಳೆ ತೊಟ್ಟು ಸಂಭ್ರಮಿಸುವಾಗಲೇ ನನ್ನ ಬಳೆಯೆಲ್ಲಿ ಎಂದು ಗೌರಿ ಬರುತ್ತಿದ್ದಳಂತೆ ಎಂದು ಅಜ್ಜಿ ಹೇಳುತ್ತಿದ್ದರೆ ನಾನು ಅಪ್ಪ ಬರುವುದನ್ನೇ ಕಾಯುತ್ತಿದ್ದೆ.

ನಿಂತಲ್ಲಿ ನಿಲ್ಲದ, ಸುಮ್ಮನೆ ಕೂರದ ಹುಡುಗಾಟದ ಸ್ವಭಾವದ ನನ್ನ ಕೈ ಬಳೆಗಳಿಗೆ ಕಾಮನ ಬಿಲ್ಲಿನಷ್ಟೇ ಅಲ್ಪಾಯಸ್ಸು. ಎಷ್ಟೇ ಪ್ರೀತಿಯಿಂದ ದಿಟ್ಟಿಸಿದರೂ ಕ್ಷಣ ಹೊತ್ತಿನಲ್ಲಿ ಮಾಯವಾಗುವ ಕಾಮನಬಿಲ್ಲಿನ ಹಾಗೆ ಎಷ್ಟೇ ಕಾಳಜಿಯಿಂದ ನೋಡಿಕೊಂಡರೂ ಅವು ಪಟ್ ಎಂದು ಒಡೆದುಹೋಗುತ್ತಿತ್ತು. ಇವ್ಳಿಗೆ ಈ ಬಳೆಯೆಲ್ಲಾ ಉಪಯೋಗಕ್ಕೆ ಬರೋಲ್ಲ ಸುಮ್ನೆ ದುಡ್ಡು ದಂಡ ಕಬ್ಬಿಣದ ಬಳೆ ಮಾಡಿಸಿ ಹಾಕಬೇಕು ಎಂದು ಮಾವ ಗುಡುಗುತ್ತಿದ್ದರೆ ಕಣ್ಣಲ್ಲಿ ವರ್ಷಧಾರೆ. ಲಂಗದ ಅಂಚಿನಿಂದ ಕಣ್ಣು ಒರೆಸಿಕೊಳ್ಳುತ್ತಾ ಇನ್ನು ಈ ಜನ್ಮದಲ್ಲಿ ಬಳೆ ಇಡುವುದಿಲ್ಲ ಎಂದು ಉಗ್ರ ಶಪಧ ಮಾಡುತ್ತಾ ಹೆಗಲಿಗೆ ಪಾಟೀ ಚೀಲ ಏರಿಸಿ ಸಣ್ಣಗೆ ಹನಿಯುವ ಮಳೆಯಲ್ಲಿ ನೆನೆಯುತ್ತಾ ಶಾಲೆಗೇ ಹೋಗುವಾಗ ದಾರಿಯ ಮಧ್ಯದಲ್ಲಿ ಶೋಭಣ್ಣಾ ಎನ್ನುವ ಸ್ವರ ತಡೆದು ನಿಲ್ಲಿಸುತ್ತಿತ್ತು.

ತಿರುಗಿದರೆ ಜೇಬಿನಿಂದ ದುಡ್ಡು ತೆಗೆಯುವ ಅಪ್ಪ ಕಾಣಿಸುತ್ತಿದ್ದ. ಮತ್ತೆ ಕಣ್ಣಲ್ಲಿ ಕಾಮನಬಿಲ್ಲು, ನಿಂಗೆ ಇಷ್ಟವಾದ ಬಳೆ ಇಟ್ಕೋ ಮಗಳೇ ಅನ್ನುತ್ತಿದ್ದರೆ ಅಲ್ಲಿಯವರೆಗೂ ಹನಿಯುತ್ತಿದ್ದ ಮಳೆ ಒಮ್ಮೆಲೇ ಜೋರಾಗುತಿತ್ತು. ಶಪಥ ಮರೆತು ಹೋಗುತ್ತಿತ್ತು. ಅಪ್ಪ ಮಗಳನ್ನು ಬೆಸೆಯಲೆಂದೇ ಬಂದಳಾ ಈ ಗೌರಿ ಅನ್ನಿಸಿ ಹಬ್ಬ ಇನ್ನಷ್ಟು ಆಪ್ತವಾಗುತಿತ್ತು, ಇಷ್ಟವಾಗುತ್ತಿತ್ತು. ಇಂಥಾ ಅಪ್ಪ ಸಣ್ಣದೊಂದೂ ಸುಳಿವು ಕೊಡದೆ ಬಿಟ್ಟು ಹೋದಾಗ ಮಾತ್ರ ಮನಸ್ಸಿನಂತೆ ಕೈಯೂ ಖಾಲಿ ಖಾಲಿ, ಬೋಳು ಬೋಳು. ಬಳೆಯಿಂದರೆ ಜೀವ ಬಿಡುತ್ತಿದ್ದವಳಿಗೆ ಅದೆಂದರೆ ಹಿಂಸೆಯಾಗಿ ಖಾಲಿ ಕೈ ಸಹನಿಯವೆನ್ನಿಸಿ ಬದುಕೇ ಖಾಲಿಯಾದ ಮೇಲೆ ಕೈ ತುಂಬಿಕೊಂಡು ಮಾಡುವುದೇನು ಅನ್ನಿಸಿ ಖಾಲಿತನ ಅಭ್ಯಾಸವಾಗಿ ಹೋಯಿತು.

ಬಳೆಯೇ ಇಲ್ಲದ ಗೌರೀ ಹಬ್ಬವೂ ಯಾಂತ್ರಿಕವಾಗಿ, ಅದೊಂದು ಕಣ್ಣು ತುಂಬುವ ಆಚರಣೆಯಾಗಿ ಉಸಿರಿನಷ್ಟೇ ಅಭ್ಯಾಸವಾಗಿ ಹೋಗಿದ್ದ ಕಾಲದಲ್ಲಿ, ಹಬ್ಬ ಬರುವ ಹೊತ್ತಿಗೆ ಮಂಕಾಗಿ ಬಾಗಿಲ ಕಡೆಗೆ ದೃಷ್ಟಿ ಹರಿಸುವವಳ ಕಂಡು ಬಣ್ಣದ ಬಳೆ ತಂದು ತೊಡಿಸಿದ ಗಂಡ ಅಪ್ಪನಂತಾಗಿದ್ದ. ಖಾಲಿತನ ತೊಡೆಯುವ ಪ್ರಯತ್ನ ಮಾಡಿದ್ದ.  ಮಗಳು ಹುಟ್ಟಿದ ಮೇಲಂತೂ ಬಣ್ಣ ಬಣ್ಣದ ಬಳೆಗಳ ರಾಶಿಯೇ ತಂದು ಸುರಿಯುವಾಗ ಅವಳ ಭಾಗ್ಯದಲ್ಲಿ ನನ್ನ ದೌರ್ಭಾಗ್ಯ ಪ್ರಖರತೆ ಕಳೆದುಕೊಳ್ಳುತ್ತಾ ಹೋಗಿತ್ತು. ಮತ್ತೆ ಗೌರಿ ಹಬ್ಬ ಬಂದಿದೆ. ಅಪ್ರಯತ್ನವಾಗಿ ಕಣ್ಣು ಬಾಗಿಲತ್ತ ದಿಟ್ಟಿಸುತ್ತದೆ, ಮನಸ್ಸು ಮತ್ತೆ ಮೌನವಾಗುತ್ತದೆ.  ಬದುಕು ಬರುವ ಹಬ್ಬಕ್ಕಾಗಿ ಬಾರದ ಹಬ್ಬಕ್ಕಾಗಿ ಕಾಯುತ್ತಲೇ ಇರುತ್ತದೆ...

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...