ಇವತ್ತೇ ಹೊರಟು ಬಿಡು ಮಳೆ ಸ್ವಲ್ಪ ಕಡಿಮೆ ಆದ ಹಾಗಿದೆ ಅಂತ ಫೋನ್ ಬಂದಾಗ ಹೊರಡುವುದೋ ಬೇಡವೋ ಅನ್ನುವ ಗೊಂದಲಕ್ಕೆ ತೆರೆ ಬಿದ್ದು ಆದದ್ದಾಗಲಿ ಹೊರಟೇ ಬಿಡ್ತೀನಿ ಮತ್ತೆ ಏನಾಗುತ್ತೋ ನೋಡುವ ಎಂದು ಹೊರಟಿದ್ದಾಗಿತ್ತು. ಅದಾಗಲೇ ಉತ್ತರ ಕರ್ನಾಟಕ ಅರ್ಧ ಮುಳುಗಿದ ಸುದ್ದಿ ಕೇಳಿ ನೆಲೆ ಕಳೆದುಕೊಂಡವರ ನೋಡಿ ಸಂಕಟ. ಊರಲ್ಲಿ ಏನಾಗಿದೆಯೋ ಅನ್ನೋ ಆತಂಕ. ಮದುವೆಗಿನ್ನೂ ಒಂದೇ ವಾರ ಹೀಗೆ ಮಳೆ ಹೊಯ್ದರೆ ಹೇಗೆ ನಡೆಯುತ್ತೋ ಅನ್ನುವ ಭಯ. ಇವೆಲ್ಲಗಳನಡುವೆ ಊರಿನ ಮಳೆ ಹೊಳೆ ನೋಡುವ ಸಣ್ಣ ಸಂಭ್ರಮ. ಅಂತೂ ಇಂತೂ ಬಸ್ ಹತ್ತಿ ಕುಳಿತರೆ ಮೊದಲೇ ನಿದ್ದೆ ಬರದದ್ದು ಈಗ ಬರುವುದಾದರೂ ಹೇಗೆ?
ದಾರಿಯ ಮಧ್ಯೆ ಸಿಗುವ ವಾಹನಗಳ ಹಾಗೆ ಮಳೆಯೂ ನಡು ನಡುವೆ ಸಿಗುತ್ತಾ, ಕಚಗುಳಿಯಿಟ್ಟು ಮಾತಾಡಿಸುತ್ತಾ ದಾರಿ ಸಾಗುತಿತ್ತು. ಯಾಕೋ ಕುಳಿತು ಕುಳಿತು ಬೆನ್ನು ನೋವು ಎಂದು ಹಾಗೆ ಒರಗುವಾಗ ಮಂಡಗದ್ದೆಯಲ್ಲಿ ದಾರಿ ಕ್ಲಿಯರ್ ಇದೆ ಅನ್ನುವ ಮಾತು ಕೇಳಿ ಇನ್ನಷ್ಟು ಸಮಾಧಾನದಿಂದ ಹಾಗೆ ಒರಗಿ ಗಾಜನೂರು ಬರುತ್ತಿದ್ದ ಹಾಗೆ ಮತ್ತೆ ತುಂಗೆಯ ಅಬ್ಬರ ನೋಡುವ ಮನಸ್ಸಾಗಿ ಎದ್ದು ಕಣ್ಣು ಕೀಲಿಸಿ ಕುಳಿತು ಸಮಯ ಎಷ್ಟು ಎಂದು ನೋಡುವ ಎಂದು ಮಗಳಿಗೆ ಹೊಚ್ಚಿದ್ದ ರಜಾಯಿ ನಿಧಾನಕ್ಕೆ ಸರಿಸಿ ಹ್ಯಾಂಡ್ ಬ್ಯಾಗ್ ತೆಗೆಯಲು ಹೋದರೆ ಒಮ್ಮೆಗೆ ಎದೆ ಧಸಕ್ಕೆಂದಿತು.
ಯಾವತ್ತೂ ಒಮ್ಮೆ ಹತ್ತಿದ ಮೇಲೆ ಕಾಲ ಬುಡದಲ್ಲಿ ಬ್ಯಾಗ್ ಇಟ್ಟರೆ ಇಳಿಯುವಾಗಲೇ ತೆಗೆಯುವ ಸ್ವಭಾವ. ಅವತ್ತೂ ಹಾಗೆ ಕಾಲ ಬುಡದಲ್ಲಿ handbag ಹಾಗೂ luggage ಬ್ಯಾಗ್ ಇಟ್ಟವಳು ಚಳಿ ಎಂದು ಮಗಳಿಗೆ ರಜಾಯಿ ಹೊದಿಸುವಾಗ ಅದಕ್ಕೂ ಹೊದಿಸಿದ್ದೆ. ಗಾಬರಿಯಲ್ಲಿ ರಜಾಯಿ ಸರಿಸುವ ರಭಸಕ್ಕೆ ಮಗಳೂ ಎದ್ದು ಏನಮ್ಮಾ ಊರು ಬಂತಾ ಎಂದು ಕಣ್ಣು ಉಜ್ಜುತ್ತಾ ಕೇಳಿದರೆ ಪ್ರಶ್ನೆ ಕಿವಿಗೆ ಕೇಳಿಸಿದರೂ ಮನಸ್ಸಿಗೆ ಇಳಿಯಲಿಲ್ಲ. ನನ್ನ ಗಾಬರಿ ನೋಡಿ ಅವಳೂ ಎದ್ದು ಕುಳಿತು ರಜಾಯಿ ಎತ್ತಿ ಕೆಳಗೆ ಹಾಕಿ ನೋಡಿದರೂ ಬ್ಯಾಗ್ ಕಾಣಿಸಲಿಲ್ಲ. ಹೋಗಿ ಬ್ಯಾಗ್ ಕಾಣಿಸ್ತಾ ಇಲ್ಲ ಅನ್ನುವ ಮಾತು ಕೇಳಿದ ಕೂಡಲೇ ಕಂಡಕ್ಟರ್ ಗಿಂತಲೂ ಮುಂಚೆ ನಮಗೇನು ಗೊತ್ತಿರುತ್ತೆ ಎಂದು ಉರಿದು ಬಿದ್ದ ಡ್ರೈವರ್, ನಮಗೆ ಅದೆಲ್ಲಾ ಗೊತ್ತಿಲ್ಲಮ್ಮ ಅನ್ನುವ ಕಂಡಕ್ಟರ್. atleast ಲೈಟ್ ಆದರೂ ಆನ್ ಮಾಡಿ ಎಂದರೆ ಬೇಕೋ ಬೇಡವೋ ಎಂದು ಎದ್ದು ಬಂದವರು ಆನ್ ಮಾಡಿ ಕೆಳಗೆ ಬಗ್ಗಿ ಹುಡುಕುತ್ತಿದ್ದರೆ ಅಲ್ಲೆಲ್ಲಾ ಇಲ್ಲ ಬಿಡಿ ಮೇಡಂ ನಿಮ್ಮ ಬ್ಯಾಗ್ ದೊಡ್ದದಿತ್ತಲ್ಲಾ ಎಂದರು. ಹೋಗ್ಲಿ ಫೋನ್ ಕೊಡಿ ಟ್ರೈ ಮಾಡ್ತೀನಿ ಎಂದರೆ ಸಿಗ್ನಲ್ ಇಲ್ಲ ಎಂದವರೇ ಸ್ವಲ್ಪವೂ ಸಂಬಂಧವೇ ಇಲ್ಲದ ಹಾಗೆ ತಮ್ಮ ಜಾಗದಲ್ಲಿ ಹೋಗಿ ಕುಳಿತರು. ಪಕ್ಕದ ಸೀಟ್ ನವರು ಕೊಟ್ಟ ಫೋನ್ ನಿಂದ ಫೋನ್ ಮಾಡಿದರೆ ಅದಾಗಲೇ ಎರಡೂ ಫೋನ್ ಸ್ವಿಚ್ ಆಫ್.
ಯಾಕೋ ಮೊದಲ ಸಲ ಭಯ, ಗಾಬರಿ ಎಲ್ಲವೂ ಶುರುವಾಗಿತ್ತು. ಮೊದಲೆಲ್ಲಾ ಏನಾದರೂ ಕಳೆದು ಹೋದರೆ ಹೋಯ್ತಾ ಎನ್ಮಾಡೋಕೆ ಆಗುತ್ತೆ ಅಂತ ಕೊಡವಿಕೊಳ್ಳುವ ಸ್ವಭಾವದವಳು ಶಾಕ್ ಗೆ ಒಳಗಾಗಿದ್ದೆ. ಸುರಿಯುವ ಮಳೆಯಲ್ಲಿ ತೀರ್ಥಹಳ್ಳಿಯಲ್ಲಿ ಬಸ್ ನಿಂದ ಇಳಿದು ನಿಂತವಳಿಗೆ ಎಲ್ಲವನ್ನೂ ಕಳೆದುಕೊಂಡು ದಿಕ್ಕೇ ತೋಚದೆ ನಿಂತ ಭಾವ, ಅಕ್ಷರಶಃ ಒಂಟಿತನ. ಕ್ಷಣಕಾಲ ಎಲ್ಲವೂ ಸ್ತಬ್ಧ ಅನ್ನಿಸಿ ಇಳಿಸಿದ ಬಸ್ ತನಗೆ ಸಂಬಂಧವೇ ಇಲ್ಲದ ಹಾಗೆ ನೀರು ಹಾರಿಸುತ್ತಾ ಮುಂದೆ ಹೋದರೆ ಇಡೀ ಜಗತ್ತೇ ಶೂನ್ಯ ಅನ್ನಿಸಿ, ಅಸಹಾಯಕತೆ ಕಾಡಿ, ಏನೂ ಇಲ್ಲದ ಭಾವ ನಿಶಕ್ತಗೊಳಿಸಿ ಸ್ತಬ್ಧವಾಗಿ ನಿಂತೇ ಇರುವಾಗ ಅಮ್ಮಾ ಏನೂ ಆಗಿಲ್ಲ ಅಮ್ಮಾ ಜಸ್ಟ್ ಪರ್ಸ್ ಹೋಗಿದ್ದು ಅಷ್ಟೇ ಕಾಮನ್ ಮನೆಗೆ ಹೋಗೋಣ ಎಂದು ಮಗಳು ತಬ್ಬಿ ಅಲುಗಿಸಿ ಕೈಯನ್ನು ಗಟ್ಟಿಯಾಗಿ ಹಿಡಿದು ಆಟೋ ಹತ್ತಿರ ಕರೆದುಕೊಂಡು ಹೋಗುವಾಗ ಇವಳು ಜೊತೆಗಿಲ್ಲದೆ ಹೋಗಿದ್ದರೆ ಏನಾಗುತ್ತಿತ್ತು ಎಂಬ ಯೋಚನೆ ಹುಟ್ಟಿ ಹೊಟ್ಟೆಯಾಳದಲ್ಲಿ ಹುಟ್ಟಿದ ನಡುಕು ಇಡೀ ಮೈಯನ್ನು ಆವರಿಸಿ ತತ್ತರಿಸುತ್ತಿದ್ದರೆ ಮಗಳು ಅಪ್ಪಿ ಹಿಡಿದು ಏನಾಗಲ್ಲಮ್ಮ ಸಿಗುತ್ತೆ ಇಲ್ಲಾ ಬ್ಲಾಕ್ ಮಾಡಿಸಿದರೆ ಆಯ್ತು ಎಂದು ಕೈಯನ್ನು ತಟ್ಟುತ್ತಲೇ ಇದ್ದಳು.
ಎಲ್ಲವೂ ಇದೆ ಆದರೆ ಯಾವುದೂ ಇಲ್ಲ, ಎಲ್ಲರೂ ಇದ್ದಾರೆ ಈ ಕ್ಷಣಕ್ಕೆ ಯಾರೂ ಇಲ್ಲ, ಮೊತ್ತ ಮೊದಲ ಬಾರಿಗೆ ಖಾಲಿ ಜೇಬು ಹುಟ್ಟಿಸುವ ಭಯದ ಅರಿವಾಯಿತು. ಹೋಯ್ತು ಅಷ್ಟೇ ತಾನೇ ಈಗ ಮನೆಗೆ ಹೋಗು ಎಂದ ಗಂಡನ ಮಾತು, ಹೋಯ್ತಾ ಬಿಡು ಅನ್ನುವ ನನ್ನ ಸಹಜ ಸ್ವಭಾವ ಎರಡೂ ಮರೆಸುವಶಕ್ತಿ ಈ ಖಾಲಿ ಜೇಬಿಗಿದೆಯಾ ಅಥವಾ ವಯಸ್ಸು ಆಗುತ್ತಾ ಆಗುತ್ತಾ ಸ್ಥೈರ್ಯ ಉಡುಗುತ್ತಾ ತಲೆ ಗೊಂದಲದ ಬೀಡು. ಒಂದು ಪುಟ್ಟ ವಸ್ತು, ಅಂಗೈಯಲ್ಲಿ ಮುದ್ದಾಗಿ ಕೂರುವ ಮೊಬೈಲ್ ನಮ್ಮ ಗುಟ್ಟು ಅಡಗಿಸಿಕೊಂಡು ಬೀಗುತ್ತಲೇ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯ ಅನ್ನಿಸುವ ಹಾಗೆ ಧೈರ್ಯ ತುಂಬುವ ಇದು ಚೂರು ವ್ಯತ್ಯಾಸವಾದರೂ ಸರ್ವಸ್ವವೂ ಕಳೆದುಹೋದ ಫೀಲ್ ಕೊಡುತ್ತಲ್ಲ, ಎಷ್ಟೊಂದು ಡಿಪೆಂಡ್ ಆಗಿ ಹೋಗಿದ್ದೆವಲ್ಲ ಅನ್ನುವ ಗಾಬರಿ, ಜೊತೆಗಿದ್ದ ಕಾರ್ಡ್, ಆಗಷ್ಟೇ ಕ್ರೆಡಿಟ್ ಆಗಿದ್ದ ಸ್ಯಾಲರಿ, ಎಲ್ಲವೂ ಒಂದು ಕೋಡ್ ನಲ್ಲಿ ಬಿಡುಗಡೆ ಆಗುವಷ್ಟು ಸರಳವಾಗಿ ಹೋಗಿದೆಯಲ್ಲ, ಕಳೆದುಕೊಳ್ಳುವುದು ಇಷ್ಟು ಸುಲಭವಾ ಅನ್ನುವ ಯೋಚನೆ.. ಫೋನ್ ನಂ, ಫೇಸ್ಬುಕ್, ಬ್ಯಾಂಕ್ ಅಕೌಂಟ್ misuse ಆಗುತ್ತಾ ಅನ್ನುವ ಭಯ..
ಬೆಳಕು ಸರಿಯಾಗಿ ಹರಿಯುವ ಮೊದಲೇ ಎಲ್ಲವೂ ಬ್ಲಾಕ್ ಆಗಿ ಒಹ್ ಮೊಬೈಲ್ ಹೋಯ್ತು ಅಷ್ಟೇ ಅನ್ನಿಸಿದರೂ ಖಾಲಿತನ ಕಾಡುತ್ತಲೇ ಇತ್ತು. ನಡು ರಾತ್ರಿಯಲ್ಲಿ ತಟ್ಟನೆ ನೆನಪಾಗಿ ಮತ್ತೆ ನಿದ್ದೆ ಹತ್ತದೆ ಸಂಕಟವಾಗಿ ಹೀಗಾಗಿರಬಹುದು ಎನ್ನುವ ಯೋಚನೆಗಳು ಹುಟ್ಟಿ ಛೆ ನಾನ್ಯಾಕೆ ಹೀಗಾದೆ ಅನ್ನುವ ಭಾವ ಕಾಡಿ ಕಳೆದುಕೊಂಡಿದ್ದು ಬ್ಯಾಗೋ ಅಥವಾ ನನ್ನ ಸಹಜ ಧೈರ್ಯ, ಕೊಡವಿ ಮುಂದಕ್ಕೆ ನಡೆಯುವ ಸ್ವಭಾವವಾ ಎಂಬ ಆತಂಕವಾಗಿ ಬಿಸಿ ರಕ್ತ ಏನೂ ಗೊತ್ತಾಗೊಲ್ಲ ವಯಸ್ಸಾಗುತ್ತಾ ಬಂದ ಹಾಗೆ ರಕ್ತ ತಣ್ಣಗಾಗುತ್ತಲ್ಲ ಆಗ ತಿಳಿಯುತ್ತೆ ಎಂದು ಅಜ್ಜಿ ಆಗಾಗ ಹೇಳುತ್ತಿದ್ದ ಮಾತು ಮತ್ತಷ್ಟು ಅರ್ಥವಾಗಿ ನಡುಕು ಹುಟ್ಟಿ ಮತ್ತಷ್ಟು ರಗ್ಗು ಎಳೆದು ಮಲಗಿದರೆ ಕಾಡಿಸಿ ಕಾಡಿಸಿ ಬರುವ ನಿದ್ದೆ.
ಎಲ್ಲವೂ ಇತ್ತು ದುಡುಕಿ ಬಿಟ್ಟರು ಎಂದು ಇನ್ಯಾರಿಗೋ ಉಪದೇಶ ಕೊಡುವುದು ತುಂಬಾ ಸುಲಭ. ಎಲ್ಲವನ್ನೂ ಕಳೆದುಕೊಂಡು, ಮತ್ಯಾವುದೂ ಆ ಸಮಯಕ್ಕೆ ಒದಗದೆ, ಇದ್ದೂ ಇಲ್ಲದಂತ ಪರಿಸ್ಥಿತಿ ಇದೆಯಲ್ಲ ಅದನ್ನು ನಿಭಾಯಿಸುವುದು ತುಂಬಾ ಕಷ್ಟ. ಆ ಒಂದು ಕ್ಷಣ ಯಾರೂ ಇಲ್ಲ ಯಾವುದೂ ಇಲ್ಲ ಎನ್ನುವ ಸ್ಥ್ತಿತಿ ಇದೆಯಲ್ಲ ಅದನ್ನು ದಾಟುವುದು ಮನಸ್ಸನ್ನು ನಿಗ್ರಹಗೊಳಿಸುವುದು ಸುಲಭವಲ್ಲ. ಇದ್ದಾಗ ಕೇಳುವುದಕ್ಕೂ ಇಲ್ಲದಾಗ ಕೇಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಮ್ಮ ಅಹಂ, ಆತ್ಮಾಭಿಮಾನ ಎಲ್ಲವನ್ನೂ ಮೂಟೆ ಕಟ್ಟಿ ಕೇಳುವಾಗ ಜೀವವೇ ಹಿಡಿಯಾಗುತ್ತದೆ. ಬೊಗಸೆಯೆತ್ತಿ ಕೊಟ್ಟ ಕೈ ಬೊಗಸೆ ಒಡ್ಡುವುದು ಬಹಳ ಕಷ್ಟ. ಯಾಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಅಂತ ಮೊತ ಮೊದಲ ಬಾರಿಗೆ ಅರ್ಥವಾಗಿ ಬಿಟ್ಟಿತು. ಕಳೆದುಕೊಂಡವರಿಗೆ ಉಪದೇಶ ಕೊಡುವುದು ಎಷ್ಟೊಂದು ಘಾಸಿ ಹುಟ್ಟಿಸುತ್ತದೆ ಎನ್ನುವುದೂ ಅರಿವಾಯಿತು.
ಆ ಕ್ಷಣವನ್ನು ಎದುರಿಸಿ ದಾಟಿ ಬಂದ ಮೇಲೆ ಬಹಳಷ್ಟು ಸತ್ಯಗಳು ಅರ್ಥವಾಗಿ, ಅನುಭವವಾಗಿ ಬದುಕಿನ ಬಗ್ಗೆ ಕೆಲವು ವ್ಯಾಖ್ಯಾನಗಳೇ ಬದಲಾಯಿತು. ಅವಲಂಬನೆಯ ತೀವ್ರತೆ ಅರಿವಾಯಿತು. ಪುಟ್ಟ ಯಂತ್ರ ಎಷ್ಟು ಹಿಡಿತದಲ್ಲಿ ಇಟ್ಟುಕೊಂಡಿದೆ ಎಂದು ಅರ್ಥವಾಯಿತು. ಅದೊಂದು ದಿನ ಕಳೆದ ನಂತರ ನೋಟವೇ ಬದಲಾಯಿತು. ಬದುಕು ಹೊಸ ಆಲೋಚನೆಯ ಮಗ್ಗುಲು ಹಿಡಿಯಿತು. ಕಳೆದದ್ದು ಬ್ಯಾಗ್, ದಕ್ಕಿದ ಅನುಭವ, ಆನುಭವ ಕಟ್ಟಿಕೊಟ್ಟ ಹೊಳವು ಮಾತ್ರ ಲೆಕ್ಕಕ್ಕೆ ನಿಲುಕದ್ದು...
Comments
Post a Comment