ಸಾವರ್ಕರ್ ಹೊಸದಿಂಗಂತ 24.1019


ನವರಾತ್ರಿಯ ಸಮಯ. ಅಷ್ಟು ದಿನಗಳು ಊರಿನ ಹೊರಗೆ ಇರುತ್ತಿದ್ದ ಭವಾನಿಯ ವಿಗ್ರಹ ಅಂದು ಊರಿನ ಒಳಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಬರುತ್ತಿತ್ತು. ಹಾಗೆ ಬಂದ ಪಲ್ಲಕ್ಕಿ ಆ ಊರಿನ ಪ್ರಮುಖರ ಮನೆಯ ಮುಂದೆ ನಿಲ್ಲುತ್ತಿತ್ತು. ಅಲ್ಲಿಂದ ಏನು ಮಾಡಿದರೂ ಮುಂದಕ್ಕೆ ಸರಿಯುತ್ತಿರಲಿಲ್ಲ. ಹಾಗೆ ಬಂದ ದೇವರನ್ನು ಸ್ವಾಗತಿಸಿ ತೆಗೆದುಕೊಂಡು ಹೋಗಿ ದೇವರ ಕೋಣೆಯಲ್ಲಿ ಪ್ರತಿಷ್ಟಾಪನೆ ಮಾಡಿ ಅಲ್ಲಿಂದ ಹತ್ತು ದಿನಗಳ ಕಾಲ ಪೂಜೆ ವ್ರತ ಶ್ರದ್ಧೆಯಿಂದ ನಡೆಸಲಾಗುತ್ತಿತ್ತು. ಜನರೂ ಹಾಗೆಯೇ ಬರುತ್ತಿದ್ದರು. ಬಂದ ಜನಗಳೆಲ್ಲಾ ಖಾಲಿಯಾದ ಮೇಲೆ ಆ ಮನೆಯ ಹುಡುಗನೊಬ್ಬ ಒಳಗೆ ಹೋಗಿ ದೇವಿಯ ಮುಂದೆ ಕಣ್ಮುಚ್ಚಿ ಕೂರುತ್ತಿದ್ದ. ಅಷ್ಟ ಭುಜಾಕೃತಿಯ ಆ ದೇವಿಯನ್ನು ಧ್ಯಾನಿಸುತ್ತಾ ನೋಡು ನಿಂಗೆ ರಾಕ್ಷಸರ ಸಂಹಾರ ಮಾಡುವುದಕ್ಕೆ ನಾನು ಸಹಾಯ ಮಾಡುತ್ತೇನೆ, ನಂಗೆ ನಿನ್ನ ಕೈಯಲ್ಲಿರುವ ಆಯುಧಗಳನ್ನು ಕೊಡು ಎಂದು ಕೇಳಿಕೊಳ್ಳುತ್ತಿದ್ದ. 

ಎಳೆಯ ವಯಸ್ಸಿನಲ್ಲಿಯೇ ದೇಶದ ಆಗುಹೋಗುಗಳ ಬಗ್ಗೆ, ರಾಜಕೀಯದ ಬಗ್ಗೆ ತಿಳಿದಿದ್ದ ಆ ಹುಡುಗನಿಗೆ ಎಷ್ಟೋ ಸಲ ಶಾಲೆಯಲ್ಲಿ ಮೇಷ್ಟರು ಸಣ್ಣ ಬಾಯಲ್ಲಿ ದೊಡ್ಡ ತುತ್ತು ನುಂಗಬೇಡ ಸುಮ್ಮನಿರು ಎಂದು ಗದರಿಸುತ್ತಿದ್ದರು. ಹುಟ್ಟಿದ ಮನೆತನವೇ ಅಂತಹುದು. ಅವರ ಪೂರ್ವಿಕರ ಸಾಧನೆಗೆ ಪೇಶ್ವೆಗಳು ಪಲ್ಲಕ್ಕಿಯನ್ನೇ ಕೊಟ್ಟಿದ್ದರಂತೆ. ಹಾಗಾಗಿ ಆ ಹುಡುಗನಿಗೆ ಶೌರ್ಯ ಹಾಗೂ ಧೈರ್ಯ ಎರಡೂ ರಕ್ತದಲ್ಲಿಯೇ ಬಂದಿತ್ತು. ರಾತ್ರಿ ಕೂರಿಸಿಕೊಂಡು ದೊಡ್ಡಪ್ಪ ಹೇಳುತ್ತಿದ್ದ ಕತೆಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ, ಶಿವಾಜಿ ಮಹಾರಾಜನ ಕತೆಗಳೇ ಹೆಚ್ಚಿದ್ದವು.  ಶತ್ರುಗಳನ್ನು ಎದುರಿಸುವ ಕತೆಗಳನ್ನೇ ಕೇಳಿ ಬೆಳದಿದ್ದ ಆ ಹುಡುಗನಲ್ಲಿ ಕೆಚ್ಚು, ಸ್ವಾಭಿಮಾನ ಸಹಜವಾಗಿ ಬಂದಿತ್ತು. ಅಮ್ಮನೂ ಕತೆ ಹೇಳುವಾಗ ಶಿವಾಜಿ ಮಹಾರಾಜರಿಗೆ ತಾಯಿ ಭವಾನಿ ಅನುಗ್ರಹಿಸಿದ್ದಳು, ಹಾಗಾಗಿಯೇ ಅವರಿಗೆ ಯಶಸ್ಸು, ಗೆಲುವು ದೊರೆಯಿತು ಎನ್ನುವಾಗ ನವರಾತ್ರಿಗೆ ತಮ್ಮ ಮನೆಗೆ ಬರುತ್ತಿದ್ದ ಭವಾನಿಯ ವಿಗ್ರಹ ನೆನಪಾಗಿತ್ತು. ಹಾಗಾಗಿಯೇ ದೇವಿಯ ಮುಂದೆ ಕುಳಿತು ನಿನ್ನ ಆಯುಧಗಳನ್ನು ಕೊಡು, ಆಶೀರ್ವಾದ ಮಾಡು ನಾನು ಗೆಲುವು ಸಾಧಿಸುತ್ತೇನೆ ಎಂದು ಕೇಳುತ್ತಿದ್ದ ಆ ಹುಡುಗ ಮತ್ತಾರು ಅಲ್ಲ ಅವನೇ ವಿನಾಯಕ ದಾಮೋದರ ಸಾವರ್ಕರ್. ಅದೇ ಕೆಚ್ಚು ದೃಢತೆ ಕೊನೆಯವರೆಗೂ ಅವರಲ್ಲಿ ಅಷ್ಟೇ ಪ್ರಖರವಾಗಿತ್ತು. ಬ್ರಿಟಿಷರು ಇವರನ್ನು ಮಣಿಸಲು ಹರಸಾಹಸ ಪಟ್ಟಿದ್ದರು. ಜನರಿಗೆ ಹತ್ತಿರವಾಗಿ ಉಳಿದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದು ಅಂಡಮಾನ್ ಜೈಲಿಗೆ ಸಾಗಹಾಕಿದ್ದರು.

ಭಾರತವಿದ್ದಿದ್ದೂ ಹಾಗೆಯೇ. ಕ್ಷಾತ್ರತ್ವ ಈ ಮಣ್ಣಿನ ಗುಣ. ಇಲ್ಲಿ ಸೋತು ಮಂಡಿಯೂರಿ ಗುಲಾಮಗಿರಿ ಒಪ್ಪಿಕೊಂಡಿದ್ದೆ ಇಲ್ಲ. ಧೈರ್ಯವಾಗಿ ಎದುರಿಸಿ, ಹೋರಾಡಿ ಸಾವಿಗೆ ತಲೆಬಾಗಿದರೆ ವಿನಃ ಗುಲಾಮಗಿರಿಗೆ ಖಂಡಿತವಾಗಿಯೂ ಅಲ್ಲ. ಅಂತ ನೆಲದಲ್ಲಿ ಹುಟ್ಟಿ , ವಿರೋಚಿತ, ದೇಶಕ್ಕಾಗಿ ಹೋರಾಡಿದವರ ಕತೆಗಳನ್ನು ಕೇಳಿ ಬೆಳೆದ ಮಕ್ಕಳು ಹೀಗಲ್ಲದೆ ಇನ್ನು ಹೇಗೆ ತಾನೇ ಇರಲು ಸಾಧ್ಯ. ಹುತಾತ್ಮ ನಾಗುವನು ದೃಢ ಮನಸ್ಸಿನಿಂದ  ಸಿದ್ಧನಾಗಿದ್ದರೆ ಹೌತಾತ್ಮ್ಯದ ಗಳಿಗೆ ಬಂದಿದೆಯೆಂದೇ ಅರ್ಥ ಅನ್ನುವ ಸಾವರ್ಕರ್ ಮಾತು ಅವರು ಹೇಗೆ ಸಿದ್ಧರಾಗಿಯೇ ಹೋರಾಟಕ್ಕೆ ದುಮುಕಿದ್ದರು ಅನ್ನುವುದಕ್ಕೆ ನಿದರ್ಶನ. ಎಲ್ಲಾ ಕ್ರಾಂತಿಕಾರಿಗಳು ಇದ್ದಿದ್ದೆ ಹೀಗೆ. ಎಲ್ಲವಕ್ಕೂ ಸಿದ್ಧರಾಗಿ, ಸಾವನ್ನು ಬೆನ್ನಿಗೆ ಕಟ್ಟಿಕೊಂಡೆ ಹೋರಾಟಕ್ಕೆ ಅಡಿಯಿಡುತ್ತಿದ್ದರು. ಸ್ವಾತಂತ್ರ್ಯ ಯಜ್ಞದಲ್ಲಿ ತಾವೊಂದು ಸಮಿಧೆ ಎಂದು ಭಾವಿಸಿ ಭಸ್ಮವಾಗುವ ಅರಿವಿದ್ದೇ ಮುನ್ನುಗ್ಗುತ್ತಿದ್ದರು. ಜೀವಕ್ಕಿಂತಲೂ ಸ್ವರಾಜ್ಯ ಮುಖ್ಯವಾಗಿತ್ತು. ಗುಲಾಮಿತನಕ್ಕಿಂತ ಸಾವೇ ಪ್ರಿಯವಾಗಿತ್ತು.  ಹಾಗಾಗಿಯೇ  ಯಾರೂ  ಯಾವುದೂ ಅವರನ್ನು ಅಲುಗಾಡಿಸದಷ್ಟೂ ಮನಸ್ಥೈರ್ಯವಿರುತ್ತಿತ್ತು. ಇಟ್ಟ ಹೆಜ್ಜೆಯನ್ನು ಯಾವುದೇ ಪರಿಸ್ಥಿತಿಯಲ್ಲೂ ಹಿಂದೆಗೆಯದ ಧೈರ್ಯವಿತ್ತು. ತನ್ನ ಸಾವು ಇನ್ಯಾರಿಗೋ ಸ್ಪೂರ್ತಿಯಾಗಬಹುದು, ಸ್ವಾತಂತ್ರ್ಯ ಯಜ್ಞದ ಕಿಡಿ ಆರದಂತೆ ಕಾಪಾಡಬಹುದು ಅನ್ನುವ ದೃಢ ವಿಶ್ವಾಸವಿತ್ತು.

ಬ್ರಿಟಿಷರು ನಿಜವಾಗಿಯೂ ಹೆದರಿದ್ದು ಇಂಥ ರಾಷ್ಟ್ರೀಯವಾದಿಗಳ ಹೋರಾಟಕ್ಕೆ, ಅವರಿಗಿದ್ದ ಜನ ಬೆಂಬಲಕ್ಕೆ, ಹೋರಾಡುತ್ತಿದ್ದ ರೀತಿಗೆ  ಅವರ ಕೆಚ್ಚಿಗೆ, ಚಾಣಾಕ್ಷತೆಗೆ, ತಮ್ಮನ್ನೇ ಹೆದರುವ ಹಾಗೆ ಮಾಡುತ್ತಿದ್ದ ಅವರ ಧೈರ್ಯಕ್ಕೆ, ಮುಂದಿನ ಪೀಳಿಗೆಯ ಸ್ವಾತಂತ್ರ್ಯಕ್ಕೆ ಅವರ ಇಂದಿನ ಬದುಕನ್ನೇ ತ್ಯಾಗ ಮಾಡುತ್ತಿದ್ದ ಆತ್ಮಸ್ಥೈರ್ಯಕ್ಕೆ,  ಸಾವನ್ನು ನಗುತ್ತಾ ಎದುರಿಸಿದ ಧೀಮಂತಿಕೆಗೆ, ತನ್ನ ಸಾವು ನೂರಾರು ಉತ್ಸಾಹಿ ಯುವಕರಿಗೆ ಸ್ಪೂರ್ತಿಯಾಗುವುದಾದರೆ ಬದುಕುವುದಕ್ಕಿಂತ ಸಾವೇ ಒಳ್ಳೆಯದು ಎನ್ನುವ ಅವರ ದೃಢ ನಿರ್ಧಾರಕ್ಕೆ. ಹಾಗಾಗಿಯೇ ಇಂಥಹ ಕ್ರಾಂತಿಕಾರಿಗಳಿಗಾಗಿಯೇ ಅವರು ವಿಶೇಷ ಜೈಲುಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರಿಗೆ ಕಟಿನ ಶಿಕ್ಷೆ ವಿಧಿಸಲಾಗುತ್ತಿತ್ತು. ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳಲಾಗುತಿತ್ತು. ಹೆಚ್ಚಿನ ದುಡಿತ, ಕಡಿಮೆ ಊಟ ಕೊಟ್ಟು ಸತಾಯಿಸಲಾಗುತ್ತಿತ್ತು.

 ಜನರ ಸಂಪರ್ಕವೇ ಇಲ್ಲದ ಹಾಗೆ ಒಂಟಿಯಾಗಿ ಇರುವ ಹಾಗೆ ನೋಡಿಕೊಳ್ಳಲಾಗುತಿತ್ತು.  ರಾತ್ರಿಯ ಹೊತ್ತು ಬೆಳಕೂ ಇಲ್ಲದ ಜಾಗದಲ್ಲಿ, ನೀರವ ಮೌನದಲ್ಲಿ ಅವರು ಕೊರಗಿ ಮನ ಬದಲಾಯಿಸುವ ವಾತಾವರಣ ನಿರ್ಮಿಸಲಾಗಿತ್ತು.  ಸಾಧಾರಣ ಜನರು ಆ ಶಿಕ್ಷೆಗೆ ಗುರಿಯಾದರೆ ಅವರು ಮಾನಸಿಕ ರೋಗಿಗಳಾಗುವುದರಲ್ಲಿ ಸಂದೇಹವೇ ಇರಲಿಲ್ಲ. ಮೂಲಭೂತ ಸೌಕರ್ಯಗಳನ್ನೂ ಕೊಡದೇ ಅವರು ರೋಗ ರುಜಿನಗಳಿಗೆ ತುತ್ತಾಗುವುದು ಸರ್ವೇ ಸಾಮಾನ್ಯವಾಗಿತ್ತು. ಅಂಡಮಾನ್, ಮುಲ್ತಾನ್ ಗಳಲ್ಲಿ ಕಟ್ಟಿದ ಜೈಲುಗಳಲ್ಲಿ ಯಾರ್ಯಾರನ್ನು ಹಾಕಲಾಗಿತ್ತು ಎಂದು ಒಮ್ಮೆ ಇತಿಹಾಸವನ್ನು ಗಮನಿಸಿದರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಅವರ ಧೀ ಶಕ್ತಿಯ ಅರಿವಾಗುತ್ತದೆ. ಯಾರ್ಯಾರ ಸೆರೆವಾಸ ಹೇಗಿತ್ತು, ಯಾವ್ಯಾವ ಸೌಲಭ್ಯ ನೀಡಲಾಗಿತ್ತು ಎನ್ನುವುದರ ಮಾಹಿತಿ ಗಮನಿಸಿದರೆ ಸಾಕು ಬ್ರಿಟಿಷರು ಯಾರ ಬಗ್ಗೆ ನಿರ್ದಯರಾಗಿದ್ದರು ಹಾಗು ಯಾರ ಬಗ್ಗೆ ಮೃದು ಧೋರಣೆ ಹೊಂದಿದ್ದರು ಎನ್ನುವುದು ಅರ್ಥವಾಗುತ್ತದೆ. ಅದರ ಹಿಂದಿನ ಕಾರಣಗಳು ಹೆಚ್ಚು ಕಷ್ಟವಿಲ್ಲದೆ ತಿಳಿದುಬಿಡುತ್ತದೆ.

ಯಾಕೆ ಇಂಥವರೇ ಕಟು ಟೀಕೆಗೆ, ಅವಮಾನಕರ ಹೇಳಿಕೆಗೆ ತುತ್ತಾಗುತ್ತಾರೆ ಎನ್ನುವ ಆಲೋಚನೆ ಸದಾ ಕಾಡುತಿತ್ತು. ಅದರಲ್ಲೂ ಸಾವರ್ಕರ್, ಭಗತ್, ಅಜಾದ್ ನಂತಹ ತೀವ್ರ ರಾಷ್ಟ್ರಿಯವಾದಿಗಳೇ ಯಾಕೆ ಗುರಿಯಾಗುತ್ತಾರೆ ಎನ್ನುವ ಸಂಕಟ ಕೂಡಾ. ಅದರಲ್ಲೂ ಸದ್ಯಕ್ಕೆ ಸಾವರ್ಕರ್ ಬಗ್ಗೆ ಕೆಲವರ ಹೇಳಿಕೆ ನೋಡಿದರೆ, ಕೇಳಿದರೆ ಯಾಕೆ ಹೀಗೆ ಎನ್ನುವ ಪ್ರಶ್ನೆ ಮತ್ತಷ್ಟು ಕಾಡುತ್ತದೆ. ವಿರುದ್ಧವಾಗಿ ಹೇಳಿಕೆ ಕೊಡುವವರನ್ನು ಗಮನಿಸಿದರೆ ಅಲ್ಲೊಂದು ಸಾಮ್ಯತೆ ಕಾಣಿಸುತ್ತದೆ. ಅವರೆಲ್ಲರೂ ಒಂದು ಸಿದ್ಧಾಂತಕ್ಕೆ ಸೇರಿದವರು. ಒಂದು ಪಕ್ಷದ ಬೆಂಬಲಿಗರು. ಹೋಗಲಿ ಯಾರ ಬಗ್ಗೆ ಟೀಕಿಸುತ್ತಿದ್ದಾರೆ ಅವಮಾನ ಮಾಡುತ್ತಿದ್ದಾರೆ ಎಂದು ನೋಡಿದರೆ ಅವರೆಲ್ಲರೂ  ನಮ್ಮದೇ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರು, ಶಿಕ್ಷೆ ಅನುಭವಿಸಿದವರು, ವೈಯುಕ್ತಿಕ ಬದುಕು ತ್ಯಾಗ ಮಾಡಿದವರು, ಎಲ್ಲಕ್ಕಿಂತ ಹೆಚ್ಚಾಗಿ ನಂತರವೂ ಯಾವುದೇ ಅಧಿಕಾರ, ಸ್ಥಾನ ಅನುಭವಿಸದವರು. ಆದರೂ ಯಾಕೀ ದ್ವೇಷ, ಅಸಹನೆ  ಎಂದು ಯೋಚಿಸುತ್ತಾ ಕುಳಿತಾಗ ಚಿಕ್ಕವರಿದ್ದಾಗ ನಾವು ಕೇಳಿದ ಭಾಷಣ, ಓದಿದ ಪಾಠ ನೆನಪಾಯಿತು.
ಅಲ್ಲಿ ಬ್ರಿಟಿಷರು ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯವನ್ನು ಕೊಟ್ಟರು ಎಂದು ಹೇಳುತ್ತಿದ್ದರು. ನಾವು ಅದನ್ನು ಕೇಳಿ ಚಪ್ಪಾಳೆ ಹೊಡೆಯುತ್ತಿದ್ದೆವು. ಸ್ವಾತಂತ್ರ್ಯ ಹೋರಾಟಗಾರರ ಹೆಸರಿಸಿ ಎಂದರೆ ಗಾಂಧೀಜಿ ನೆಹರು ಎಂದು ಬರೆಯುತ್ತಿದ್ದೆವು. ಅವರಿಂದಲೇ ನಮ್ಮ ದೇಶಕ್ಕೆ  ಸ್ವಾತಂತ್ರ್ಯ ಬಂದಿತು ಎಂದು ಶಿಕ್ಷಕರೂ ಪಾಠ ಮಾಡುತ್ತಿದ್ದರು. 
ಸ್ವಾತಂತ್ರ್ಯ ಕೊಟ್ಟಿದ್ದಾ? ಅಥವಾ ಪಡೆದದ್ದಾ? ಎನ್ನುವ ಆಲೋಚನೆ ಆಗ ಬರಲೇ ಇಲ್ಲವಲ್ಲ ಎಂದು ಈಗ ಅನಿಸುತ್ತದೆ. ಪಡೆದದ್ದು ಎಂದಾಗ ಹೇಗೆ ಎನ್ನುವ ಪ್ರಶ್ನೆಯೂ ಎದ್ದು ಅದನ್ನು ಹುಡುಕ ಹೊರಟಾಗ ಯಾರ್ಯಾರಿಂದ ಎನ್ನುವುದೂ ಜೊತೆಯಾಗಿ ಪ್ರಶ್ನೆಗೊಂದು ಪ್ರಶ್ನೆ ಜೊತೆಯಾಗುತ್ತಾ ಉತ್ತರ ಸಿಗುತ್ತಿತ್ತೇನೋ. ಗಳಿಸಲು ಕ್ರಮಿಸಿದ್ದ ದಾರಿ ಹೇಗಿತ್ತು ಎನ್ನುವುದು ಅರ್ಥವಾಗುತ್ತಿತ್ತೇನೋ. 

1857 ರಿಂದ ಮೊದಲುಗೊಂಡು 1947 ರವರೆಗೆ ನಡೆದ ಸ್ವಾತಂತ್ರ್ಯ ಹೋರಾಟ ಸುಲಭದ್ದೇನಾಗಿರಲಿಲ್ಲ. ಇಲ್ಲಿ ದಾರುಣವಾದ, ಮನಕಲಕುವಒಪ್ಪಿಕೊಳ್ಳಲು ಕಷ್ಟವಾಗುವ, ಸಾವಿರಾರು ಕ್ರೌರ್ಯಗಳು ಹೋರಾಟಗಾರರ ಮೇಲೆ ನಡೆದಿದೆ. ಮುಗ್ಧ ಜನಸಾಮಾನ್ಯರೂ ಇದಕ್ಕೆ ಬಲಿಯಾಗಿದ್ದಾರೆ. ಇಲ್ಲಿ  ಬಲಿದಾನವಿದೆತ್ಯಾಗವಿದೆಕೆಚ್ಚಿದೆಛಲಬಿಡದ ಹೋರಾಟವಿದೆ. ಕೇವಲ ದೇಶಕ್ಕಾಗಿ ಎಲ್ಲವನ್ನೂ ತೊರೆದು ಎದುರಿಸಿದ ಸಂಕಷ್ಟವಿದೆ. ಸ್ವಾತಂತ್ರ್ಯ ಯಜ್ಞದಲ್ಲಿ ಬದುಕಿ ಬಾಳಬೇಕಾದ ಎಷ್ಟೋ ಯುವ ಜೀವಗಳು ಆಹುತಿಯಾಗಿ ಬೆಂಕಿ ಆರದಂತೆ ಕಾಪಾಡಿವೆ. ಸಾವನ್ನು ತೆರೆದ ಬಾಹುಗಳಿಂದ ಆಲಂಗಿಸಿಕೊಂಡಕಣ್ಣೆದೆರು ಕಂಡ ಸಾವನ್ನು ನಗುತ್ತಲೇ ಎದುರಿಸಿದ ಧೀಮಂತಿಕೆಯಿದೆ. ದೇಶ ವಿದೇಶಗಳ ಸುತ್ತಿ ಸೈನ್ಯವನ್ನು ಕಟ್ಟಿಜನರನ್ನು ಸಂಘಟಿಸಿ ಹೋರಾಡಿದ ಚಾಣಾಕ್ಷತನವಿದೆ. ಸೂರ್ಯ ಮುಳುಗದ ನಾಡು ನಾವು ಹುಟ್ಟಿರುವುದೇ ಆಳಲು ಎಂಬ ಮನೋಭಾವದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋಗಿ ಕೈ ಚಾಚುವಷ್ಟು ಹತ್ತಿರದಲ್ಲಿ ನಿಂತು ಅವರದೇ ಅಧಿಕಾರಿಯನ್ನು ಗುಂಡು ಹಾರಿಸಿ ಕೊಂದು ಅವರ ನಿದ್ದೆಗೆಡಿಸಿದ ಶೌರ್ಯವಿದೆ. ಕ್ಷಾತ್ರತ್ವವಿದೆ. ಇವೆಲ್ಲವುಗಳ ಅಡಿಪಾಯದ ಮೇಲೆ ಕಟ್ಟಲ್ಪಟ್ಟ ಸ್ವತಂತ್ರ ಸೌಧದ ಕೊನೆಯ ಇಟ್ಟಿಗೆ ಅಹಿಂಸೆಯೇ ಹೊರತು ಅದೇ ಬುನಾದಿಯಲ್ಲ. ಏಕೈಕ ಕಾರಣವೂ ಅಲ್ಲ.

ಸ್ವಾತಂತ್ರ್ಯ ಸಂಘಟಿತ ಹೋರಾಟದ ಫಲವೇ ಹೊರತು ಒಬ್ಬರ ಕೊಡುಗೆಯಲ್ಲ. ಅದು ಕೊಟ್ಟಿದ್ದಲ್ಲ, ರಕ್ತಬಸಿದು ಪಡೆದದ್ದು. ಭಿಕ್ಷೆಯಲ್ಲ, ಹೋರಾಡಿ ಗೆದ್ದಿದ್ದು. ದಕ್ಕಿಸಿಕೊಂಡಿದ್ದು. ಬಹುಶಃ ಈ ಸತ್ಯ ಅರಿವಾದರೆ ಜನರಿಗೆ ಅದರ ಬೆಲೆ ಅರ್ಥವಾಗುತ್ತದೆ. ಅದಕ್ಕಾಗಿ ಬಲಿದಾನ ಮಾಡಿದವರ ವಿವರ ತಿಳಿಯುತ್ತದೆ. ಹೀಗೆ ತಿಳಿದರೆ ತಮ್ಮ ಪಕ್ಷದಿಂದಲೇ ಸ್ವಾತಂತ್ರ್ಯ ಬಂದಿದ್ದು ಎನ್ನುವ ಒಂದೇ ಕಾರಣದಿಂದ ಅಧಿಕಾರಕ್ಕೆ ಬಂದ ಪಕ್ಷದ ಮುಖವಾಡ ಕಳಚಿ ಬೀಳುತ್ತದೆ. ಕುಟುಂಬದ ಸರ್ ನೇಮ್ ಬೆಲೆ ಕಳೆದುಕೊಳ್ಳುತ್ತದೆ. ಹಾಗೇನಾದರೂ ಆದರೆ ಜನ ಎಚ್ಚೆತ್ತುಕೊಳ್ಳುತ್ತಾರೆ. ಅವರನ್ನು  ಮತ್ತೆ ಮೂರ್ಖರನ್ನಾಗಿಸುವ ಯಾವ ಕಾರಣವೂ ಬತ್ತಳಿಕೆಯಲ್ಲಿಲ್ಲ.  ಜನ ಮೂರ್ಖರಾಗದೆ ಅಧಿಕಾರ ದಕ್ಕುವುದಿಲ್ಲ. ಅಧಿಕಾರವಿಲ್ಲದೆ ಹೋದರೆ ಅಸ್ತಿತ್ವ ಉಳಿಯುವುದಿಲ್ಲ. ಹಾಗಾಗಬಾರದು ಎಂದರೆ  ಕ್ರಾಂತಿಕಾರಿಗಳು ಇತಿಹಾಸದ ಪುಟಗಳಿಂದ ದೂರವಾಗಬೇಕು. ಸ್ವಾತಂತ್ರ್ಯ ಕೊಟ್ಟಿದ್ದು ಎನ್ನುವಲ್ಲಿ ಅವ್ಯಕ್ತ ಗುಲಾಮಿತನವಿದೆ, ಪಡೆದದ್ದು ಎನ್ನುವಲ್ಲಿ ಸ್ವಾಭಿಮಾನವಿದೆ. ಒಂದು ಪದದಲ್ಲಿರುವ ಶಕ್ತಿ ಅಧಿಕಾರ ಉಳಿಯಲು, ಅಳಿಯಲು ಕಾರಣವಾಗುತ್ತದೆ. ಉಳಿಸಿಕೊಳ್ಳಲು ಇರುವ  ಸುಲಭವಾದ ಮಾರ್ಗವೆಂದರೆ ಶಾಲೆಯಲ್ಲಿ ಅದನ್ನು ಕಲಿಸದಿರುವುದು. ಒಂದಿಡೀ ತಲೆಮಾರು ಹೀಗೆ ನಿಜವಾದ ಇತಿಹಾಸದಿಂದ ದೂರ ಉಳಿದರೆ ಆಗ ಉಳಿದಿದ್ದೆ ಸತ್ಯ. ಭವಿಷ್ಯ ಭದ್ರ.

ಇದೇ ಕಾರಣಕ್ಕಾಗಿಯೇ ಕ್ರಾಂತಿಕಾರಿಗಳನ್ನು ಉಗ್ರಗಾಮಿಗಳೆಂದು ಬಿಂಬಿಸುವ ಕಾರ್ಯ ನಡೆಯಿತು. ಹಿಂದು, ಮುಂದಿನ ಅರಿವಿಲ್ಲದೆ ಯಾವುದೋ ಒಂದು ಸಾಲನ್ನು ಹಿಡಿದು ಅದನ್ನು ಇನ್ಹೇಗೋ ಅರ್ಥೈಸುವ ಕೆಲಸ ಆಯಿತು. ಯಾರದ್ದೋ ಅಧಿಕಾರದ ಆಸೆಗೆ ತ್ಯಾಗ, ಬಲಿದಾನಗಳು ಮರೆಯಾಗಿ  ಬೆಲೆಯಿಲ್ಲದಂತೆ ಆಗಿಹೋಯಿತು. ಇನ್ನಾದರೂ ನಿಜವಾದ ಇತಿಹಾಸ ತಿಳಿಯದೆ ಹೋದರೆ, ಅವರ ತ್ಯಾಗ ಬಲಿದಾನಗಳನ್ನು ಗೌರವಿಸದೆ ಹೋದರೆ ಕಳೆದುಕೊಳ್ಳುವುದು ನಮ್ಮ ಸ್ವಾಭಿಮಾನ, ಆತ್ಮಗೌರವವನ್ನೇ ಹೊರತು ಅವರ ಬೆಲೆಯಲ್ಲ. ಎಲ್ಲಾ ಸಮಯದಲ್ಲೂ ಅಹಿಂಸೆ ಉತ್ತರವಲ್ಲ. ಎಷ್ಟೋ ಸಲ ಅಹಿಂಸೆಯ ಹೆಸರಿನಲ್ಲಿ ನಮ್ಮ ಹೇಡಿತನ ಮುಚ್ಚಿಕೊಳ್ಳುವ, ಅಸಾಮರ್ಥ್ಯ ಮರೆಮಾಡುವ ಕಾರ್ಯವೂ ಗೊತ್ತೋ ಗೊತ್ತಿಲ್ಲದೆಯೋ ನಡೆದುಹೋಗುತ್ತದೆ.  

ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವರೆಲ್ಲರ  ಶ್ರಮದಿಂದ, ತ್ಯಾಗದಿಂದ ಬಲಿದಾನದಿಂದ ಬಂದಿದು.  ದೇಶಕ್ಕೆ ಸ್ವಾತಂತ್ರ್ಯ ಬಂತು ನಿಜ ಆದರೆ ಬದುಕಿಗೆ ಬಂತಾ? ಇದು  ನಾವು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ, ಉತ್ತರ ಹುಡುಕಿಕೊಳ್ಳಬೇಕಾದ ಪ್ರಶ್ನೆ . ಉತ್ತರ ಹುಡುಕಿಕೊಳ್ಳುವ ಸುಧೀರ್ಘ ದಾರಿಯಲ್ಲಿನ ಪುಟ್ಟ ಹಣತೆಗಳೇ ಈ ಕ್ರಾಂತಿಕಾರಿಗಳು.. ಅದರಲ್ಲೊಂದಾದ ನಂದಾದೀಪವೇ ಸಾವರ್ಕರ್. ಸ್ವಾತಂತ್ರ್ಯ ಕೊಟ್ಟಿದ್ದಾ, ಪಡೆದದ್ದಾ ಎನ್ನುವ ಸತ್ಯ ಅರ್ಥವಾದ ದಿನ ಸಾವರ್ಕರ್ ಹೇಡಿಯಾ ವೀರನಾ ಎನ್ನುವ ಪ್ರಶ್ನೆಗೂ ಉತ್ತರ ಸಿಗುತ್ತದೆ.





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...