ಬಾಳೆ.

ದನಗಳನ್ನು ಮೇಯಲು ಬಿಡುತ್ತಿದ್ದ ಅಜ್ಜಿ ಅಲ್ಲೇ ಹುಲ್ಲಿನ ಹೊರೆಯ ಪಕ್ಕ ಹೊಂಬಾಳೆ ಇದೆ ನೋಡು, ಕರುವಿಗೆ ತಿನ್ನಿಸು ಎಂದಾಗ ಓಡಿ ಬಂದಿದ್ದೆ. ಹಸಿರ ಹುಲ್ಲಿನ ಪಕ್ಕದಲ್ಲಿ ಪುಟ್ಟ ಹೊಂಬಾಳೆ ಸುಮ್ಮಗೆ ಬಿದ್ದುಕೊಂಡಿತ್ತು. ಪುಟ್ಟ ಕರುವಿನ ಕೆಂಪಾದ ನಾಲಿಗೆಯ ಹಾಗಿನ ತೆಳು ನಸುಗಂಪು ಹೊಂಬಾಳೆಯನ್ನು ಇಷ್ಟಿಷ್ಟೇ ಸೀಳಿ ಅದನ್ನು ಅದರ ಬಾಯಿ ತೆರೆಸಿ ಇಟ್ಟರೆ ಅಮ್ಮ ಮೇಯುವುದಕ್ಕೆ ಹೋಗಿದ್ದನ್ನು ಮರೆತು ಕರು ತಿನ್ನುತ್ತಾ ಅಲ್ಲೇ ಮಲಗಿಕೊಂಡಿತು. ಜಾಸ್ತಿ ತಿನ್ನಿಸಬೇಡಾ ಥಂಡಿ  ಆದೀತು ಅನ್ನುತ್ತಲೇ ಒಳಬಂದವಳು ತೋಟಕ್ಕೆ ಹೋದವರು ಬರುವಾಗ ಬಾಳೆ ಎಲೆ ಕೊಯ್ದುಕೊಂಡು ಬರಲು ಹೇಳಬೇಕು ಅನ್ನುತ್ತಾ ಒಳಗೆ ಹೋದರೆ ನಿಂಗೆ ಬಾಳೆ ವಿಷ್ಯ ವಿಲ್ಲದೆ ದಿನವೇ ಹೋಗುವುದಿಲ್ಲ ನೋಡು ಎಂದು ನಕ್ಕೆ. ಈಗ ಒಮ್ಮೆ ತಿರುಗಿ ನೆನಪುಗಳ ಹರಡಿಕೊಂಡರೆ ಈ ಬಾಳೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿತ್ತಲ್ಲ ಅನ್ನಿಸುತ್ತದೆ.

ನಮಗೆ ಗೊತ್ತಿದ್ದ ಮಟ್ಟಿಗೆ ಬೇರೆಲ್ಲವನ್ನೂ ಬೀಜ ಹಾಕಿ ಅದು ಮೊಳಕೆ ಒಡೆದು ಗಿಡ ಮಾಡುತ್ತಿದ್ದರೆ ಈ ಬಾಳೆಗೆ ಮಾತ್ರ ಬೀಜ ಅನ್ನುವುದೇ ಇರುತ್ತಿರಲಿಲ್ಲ. ಅದು ಬೆಳೆಯುತ್ತಿದ್ದದ್ದು ಕಂದಿನಿಂದ. ಒಂದು ಕಂದು, ಒಂದು ಗಿಡ, ಒಂದು ಗೊನೆ. ಅದ್ವೈತ ತತ್ವಕ್ಕೆ ಈ ಬಾಳೆಗಿಂತ ಒಳ್ಳೆಯ ಉದಾಹರಣೆ ಬೇರೆಯಾವುದೂ ಇಲ್ಲವೇನೋ ಅನ್ನಿಸುತ್ತಿತ್ತು. ಅಡಿಕೆಯ ತೋಟ ಮಾಡುವಾಗ ಮೊದಲು ನೆಡುತ್ತಿದ್ದದ್ದೆ ಈ ಬಾಳೆಯ ಗಿಡಗಳನ್ನು. ಎಳೆಯ ಅಡಿಕೆ ಸಸಿಗಳಿಗೆ ನೆರಳು ಕೊಡುವ ಜೊತೆಗೆ ನೀರನ್ನು ಹಿಡಿದುಕೊಂಡು ತಂಪು ಕಾಪಿಟ್ಟುಕೊಳ್ಳುವ ಗುಣ ಇದರದ್ದು. ಹಾಗಾಗಿ ಅಡಿಕೆಯ ತೋಟಕ್ಕೆ ಬಾಳೆಯ ಸಾಂಗತ್ಯ ಇರಲೇಬೇಕಿತ್ತು. ದಂಪತಿಗಳ ತರಹ ಅವರೆಡರದ್ದು ಭಾಂಧವ್ಯ. ಒಂದು ಗಟ್ಟಿ ಇನ್ನೊಂದು ಮೃದು. ಭಿನ್ನತೆಯೇ ಸಹಜೀವನದ ಸಾಮರಸ್ಯಕ್ಕೆ ಕಾರಣವೇನೋ ಅನ್ನಿಸುವಷ್ಟು ಮಟ್ಟಿಗೆ ಒಂದು ಇನ್ನೊಂದನ್ನು ಬಿಡದೆ ಬೆಳೆದು ಬದುಕುತ್ತಿದ್ದವು. ಬದುಕಿಸುತ್ತಿದ್ದವು.

ಅಡಿಕೆ ಸಸಿಗೆ ನೆರಳು ಕೊಡುವ ಈ ಮರ ಅಂತಹ ಗಟ್ಟಿಯಾಗೇನು ಇರುತ್ತಿರಲಿಲ್ಲ. ಜೋರು ಗಾಳಿ ಬೀಸಿದರೆ ತೂಗಾಡುತ್ತಾ, ಮಳೆಯ ರಭಸಕ್ಕೆ ಓಲಾಡುತ್ತಾ,, ಎರಡೂ ಸೇರಿ ಬಂದಾಗ ಒಮ್ಮೊಮ್ಮೆ ಬುಡ ಮೇಲಾಗುತ್ತಾ ಬೆಳೆಯುತ್ತಿದ್ದ ಇದು ಮೃದುತ್ವಕ್ಕೆ ಉತ್ತಮ ಉದಾಹರಣೆ. ಮನುಷ್ಯನ ದೇಹದಲ್ಲಿ ಹೆಚ್ಚಿನ ಭಾಗ ನೀರು ಆವರಿಸಿದಂತೆ ಇದರ ಬಹುಭಾಗದಲ್ಲೂ ನೀರಿನ ಅಂಶವೇ.  ಎದೆಯಲ್ಲಿ ತೇವವಿದ್ದಾಗ ಬದುಕು ಹಸನಾಗಿರುತ್ತದಾ... ಬಾಳೆ ಸೊಂಪಾಗಿ ಇರುತ್ತಿದ್ದದ್ದು ಮಾತ್ರ ನಿಜ. ಸಸಿಗೆ ನೆರಳಾಗಿ ಬಾಗುತ್ತಿದ್ದದ್ದೂ ಸತ್ಯ. ಬರೀ ನೆರಳಿಗಾಗಿ ಇದನ್ನು ಬೆಳೆಸುತ್ತಿದ್ದರಾ.. ಬಾಳೆ ಕಲ್ಪವೃಕ್ಷದ ಹಾಗೆ ಅದರ ಕಣಕಣವೂ ಉಪಯೋಗಕ್ಕೆ ಬರುತ್ತಿತ್ತು.

ತೋಟದಲ್ಲಿ ಅದೆಷ್ಟೇ ಬಾಳೆಮರಗಳು ಇದ್ದರೂ ಪ್ರತಿ ಮನೆಯ ಹಿತ್ತಿಲಿನಲ್ಲಿ ಒಂದು ಮರ ಇದ್ದೇ ಇರುತ್ತಿತ್ತು. ಗಡಿಬಿಡಿಗೆ ಅದರ ಎಲೆ ಕೊಯ್ದು ಬಳಸಲಾಗುತ್ತಿತ್ತು. ತಟ್ಟೆಯ ಉಪಯೋಗ ಸ್ವಲ್ಪ ಕಡಿಮೆಯೇ. ಅದರಲ್ಲೂ ಅತಿಥಿ, ಅಭ್ಯಾಗತರು ಬಂದರಂತೂ ಬಾಳೆ ಎಲೆಯನ್ನೇ ಊಟಕ್ಕೆ ಬಳಸಲಾಗುತ್ತಿತ್ತು. ಕುಡಿ ಎಲೆ ಶ್ರೇಷ್ಠ ಅನ್ನುವ ಭಾವನೆ ಇದ್ದರೂ ಸೀಳು ಎಲೆ ಕನಿಷ್ಠ ಅಂತೇನೂ ಇರಲಿಲ್ಲ. ಮದುವೆ, ನಾಮಕರಣ, ಉಪನಯನ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆದರೂ ಊಟ ಬಾಳೆ ಎಲೆಯಲ್ಲಿಯೇ. ನೂರಾರು ಎಲೆಗಳನ್ನು ಆರಿಸಿ ಒರೆಸಿ ಕಾಯಿಸಿ ಇಟ್ಟರೆ ಅದು ಹರಿಯುತ್ತಿರಲಿಲ್ಲ. ಕಾದ ಎಲೆ ಗಟ್ಟಿ. ಥೇಟ್ ಕಾರ್ಪಣ್ಯದಲ್ಲಿ ಬೆಂದ ಬದುಕಿನ ಹಾಗೆ. ಹಸಿ ಎಲೆ ಮೃದುವಾಗಿದ್ದರಿಂದ ಬೇಗ ಹರಿದುಹೋಗುವ ಸಂಭವ ಇರುತ್ತಿದ್ದರಿಂದ ಊಟಕ್ಕೆ ಎಲೆಯನ್ನು ಕಾಯಿಸಿಯೇ ಹಾಕಲಾಗುತ್ತಿತ್ತು. ಏನೇ ಒರೆಸಿದರೂ ಅದರ ಹಿಂದೆ ಇದ್ದಿರಬಹುದಾದ ಕ್ರಿಮಿ ಕೀಟಗಳು ಹೀಗೆ ಕಾಯಿಸುವುದರಿಂದ ನಾಶವಾಗಿ ಶುದ್ಧ ಎಲೆ ಉಳಿಯುತ್ತಿತ್ತು. ಹಾಕಿದ ಎಲೆಯ ಮೇಲೆ ಬಿಸಿ ಅನ್ನಕ್ಕೆ ತುಪ್ಪವನ್ನು ಎರೆದು ಸಾರು ಸುರಿದುಕೊಂಡು ತಿಂದರೆ, ಅಥವಾ ಮೊಸರು ಹಾಕಿಕೊಂಡು ಕಲೆಸಿ ಎಲೆ ತುದಿಗೆ ಬಡಿಸಿಟ್ಟ ಉಪ್ಪಿನಕಾಯಿ ನೆಂಚಿಕೊಂಡು ತಿಂದರೆ ಎರಡು ತುತ್ತು ಜಾಸ್ತಿಯೇ ಇಳಿಯುತ್ತಿತ್ತು.

ಅದೇ ಬಾಳೆಎಲೆಯಿಂದ ದೊನ್ನೆಯನ್ನು ತಯಾರಿಸುತಿದ್ದರು. ಈಗ ಬಳಸುವ ಪೇಪರ್ ಕಪ್ ಗೆ ಪರ್ಯಾಯವಾಗಿ ಅದು ಕೆಲಸ ಮಾಡುತ್ತಿತ್ತು. ಸಾರು ಕುಡಿಯಲು, ಪಾಯಸ ಹಾಕಿಸಿಕೊಳ್ಳಲು, ಅಥವಾ ಏನು ಬೇಕೋ ಅದನ್ನು ಆ ದೊನ್ನೆಗೆ ಹಾಕಿಸಿಕೊಂಡರೆ ಆಯಿತು. ಊಟಕ್ಕೆ ತೊಂದರೆ ಆಗದಂತೆ ರುಚಿ ಅನುಭವಿಸಬಹುದಿತ್ತು. ಊಟದ ನಂತರ ಅವನ್ನೆಲ್ಲಾ ಎತ್ತಿ ಗೊಬ್ಬರದ ಗುಂಡಿಗೆ ಹಾಕಿದರೆ ಅಲ್ಲಿಗೆ ಕೆಲಸ ಮುಗಿಯಿತು. ದನಗಳು ತಿಂದು, ಉಳಿದದ್ದು ಗೊಬ್ಬರವಾಗಿ ಆಮೇಲೆ ಮತ್ತೆ ಹೊಲಕ್ಕೋ ತೋಟಕ್ಕೋ, ಯಾವುದಾದರು ಮರದ ಬುಡಕ್ಕೋ ಹೋಗಿ ಸೇರಿ ಮಣ್ಣನ್ನು ಫಲವತ್ತಾಗಿ ಮಾಡುತ್ತಿತ್ತು. ಹೀಗೆ ಇದ್ದರೂ, ಅಳಿದರೂ ಉಪಯೋಗವಾಗುವ ಹಾಗೆ ಬದುಕುವುದು ಬಾಳೆಗೆ ಗೊತ್ತಿತ್ತು. ಸಾವಿರಾರು ಜನರು ಸೇರಿದ ಕಾರ್ಯಕ್ರಮವಾದರೂ ಕಿಂಚಿತ್ತೂ ಪರಿಸರಕ್ಕೆ ಹಾನಿಯಾಗದಂತೆ ಬಾಳೆಲೆ ಸಹಕರಿಸುತ್ತಿತ್ತು. ಪರಿಸರಕ್ಕೆ ಪೂರಕವಾಗಿಯೇ ವರ್ತಿಸುತಿತ್ತು.

ಯಾವುದೇ ಶುಭಕಾರ್ಯ ನಡೆಯಬೇಕಾದರೂ ಅಲ್ಲಿ ಬಾಳೆ ಎಲೆ, ಬಾಳೆಕಂದು, ಬಾಳೆಹಣ್ಣು ಇವು ಇರಲೇ ಬೇಕಿತ್ತು. ಇವುಗಳಿಲ್ಲದೆ ಯಾವ ಕಾರ್ಯವೂ ಸಂಪನ್ನವಾದ ಉದಾಹರಣೆಯೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬಾಳೆ ಆವರಿಸಿಕೊಂಡಿರುತಿತ್ತು.  ಒಂದು ಮಧ್ಯಾನದ ಹೊತ್ತಿಗೆ ಬೇಸರ ಕಳೆಯಲು ತೋಟ ಸುತ್ತಲು ಹೊರಟವಳು ಸಿಕ್ಕ ಪೇರಳೆ ತಿನ್ನುತ್ತಾ ಅಲ್ಲಿಯೇ ಬಿದ್ದಿದ್ದ ಉದ್ದ ಬಾಳೆಲೆಯೊಂದನ್ನು ಹೊತ್ತು ತಂದವಳು ಅಂಗಳದಲ್ಲಿ ಎಸೆದಿದ್ದೆ. ಅಚಾನಕ್ ಆಗಿ ಯಾವುದೋ ಕೆಲಸದ ಗಡಿಬಿಡಿಯಲ್ಲಿ ಬರುತ್ತಿದ್ದ ಅಜ್ಜಿ ಅದನ್ನು ನೋಡಿ ಬೆಚ್ಚಿಬಿದ್ದಿದ್ದಳು. ತಂದು ಹಾಕಿದ ನನಗೆ ಸಹಸ್ರನಾಮಾರ್ಚನೆ ಮಾಡಿದ್ದಳು. ಇಳಿಸಂಜೆಯ ಹೊತ್ತಿಗೆ ಎದುರಾದ ಅಪಶಕುನ ಕಂಡು ಕಂಗಾಲಾಗಿ ಹೋಗಿದ್ದಳು. ಅಲ್ಲಿಯವರೆಗೂ ಶುಭಕಾರ್ಯಕ್ಕೆ ಮಾತ್ರ ಒದಗುತ್ತಿದ್ದ ಬಾಳೆ ಅಶುಭಕ್ಕೂ ಬೇಕು ಎನ್ನುವುದು ಅರ್ಥವಾದರೂ ಅಪಶಕುನ ಯಾಕೆ ಎಂದು ಅರ್ಥವಾಗದೆ ಅವಳ ಮೇಲೆ ಮುನಿಸಿಕೊಂಡು ಹೋಗಿದ್ದೆ. ಅಜ್ಜ ಸತ್ತದಿನ ಅವನನ್ನು ಅಂಗಳದಲ್ಲಿ ಮಲಗಿಸಿ ಉದ್ದದ ಬಾಳೆಎಲೆ ಯನ್ನು ಅವನ ದೇಹಕ್ಕೆ ಹೊದ್ದಿಸಿದಾಗಲೇ ಅವತ್ತಿನ ಅಜ್ಜಿಯ ಭಯದ ಕಾರಣ ಅರ್ಥವಾಗಿದ್ದು.

ಬಾಳೆಮೂತಿಯ ಚಟ್ನಿ ಇವತ್ತಿಗೂ ವೈದಿಕದ ಮುಖ್ಯ ಅಡುಗೆ. ಅದು ಹಬ್ಬ ಹರಿದಿನಗಳಲ್ಲಿ, ಶುಭಕಾರ್ಯಗಳಲ್ಲಿ ಸಲ್ಲದ್ದು. ಒಂದೇ ಮರ ಶುಭ, ಅಶುಭಗಳೆರಡರಲ್ಲೂ ಮುಖ್ಯ ಪಾತ್ರ ವಹಿಸುವ ಬಗೆ ಕಂಡು ಅಚ್ಚರಿಯಾಗಿತ್ತು. ಇದರ ವಿನಃ ಯಾವುದೂ ಸಾಂಗವಾಗಿ ಸಾಗುವುದಿಲ್ಲ ಎನ್ನುವಷ್ಟು ಪ್ರಾಮುಖ್ಯತೆ ಪಡೆದು ಆ ಮೃದು ಮರದ ಬಗ್ಗೆ ಬೆರಗು. ಅಂದಿನಿಂದ ಅದು  ಮತ್ತಷ್ಟು ಆಪ್ತವಾಗಿ, ಇನ್ನಷ್ಟು ಅರ್ಥವಾಗಿ ಮನಸ್ಸಿನ ಆಳಕ್ಕೆ ಇಳಿದು  ಬದುಕಿನ ಸ್ಪೂರ್ತಿಯ ಸೆಲೆಯಾಗಿಯೇ ಉಳಿದಿದೆ. ಕುಗ್ಗಿದಾಗಲೆಲ್ಲ ತಂಗಾಳಿ ಬೀಸಿ ಏಳುವ ಹಾಗೆ ಮಾಡಿದೆ. ಇನ್ನು ಅದರ ಹಣ್ಣಿನ ಬಗ್ಗೆ ಹೇಳಿದಷ್ಟೂ ಮುಗಿಯದ ಮಾತು.

ಯಾವುದೇ ಪೂಜೆ ಪುನಸ್ಕಾರ ಇದ್ದರೆ ಅಲ್ಲಿ ಈ ಹಣ್ಣು ಇರಲೇಬೇಕು. ಬೀಜವೇ ಇಲ್ಲದ ಈ ಹಣ್ಣು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯವೇ. ದೇಹಕ್ಕೆ ತಂಪು ನೀಡುವುದರ ಜೊತೆಗೆ ಶಕ್ತಿಯನ್ನೂ ಹೆಚ್ಚಿಸುತ್ತದೆ. ಯಾವುದೇ ಕೆಲಸ ಮುಗಿಸಿಬಂದು ಆಯಾಸವಾದರೆ ಬಾಳೆಹಣ್ಣು ತಿನ್ನುವುದರಿಂದ ಹೊಸಶಕ್ತಿ ತುಂಬಿಕೊಳ್ಳುತ್ತದೆ. ಇದರಲ್ಲಿರುವ ಪೊಟಾಷಿಯಂ ದೇಹಕ್ಕೆ ಚೈತನ್ಯವನ್ನು ಕೊಡುತ್ತದೆ. ಓಟ, ಈಜು, ಆಟ ಯಾವುದೇ ಆಗಲಿ ಮುಗಿಸಿ ಬಂದಾಗ ಬಸವಳಿದ ದೇಹಕ್ಕೆ,ಮನಸ್ಸಿಗೆ ಹೊಸ ಹುರುಪು ಕೊಡುವುದರಲ್ಲಿ ಇದು ಅಗ್ರಗಣ್ಯ. ರಕ್ತದೊತ್ತಡ ನಿಯಂತ್ರಿಸುವಲ್ಲಿಯೂ ಇದು ಸಹಕಾರಿ ಅನ್ನುವ ಮಾತೂ ಇದೆ. ಜೀರ್ಣಕ್ರಿಯೆ ಸರಾಗಗೊಳಿಸುವುದರಲ್ಲಿ ಇದರ ಪಾತ್ರವಿದೆ. ಖಿನ್ನತೆಯನ್ನು ದೂರ ಮಾಡುವುದರಲ್ಲಿಯೂ ಇದು ಸಹಾಯಕಾರಿ ಅನ್ನುವುದು ಸಂಶೋಧನೆಯಿಂದ ತಿಳಿದು ಬಂದ ವಿಷಯ. ಬಡವ ಬಲ್ಲಿದರೆನ್ನುವ ಭೇಧವಿಲ್ಲದೆ ಎಲ್ಲರ ಕೈಗೂ ಸುಲಭವಾಗಿ ಸಿಗುವ ಇದು ಪ್ರಯೋಜನ ಮಾತ್ರ ಬಹಳವಾಗಿಯೇ ಮಾಡುತ್ತದೆ.

ಇದಿಷ್ಟೂ ಹಣ್ಣು ಎಲೆಯ ಕತೆಯಾದರೆ ಅದರ ದಿಂಡು (ಕಾಂಡ)ದ ಕತೆಯೂ ತುಂಬಾ ಇದೆ. ಗೊನೆಯನ್ನು ಕಡಿದ ಮೇಲೆ ಬಾಳೆಯಮರಮರವನ್ನೂ ಕಡಿಯುತ್ತಾರೆ. ಒಂದು ಮರಕ್ಕೆ ಒಂದೇ ಗೊನೆ ಆದ್ದರಿಂದ ಅದನ್ನು ಹಾಗೆ ಬಿಟ್ಟರೂ ಉಪಯೋಗವಿಲ್ಲ ಅನ್ನುವ ಭಾವ. ಉಪಯೋಗವಿಲ್ಲದ ಯಾವುದನ್ನ ಮನುಷ್ಯ ಹಾಗೆಯೇ ಬಿಡುತ್ತಾನೆ ಹೇಳಿ? ಹಾಗೆ ಕಡಿದ ಬಾಳೆಯ ಮರದ ದಿಂಡನ್ನು ಬಿಡಿಸಿದರೆ ಪದರು ಪದರಾಗಿ ಏಳುವ ತೆಪ್ಪೆಯನ್ನು ಒಣಗಿಸಿದರೆ ಬಾಳೆಪಟ್ಟೆ ಸಿದ್ಧ. ಅದನ್ನು ನೀರಲ್ಲಿ ನೆನಸಿ ತೆಳುವಾಗಿ ಸೀಳಿದರೆ ಬಾಳೆಹಗ್ಗ ತಯಾರು. ಟೇಪುಗಳನ್ನು ಕೊಳ್ಳಲು ಶಕ್ತಿಯಿಲ್ಲದವರ ಪಾಲಿಗೆ ಇದು ಜಡೆಯನ್ನು ಬಂಧಿಸುವ ಸಾಧನ. ಮಲೆನಾಡಿನಲ್ಲಿ ಹೂ ಕಟ್ಟಲು ಬಾಳೆನಾರೇ ಬೇಕಿತ್ತು. ಅದರಲ್ಲೂ ಬಾಳೆನಾರಿನಲ್ಲಿ ಕಟ್ಟಿದ ಹೂ ಹಾರ ದೇವರಿಗೆ ಶ್ರೇಷ್ಠ ಅನ್ನುವ ನಂಬಿಕೆಯೂ ಪ್ರಚಲಿತದಲ್ಲಿತ್ತು. ಹೂ ಕಟ್ಟುವಾಗ ಪಕ್ಕದಲ್ಲಿ ಒಂದು ಬಟ್ಟಲಿನಲ್ಲಿ ನೀರು ಇಟ್ಟುಕೊಂಡು ಅದನ್ನು ಆಗಾಗ ನೆನಯಿಸುತ್ತಾ ಹೂವಿನ ರಾಶಿಯನ್ನೇ ಕಟ್ಟಿ ಮುಗಿಸುತ್ತಿದ್ದರು. ನೆನೆದರೆ ಮಾತ್ರ ತುಂಡಾಗದೇ ಸಹಕರಿಸುತ್ತಿತ್ತು. ಒಣಗಿದರೆ ತುಂಡು ತುಂಡಾಗಿ ಉಪಯೋಗಕ್ಕೆ ಬರದೇ ಹೋಗುತ್ತಿತ್ತು. ತೇವ ಬದುಕಿಗೆ ಅನಿವಾರ್ಯ.. ಶುಷ್ಕತೆ ಅವಸಾನ.  ರಂಜದ ಹೂ ಸುರಿಯಲು ಬಾಳೆನಾರಿದ್ದರೆ ಸೂಜಿಯ ಅಗತ್ಯವೂ ಇರಲಿಲ್ಲ. ಕೊನೆಯಲ್ಲಿ ಕೊಂಚ ಉಗುರಿಂದ ಸೀಳಿದರೆ ಚೂಪಾದ ದಾರದಿಂದ ರಂಜದ ಹೂವನ್ನು ಸುರಿದು ಮಾಲೆ ಮಾಡಬಹುದಿತ್ತು. ಸ್ವಲ್ಪ ದಪ್ಪದ ದಾರದಿಂದ ವಸ್ತುಗಳನ್ನೂ ಕಟ್ಟುತ್ತಿದ್ದರು. ಬೇಸಿಗೆಯಲ್ಲಿ ಬೆಳೆದ ಸೌತೆಕಾಯಿಗಳನ್ನು ಹಜಾರದ ಕಂಬಕ್ಕೆ ಕಟ್ಟಲು ಇದೆ ದಾರವೇ ಬೇಕಾಗಿತ್ತು.

ಇನ್ನು ಎಳೆಯ ದಿಂಡು ಕತ್ತರಿಸಿ ತಂದು ಅದರಿಂದ ಪಲ್ಯವನ್ನೋ, ಸಾಸಿವೆಯನ್ನೋ ಮಾಡುತ್ತಿದ್ದರು. ಬಹು ರುಚಿಕಟ್ಟಾದ ಈ ಅಡುಗೆ ನಾಲಿಗೆಯನ್ನು ಮಾತ್ರ ತಣಿಸುತ್ತಿರಲಿಲ್ಲ, ಅದರಲ್ಲಿ ಹೇರಳವಾಗಿದ್ದ ನಾರಿನ ಅಂಶ ದೇಹಕ್ಕೆ ಬೇಕಾದ ಪೈಬರ್ ಕೊಡುವುದರ ಜೊತೆಗೆ ದೇಹವನ್ನು ಕಶ್ಮಲಗಳಿಂದ ಸ್ವಚ್ಛಮಾಡುತ್ತಿತ್ತು. ಕಿಡ್ನಿಯ ಕಲ್ಲನ್ನು ಕರಗಿಸಲು ಬಾಳೆದಿಂಡಿಗಿಂತ ಅತ್ಯತ್ತಮವಾದ ಔಷಧ ಯಾವುದೂ ಇಲ್ಲ. ಕರುಳನ್ನೂ ಸಹ ಸ್ವಚ್ಛಗೊಳಿಸಿ ದೇಹ ಆರೋಗ್ಯವಾಗಿರಲು ಕಾಸು ಖರ್ಚಿಲ್ಲದೆ ಇದು ಸಹಾಯ ಮಾಡುತಿತ್ತು. ಹಣ್ಣು, ಎಲೆ, ಕಾಂಡ ಹೀಗೆ ಎಲ್ಲವೂ ದೇಹವನ್ನು ಪುಷ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು.

ಇಂತ ಬಾಳೆಯಮರಕ್ಕೆ ಜಾಗ ಇಂತಹುದೇ ಬೇಕು ಎನ್ನುವ ತಕರಾರಿಲ್ಲ, ಕಾಲದ ನಿರ್ಬಂಧ ಮೊದಲೇ ಇಲ್ಲ. ಇದು ಸರ್ವಕಾಲದಲ್ಲೂ ಸರ್ವ ಜಾಗದಲ್ಲೂ ಬೆಳೆಯಬಹುದಾದಷ್ಟು ಫ್ಲೆಕ್ಸಿಬಲ್. ಇಂಥ ಬಾಳೆಯಲ್ಲೂ ಒಳಪಂಗಡಗಳಿವೆ. ಈ ಜಾತಿ ಅನ್ನುವುದು ಬಾಳೆಯನ್ನೂ ಬಿಟ್ಟಿಲ್ಲ ನೋಡು ಎಂಬ ಯೋಚನೆ ಬಂದು ಸಣ್ಣಗೆ ನಗು ಮೂಡುತ್ತಿತ್ತು. ಏಲಕ್ಕಿ ಬಾಳೆ, ಪಚ್ಚಬಾಳೆ, ರಸಬಾಳೆ, ಕರಿಬಾಳೆ, ನೇಂದ್ರ ಬಾಳೆ, ಪುಟ್ಟಬಾಳೆ, ಕಲ್ಲುಬಾಳೆ ಹೀಗೆ ನಾನಾಜಾತಿಯಿವೆ. ಒಂದೊಂದು ಜಾತಿಯ ಬಾಳೆಹಣ್ಣಿಗೂ ಒಂದೊಂದು ವೈಶಿಷ್ಟ್ಯವಾದ ಗುಣವಿದೆ. ಅದರದ್ದೆ ಆದ ವಿಶೇಷತೆ ಇದೆ. ಹಣ್ಣಾಗುವಷ್ಟು ತಾಳ್ಮೆಯಿಲ್ಲದೆ ಹೋದಾಗ ಬೆಳೆದ ಬಾಳೆಕಾಯಿಯನ್ನು ತಂದು ಅದರಿಂದ ಪಲ್ಯವನ್ನು ಮಾಡಲಾಗುತ್ತಿತ್ತು. ವೃತ್ತಾಕಾರವಾಗಿ ಕತ್ತರಿಸಿ ಎಣ್ಣೆಯಲ್ಲಿ ಸ್ನಾನ ಮಾಡಿಸಿದರೆ ಕುರುಂ ಕುರುಂ ಎನ್ನುವ ಚಿಪ್ಸ್ ತಯಾರಾಗುತ್ತಿತ್ತು. ಮಳೆ ಬರುವಾಗ, ಸಂಜೆಯ ಹೊತ್ತಿಗೆ ಕಾಫಿ ಕುಡಿಯುವಾಗ, ಯಾರೂ ಇಲ್ಲದೆ ಒಬ್ಬಂಟಿಯಾಗಿ ಕುಳಿತಾಗ ಹೀಗೆ ಕರಿದ ಚಿಪ್ಸ್ ಪಕ್ಕದಲ್ಲಿ ಇಟ್ಟುಕೊಂಡರೆ ಅದಕ್ಕಿಂತ ಚೆಂದದ ಸಾಂಗತ್ಯ ಇನ್ನಾವುದು ಇಲ್ಲ ಅನ್ನಿಸುವಷ್ಟು ಮಟ್ಟಿಗೆ ಅದು ಜೊತೆಯಾಗುತ್ತಿತ್ತು.

ಹೀಗೆ ಕಡಿದರೂ, ಕೊಚ್ಚಿದರೂ, ಸೀಳಿದರೂ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಳ್ಳುವುದನ್ನೂ, ತಾನಿಲ್ಲದೆ ಯಾವ ಕಾರ್ಯವೂ ಸುಗಮವಾಗಿ ಸಾಂಗವಾಗಿ ನಡೆಯುವುದಿಲ್ಲ ಎಂದು ತಿಳಿದಿದ್ದರೂ ಮೃದು ಮಧುರವಾಗಿರುವುದನ್ನು, ಬಾಗಬೇಕಾದ ಕಡೆ ಬಾಗುವುದು ಅವಮಾನವಲ್ಲ ಎನ್ನುವುದನ್ನ, ಶುಭ, ಅಶುಭಗಳ ಹಂಗಿಲ್ಲದೆ ಆ ಕ್ಷಣಕ್ಕೆ ಹೆಗಲಾಗುವುದನ್ನೂ, ಸಮಯಕ್ಕೆ ತಕ್ಕ ಹಾಗೆ ವರ್ತಿಸುವುದನ್ನೂ ಬಾಳೆ ಮೌನವಾಗಿಯೇ ಕಲಿಸುತ್ತದೆ. ಹುಟ್ಟಿನಿಂದ ಸಾಯುವವರೆಗೆ ಜೊತೆಯಾಗಿರುತ್ತದೆ. ಸಾಂಗತ್ಯ ಹೇಗಿರಬೇಕು ಎನ್ನುವುದನ್ನು ಬಾಳೆಯಷ್ಟು ಚೆಂದವಾಗಿ ಹೇಳುವ ಇನ್ನೊಂದು ವಸ್ತು ಈವೆರೆಗೂ ಸಿಕ್ಕಿಲ್ಲವಲ್ಲ ಅಂದುಕೊಳ್ಳುತ್ತಲೇ ಅದನ್ನೊಮ್ಮೆ ಮೃದುವಾಗಿ ನೇವರಿಸಿದರೆ ಬೀಸಿದ ಗಾಳಿಯಲ್ಲಿ ನೂರು ನೆನಪು...

ಒಂದೊಂದೇ ನೆನಪನ್ನು ಆಯ್ದು ಈ ಬಾಳೆಪಟ್ಟಿಯಲ್ಲಿ ಕಟ್ಟಿ ಜಗುಲಿಯ ಪಕಾಸಿಗೆ ನೇತುಹಾಕುವ ಹಾಗಿದ್ದರೆ ಎನ್ನುವ ಕಲ್ಪನೆಯೇ ರೋಮಾಂಚನ ಹುಟ್ಟಿಸಿತು. ಮತ್ತಷ್ಟು ಬದುಕುವ ಆಸೆ ಹುಟ್ಟಿಸಿತು. ಬಾಳೆ ಎಂದರೆ ಹಾಗೆ ಜೀವಂತಿಕೆ...





Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...