ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ  ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು.

ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿಯೇ ಎಲ್ಲರನ್ನೂ  ನಂಬಿದಂತೆ ನಟಿಸಿ ಯಾರನ್ನೂ ನಂಬದ ಹಾಗೆ ಬದುಕಿದರೇನೋ ಅನ್ನಿಸಿ ಕಣ್ಣಲ್ಲಿ ಚಕ್ರಸುಳಿ.

ಜೊತೆಯವರು ನಮ್ಮಪ್ಪ ಎನ್ನುವಾಗ ಹೊಟ್ಟೆ ಒಳಗೆ ಸಂಕಟ, ಕಾಡುವ ಅನಾಥಭಾವ. ಏನೇ ಮಾಡಿದರು ಇದನ್ನು ಮೀರಲು ಸಾಧ್ಯವೇ ಇಲ್ಲವಾ ಎನ್ನುವ ಅಸಹಾಯಕತೆ ಇಲ್ಲಿಯವರೆಗೂ ನನ್ನನ್ನು ಬೆಂಬಿಡದೆ ಕಾಡಿದೆ. ಆ ಪ್ರೀತಿಗೆ, ಅದು ಕೊಡುವ ಭದ್ರತೆಗೆ ಮನಸ್ಸು ಹಪಹಪಿಸಿದೆ. ಅಲ್ಲೇ ಕಂಬಕ್ಕೆ ಸುತ್ತಿ ಸುತ್ತಿ ಸುಸ್ತಾಗಬೇಡಾ ಪುಟ್ಟಿ ಕೊಂಚ ಹೊರಗೆ ಬಾ. ವಿಸ್ತಾರ ಹೆಚ್ಚಿಸಿಕೋ,  ಅಪ್ಪನನ್ನು ತಂದು ಕೊಡಲಾರೆ ಆದ್ರೆ ಬದುಕು ಸಮಾಧಾನಿ ಆಗುತ್ತೆ, ಪ್ರೀತಿ ಸಿಗುತ್ತೆ ಎಂದು ತಲೆನೇವರಿಸಿದ್ದರು ಕೃಷ್ಣಪ್ಪ ತಾತ. ಅದು ಕುದಿಕುದಿಯುವ  ವಯಸ್ಸು. ಆ ಸ್ಪರ್ಶ ದನಿಯಲ್ಲಿನ  ಪ್ರಾಮಾಣಿಕ ಪ್ರೀತಿ ಕೊಂಚ ತಣ್ಣಗಾಗಿಸಿ ಪರಿಧಿಯ ಆಚೆಗೆ ಬರುವ ಹಾಗೆ ಮಾಡಿತ್ತು. ಜಗತ್ತು ನಾನಂದುಕೊಂಡಷ್ಟು ಕೆಟ್ಟಿಲ್ಲ ಅನ್ನಿಸಿ ಆತ್ಮವಿಶ್ವಾಸ ಹೆಚ್ಚಾಗಿತ್ತು.

ಇವತ್ತಿಗೂ ಯಾರೇ ಪರಿಚಯವಾದರೂ, ಎಷ್ಟೇ ಸಲಿಗೆಯಿದ್ದರೂ  ಅವರ ವೈಯುಕ್ತಿಕ ವಿಷಯ ಕೇಳುವುದಿಲ್ಲ. ಕೊನೆಗೆ ಅವರ ಗಂಡನ/ಹೆಂಡತಿಯ ಬಗೆಗೂ. ಬೇರೆಯವರು ನಿನ್ನ ಜೊತೆ ಹೇಗಿರಬೇಕು ಅಂತ ಬಯಸ್ತಿಯೋ ಬೇರೆಯವರ ಜೊತೆ ನೀನೂ ಹಾಗೆ ಇದ್ದು ಬಿಡು ಕೊನೆಯಪಕ್ಷ ಈ ನಿಂಗೆ ಸಮಾಧಾನ ಇರುತ್ತೆ ಭಾರತಿ ರಮಣಾಚಾರ್ ತಾತ ಹೇಳಿದ್ದರು. ನಿಮ್ಮಪ್ಪ ಎಲ್ಲಿ, ನಿಮ್ಮದು ಯಾವ ಊರು ಎಂದರೆ ಅಲ್ಲೆಲ್ಲೋ ನಕ್ಷತ್ರವಾಗಿದ್ದ ಅಪ್ಪನನ್ನು, ವಾರಾಹಿಯಲ್ಲಿ ಮುಳುಗಿದ್ದ ಊರನ್ನು ತೋರಿಸಲಾಗದ ಅಸಹಾಯಕತೆ ಬಾಯಿ ಕಟ್ಟಿಸುತಿತ್ತು. ಹಾಗಾಗಿ ಇವತ್ತಿಗೂ ಯಾರ ವೈಯುಕ್ತಿಕ ವಿಷ್ಯ ಕೇಳುವುದು ನನಗಾಗದ ಮಾತು. ಬಹುಶಃ ಈ ಇಬ್ಬರು ತಾತಂದಿರು ಸಿಗದೇ ಹೋಗಿದ್ದರೆ ಹೇಗಿರುತ್ತಿದ್ದೆ ಗೊತ್ತಿಲ್ಲ, ಹೀಗಂತೂ ಖಂಡಿತ ಇರುತ್ತಿರಲಿಲ್ಲ. ಪರಿಧಿ ಯಾಕೆ ವಿಸ್ತರಿಸಿಕೊಳ್ಳಬೇಕು ಎನ್ನುವುದಕ್ಕೆ ಅವರಿಬ್ಬರೂ  ಉದಾಹರಣೆ.

ಬೆಳೆದಂತೆ ಮನಸ್ಸು ಮಾಗಿದಂತೆ, ವಾಸ್ತವ ಅರ್ಥವಾದಂತೆ ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದು ಕಲಿತರು ಅನಾಥಭಾವ ಗಟ್ಟಿಯಾಗಿ ಹಾಗೆಯೇ ಕುಳಿತಿತ್ತು. ಮಗಳ ಹುಟ್ಟಿದ ಹಬ್ಬಕ್ಕೆ ಮಾಲಿನಿ ಅಕ್ಕ ಬರೆದ ಸಾಲು ನೋಡುವ ತನಕ ಅದು ಹಾಗೆ ಇತ್ತು. ಮಗಳು ಜನ್ಮಿಸಿದ ಹೊತ್ತಿನಲ್ಲಿ ಅಲ್ಲಿಯವರೆಗೆ ನೋವು ಕಾಡಿಸಿದ್ದು  ಕಂಗೆಡಿಸಿದ್ದು ಮರೆತುಹೋಗಿ ಇನ್ನು ನನಗೆ ಸಾವಿಲ್ಲ ಅನ್ನಿಸಿ " ಇನ್ನು ನನಗೆ ಸಾವೇ ಇಲ್ಲ, ನನ್ನದೊಂದು ತುಣುಕು ಹೀಗೆ ಮುಂದುವರಿಯುತ್ತದೆ. " ಓದುವಾಗ ಒಮ್ಮೆ ರೋಮಾಂಚನ, ಮತ್ತೆ ಮತ್ತೆ ಓದಿ, ಕಣ್ಣು ಮಂಜಾಗಿ ಕಾಣಿಸದಿದ್ದರೂ ಓದುತ್ತಾ, ಗುನುಗಿಕೊಳ್ಳುತ್ತಾ ಇರುವಾಗಲೇ ಇದೊಂದು ಅವರಪ್ಪನ ತರಹವೇ ಆಗೋಯ್ತು ಹುಡುಗಿಯಲ್ಲ ಗಂಡು ಹುಡುಗಿ ಎನ್ನುವ ಅಜ್ಜಿಯ ಗೊಣಗುವಿಕೆ ಕೇಳಿಸಿ ಹುಟ್ಟಿದಾಗಲಿಂದ ಒಮ್ಮೆಯೂ ನೋಡದ ನನ್ನನ್ನು ನೋಡುತ್ತಿದ್ದ ಹಾಗೆ ಇವಳು ಶೀನಿ ಮಗಳಾ ಎಂದು ಕೇಳಿದ ಅಪ್ಪನ ಹತ್ತಿರದ ಸಂಬಂಧಿಯೊಬ್ಬರು ಮಾತು ನೆನಪಾಗಿ, ಹೇಳಬೇಕು ಅನ್ನಿಸಿದ್ದು ನೇರವಾಗಿ ಹೇಳಿಬಿಡುತ್ತೆ ಯಾರಿಗೂ ಹೆದರಲ್ಲ ಅವರಪ್ಪನ ಮಗಳು ಎಂದು ಅಮ್ಮ ಕೇಳಿಸಿಯೂ ಕೇಳಿಸದ ಹಾಗೆ ಹೇಳಿದ್ದು ನೆನಪಾಗಿ ಭೋರ್ಗೆರೆಯುವ ಸಮುದ್ರ ಶಾಂತವಾಗಿತ್ತು.

ದೇಹಕ್ಕೂ ನೆನಪುಗಳಿವೆ. ಕೆಲವೊಮ್ಮೆ ನಿಮಗಿಂತ ಜಾಸ್ತಿ. ನೀವು ಕಂಡಿರದ ಮುತ್ತಜ್ಜಿಯ ಮೂಗು, ಅತ್ತೆಯ ಸ್ವಭಾವ, ಇನ್ಯಾರದ್ದೋ ಮೈಕಟ್ಟು ಹೀಗೆ ಎಲ್ಲವನ್ನೂ ನೆನಪಿಕೊಂಡು ರಚನೆಯಾಗಿರುತ್ತದೆ ಎನ್ನುವ ಸದ್ಗುರುವಿನ ಮಾತು ಕೇಳಿ ಅರೆ ಹೌದಲ್ವಾ ಅಪ್ಪ ಎಷ್ಟೊಂದು ನನ್ನೊಳಗೆ ಉಳಿದಿದ್ದಾನೆ ಅನ್ನಿಸಿ ಇಷ್ಟು ಜೊತೆಗಿರುವಾಗ ಯಾಕೆ ನೋಯಬೇಕು ಅನ್ನಿಸಿ ಅಪ್ಪ ಎಂದರೆ ಕಣ್ಣೀರು ತರುತ್ತಿದ್ದವ ಇಂದು ಮುಗುಳುನಗುವಾಗಿ ಬದಲಾಗಿದ್ದಾನೆ. ಒಂದು ಸಂಕಟ ಸಂತಸವಾಗಿ ಬದಲಾಗುವ ವೈಖರಿ ಅಚ್ಚರಿ ಹುಟ್ಟಿಸುತ್ತದೆ. ಆ ಬದಲಾವಣೆ ಬರಲು ಕಾರಣರಾದವರ ಬಗೆಗೆ ಗೌರವ ಹುಟ್ಟುತ್ತದೆ. ಈ ಬದುಕು ಕೇವಲ ನನ್ನದು ಎಂದು ಹೇಗೆ ಹೇಳಲಿ ಎನ್ನುವ ಜವಾಬ್ದಾರಿ ಜನ್ಮಿಸುತ್ತದೆ.

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...