ಆಟ  ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ  ಸಿಡಿಯುತ್ತೆ ಎಂದುಕೊಂಡು  ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು  ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ.. 

ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ  ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು  ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ.  ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ತಿಳಿದರೂ ಸುಮ್ಮನೆ ಉಳಿಯಬೇಕಾಗುತ್ತದೆ.  

ಅವಮಾನ ಮರೆಯುವುದು ಸುಲಭವಲ್ಲ. ಅದು ಸೆರಗಿನೊಳಗಿನ ಕೆಂಡ. ಸದಾ ಸುಡುತ್ತಲೇ ಗಾಯ ಹಸಿಯಾಗಿಯೇ ಇಡುತ್ತದೆ. ಪಡೆದ ಬೇರಾವುದನ್ನೂ ಕೊಡಲು ಮರೆಯಬಹುದು, ಹೋಗಲಿ ಬಿಡು ಎಂದು ಬಿಡಬಹುದು ಇದನ್ನು ಹಾಗೆಂದುಕೊಳ್ಳಲು ಸಾಧ್ಯವೇ ಇಲ್ಲ. ಮನಸ್ಸು ಆ ಕ್ಷಣದಿಂದ ಗಣಿತಶಾಸ್ತ್ರಜ್ಞ. ಕೂಡು, ಗುಣಿಸು ಭಾಗಿಸು  ಮುಂದುವರೆಯುತ್ತಲೇ ಇರುತ್ತದೆ. ಆಲೋಚನೆಗಳ ಅಲೆಗಳು ದಡಕ್ಕೆ ಅಪ್ಪಳಿಸುತ್ತಲೇ ಇರುತ್ತವೆ. ಅದಕ್ಕೊಂದು ಉತ್ತರ ಕೊಡುವ ತನಕ ಮನಸ್ಸು ಚಡಪಡಿಸುತ್ತದೆ.  ಎಲ್ಲವೂ ಗೊತ್ತಿದ್ದು ಹೋಗಲಿ ಬಿಡೆ ಎಂದೇ ಗುರುಗುಟ್ಟಿ ನೋಡಿದವಳು ಅವಮಾನ ಮಾಡಿದರೂ ಸುಮ್ಮನಿರಬೇಕಾ ಎಂದು ರೇಗಿದಳು.

ಖಂಡಿತಾ ಇಲ್ಲ ಪುಟ್ಟಿ. ಕೆಲವಷ್ಟು ಸಲ ಹಾಗಾದಾಗ ಅದ್ರಲ್ಲಿ ನಮ್ಮ ಪಾತ್ರವೆಷ್ಟು ನೋಡಿಕೊಳ್ಳಬೇಕು ಅಲ್ವ. ನಿಂಗೆ ಬರೋಲ್ಲ ಅನ್ನೋದು ನಿಜ ತಾನೇ ಎಂದೇ,  ಕೆಂಡ ನಿಗಿನಿಗಿ ಉರಿಯುತ್ತಲೇ ಇತ್ತು. ಅವನು ಮಾಡಿದ್ದು ತಪ್ಪೇ.. ಕೊಂಚ  ಶಾಖ ಕಡಿಮೆಯಾಯಿತು. ಹೌದು ತಪ್ಪೇ ಎದುರಿನ ವ್ಯಕ್ತಿಯ ಬಗ್ಗೆ ಅರಿವಿಲ್ಲದೆ ಮಾತಾಡಬಾರದು, ಅಂತಹ ಮನಸ್ಥಿತಿ ಇಲ್ಲದವರಿಂದ ನಿರೀಕ್ಷೆ ಮಾಡಲೂ ಬಾರದು  ಈಗೇನು ಕಲಿಯಬೇಕು ತಾನೇ? ಉಹೂ  ಅವನಿಗಿಂತ ಒಂದು ರೌಂಡ್ ಜಾಸ್ತಿ ಹೊಡಿಬೇಕು ಗುಂಡು ಸಿಡಿಯಿತು. ಪಂದ್ಯಕ್ಕೆ  ಹೋಗುವ ಮುನ್ನ ನಾವು ಇವತ್ತು ಗೆಲ್ಲಬೇಕು ಏನು ಮಾಡಬೇಕು ಸದ್ಗುರು ಎಂದು ಯಾರೋ ಕೇಳಿದರಂತೆ. ಇದು ನಿನ್ನ ಕೊನೆಯ ಪಂದ್ಯ ಎಂದು ಆಡು, ಗೆಲ್ಲುವುದಕ್ಕೆ ಆಡು, ಎದುರಾಳಿಯನ್ನು ಸೋಲಿಸುತ್ತೇನೆ ಎಂದುಕೊಂಡು ಆಡಬೇಡ ಎಂದರಂತೆ ಅವರು.

ಮಗಳೇ ಅವನೆಲ್ಲಿದ್ದಾನೆ ಎಂದು ಗಮನಿಸಬೇಕಾದರೆ ಏನು ಮಾಡ್ತಿ ಎಂದೇ. ತಿರುಗಿ ನೋಡ್ತೀನಿ ಎಂದಳು. ನಿನ್ನ ಗಮನ ಆಗ ಎಲ್ಲಿಗೆ ಹೋಗುತ್ತೆ? ಕೇಳಿದೆ ಅವನ ಕಡೆ ಎಂದಳು. ಅಲ್ಲಿಗೆ ನಿನ್ನ ಅರ್ಧ ಶಕ್ತಿ ಕಡಿಮೆಯಾಯಿತು ಎಂದರೆ ಅರ್ಥವಾಗದ ಹಾಗೆ ನೋಡಿದಳು. ನೋಡು ಎಲ್ಲವೂ ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ ಅನ್ನೋದು ನಿಜವಾದರೂ ಪ್ರಯತ್ನ ಪಡುವುದರಲ್ಲಿ ತಪ್ಪೇನಿಲ್ಲ. ನೀನು ಮೂರು ರೌಂಡ್ ಹ್ಯಾಂಡ್ಲ್ ಹಿಡಿಯದೇ ಸೈಕಲ್ ಹೊಡಿಯಬೇಕು ತಾನೇ ನಿನ್ನ ಗಮನ ಬರೀ ಅದರ ಕಡೆಗೆ ಇರಲಿ. ಯಾರು ಏನು ಮಾಡ್ತಾರೆ ಅನ್ನೋದು ಅನಗತ್ಯ. ಗಮನ ಗುರಿಯ ಕಡೆಗೆ ಗೆಲ್ಲುವ ಕಡೆಗೆ ಇರಬೇಕು. ಇನ್ನೊಬ್ಬರನ್ನು ಸೋಲಿಸುವ ಕಡೆ ಎಂದಾಗ ಗೆಲ್ಲುವ ಕಡೆಗಿನ  ಗಮನ ಕಡಿಮೆಯಾದಂತೆ ಅಲ್ಲವಾ.. ಫೋಕಸ್ ಬೇರೆಯಾದ ಹಾಗೆ ಅಲ್ಲವಾ ...

ಮುಂದೆ ಹೋಗಬೇಕು ಎಂದರೆ ನೋಟ ಮುಂದೆ ಮಾತ್ರ ಇರಬೇಕು ಮಗಳೇ, ಅತ್ತಿತ್ತ, ಹಿಂದೆ ಹರಿದರೆ ಅಷ್ಟು ಏಕಾಗ್ರತೆ ವೇಗ ಕಡಿಮೆಯಾದ ಹಾಗೆ, ಎಷ್ಟು ಶ್ರದ್ಧೆಯಿಂದ, ಪೂರ್ಣ ಮನಸ್ಸಿನಿಂದ ಗುರಿಯ ಕಡೆಗೆ ಗಮನವಿಟ್ಟು ಮಾಡ್ತೀವೋ ಅಷ್ಟು ಗೆಲವು,  ಕೊಂಚ ಗಮನ ಏರುಪೇರು ಆದರೂ ವೇಗ ತಗ್ಗುತ್ತೆ. ಬೇಕಾಗಿರುವುದು ಗೆಲ್ಲುವುದೋ  ಅಥವಾ  ಸೋಲಿಸುವುದೋ.. 
ರಿವೆಂಜ್ ತೀರಿಸಿಕೊಳ್ಳಬೇಕು ಅನ್ನಿಸುವುದು ಸಹಜ. ಪ್ರತಿಯೊಬ್ಬರಿಗೆ ಆ ಕ್ಷಣಕ್ಕೆ ಹಾಗೆ ಅನ್ನಿಸಿಯೇ ಅನ್ನಿಸುತ್ತದೆ. ಆದರೆ ರೆಸ್ಪೆಕ್ಟ್ ಗಳಿಸುವತ್ತ ಗಮನ ಹರಿಸಿದರೆ ಯಾವುದು ಬೇಕಿತ್ತೋ ಅದು ದಕ್ಕುತ್ತೆ. ಮನಸ್ಸಿನ ನೆಮ್ಮದಿ ಉಳಿಯುತ್ತೆ. ನೆಮ್ಮದಿಯಿಲ್ಲದ ಮನಸ್ಸು ಏಕಾಗ್ರವಾಗಲು ಸಾಧ್ಯವಾ? ಏಕಾಗ್ರತೆಯೇ ಬರದೇ ಹೋದರೆ ಸಾಧಿಸುವುದು ಸುಲಭವಾ.. ಎಲ್ಲರಿಗೂ, ಎಲ್ಲದಕ್ಕೂ ಉತ್ತರಿಸುವ ದರ್ದಿಗೆ ಬಿದ್ದರೆ ಮುಂದಕ್ಕೆ ಹೋಗೋದು ಹೇಗೆ? ಅಷ್ಟು ಹಿನ್ನಡೆ ನಮಗೆ ಅಲ್ಲವಾ...

ಅವರವರ ಸ್ವಭಾವ ಮನಸ್ಥಿತಿಗೆ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಮಾತು ಬರುತ್ತೆ ಮಗಳೇ ಯಾರ ಬಾಯಿಯನ್ನು ಮುಚ್ಚಿಸಲು ಆಗುವುದಿಲ್ಲ, ಆದರೆ ಕಿವಿ ಮುಚ್ಚಿಕೊಳ್ಳಬಹುದು, ನಿರ್ಲಕ್ಷ್ಯ ಮಾಡಿ ಮುಂದೆ ಹೋಗಬಹುದು, ಅವರ ಮಾತಲ್ಲಿ ಪ್ರಾಮಾಣಿಕತೆ, ಕಾಳಜಿ ಇದ್ದರೆ ತೆಗೆದುಕೊಳ್ಳಬಹುದು, ಇಲ್ಲ ಅನ್ನಿಸಿದರೆ ನಕ್ಕು ಸುಮ್ಮನೆ ಆಗಬಹುದು ಎಲ್ಲವೂ ಇರುವುದು ನಮ್ಮ ಕೈಯಲ್ಲಿ ಅಲ್ಲವಾ

ಮಾತಾಡಿದ್ದು ಜಾಸ್ತಿ ಆಯಿತೇನೋ ಅನ್ನಿಸಿ ನಿಲ್ಲಿಸಿದೆ. ಆ ಕಡೆಯಿಂದ ಪುಟ್ಟ ಹೂ ಕೂಡ ಬರಲಿಲ್ಲ. ವಯಸ್ಸಾಗುತ್ತಾ ಉಪದೇಶ ಮಾಡೋದು ಜಾಸ್ತಿ ಆಗುತ್ತೇನೋ ಇದಕ್ಕೆ ಮೊದಲು ಪರಿಹಾರ ಕಂಡುಕೊಳ್ಳಬೇಕು ಎಂದು ಅಂದುಕೊಳ್ಳುತ್ತಲೇ ಮುಖ ನೋಡಿದೆ. ಕೆಂಡ ಎಲ್ಲವೂ ಉರಿದು ಶೂನ್ಯವಿತ್ತು. ಮತ್ತೆ ಕೆದಕಿ ಬೂದಿ ಹಾರಿ ರಾಡಿ ಮಾಡುವುದು ಬೇಡವೆನ್ನಿಸಿ  ಸುಮ್ಮನಾದೆ.ಬೆಳಿಗ್ಗೆ ಎದ್ದವಳು ಎಂದಿನಂತೆ ಸ್ನೇಹಿತರ ಜೊತೆ ಹೋಗಿದ್ದಳು. ಬರುವಾಗ ಮುಖದಲ್ಲಿ ಇಷ್ಟಗಲ ನಗು. ಅಮ್ಮಾ ನಾಲ್ಕು ರೌಂಡ್ ಹ್ಯಾಂಡಲ್ ಹಿಡಿಯದೇ ಸೈಕಲ್ ಓಡಿಸಿದೆ ಗೊತ್ತಾ... ಖುಷಿಯಾಗಲಿಲ್ಲ.. ಆಮೇಲೆ ಏನು ಮಾಡಿದೆ ಕುತೂಹಲ ತಡೆಯಲಾರದೆ ಮಾತು ಹೊರಗೆ ಬಿತ್ತು . ಟೈಮ್ ಆಯ್ತು ಮನೆಗೆ ಬಂದೆ  ಹುಸಿನಗು, ತುಂಟ ಉತ್ತರ. ಗೊಂದಲದಲ್ಲೇ ಇದ್ದವಳನ್ನು ಬಂದು ಅಪ್ಪಿ ಗೆಲ್ಲೋಕೆ ಹೋಗಿದ್ದಮ್ಮ, ಸೋಲಿಸೋಕೆ ಅಲ್ಲ ಎಂದಾಗ ಮೋಡ ಸರಿಸಿ ಸೂರ್ಯ ನಕ್ಕಿದ್ದ. ಮನೆಯ ತುಂಬಾ ಬೆಳಕು .


Comments

Popular posts from this blog

ಕೇಪಿನ ಡಬ್ಬಿ.

ಮೇಲುಸುಂಕ.