ಬಂದಳಕ.

ಪುಟ್ಟ  ಪುಟ್ಟ ಕಡು ಹಸಿರು ಬಣ್ಣವನ್ನು ಹೊತ್ತ ಮುದ್ದಾದ ತುಂಬು ಎಲೆಗಳು. ಒಮ್ಮೆ ನೋಡಿದರೆ ಇನ್ನೊಮ್ಮೆ ನೋಡಬೇಕಿನಿಸುವ ಸೌಂದರ್ಯ. ಗೊಂಚಲು ಗೊಂಚಲಾಗಿ ತೂಗಾಡುವ ಅದರೊಡಲೊಳಗೆ ನಸುಕೆಂಪು ಬಣ್ಣದ ತುತ್ತೂರಿಯಂತಹ ಹೂ ಸಿಗರೇಟಿನ ಕೊನೆಯಲ್ಲಿನ ಬೆಂಕಿಯ ಕಿಡಿಯಂತೆ ಕಾಣುತ್ತದೆ. ದೀಪಾವಳಿಯ ದಿನ ತಾರಸಿಗೆ ತೂಗುಹಾಕಿದ ದೀಪದಂತೆ ಮಾವಿನ ಮರದಲ್ಲಿ ಜೋತಾಡುವ ಈ ಬಳ್ಳಿ ಕೊಂಬೆಯನ್ನು ಅದೆಷ್ಟು ಬಲವಾಗಿ ಆದರೆ ಅಷ್ಟೇ ನಾಜೂಕಾಗಿ ಅಪ್ಪಿರುತ್ತದೆಯೆಂದರೆ ನೋಡಲು ಥೇಟ್ ನವಜೋಡಿಯಂತೆ ಭಾಸವಾಗುತ್ತದೆ.

ಬಂದಳಕ ಎಂದು ನಾಮಕರಣಗೊಂಡ ಈ ಬಳ್ಳಿಯಾದರೂ ಅಷ್ಟೇ ನಾಚುತ್ತಾ, ಮೃದುವಾಗಿ ಕೊಂಬೆಯನ್ನು ಬಳಸಿ ನಸುನಗುತ್ತಾ ತೂಗಾಡುತ್ತಿರುತ್ತದೆ.ಹಾದುಹೋಗುವವರ ಗಮನವನ್ನು ಕ್ಷಣಮಾತ್ರವಾದರೂ ಸೆರೆಹಿಡಿಯುವ ಚುಂಬಕಶಕ್ತಿ ಇದರ ಸೌಂದರ್ಯಕ್ಕೆ, ಸಣ್ಣ ಗಾಳಿಗೂ ತುಯ್ಯುವ ವಯ್ಯಾರಕ್ಕಿದೆ. ತೋರಣ ಕಟ್ಟಿದಂತೆ, ತೂಗುದೀಪ ಇಳಿಬಿಟ್ಟಂತೆ, ಉಯ್ಯಾಲೆಯೊಂದು ತೂಗುವಂತೆ, ಹಸಿರು ಹಾಸಿಗೆ ಹಾಸಿದಂತೆ ಹೀಗೆ ಬಗೆಬಗೆಯಾಗಿ ಒನಪು, ಒಯ್ಯಾರಗಳಿಂದ ಕಂಗೊಳಿಸುವ ಇದು ಅಪರಿಚಿತರಿಗೆ ಸೌಂದರ್ಯದ ಖನಿ, ಪರಿಚಿತರಿಗೆ ಮಾತ್ರ ಬೆಚ್ಚಿಬೀಳಿಸುವ ದುಸ್ವಪ್ನ. ಅದರ ಹೂಗಳು ಕೇವಲ ನೋಡುವುದಕ್ಕೆ ಮಾತ್ರ ಕೆಂಡದಂತಲ್ಲ ಅಕ್ಷರಶಃ ಇದು ಒಡಲೊಳಗಿನ ಬೆಂಕಿ.

ಇದು ಸರಿಯಾಗಿ ಅರ್ಥವಾಗಬೇಕಾದರೆ ಘಟನೆಯೊಂದನ್ನು ಹೇಳಬೇಕು. ಅವರದು ಸ್ಥಿತಿವಂತ ಕುಟುಂಬ. ಮದುವೆಯಾಗಿ ಬಹಳ ಕಾಲವಾದರೂ ಮಕ್ಕಳಾಗಿಲ್ಲ ಅನ್ನುವುದೊಂದು ಬಿಟ್ಟರೆ ಮತ್ಯಾವ ಸಮಸ್ಯೆಗಳೂ ಇಲ್ಲದ ಸಂತೃಪ್ತ ಕುಟುಂಬ. ವಾವೆಯಲ್ಲಿ ಅಣ್ಣನಾಗಬೇಕಾದವರ ಮನೆಯಲ್ಲಿ ಹಾಸಿ ಹೊದ್ದರೂ ಮುಗಿಯದ ಬಡತನ. ಅಧಿಕ ಮಾಸದಲ್ಲಿ ಬರಗಾಲವೆಂಬಂತೆ ಎಣಿಸಲು ಎರಡೂ ಕೈ ಬೆರಳು ಬೇಕಾಗುವಷ್ಟು ಮಕ್ಕಳು. ಅದರಲ್ಲಿ ಒಬ್ಬರನ್ನು ಸಾಕುವ ನಿರ್ಧಾರ ಮಾಡುವ ಹೊತ್ತಿಗೆ ಇವರ ಒಡಲಿನಲ್ಲಿ ಜೀವ ರೂಪುಗೊಳ್ಳುತಿತ್ತು. ಆದರೂ ಆ ಮಗುವನ್ನು ತಂದು ಇಬ್ಬರನ್ನೂ ಒಟ್ಟಿಗೆ ಬೆಳೆಸಲು ತೊಡಗಿದರು.

ಅವನು ಬೆಳೆದಂತೆ ಅವನ ಮೇಲಿನ ಅವರ ನಂಬಿಕೆಯೂ ಬೆಳೆಯುತ್ತಾ ಅಷ್ಟಷ್ಟೇ ಜವಾಬ್ದಾರಿಯ ಜೊತೆಗೆ ವ್ಯವಹಾರವನ್ನೂ ವಹಿಸತೊಡಗಿದರು. ಅವನೋ ಬಲು ಜಾಣ. ವ್ಯವಹಾರದ ಪಟ್ಟುಗಳು ಒಂದೊಂದೇ ಅರ್ಥವಾದಂತೆ ಜವಾಬ್ದಾರಿಯ ಹೆಸರಲ್ಲಿ ಇಷ್ಟಿಷ್ಟೇ ಅಧಿಕಾರವನ್ನು ಕೈವಶ ಮಾಡಿಕೊಳ್ಳುತ್ತಾ ಅವರ ಅರಿವಿಗೆ ಬರುವ ಮೊದಲೇ ಇಡೀ ಆಸ್ತಿಗೆ ವಾರಸುದಾರನಾಗಿಬಿಟ್ಟಿದ್ದ.

ಬೆರಳು ಕೊಟ್ಟರೆ ಹಸ್ತವನ್ನೇ ನುಂಗುವ ಜಾತಿ ಅನ್ನೋದು ಪ್ರಸಿದ್ಧ ನುಡಿಗಟ್ಟು ಬಹುಶಃ ಹುಟ್ಟಿದ್ದೇ ಹೀಗೇನೋ..ಯಾರದ್ದೋ ಅಸಹಾಯಕ ಪರಿಸ್ಥಿತಿ ನೋಡಿ ಸಹಾಯ ಮಾಡಲು ಹೋದವರು ಮೋಸಹೋಗುವ ಬಗೆಯನ್ನು ಈ ನುಡಿಗಟ್ಟು ತುಂಬ ಚೆಂದವಾಗಿ ವಿವರಿಸುತ್ತದೆ. ವ್ಯಾಪಾರಕ್ಕೆಂದು ಅನುಮತಿ ಕೇಳಿಕೊಂಡು ಬಂದು ಇಡೀ ದೇಶವನ್ನೇ ಸುಪರ್ದಿಗೆ ತೆಗೆದುಕೊಂಡ ಬ್ರಿಟಿಷರದೂ ಇದೇ ಕತೆ. ಯಾರಿಗೂ ಸಹಾಯ ಮಾಡಲೇಬಾರದು ಎಂದು ರೋಸಿ ಹೋಗುವ ಹಾಗೇ ಮಾಡುವ ಸಂಗತಿಗಳಿವು.

ಅನುಕಂಪ ಅನ್ನೋದು ಮನುಷ್ಯ ಸಹಜ ಗುಣ.  ಅಸಹಾಯಕ ಪರಿಸ್ಥಿತಿಯಲ್ಲಿರುವರನ್ನು ಕಂಡಾಗ ಅದರಲ್ಲೂ ಅವರು ಪರಿಚಿತವಲಯಕ್ಕೆ ಸೇರಿದವರಾದರಂತೂ ಮನಸ್ಸು ಕೈಲಾದ ಸಹಾಯ ಮಾಡಲು ಧಾವಿಸುತ್ತದೆ. ಕೊಡುವವನಿಗೆ ಕೊಡುವಲ್ಲಿ ಎಷ್ಟು ಶ್ರದ್ಧೆಯಿದೆ ಅನ್ನುವದಕ್ಕಿಂತ ಸ್ವೀಕರಿಸುವವನಿಗೆ ಆ ಯೋಗ್ಯತೆಯಿದೆಯೇ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿಯೇ ಕಷ್ಟದಲ್ಲಿರುವವರಿಗೆ  ಸಹಾಯ ಮಾಡಬೇಕು ಎಂದು ಹೇಳಿಕೊಟ್ಟ ಹಿರಿಯರು ಅಪಾತ್ರ ದಾನವಾಗಬಾರದು ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ.

ಸೃಷ್ಟಿಯಲ್ಲಿ ಪ್ತತಿಯೊಂದಕ್ಕೂ ಗೌರವವಿದೆ. ನಮ್ಮಯಾವುದೇ ಕಾರ್ಯಗಳು ಅದರ ಗೌರವವನ್ನು ಹೆಚ್ಚಿಸುವ ಮಟ್ಟಕ್ಕೆ ಇರದೇ ಹೋದರೂ ಅದರ ಗೌರವ ಕಡಿಮೆ ಮಾಡುವ ಹಾಗೇ ಇರಬಾರದು. ಹಾಗಾಗಿ ಇಡುವ ಪ್ರತಿ ಹೆಜ್ಜೆಯಲ್ಲೂ ಜಾಗೃತೆ ಇರಬೇಕು ಅನ್ನೋದು ಹಿರಿಯರು ಬಿಟ್ಟುಹೋಗಿರುವ ಪಾಠ. ಪ್ರಕೃತಿಯಲ್ಲಿರುವ ಪ್ರತಿಯೊಂದು ಗುಣವೂ ಮನುಷ್ಯನಲ್ಲೂ ಇದೆಯಲ್ಲಾ ಅಂತ ಅಲೋಚಿಸುತ್ತದ್ದವಳನ್ನು ಎಚ್ಚರಿಸಿದ್ದು ತಲೆಯ ಮೇಲೆ ಪಟ್ಟೆಂದು ಬಿದ್ದ ಅದೇ ಬಂದಳಕದ ಹೂ.

ತಲೆಯತ್ತಿ ನೋಡಿದರೆ ಅಂದು ಕೊಂಬೆಯ ಮೂಲೆಯಲ್ಲೆಲ್ಲೋ ಕಂಡೂ ಕಾಣದಂತೆ, ಮಳೆಯ ಹೊಡೆತಕ್ಕೆ ನೆಂದು ಮುದುರಿ ಕುಳಿತ ಗುಬ್ಬಚ್ಚಿಯಂತೆ ಕಂಡ ಬಂದಳಕದ ಬಳ್ಳಿ ಸಿಟಿಯಲ್ಲಿನ ಅಪಾರ್ಟಮೆಂಟ್ ಒಂದರಲ್ಲಿ ತೂಗುಬಿಟ್ಟ ದೀಪಾವಳಿಯ ದೀಪಗಳಂತೆ ಪ್ರತಿ ಕೊಂಬೆ ಕೊಂಬೆಯಲ್ಲೂ ಇದು ತನ್ನದೇ ಜಾಗವೆಂಬ ಹಮ್ಮಿನಲ್ಲಿ ತೂಗಾಡುತ್ತಿತ್ತು. ಜಾಗ ಕೊಟ್ಟ ತಪ್ಪಿಗೆ ಹಸಿರಾಗಿ ನಳನಳಿಸುತ್ತಿದ್ದ ಮಾವಿನಮರ ಅಕಾಲ ಮುಪ್ಪಿಗೆ ಬಲಿಯಾಗಿ ರಕ್ತವಿಲ್ಲದ ನಿಶಕ್ತ ಅಜ್ಜನಂತೆ ಅಸಹಾಯಕವಾಗಿ ನಿಂತಿತ್ತು.

ಅರೆ ಸಹಾಯಕ್ಕೆ ಸಿಕ್ಕ ಪ್ರತಿಫಲ ಇದೇನಾ... ಸಹಾಯ ಮಾಡುವುದೂ ತಪ್ಪಾ ಅನ್ನುವ ಅಲೋಚನೆಯಲ್ಲಿರುವಾಗಲೇ ಗಾಳಿಗೆ ಅಲುಗಿದ ಎಲೆಯ ಸಂದಿಯಿಂದ ತೋರಿಬಂದ ಸೂರ್ಯನ ಕಿರಣ ಕಣ್ಣು ಕುರುಡಾಗಿಸಿ ಮನಸ್ಸಿನೊಳಗೆ ಕಹಿ ಮೌನವೊಂದು ಆವರಿಸಿಕೊಳ್ಳುವ ಹೊತ್ತಿನಲ್ಲಿ ಇದನ್ನು ಹೀಗೆ ಬಿಟ್ಟರೆ ಇಡೀ ಮಾವಿನ ಮರವನ್ನು ನುಂಗಿ ನೀರು ಕುಡಿಯತ್ತೆ, ಇವತ್ತು ಮೊದ್ಲು ಇದನ್ನ ಕಿತ್ತು ಹಾಕಿದ ಮೇಲೆಯೇ ಉಳಿದ ಕೆಲಸ ಎಂದು ಗೊಣಗುತ್ತಾ ಕತ್ತಿ ಮಸೆಯಲು ಹೋದ ತಂಬಿಯ ಧ್ವನಿ ಕೇಳಿಸಿತು.

ಮರಕ್ಕಾದರೋ ಒಂದೇ ಬಂದಳಕ, ಬದುಕಿಗೆ ಎಷ್ಟು ಎಂದು ಲೆಕ್ಕವಿಟ್ಟವರಾರು? ಅಸಲಿಗೆ ಎಣಿಸಲು ಸಾಧ್ಯವೇ.. ಕೆಲವು ಶಿಥಿಲಗೊಳಿಸುವ ಮನ್ನ ಗೊತ್ತಾಗಬಹುದು, ಇನ್ನು ಕೆಲವು ಜಾತಿಯವು ನಾಶವಾದರೂ ತಿಳಿಯಲಾರದಂತವೂ.. ಈ ಬುದ್ಧಿವಂತಿಕೆಯೂ ಒಮ್ಮೊಮ್ಮೆ ಏಮಾರಿಸುಬಿಡುತ್ತದೆ. ಬದುಕು ಮಾವಿನಮರವಾಗುತ್ತದೆ, ಎಂದು ಅಲೋಚಿಸುತ್ತಲೇ ಮರದಡಿಯಿಂದ ಎದ್ದು ಹೊರಟೆ. ಮಸೆದು ಹರಿತವಾಗಿದ್ದ ಕತ್ತಿಯನ್ನು ಒರೆಗೆ ಸಿಕ್ಕಿಸಿಕೊಂಡ ತಂಬಿ ಮರ ಹತ್ತುತ್ತಿದ್ದ.

ಬದುಕಿಗೆ ಹತ್ತುವ ಬಂದಳಕವನ್ನು ಕತ್ತರಿಸುವ ಕತ್ತಿಯನ್ನೀಗ  ಹುಡುಕಬೇಕಾಗಿದೆ ನಾನು...





ಲ್ಲಿ

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...