ನಿಶಬ್ಧ

"ನಿಶಬ್ದ ನಿಶಬ್ಧ ಶಬ್ದದಾಚೆಯ ಶಬ್ದ, ನಿಶಬ್ದವಿದ್ದರೂ ಮೌನವಲ್ಲ."

ಮಧುರ ಚೆನ್ನರ ಸಾಲುಗಳಂತೆ ಇವು. ಇದು ಅನುಭವಕ್ಕೆ ಬರಬೇಕಾದರೆ ಒಮ್ಮೆ ಪ್ರಕೃತಿಯ ಮಡಿಲಲ್ಲಿ ಹೋಗಿ ಕುಳಿತು ಕಿವಿಯಾಗಬೇಕು. ಊರಿಗೆ ಹೋದಾಗ ಸಂಜೆಯ ಅಂಗಳದ ಮೂಲೆಯಲ್ಲಿ ಹೋಗಿ ಕೂರುವುದು ನೆಚ್ಚಿನ ಅಭ್ಯಾಸ. ಬೆಳಕು ಹೊರಡುವ, ಕತ್ತಲು ಆಗಮಿಸುವ ಆ ಹೊತ್ತು ಇದೆಯಲ್ಲ ಅದೊಂದು ತರಹ ನಿಕ್ಷಿಪ್ತ ಕಾಲ. ಸಂಧಿಕಾಲ. ಈ ಮುಸ್ಸಂಜೆ ಹೊತ್ತು ಮಲಗುವುದು ಅಶುಭ ಅನ್ನೋ ನಿಯಮವನ್ನು ಯಾಕೆ ನಮ್ಮ ಹಿರಿಯರು ಮಾಡಿದ್ರು ಅನ್ನೋದೂ ಗೊತ್ತಿಲ್ಲವಲ್ಲಾದರೂ ಇದೊಂದು ತರಹ ಸಂಧಿಗ್ದ ಕಾಲ ಅನ್ನಿಸೋದು ಅಂತೂ ಸತ್ಯ.

ಗಡಿಬಿಡಿಯ ಧಾವಂತದ ಅರ್ಥವೇ ಗೊತ್ತಿಲ್ಲವೆನ್ನುವಂಥ ವಾತಾವರಣ. ಆಗಲೋ ಈಗಲೋ ಭರ್ರ್ ಎಂದು ಸರಿದು ಹೋಗುವ ಯಾವುದೋ ವಾಹನದ ಸದ್ದು ಬಿಟ್ಟರೆ ಉಳಿದಂತೆ ನಿಶಬ್ದ. ನಿಮ್ಮೂರಲ್ಲಿ ಆದರೆ ಸದ್ದೇ ಪ್ರಪಂಚ ಇಲ್ಲಿ ಬೋರ್ ಆಗುತ್ತೇನೋ ಅಲ್ವಾ ಅನ್ನುವ ಅಜ್ಜಿಯ ಮಾತು ಆ ವಾತಾವರಣದಲ್ಲಿ ತುಸು ಜೋರೆ ಅನ್ನುವ ಹಾಗೆ ಕೇಳಿತ್ತು. ಬೆಂಗಳೂರಿನ ಸದ್ದಿನ ಪ್ರಪಂಚಕ್ಕೆ ಹೋಲಿಸಿದರೆ ಅದು ತೀರಾ ನಿಶಬ್ದ ಅನ್ನುವ ವಾತಾವರಣವೇ, ಹಾಗಾದರೆ ಸದ್ದೇ ಇಲ್ಲವಾ.... ಇದು ಕೇಳಿದರೆ ಕೇಳಿಸುವ ಸದ್ದಲ್ಲ ಆಲಿಸಬೇಕು.

ಆಚೀಚೆ ಒಂದರ ಪಕ್ಕ ಒಂದು ನಿಂತರೂ ಅಪಾರ್ಟ್ಮೆಂಟ್ ಮನೆಗಳ ಜನರ ಹಾಗೆ ಮಾತೇ ಇಲ್ಲವೇನೋ ಅನ್ನುವ ಹಾಗೆ ಇರುವ ಮರಗಳ ನಡುವೆ ಅಂಕು ಡೊಂಕಾಗಿ ಮಲಗಿರುವ ಹಾದಿಗೂ ಸೋಮಾರಿತನವೇನೋ ಎನ್ನುವ ಹಾಗೆ ಸುಮ್ಮನೆ ಬಿದ್ದಿರುತ್ತದೆ ಅಥವಾ ಯಾರಾದರೂ ಬರುತ್ತಾರ ಎಂದು ಕಾಯುತ್ತಿರುತ್ತದೆ. ಹಾಗೆ ನಡೆಯುತ್ತಾ ಮೈಯಲ್ಲಾ ಕಿವಿಯಾಗಿಸಿಕೊಂಡು ನಡೆಯುತ್ತಾ ಹೋದ ಹಾಗೆ ಸಿಳ್ಳೆ ಹೊಡೆದ ಸದ್ದು. ಅರೆ ಇಂತ ಕಾಡು ಹಾದಿಯಲ್ಲೂ ಸಿಳ್ಳೆ ಹೊಡೆಯುವಷ್ಟು ರಸಿಕರು ಯಾರಿರಬಹುದು ಎಂದು ಹುಡುಕಾಡಿದರೆ ತನ್ನ ಬಂಡವಾಳ ಗೊತ್ತಾಯಿತಲ್ಲೋ ಅನ್ನೋ ನಾಚಿಕೆಯಲ್ಲಿ ತಲೆಮರಿಸಿಕೊಂಡಿತು ಅಪರಿಚಿತ ಹಕ್ಕಿ.

ಹುಡುಕೇ ತೀರುತ್ತೇನೆ ಅನ್ನೋ ಛಲವನ್ನು ಹೊತ್ತ ಕಣ್ಣುಗಳನ್ನು ಕಿವಿಯನ್ನು ಒಟ್ಟಿಗೆ ಹಿಡಿದು ನಿಲ್ಲಿಸಿದ್ದು ಚಿವ್ ಚಿವ್ ಅನ್ನುವ ಇನ್ನೊಂದು ಪಿಸು ಮಾತು. ಕಣ್ಣಗಲಿಸಿ ನೋಡಿದರೆ ಎತ್ತರದ ಮರದ ಕೊಂಬೆಯಮೇಲೆ ಆಗಷ್ಟೇ ಚಿಗುರಿದ ಎಲೆಗಳ ನಡುವೆ ಕುಳಿತ ಪುಟಾಣಿ ಹಕ್ಕಿಗಳೆರೆಡು ಜಗತ್ತನ್ನೇ ಮರೆತು ಮಾತಾಡುವುದರಲ್ಲಿ ಮಗ್ನವಾಗಿದ್ದವು. ಅರೆಕ್ಷಣ ಮುದ್ದು ಉಕ್ಕಿ ಬಂದರೂ ಹೊಟ್ಟೆಯೊಳಗೆ ಕಿಚ್ಹೊಂದು ರೆಕ್ಕೆ ಪಟಪಟಿಸಿದ್ದು ಮಾತ್ರ ಸುಳ್ಳಲ್ಲ. ಅಷ್ಟರೊಳಗೆ ಬಿದ್ದ ತರಗೆಲೆ ಕೇಳಿಸಿಯೂ ಕೇಳದಂತೆ ಚಟಪಟ ಸದ್ದು ಹೊರಡಿಸಿದ ಹಾಗಾಗಿ ತಿರುಗಿದರೆ ಗಿಡಗಳ ಮರೆಯಿಂದ ಕತ್ತು ಕೊಂಕಿಸುತ್ತಾ, ಬಳುಕುವ ಹೆಜ್ಜೆಯಿಟ್ಟು ಬಂದ ಬೆಳ್ಳಕ್ಕಿ ನೋಡುತ್ತಿದ್ದ ಹಾಗೆ ಕೊಕ್ಕನ್ನು ಕೆಳಕ್ಕೆ ಊರಿ ಅದೇನನ್ನೋ ಬಾಯಿಗೆ ಹಾಕಿಕೊಂಡು ನೋಡಿಯೂ ನೋಡದಂತೆ ಹೋಗುವ ವಯ್ಯಾರಿಯಂತೆ ಸಾಗಿ ಹೋಯಿತು.

ನಿನ್ನದೇನು ವಯ್ಯಾರ ಎಂದು ಕೊಂಚ ಕರುಬಿನಲ್ಲಿ, ಇನ್ನೊಂದು ಸ್ವಲ್ಪ ಕೊಪದಲ್ಲೇ ಕೂಗು ಹಾಕಿದ ಸ್ವರದತ್ತ ದೃಷ್ಟಿ ಹಾಯಿಸಿದರೆ ಧ್ವನಿಗೂ ಕಿಂಚಿತ್ತೂ ಸಂಬಂಧವಿಲ್ಲದ ಮನಮೋಹಕ ರೂಪ ಹೊತ್ತ ನವಿಲ ಹಿಂಡೊಂದು ಕಾಣಿಸಿತು. ಸಂಜೆಯಾಗುತ್ತಿದ್ದಂತೆ ಅದೇನು ಉತ್ಸಾಹವೋ ಅವುಗಳಿಗೆ. ಬಾಗುತ್ತಾ, ಬಳುಕುತ್ತಾ, ಕಡೆಗಣ್ಣಲ್ಲಿ ಒಮ್ಮೆ ನೋಡಿ ರೆಕ್ಕೆ ಬಿಚ್ಚುತ್ತಾ, ಅದ್ಯಾವುದೋ ಹಾಡು ಕೇಳಿಸುತ್ತಿದೆಯೇನೋ ಎಂಬಂತೆ ಕೊರಳೆತ್ತಿ ನೋಡುತ್ತಾ ಜೊತೆಗೆ ನರ್ತಿಸುತ್ತಾ ಕಾಲು ದಾರಿಯನ್ನು ಹಿಡಿದು ಮುಂದಕ್ಕೆ ಹೋಗುತ್ತಿದ್ದವು. ಅಷ್ಟರ ಮಧ್ಯೆಯೂ ಆಗಾಗ ಕೊಕ್ಕು ನೆಲಕ್ಕೂರಿ ಹೊಟ್ಟೆ ತುಂಬಿಸಿಕೊಳ್ಳುವುದನ್ನ ಮಾತ್ರ ಮರೆಯದೇ.

ತೆಂಗಿನಗರಿಗಳನ್ನು ನೇಯ್ದು ಪುಟ್ಟದೊಂದು ಗೂಡು ಕಟ್ಟಿ ವಾಸವಾಗಿರುವ ಪುಟ್ಟ ಪುಟಾಣಿ ಹಕ್ಕಿಯೊಂದು ಸಂಜೆಯ ವೇಳೆ ಜಗುಲಿಯಲ್ಲಿ ಕುಳಿತು ಕಾಯುವ ಮನುಷ್ಯರ ಹಾಗೆ ಗೂಡಿನಿಂದ ಹೊರಬಂದು ಸುತ್ತಲೂ ನೋಡುತ್ತಾ ಕುಳಿತಿತ್ತು. ಅದರ ಕಾಯುವಿಕೆ ಫಲಿಸಿತೇನೋ ಅನ್ನುವ ಹಾಗೆ ಅದೆಲ್ಲಿಂದಲೋ ಹಾರಿ ಬಂದ ಇನ್ನೊಂದು ಹಕ್ಕಿ ಜೊತೆಯಾಯಿತು. ಕತ್ತಲು ಪೂರ್ಣ ಕವಿಯುವವರೆಗೂ ಎರಡೂ ಅಕ್ಕ ಪಕ್ಕದಲ್ಲಿ ಕುಳಿತು ಆಗಾಗ ಕೊಕ್ಕು ತಾಗಿಸಿಕೊಳ್ಳುತ್ತಾ, ರೆಕ್ಕೆಯಿಂದ ಮೈ ಸವರಿಕೊಳ್ಳುತ್ತಾ ಕುಳಿತೆ ಇದ್ದವು. ಸಂಸಾರ ಅನ್ನೋದು ಕೇವಲ ಮನುಷ್ಯರ ಕಲ್ಪನೆಯಲ್ಲ ಅದಕ್ಕಿಂತಲೂ ಚೆಂದವಾಗಿ ಈ ಜೀವಿಗಳು ಬದುಕ ಬಲ್ಲವು ಅನ್ನಿಸಿ ಬೀಸುವ ಗಾಳಿಯಂತೆ ಖುಷಿಯೂ ಸಣ್ಣಗೆ ಹರಡಿಕೊಳ್ಳುತಿತ್ತು.

ನಿಶಬ್ದವನ್ನು ಭೇಧಿಸಬಲ್ಲೆ ಎಂದು ಸವಾಲು ಹಾಕುವ ರಿತಿಯಲ್ಲೇನೋ ಎಂಬಂತೆ ಗೋಡೆಗೆ ಮೊಳೆ ಹೊಡೆದಂತೆ ಒಂದೇ ಸಮನೆ ಸದ್ದು ಮಾಡುವ ಮರಕುಟಿಗ, ಪಟ ಪಟನೆ ರೆಕ್ಕೆಬಡಿದು ಹಾರಿ ಹೋಗುವ ಪಕ್ಷಿಗಳ ಹಿಂಡು. ಕಿಣಿ ಕಿಣಿ ನಾದದ ಶ್ರುತಿ ಹಿಡಿದು ಗೊರಸಿನ ಸದ್ದು ಮಾಡುತ್ತಾ ಮನೆಯ ಕಡೆಗೆ ಹೊರಟ ಕೆಂಪಿ ದನ, ಅಷ್ಟು ದೂರದಿಂದಲೇ ಕೇಳುವ ಗೊರಸಿನ ದನಿ ತನ್ನ ಅಮ್ಮನದೇ ಎಂದು ಗುರುತು ಹಿಡಿದು ಕೊಟ್ಟಿಗೆಯಲ್ಲಿ ಕುಣಿದಾಡುವ ಹಂಡುಂಡ ಕರುವಿನ ಬಾಲ ಕೊಟ್ಟಿಗೆಯ ದಬ್ಬೆಗೆ ಹೊಡೆದು ಎಬ್ಬಿಸುವ ದನಿ ತರಂಗ,  ಇಷ್ಟರ ನಡುವೆಯೇ ಅದೇನು ಸದ್ದು ಎಂದು ನೋಡುವುದರೊಳಗೆ ಕಾಲ ಬುಡದಲ್ಲೇ ಸರ್ರನೆ ಸರಿದು ಹೋಗುವ ಉರಗ.

ಎದೆಯ ಬಡಿತದ ಸದ್ದೂ ಕಿವಿಗೆ ಇಷ್ಟು ಸ್ಪಷ್ಟವಾಗಿ ಕೇಳಬಲ್ಲದು ಅನ್ನುವುದು ಗೊತ್ತಾಗೋದು ಅಂತ ಕ್ಷಣಗಳಲ್ಲೇ ನೋಡಿ. ಸಾವರಿಸಿಕೊಂಡೇ ಮುಂದಕ್ಕೆ ಹೆಜ್ಜೆ ಇಟ್ಟರೆ ನಸು ಕತ್ತಲನ್ನೂ ಮೀರಿಸುವ ಫಳ ಫಳ ಮಿರುಗುವ ಕಾಡೆಮ್ಮೆ ಮರಗಳ ಮರೆಯಲಿ ಏಕಾಗ್ರವಾಗಿ ದಿಟ್ಟಿಸುತ್ತಾ ನಿಂತಿತ್ತು. ಆ ಕಣ್ಣ ಹೊಳಪಿಗೆ, ತೀಕ್ಷ ನೋಟಕ್ಕೆ ಇಡೀ ಮೈ ತರಗುಟ್ಟುವುದು ಕಿವಿಗೆ ಅದೆಷ್ಟು ಜೋರಾಗಿ ಕೇಳಿಸುತ್ತಿತ್ತು ಎಂದರೆ ಏನು ಮಾಡಬೇಕು ಅನ್ನುವುದನ್ನ ಮರೆತು ಮನಸ್ಸು ದಿಗ್ಭ್ರಾಂತವಾಗಿತ್ತು. ಮನಸ್ಸೇ ಹಾಗಾದ ಮೇಲೆ ದೇಹ ಇನ್ನೇನು ತಾನೇ ಮಾಡಲು ಸಾಧ್ಯ. ಯಾವುದೋ ಶಕ್ತಿಯ ನಿಯಂತ್ರಣಕ್ಕೆ ಒಳಪಟ್ಟಂತೆ ಅದೂ ಹಾಗೆಯೇ ಸ್ತಬ್ಧವಾಗಿತ್ತು. ಕತ್ತಲೆಗೂ ಅದೆಂತ ಮಿರುಪು. ಸೃಷ್ಟಿಯ ವರ್ಣ ವೈವಿಧ್ಯದ ವರ್ಣನೆ ಮಾತಿಗೆ ನಿಲುಕದ್ದು...

ಕಾಲಕ್ಕೆ ಯಾವುದರ ಹಂಗಿಲ್ಲ, ಚಲಿಸುವುದೊಂದೇ ಅದರ ಕಾರ್ಯ. ಇಡೀ ಪ್ರಕೃತಿಯೇ ಹಾಗೆ ಸದಾ ಚಲಿಸುತ್ತಲೇ ಇರುತ್ತದೆ. ಸಂಧ್ಯಾಕಾಲ ಮುಗಿದು ಅದಾಗಲೇ ಬೆಳಕು ತನ್ನ ಜಾಗವನ್ನು ತೆರವುಗೊಳಿಸಿ ಕತ್ತಲೆಗೆ ಅವಕಾಶ ಮಾಡಿಕೊಟ್ಟಾಗಿತ್ತು. ಬರುವವರು ಬಂದಾಗ ಹೋಗುವವರು ಹೋಗಬೇಕು ಅನ್ನೋದು ಪ್ರಕೃತಿಯ ಎಲ್ಲಾ ಜೀವಿಗಳು ಅರ್ಥ ಮಾಡಿಕೊಂಡಿರುವ, ಒಪ್ಪಿಕೊಂಡಿರುವ ಸತ್ಯ. ಮನುಷ್ಯ ಮಾತ್ರ ಒಪ್ಪಿಕೊಳ್ಳಲಾಗದೆ ಒದ್ದಾಡುತ್ತಾನೆ ಅನ್ನಿಸಿತು. ಕತ್ತಲಿಗೆ ಏಕ ಭಾವ. ಅದು ಎಲ್ಲವನ್ನೂ ಒಂದೇ ರೀತಿಯಾಗಿ ಅಪ್ಪಿಕೊಳ್ಳುತ್ತದೆ.

ಕತ್ತಲಿಗೂ ನಿಶಭ್ದಕ್ಕೂ ಅವಿನಾಭಾವ ಸಂಬಂಧ ಎಂದು ಕೊಳ್ಳುತ್ತಲೇ ಹೆಜ್ಜೆ ಕಿತ್ತಿಡುವಾಗಲೇ ಒಂದೇ ಸಮನೆ ಚಿರಿಚಿರಿ ಶಬ್ದವನ್ನು ಹೊರಡಿಸುವ ಜೀರುಂಡೆಗಳ ಸದ್ದು ಶುರುವಾಗಿತ್ತು. ಸಿಗರೇಟಿನ ತುದಿಗೆ ಹಚ್ಚಿದ ಬೆಂಕಿಯಂತೆ ಕಾಣುವ ಮಿಂಚು ಹುಳುಗಳು ಕೆಳಕ್ಕೆ, ಮೇಲಕ್ಕೆ ಅಕ್ಕ, ಪಕ್ಕಕ್ಕೆ ಹಾರುತ್ತಾ ವಿವಿಧ ಜಾಮಿತಿಯ ಆಕಾರಗಳನ್ನು ಸೃಷ್ಟಿಸುತ್ತಿದ್ದವು. ಬರೀ ಬೆಳಕಷ್ಟೇ ತಿರುಗುವಂತೆ ಕಾಣಿಸುವ ಈ ವೈಚಿತ್ರ್ಯ ಕಗ್ಗತ್ತಲ ರಾತ್ರಿಯಲ್ಲಿ ಅಪರಿಚಿತರಿಗೆ ಭಯ ಹುಟ್ಟಿಸುವುದು ಮಾತ್ರ ಸತ್ಯ. ಅದಕ್ಕೆ ಸಾಥ್ ಕೊಡುವ ಹಾಗೆ ಮರದ ಪೊಟರೆಯಲ್ಲೊಳಗೆ ಕುಳಿತ ಅನಾಮಧೇಯ ಕೀಟದ ಕೂಗು.

ಮನೆಗೆ ಹತ್ತಿರವಾಗುತ್ತಿದ್ದ ಹಾಗೆ ಯಾವುದೋ ಸದ್ದಿಗೆ ಜೂವರಿಕೆಯಿಂದ ಎದ್ದ ನಾಯಿಯ ಬೋಗಳಾಟ, ಬೀಸಲೋ ಬೇಡವೋ ಎನ್ನುವ ಸಂಧಿಗ್ಧದಲ್ಲೇ ತಂಗಾಳಿಗೆ ಜೊತೆಯಾಗುವ ತೆಂಗಿನ ಗರಿಗಳ ಮೇಲಾಟ, ಬೆನ್ನ ಮೇಲೆ ಕುಳಿತ ನೊಣವನ್ನೋ ಸೊಳ್ಳೆಯನ್ನೋ ಓಡಿಸಲು ಬಾಲ ಬೀಸುವ ಎಮ್ಮೆ, ಮಲಗಿದಲ್ಲೇ ದರಗನ್ನು ಸರಿಮಾಡಿಕೊಂಡು ಮೆಲಕು ಹಾಕುವ ಕೆಂಪಿ ದನ. ಎಲ್ಲೋ ಅರಳಿದ ಹೂವಿನದೋ, ಹಣ್ಣಿನದೋ ಪರಿಮಳವನ್ನು ಹೊತ್ತು ಹಾಕಿ ಹೋಗುವ ತಿಳಿಗಾಳಿ. ಸುಯ್ಯನೆ ನಿಟ್ಟುಸಿರು ಬಿಡುವ ಬೀಟೆಯ ಮರ. ಕಾಲವೇ ಸ್ತಬ್ಧವಾಯಿತೇನೋ ಎಂಬಂತೆ ಚಲನೆಯೇ ಇಲ್ಲದೆ ನಿಂತಿರುವ ಆ ತುದಿಯ ಹುಣಿಸೇ ಮರ.

ಈ ಜಗತ್ತಿನಲ್ಲಿ ನಿಶಬ್ದ ಎನ್ನುವುದು ಇಲ್ಲವೇ ಇಲ್ಲ. ಜಗತ್ತು ಜೀವಂತವಾಗಿರುವಷ್ಟು ಹೊತ್ತು ಶಬ್ಧವೂ ಜೀವಂತ. ಅಸಲಿಗೆ ಜೀವಂತಿಕೆಯ ಲಕ್ಷಣವೇ ಈ ಸದ್ದುಗಳೆನೋ. ಒಂದಷ್ಟು ಪರಿಚಿತ ಸದ್ದುಗಳು ಮಾತ್ರ ಶಬ್ದ ಅನ್ನುವ ಭ್ರಮೆಯಲ್ಲಿ ನಾವು ಮೌನವನ್ನು ಕಲ್ಪಿಸಿಕೊಳ್ಳುತ್ತೇವೆ. ಉಳಿದ ಸದ್ದುಗಳಿಗೆ ಕಿವಿಯಾಗುವುದನ್ನ ಮರೆಯುತ್ತೇವೆ. ಆಲಿಸುವುದು ಕಲಿಯಬೇಕು ಹಾಗೆ ಕಲಿತಾಗ ಮಾತ್ರ ಮನಸ್ಸು ಪ್ರಕೃತಿಯ ಶ್ರುತಿಯೊಡನೆ ಅನುಸಂಧಾನವಾಗಲು ಸಹಾಯ ಮಾಡುತ್ತದೆ. ಶ್ರುತಿ ಸೇರಿದಾಗ ಮಾತ್ರ ರಾಗ ಮಧುರವಾಗಿ ಹೊಮ್ಮಬಲ್ಲದು. ಒಂದಾಗ ಬಲ್ಲದು. ಇಲ್ಲವಾದಲ್ಲಿ ಅಪಸ್ವರ ಜೊತೆಯಾಗುತ್ತದೆ. ಹಾಡುವವರಿಗೂ ಕೇಳುವವರಿಗೂ ಇಬ್ಬರಿಗೂ ಕರ್ಕಶವಾಗುತ್ತದೆ.

ನೀವೆಷ್ಟು ಸದ್ದುಗಳನ್ನು ಆಲಿಸಿದ್ದಿರಿ ಹೇಳುತ್ತಿರಾ....

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...