ಶಿಕಾರಿ

ಅಲ್ಲೇ ಗೋಡೆಯ ಬದಿಗೆ ನೆಟ್ಟ ಕ್ರೋಟಾನ್ ಗಿಡದ ಎಲೆಗಳ ಮರೆಯಲ್ಲಿ ಇತ್ತದು ಎಂದು ಗೊತ್ತಾಗಿದ್ದೆ ಚೆಂಗನೆ ನೆಗೆದು ಹಾರಿದಾಗ. ತನ್ನಷ್ಟಕ್ಕೆ ತಾನು ಹಾರಾಡುತ್ತಾ ಬಂದು ಕೀಟವೊಂದು ಕ್ಷಣಕಾಲ ವಿಶ್ರಮಿಸಲೇನೋ ಎಂಬಂತೆ ಇನ್ನೂ ಕುಳಿತಿತ್ತು ಅಷ್ಟೇ, ಉಸಿರೂ ನಿರಾಳವಾಗಿ ಬಿಟ್ಟಿತ್ತು ಇಲ್ಲವೋ. ಏನಾಯ್ತು ಎಂದು ಅರಿವಾಗುವುದರೊಳಗೆ ನೆಗೆದ ಓತಿಕ್ಯಾತದ ಬಾಯಿಯ ಬಾಯೊಳಗೆ ಬಿದ್ದಿತ್ತು. ಕಣ್ಣೆದೆರು ಅತಿ ಸಹಜವೆಂಬಂತೆ ನಡೆದ ಈ ಶಿಕಾರಿ ಒಂದು ಕ್ಷಣ ತಲ್ಲಣ ಹುಟ್ಟಿಸಿದ್ದು ಸುಳ್ಳಲ್ಲ. ಇಂತಹದೊಂದು ತಲ್ಲಣ ಕೊನೆಯ ಪುಟದವರೆಗೂ ಜೊತೆಯಾಗಿದ್ದು ಚಿತ್ತಾಲರ ಶಿಕಾರಿ ಓದುವಾಗ.

ಶಿಕಾರಿ ಅಥವಾ ಬೇಟೆ ಅಂದ ಕೂಡಲೇ ಕಣ್ಮುಂದೆ ಬರುವುದು ಪ್ರಾಣಿ ಪ್ರಾಣಿಗಳ ನಡುವಿನ ಬೇಟೆ ಅಥವಾ ಮನುಷ್ಯ ಆಡುವ ಪ್ರಾಣಿಗಳ ಬೇಟೆ. ಮನುಷ್ಯ ಮನುಷ್ಯನ್ನನ್ನು ಆಡುವ ಶಿಕಾರಿ ಮಾತ್ರ ಬೆಳಕಿಗೆ ಬರುವುದು ಕಡಿಮೆಯೇ. ಪ್ರಾಣಿಗಳು ಹೊಟ್ಟೆಯ ಹಸಿವಿಗಾಗಿ ಬೇಟೆ ಆಡಿದರೆ ಮನುಷ್ಯನೂ ಹಸಿವೆಯನ್ನು ತಣಿಸಲೇ ಶಿಕಾರಿಯಾಡುತ್ತಾನೆ. ಆದರೆ ಅವನ ಹಸಿವಿನ ವ್ಯಾಪ್ತಿ ಮಾತ್ರ ತುಂಬಾ ದೊಡ್ಡದು. ಹೆಸರಿನ, ಪ್ರತಿಷ್ಠೆಯ, ಅಂತಸ್ತಿನ, ಅಧಿಕಾರದ, ಹಣದ, ಮಣ್ಣಿನ, ಹೆಣ್ಣಿನ, ಯಶಸ್ಸಿನ ಹಸಿವೆಯನ್ನು ತಣಿಸಲು ಶಿಕಾರಿಯಾಡುತ್ತಾನೆ. ಹೊಂಚು ಹಾಕಿ ಕಾದು ಎರಗುತ್ತಾನೆ. ಹಾಗಾಗಿ ಪ್ರಾಣಿಗಳ ಶಿಕಾರಿಗಿಂತಲೂ ಮನುಷ್ಯನ ಶಿಕಾರಿ ಅತೀ ಬುದ್ಧಿವಂತಿಕೆಯಿಂದ ಕೂಡಿದ್ದು ಹಾಗೂ ಅಷ್ಟೇ ಅಪಾಯಕಾರಿಯಾಗಿದ್ದು. ಇಂತಹದೊಂದು ಶಿಕಾರಿಯ ಜಾಲದಲ್ಲಿ ಸಿಕ್ಕಿ ಬೀಳುವ ನಾಗಪ್ಪನ ಸ್ಥಿತಿಯನ್ನು ವಿವರಿಸುವುದೇ ಈ ಕಾದಂಬರಿಯ ತಿರುಳು.

ಈ ಶಿಕಾರಿಗೆ ಕಾರಣಗಳಾದರೂ ಏನು? ಹುಟ್ಟಿದ ಪ್ರತಿಯೊಂದು ಜೀವಿಯೂ ಹೋರಾಡುವುದು ತನ್ನ ಅಸ್ತಿತ್ವಕ್ಕಾಗಿ. ಹೀಗೆ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುವ ಪ್ರತಿ ಜೀವಿಯ ಬದುಕಿನ ಮೂಲ ಸ್ವಭಾವ ಸ್ವಾರ್ಥ. ತನ್ನನ್ನು ಉಳಿಸಿಕೊಳ್ಳುವ, ಬೆಳಸಿಕೊಳ್ಳುವ ಸ್ವಾರ್ಥ.ಮೂಲತಃ ಎಲ್ಲವೂ ಗುಣಗಳೇ. ಎಲ್ಲೆಯನ್ನು ಮೀರಿದಾಗ ಮಾತ್ರ ಒಳ್ಳೆಯದೋ ಕೆಟ್ಟದ್ದೋ ಎನ್ನುವ ಹಣೆಪಟ್ಟಿ ಹೊತ್ತುಕೊಳ್ಳುತ್ತದೆ. ತನಗೇನು ಬೇಕು, ಆ ಬೇಕಾಗಿದ್ದಕ್ಕೆ ತಾನು ಅರ್ಹನೇ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಆಂತರ್ಯವನ್ನು ಶೋಧಿಸಿಕೊಂಡು ಸಿಕ್ಕ ಉತ್ತರವನ್ನು ನಿರ್ವಿಕಾರವಾಗಿ ಒಪ್ಪಿಕೊಂಡಾಗ ಪಡೆಯುವ ಅಥವಾ ಅಲ್ಲಿಗೆ ಕೈ ಬಿಡುವ ನಿರ್ಧಾರ ಒಡಮೂಡಲು ಸಾಧ್ಯ.

ಅರ್ಹನಲ್ಲ ಎಂದೂ ತಿಳಿದು ಅದನ್ನು ಪಡೆಯಲು ಸಿದ್ಧವಾದಾಗ ಮಾತ್ರ ಅದಕ್ಕಾಗಿ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡ ಯಾತಕ್ಕಾಗಿ? ತನ್ನ ಮೂಲ ಸ್ವಭಾವ ಮುಚ್ಚಿಡುವುದಕ್ಕಾಗಿ. ಮುಚ್ಚಿಕೊಳ್ಳುವುದು ಯಾವಾಗ? ಶಿಕಾರಿ ಮಾಡುವಾಗ. ಪ್ರತಿ ಬೇಟೆಯ ಹೊಂಚೂ ಶುರುವಾಗುವುದು ಮುಚ್ಚಿಟ್ಟುಕೊಳ್ಳುವುದರಿಂದ. ಮನುಷ್ಯ ತಾನು ಇತರರ ಎದುರು ಬಿಚ್ಚಿಟ್ಟುಕೊಳ್ಳುತ್ತಲೇ ಮುಚ್ಚಿಟ್ಟುಕೊಳ್ಳುತ್ತಾನೆ, ಮುಚ್ಚಿಟ್ಟು ಕೊಂಡಿದ್ದೇನೆ ಎಂದು ಕೊಳ್ಳುತ್ತಲೇ ಬಿಚ್ಚಿ ಕೊಳ್ಳುತ್ತಾ ಹೋಗುತ್ತಾನೆ. ಹಾಗೆ ಹೋಗುವಾಗಲೇ ಆಕ್ರಮಣ ಶೀಲತೆಯನ್ನು ಬೆಳಸಿಕೊಳ್ಳುತ್ತಾನೆ. ಈ ನಿಗೂಢತೆ ವರವೂ ಹೌದು, ಶಾಪವೂ ಹೌದು. ಸಾಮಾನ್ಯವಾಗಿ ಈ ಬೇಟೆಗೆ ಸಿಲುಕುವುದು ಅರಿಯದ ಜೀವಿಗಳು, ಅಥವಾ ನಂಬಿಕೆಯನ್ನೇ ಉಸಿರಾಗಿಸಿ ಕೊಂಡ ಬದುಕುಗಳು.

ಬದುಕಿನದು ಒಮ್ಮುಖ ದಾರಿ. ಕೇವಲ ಮುಂದಕ್ಕೆ ಹೋಗಬಹುದಾದ ದಾರಿ, ಹಿಂದಕ್ಕೆ ತಿರುಗುವ ಅವಕಾಶವೇ ಇಲ್ಲದ ದಾರಿ. ಹಾಗಾದರೆ ಸರಳವೇ? ಎಂದರೆ ಖಂಡಿತ ಅಲ್ಲ ಅನ್ನೋದು ಪ್ರತಿಯೊಬ್ಬರ ಅನುಭವ. ಕೆಲವೊಮ್ಮೆ ಅದು ಅನೂಹ್ಯ ಅನುಭವಗಳನ್ನು ಕಟ್ಟಿ ಕೊಡುತ್ತಲೇ ಯಾವುದೋ ತಿರುವಿನಲ್ಲಿ ತಂದು ನಿಲ್ಲಿಸಿಬಿಡುತ್ತದೆ. ಮುಂದೆ ದಾರಿಯೇ ಇಲ್ಲವೇನೋ, ಅಥವಾ ಹರಡಿರುವ ನೂರಾರು ದಾರಿಗಳಲ್ಲಿ ನನ್ನ ದಾರಿಯಾವುದು ಅನ್ನುವ ಗೊಂದಲ ಮೂಡಿಸಿ ತಮಾಷೆ ನೋಡುತ್ತದೆ. ಎದುರಿಗೆ ಎಷ್ಟೇ ಆಯ್ಕೆಗಳಿದ್ದರೂ, ತೆಗೆದುಕೊಳ್ಳುವ ಹುಮ್ಮಸ್ಸಿದ್ದರೂ ಅಂತಿಮವಾಗಿ ಆಯ್ದುಕೊಳ್ಳಬೇಕಾಗಿದ್ದು ಒಂದನ್ನೇ.  ಆ ಆಯ್ದುಕೊಂಡ ಒಂದು ಹೇಗಿರುತ್ತದೆ? ನಮ್ಮ ಅಷ್ಟು ದಿನಗಳ ಬದುಕಿನ ಅನುಭವದ, ಆಲೋಚನೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ನಮ್ಮ ನಿರ್ಧಾರಗಳಿಗೆ ಏನೇ ಬಾಹ್ಯ ಪ್ರೇರಣೆಯ ಸಮರ್ಥನೆಗಳನ್ನು ಕೊಟ್ಟರೂ ಇನ್ಯಾರನ್ನೋ ಹೊಣೆಯನ್ನಾಗಿಸಿದರೂ ಅಂತಿಮವಾಗಿ ನಿರ್ಧಾರ ರೂಪುಗೊಳ್ಳುವುದು ಅಂತರ್ಯದ ಅನುಭವದ ಆಧಾರದ ಮೇಲೆಯೇ.

ಹುಟ್ಟು ಮತ್ತು ಸಾವು ಎರಡೂ ನಮ್ಮ ಕೈಯಲ್ಲಿ ಇಲ್ಲದಿದ್ದರೂ ಅದರ ನಡುವಿನ ಬದುಕಿನ ರೇಖೆ ಮಾತ್ರ ಸಂಪೂರ್ಣ ನಮ್ಮ ಜವಾಬ್ದಾರಿ. ಆದರೆ ಇದನ್ನ ಒಪ್ಪಿಕೊಳ್ಳುವ ಧೈರ್ಯ ಮಾತ್ರ ಎಲ್ಲರಿಗೂ ಇರುವುದಿಲ್ಲ. ಹಾಗಾಗಿ ಮರೆತಂತೆ ನಟಿಸುತ್ತೇವೆ. ಹಾಗೆ ನಟಿಸುತ್ತಲೇ ಇನ್ಯಾರನ್ನೋ ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ. ಈ ಹೊಣೆಗಾರರನ್ನಾಗಿ ಮಾಡಲೇ ಶಿಕಾರಿಯ ಸಂಚು ಶುರುವಾಗುತ್ತದೆ.

ಅಚಾನಕ್ಕಾಗಿ ಎದುರಾದ ಸಂಕಷ್ಟಕ್ಕೆ ಗಲಿಬಿಲಿಗೊಳ್ಳುವ ಜೀವಿಗಳು ಈ ಶಿಕಾರಿಯ ಮತ್ತನ್ನು ಇನ್ನಷ್ಟು ಏರಿಸುತ್ತದೆ. ಆ ಮತ್ತಿನಲ್ಲೂ, ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲೂ ಪ್ರಧಾನ ಪಾತ್ರ ವಹಿಸುವುದು ಭಯ. ಮನುಷ್ಯನನ್ನು ಎಲ್ಲವುದಕ್ಕಿಂತ ಹೆಚ್ಚಾಗಿ ಕಾಡುವುದು ಭಯ. ಅದೂ ಕಳೆದುಕೊಳ್ಳುವ ಭಯ. ಗಳಿಸಿದ್ದೇನೆ ಅಂದುಕೊಂಡದ್ದನ್ನ, ಇದೇ ಎಂದು ಭ್ರಮಿಸಿರುವುದನ್ನ ಕಳೆದುಕೊಳ್ಳುವ ಭಯ. ಪಡೆದುಕೊಳ್ಳುವ ಯತ್ನಕ್ಕಿಂತಲೂ ಕಳೆದುಕೊಳ್ಳುವ ಈ ಭಯವೇ ಅದನ್ನು ಉಳಿಸಿಕೊಳ್ಳುವುದಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗುವ ಹಾಗೆ ಮಾಡುತ್ತದೆ. ಹಾಗೆ ಮಾಡುವ ಹೊತ್ತಿನಲ್ಲಿ ಬಲಿಕೊಡಲು ಇನ್ನೊಂದು ಜೀವಕ್ಕಾಗಿ ಶಿಕಾರಿಯ ಹೊಂಚು ಶುರುವಾಗುತ್ತದೆ.

ಶಿಕಾರಿಗೆ ಬಲಿಯಾಗುವವರ ಪರಿಸ್ಥಿತಿ ಹೇಗಿರುತ್ತದೆ, ಅಷ್ಟು ಸುಲಭವಾಗಿ ಯಾರದ್ದೋ ಸಂಚಿಗೆ ಹೇಗೆ ಬಲಿಯಾಗುತ್ತಾರೆ, ಗೊತ್ತಿದ್ದೂ ಯಾಕೆ ಸುಮ್ಮನಾಗುತ್ತಾರೆ ಎಂದು ಮೂಲ  ಹುಡುಕಿದರೆ ಅದು ಬೇರಿನೆಡೆಗೆ ಕೊಂಡೊಯ್ಯುತ್ತದೆ. ಬದುಕಿನ ಬೇರು ಎಂದರೆ ಬಾಲ್ಯ. ಬಾಲ್ಯ ಯಾವ ಮಣ್ಣಿನಲ್ಲಿ ಹೇಗೆ ಬೆಳೆಯುತ್ತದೆ ಅನ್ನುವುದರ ಮೇಲೆ ಬೇರಿನ ಗಟ್ಟಿತನ ಅವಲಂಬಿತವಾಗಿರುತ್ತದೆ. ಬಾಲ್ಯದಲ್ಲಿ ಅನುಭವಿಸಿದ ಹತಾಶೆ, ಅವಮಾನ, ಎದುರಿಸಿದ ದುರ್ದೆಸೆ ಎಲ್ಲವೂ ಆಂತರ್ಯದಲ್ಲಿ ಮಡುಗಟ್ಟಿರುತ್ತದೆ. ಎಷ್ಟೇ ಬೆಳೆದರೂ ಎತ್ತರಕ್ಕೆ ಏರಿದರೂ ಅವು ಹಿಂದಕ್ಕೆ ಜಗ್ಗುತ್ತಿರುತ್ತದೆ. ಇವೆಲ್ಲವೂ ಅವ್ಯಕ್ತ ಭಯವಾಗಿ ಪರಿಸ್ಥಿತಿಯನ್ನು ಎದುರಿಸುವ ಮುನ್ನವೇ ಓಡಿಹೋಗುವ ಹಾಗೆ ಮಾಡುತ್ತದೆ. ಅಲ್ಲಿಗೆ ಎದುರಾಳಿ ಗೆದ್ದಂತೆ.

ಹಾಗಾದರೆ ಶಿಕಾರಿ ಇಷ್ಟೊಂದು ಸುಲಭವೇ?  ಉಹೂ ಖಂಡಿತ ಅಲ್ಲ. ಪ್ರತಿ ಜೀವಿಯೂ ತಪ್ಪಿಸಿಕೊಳ್ಳಲು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಿಯೇ ಹೋರಾಡುತ್ತದೆ. ಹೋರಾಡುವುದರ ವಿನಃ ಬೇರೆ ಆಯ್ಕೆಗಳೇ ಇಲ್ಲ ಅನ್ನುವ ಅನಿವಾರ್ಯ ಪರಿಸ್ಥಿತಿಯಲ್ಲಿ ಮೈ ಕೊಡವಿಕೊಂಡು ಜಾಗೃತವಾಗುತ್ತದೆ. ಪಾರಾಗುವ ಪ್ರತಿ ದಾರಿಯ ಬಗ್ಗೆಯೂ ಆಲೋಚಿಸುತ್ತದೆ. ಕಣ್ಣೆದೆರು ತೆರೆದುಕೊಳ್ಳುವ ಸಾಧ್ಯಸಾಧ್ಯತೆಗಳ ಲೆಕ್ಕಾಚಾರ ಹಾಕುತ್ತದೆ. ಬದುಕಿನ ನಿರ್ಣಾಯಕ ಗಳಿಗೆಯಲ್ಲಿ ಅಲ್ಲಿಯವರೆಗೆ ಮುಖ್ಯವೆನಿಸಿದ್ದ ವಿಷಯಗಳು ಇಷ್ಟೇನಾ ಅನ್ನಿಸತೊಡಗುತ್ತದೆ. ಅಸ್ತಿತ್ವದ ಮೂಲಕ್ಕೆ ಬಂದಾಗ ಉಳಿಸಿಕೊಳ್ಳುವುದು ಮಾತ್ರ ಮುಖ್ಯವಾಗಿ ಇನ್ನೆಲ್ಲವೂ ಅಮುಖ್ಯವೆನಿಸುತ್ತದೆ. ಆಗ ಶುರುವಾಗೋದೇ ನಿಜವಾದ ಹೋರಾಟ.

 ಇಬ್ಬರಿಗೂ ಗುರಿ ನಿಖರವಾದಾಗ ಒಂದು ನಿರಾಳತೆ ಕಂಡರೂ ಬೇಟೆ ಖಚಿತವಾದಾಗ  ಒಳಗೊಳಗೇ ತಮ್ಮ ಕಾರ್ಯದ ಬಗ್ಗೆ ಸಮರ್ಥನೆಗಳನ್ನು ತಯಾರು ಮಾಡಿಕೊಳ್ಳುತ್ತಾ ಹೋಗುತ್ತಾರೆ.  ಹಾಗಾಗಿ  ಜರುಗುವ ಪ್ರತಿ ಘಟನೆಗಳಿಗೂ ಉದಾತ್ತತೆಯನ್ನೋ, ಮಹಾನ್ ಅರ್ಥವನ್ನೋ ಅಂಟಿಸಲು ತೊಡಗುತ್ತೇವೆ. ಬೇಕೆಂದೇ ಜರುಗುವ ಶಿಕಾರಿಗೂ ಮಾನ್ಯತೆಯನ್ನು ದೊರಕಿಸಿ ಕೊಡುವ ಕೆಲಸವೂ ಜೊತೆಜೊತೆಗೇ ಸಾಗುತ್ತದೆ. ಮೊದಲೇ ಬುದ್ಧಿವಂತ ಜೀವಿ ಮಾನವ. ಹಾಗಾಗಿ ತನ್ನ ಚತುರತೆಗಿಂತಲೂ ಕುಟಿಲತೆಯನ್ನು ಪಣಕ್ಕಿಡುವುದೇ ಜಾಸ್ತಿ.  ಸಮರ್ಥನೆಗಳು ಶುರುವಾಗೋದು ನಮ್ಮ ಕಾರ್ಯದ ಬಗ್ಗೆ ನಮಗೆ ನಂಬಿಕೆ ಇಲ್ಲದಾಗಲಾ? ನಮಗೆ ನಂಬಿಕೆ ಇಲ್ಲವಾದಾಗ ಮಾತ್ರ ಇತರರನ್ನು ನಂಬಿಸಲು ಪ್ರಯತ್ನಿಸುತ್ತೆವಾ? ಇತರರನ್ನು ನಂಬಿಸುತ್ತೇವೆ ಎನ್ನುವ ಭ್ರಮೆಯಲ್ಲಿ ನಮ್ಮನ್ನು ನಾವೇ convince ಮಾಡಿಕೊಳ್ಳುತ್ತೇವಾ?

 ಯಾರಾದರೂ ನಮ್ಮ ಕಷ್ಟಕ್ಕೆ ಆಗಿ ಬರಲಿ ಎಂದು ಹಂಬಲಿಸುವುದು ಮಾನವ ಸಹಜ ಸ್ವಭಾವ. ಎಷ್ಟೋ ಸಲ ಹಾಗೆ ಭಾಗಿಯಾಗುತ್ತಲೇ ಹಿನ್ನಲೆಯಲ್ಲಿ ಉಳಿಯಲು ಬಯಸುತ್ತೇವೆ, ಹಾಗೆ ಮಾಡಿದಾಗಲೇ ಎದುರಿನ ವ್ಯಕ್ತಿಯಲ್ಲಿ ಸಂದೇಹ ಹುಟ್ಟುತ್ತದೆ.ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗಿಯೂ ಹಿನ್ನಲೆಯಲ್ಲಿ ಉಳಿಯಲು ಉಳಿಯುವ ಮನಸ್ಸನ್ನೂ ಸಂದೆಹಿಸುವ ಹಾಗೆ ಮಾಡುವ, ನಂಬಿಕೆಯನ್ನು ಕಳೆದುಕೊಂಡು, ಅಪನಂಬಿಕೆಯಲ್ಲಿ ನೋಡಲು ಬಾರದ ಸ್ಥಿತಿ ಹುಚ್ಚು ಹಿಡಿಸುತ್ತದೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎನ್ನುವ ಆಲೋಚನೆ ಬದುಕನ್ನ ಇನ್ನಷ್ಟು ಅಸ್ತವ್ಯಸ್ತವಾಗಿ ಮಾಡುತ್ತದೆ. ಈ ಆಲೋಚನೆಯೇ ಒಳಗಿನಿಂದ ಹೋರಾಡಲು ಶಕ್ತಿ ಕ್ರೋಡಿಸಿಕೊಂಡು ಮೇಲಕ್ಕೆ ಏಳುವ ಹಾಗೆ ಮಾಡಿದರೂ ಅಂತಿಮವಾಗಿ ಗೆಲ್ಲುವುದು ಬಲಶಾಲಿಯೇ ಹೊರತು ಸತ್ಯವಲ್ಲ. ಅಂತ ಪರಿಸ್ಥಿತಿ ಬದುಕಿನ ಬಗೆಗಿನ ನಂಬಿಕೆಯನ್ನೇ ಬುಡಮೇಲಾಗಿಸುತ್ತದೆ.

ಹಾಗಾದರೆ ಆ ಕ್ಷಣದಲ್ಲಿ ಮನಸ್ಸು ಹೇಗಿರಬೇಕು? ತಳಮಳಗಳು, ಗೊಂದಲಗಳು ಪರಿಸ್ಥಿತಿಯನ್ನು ಅರ್ಥಮಾಡಿಸುವ ಬದಲು ಇನ್ನಷ್ಟು ಗೊಂದಲಕ್ಕೆ ಈಡು ಮಾಡುತ್ತವೆ. ಭಯವೋ, ತಳಮಳವೋ,  ನಂಬಿಕೆಯೋ ನಮ್ಮ ದಾರಿ ತಪ್ಪಿಸುತ್ತದೆ. ಹಾಗಾಗಿ ಶಾಂತವಾಗಿ ಕುಳಿತು  ಮನಸ್ಸನ್ನು ಶೋಧಿಸಬೇಕು. ಹಾಗೆ ಶೋಧಿಸುವಾಗ ಸಿಕ್ಕಿದ್ದನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು. ನಿರ್ಲಿಪ್ತವಾಗಿ ಸ್ವೀಕರಿಸಬೇಕು.  ಗುರಿಯ ಕಡೆಗಿನ ಗಮನ ಏಕಾಗ್ರವಾಗಿರಬೇಕು. ಶಿಕಾರಿಗೂ ಜೂಜಿಗೂ ಒಂದು ನಂಟಿದೆ. ಎರಡೂ ಕಡೆ ಗೆಲವು ಅತ್ತಿತ್ತ ಓಲಾಡುತ್ತಾ ಇಬ್ಬರಿಗೂ ಗೆದ್ದೆವೆಂಬ ಭಾವ ಹುಟ್ಟಿಸುತ್ತಿರುತ್ತದೆ. ಈ ಭಾವ, ಏಕಾಗ್ರತೆಯನ್ನು ಛೆಧಿಸಿ ಮೈ ಮರೆಯುವ ಹಾಗೆ ಮಾಡುತ್ತದೆ. ಕ್ಷಣಕಾಲ ಮೈ ಮರೆತರೂ ಮುಗಿಯಿತು. ಬಲಿಯಾಗಿ ಹೋಗುತ್ತವೆ.

ಹಾಗಾದರೆ ಶಿಕಾರಿ ಅಷ್ಟೊಂದು  ಕೆಟ್ಟದ್ದಾ? ಆದರೂ ಜಗತ್ತಿನಲ್ಲಿ ಸದಾಕಾಲ ಜರುಗುವುದು ಏಕೆ?  ಅದು ಒಳ್ಳೆಯದಾ ಕೆಟ್ಟದ್ದಾ ಅನ್ನುವುದು ನಾವು ಯಾವುದಕ್ಕಾಗಿ ಮಾಡುತ್ತೇವೆ ಎನ್ನುವುದರ ಮೇಲೆ ಡಿಪೆಂಡ್ ಆಗುತ್ತದೆ. ಏನನ್ನು ಪಡೆಯುವುದಕ್ಕಾಗಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಕಳೆದುಕೊಳ್ಳುವ ಭಯದಿಂದ ನಡೆಯುವ ಯಾವ ಶಿಕಾರಿಯೂ ಒಳ್ಳೆಯದಲ್ಲ. ಬದುಕಿನ ಅಂತಿಮ ಗುರಿಯೇ ಕಳೆದುಕೊಳ್ಳುವುದು, ಇಲ್ಲವಾಗುವುದು. ಏನೋ ಆಗಿ ಮೆರೆದವರೂ ಸಹ ಏನೂ ಅಲ್ಲದವರಾಗುವುದು. ಇದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸ್ಥಿತಿ ಬಂದಾಗ ಇನ್ನೊಬ್ಬರನ್ನು ಹಣಿಯುವ, ತನ್ಮೂಲಕ ತನ್ನದಲ್ಲದ ಸ್ಥಾನ ಪಡೆಯುವ ಹಪಾಹಪಿ ನಿಲ್ಲುತ್ತದೆಯೇನೋ....

ನಿಜವಾಗಿಯೂ ತನಗೇನು ಬೇಕು ಎಂದು ಆಂತರ್ಯವನ್ನು ಶೋಧಿಸಿಕೊಂಡು ಅದನ್ನು ಪಡೆಯಲು ಪ್ರಯತ್ನಿಸಿದಾಗ ಆ ಶಿಕಾರಿಗೊಂದು ಅರ್ಥ ಸಿಗುತ್ತದಾ?. ಬೇಟೆಯ ರೀತಿಯೇ  ಬೇರೆಯಾಗುತ್ತದಾ? ಹಾಗಾದಾಗ  ಇಲ್ಲಿ ಬಲಿಕೊಡುವುದರ ಬದಲಿಗೆ ಬಗಲಾಗಿ ನಡೆಯುವಂತಾಗುತ್ತದೆ. ಬದುಕಿನ ದಾರಿಗೆ ಜೊತೆ ಸಿಕ್ಕಂತಾಗುತ್ತದೆ. ಜೊತೆ ಸಿಕ್ಕಾಗ, ಹೆಗಲಾದಾಗ ದಾರಿ ಎಂಥಾ ದಾರಿಯಾದರೂ ಬೇಗ ಸಾಗುತ್ತದೆ, ಪ್ರಯಾಣ  ಕ್ಲಿಷ್ಟ ವಾಗುವುದರ ಬದಲು ಇಷ್ಟವಾಗುತ್ತದೆ. ಹಾಗಾದರೆ ಒಮ್ಮುಖದ, ಹಿಂದಿರುಗಲಾರದ ಬದುಕಿನ ಪಯಣ ಹೇಗಿರಬೇಕು ಎಂದರೆ ಪಡೆದುಕೊಳ್ಳಬೇಕಾಗಿರುವುದರತ್ತ ಅನ್ನೋದನ್ನ ನಾಗಪ್ಪ ತಾನು ಕಾಣದ ತನ್ನ ಅಣ್ಣ ಹಾಗೂ ಕಾಣೆಯಾದ ತಂಗಿಯನ್ನು ಹುಡುಕಲು ಹೋರಾಡುವುದರ ಮೂಲಕ ಸೂಚಿಸುತ್ತಿದ್ದಾನಾ? ಅಥವಾ ಶಿಕಾರಿ ಜರುಗಬೇಕಾಗಿದ್ದು ಕೇವಲ ತನ್ನೊಳಗೆ ಮಾತ್ರ ಎನ್ನುವುದನ್ನು ನಿರೂಪಿಸುತ್ತಿದ್ದಾನಾ?

ಆಡುವುದಾದರೆ  ನಿನ್ನನ್ನು ನೀನು ಶಿಕಾರಿಯಾಡು, ಆಡುತ್ತಾ ಆಡುತ್ತಾ ಗಳಿಸಿಕೋ..  ಮುಖವಾಡಗಳನ್ನು ಹೊಂಚು ಹಾಕಿ ಕೊಲ್ಲು ಎನ್ನುವುದಾ? ಮುಖವಾಡ ಕಳಚಿಟ್ಟ ಕ್ಷಣ ಅಡಗಿಕೊಳ್ಳುವ ಪ್ರಸಕ್ತಿ ಬರುವುದೇ ಇಲ್ಲವಾ?. ಅಡಗುವು ಪ್ರಸಕ್ತಿಯೇ ಇಲ್ಲವಾದರೆ ಶಿಕಾರಿ ಮಾಡುವ ಅನಿವಾರ್ಯತೆಯೇ ಉಧ್ಬವವಾಗುವುದಿಲ್ಲವಾ? . ಅಲ್ಲಿಗೆ ಶಿಕಾರಿ ಮಾಡುವ, ಶಿಕಾರಿಯಾಗುವ ಪ್ರಶ್ನೆಯೇ ಇಲ್ಲದೇ ಬದುಕು ಕೇವಲ ಉತ್ತರವಾಗುತ್ತದಾ?.ಉತ್ತಮವಾಗಬಲ್ಲದಾ...... ಬದುಕಿನ ದಾರಿಯ ಮಹತ್ವವೇ ಅದೇನೋ?  ಕಾಣದ್ದನ್ನು, ಅಡಗಿದ್ದನ್ನು ಹುಡುಕುವುದು. ಹುಡುಕುವುದು ಬೇರೆ ಹೊಂಚುವುದು ಬೇರೆ. ಹೊಂಚಿದಾಗ ಶಿಕಾರಿ. ಹುಡುಕಿದರೆ ಅನ್ವೇಷಣೆ. ಅಲ್ಲಿಗೆ ಶಿಕಾರಿಯನ್ನು ಉದಾತ್ತಿಕರಿಸಬಹುದು ಎಂದಾಯಿತೇ? ಒಂದೇ ಸಂಗತಿ ಗುಣವೂ ಆಗಬಹುದು, ದುರ್ಗಣವೂ ಆಗಬಹುದೇ ಹಾಗಾದರೇ?

ಒಂದು ಕಾದಂಬರಿ ಮುಗಿಯುತ್ತಲೇ ಆರಂಭವಾಗುವುದು ಹೀಗೆನಾ..........?

Comments

Popular posts from this blog

ಮಾತಂಗ ಪರ್ವತ

ರಂಜದ ಹೂ

ಬರಿದೆ ಆಡುವ ಮಾತಿಗರ್ಥವಿಲ್ಲ...