ಹುಲಿಕಲ್ ಜಾತ್ರೆ
ತೊಂಬತ್ತರ ದಶಕದಲ್ಲಿ ಹಳ್ಳಿಗಳಲ್ಲಿ ಅದೂ ವರಾಹಿಯ ಮಡಿಲಿನಲ್ಲಿ ಇದ್ದಂತ ಅಪ್ಪಟ ಹಳ್ಳಿಗಳಿಗೆ ಸಂಭ್ರಮ ಹಬ್ಬವೆಂದರೆ ಅದು ಜಾತ್ರೆ. ಎಲ್ಲರನ್ನೂ ಭೇಟಿಯಾಗುವ, ಸುತ್ತೆಲ್ಲಾ ಹಳ್ಳಿಗಳು ಒಂದು ಕಡೆ ಸೇರುವ, ಈಗಿನ ಮಾತಿನಲ್ಲಿ ಹೇಳುವುದೇ ಆದರೆ ಶಾಪಿಂಗ್ ಮಾಡುವ ತಾಣ. ಹಾಗಾಗಿ ಸಂಪಗೋಡಿನ ಈಚೆ ಬದಿಯ ಹುರಳಿಯಲ್ಲಿ ಜಾತ್ರೆ ನಡೆದರೂ ಅದು ನಡೆದು ಹೋಗುವಷ್ಟು ಹತ್ತಿರ ಹಾಗೂ ಬಸ್ ಇಲ್ಲದ ಕಾರಣ ಹುಲಿಕಲ್ ಜಾತ್ರೆಯೆಂದರೆ ಸ್ವಲ್ಪ ಹೆಚ್ಚೇ ಪ್ರೀತಿ. ಯಡೂರಿನ ತನಕ ನಡೆದು ಅಲ್ಲಿ ಕಾದು ಧೂಳು ಎಬ್ಬಿಸಿಕೊಂಡು ಬರುವ ಕೆಂಪು ಬಣ್ಣದ ಬಸ್ಸು ಹತ್ತಿ ತುಂಬಿರುವ ಜನಜಂಗುಳಿಯಲ್ಲಿ ಜಾಗ ಮಾಡಿ ನಿಂತು ಕೊಂಡರೆ ಯುದ್ಧ ಗೆದ್ದ ಭಾವ. ಕೂರಲು ಸೀಟ್ ಏನಾದರೂ ಅದರಲ್ಲೂ ಕಿಟಕಿಯ ಪಕ್ಕ ಸಿಕ್ಕಿದರಂತೂ ಸ್ವರ್ಗಕ್ಕೆ ಮೂರೇ ಗೇಣು. ಅದರಲ್ಲೂ ಗುಂಡಯ್ಯನ ಮಗಳನ್ನು ಅಲ್ಲಿಯ ಅರ್ಚಕರ ಕುಟುಂಬಕ್ಕೆ ಮದುವೆ ಮಾಡಿ ಕೊಟ್ಟ ಮೇಲಂತೂ ಅದು ಮನೆಯ ಮಗಳ ಮನೆಯ ಜಾತ್ರೆ. ಹೋಗದೆ ಇರುವುದಾದರೂ ಹೇಗೆ? ಇಂಥಾ ಮಾಸದಲ್ಲಿ ಇಂಥಾ ಜಾತ್ರೆ ಅಂತ ದೊಡ್ಡವರಿಗೆ ನೆನಪಿದ್ದರೂ ಇರುತಿದ್ದ ಒಂದೇ ಒಂದು ಕ್ಯಾಲೆಂಡರ್ ನೋಡಿ ಅದ್ರಲ್ಲಿ ಮಾರ್ಕ್ ಮಾಡಿ ದಿನಾಲೂ ಇನ್ನು ಎಷ್ಟು ದಿನ ಎಂದು ಎಣಿಸುವುದೂ ಕೂಡಾ ದಿನನಿತ್ಯದ ಕೆಲಸಗಳಲ್ಲಿ ಒಂದಾಗಿ ಹೋಗಿತ್ತು. ನಾಳೆ ಜಾತ್ರೆ ಎಂದರೆ ರಾತ್ರಿಯಿಂದಲೇ ಕಾತರ. ಬೆಳಗಾಗುವುದನ್ನೇ ಕಾಯುವುದರ ಭರದಲ್ಲಿ ನಿದ್ದೆ ಎಂಬುದು ಅದಾಗಲೇ ಜಾತ್ರೆಗೆ ಹೋಗಿರುತಿತ್ತು. ಎಂದೂ ಹತ್ತು ಸ...